Advertisement
ಸುಂದರ ಕಾಡಿನ ರೋಚಕ ಕಥೆಗಳು ಭಾಗ -೩: ರೂಪಾ ರವೀಂದ್ರ ಜೋಷಿ ಸರಣಿ

ಸುಂದರ ಕಾಡಿನ ರೋಚಕ ಕಥೆಗಳು ಭಾಗ -೩: ರೂಪಾ ರವೀಂದ್ರ ಜೋಷಿ ಸರಣಿ

ಈ ಹೂವು ಪಾರಿಜಾತದಂತೇ ತಾನೇ ತಾನಾಗಿ ಮರದಿಂದ ಉದುರುವಂಥದ್ದು. ಅದಕ್ಕೇ ನಾವೆಲ್ಲಾ ಬೆಳಗ್ಗೆ ಬೇಗನೆ ಎದ್ದು, ಮುಖ ತೊಳೆದವರೇ, ಆ ಮರದತ್ತ ಓಡುತ್ತಿದ್ದೆವು. ಕಾರಣ, ಬೇರೆಯವರು ಬಂದು ಆರಿಸಿಕೊಂಡರೆ? ಎಂಬ ಆತಂಕ ಒಂದು ಇರುತ್ತಿತ್ತಲ್ಲಾ… ಓಡುತ್ತ ಹೋದವರೇ, ಮರದ ಬುಡಕ್ಕೆ ಬಿದ್ದ ಹೂವನ್ನು ಆರಿಸಿ, ಕಾಡು ಎಲೆಗಳ ಕೊಟ್ಟೆ ಮಾಡಿ ಅದರಲ್ಲಿ ತುಂಬಿಕೊಳ್ಳುತ್ತಿದ್ದೆವು. ಪುಟ್ಟ ವೃತ್ತಕಾರದ ಈ ಹೂವಿಗೆ ಸುತ್ತಲೂ ಕಣ್ಣು ರೆಪ್ಪೆಯಂಥ ಸೂಕ್ಷ್ಮವಾದ ಬೆಳ್ಳನೆಯ ಚೂಪನೆಯ ಎಸಳುಗಳು. ಮಧ್ಯದಲ್ಲಿ ಒಂದು ರಂದ್ರ. ಹಿಂಭಾಗ ಗುಮ್ಮಟೆಯಂತೆ ಇರುತ್ತದೆ. ಅದರ ಸುಗಂಧ ಅದ್ಭುತ.
ರೂಪಾ
ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹನ್ನೆರಡನೆಯ ಕಂತು

ಮಳೆಗಾಲದಲ್ಲಿ ಕಾಡಲ್ಲಿ ಅರಳುವ ಮತ್ತೊಂದು ಬಗೆಯ  ಹೂವು ಎಂದರೆ, ಅದು ಗೌರಿ ಹೂವು. ಜೇಡನ ಕಾಲಿನಂತೆ ಉದ್ದುದ್ದ  ಎಸಳಿನ ಈ ಹೂವು, ಗಾಢ ಕೇಸರಿ ಬಣ್ಣದ್ದು.  ಸ್ವಲ್ಪ ಹಳೆಯದಾಯಿತೆಂದರೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಸಿರಾದ ದಪ್ಪ ಕಾಂಡ ಹೊಂದಿರುವ ಇದರ ಎಳೆಯ ಭಾಗ ಸುರುಳಿಯಾಗಿ ಬಳ್ಳಿಯಂತೇ ಇರುತ್ತದೆ. ಉದ್ದುದ್ದ ತಿಳಿ ಹಸಿರು ಬಣ್ಣದ ಎಲೆ  ಹೊಂದಿದ ಈ ಗೌರಿ ಬಳ್ಳಿ, ಹೆಚ್ಚಾಗಿ ಗಣೇಶ ಚೌತಿಯ ಸಮಯಕ್ಕೇ ಬೆಳೆದು, ಹೂ ಬಿಡುತ್ತದೆ. ಬಹುಶಃ ಅದಕ್ಕೇ ಈ ಹೆಸರು ಬಂದಿರಬೇಕು. ನಮ್ಮಲ್ಲಿ ಗೌರಿ ತದಿಗೆಯ ದಿನ ಹೂವಿನ ಸಮೇತ ಈ ಬಳ್ಳಿಯನ್ನು ತಂದು, ಗಣೇಶನ ಮುಂದೆ ಕಟ್ಟುವ ಫಲವಳಿಗೆಯ ಜೊತೆ ಇದನ್ನೂ ಕಟ್ಟುವ ಪದ್ಧತಿ ಇದೆ.

