ಪೋರ್ಟ್ ಬ್ಲೇರ್ ನಿಲ್ದಾಣದಲ್ಲಿ ಇಳಿದು ಹೊರಕ್ಕೆ ಬರುತ್ತಿದ್ದಂತೆ ಹಾರಾಡುತ್ತ ಬಂದ ಮೋಡಗಳು ಸಣ್ಣದಾಗಿ ಮಳೆ ಹನಿಯತೊಡಗಿದವು. ಇಬ್ಬರೂ ಓಡೋಡಿ ಹೋಗಿ ನಿಲ್ದಾಣದ ಒಳಕ್ಕೆ ಸೇರಿಕೊಂಡೆವು. ವಿಮಾನ ಮತ್ತು ವಿಮಾನ ನಿಲ್ದಾಣದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಜನರು ಕೆಲವೇ ಕ್ಷಣಗಳಲ್ಲಿ ತೊಯ್ದು ತೊಪ್ಪೆಯಾಗಿದ್ದರು. ಪ್ಲೆಕಾರ್ಡ್ ಇಟ್ಟುಕೊಂಡು ನಮಗಾಗಿ ಕಾಯುತ್ತಿದ್ದ ಚಾಲಕನನ್ನು ಗುರುತಿಸಿ ಕಾರಿನಲ್ಲಿ ಹೋಟೆಲ್ ಸೇರಿಕೊಂಡೆವು.
ಅಂಡಮಾನ್-ನಿಕೋಬಾರ್ ದ್ವೀಪಗಳ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ
ಅಂಡಮಾನ್-ನಿಕೋಬಾರ್ ದ್ವೀಪಗಳ ಸುಮಾರು 467 ಕಿ.ಮೀ.ಗಳ ಉದ್ದನೆ ಕಮಾನು ಬಂಗಾಳ ಕೊಲ್ಲಿಯಲ್ಲಿ ಮುಳುಗಿರುವ `ಬರ್ಮಾ ಅರಕನ್ ಯೋಮಾ’ ಪರ್ವತ ಶ್ರೇಣಿಗಳು. ಇವು ಮೂಲವಾಗಿ ಹಿಮಾಲಯ ಪರ್ವತ ಶ್ರೇಣಿಗಳ ವಿಸ್ತರಣೆ ಎನ್ನಲಾಗಿದೆ. 2010ರ ಅಕ್ಟೋಬರ್ 23ರಂದು ಬೆಂಗಳೂರಿನಿಂದ ಚೆನ್ನೈಗೆ ಹೋಗುವ ಬೃಂದಾವನ ಎಕ್ಸ್‌ಪ್ರೆಸ್ ರೈಲು ಹಿಡಿಯಲು ಎಚ್.ಎಸ್.ಆರ್. ಬಡಾವಣೆಯ 27ನೇ ಮುಖ್ಯ ರಸ್ತೆಯ ಮನೆಯಿಂದ ಹೊರಕ್ಕೆ ಬಂದು 20 ನಿಮಿಷ ಕಾದರೂ ಒಂದು ಆಟೋ ಕೂಡ ದೊರಕಲಿಲ್ಲ. ಒಬ್ಬ 250 ರೂ. ಕೇಳಿದರೆ, ಇನ್ನೊಬ್ಬ ಮೆಜೆಸ್ಟಿಕ್ ಎಂದರೆ ತಲೆ ತಿರುಗಿಸುತ್ತ, ಮತ್ತೊಬ್ಬ ಆಟೋದಲ್ಲಿ ಕುಳಿತಿರುವ ರೋಗಿಯಂತೆ ಯಾವ ಪ್ರತಿಕ್ರಿಯೆಯನ್ನೂ ತೋರದೆ ಮುಂದಕ್ಕೆ ಹೋದನು. ಸ್ವಲ್ಪ ಜಾಸ್ತಿ ತೆಗೆದುಕೊಳ್ರಪ್ಪ ಎಂದು ಮರ್ಯಾದೆಯಿಂದ ಹೇಳಿದರೂ, ಕಿವುಡರಂತೆ ಮುಂದಕ್ಕೆ ಹೋಗುತ್ತಿದ್ದರು.
