ಏನನ್ನಾದರೂ ಮಾರುವುದು
ಎಷ್ಟು ಕಷ್ಟ!
ಮಾರಿದ ಮನೆ ಮುಂದೆ
ಹೋಗಿ ನಿಂತರೆ
ಪರಿಚಿತ ಗಾಳಿ ಸುಳಿಯುತ್ತದೆ
ಕೊಂಡವರ ಮಗು
ಗೇಟು ತಳ್ಳುವ ಆಟ
ಆಡುತ್ತಾ, ತನ್ನಮ್ಮನನ್ನು
ಕೂಗಿ ಕರೆಯುತ್ತದೆ,
ಬಂದವರು ನಮ್ಮನ್ನು
ಗುರುತಿಸುವರು ಹೇಗೆ
ವಾಸ್ತವ್ಯ ಇಲ್ಲಿಲ್ಲ
ಮಾಲೀಕ ನಾನಲ್ಲ
ನಾನಿಟ್ಟ ಮನೆ ಹೆಸರು
ಇನ್ನೂ ಬದಲಾಗಿಲ್ಲ
ನಾನೆಟ್ಟ ಮರ ಹಸಿರು
ತೊರೆದು ಬರಿದಾಗಿಲ್ಲ
ಇದ್ದಂತೆ ಇವೆ ಎಲ್ಲ
ಕಾದಿದ್ದಂತೆ ನನಗೆ
ಹನಿಯೊಂದು ಜಿನುಗುತಿದೆ
ಕಣ್ಣಿದ್ದಂತೆ ಮನೆಗೆ
ನನ್ನ ಮಕ್ಕಳು
ಮುರಿದ ಬಾಗಿಲು
ತಾಯಿ ಎಡವಿ
ಬಿದ್ದು ಸತ್ತ ಬಚ್ಚಲು
ಹೆಂಡತಿ ಅಳುತ್ತಾ
ನಿಂತಿರುತ್ತಿದ್ದ ಹಿತ್ತಿಲು
ನಾನು ತಾರಸಿಯಲ್ಲಿ
ಮಲಗಿ ಕಳೆದ ಕತ್ತಲು
ನಾನು ಮಾರಿದ್ದು
ಮನೆ ಮಾತ್ರ
ನೆನಪುಗಳ ಮಾಲೀಕ
ಎಂದೂ ನಾನೇ
ಇಟ್ಟಿಗೆ ಸಿಮೆಂಟುಗಳಿಂದ
ಕಟ್ಟಿದ ಮನೆಯಲ್ಲಿ ತುಂಬಿದ
ವಸ್ತುಗಳನ್ನು ಸಾಗಿಸಬಹುದು
ಆ ಮನೆಯಲ್ಲೇ ಹುಟ್ಟಿದ
ನೆನಪುಗಳನ್ನು ಏನು ಮಾಡಬಹುದು
ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


Kavana tumba sogasaagide. Nenapugalu endigu maasuvudilla. Adarallu hutti beleda maneya nenapu endendigu hachha hasiru.
ಧನ್ಯವಾದಗಳು ಮೇಡಂ