ನ್ಯಾಯಾಲಯವು ಈ ಕೇಸ್ ಗೆಂದು ಈ ವರ್ಷ ಲಾಟ್ರೋಬ್ ವ್ಯಾಲಿ ಪ್ರದೇಶದ ಸುಮಾರು ಹದಿನೈದು ಸಾವಿರ ಜನರನ್ನು ಸಂಪರ್ಕಿಸಿ ಜ್ಯೂರಿಗಳಾಗುತ್ತೀರಾ ಎಂದು ಕೇಳಿತ್ತು. ಜ್ಯೂರಿಗಳಾಗುವುದಕ್ಕೆ ಒಪ್ಪಿಕೊಂಡರೆ ಅವರು ಸುಮಾರು ನಾಲ್ಕು ತಿಂಗಳ ಕಾಲ ಕೌಂಟಿ ಮತ್ತು ರಾಜ್ಯದ ಸುಪ್ರೀಂ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಸಮಯವನ್ನು ಕೊಡಬೇಕಿತ್ತು. ಅದಲ್ಲದೆ, ಕೇಸ್ ನಡೆಯುವುದನ್ನು ನಿಯಮಿತವಾಗಿ ಗಮನವಿಟ್ಟು ನೋಡಿ, ತಮ್ಮ ತಂಡದಲ್ಲಿ ಚರ್ಚಿಸಿ ವಾರದಿಂದ ವಾರಕ್ಕೆ ಮುನ್ನಡೆಯುವುದಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಹೋದ ಬಾರಿಯ ಅಂಕಣದಲ್ಲಿ NAIDOC Week ಬಗ್ಗೆ ಬರೆದಿದ್ದೆ. ನಾಳೆ ಭಾನುವಾರ NAIDOC ಹಬ್ಬದಾಚರಣೆಗೆ ಪರದೆ ಬೀಳುತ್ತದೆ. ವಾರ ಪೂರ್ತಿ SBS ಟೀವಿ ಚಾನೆಲ್ ಆಧಾರಿತ National Indigenous ಟೀವಿ ಚಾನೆಲ್ನಲ್ಲಿ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳು. ಪ್ರತಿವರ್ಷವೂ ಮುನ್ನಡೆಯ ಸಂದೇಶವಿರುವ NAIDOC Week ನನಗೆ ಬಲು ಇಷ್ಟ. ಆದರೆ ಈ ಬಾರಿ ಬಿಡುವಿಲ್ಲದ ಕೆಲಸ ಮತ್ತು ಆರೋಗ್ಯ ಕೆಟ್ಟಿದ್ದ ಕಾರಣಗಳಿಂದ ಸ್ವಲ್ಪ ಹಿಂದುಳಿದೆ.
ಆಸ್ಟ್ರೇಲಿಯಾದ ಎದೆಬಡಿತವನ್ನು ತಾರಕಕ್ಕೇರಿಸಿದ್ದ ಸೋಮವಾರ ಜುಲೈ ೭ ತಾರೀಕನ್ನು ಅದು ಹೇಗೆ ನೆನಪಿನಿಂದ ಬಿಟ್ಟುಬಿಡುವುದು? ಈಗಷ್ಟೆ ಆ ಸೋಮವಾರ ನಮ್ಮ ಜಾಣತನದ ಕ್ಯಾಲೆಂಡರ್ ಇಂದ ತಪ್ಪಿಸಿಕೊಂಡು ಜಾರಿ ಹೋಗಿದೆ. ಆದರೆ ಅಂದು ನಡೆದ ರೋಮಾಂಚಕಾರಿ ಘಟನೆಯ ಬಗ್ಗೆ ಜನರು ಮಾತನಾಡುವುದು ನಿಂತಿಲ್ಲ. ಹಾಗಂತ ಹೇಳಿದರೆ ಅದೇನು ಮೈಮೇಲಿನ ರೋಮ ನಿಲ್ಲುವಂತೆ ಮಾಡಿದ ಕ್ರಿಕೆಟ್ ಅಲ್ಲ. ಈಗ ವಿಂಬಲ್ಡನ್ ಅಂಗಳದಲ್ಲಿ ನಡೆಯುತ್ತಿರುವ ಟೆನಿಸ್ ಕೂಡ ಅಲ್ಲ. ರಗ್ಬಿ, ಸಾಕರ್ ಪಂದ್ಯಗಳು ನಡೆಯುತ್ತಲೇ ಇವೆ. ಆದರೂ ಅವು ಕೂಡ ಆ ಸೋಮವಾರದ ಘಟನೆಯ ತೀವ್ರತೆಯನ್ನು ತಲುಪಿಲ್ಲ. ಜನರು ಇನ್ನೂ ಮಾತನಾಡುತ್ತಲೇ ಇದ್ದಾರೆ.