ಕೊನೆಗೆ ಒಬ್ಬ ದಾಂಡಿಗ 20ರೂ ಹೆಚ್ಚಾಗಿ ಕೊಡಿ ಸರ್ ಎಂದು ನಮ್ಮಿಬ್ಬರನ್ನು ಕೂರಿಸಿಕೊಂಡು ಹೊರಟ. ಅವನ ಭಾಷೆ ವೇಷ ಆಕಾರದಿಂದ ಯಾವ ಭಾಷೆಯವನೊ ತಿಳಿಯಲಿಲ್ಲ. ಸೀಟಿನ ಬೆನ್ನಿಗೆ ಅಂಟಿಸಿದ್ದ ಚಾಲಕನ ಲೈಸೆನ್ಸ್‌ನಲ್ಲಿ ಮರಾಠಿ ಹೆಸರಿತ್ತು. ಅಗರ ಮೇಲುಸೇತುವೆಯ ಹತ್ತಿರವೇ ಟ್ರಾಫಿಕ್ ಜಾಮ್ ಆಗಿಹೋಯಿತು. ಈ ಅಗರ ಹೆಸರನ್ನು ಉತ್ತರ ಭಾರತದವರು ಆಗ್ರಾ ಎಂದರೆ, ಕೆಲವರು ಆಘ್ರ, ಆಗರಾ, ಅಗ್ಗರ ಹೀಗೆ ಬಾಯಿಗೆ ಬಂದಂತೆ ಉಚ್ಚರಿಸುತ್ತಾರೆ. ಇದು ಮೂಲವಾಗಿ ಬ್ರಾಹ್ಮಣರ ಅಗ್ರಹಾರ, ಈಗ ಅಗರ ಆಗಿದೆ? ಇಲ್ಲಿ ರಸ್ತೆಯ ಮಧ್ಯದಲ್ಲೇ ಪುರಿಯ ಜಗನ್ನಾಥ ಬಂದು ಜಾಗ ಪಡೆದುಕೊಂಡಿದ್ದಾನೆ.
ಬೃಂದಾವನ ಎಕ್ಸ್‌ಪ್ರೆಸ್ 3:30ಕ್ಕೆ ಇದ್ದು ನಾವು ಅಷ್ಟರಲ್ಲಿ ರೈಲು ನಿಲ್ದಾಣ ತಲುಪುತ್ತೇವೆಯೆ ಎನ್ನುವ ಸಣ್ಣ ಅಳಕು ಕಾಣಿಸಿಕೊಂಡಿತು. ಎಲ್ಲಿಗೆ ಹೋಗಬೇಕಾದರೂ ಇಷ್ಟು ಬೇಗನೆ ಹೋಗಿ ಏನು ಮಾಡುವುದು ಎನ್ನುವುದು ಸುಶೀಲಳ ಸಾಮಾನ್ಯ ಪ್ರಶ್ನೆ. ನಾನೋ ತದ್ವಿರುದ್ಧ. ಬೇಗನೆ ಹೋಗಿ ನಿಲ್ದಾಣಗಳಲ್ಲಿ ಜನರನ್ನು ನೋಡುತ್ತಾ ಕುಳಿತುಕೊಂಡರೂ ಪರವಾಗಿಲ್ಲ. ಲೇಟಾಗಿ ಹೋಗಿ ಟೆನ್ಷನ್ ಮಾಡಿಕೊಳ್ಳುವುದು ಯಾತಕ್ಕೆ ಎನ್ನುವುದು ನನ್ನ ವಾದ.
