Advertisement
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ

ಕಾಲ ಕೈಕೊಡುತ್ತದೆ ಎಂದು ಸದಾ ಯೋಚಿಸುತ್ತಿದ್ದ ಹರಿಶ್ಚಂದ್ರನಿಗೆ ತನ್ನ ಮಗಳ ಹೆಸರು ‘ಸಮಯ’ವೆಂದು ತಿಳಿದಾಗ ಆಶ್ಚರ್ಯವಾಯಿತು. ಅಮೃತಾ ನೆನಪಾದಳು. ಎಲ್ಲಿದ್ದಾಳೆ? ಸಮಯಳ ಜೊತೆ ಇದ್ದಾಳೆಯೆ? ಸಮಯಳಿಗೆ ಹೇಗೆ ಗೊತ್ತಾಯಿತು ತನ್ನ ವಿಳಾಸ ಫೋನ್ ನಂಬರ್? ಅಮೃತಾ ಹೇಳಿರಬಹುದೆ? ತನ್ನಿಂದ ವಂಚಿತಳಾದವಳು. ಅವಳು ಹೇಳಿರುವುದು ಅಸಾಧ್ಯ ಎಂಬುದು ಖಾತ್ರಿ. ಒಂದುಕ್ಷಣ ಹರಿಶ್ಚಂದ್ರನ ಮುಖ ಕಪ್ಪಿಟ್ಟಿತು. ಮುಸ್ಸಂಜೆಯ ಕೆಂಪು ಬೆಳಕು ಕಿಟಕಿ ಪ್ರವೇಶಿಸಿತು. ಅವನ ಮುಖ ಕೆಂಪಿಗೆ ತಿರುಗಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ “ಟಿಕ್ ಟಿಕ್ ಟಿಕ್ ಟಿಕ್ ಕೈಕೊಟ್ಟ ಗಡಿಯಾರ” ನಿಮ್ಮ ಓದಿಗೆ

`ಬಸ್ಸು ತಪ್ಪಿತು. ಹರಿಶ್ಚಂದ್ರ ವಾಚು ನೋಡಿಕೊಂಡ. ಮೂರು ಮುಕ್ಕಾಲು. ಸೂರ್ಯ ಅರ್ಧ ದಾಟಿದ್ದ. ಬಿಸಿಲು ಮುಕ್ಕಳಿಸುತ್ತಿತ್ತು. ಮತ್ತೆ ಎಷ್ಟೊತ್ತಿಗಿದೆ? ಕೌಂಟರಿನಲ್ಲಿ ವಿಚಾರಿಸಿದ. ಬೋರ್ಡಿನ ಕಡೆ ಕೈತೋರಿಸಿ ಅಲ್ಲಿದೆ ನೋಡಿ ಎಂದವನ ಮುಖ ನೋಡಿದ. ಮುಖ ಒಣಗಿದ ತರಗೆಲೆಯಂತಿತ್ತು. ಮತ್ತೆ ಕಣ್ಣು ಹಾಯಿಸಿ ಹಸಿರು ತುಂಬಿಕೊಳ್ಳಲು ನೋಡಿದ. ಅತ್ತಿಮರ ಒಂದು ಕಾಣಿಸಿತು. ಹಸಿರು ಕಪ್ಪಾಗಿತ್ತು. ವಾಚು ನೋಡಿಕೊಂಡು ಪಕ್ಕದ ವ್ಯಕ್ತಿಗೆ ಟೈಮ್ ಕೇಳಿದ. ನಾಲ್ಕುವರೆ! ತನ್ನ ವಾಚು ಅದಕ್ಕಿಂತ ಅರ್ಧಗಂಟೆ ಹಿಂದಿತ್ತು. ಬಸ್ಸು ತಪ್ಪಿದ್ದಕ್ಕೆ ತನ್ನ ವಾಚು ಕೈಕೊಟ್ಟಿದ್ದು ಗೊತ್ತಾಗಿ ಶಪಿಸಿದ. ವಾಚಿನ ಮುಳ್ಳುಗಳನ್ನು ಸುತ್ತಿಸಿ ನಾಲ್ಕುವರೆಗೂ ಕೊಂಚ ಜಾಸ್ತಿ ತಿರುಗಿಸಿ, ಮುಕ್ಕಾಲಿಗೆ ನಿಲ್ಲಿಸಿದ.

ಬೋರ್ಡು ನೋಡಿದ. ಇನ್ನು ಅರ್ಧ ಗಂಟೆಗೊಂದು ಬಸ್ಸಿರುವುದು ಗೊತ್ತಾಯಿತು. ಅಲ್ಲಿಯತನಕ ಏನು ಮಾಡುವುದೆಂದು ತಿಳಿಯಲಿಲ್ಲ. ಮಿಲ್ಕ್ಬಾರ್ ಕಾಣಿಸಿ ಅಲ್ಲಿಗೆ ಹೋದ. ಯಾವ ಉತ್ಸಾಹವೂ ಇಲ್ಲದೆ ಹಾಲಿನ ಕಪ್ಪು ಹಿಡಿದು ಹೀರುತ್ತಾ ಇದ್ದಂತೆ ಕುಂಯ್ ಕುಂಯ್ ಸದ್ದು ಕಿವಿ ಮುಟ್ಟಿತು. ಕೆಳಗೆ ನೋಡಿದ. ಕಾಲಬಳಿ ಪುಟಾಣಿ ನಾಯಿಮರಿ ತನ್ನ ಕಡೆ ಮುಖವೆತ್ತಿ ಕುಂಯ್‌ಗುಡುತ್ತಿತ್ತು. ಹರಿಶ್ಚಂದ್ರ ಅದನ್ನೇ ನೋಡಿದ. ಮತ್ತೆ ತನ್ನ ಹಾಲಿನ ಕಪ್ಪು ನೋಡಿದ. ಹೆಚ್ಚಿಗಿರಲಿಲ್ಲ. ಹೋಗಿ ಮತ್ತೊಂದು ಕಪ್ಪು ಕೊಂಡು ಒಂದೆರಡು ಹೆಜ್ಜೆ ಮುಂದೆ ಸರಿದಂತೆ ನಾಯಿ ಮರಿಯೂ ಹಿಂಬಾಲಿಸಿತು. ಕಸ ಹಾಕುವ ಬುಟ್ಟಿ ಬಳಿ ಒಂದು ಅಗಲ ಬಾಯಿನ ಅಡಿಕೆ ಹಾಳೆಯ ತಟ್ಟೆ ಬಿದ್ದಿತ್ತು. ಹರಿಶ್ಚಂದ್ರ ಅದಕ್ಕೆ ಹಾಲು ಸುರಿದ. ನಾಯಿ ಮರಿ ಗಬಗಬ ನೆಕ್ಕಿ ಹೀರತೊಡಗಿತು. ಅದು ಕುಡಿಯುವುದನ್ನೆ ಕೊಂಚ ನೋಡುತ್ತಿದ್ದವನು ಕಲ್ಲು ಬೆಂಚು ಇರುವಲ್ಲಿಗೆ ಹೋದ. ಬೆಂಚುಗಳು ಖಾಲಿ ಇರಲಿಲ್ಲ. ಗಿಜಿಗಿಜಿ ಜನ. ಆಗಾಗ ಊರಿನ ಕಾಲಾವಧಿ ವೇಳೆ ಒದರುವ ಕೆಟ್ಟ ದನಿ! ಬಸ್ಸು ಬರುವ, ಹೋಗುವ, ನಿಲ್ಲುವ ಮುಂಚೆ ರಿವರ್ಸ್ ಗಾಡಿಗಳಿಗೆ ಶಿಳ್ಳೆಯಲ್ಲಿ ಗೈಡ್ ಮಾಡುವ ಪೀಪ್ ಪೀಪ್ ಕೀರಲು ದನಿಗಳು. ಹರಿಶ್ವಂದ್ರನ ಕಣ್ಣಿಗೆ ಬೇರೇನೂ ಕಾಣಲಿಲ್ಲ. ನಾಯಿಮರಿ, ಶಿಳ್ಳೆ ಹಾಕುವ ಕಂಡೆಕ್ಟರ್, ನುಗ್ಗುವ ಜನರ ಗುದ್ದಾಟ, ತಂಬಾಕು ಬಾಯಿಗೆರಚಿಕೊಳ್ಳುವ ಜನ. ಅವುಗಳ ನಡುವೆ ಗಕ್ಕನೆ ನೆನಪಾಗುತ್ತಿದ್ದ ಮಗಳು. ಹೌದು. ಅವಳು ಫೋನ್ ಮಾಡಿ ತನ್ನನ್ನು ನೋಡುವ ಆಸೆ ವ್ಯಕ್ತಪಡಿಸಿದ್ದಳು. ಅವಳಿಗೆ ಎಷ್ಟು ವರುಷಗಳಾಗಿದೆ? ಇಪ್ಪತ್ತೈದು? ಮುವತ್ತು?

ಮುವತ್ತು ನಲವತ್ತು ವರ್ಷಗಳಲ್ಲಿ ಎಷ್ಟೊಂದು ಹಳ್ಳಗಳು! ಬಿದ್ದು ಏಳುವಷ್ಟರಲ್ಲಿ ಮತ್ತೊಂದು ಹಳ್ಳ ಎದುರಾಗುತ್ತಿತ್ತು. ಏರು ಸಮತಟ್ಟು ಇಲ್ಲದ ದಾರಿ ತನ್ನ ದಾರಿಯೆ? ಕಾಲ ಕೈಕೊಟ್ಟಿತೆ? ಯಾರು ಕೊಟ್ಟರು ಕಾಲಕ್ಕೆ ಕೀ?

ಒಂದು ಕ್ಷಣ ಹರಿಶ್ಚಂದ್ರ ಮೌನವಾದ. ತನಗೆ ಯಾಕೆ ಹರಿಶ್ಚಂದ್ರ ಎಂದು ಹೆಸರಿಟ್ಟರು? ಯಾರು ಸೂಚಿಸಿದರು? ಅಪ್ಪನೆ? ಅಜ್ಜನೆ? ಅಜ್ಜನಿಗೆ ಹರಿಶ್ಚಂದ್ರ ಕಾವ್ಯ ಇಷ್ಟವಾಗಿತ್ತೆಂದು ಆಗಾಗ ದೊಡ್ಡಮನೆ ಮಂಜಪ್ಪ ಹೇಳುತ್ತಿದ್ದರು.