ಇಷ್ಟೆಲ್ಲಾ ಪೀಠಿಕೆ ಯಾಕೆ, ಏನದು ಆಸ್ಟ್ರೇಲಿಯಾದ ವಿಶೇಷ ಘಟನೆ ಅಂತೀರಾ… ಜುಲೈ ತಿಂಗಳ ಏಳನೇ ತಾರೀಕು ಸೋಮವಾರ ಐವತ್ತು ವರ್ಷದ ಮಹಿಳೆ ಎರಿನ್ ಪ್ಯಾಟರ್ಸನ್ ತಪ್ಪಿತಸ್ಥೆ ಎಂದು ಕೋರ್ಟ್ ಹೇಳಿತ್ತು. ನ್ಯಾಯಾಲಯ ಹೇಳಿತು ಅನ್ನುವುದಕ್ಕಿಂತಲೂ ಹನ್ನೆರಡು ಜನರಿದ್ದ ಜ್ಯೂರಿ ತಂಡವು ಹಾಗೆ ಹೇಳಿತ್ತು. ಕೇವಲ ಐದು ಪದಗಳಲ್ಲಿ! ಎಲ್ಲಾ ನಾಲ್ಕು ಅಪರಾಧಗಳಿಗೆ ಆಕೆ ಜವಾಬ್ದಾರಳು – guilty on all four counts. ಆಸ್ಟ್ರೇಲಿಯಾ, ಅಮೇರಿಕ, ಯುಕೆ, ನ್ಯೂ ಝಿಲ್ಯಾಂಡ್ ಇತ್ಯಾದಿ ದೇಶಗಳಲ್ಲಿ ಈ ಜ್ಯೂರಿ ಹೇಳಿಕೆ ಬಹುದೊಡ್ಡ ಸುದ್ದಿಯಾಗಿ ಪ್ರಸಾರವಾಯ್ತು.
ದಿನಗಟ್ಟಲೆ ವಿಕ್ಟೋರಿಯಾ ರಾಜ್ಯದ ಲಾಟ್ರೊಬ್ ಪ್ರಾಂತ್ಯದ ಮೊರ್ವೆಲ್ಲ್ ಎಂಬ ಪಟ್ಟಣದಲ್ಲಿ ನೂರಾರು ಮಾಧ್ಯಮಗಳ ವರದಿಗಾರರು ಠಿಕಾಣಿ ಹೂಡಿದ್ದರು. ಪ್ರತಿದಿನವೂ ಎರಿನ್ ಪ್ಯಾಟರ್ಸನ್ ಕೇಸ್ ಬಗ್ಗೆ ವರದಿ ಮಾಡುತ್ತಿದ್ದರು. ಪಟ್ಟಣದ ಸ್ಥಳೀಯ ನ್ಯಾಯಾಲಯದಲ್ಲಿ ತಪ್ಪದೆ ನಿಷ್ಠೆಯಿಂದ, ತಾಳ್ಮೆಯಿಂದ ಹಾಜರಾಗುತ್ತಿದ್ದ ಹನ್ನೆರೆಡು ಸದಸ್ಯರಿದ್ದ ಜ್ಯೂರಿ ತಂಡವು ಸುಮಾರು ಎರಡು ತಿಂಗಳ ಕಾಲ ವಾದವಿವಾದಗಳನ್ನು ಕೇಳಿಸಿಕೊಳ್ಳುತ್ತಾ, ನಾನಾ ರೀತಿಯ ಸಾಕ್ಷ್ಯಗಳ ಮಂಡನೆಯನ್ನು ಅರ್ಥ ಮಾಡಿಕೊಳ್ಳುತ್ತಾ ಸಾವಧಾನವಾಗಿ ಮುನ್ನಡೆದಿದ್ದರು. ಎಲ್ಲವನ್ನೂ ಪರಿಶೀಲಿಸಿ, ತಮ್ಮ ತೀರ್ಪನ್ನು ಹೇಳಿದರು – ಎರಿನ್ ಪ್ಯಾಟರ್ಸನ್ ತಪ್ಪಿತಸ್ಥೆ. ಬೇಕಂತಲೇ ಆಯೋಜಿಸಿ, ಉಪಾಯ ಮಾಡಿ ನಾಲ್ಕು ಜನರನ್ನು ಕೊಲ್ಲಲು ತಯಾರಾದಳು. ತನ್ನ ಅತ್ತೆ-ಮಾವ ಮತ್ತು ಆಪ್ತಸ್ನೇಹಿತರಾದ ಗಂಡ-ಹೆಂಡತಿಯನ್ನು ಮನೆಗೆ ಊಟಕ್ಕೆ ಕರೆದಳು. ಮನುಷ್ಯರಿಗೆ ವಿಷಕಂಟಕವಾದ ಅಣಬೆಯನ್ನು ಹಾಕಿ ತಾನೇ ಸ್ವತಃ ಕೈಯಾರೆ ಮಾಡಿದ ಅಡುಗೆಯನ್ನು ಅವರಿಗೆ ಬಡಿಸಿ, ಅವರದನ್ನು ತಿಂದು, ಮೂವರು ಸತ್ತರು. ನಾಲ್ಕನೆಯವರು ಆಸ್ಪತ್ರೆ ಸೇರಿ ಪ್ರಾಣಕ್ಕಾಗಿ ಹೋರಾಡಿ ಬದುಕುಳಿದರು. ಸತ್ತವರು ಅವಳ ಅತ್ತೆ-ಮಾವ, ಮತ್ತು ಆಹ್ವಾನಿತರಾಗಿ ಬಂದಿದ್ದ ಸ್ನೇಹಿತನ ಹೆಂಡತಿ. ಬದುಕುಳಿದವರು ಆಕೆಯ ಗಂಡ.

ಈ ಬದುಕು-ಸಾವಿನ ಕತೆ ನಡೆದಿದ್ದು ೨೦೨೩ರಲ್ಲಿ. ಆಗಿನಿಂದ ಎರಿನ್ ಪ್ಯಾಟರ್ಸನ್ ತಾನು ನಿರಪರಾಧಿ – not guilty, ಅಣಬೆ ವಿಷಯ ತನಗೆ ಗೊತ್ತೇ ಇರಲಿಲ್ಲ ಎಂದಿದ್ದಳು. ಅದು ಹೇಗೋ ಆ ವಿಷಕಂಠಕ ಅಣಬೆ ತಾನು ಉಪಯೋಗಿಸಿದ ಅಡುಗೆ ಪದಾರ್ಥಗಳಲ್ಲಿ ಸೇರಿಕೊಂಡಿತ್ತು. ಇದು ತಾನು ಹೋಗಿದ್ದ ಸೂಪರ್ ಮಾರ್ಕೆಟ್ ಅಲ್ಲಾಗಿರಬಹುದು, ಖಂಡಿತವಾಗಿಯೂ ಅಡುಗೆಯಲ್ಲಿ ತಾನು ಅಣಬೆಯನ್ನು ಬೇಕೆಂತಲೆ ಸೇರಿಸಲಿಲ್ಲ, ಅಂದಿದ್ದಳು. ಎರಡು ವರ್ಷಗಳಿಂದ ಕೇಸ್ ನಡೆಯುತ್ತಿತ್ತು. ಪೊಲೀಸರು ಕಷ್ಟಪಟ್ಟು ಹುಡುಕಿ ನೂರಾರು ಸಾಕ್ಷ್ಯಗಳನ್ನು ಕಲೆಹಾಕುತ್ತಾ ಹೋದರು. ಎರಿನ್ ತಾನು ನಿರಪರಾಧಿ ಎನ್ನುತ್ತಲೆ ಇದ್ದಳು.