ಹಾಗೇ ಇನ್ನೊಂದು ವಿಶೇಷ ಕಾಡು ಹೂವನ್ನು ಇಲ್ಲಿ ಸ್ಮರಿಸಿಕೊಳ್ಳಲೇ ಬೇಕು. ನಾನು ಐದರಿಂದ ಏಳನೇ  ತರಗತಿಯ ತನಕ   ದಿನಾ ಐದು ಕಿ.ಮೀ ಕಾಡು ದಾರಿಯಲ್ಲಿ ನಡೆದು ದೂರದ ಶಾಲೆಗೆ ಹೋಗುತ್ತಿದ್ದೆ. ನಮ್ಮನೆಯಿಂದ ಶಾಲೆಗೆ ಹೋಗಲು ಬೇರೆ ಬೇರೆ ದಿಕ್ಕಿನಲ್ಲಿ ಕಾಡುಗುಂಟ ಸಾಗುವ ಸುಮಾರು ಮೂರು ನಾಲ್ಕು ಬೇರೆ ಬೇರೆ ಕಾಲು ದಾರಿಗಳಿದ್ದವು. ಆಗ ಒಂದು ಕಾಡು ದಾರಿಯಲ್ಲಿ ನೋಡಿದ್ದು ಈ ಹೂವು. ಮಳೆಗಾಲ ಶುರುವಾಗಿ ಒಂದು ತಿಂಗಳೊಳಗೆ ಇದು ಭೂಮಿಯಿಂದ ಮೊಗ್ಗು ಸಮೇತ ಒಂದಿಂಚಿನಷ್ಟು ಹೊರಬಂದು, ಅರಳಿ ನಿಲ್ಲುತ್ತಿತ್ತು. ಬೆಳ್ಳನೆಯ ನೆಲ ತಾವರೆಯನ್ನು ಹೋಲುವ ಈ ಹೂವು, ಕಾಡಲ್ಲಿ ಎಲ್ಲೆಂದರಲ್ಲಿ ಅರಳಿ, ಕಣ್ಣು ಹಾಯಿಸಿದಲ್ಲೆಲ್ಲಾ ಬೆಳ್ಳನೆಯ ಹೂ ರಾಶಿ. ಅದಷ್ಟು ಚೆಂದ ಅಂತೀರಿ. ಅದರ ಹೆಸರು ಪಕ್ಕಾ ಗೊತ್ತಿಲ್ಲ. ನಮ್ಮಲ್ಲಿ ಆಡು ಭಾಷೆಯಲ್ಲಿ “ವರಲೇ ಬೇಳೆ” ಅಂತೇನೋ ಹೇಳ್ತಾ ಇದ್ದ ನೆನಪು. ನೀವು ಬೇಕಾದರೆ, ಬೆಟ್ಟದಾವರೆ ಅಂತ ಅಂದುಕೊಳ್ಳಿ. ಅದರ ಸೀಸನ್ ಹೆಚ್ಚೆಂದರೆ ೮ ರಿಂದ ೧೦ ದಿನಗಳ ತನಕ. ತುಂಬ ಮೃದುವಾದ, ಕಿತ್ತರೆ  ಬೇಗನೆ ಬಾಡುವ ಆ ಹೂವಿನ ನೆನಪು ಮತ್ತೆ ಮತ್ತೆ ನನ್ನನ್ನು ಬಾಲ್ಯಕ್ಕೆ ಕರೆದೊಯ್ಯುತ್ತದೆ.