ಬಾಯಿ ಹರಟಾಗಿತ್ತಂತೆ! ಜಗುಲಿ ಮೇಲೆ ಕುಳಿತು ತಮ್ಮ ಗೆಳೆಯರ ಮುಂದೆ ಕಾವ್ಯವನ್ನು ಹೇಳುತ್ತಿದ್ದಾಗ ನಾನು ಹುಟ್ಟಿದೆ ಎಂದು ಮಂಜಪ್ಪ ಹೇಳಿದ್ದರು. ತಾನು ಹರಿಶ್ಚಂದ್ರನಂತೆ ಸತ್ಯವಾದಿಯೆ? ಅಮ್ಮ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಚಿಲ್ಲರೆ ಹಣವನ್ನು ರಾತ್ರಿ ಮಲಗಿದ್ದಾಗ ಸೆರಗನ್ನು ಮೆಲ್ಲಗೆ ತನ್ನ ಕಡೆ ಎಳೆದುಕೊಂಡು ಗಂಟು ಬಿಚ್ಚಿ ತೆಗೆದುಕೊಳ್ಳುತ್ತಿದ್ದುದು ನೆನಪಿದೆ. ಕದ್ದ ಸತ್ಯ ಮುಚ್ಚಿಟ್ಟವ ಈ ಹರಿಶ್ಚಂದ್ರ! ಇಂತಹ ವ್ಯಕ್ತಿ ಹೇಗೆ ಉದ್ಧಾರವಾದಾನು ಎನ್ನುವ ಮೂಲಸತ್ಯ ಅವನಪ್ಪ ಅಮ್ಮನಿಗಿತ್ತೆ? ಏನೆಲ್ಲಾ ಮಾಡಿದರು ಅವನ ಉದ್ಧಾರಕ್ಕೆ. ಕದ್ದದ್ದನ್ನು ಮುಚ್ಚಿಟ್ಟವನಿಗೆ ಕದಿಯುವ ಚಪಲ ಕೈಕೆರೆಯುತ್ತಿತ್ತು. ಶಾಲೆಯಲ್ಲಿ ಒಂದೇ ಬೆಂಚಿನ ಮೇಲೆ ಕುಳಿತಿದ್ದ ಐದು ಜನ ಹುಡುಗರಲ್ಲಿ ಇವನೂ ಒಬ್ಬ. ಜಾಮಿಟ್ರಿ ಬಾಕ್ಸಿನಲ್ಲಿ ಸ್ಕೂಲ್ ಫೀಸು ಇಟ್ಟುಕೊಂಡು ಬಂದಿದ್ದ ಸುರೇಶಬಾಬುವಿನ ಹಣ ನಾಪತ್ತೆಯಾಗಿ ಅವನು ಗಾಬರಿಗೊಂಡು ಟೀಚರ್‌ಗೆ ಹೇಳಿದಾಗ, ಟೀಚರ್ ಎಲ್ಲರನ್ನು ಸಾಲಾಗಿ ನಿಲ್ಲಿಸಿ ಪ್ರತಿಯೊಬ್ಬರ ಚಡ್ಡಿ, ಪುಸ್ತಕ, ಜಾಮಿಟ್ರಿ ಬಾಕ್ಸ್ ತಪಾಸಣೆ ಮಾಡಿದ್ದರು. ಇನ್ನೇನು ಹರಿಶ್ಚಂದ್ರನನ್ನು ಕರೆಯಬೇಕು ಅಷ್ಟರಲ್ಲಿ ಬಾಯೊಳಗೆ ತುಂಬಿಕೊಂಡಿದ್ದ ನೋಟುಗಳನ್ನು ತೆಗೆದು ಬೆಂಚುಗಳ ಹಿಂದಕ್ಕೆಸೆದು ಬಿಟ್ಟಿದ್ದ. ಯಾರ ಹತ್ತಿರವೂ ಹಣ ಸಿಕ್ಕದಿದ್ದದ್ದು ಟೀಚರ್‌ಗೆ ಆಶ್ಚರ್ಯ ಅನುಮಾನ. ಕಡೆಗೆ ಅವರೇ ಹುಡುಗರನ್ನು ಹೊಗಳುತ್ತಾ ತರಗತಿಯ ಬೆಂಚು ಡೆಸ್ಕು ಮೂಲೆಗಳಲ್ಲಿ ಹುಡುಕುವಂತೆ ಹೇಳಿದರು. ದಡಬಡಿಸಿ ಹುಡುಗರು ಗದ್ದಲ ಮಾಡುತ್ತಾ ಹುಡುಕತೊಡಗಿದರು. ಹರಿಶ್ಚಂದ್ರ ತಾನೂ ಹುಡುಕುವ ನೆಪಮಾಡಿ, ತಾನು ಎಸೆದಿದ್ದ ದಿಕ್ಕಿನತ್ತ ಕಣ್ಣು ಹಾಯಿಸಿದ. ಯಾರ ಕಣ್ಣಿಗೂ ಅದು ಬೀಳದೆ ಬೆಂಚಿನ ಕೆಳಗಿನ ಕಾಲಿನ ಒಂದು ಪಾರ್ಶ್ವದಲ್ಲಿ ಅಂಟಿಕೊಂಡಿತ್ತು. ತಾನು ನಿಂತಲ್ಲೇ ನಿಂತು ಟೀಚರ್‌ಗೆ ಕೇಳುವಂತೆಅಲ್ಲೇನೋ ಕಾಣಿಸ್ತಿದೆ, ಆ ಬೆಂಚಿನ ಕೆಳಗೆ ನೋಡ್ರೋ” ಎಂದು ಕಿರುಚಿ ಹೇಳಿದ. ಹುಡುಗನೊಬ್ಬ ಮುದುರಿ ಮುದ್ದೆಯಾಗಿದ್ದ ನೋಟುಗಳನ್ನು ಟೀಚರ್ ಕೈಗೆ ಕೊಟ್ಟ. ಟೀಚರ್ ಸ್ವಲ್ಪಕಾಲ ಅದನ್ನು ತಮ್ಮ ಬೆತ್ತದಿಂದ ಒತ್ತಿ ಬಿಡಿಸಿ, ಯಾರು ಇದನ್ನ ಹೀಗೆ ಮಾಡಿದವರು ಎಂದು ಕಣ್ಣರಳಿಸಿ ಎಲ್ಲರನ್ನೂ ಗದರಿಸಿ ಕೇಳಿದರು. ಯಾರೂ ಉತ್ತರಿಸಲಿಲ್ಲ. ಸುರೇಶಬಾಬು ಬೆಂಚಿನ ಮೇಲಿದ್ದ ನಾಲ್ಕೂ ಜನರ ಕುತ್ತಿಗೆ ಪಟ್ಟಿ ಹಿಡಿದು “ನಿಜ ಹೇಳಿ ಯಾರು ಜಾಮಿಟ್ರಿ ಬಾಕ್ಸಿಂದ ಎಗರಿಸಿದ್ದು?” ಎಂದು ಕೇಳಿದ. ಒಬ್ಬೊಬ್ಬರ ಬೆನ್ನಿನ ಮೇಲೂ ಬೆತ್ತದಿಂದ ಬಾರಿಸಿ ಟೀಚರ್ ಕೂಡ ಕೇಳಿದರು. ಒಬ್ಬರೂ ತುಟಿಪಿಟಕ್ಕೆನ್ನಲಿಲ್ಲ. ಕಡೆಗೆ ಸುರೇಶಬಾಬೂನೇ ಹೇಳಿದ: “ಬಿಟ್ಟುಬಿಡಿ ಸರ್ ದುಡ್ಡು ಸಿಕ್ಕಿದ್ಯಲ್ಲ! ಮೇಷ್ಟ್ರು ಸುಮ್ಮಗಾದರು. ಹರಿಶ್ಚಂದ್ರನಿಂದಾಗಿ ಅವನ ಜೊತೆಗಾರ ಮೂರು ಹುಡುಗರಿಗೂ ಪೆಟ್ಟು ಬಿದ್ದಿತ್ತು. ಸತ್ಯ ಮಾತ್ರ ಹೊರಬರಲಿಲ್ಲ. ಆಗಲೂ ಕಾಲ ಕೈಕೊಟ್ಟಿತ್ತು. ಹಣ ದಕ್ಕಲಿಲ್ಲ ಎಂಬುದನ್ನು ಈಗಲೂ ನೆನಪಿಸಿಕೊಂಡ.

ಹೀಗೇ ಎಡವುತ್ತಾ ಕಾಲೇಜು ಮೆಟ್ಟಲು ಹತ್ತಿದ್ದ. ಗಣೇಶನ ಹಬ್ಬದ ಆಚರಣೆ ಕಾಲೇಜಿನಲ್ಲಿ ನಡೆಸಿದ್ದರು. ಘಂಟೆ ಬಾರಿಸಲು ಅರ್ಚಕರು ತಮ್ಮ ಮನೆಯಿಂದ ಘಂಟೆ ತಂದಿದ್ದರು. ಪೂಜೆ ಚೆನ್ನಾಗಿ ನಡೆಯಿತು. ಎಲ್ಲರಿಗೂ ತೀರ್ಥ ಪ್ರಸಾದ ಹಂಚಲಾಯಿತು. ಅರ್ಚಕರು ಹೊರಟು ಹೋದರು. ಎರಡು ದಿನ ಕಾಲೇಜಿನಲ್ಲಿ ಗಣೇಶನ ಬಗ್ಗೆಯೇ ಮಾತು. ಒಂದು ವಾರದ ಮೇಲೆ ಅರ್ಚಕರು ಕಾಲೇಜಿಗೆ ಬಂದು ಪ್ರಿನ್ಸಿಪಾಲರನ್ನು ಭೇಟಿ ಮಾಡಿ ತಾವು ಹಬ್ಬದ ದಿನ ಘಂಟೆ ಕಾಲೇಜಿನಲ್ಲೇ ಮರೆತು ಬಿಟ್ಟರೆಂದು ತೆಗೆದಿಟ್ಟಿದ್ದರೆ ಕೊಡಬೇಕೆಂದು ಕೇಳಿದಾಗಲೇ ಪ್ರಿನ್ಸಿಪಾಲರಿಗೆ ಗೊತ್ತಾಗಿದ್ದು. ಪ್ರತಿಯೊಂದು ತರಗತಿಯಲ್ಲೂ ಹುಡುಕಿಸಿದರು. ಸಿಕ್ಕಲಿಲ್ಲ. ನಿರ್ವಾಹವಿಲ್ಲದೆ ಪ್ರಿನ್ಸಿಪಾಲರು ಘಂಟೆಯ ಬೆಲೆ ಎಷ್ಟಾಗಬಹುದೆಂದು ವಿಚಾರಿಸಿ ತಮ್ಮ ಪರ್ಸಿನಿಂದ ಹಣ ತೆಗೆದು ಅರ್ಚಕರಿಗೆ ಕೊಟ್ಟರು. ಹರಿಶ್ಚಂದ್ರನಿಗೆ ಇದು ಗೊತ್ತಾಗಿದ್ದು ಮೂರನೇ ದಿನ. ಅವನು ಅರ್ಚಕರು ಕಾಲೇಜಿಗೆ ಬಂದ ದಿನ ಹಳೆ ಹಿತ್ತಾಳೆ ಸಾಮಾನು ಮಾರಾಟ ಮಾಡುವ ಕಡೆ ಹೋಗಿ ಘಂಟೆ ಮಾರಿದ್ದ. ಕೈ ಕಡೆತ ನಿಂತದ್ದು ಮಾರಿದ ಮೇಲೇನೆ! ಕಾಲೇಜಿಗೆ ಬಂದಾಗ ಅವನಿಗೆ ಹಿಂದಿನ ದಿನ ಅರ್ಚಕರಿಗೆ ಪ್ರಿನ್ಸಿಪಾಲ್ ಘಂಟೆಯ ದುಡ್ಡು ಕೊಟ್ಟ ಸುದ್ದಿಯನ್ನು ಹುಡುಗರು ಮುಟ್ಟಿಸಿದ್ದರು!