ಆಟೋ ಚಾಲಕ ಕೋರಮಂಗಲದಲ್ಲಿ ನೇರವಾಗಿ ಹೋಗದೆ ದಿಢೀರನೆ ಮುಖ್ಯರಸ್ತೆ ಬಿಟ್ಟು ಸುತ್ತಾಕಿಕೊಂಡು ಮತ್ತೆ ಮುಂದಿನ ವೃತ್ತಕ್ಕೆ ಬಂದ. ಸುಶೀಲ `ಇದೇನ್ರಿ ಈಯಪ್ಪ ಎದುರಿಗೆ ಇರೋ ರಸ್ತೆಬಿಟ್ಟು ಸುಮ್ಮಸುಮ್ಮನೆ ಸುತ್ತುತಾ ಇದ್ದಾನೆ?’ ಎಂದಳು. ನಾನು `ಅದೇನಪ್ಪ ಆ ತರಹ ಸುತ್ತಾಕಿದೆ?’ ಎಂದಿದ್ದಕ್ಕೆ `ಸಾರ್ ನಾನ್ ಎಲ್ಲಾ ಸಿಗ್ನಲ್ ಅವಾಯ್ಡ್ ಮಾಡಿದೆ ಸಾರ್’ ಎಂದ. ಹೋಗಲಿ ಎಂದು ಸುಮ್ಮನಾದರೆ ಅಶೋಕನಗರ/ವಿವೇಕ್‌ನಗರಗಳಲ್ಲಿ ತೂರಿ ಕೊನೆಗೆ ರಿಚ್ಮಂಡ್ ವೃತ್ತಕ್ಕೆ ಬಂದ. ಈಗ ಅಲ್ಲಿಂದ ಇಡೀ ರಸ್ತೆ ವಾಹನಗಳ ಸಾಗರದಲ್ಲಿ ಮುಳುಗಿಹೋಗಿತ್ತು. ಆದರೂ ಸಮಯ ಇರುವುದರಿಂದ ನಾನು ಕೂಲಾಗಿಯೇ ಇದ್ದೆ. ಅಂತೂ ರೈಲು ಹೊರಡುವ ಮುಂಚೆ ನಮ್ಮನ್ನು ನಿಲ್ದಾಣ ತಲುಪಿಸಿದ್ದನು. 142 ರೂ ಬಿಲ್ಲಿಗೆ 160 ಕೊಟ್ಟು ಮೊದಲನೆ ಪ್ಲಾಟ್‌ಫಾರ್ಮ್‌ನಲ್ಲಿ ಆಗಲೇ ಬಂದು ನಿಂತಿದ್ದ ಬೃಂದಾವನದ ಸಿ-3 ಬೋಗಿಯಲ್ಲಿ ಹತ್ತಿ ಕುಳಿತುಕೊಂಡೆವು.
ನನಗೆ ಗಾಲ್‌ಬ್ಲಾಡರ್ ಶಸ್ತ್ರಚಿಕಿತ್ಸೆಯಾಗಿ ತೂಕ ಜಾಸ್ತಿ ಎತ್ತಬಾರದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು. ನಾನು ನನ್ನ ಬಟ್ಟೆಗಳನ್ನು ಮಾತ್ರ ಒಂದು ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದೆ. ಸುಶೀಲ ಎಂದಿನಂತೆ ಒಂದು ಸೂಟ್‌ಕೇಸ್ ತುಂಬಾ ಬಟ್ಟೆಗಳು, ಬೆಡ್ ಶೀಟುಗಳು ಇನ್ನಿತರ ಬಟ್ಟೆಗಳನ್ನು ಹೊತ್ತುತಂದಿದ್ದಳು. ನಿನ್ನ ಬಟ್ಟೆಗಳನ್ನು ನೀನೇ ಎತ್ತಿಕೊಳ್ಳಬೇಕು ಎಂದು ಮೊದಲೇ ಹೇಳಿದ್ದ ಕಾರಣ ಎತ್ತಿಕೊಂಡು ಬಂದು `ಅಯ್ಯೊ.. ಅಮ್ಮ…ಸೊಂಟ ನೋಯ್ತಾಇದೆ’ ಎಂದು ಹಲುಬುತ್ತಿದ್ದಳು. ಪಕ್ಕದಲ್ಲಿ ಕುಳಿತಿದ್ದ ಹುಡುಗಿ ಒಂದು ಚಸ್ಕಾಮಸ್ಕಾ ಬಿಸ್ಕತ್ ಪಾಕೇಟನ್ನು ಎರಡು ಬೆರಳುಗಳಲ್ಲಿಯೇ ನಾಜುಕಾಗಿ ತಿಂದು ಮುಗಿಸಿದ್ದಳು.