(ಗೌರಿ ಹೂವು)

ಇನ್ನು ಬೇಸಿಗೆಯ ರಜೆಯಿಡೀ ನಮ್ಮನ್ನು ಸೆಳೆಯುತ್ತಿದ್ದ ಒಂದು ಬಹು ಮುಖ್ಯ ಹೂವೆಂದರೆ, ‘ರಂಜಲ ಹೂ.’ ಅದನ್ನು ‘ಬಕುಳ ಪುಷ್ಪ’ ಅಂತಲೂ ಕರೆಯುತ್ತಾರೆ. ನಮ್ಮನೆಯ ಮುಂದೆ ಒಂದಿಷ್ಟು ಗದ್ದೆ. ಅದರ ನಂತರ ಒಂದು ಸೊಪ್ಪಿನ ಬೆಟ್ಟ, ಮತ್ತೊಂದು ಬೇಣ ಎರಡನ್ನೂ ದಾಟಿ, ಕಿರುದಾರಿಯಲ್ಲಿ ಒಂದಷ್ಟು ದೂರ ನಡೆದರೆ,  ಅಲ್ಲೊಂದು ಘಮ ಘಮಿಸುವ  ರಂಜಲ ಹೂವಿನ ಮರ ಇತ್ತು. ಈ ಹೂವು ಪಾರಿಜಾತದಂತೇ ತಾನೇ ತಾನಾಗಿ ಮರದಿಂದ ಉದುರುವಂಥದ್ದು. ಅದಕ್ಕೇ ನಾವೆಲ್ಲಾ ಬೆಳಗ್ಗೆ ಬೇಗನೆ ಎದ್ದು, ಮುಖ ತೊಳೆದವರೇ, ಆ ಮರದತ್ತ ಓಡುತ್ತಿದ್ದೆವು. ಕಾರಣ, ಬೇರೆಯವರು ಬಂದು ಆರಿಸಿಕೊಂಡರೆ? ಎಂಬ ಆತಂಕ ಒಂದು ಇರುತ್ತಿತ್ತಲ್ಲಾ… ಓಡುತ್ತ ಹೋದವರೇ, ಮರದ ಬುಡಕ್ಕೆ ಬಿದ್ದ ಹೂವನ್ನು ಆರಿಸಿ, ಕಾಡು ಎಲೆಗಳ ಕೊಟ್ಟೆ ಮಾಡಿ ಅದರಲ್ಲಿ ತುಂಬಿಕೊಳ್ಳುತ್ತಿದ್ದೆವು. ಪುಟ್ಟ ವೃತ್ತಕಾರದ ಈ ಹೂವಿಗೆ ಸುತ್ತಲೂ ಕಣ್ಣು ರೆಪ್ಪೆಯಂಥ ಸೂಕ್ಷ್ಮವಾದ ಬೆಳ್ಳನೆಯ ಚೂಪನೆಯ ಎಸಳುಗಳು. ಮಧ್ಯದಲ್ಲಿ ಒಂದು ರಂದ್ರ. ಹಿಂಭಾಗ ಗುಮ್ಮಟೆಯಂತೆ ಇರುತ್ತದೆ. ಅದರ ಸುಗಂಧ ಅದ್ಭುತ. ನಾವು ಆ ಹೂಗಳನ್ನು ಬಾಳೆಯ ನಾರಲ್ಲಿ ಪೋಣಿಸಿ ಹಾರ ಮಾಡಿಕೊಂಡು ಮುಡಿಯುತ್ತಿದ್ದೆವು. ಗೋಡೆಯ ಮೇಲಿನ ಎಲ್ಲ ದೇವರ ಪಟಗಳನ್ನೂ ಅಲಂಕರಿಸುತ್ತಿದ್ದೆವು. ಆ ಹೂವು ಒಣಗಿದರೂ ಅದರ ಸುಗಂಧ ತಿಂಗಳಾದರೂ ಕಡಿಮೆಯಾಗದು. ಅಂಥ ಅದ್ಭುತ ಹೂವು ಅದು. ಅದರ ಪರಿಮಳದ ಗುಂಗು ಎಷ್ಟಿದೆಯೆಂದರೆ, ಅಂಥ ಅತ್ತರು ಸಿಕ್ಕೀತೆ? ಎಂದು ಯಾವಾಗಲೂ ಹುಡುಕಾಡುತ್ತೇನೆ ನಾನು.