ಹರಿಶ್ಚಂದ್ರನ ಕರಪ್ಲತನ ನಿಂತಿದ್ದು ಅವನ ಡಿಗ್ರಿ ಮುಗಿದ ಮೇಲೆ ಎನ್ನಬೇಕು. ಅದೊಂದು ಸ್ವಾರಸ್ಯಕರ ಘಟನೆ. ಕಡೆಗೂ ಹರಿಶ್ಚಂದ್ರ ಬಿ.ಎ ಡಿಗ್ರಿ ಮುಗಿಸಿ ಪಾಸ್ ಆದ. ಘಟಿಕೋತ್ಸವಕ್ಕೂ ಹೋಗಿದ್ದ. ಪದವಿ ಸರ್ಟಿಫಿಕೇಟುಗಳನ್ನು ಕಾಲೇಜಿನಲ್ಲಿ ವಿತರಿಸುತ್ತಿದ್ದರು. ಕಾಲೇಜಿಗೆ ಹರಿಶ್ಚಂದ್ರ ಹೋಗಿ ತನ್ನ ಸರ್ಟಿಫಿಕೇಟ್ ಕೇಳಿದ. ಅರ್ಧಗಂಟೆ ಹುಡುಕಿದರೂ ಸಿಗಲಿಲ್ಲ. ಅವನದು ಮಾತ್ರ ಕಾಣೆಯಾಗಿತ್ತು. ಹರಿಶ್ಚಂದ್ರನ ಎದೆ ಹೊಡೆದುಕೊಂಡಿತು. ಕಾಲೇಜಿನಿಂದ ಪತ್ರ ಬರೆದರು. ವಿಶ್ವವಿದ್ಯಾಲಯದಿಂದ ಕಳಿಸಿದ್ದೇವೆ ಎಂದು ಪ್ರತ್ಯುತ್ತರ ಬಂತು. ಹೀಗೆ ಹಲವಾರು ಕಾಗದ ಪತ್ರಗಳು ಓಡಾಡಿದರೂ ಹರಿಶ್ಚಂದ್ರನಿಗೆ ಪದವಿ ಪತ್ರ ಸಿಕ್ಕಿರಲಿಲ್ಲ. ಸುಮಾರು ಎರಡು ತಿಂಗಳ ಮೇಲೆ ಒಂದು ದಿನ ಪೋಸ್ಟ್ ಮೂಲಕ ಮನೆಗೆ ಬಂತು. ಅದರೊಂದಿಗೆ ಒಂದು ಕಾಗದ ಕೂಡ ಇತ್ತು. ಹರಿಶ್ಚಂದ್ರ ಕಾಗದ ನೋಡಿದ. “ಭಯ ಬಂದಿತ್ತಲ್ವ ನಿನಗೆ? ಇನ್ನೊಬ್ಬರ ಕಷ್ಟ ಏನೊಂತ ಅರ್ಥ ಆಗ್ಲೀಂತ ಹೀಗೆ ಮಾಡಿದ್ದೀನಿ. ಇನ್ನಾದರೂ ಬುದ್ಧಿವಂತನಾಗು. ನಿನಗೆ ನಾನು ಯಾರೂಂತ ಹೇಳಲ್ಲ. ನೀನು ಹುಡಕಲು ಬೇಡ. ಪದವಿ ಪತ್ರ ಸಿಕ್ಕಿತಲ್ಲ. ಅಷ್ಟಕ್ಕೆ ತೃಪ್ತಿಪಟ್ಟುಕೋ” ಎಂದು ಬರೆದಿತ್ತು. ಕೈಬರಹ ಯಾರದ್ದೆಂದು ಕೊಂಚ ಕಾಲ ತಲೆ ಕೆಡಿಸಿಕೊಂಡ. ಆದರೆ ಗೊತ್ತಾಗಲಿಲ್ಲ. ಸುಮಾರು ದಿನ ಅವನ ಮನಸು ಅಲ್ಲೇ ಸುತ್ತಾಡುತ್ತಿತ್ತು.

ತಂದೆಯ ಪ್ರಭಾವದಿಂದ ಒಂದು ಕೆಲಸ ಸಿಕ್ಕಿತು. ಒಂದೆರಡು ವರ್ಷ ಅಲ್ಲೇ ಇದ್ದ. ತಡವಾಗಿ ಹೋಗುತ್ತಿದ್ದ. ಏನೇನೋ ಸಬೂಬು ಹೇಳುತ್ತಿದ್ದ. ಅವನ ತಂದೆಗೆ ಆಫೀಸಿನಿಂದ ಕರೆ ಬಂದು ಇವನ ಬಗ್ಗೆ ಹೇಳಿದರು. ತಂದೆಗೆ ಬೇಸರವಾಗಿ ಮಗನನ್ನು ತರಾಟೆಗೆ ತೆಗೆದುಕೊಂಡರು. ಹರಿಶ್ಚಂದ್ರ ಮೌನವಾಗಿದ್ದ. ಮಾರನೆ ದಿನ ಆಫೀಸಿಗೆ ಹೋಗಿ ಅದನ್ನೇ ದೊಡ್ಡ ನೆಪಮಾಡಿ ಮ್ಯಾನೇಜರ್ ಜೊತೆ ಜಗಳವಾಡಿ ರಾಜೀನಾಮೆ ಕೊಟ್ಟು ಬಂದುಬಿಟ್ಟ. ಮನೆಯಲ್ಲೇ ಇರುವುದನ್ನು ಕಂಡು ತಾಯಿ ವಿಚಾರಿಸಿದಾಗ ನಾನು ಹೋಗಲ್ಲ ಎಂದಷ್ಟೇ ಉತ್ತರಿಸಿದ. ರಾತ್ರಿ ತಂದೆ ಬಂದವರೆ ಯಾಕೆಂದು ವಿಚಾರಿಸಿ ಬುದ್ಧಿಮಾತು ಹೇಳಿದರು. ಬೆಳಗ್ಗೆ ನೋಡಿದಾಗ ಹರಿಶ್ಚಂದ್ರ ಮನೆಯಲ್ಲಿ ಇರಲಿಲ್ಲ. ಅವನ ಬಟ್ಟೆ ಇರಲಿಲ್ಲ. ತಂದೆಯ ಪರ್ಸಿನಲ್ಲಿ ಹಣ ಇರಲಿಲ್ಲ. ತಾಯಿಗೆ ದುಃಖ ಒತ್ತರಿಸಿ ಬಂತು. ತಂದೆಗೆ ಮಗ ಯಾಕೆ ಹೀಗಾದ ಎನ್ನುವ ಚಿಂತೆ ಅಮರಿಕೊಂಡಿತು. ಇವತ್ತಲ್ಲ ನಾಳೆ ಬರುತ್ತಾನೆ ಎಂದು ಎದುರು ನೋಡುತ್ತಾ ಇದ್ದರು. ಹರಿಶ್ಚಂದ್ರ ಮೂರು ನಾಲ್ಕು ವರ್ಷ ಬರಲೇ ಇಲ್ಲ. ಮುಂಬೈಗೆ ಹೋಗಿ ಅಲ್ಲಿ ಭಾಷೆ ಬರದೆ ಹೆಚ್ಚುದಿನ ಇರಲಾಗದೆ ಬೆಳಗಾವಿಗೆ ಬಂದು ಅಲ್ಲಿ ಒಂದು ಅಂಗಡಿಯಲ್ಲಿ ಮ್ಯಾನೇಜರ್ ಕೆಲಸ ಮಾಡತೊಡಗಿದ. ಸತತವಾಗಿ ಎರಡು ವರ್ಷ ಕೆಲಸ ಮಾಡಿದ. ಅಂಗಡಿ ಯಜಮಾನನ ಮಗಳು ಅಮೃತಾ. ಆಗಾಗ ಅಂಗಡಿಗೆ ಬರುತ್ತಿದ್ದಳು. ಅವಳ ಪರಿಚಯವಾಯಿತು. ಸ್ನೇಹವಾಗಿ ಪ್ರೇಮಕ್ಕೆ ತಿರುಗಿತು. ಇಬ್ಬರೂ ಗುಟ್ಟಾಗಿ ಸಂಧಿಸುತ್ತಿದ್ದರು. ಹಾಗೇ ಅವಳು ಗರ್ಭ ಧರಿಸಿದ್ದು ಗೊತ್ತಾಗಿ ಓಡಿಹೋಗೋಣ ನಡಿ ಎಂದು ಹೇಳಿದ. ಅವಳು ಒಪ್ಪಲಿಲ್ಲ. ಯಜಮಾನರಿಗೆ ತಿಳಿದರೆ ತನ್ನ ಗ್ರಹಚಾರ ನೆಟ್ಟಗಿರಲ್ಲ ಎಂದುಕೊಂಡ ಹರಿಶ್ಚಂದ್ರ ಹೇಳದೆ ಕೇಳದೆ ಜಾಗ ಖಾಲಿ ಮಾಡಿದ. ಅಮೃತಾಗೂ ಅವನು ಬಿಟ್ಟುಹೋದ ಸುದ್ದಿ ಗೊತ್ತಾಗಲಿಲ್ಲ. ಮಗಳ ಪರಿಸ್ಥಿತಿ ಗೊತ್ತಾಗಿ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದರು. ತಂದೆಗಾದ ಸ್ಥಿತಿ ಕಂಡು ಹರಿಶ್ಚಂದ್ರನ ಮೇಲೆ ಅಪಾರ ಸಿಟ್ಟು ದ್ವೇಷ ಉಂಟಾಗಿದ್ದರೆ ಅಮೃತಾಳಿಗೆ ಯಾರೂ ತಪ್ಪು ಎನ್ನುತ್ತಿರಲಿಲ್ಲ. ಅವಳ ತಾಯಿ ಹೃದಯವಂತಳು. ಲೋಕ ಕಂಡವಳು. ಹರಿಶ್ಚಂದ್ರನನ್ನು ಮರೆಯುವಂತೆ ಧೈರ್ಯ ತುಂಬಿದಳು. ಗುಟ್ಟು ಇಂದಲ್ಲ ನಾಳೆ ಗೊತ್ತಾಗುತ್ತದೆ ಎಂದು ತಿಳಿದಿದ್ದ ಆಕೆ ದೂರದ ಸಂಬಂಧಿಯೊಬ್ಬನಿಗೆ ಅಮೃತಾಳನ್ನು ಕೊಟ್ಟು ಮದುವೆ ಮಾಡುವ ನಿರ್ಧಾರ ಕೈಗೊಂಡಳು. ಹೀಗೆ ಅಮೃತಾಳಿಂದ ದೂರವಾದ ಹರಿಶ್ಚಂದ್ರನಿಗೆ ತನಗೊಬ್ಬಳು ಮಗಳಿದ್ದಾಳೆ ಎನ್ನುವುದು ಗೊತ್ತಾಗಿದ್ದೇ ಇತ್ತೀಚೆಗೆ.