ಮಳೆ ಚೆನ್ನಾಗಿ ಆಗಿದ್ದರಿಂದ ಬೆಂಗಳೂರಿನಿಂದ ಚೆನ್ನೈವರೆಗೂ ಯಾವ ಕಡೆ ನೋಡಿದರೂ ಗಿಡ ಮರ, ಹೊಲಗದ್ದೆ ಅಷ್ಟೇಕೆ ಬೋಳು ಬೆಟ್ಟಗಳೂ ಕೂಡ ಚಿಗುರಿಕೊಂಡು ಹಚ್ಚ ಹಸಿರಾಗಿ ಕಂಗೊಳಿಸುತ್ತಿದ್ದವು. ನನಗೆ ಹಸಿರು ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಎನಿಸುತ್ತದೆ. ಸಮಸ್ಯೆಯೆಂದರೆ ನನ್ನ ಸೀಟು ರೈಲು ಚಲಿಸುವುದಕ್ಕೆ ವಿರುದ್ಧವಾಗಿತ್ತು. ಆದರೂ ಕತ್ತಲಾಗುವವರೆಗೂ ಹಸಿರನ್ನು ಕಣ್ಣುಗಳ ತುಂಬಾ ತುಂಬಿಕೊಳ್ಳುತ್ತಲೇ ಇದ್ದೆ. ರಾತ್ರಿ 8:20ಕ್ಕೆ ರೈಲು ಚೆನ್ನೈ ಸೆಂಟ್ರಲ್ ತಲುಪಿತು. ದೇಶದ ಯಾವ ಮೂಲೆಗೋದರೂ ಜನರು ಪಿತಪಿತನೆ ಹುಳುಗಳಂತೆ ತುಂಬಿಹೋಗಿರುತ್ತಾರೆ. ಇನ್ನು ಬಸ್ಸು ನಿಲ್ದಾಣಗಳಿಗೆ ಹೋದರೆ ಉಸಿರೇ ನಿಂತುಹೋಗುತ್ತದೆ. ಬಿಬಿಸಿ, `ಏಷಿಯನ್ ಕಂಟ್ರೀಸ್ ಆರ್ ಬರ್ಸ್ಟ್‌ಲಿಂಗ್ ವಿಥ್ ಪಾಪ್ಯೂಲೇಷನ್’ ಎಂಬ ಸುದ್ದಿಯನ್ನು ಆಗಾಗ ಹೇಳುತ್ತಲೇ ಇರುತ್ತದೆ.
ರೈಲು ನಿಲ್ದಾಣದಿಂದ ಸ್ವಲ್ಪ ದೂರದಲ್ಲಿದ್ದ ಟ್ಯಾಕ್ಸಿ ನಿಲ್ದಾಣದ ಹತ್ತಿರಕ್ಕೆ ಸುಶೀಲ, ನಾನೂ ಸಾಮಾನುಗಳನ್ನು ಎತ್ತಿಕೊಂಡು ಬರುವುದರೊಳಗೆ ಚೆನ್ನೈನ ಸೆಕೆ ನಮ್ಮನ್ನು ಇನ್ನಷ್ಟು ಕಸಿವಿಸಿಗೊಳಿಸಿಬಿಟ್ಟಿತ್ತು. ರಸ್ತೆಯ ಇನ್ನೊಂದು ಕಡೆಗಿದ್ದ ಹೋಟಲ್‌ಗೆ ಆಟೋದಲ್ಲಿ 50 ರೂ. ಕೊಟ್ಟು ಹೋಟಲ್ ತಲುಪಿದೆವು. ಅಲ್ಲಿ ವಿಚಾರಿಸಿದಾಗ 950 ರೂ. ನಾನ್ ಏಸಿ ಕೋಣೆ ಇದ್ದು ಏಸಿ ಕೋಣೆ ದೊರಕಲಿಲ್ಲ. ಅಲ್ಲಿಂದ ಬೇರೆ ಕಡೆಗೆ ಬ್ಯಾಗೇಜ್ ಎತ್ತಿಕೊಂಡು ಹೋಗಲು ಮನಸ್ಸು ಬರದೆ ಅಲ್ಲಿಯೇ ಉಳಿದುಕೊಂಡೆವು.