(ಸೀತೆ ದಂಡೆ)

ನಮ್ಮ ಬೇಸಿಗೆಯ ರಜೆ ಮುಗಿಯುವ ಹಂತ ಅಂದರೆ, ಮೇ ತಿಂಗಳ ಮೊದಲ, ಎರಡನೇ ವಾರದ ಹೊತ್ತಿಗೆ ಬೀಳುವ ಬಿರುಮಳೆಯಿಂದ ಇಡೀ ಪ್ರಕೃತಿ ಮಿಂದು, ಒಣ ಗಿಡಮರಗಳಿಗೆಲ್ಲ ಹಸಿರು ಹಡೆಯುವ ಸಡಗರ. ಅದೇ ಹೊತ್ತಿಗೆ ಸುಂದರ ಹೂ ಮಾಲೆ ಪೋಣಿಸಿ, ಅರಳಿಸಿ ನಗುವ ಒಂದು ಸುಂದರ ಆರ್ಕಿಡ್ ಜಾತಿಗೆ ಸೇರಿದ ಸಸ್ಯವೆಂದರೆ, ಸೀತೆ ದಂಡೆ ಮತ್ತೂ ದ್ರೌಪದಿ ದಂಡೆ. ಮರಗಳ ಕಾಂಡಕ್ಕೆ ಅಂಟಿಕೊಂಡು, ಅದರ ಆಹಾರವನ್ನೇ ಉಂಡು ಬೆಳೆಯುವ ಪರಾವಲಂಬಿ ಸಸ್ಯ ಇದು. ನಸು ನೇರಳೇ ಬಣ್ಣದ ಪುಟಾಣಿ ಹೂಗಳು ಒತ್ತೊತ್ತಿ ಪೋಣಿಸಿ, ಒಂದಿಂಚಿನಷ್ಟುಉದ್ದದ ದಂಡೆಕಟ್ಟಿದಂತಿರುವ ಈ ಸೀತೆ ದಂಡೆ ತುಂಬ ಅಪರೂಪದ ಹೂ.  ಮಳೆ ಬಿದ್ದು ಒಂದು ವಾರಕ್ಕೇ ನಾವು ಇದನ್ನು ಅರಸಿ, ಬೆಟ್ಟ ಬೇಣಗಳನ್ನು ಸುತ್ತುತ್ತಿದ್ದೆವು. ನಮ್ಮಲ್ಲಿ  ಹೆಚ್ಚಾಗಿ ಇದು ‘ಕೌಲು’ ಮರಕ್ಕೆ ಇರುತ್ತಿತ್ತು. ನಾವು ಪತ್ತೇದಾರರಂತೆ ಪ್ರತಿ ಮರದ ಒಂದಷ್ಟು ದೂರ ನಿಂತು, ದುರ್ಬೀನು ಕಣ್ಣುಮಾಡಿಕೊಂಡು ಹುಡುಕ ತೊಡಗುತ್ತಿದ್ದೆವು. ಆ ಮರದ ರೆಂಬೆಯ ಸಂಧಿಯಲ್ಲಿ ಈ ಹೂವು ಕಳ್ಳನಂತೆ ಅಡಗಿ ಕೂತು, ನಮ್ಮ ಕಾಡುತ್ತಿತ್ತು. ಆದರೂ ನಮ್ಮ ಚುರುಕು ಕಣ್ಣಿನಿಂದ ತಪ್ಪಿಸಿಕೊಳ್ಳಲಾದೀತೆ? ಕಂಡುಹಿಡಿದು, “ಯೇ ಇಲ್ನೋಡೇ ಎಷ್ಟ್ ದೊಡ್ಡ ಸೀತೇ ದಂಡೆ!” ಎಂದು ಒಬ್ಬರಿಗೊಬ್ಬರು ಕೂಗಿ ಕರೆಯುತ್ತಿದ್ದೆವು. ಮತ್ತೆ ಒಬ್ಬರು ಮೆಲ್ಲಗೆ ಮೇಲೇರಿ ಆ ದಂಡೆ ಕೊಯಿದು, ಅದನ್ನು ಮೆರವಣಿಗೆಯಲ್ಲಿ  (ಹೋ..ಸೀತೆ ದಂಡೆ ಸಿಕ್ತು ಎಂದು ಕೂಗುತ್ತ ಕುಣಿಯುತ್ತ) ಮನೆಗೊಯ್ದು ಆಯಿಗೆ ತೋರಿಸಿ ಹರ್ಷಿಸುತ್ತಿದ್ದೆವು. ಆಯಿ ಅದನ್ನು ಸಮನಾಗಿ ತುಂಡುಮಾಡಿ ಎಲ್ಲರ ತಲೆಗೂ ಮುಡಿಸುತ್ತಿದ್ದಳು. ಎರಡು ಮೂರು ತಂದಿದ್ದರೆ, “ದೇವರ ಪಟಕ್ಕೆ ಹಾಕಿ, ಕೈ ಮುಗಿ ಮುಗೀರಿ” ಅಂತಿದ್ದಳು. ಈ ಸೀತೆ ದಂಡೆಗೂ ದ್ರೌಪದಿ ದಂಡೆಗೂ ಬಹಳ ವ್ಯತ್ಯಾಸವಿಲ್ಲ. ಸೀತೇ ದಂಡೆಯಲ್ಲಿ, ಚಿಕ್ಕ ಚಿಕ್ಕ ಹೂಗಳು ಬಹಳ ಒತ್ತಾಗಿ ಹೆಣೆದಂತೆ ಬಹಳ ಚಂದವಾಗಿ ಇರುತ್ತದೆ. ಆದರೆ, ದ್ರೌಪದಿ ದಂಡೆಯಲ್ಲಿ ಸ್ವಲ್ಪ ದೊಡ್ಡ ಗಾತ್ರದ ಹೂಗಳು ದೂರ ದೂರ ಅಂಟಿಸಿದಂತಿರುತ್ತದೆ. ಇದು ಅಷ್ಟೊಂದು ಮನಮೋಹಕ ಅಲ್ಲ.