ಯಾವುದೋ ಬಸ್ಸು ನಿಂತ ಸದ್ದಾಗಿ ಹರಿಶ್ಚಂದ್ರ ನೋಡಿದ. ವಾಚು ನೋಡಿಕೊಂಡ. ಹೌದು. ಇದೇ ಬಸ್ಸು ಎಂದು ಕೌಂಟರಿನಲ್ಲಿ ಟಿಕೇಟ್ ಕೊಳ್ಳಲು ಹೋದ. ಬಸ್ ಕಂಡಕ್ಟರೆ ಕೊಡುತ್ತಾನೆ ಎನ್ನುವ ಉತ್ತರ ಬಂತು. ಬಸ್ಸಿನ ಹತ್ತಿರ ಬಂದ ಹಲವರು ಹತ್ತುತ್ತಿದ್ದರು. ಅವನೂ ಹತ್ತಿ ಕಿಟಕಿ ಪಕ್ಕ ಸೀಟು ಇದೆಯಾ ನೋಡಿದ. ಕಡೇ ಸಾಲಿನ ಮುಂದಿನ ಸಾಲಿನಲ್ಲಿತ್ತು. ಹೋಗಿ ತನ್ನ ಬ್ಯಾಗನ್ನು ಲಗೇಜ್ ಇಡುವ ಜಾಗದಲ್ಲಿಟ್ಟು ಕೂತುಕೊಂಡ. ಬಸ್ಸು ಹೊರಡುವ ಹೊತ್ತು ಮೀರಿತು. ಕಂಡೆಕ್ಟರ್ ಇವನಿಂದ ಹಣ ಪಡೆದು ಬೆಂಗಳೂರಿಗೆ ಟಿಕೇಟ್ ಕೊಟ್ಟ.

ಕಾಲ ಕೈಕೊಡುತ್ತದೆ ಎಂದು ಸದಾ ಯೋಚಿಸುತ್ತಿದ್ದ ಹರಿಶ್ಚಂದ್ರನಿಗೆ ತನ್ನ ಮಗಳ ಹೆಸರು ‘ಸಮಯ’ವೆಂದು ತಿಳಿದಾಗ ಆಶ್ಚರ್ಯವಾಯಿತು. ಅಮೃತಾ ನೆನಪಾದಳು. ಎಲ್ಲಿದ್ದಾಳೆ? ಸಮಯಳ ಜೊತೆ ಇದ್ದಾಳೆಯೆ? ಸಮಯಳಿಗೆ ಹೇಗೆ ಗೊತ್ತಾಯಿತು ತನ್ನ ವಿಳಾಸ ಫೋನ್ ನಂಬರ್? ಅಮೃತಾ ಹೇಳಿರಬಹುದೆ? ತನ್ನಿಂದ ವಂಚಿತಳಾದವಳು. ಅವಳು ಹೇಳಿರುವುದು ಅಸಾಧ್ಯ ಎಂಬುದು ಖಾತ್ರಿ. ಒಂದುಕ್ಷಣ ಹರಿಶ್ಚಂದ್ರನ ಮುಖ ಕಪ್ಪಿಟ್ಟಿತು. ಮುಸ್ಸಂಜೆಯ ಕೆಂಪು ಬೆಳಕು ಕಿಟಕಿ ಪ್ರವೇಶಿಸಿತು. ಅವನ ಮುಖ ಕೆಂಪಿಗೆ ತಿರುಗಿತು. ಯಾವುದು ನೆಲೆ ನಿಲ್ಲಲಿಲ್ಲ. ಆದರೆ ಸಮಯಳ ಕುರಿತು ಎಲ್ಲಿಲ್ಲದ ಕುತೂಹಲ! ಯಾಕೆ ಎಂದು ಕೇಳುವಂತಿಲ್ಲ. ತನಗೆ ತಾನೇ ಹುಟ್ಟಿಕೊಂಡದ್ದು. ಅವಳು ಹೇಗಿರಬಹುದು? ಅಮೃತಾಳ ಹಾಗಿರುವಳೆ? ತನ್ನ ಹಾಗೆ? ಮದುವೆ ಆಗಿದೆಯೆ? ಒಂದರ ಮೇಲೊಂದು ಪ್ರಶ್ನೆ ಎರಗತೊಡಗಿತು.

ಬಸ್ಸು ಹೊರಟಿದ್ದು ಗೊತ್ತಾಗಲಿಲ್ಲ. ಹರಿಶ್ಚಂದ್ರ ಮಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ಮುಳುಗಿ ಹೋಗಿದ್ದ. ಕೊರಳು ನವೆಯ ತೊಡಗಿ ಎರಡು ಮೂರು ಸಲ ಬೆರಳನ್ನು ಹಾಕಿ ಕೆರೆದುಕೊಂಡು ಕಿಟಕಿಯ ಗಾಜಿನ ಕಡೆ ನೋಡಿದಾಗ ಬೆರಳಿನ ಉಗುರು ಕೊರಳಿಗೆ ಊರಿ ಚುಮು ಚುಮು ಉರಿಯತೊಡಗಿತು.

ಬೆರಳು ಎದುರಿಗೆ ಹಿಡಿದು ನೋಡಿದಾಗ ಬಲಗೈ ಹೆಬ್ಬೆರಳಿನ ಉಗುರು ತುದಿಯಲ್ಲಿ ಸಿಬಿರಿನಂತೆ ಎದ್ದುಬಿಟ್ಟಿತ್ತು. ಹರಿಶ್ಚಂದ್ರ ಸಿಬಿರನ್ನು ಎಳೆದು ಉಗುರಿನ ಆ ಭಾಗವನ್ನು ತೆಗೆದುಬಿಟ್ಟ. ನುಣಿಪಿರದೆ ಒರಟೊರಟಾಗಿತ್ತು. ಎಷ್ಟು ಕಾಲ ಈ ಉಗುರನ್ನು ಜೋಪಾನ ಮಾಡಿದ್ದೆ ಎಂದು ಅಭಿಮಾನದಿಂದ ನೋಡಿದ. ನಿಜ. ಹೆಬ್ಬೆರಳಿನ ಉಗುರು ಅವನಿಗೆ ಕೆಲಮಟ್ಟಿಗೆ ಕೆಲವರ ಸ್ನೇಹ ಗಳಿಸಿ ಕೊಟ್ಟಿತ್ತು. ಉಗುರಿನಿಂದ ದಪ್ಪ ರಟ್ಟಿನ ಮೇಲೆ ಕಾರ್ಡಿನ ಮೇಲೆ ಚಿತ್ರ ಕೆತ್ತುತ್ತಿದ್ದ. ಅದು ಹೇಗೋ ಆ ಕಲೆ ಅವನಿಗೆ ಕರಗತವಾಗಿತ್ತು. ದಾರಿಯಲ್ಲಿ ಒಬ್ಬ ಹಾವಾಡಿಗನ ಶಿಷ್ಯ ಆ ರೀತಿ ಮಾಡುತ್ತಿದ್ದುದನ್ನು ಗಮನಿಸಿದ್ದು ನೆನಪು ಮಾಡಿಕೊಂಡ. ಅರ್ಧ ಗಂಟೆಯಲ್ಲಿ ಎರಡು ಒಳ್ಳೆಯ ಚಿತ್ರಗಳು ಮೂಡುತ್ತಿದ್ದವು. ಸುತ್ತಲೂ ನಿಂತಿದ್ದವರ ಮುಖ ಬಿಡಿಸುತ್ತಿದ್ದ. ಹಾವಿನ ಚಿತ್ರ ಬಿಡಿಸುತ್ತಿದ್ದ. ಹರಿಶ್ಚಂದ್ರನಿಗೆ ಅದು ತುಂಬಾ ಹಿಡಿಸಿತ್ತು. ಅವನೂ ಪ್ರಯತ್ನಿಸಿ ಕೆಲವನ್ನು ಹರಿದು ಹಾಕಿದ. ನಿಧಾನವಾಗಿ ಗುಬ್ಬಚ್ಚಿ, ಪಾರಿವಾಳ, ನಾಯಿ, ಕತ್ತೆಗಳ ಚಿತ್ರ ಬಿಡಿಸಿದ. ಉಗುರಿನಿಂದ ಊರಿ ಅದರ ಆಕಾರ ಮೂಡಿಸಿ ಕ್ರಯಾನ್ ಪೆನ್ಸಿಲ್ಲಿನಿಂದ ಬಣ್ಣದ ಗೆರೆ ಎಳೆದು ಅದಕ್ಕೊಂದು ಕಳೆ ಕೊಡುತ್ತಿದ್ದ. ಅದನ್ನೇ ಬೆಳೆಸಿಕೊಂಡಿದ್ದರೆ ಜನಪ್ರಿಯನಾಗುತ್ತಿದ್ದನೋ ಏನೋ! ಇಪ್ಪತ್ತು ಮಾತ್ರ ತನ್ನ ಬಳಿ ಇಟ್ಟುಕೊಂಡಿದ್ದ. ಉಳಿದದ್ದನ್ನು ಬಹಳ ಹಿಂದೆಯೇ ತೂಕಕ್ಕೆ ಹಾಕಿ ಪುಡಿಕಾಸು ಪಡೆದಿದ್ದ. ಮತ್ತೆ ಕೈಕೊಟ್ಟ ಕಾಲ! ವಿಷಾದದ ನಗುವೆ ಅವನ ತುಟಿಯಲ್ಲಿ ಬಿರಿದದ್ದು?

ಬೆಂಗಳೂರಿನ ಬಸ್ಸು ತಲುಪಿದಾಗ ಸುಮಾರು ಒಂಬತ್ತು ಗಂಟೆಯಾಗಿತ್ತು. ಹರಿಶ್ಚಂದ್ರ ಹೊರಗೆ ಬಂದು ಎಲ್ಲಿ ಹೋಗಬೇಕು ಸಮಯ ಎಲ್ಲಿ ಸಿಗುತ್ತಾಳೆ ಎಂಬುದು ಹೊಳೆಯದೆ ತನ್ನ ಬ್ಯಾಗನ್ನು ತೆಗೆದು ಅದರಲ್ಲಿ ಜೋಪಾನ ಮಾಡಿದ್ದ ಕವರನ್ನು ತೆಗೆದು ಅದರೊಳಗಿದ್ದ ಒಂದು ಕಾಗದ ಹೊರಗೆಳೆದು ನೋಡಿದ. ಒಂದು ಫೋನ್ ನಂಬರ್ ಮತ್ತು ಸಮಯಳ ಹೆಸರು ಇತ್ತು. ತನ್ನ ಮೊಬೈಲ್ ಛಾರ್ಜರ್ ಇಲ್ಲದೆ ಸೆಲ್‌ಫೋನ್ ಬ್ಯಾಟರಿ ಬಂದಾಗಿತ್ತು. ಪಬ್ಲಿಕ್ ಫೋನ್ ಹುಡುಕಿಕೊಂಡು ಹೊರಟ. ಕಾರ್ನರ್ ಅಂಗಡಿಯೊಂದರ ಗೋಡೆಗೆ ತಗುಲಿ ಹಾಕಿದ್ದು ಕಾಣಿಸಿ ಅಲ್ಲಿಗೆ ಬಂದು ಫೋನ್ ನಂಬರ್ ಚೀಟಿ ಪಕ್ಕದಲ್ಲಿಟ್ಟುಕೊಂಡು ಫೋನ್ ಮಾಡಿದ. ರಿಂಗ್ ಸದ್ದು ಕೇಳಿಸಿತು. ತೆಗೆದುಕೊಂಡ ಧ್ವನಿ ಕೇಳಿಸಿ ಬೂತಿನೊಳಗೆ ಕಾಯಿನ್ ಹಾಕಿ ಹಲೋ ಎಂದು ಮೃದುವಾಗಿ ಹೇಳಿದ. ಸಮಯಳ ಧ್ವನಿ ಕೇಳಿಸಿ ರೋಮಾಂಚನವಾಯಿತು. ಮಾತು ಹೊರಳಲಿಲ್ಲ. ಏನಂತ ಹೇಳಬೇಕು ಅರ್ಥವಾಗಲಿಲ್ಲ.