ಬೆಳಿಗ್ಗೆ 5:50ಕ್ಕೆ ಚೆನ್ನೈನಿಂದ ಪೋರ್ಟ್ ಬ್ಲೇರ್‌ಗೆ ಹೋಗುವ ವಿಮಾನ ಹಿಡಿಯುವುದಕ್ಕೆ ವಿಚಾರಿಸಿದಾಗ ರೈಲ್ವೇ ನಿಲ್ದಾಣದಿಂದ 45 ನಿಮಿಷಗಳಾಗುತ್ತದೆ ಎಂದರು. ಕನಿಷ್ಠ ಒಂದು ಗಂಟೆ ಮೊದಲು ವಿಮಾನ ನಿಲ್ದಾಣದಲ್ಲಿ ಇರಬೇಕಾದರೆ 3:50 ಕ್ಕಾದರೂ ಹೋಟಲ್ ಬಿಡಬೇಕು. ನನಗೆ ಎಲ್ಲಿಗಾದರು ಹೋಗಬೇಕೆಂದರೆ ರಾತ್ರಿಯೆಲ್ಲ ನಿದ್ದೆಯೇ ಬರುವುದಿಲ್ಲ. ಬಸ್ಸು ತಪ್ಪಿಸಿಕೊಂಡರೆ, ಇಲ್ಲ ವಿಮಾನ ತಪ್ಪಿಸಿಕೊಂಡರೆ ಟೆಕೆಟ್‌ನ ಎಲ್ಲಾ ಹಣವೂ ಕೈಬಿಟ್ಟುಹೋಗುತ್ತದೆ. ಜೊತೆಗೆ ದೂರದ ಪ್ರಯಾಣ ತಪ್ಪಿಹೋದರೆ ಇನ್ನೇನೇನೊ ಸಮಸ್ಯೆಗಳಾಗುತ್ತವೆ. ನನ್ನ ಜೀವನದಲ್ಲಿ ಇದುವರೆಗೂ ಬುಕ್ ಮಾಡಿದ ಯಾವ ವಾಹನವು ನನ್ನಿಂದ ತಪ್ಪಿಸಿಕೊಂಡಿಲ್ಲ, ಆದರೆ ಬಸ್ಸು, ವಿಮಾನಗಳೇ ನನ್ನಿಂದು ತಪ್ಪಿಸಿಕೊಂಡಿವೆ. ಎದ್ದುಬಿದ್ದು ಹೋಗಿ ಕೊನೆ ಕ್ಷಣದಲ್ಲಿ ಹಿಡಿದುಕೊಂಡಿರುವ ಉದಾಹರಣೆಗಳು ಮಾತ್ರ ಸಾಕಷ್ಟಿವೆ.