ಹೈಸ್ಕೂಲು ಶಿಕ್ಷಣಕ್ಕಾಗಿ ನಾನು ಮನೆಯಿಂದ ಬಲು ದೂರ ಹೋಗಬೇಕಾಯಿತು. ಅದು ನಮ್ಮ ಶಿರಸಿ ತಾಲ್ಲೂಕಿನ ಹೆಗಡೆಕಟ್ಟೆಯೆಂಬ ಊರು. ಅದು ನಮ್ಮ ಊರಂಥ ಕಗ್ಗಾಡಲ್ಲ. ಆದರೂ ಗುಡ್ಡ ಬೆಟ್ಟಗಳಿಗೇನೂ ಕೊರತೆ ಇರಲಿಲ್ಲ. ಅಲ್ಲಿಯ ಗುಡ್ಡೆಯ ಮೇಲೆ  ಶಿವರಾತ್ರಿಯ ಸಮಯದಲ್ಲಿ ಅರಳುವ  ಹೂವೆಂದರೆ, “ಚಿಲಗಿ” ಹಸಿರು ಗಿಡದಲ್ಲಿ ಬಿಡುವ ಪುಟ್ಟ ಪುಟ್ಟ ಹೂ ಗೊಂಚಲನ್ನು ಅದರ ಚಂಡೆ ( ದಂಟು) ಸಮೇತ ಮುರಿಯುವದಿತ್ತು. ಅಲ್ಲಿ ಸುತ್ತ ಮುತ್ತ ಸಾಕಷ್ಟು ಈಶ್ವರ ದೇವಸ್ಥಾನಗಳು. ನಾವು ಬೆಳಗ್ಗೆ ಎದ್ದು, ಆ ಕಾಡ ಹೊಳೆಯಲ್ಲೇ ಸ್ನಾನಮಾಡಿ, ಅಲ್ಲೇ ಸಿಗುವ ಚಿಲಗಿ ಚಂಡೆಯನ್ನು ಮುರಿದುಕೊಂಡು ಈಶ್ವರನ ಪೂಜೆ ಮಾಡಿಕೊಂಡು ಬರುತ್ತಿದ್ದೆವು. ಇದು ಈಶ್ವರನ ಪ್ರೀತಿಯ ಹೂವು ಎಂದು, ಎಲ್ಲರೂ ಅ ದಿನ ಈ ಚಿಲಗಿ ಚಂಡೆಯನ್ನು ತಪ್ಪದೇ ಏರಿಸಿ, ಕೃತಾರ್ಥರಾಗುತ್ತಿದ್ದರು.