“ನಾನು ಹರಿಶ್ಚಂದ್ರ”

ನಿನ್ನ ತಂದೆ ಎಂದು ಹೇಳಲು ಬಾಯಿ ತಡವರಿಸಿತು. ಯಾಕೆ ಹಾಗಾಯಿತು. ಅಲ್ಲಿಂದ ಸಂಭ್ರಮದ ಧ್ವನಿ ಕೇಳಿಸಿತು.

ಡ್ಯಾಡಿ

ಮತ್ತೆ ಮಾತು ಹೊರಳದೆ ಕಸಿವಿಸಿಯಾಯಿತು.

ಎಲ್ಲಿದ್ದೀಯ?”

ನಾನು ಹೋಟೆಲ್‌ನಲ್ಲಿರುವೆ. ಈಗ ಸಿಗಬೇಕೆಂದರೆ ತಡವಾಗತ್ತೆ. ನಾಳೆ ನಿಮ್ಮ ಜೊತೆ ಬ್ರೇಕ್‌ಫಾಸ್ಟ್ ಮಾಡುವೆ. ಒಳ್ಳೆಯ ಹೋಟೆಲ್ ಯಾವುದು ಹೇಳಿ ನಾನೇ ಬರುವೆ.”

ನಿನ್ನ ಹೋಟೆಲ್‌ಗೆ ನಾನೇ ಬರಲೆ ಎಂದು ಬಾಯಿತನಕ ಬಂದಿತ್ತು. ಹಾಗೇ ನುಂಗಿಕೊಂಡ.

ರೇಸ್‌ಕೋರ್ಸ್ ಎದುರು ಶಿವಾನಂದ ಸರ್ಕಲ್‌ಗೆ ಹೋಗುವ ರಸ್ತೆ ಇದೆ. ಆ ರಸ್ತೆಯಲ್ಲೇ ಒಂದು ಹೋಟೆಲ್ ಇದೆ. ತಿಂಡಿ ಚೆನ್ನಾಗಿರತ್ತೆ

ಓಕೆ. ಮಾರ್ನಿಂಗ್ ನೈನ್. ಐ ವಿಲ್ ಬಿ ದೇರ್.”

ಫೋನ್ ಕಟ್ಟಾಯಿತು. ಹರಿಶ್ಚಂದ್ರನಿಗೆ ಮಗಳ ಜೊತೆ ಅಷ್ಟು ಮಾತಾಡಿದ್ದಕ್ಕೆ ಹೃದಯ ತುಂಬಿ ಬಂದಿತ್ತು.

ಈಗ ತಾನು ಎಲ್ಲಿರಬೇಕು? ಚಿಕ್ಕಪೇಟೆ, ಮೆಜಿಸ್ಟಿಕ್‌ನಲ್ಲಿ ಯಾವುದು ಕಮ್ಮಿ ಬಾಡಿಗೆಯ ಲಾಡ್ಜ್ ಇದೆ ಎಂದು ಗೊತ್ತಾಗದೆ ಅಂಗಡಿಯವನನ್ನೇ ಕೇಳಿದ.

“ಇಲ್ಲಿ ಎಲ್ಲಿ ಸಿಗತ್ತೆ ಕಡಿಮೆ ಬಾಡಿಗೆ ಇರೋ ಲಾಡ್ಜ್

ಹಿಂದಿನ ಬೀದಿಲಿ ಸಾಲಾಗಿ ಎರಡು ಮೂರು ಇದೆ. ಹೋಗಿ ಸಿಗತ್ತೆ

ತನ್ನ ಬ್ಯಾಗ್ ಹಿಡಿದು ಹಿಂದಿನ ಬೀದಿಯ ಕಡೆ ಹೊರಟ. ಹೊಟ್ಟೆ ಹಸಿಯುತ್ತಿತ್ತು. ಜೇಬು ಮುಟ್ಟಿಕೊಂಡ. ಪರ್ಸ್ ಇತ್ತು. ಲಾಡ್ಜ್‌ಗೆ ಹೋಗೋಕೆ ಮುಂಚೆ ಹೊಟ್ಟೆ ತುಂಬಿಸಿಕೊಳ್ಳೋದು ಒಳ್ಳೆಯದು.

ಅಲ್ಲೇ ಒಂದು ದರ್ಶಿನಿ ಹೋಟೆಲ್‌ಗೆ ನುಗ್ಗಿದ. ಇನ್ನೇನು ಮುಚ್ಚುವ ವೇಳೆಯಾಗಿತ್ತು. ಉಪ್ಪಿಟ್ಟು ಕಾಫಿ ಮಾತ್ರ ಇತ್ತು. ಎರಡು ಪ್ಲೇಟ್ ಉಪ್ಪಿಟ್ಟು ಒಂದು ಕಾಫಿ ತೆಗೆದುಕೊಂಡು ಬಂದ.

ಬಿಸಿ ಇರಲಿಲ್ಲ. ಆರಿಹೋಗಿತ್ತು. ತಿಂದು ಮುಗಿಸಿ ಲಾಡ್ಜ್ ಕಡೆ ಹೆಜ್ಜೆ ಹಾಕಿದ.

ಹರಿಶ್ಚಂದ್ರನ ಅದೃಷ್ಟಕ್ಕೆ ಸಿಂಗಲ್ ರೂಮು ಒಂದು ಮಾತ್ರ ಇತ್ತು. ಎಲ್ಲವೂ ಡಬ್ಬಲ್ ರೂಮುಗಳು. ಮುಂಗಡ ಹಣ ಕೊಡಲು ಹೋದ. ಒಂದು ದಿನದ ಪೂರ್ತಿ ಹಣ ಕೊಡಬೇಕೆಂದು ಮ್ಯಾನೇಜರ್ ಹೇಳಿ ಅದನ್ನು ಪಡೆದು ರೂಮ್ ಬಾಯನ್ನು ಕರೆದು ಬೀಗದ ಕೈ ಕೊಟ್ಟು ಎರಡನೆ ಮಹಡಿಯ ಕೊನೆ ರೂಮು 214 ಕೊಡು ಎಂದ. ರೂಮ್ ಬಾಯನ್ನು ಹಿಂಬಾಲಿಸಿ ಎರಡು ಮಹಡಿ ಹತ್ತುವುದರಲ್ಲಿ ಸಾಕಾಯಿತು. ಏದುಸಿರು ಬರತೊಡಗಿತು. ಮಹಡಿ ಏರಿ ಕೊಂಚ ಸುಧಾರಿಸಿಕೊಂಡ. ಹುಡುಗ ರೂಮಿನ ಬಾಗಿಲು ತೆಗೆದು ದೀಪ ಹಾಕಿ ನೀರಿನ ಹೂಜಿ ತುಂಬಿಸಿ ಹೊರಟು ಹೋದ.

ಹರಿಶ್ಚಂದ್ರ ರೂಮು ಸೇರಿ ಬಾಗಿಲು ಹಾಕಿಕೊಂಡು ಫ್ಯಾನ್ ಸ್ವಿಚ್ಚು ಒತ್ತಿ ಹಾಗೆಯೆ ಹಾಸಿಗೆ ಮೇಲೆ ಉರುಟುಕೊಂಡ. ಬ್ಯಾಗು ಕುರ್ಚಿ ಮೇಲೆ ಬಿತ್ತು.

ಫ್ಯಾನ್ ಸುತ್ತುತಿದ್ದಂತೆ ಅವನ ಮನಸ್ಸೂ ಸುತ್ತುತ್ತಿತ್ತು. ತನ್ನ ಹಾಗೆಯೇ ಹಲವಾರು ಗೋಜಲುಗಳಿವೆ. ಅವುಗಳನ್ನು ಬಿಡಿಸುವುದು ಹೇಗೆ? ಸಮಯ ತನ್ನ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾಳೆ. ಅವಳು ತನಗೆ ಸಹಾಯ ಮಾಡಲು ಬಂದಿರುವಳೆ? ಅವಳನ್ನು ನಾಳೆ ಗುರುತು ಹಚ್ಚುವುದು ಹೇಗೆ?

ಯಾವುದಕ್ಕೂ ಉತ್ತರ ಹೊಳೆಯಲಿಲ್ಲ. ಹಾಗೇ ಕಣ್ಣು ಮುಚ್ಚಿದ.

-3-

ಬೆಳಗ್ಗೆ ಎದ್ದಾಗ ಕಿಟಕಿಯಿಂದ ಎಳೆಬಿಸಿಲು ತೂರಿ ಬಂದಿತ್ತು. ಏಳುಗಂಟೆ ದಾಟಿತ್ತು. ಎದ್ದವನೆ ಬಾತ್‌ರೂಮು ಸೇರಿ ಎಲ್ಲವನ್ನೂ ಮುಗಿಸಿ ಹೊರಗೆ ಬಂದ. ರೂಮ್‌ಬಾಯಿ ಬಾಗಿಲು ಬಡಿಯುತ್ತಿದ್ದ. ತೆಗೆದು ಅವನ ಮುಖ ನೋಡಿದ.

“ಕಾಫಿ ಬೇಕಾ?”

ಒಂದು ತಗೊಂಬಾ ಬಿಸಿ ಬಿಸಿ ಇರಲಿ”

ಹದಿನೈದು ರೂಪಾಯಿ ಕೊಟ್ಟು ಕಳಿಸಿದ.

ಕಾಫಿ ಬಂದು ಕುಡಿದು, ಬೇರೆ ಬಟ್ಟೆ ಇಲ್ಲದೆ ನಿನ್ನೆಯ ಉಡುಪನ್ನೇ ಧರಿಸಿ ಸಿದ್ಧವಾಗುವ ಹೊತ್ತಿಗೆ ಎಂಟು ಕಾಲು ಆಗಿತ್ತು. ಬಸ್ಸು ಹಿಡಿದು ಶಿವಾನಂದ ತಲುಪುವ ಹೊತ್ತಿಗೆ ಒಂಬತ್ತರ ಹತ್ತಿರವಿರುತ್ತೇನೆ.