ರಾತ್ರಿ ನಾಲ್ಕಾರು ಸಲ ಕೈಯಲ್ಲಿದ್ದ ಗಡಿಯಾರವನ್ನು ನೋಡಿಕೊಂಡಿದ್ದೆ. ಕೋಣೆಯ ಕಿಟಕಿಗಳನ್ನು ಪೂರ್ಣವಾಗಿ ಮುಚ್ಚಿದ್ದರಿಂದ ಫ್ಯಾನ್ ತಿರುಗುತ್ತಿದ್ದರೂ ಉಸಿರು ಹಿಡಿದುಕೊಳ್ಳುತ್ತಿರುವಂತೆ ತೋರುತ್ತಿತ್ತು. 1000 ರೂ. ಕೊಟ್ಟರೂ ಇಂತಹ ಕೋಣೆಯೆ ಛೆ… ಛೆ… ಎಂದುಕೊಂಡು 3:45ಕ್ಕೆ ಹೊರಕ್ಕೆ ಬಂದು ಆಟೋ ಹಿಡಿದುಕೊಂಡು ವಿಮಾನ ನಿಲ್ದಾಣದ ಕಡೆಗೆ ಹೊರಟುಬಿಟ್ಟೆವು. ಎರಡುಮೂರು ದಶಕಗಳ ಹಿಂದಿನ ಚೆನ್ನೈ ರಸ್ತೆಗಳಿಗಿಂತ ಈಗಿನ ಚೆನ್ನೈ ರಸ್ತೆಗಳು ಪರವಾಗಿಲ್ಲ ಎನ್ನುವಂತಿತ್ತು. ನಾಲ್ಕು ದಶಕಗಳ ಹಿಂದೆ ಚೆನ್ನೈಯಲ್ಲಿ ನೋಡಿದ್ದ ಒಂದು ದೃಶ್ಯ ಇಂದಿಗೂ ಮರೆಯಲು ಸಾಧ್ಯವಾಗದೇ ನನ್ನ ತಲೆಯಲ್ಲಿ ಅಚ್ಚಳಿಯದೇ ಹಾಗೇ ಉಳಿದುಕೊಂಡುಬಿಟ್ಟಿದೆ.
ಎಂ.ಎಸ್ಸಿ., ಮುಗಿಸಿ ಎಲ್‌ಐಸಿ ಕೆಲಸದಲ್ಲಿದ್ದ ನಾನು ಓಎನ್‌ಜಿಸಿ ಎಂಟರೆನ್ಸ್ ಪರೀಕ್ಷೆ ಬರೆಯಲು ಚೆನ್ನೈಗೆ ಇನ್ನಿಬ್ಬರು ಗೆಳೆಯರೊಂದಿಗೆ ಹೋಗಿದ್ದೆ. ಗೆಳೆಯರ ಸಂಬಂಧಿಗಳ ಮನೆಯಲ್ಲಿ ಊಟ ಮಾಡಿ ಮನೆ ಮೇಲೆ ಬಿಸಿಲಿಗೆ ಹಾಕಿದ್ದ ತೆಂಗಿನ ಗರಿಗಳ ಗುಡಿಸಿಲಲ್ಲಿ ಮಲಗಿದ್ದ ನಾವು ಬೆಳಿಗ್ಗೆಯೆ ಮೇರಿನಾ ಬೀಚ್ ನೋಡಲು ಹೋಗಿದ್ದೆವು. ಕಡಲಿನ ಮರಳು ದಂಡೆಯಿಂದ ಸಮುದ್ರ ಅಲೆಗಳ ಹತ್ತಿರಕ್ಕೆ ನಡೆದು ಹೋಗುತ್ತಿದ್ದಂತೆ ಸಮುದ್ರ ನೀರಿನ ಅಂಚಿನಲ್ಲಿ ಹತ್ತಾರು ಜನರು ಬರಿ ಮೈಯಲ್ಲಿ ಕುಳಿತುಕೊಂಡು ಉದಯಿಸುತ್ತಿರುವ ಸೂರ್ಯನನ್ನು ನೋಡುತ್ತಿದ್ದರು. ಇದೇನು ಬೆಳಿಗ್ಗೆಯೆ ಇಷ್ಟೊಂದು ಜನರು ಗುಂಪಾಗಿ ಕುಳಿತು ಸೂರ್ಯನನ್ನು ನೋಡುತ್ತಿದ್ದಾರಲ್ಲ ಎಂದುಕೊಂಡು ಹತ್ತಿರಕ್ಕೆ ಹೋಗಿ ನೋಡಿದರೆ ಎಲ್ಲರೂ ಗುಂಪಾಗಿ ಉದಯಿಸುವ ಸೂರ್ಯನ ಕಡೆಗೆ ಮುಖಮಾಡಿ ಎರಡಕ್ಕೆ ಕುಳಿತುಕೊಂಡಿದ್ದರು.