ಅದನ್ನು ನಾನು ಅಲ್ಲೇ ನೋಡಿದ್ದು. ನಮ್ಮೂರಲ್ಲೂ ಇತ್ತೋ ಇಲ್ಲವೋ ಗೊತ್ತಿಲ್ಲ. ಹಾಗೇ  ಗದ್ದೆಯ ಬದುವಿನ ಮೇಲೆ ಬೆಳೆದು ಭತ್ತದ ಅರಳಿನಾಕಾರದ ಬೆಳ್ಳನೆಯ ಹೂ ಬಿಡುವ “ಹೊದ್ದಲು ತುಂಬೆ” (ಗದ್ದೆ ತುಂಬೆ)  ಕೂಡಾ ಈಶ್ವರನಿಗೆ ಶ್ರೇಷ್ಠವಂತೆ. ಅದನ್ನು ಕೂಡಾ ಮುಷ್ಟಿ ಮುಷ್ಟಿ ಹೂ ಕೊಯ್ದು ಶಿವನ ಪೂಜೆ ಮಾಡಿ ಕೃತಾರ್ಥರಾಗುತ್ತಿದ್ದೆವು.  ಅಷ್ಟು ಸಾಲದೆಂಬಂತೇ ರಣ ರಣ ಬೆಂಕಿಯ ಉರಿಯ ಬಣ್ಣದ ಮುತ್ತುಗದ ಹೂವುಗಳನ್ನೂ ಬಿಡುತ್ತಿರಲಿಲ್ಲ ನಾವು.

ಹೀಗೇ ನಾಡ ಹೂಗಳಿಗಿಂತ ಕಾಡು ಹೂಗಳ ಹಿಂದೆ ಬೆನ್ನತ್ತಿ ಹೋಗುತ್ತಿದ್ದ ನಮ್ಮ ಆ ಬಾಲ್ಯದ ಹುಚ್ಚು ಉಮೇದಿ ನೆನೆದರೆ, ಈಗಲೂ ಬಹಳ ಆಶ್ಚರ್ಯವೆನ್ನಿಸುತ್ತದೆ.

ಮುಂದುವರೆಯುವುದು..

About The Author

ರೂಪಾ ರವೀಂದ್ರ ಜೋಶಿ

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು  (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