ಹರಿಶ್ಚಂದ್ರ ಲಾಡ್ಜ್ ಬಿಟ್ಟು ಹೊರಟ. ಆಟೋ ಹಿಡಿಯುವ ಬದಲು ನಡೆದುಕೊಂಡೆ ಹೊರಟ. ರೇಸ್‌ಕೋರ್ಸ್ ಎದುರಿನ ರಸ್ತೆಯಲ್ಲಿ ಹೊಕ್ಕು ನಡೆಯತೊಡಗಿದ. ತನ್ನ ವಾಚಿನಲ್ಲಿ ಒಂಬತ್ತಾಗಿತ್ತು. ಈಗಲೂ ಕೈಕೊಡಬೇಕೆ ಕಾಲ ಎಂದು ತನ್ನನ್ನೇ ಹಳಿದುಕೊಂಡ. ಗಕ್ಕನೆ ನೆನಪಾಯಿತು. ಹಿಂದಿನ ದಿನ ವಾಚನ್ನು ತಿರುಗಿಸಿ ಕಾಲುಗಂಟೆ ಮುಂದೆ ಇಟ್ಟಿದ್ದು. ಕೊಂಚ ಸಮಾಧಾನವಾಗಿ ಹೋಟೆಲಿನ ಹತ್ತಿರ ಬಂದು ಸುತ್ತಲೂ ಕಣ್ಣು ಹಾಯಿಸಿದ. ಸಾಕಷ್ಟು ಜನ ಇದ್ದರು. ಹೆಂಗಸರು ಮಕ್ಕಳು ಉತ್ತರ ಭಾರತದ ಕೆಲವರು ನಿಂತಿದ್ದರು. ಸಮಯ ಬಂದಿರುವಳೆ? ಒಳಗಿರುವಳೆ? ಹೋಟೆಲ್ ಒಳಗೆ ಹೋದ. ಟೇಬಲ್ಲುಗಳ ಮುಂದೆ ಕುಳಿತವರನ್ನು ಗಮನಿಸಿದ. ಸಮಯ ಕಾಣಲಿಲ್ಲ. ನಿಮಿಷ ಹೆಚ್ಚುತ್ತಿದ್ದಂತೆ ಆತಂಕ ಶುರುವಾಯಿತು. ಅವಳನ್ನು ಏನಂತ ಹೆಸರಿಸುವುದು. ಸಮಯ ಬಿಟ್ಟು ಬೇರೆ ಕರೆಯಲು ಸಾಧ್ಯವೆ?

ಯಾರೋ ಹಿಂದೆ ಬಂದಂತಾಯಿತು. ಮುವತ್ತು ದಾಟಿದ ಒಬ್ಬಳು ಟೇಬಲ್ಲುಗಳ ಕಡೆ ನೋಡುತ್ತಿರುವುದು ಕಾಣಿಸಿ ಅಚಾನಕ್ಕಾಗಿ ಕೇಳಿದ

ನೀವು ಸಮಯನಾ?”

ಸಮಯಳಿಗೆ ಗೊತ್ತಾಯಿತು.

“ಎಸ್ ಡ್ಯಾಡ್, ಸಮಯ!”

ಅವಳನ್ನು ಕರೆದುಕೊಂಡು ಆಗತಾನೇ ಖಾಲಿಯಾಗಿದ್ದ ಎರಡು ಕುರ್ಚಿ ಹತ್ತಿರ ಬಂದು “ಕೂತುಕೊಳ್ಳಿ” ಅಂದ.

ನಾನು ನಿಮ್ಮ ಮಗಳು ಏಕವಚನದಲ್ಲಿ ಮಾತಾಡಿಸಿ ಎಂದು ತಿದ್ದಿದಳು.

ಇಬ್ಬರೂ ಕುಳಿತರು ಅಷ್ಟೆ. ಮಾತಿಲ್ಲ ಕತೆ ಇಲ್ಲ. ಹರಿಶ್ಚಂದ್ರ ಅವಳನ್ನೇ ನೋಡುತ್ತಿದ್ದ. ಅವಳೂ ತಂದೆಯನ್ನೇ ನೋಡುತ್ತಿದ್ದಳು.

ಮಗಳು ಸುಂದರವಾಗಿ, ಲವಲವಿಕೆ ಮುಖ ಹೊಂದಿದ್ದಳು. ಅಷ್ಟು ವರುಷಗಳ ನಂತರ ಪ್ರತ್ಯಕ್ಷವಾಗಿದ್ದ ಮಗಳನ್ನು ಕಂಡು ಮನಸು ಹಿಗ್ಗಿತು.

ಅಷ್ಟರಲ್ಲಿ ಸಪ್ಲೈಯರ್ ಬಂದ. ಟೇಬಲ್ಲಿನ ಮೇಲೆ ಹಿಂದಿನವರು ತಿಂದಿದ್ದ ಪ್ಲೇಟು ಲೋಟಗಳು ಹಾಗೇ ಇತ್ತು. ಅವುಗಳನ್ನು ನೋಡಿ ಹರಿಶ್ಚಂದ್ರನ ಪಿತ್ತ ನೆತ್ತಿಗೇರಿತು. ಮಗಳು ಎದುರಿಗಿದ್ದಾಳೆ ಎನ್ನುವುದನ್ನು ಮರೆತು ಸಪ್ಲೈಯರ್‌ಗೆ ದಬಾಯಿಸಿದ

ಟೇಬಲ್ ಕ್ಲೀನ್ ಮಾಡಿಲ್ವಲ್ರಿ! ತಿಂಡೀನ ಇದರ ಮೇಲೆ ತಂದಿಡ್ತೀರೇನು? ಮೊದಲು ಕ್ಲೀನ್ ಮಾಡಿಸಿ”

ಸಮಯ ತಂದೆಯನ್ನೇ ನೋಡುತ್ತಿದ್ದಳು. ಸಪ್ಲೈಯರ್ ತಂದೆಯ ಜೊತೆ ಜಗಳಕ್ಕೇ ಇಳಿದ. ಇಬ್ಬರಿಗೂ ಜೋರು ಜೋರು ಮಾತು ನಡೆದು ಗಲ್ಲದ ಮೇಲಿದ್ದ ವ್ಯಕ್ತಿ ಎದ್ದು ಬಂದು ಸಮಾಧಾನ ಹೇಳಿ ಕ್ಲೀನರ್‌ನ ಕರೆದು ಟೇಬಲ್ ಕ್ಲೀನ್ ಮಾಡಿಸಿದ.

ಹರಿಶ್ಚಂದ್ರ ಇನ್ನೂ ಧುಮುಗುಟ್ಟುತ್ತಲೇ ಇದ್ದ.

“ನಾವು ಬಂದ್ರೆ ಇವರಿಗೆ ದುಡ್ಡು. ಇಲ್ಲದೇ ಇದ್ರೆ ಬಾಗಿಲು ಮುಚ್ಚಿಕೊಂಡು ಹೋಗಬೇಕು”

ಸಮಯಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗಲಿಲ್ಲ. ಮುಂಚೆ ಬಂದಿದ್ದ ಸಪ್ಲೈಯರ್ ಬದಲು ಬೇರೊಬ್ಬ ಬಂದು ತಿಂಡಿ ಏನು ಬೇಕು?

ಹರಿಶ್ಚಂದ್ರ ಮಗಳ ಮುಖ ನೋಡಿದ

ಇಲ್ಲಿಯ ವಿಶೇಷ ಏನು?

“ಮಸಾಲೆ ದೋಸೆ”

ಒಂದು ನನಗೆ. ಇವರಿಗೆ ಒಂದು”

ಸಪ್ಲೈಯರ್ ಹೊರಟು ಹೋದ.

ನೀನು ಎಲ್ಲಿದ್ದೀಯ? ಏನು ಮಾಡ್ತಿದ್ದೀಯ? ನಾನೇ ನಿನ್ನ ತಂದೆ ಅಂತ ಹೇಗೆ ಗೊತ್ತಾಯ್ತು?

ಸಮಯ ಹೇಳಿದ್ದು ಇಷ್ಟು:

“ನಾನು ಆಸ್ಟ್ರೇಲಿಯಾದಲ್ಲಿರುವೆ. ನಾನು ಚಿಕ್ಕ ಮಗು ಆಗಿದ್ದಾಗ ಅಮ್ಮ ಯಾರಿಗೋ ನನ್ನನ್ನು ಕೊಟ್ಟುಬಿಟ್ಟಳು. ಅವರು ನನ್ನನ್ನು ಸಾಕಿ ಬೆಳೆಸಿದರು. ಎಷ್ಟೋ ವರುಷ ನಾನು ಅವರ ಮಗಳೆಂದೇ ನಂಬಿಕೊಂಡಿದ್ದೆ. ಆಮೇಲೆ ಗೊತ್ತಾಯಿತು ನಮ್ಮ ತಂದೆ ತಾಯಿ ಅವರಿಬ್ಬರಲ್ಲಾಂತ. ಅಮ್ಮನನ್ನು ಹುಡುಕಿಕೊಂಡು ಹೋದೆ. ಜಸ್ಟ್ ನಾನು ನೋಡುವುದಕ್ಕಷ್ಟೇ. ಮತ್ತೆ ವಾಪಸ್ ಹೋಗುವವಳಿದ್ದೆ.

ಬೆಳಗಾವಿಯಲ್ಲಿರುವುದು ತಿಳಿದು ಅಲ್ಲಿಗೆ ಹೋದೆ. ಅಮ್ಮನ ಗೆಳತಿಯ ಮಗಳಾಗಿ ಹೋಗಿದ್ದೆ. ಅಮ್ಮನಿಗೆ ಬೇರೆ ಮದುವೆ ಆಗಿದೆ ಎಂದು ಗೊತ್ತಾಯಿತು. ನನ್ನ ತಂದೆ ಯಾರು ಎಂದು ವಿಚಾರಿಸಿದೆ. ಏನೂ ಹೇಳಲಿಲ್ಲ. ತನ್ನ ಜೀವನ ಹಾಳು ಮಾಡಿದವ. ನೀನು ಅವನನ್ನು ನೋಡಬೇಕೆ ಎಂದು ಕೇಳಿದಳು. ಆದರೆ ನನಗೆ ನೋಡುವ ಆಸೆ ಇತ್ತು. ಬಲವಂತ ಮಾಡಿದೆ. ಒಳಗೆ ಹೋಗಿ ಯಾವುದೋ ಟ್ರಂಕಿನಿಂದ ಕಾರ್ಡ್ ಕೊಟ್ಟಳು. ಅದರಲ್ಲಿ ಉಗುರಿನಿಂದ ಬಿಡಿಸಿದ ಅಮ್ಮನ ರೇಖಾಚಿತ್ರವಿತ್ತು. ಅದನ್ನು ಕೊಟ್ಟುಬಿಟ್ಟಳು. ಇದನ್ನು ವಾಪಸ್ ಕೊಡಬೇಡ. ನೀನೇ ಇಟ್ಟುಕೋ. ಇದನ್ನು ಬರೆದವನು ನಿನ್ನ ಅಪ್ಪ. ನನಗಿನ್ನೇನು ತಿಳಿದಿಲ್ಲ ಎಂದುಬಿಟ್ಟಳು. ಅಮ್ಮನಿಗೆ ನನ್ನ ಮೇಲೆ ಪ್ರೀತಿ ಇತ್ತೋ ಇಲ್ಲವೋ ಅಥವಾ ನಟನೆಯೋ! ಒಂದಷ್ಟು ದುಡ್ಡುಕೊಟ್ಟು ಒಳ್ಳೆಯ ಜೀವನ ನಡೆಸು ಎಂದು ಒಳಗೆ ಹೋಗಿಬಿಟ್ಟಳು.