ಬೆಳಿಗ್ಗೆ 5:50ಕ್ಕೆ ಚೆನ್ನೈನಿಂದ ಹಾರಿದ ಏರ್ ಇಂಡಿಯಾ ವಿಮಾನ ಎರಡು ಗಂಟೆಗಳಲ್ಲಿ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಸಾಮಾನ್ಯವಾಗಿ ಏರ್ ಬಸ್ಸುಗಳು ಗಂಟೆಗೆ 700 ರಿಂದ 900 ಕಿ.ಮೀ. ವೇಗದಲ್ಲಿ ಧಾವಿಸುತ್ತವೆ. ಚೆನ್ನೈ ಬಿಟ್ಟ ಮೇಲೆ ವಿಮಾನದಿಂದ ಕೆಳಕ್ಕೆ ನೋಡಿದಾಗ ಬರಿ ನೀಲಿ ಕಡಲು ಕಾಣಿಸುತ್ತಿತ್ತು. ಮಧ್ಯಮಧ್ಯ ಬಿಳಿ ಮೋಡಗಳು ಬಿಚ್ಚಿಕೊಂಡ ಹತ್ತಿ ಮೂಟೆಗಳಂತೆ ಆಕಾಶದ ಕೆಳಗೆ ಹರಡಿಕೊಂಡಿದ್ದವು. ವಿಮಾನ, ಅಂಡಮಾನ್ ದ್ವೀಪ ಸಮೂಹಗಳ ಹತ್ತಿರ ಬರುತ್ತಿದ್ದಂತೆ ಜನರೆಲ್ಲ ಕಿಟಕಿಗಳಿಗೆ ಅಂಟಿಕೊಂಡು ಕೆಳಕ್ಕೆ ನೋಡತೊಡಗಿದರು. ದ್ವೀಪಗಳು ಸಮುದ್ರದಲ್ಲಿ ತೇಲಾಡುತ್ತಿರುವ ಹಸಿರು ತೆಪ್ಪಗಳಂತೆ ಚಿತ್ರವಿಚಿತ್ರ ಆಕಾರಗಳಲ್ಲಿ ಕಾಣಿಸುತ್ತಿದ್ದವು. ದ್ವೀಪಗಳು ಬಿಳಿ ಹಸಿರು ನೀಲಿ ಮತ್ತು ಬಣ್ಣ ಬಣ್ಣಗಳ ಮಿಶ್ರಣದಲ್ಲಿ ನೀಲಿ ಪರದೆಯ ಮೇಲೆ ಬಿಡಿಸಿದ ಚಿತ್ರಗಳಂತೆ ಕಾಣಿಸುತ್ತಿದ್ದವು.

ಪೋರ್ಟ್ ಬ್ಲೇರ್ ನಿಲ್ದಾಣದಲ್ಲಿ ಇಳಿದು ಹೊರಕ್ಕೆ ಬರುತ್ತಿದ್ದಂತೆ ಹಾರಾಡುತ್ತ ಬಂದ ಮೋಡಗಳು ಸಣ್ಣದಾಗಿ ಮಳೆ ಹನಿಯತೊಡಗಿದವು. ಇಬ್ಬರೂ ಓಡೋಡಿ ಹೋಗಿ ನಿಲ್ದಾಣದ ಒಳಕ್ಕೆ ಸೇರಿಕೊಂಡೆವು. ವಿಮಾನ ಮತ್ತು ವಿಮಾನ ನಿಲ್ದಾಣದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಜನರು ಕೆಲವೇ ಕ್ಷಣಗಳಲ್ಲಿ ತೊಯ್ದು ತೊಪ್ಪೆಯಾಗಿದ್ದರು. ಪ್ಲೆಕಾರ್ಡ್ ಇಟ್ಟುಕೊಂಡು ನಮಗಾಗಿ ಕಾಯುತ್ತಿದ್ದ ಚಾಲಕನನ್ನು ಗುರುತಿಸಿ ಕಾರಿನಲ್ಲಿ ಹೋಟೆಲ್ ಸೇರಿಕೊಂಡೆವು.

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.