ಅಂದಿನಿಂದ ನನ್ನನ್ನು ಸಾಕಿದ ತಂದೆ ತಾಯಿಗಳನ್ನು ಬಿಟ್ಟು ಎಲ್ಲೂ ಹೋಗಲಿಲ್ಲ. ಹೆಚ್ಚಿನ ವ್ಯಾಸಂಗಕ್ಕೆ ಆಸ್ಟ್ರೇಲಿಯಾಕ್ಕೆ ಕಳಿಸಿದರು. ಅಲ್ಲೇ ಕೆಲಸ ಸಿಕ್ಕಿತು. ನನಗೆ ಮದುವೆ ಆಗುವ ಆಸೆ ಇರಲಿಲ್ಲ. ಒಬ್ಬಳೆ ಇರುವ ನಿರ್ಧಾರ ಮಾಡಿದೆ. ನನ್ನಿಂದ ಅಮ್ಮನಿಗೆ, ನಿಮಗೆ ಏನಾದರು ಅನುಕೂಲ ಆಗುವುದೆ ಎಂದು ಯೋಚಿಸುತ್ತಿದ್ದೆ. ಅಮ್ಮ ನನ್ನನ್ನು ಮರೆತುಬಿಟ್ಟಳು. ನನ್ನನ್ನು ಸಾಕಿದ ತಂದೆ ತಾಯಿಗಳು ಎರಡು ವರ್ಷದ ಹಿಂದೆ ಹೋಗಿಬಿಟ್ಟರು. ನಾನೀಗ ಆಸ್ಟ್ರೇಲಿಯಾದಲ್ಲೇ ಇದ್ದೀನಿ. ಇತ್ತೀಚಿಗೆ ಕೆಲವು ಇಂಡಿಯನ್ಸ್ ಬಂದಿದ್ದರು. ಅವರು ಸಿಡ್ನಿಗೆ ಬಂದಾಗ ಕೆಲವರ ಪರಿಚಯವಿತ್ತು. ನನ್ನ ಮನೆಗೂ ಬಂದು ಆತಿಥ್ಯ ಸ್ವೀಕರಿಸಿದರು. ನನ್ನ ಶೋಕೇಸ್ ನೋಡುತ್ತಿದ್ದವರಲ್ಲಿ ಒಬ್ಬರು ಅಲ್ಲಿಟ್ಟಿದ್ದ ಉಗುರು ಚಿತ್ರ ನೋಡಿ, “ಓ… ನೀವು ಅವರ ಅಭಿಮಾನಿನಾ” ಎಂದು ಕೇಳಿದರು.

“ಯಾರ ಅಭಿಮಾನಿ” ಅರ್ಥವಾಗದೇ ಕೇಳಿದೆ.

“ಉಗುರು ಚಿತ್ರ ಬರೆದಿದ್ದಾರಲ್ಲ ಅವರ ಅಭಿಮಾನಿ.”

ತಕ್ಷಣ ನನಗೆ ಕುತೂಹಲ ಬಂತು.

“ಅವರು ನಿಮಗೆ ಗೊತ್ತಾ?”

ಅವರು ಉಗುರಲ್ಲಿ ಕೆತ್ತಿದ್ದ ಚಿತ್ರಗಳ ಒಂದುಕಟ್ಟು ಹಳೆಪೇಪರ್‌ನವನಿಗೆ ತೂಕಕ್ಕೆ ಹಾಕಿದ್ರಂತೆ. ಅವನ ಹತ್ರ ದುಡ್ಡುಕೊಟ್ಟು ಕೊಂಡುಕೊಂಡೆ. ಸುಮಾರಿದೆ.”

ಹಾಗಾದ್ರೆ ಅವರ ವಿಳಾಸ ಗೊತ್ತ ನಿಮಗೆ?”

ನನ್ನ ಗೆಳತಿ ಸುಷ್ಮಾ ಅವರ ಕ್ಲಾಸ್‌ಮೇಟ್ ಸುರೇಶಬಾಬು ತಂಗಿ. ಅವಳು ಅಣ್ಣನ್ನ ಕೇಳಿ ಇವನ ಅಡ್ರೆಸು ಹಾಗೂ ಫೋನ್ ನಂಬರನ್ನ ಹುಡುಕಿ, ಸಂಪಾದಿಸಿ ತಂದುಕೊಟ್ಟರು. ನಾನೇನು ಅವರ ಸಂಪರ್ಕದಲ್ಲಿಲ್ಲ. ಇದರಿಂದ ನನಗೆ ಎರಡು ಮೂರು ರೀತಿ ಲಾಭ ಆಗಿದೆ. ಕೆಲವರಿಗೆ ಉಗುರು ಕಲೆ ಬಗ್ಗೆ ಆಸಕ್ತಿ ಇತ್ತು. ಅವರಿಗೆ ನಾನು ಬಾಡಿಗೆಗೆ ಇದನ್ನು ಕೊಟ್ಟು ಹಣ ಸಂಪಾದನೆ ಮಾಡಿದೆ. ಇನ್ನೊಂದು ಇದರ ಮೂಲಕವೇ ನನ್ನ ಮದುವೆ ಹುಡುಗ ಸಿಕ್ಕಿದ್ದು. ಮತ್ತೊಂದು ಇವುಗಳ ಎಕ್ಸಿಬಿಷನ್ ಮಾಡಿ ಹಣ ಮಾಡಿಕೊಂಡೆ.”

ನನಗೆ ಅವರ ಅಡ್ರೆಸ್ ಮತ್ತು ಫೋನ್ ನಂಬರ್ ಕೊಡುವಿರಾ?”

ನಾನು ಊರಿಗೆ ಹೋಗಿ ಮೇಲ್ ಮಾಡುವೆ ಎಂದು ಉತ್ತರಿಸಿದರು. ಸುಮಾರು ಒಂದು ತಿಂಗಳು ಕಳೆದ ಮೇಲೆ ಮೇಲ್‌ನಲ್ಲಿ ಬಂತು. ಅದು ಬಂದ ಮೇಲೆ ನನಗೆಷ್ಟು ಸಂತೋಷವಾಗಿತ್ತೆಂದು ಹೇಳಲಾರೆ. ಸಂಭ್ರಮಪಟ್ಟೆ. ನೋಡಿ ಮಾತಾಡಿಸುವ ಆಸೆ ಇತ್ತು. ಹೀಗಾಗಿ ನಾನು ಫೋನ್ ಮಾಡಿ ಭೇಟಿ ಆಗೋಣ ಎಂದಿದ್ದು. ನನಗೆ ಸಮಯ ಅಂತ ಹೆಸರಿಟ್ಟಿದ್ದು ನನ್ನ ಸಾಕು ತಂದೆ ತಾಯಿ. ಅವರ ಪ್ರತಿಯೊಂದು ಸಮಯದಲ್ಲೂ ನಾನು ಇರುತ್ತಿದ್ದೆನಂತೆ. ಅದಕ್ಕೆ ಸಮಯ ಅಂತ ಹೆಸರಿಟ್ಟರು.

ನಾನೀಗ ಒಬ್ಬಳೆ. ಸ್ವಂತ ತಾಯಿ ದೂರ ಮಾಡಿದ್ದು ನನಗೆ ದುಃಖ ತಂದಿತ್ತು. ಹೆಚ್ಚಿನ ಪ್ರೀತಿ, ವಾತ್ಸಲ್ಯ ತೋರದೆ ಕಳಿಸಿಬಿಟ್ಟಳು. ಈಗ ಉಳಿದಿದ್ದು ತಂದೆಯನ್ನು ಕಾಣುವ ಹಂಬಲ. ಎಲ್ಲವೂ ಅನುಕೂಲವಾದರೆ ಕರೆದುಕೊಂಡು ಹೋಗಿ ಎಲ್ಲರಿಗೂ ತಂದೆಯನ್ನು ಪರಿಚಯಿಸಿ ಬದುಕುವ ಕನಸು ಹೊತ್ತು ಬಂದೆ. ಸಮಯ ಹೇಗೋ ಏನೋ ಯಾರು ಬಲ್ಲರು? ಹಣ ಇದೆ, ಮನೆ ಇದೆ, ಯಾವುದಕ್ಕೂ ಕೊರತೆ ಇಲ್ಲ. ಪ್ರೀತಿಯಿಂದ ವಾತ್ಸಲ್ಯದಿಂದ ನೋಡಿಕೊಳ್ಳುವ ತಂದೆ ಜೊತೆಗಿದ್ದರೆ ಅದಕ್ಕಿಂತ ಬೇರೆ ಭಾಗ್ಯ ಯಾರಿಗೆ ಬೇಕು?

ದೋಸೆ ತಟ್ಟೆಗಳು ಟೇಬಲ್ಲಿನ ಮೇಲೆ ಕಾಯುತ್ತಿದ್ದವು. ಯಾವಾಗ ಸಪ್ಲೈಯರ್ ತಂದಿಟ್ಟಿದ್ದನೋ?

ಹರಿಶ್ಚಂದ್ರ ನೋಡಿದ. ಮುಟ್ಟಿದ. ಆರಿ ಹೋಗಿತ್ತು. ಸಮಯ ತಿನ್ನಲು ಹೋದಳು. ಅವಳನ್ನು ತಡೆದು ಸಪ್ಲೈಯರನ್ನು ಕರೆದು

ಆರಿ ಹೋಗಿದೆ ಬೇರೆ ತಗೊಂಬಾ”

ಹಾಗೆಲ್ಲಾ ಕೊಡೋಕೆ ಆಗಲ್ಲ. ನಾನು ಆಗಲೇ ತಂದಿಟ್ಟೆ. ನೀವು ತಿನ್ನದಿದ್ರೆ ನಾನು ಹೊಣೆನಾ?”

ನೀನು ಬೇರೆ ತರಲೇಬೇಕು. ಇಲ್ದಿದ್ರೆ ಗಲಾಟೆ ಮಾಡ್ತೀನಿ. ಬೇರೆ ದೇಶದಿಂದ ಬಂದವರಿಗೆ ಹೀಗೆ ಆರಿದ್ದು ಕೊಟ್ರೆ ನಿಮ್ಮ ಹೊಟೆಲ್ ರೆಪ್ಯುಟೇಷನ್ ಏನಾಗುತ್ತೆ ಗೊತ್ತಾ?”

ನಮಗೆ ಎಲ್ಲರೂ ಒಂದೇ. ನಿಮ್ಮ ತಪ್ಪಿಗೆ ನಮ್ಮನ್ನು ಗುರಿ ಮಾಡೋದು ಸರಿ ಇಲ್ಲ. ನಮ್ಮ ಹೋಟೆಲ್ ರೂಲ್ ಪ್ರಕಾರ ನಾವು ಕೊಡಲ್ಲ”

ಏನ್ರಿ ನಿಮ್ಮ ರೂಲು? ತೋರಿಸಿ! ನಾನು ನೋಡಬೇಕು.”

ಹಾಗೆಲ್ಲಾ ತೋರಿಸಲ್ಲ. ಬೇಕಾದ್ರೆ ತಿನ್ನಿ ಇಲ್ಲಂದ್ರೆ ಬಿಡಿ, ಬಿಲ್ಲು ತರ್ತೀನಿ”

ದುಡ್ಡು ಕೊಡಿ”

ನಾನು ಒಂದು ಪೈಸಾನು ಕೊಡಲ್ಲ!”

ಪೊಲೀಸ್‌ನ ಕರಿತೀವಿ.”

ಕರೀರಿ ನೋಡೋಣ…!”

ಸುತ್ತಲಿದ್ದ ಕಸ್ಟಮರ್‌ಗಳು ಇಲ್ಲೇ ನೋಡುತ್ತಿದ್ದರು. ಸಮಯ ತಂದೆಯನ್ನು ಎರಡು ಮೂರು ಸಲ ತಡೆಯುವ ಪ್ರಯತ್ನ ಮಾಡಿದಳು.

ಹರಿಶ್ಚಂದ್ರ ತನ್ನ ಆರ್ಭಟದಲ್ಲೇ ಇದ್ದ ಮ್ಯಾನೇಜರ್ ಬಂದ.

ಕೆಲವರು ಸುತ್ತಿಕೊಂಡರು. ಜಗಳ ತಾರಕಕ್ಕೇರಿತು.

ಸಮಯ ಎರಡು ಮೂರು ಸಲ ದೋಸೆಯನ್ನು ಮುರಿದು ತಿಂದಳು.

ಎದ್ದು ಹೋಗಿ ಕೈತೊಳೆದು ಬಂದು ಕೂತಳು. ಹರಿಶ್ಚಂದ್ರನ ಸಿಟ್ಟು ಆರಿರಲಿಲ್ಲ. ಸಮಯ ಸಪ್ಲೈಯರ್‌ಗೆ ಬಿಲ್ಲು ತರಲು ಹೇಳಿದಳು. ಸಪ್ಲೈಯರ್ ಹೋದಂತೆ ಉಳಿದವರೂ ಚದುರಿದರು.

ಹರಿಶ್ಚಂದ್ರನ ದೋಸೆ ಹಾಗೆ ಇತ್ತು. ತಿಂದಿರಲಿಲ್ಲ. ಸಪ್ಲೈಯರ್ ಬಿಲ್ಲು ತಂದಿಟ್ಟ. ಸಮಯ ಬಿಲ್ಲಿನ ಹಣ ಕೊಟ್ಟಳು. ಹರಿಶ್ಚಂದ್ರ ಮೂಕನಾಗಿ ನೋಡುತಿದ್ದ. ಸಪ್ಲೈಯರ್ ಬಂದು ಹೋದಾಗಲೆಲ್ಲಾ ದುರುಗುಟ್ಟಿ ನೋಡುತ್ತಿದ್ದ.

ತಂದೆಯನ್ನು ದೋಸೆ ತಿನ್ನು ಎಂದು ಸಮಯ ಹೇಳಲಿಲ್ಲ. ಹರಿಶ್ಚಂದ್ರ ಮಗಳ ಜೊತೆ ಆಡಿದ್ದು ಎರಡು ಮಾತು.

“ನೀನು ಬಿಲ್ ಕೊಡಬಾರದಿತ್ತು. ಬುದ್ಧಿ ಕಲಿಸಬೇಕು ಇವರಿಗೆಲ್ಲ!”

ಸಮಯ ಫ್ರಂಟ್ ವಿಂಡೋ ಹೊರಗೆ ನೋಡಿದಳು. ಅವಳ ತಲೆಯಲ್ಲಿ ಏನೋ ಗೊಂದಲ. ತಂದೆಯ ಸ್ವಭಾವದ ಬಗ್ಗೆ ತಾಯಿಯ ಸ್ವಭಾವದ ಬಗ್ಗೆ ಚಿಂತಿಸುತ್ತಿದ್ದಳು. ನಮಗೆ ನಾವೇ ಕೂಡಿಟ್ಟು ಬೆಳೆಸಿಕೊಂಡ ಕ್ರೌರ್ಯ, ಹಿಂಸೆ, ಅರ್ಥ ಮಾಡಿಕೊಳ್ಳದ ಮನೋಭಾವ-ಇವುಗಳು ದೇಹದಿಂದ ಬಿಟ್ಟು ಹೋಗಲಾರವು. ವಯಸ್ಸು ಹೆಚ್ಚಾದಷ್ಟು ಅದರ ದುಪ್ಪಟ್ಟು ಇವುಗಳೂ ಇರುತ್ತವೆ. ಬಿಡಬಹುದಾದುದ್ದನ್ನು ಬಿಡಲಾರದೆ ಅಂಟಿಸಿಕೊಂಡಿರುತ್ತೇವೆ ಎನ್ನುವುದಕ್ಕೆ ಅಪ್ಪ ಅಮ್ಮ ಇಬ್ಬರೂ ಮಾದರಿ! ಹಾಗಾದರೆ ತಾನು ತಳೆದಿದ್ದ ನಿಲುವಿಗೆ ಪರಿಹಾರವೇನು?

ಸಪ್ಲೈಯರ್ ಬಿಲ್ ಜೊತೆ ಚಿಲ್ಲರೆ ವಾಪಾಸ್ ಮಾಡಿದ. ಸಮಯ ಪರ್ಸ್ ತೆಗೆದು ಐನೂರರ ಒಂದು ನೋಟ್ ಅದರ ಮೇಲೆ ಟಿಪ್ಸ್ ಇಟ್ಟಳು. ಅದನ್ನು ತೆಗೆದುಕೊಂಡವನು ಸಪ್ಲೈಯರಲ್ಲ, ಹರಿಶ್ಚಂದ್ರ ನೋಟನ್ನು ತೆಗೆದುಕೊಂಡು “ಇದರ ಸಪ್ಲೈಗೆ ಇಷ್ಟು ಟಿಪ್ಸ್ ಕೊಡ್ತಾರ. ಆ ಚಿಲ್ಲರೆ ಸಾಕು’’ ಎಂದು ನೋಟನ್ನು ತನ್ನ ಜೇಬಿಗೆ ತುರುಕಿಕೊಂಡು ಎದ್ದು ಸಿಂಕ್ ಹತ್ತಿರ ಹೋಗಿ ಬರುತ್ತೇನೆ ಎಂದು ಹೇಳಿ ಹೋದ. ಸಮಯ ಸಪ್ಲೈಯರ್‌ಗೆ ಬೇರೊಂದು ಐನೂರರ ನೋಟು ಕೊಟ್ಟಳು. ಅವನು ನಮಸ್ಕರಿಸಿ ಹೋದ.

ಸಿಂಕ್ ಬಳಿ ಬಂದ ಹರಿಶ್ಚಂದ್ರ ಮೂಗು ಸೀನಿ, ಬಾಯಿ ತೊಳೆದು ತಾನು ಯಾಕೆ ದೋಸೆ ತಿನ್ನಲಿಲ್ಲ? ಸಮಯ ಯಾಕೆ ಆರಿದ ದೋಸೆ ತಿಂದಳು ಎಂದು ಯೋಚಿಸುತ್ತಾ ಟೇಬಲ್ ಬಳಿ ಬಂದ. ಟೇಬಲ್ ಖಾಲಿಯಾಗಿತ್ತು. ಸಮಯ ಕಾಣಿಸಲಿಲ್ಲ. ಸುತ್ತಲೂ ಕಣ್ಣು ಹಾಯಿಸಿ ಅವಳನ್ನು ಹುಡುಕಿದ. ಪಕ್ಕದ ಟೇಬಲ್ಲಿನವರನ್ನು ಕೇಳಿದ. ತಲೆ ಅಲ್ಲಾಡಿಸಿದರು.

ಎಲ್ಲಿ ಹೋದಳು ಎಂದು ಯೋಚಿಸುತ್ತಾ ಇದ್ದಾಗ ಅವನ ಕಣ್ಣು ಟೇಬಲ್ಲಿನ ಮೇಲೆ ಹರಿಯಿತು.

ನ್ಯಾಪ್‌ಕಿನ್ ಸ್ಟ್ಯಾಂಡಿನ ಕೆಳಗೆ ಏನೋ ಇತ್ತು. ಅದನ್ನು ಹೊರತೆಗೆದು ನೋಡಿದ. ಸಮಯಳಿಗೆ ಅಮೃತಾ ಕೊಟ್ಟಿದ್ದ ಉಗುರಲ್ಲಿ ಬಿಡಿಸಿದ್ದ ಅಮೃತಾಳ ಚಿತ್ರವಿದ್ದ ಕಾರ್ಡ್ ಇತ್ತು.

ಸಮಯ ಇರಲಿಲ್ಲ!

*****

ಕಥೆ “ಟಿಕ್ ಟಿಕ್ ಟಿಕ್ ಟಿಕ್ ಕೈ ಕೊಟ್ಟ ಗಡಿಯಾರ” ವ್ಯಕ್ತಿಗಳ ಮೂಲ ಸ್ವಭಾವಕ್ಕೆ ಸಂಬಂಧ ಪಟ್ಟಂತೆ ಬರೆದ ಕತೆ. ಸ್ವಭಾವಗಳು ಹೇಗೆ ಬೇರೂರಿರುತ್ತವೆ, ಎಷ್ಟೇ ವಯಸ್ಸಾದರೂ ಮನಸೇಕೆ ಅದನ್ನು ಬಿಟ್ಟುಕೊಡುವುದಿಲ್ಲ? ಹೆಣ್ಣಾಗಲೀ ಗಂಡಾಗಲಿ ಅವುಗಳನ್ನು ಕಾಯ್ದುಕೊಳ್ಳುವುದಕ್ಕೆ ಅಹಂಕಾರವೇ ಕಾರಣವೆ? ಕಾಲ ಕೈ ಕೊಡುವುದೆಂದರೆ ತನ್ನ ತಿಳುವಳಿಕೆಗೆ ದಕ್ಕದ್ದು ಎಂದರ್ಥವೆ? ಕನಸು ಕಟ್ಟಿಕೊಂಡು ಬಂದು, ತನಗೊಂದು ವಾತ್ಸಲ್ಯದ ಆರೈಕೆ ದೊರೆಯಬಹುದೆಂಬ ಮಗಳ ಆಸೆಗೆ ಎಂತಹ ಭಯಾನಕ ಅನುಭವ ಉಂಟಾಗುತ್ತದೆ!
ಪ್ರತಿಯೊಂದು ಸನ್ನಿವೇಶದ ಬದಲಾವಣೆಗೆ ಕಾಲ ಕೈ ಕೊಡುವುದೆ? ಕೂಡಿಬಂದರೂ ಬರದಂತೆ ಮಾಡಿಕೊಳ್ಳುವ ಸ್ವಭಾವ ಋಣಾತ್ಮಕವೆ? ಹೀಗೆ ನನ್ನನು ನಿರಂತವಾಗಿ ಚಿಂತನೆಗೆ ಹಚ್ಚಿತ್ತು. ಕಡೆಗೊಂದು ದಿನ ಕತೆಯಾಕಾರ ತಳೆಯಿತು. ಅನೇಕರಿಗೆ ಈ ರೀತಿಯ ಅನುಭವ ಆಗಿದೆ. ಸಂಸಾರಗಳು, ಸಂಬಂಧಗಳು ಅಂತ್ಯಕಾಣದೆ ಅತಂತ್ರವಾಗಿರುವುದನ್ನು ಕಾಣುತ್ತೇವೆ. ಇತ್ತೀಚೆಗೆ ಬರೆದ ಈ ಕತೆ ನನಗೆ ಪ್ರಿಯವೆನಿಸಿದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