ಕಡೆಗೂ, ಮೂವರನ್ನು ಸಾಯಿಸಿದ ಅಪರಾಧ ಮತ್ತು ನಾಲ್ಕನೆಯವರನ್ನು ಸಾಯಿಸಲು ಮಾಡಿದ ಪ್ರಯತ್ನ ಎಂದು ನಾಲ್ಕು ಅಪರಾಧಗಳಿಗೆ ಎರಿನ್ ಜವಾಬ್ದಾರಳು ಎಂದು ಕೋರ್ಟ್ ನಿರ್ಧರಿಸಿತು. ನಿರ್ಧಾರಕ್ಕೆ ಬರುವ ಪ್ರಕ್ರಿಯೆ ಕುತೂಹಲವಾಗಿತ್ತು. ನ್ಯಾಯಾಲಯವು ಈ ಕೇಸ್ ಗೆಂದು ಈ ವರ್ಷ ಲಾಟ್ರೋಬ್ ವ್ಯಾಲಿ ಪ್ರದೇಶದ ಸುಮಾರು ಹದಿನೈದು ಸಾವಿರ ಜನರನ್ನು ಸಂಪರ್ಕಿಸಿ ಜ್ಯೂರಿಗಳಾಗುತ್ತೀರಾ ಎಂದು ಕೇಳಿತ್ತು. ಜ್ಯೂರಿಗಳಾಗುವುದಕ್ಕೆ ಒಪ್ಪಿಕೊಂಡರೆ ಅವರು ಸುಮಾರು ನಾಲ್ಕು ತಿಂಗಳ ಕಾಲ ಕೌಂಟಿ ಮತ್ತು ರಾಜ್ಯದ ಸುಪ್ರೀಂ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಸಮಯವನ್ನು ಕೊಡಬೇಕಿತ್ತು. ಅದಲ್ಲದೆ, ಕೇಸ್ ನಡೆಯುವುದನ್ನು ನಿಯಮಿತವಾಗಿ ಗಮನವಿಟ್ಟು ನೋಡಿ, ತಮ್ಮ ತಂಡದಲ್ಲಿ ಚರ್ಚಿಸಿ ವಾರದಿಂದ ವಾರಕ್ಕೆ ಮುನ್ನಡೆಯುವುದಿತ್ತು. ನಾಲ್ಕು ತಿಂಗಳ ಕಾಲ ಈ ಪರಿಯ ಅತ್ಯಂತ ಗಹನ ವಿಷಯ-ವಿಚಾರಗಳನ್ನು ಕೇಳಿಸಿಕೊಳ್ಳುತ್ತಾ, ಪೂರ್ತಿ ಗಮನವನ್ನು ಅದಕ್ಕೆಂದೇ ಮೀಸಲಿಡುವುದು ಸುಲಭದ ಮಾತಲ್ಲ. ಕೋರ್ಟಿನಿಂದಾಚೆ ಈ ವಿಷಯದ ಬಗ್ಗೆ ಅವರು ತುಟಿ ಬಿಚ್ಚುವಂತಿಲ್ಲ.
ಜ್ಯೂರಿಗಳಾಗಲು ಕೇಳಿದ ಹದಿನೈದು ಸಾವಿರ ಜನರಿಂದ ಅದು ನೂರಾಹನ್ನೆರೆಡು ಜನರಿಗೆ ಬಂದು, ಕಡೆಗೆ ಅವರಿಗೆ ಕೇಸ್ ವಿವರಗಳನ್ನು ಕೊಡಲಾಯ್ತು. ಕೋರ್ಟ್ ಅವರಿಗೆ ಲಾಯರ್ಗಳು, ಸಾಕ್ಷಿಗಳು, ಘಟನೆಯ ವಿವರಗಳು, ಎಲ್ಲವನ್ನೂ ಪರಿಶೀಲಿಸಲು ಹೇಳಿತ್ತು. ಅದಲ್ಲದೆ ಕೋರ್ಟ್ ಅವರಿಗೆ ಕಟ್ಟುನಿಟ್ಟಾಗಿ ಹೇಳಿತ್ತು – ನೀವು ಸತ್ಯಾಸತ್ಯಗಳ ಬಗ್ಗೆ ಮುಕ್ತ ಮನಸ್ಸಿಟ್ಟುಕೊಂಡು, ಸಾಕ್ಷ್ಯಗಳನ್ನು ಅವಲೋಕಿಸಿ, ಯಾರದ್ದೇ ಪರ ವಹಿಸದೆ ಕೇವಲ ಸತ್ಯವನ್ನು ಮಾತ್ರ ಎತ್ತಿ ಹಿಡಿಯಬೇಕು. ಇದು ನಿಮ್ಮಿಂದ ಸಾಧ್ಯವೇ ಎಂದು ಆಳವಾಗಿ ಆಲೋಚಿಸಿ ನಂತರ ಒಪ್ಪಿಗೆ ಕೊಡಿ.
ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ ಕೋರ್ಟ್ ಕೇಸ್ ನಡೆಯುವಾಗ ಜ್ಯೂರಿ ಸೇವೆ ಸಲ್ಲಿಸುವುದು ಪ್ರತಿ ಪ್ರಜೆಯ ಕರ್ತವ್ಯ. ಇವರು ಸರ್ವೇಸಾಮಾನ್ಯ ಸಾರ್ವಜನಿಕರು. ಜ್ಯೂರಿ ಆಗುವುದಕ್ಕೆ ಯಾವುದೇ ವಿಶೇಷ ಮನ್ನಣೆ ಇಲ್ಲ. ಇದಕ್ಕೆ ಯಾವುದೇ ಭತ್ಯ ಕೊಡುವುದಿಲ್ಲ. ಒಪ್ಪಿಕೊಂಡವರು ತಮ್ಮ ಖಾಸಗಿ ಮತ್ತು ಉದ್ಯೋಗದ ಸಮಯವನ್ನು ಕೊಡಬೇಕಾಗುತ್ತದೆ. ಇದು ಸಂಪೂರ್ಣವಾಗಿ ಸ್ವಯಂ ನಿರ್ಧಾರ ಮತ್ತು ಬದ್ಧತೆ. ಜ್ಯೂರಿ ಆದರೆ ತಮಗೆ ಕೊಡುವ ಕೇಸ್ ವಿವರಗಳನ್ನು ಕೂಲಂಕುಶವಾಗಿ ಅರ್ಥಮಾಡಿಕೊಳ್ಳಬೇಕು. ಇದಕ್ಕೂ ಒಂದಷ್ಟು ಸಾಮರ್ಥ್ಯವಿರಬೇಕು.
ಎರಿನ್ ಪ್ಯಾಟರ್ಸನ್ ಕೇಸ್ ವಿವರಗಳನ್ನು ಜೀರ್ಣಿಸಿಕೊಂಡು ಸರಿ ತಾವು ಸಿದ್ಧರಿದ್ದೀವಿ ಎಂದು ಒಪ್ಪಿಕೊಂಡ ೮೫ ಜನರಲ್ಲಿ ಕಡೆಗೆ ೧೫ ಜನರನ್ನು ಆರಿಸಲಾಯ್ತು. ಕೋರ್ಟಿನಲ್ಲಿ ಈ ಕೇಸ್ ನಡೆಸಿದ್ದ ಜಸ್ಟಿಸ್ ಬೀಲ್ ಅವರ ಸಹಾಯದಿಂದ ಅಂತಿಮವಾಗಿ ಹನ್ನೆರೆಡು ಜನರ ತಂಡವನ್ನು ರಚಿಸಿ ಇವರುಗಳು ಕಟ್ಟಕಡೆಯ ನಿರ್ಧಾರವನ್ನು ತೆಗೆದುಕೊಂಡರು. ನಿರ್ಧಾರ ಪ್ರಕಟವಾದಾಗ ಕೋರ್ಟಿನಲ್ಲಿದ್ದ ಎರಿನ್ ಯಾವುದೇ ರೀತಿಯ ಭಾವನೆಗಳನ್ನು ತೋರಿಸಲಿಲ್ಲವಂತೆ. ಎರಡು ವರ್ಷಗಳ ನಂತರ ಕೋರ್ಟ್ ತೀರ್ಮಾನ ಹೊರಬಿದ್ದು ಅದು ಅನೇಕರಿಗೆ ಸಮಾಧಾನ ತರಿಸಿದೆ. ಸತ್ತವರ ಮತ್ತು ಬದುಕುಳಿದವರ ಕುಟುಂಬಗಳ ಸದಸ್ಯರು ಇನ್ನೂ ಹೇಳಿಕೆಗಳನ್ನು ಕೊಟ್ಟಿಲ್ಲ. ಎರಿನ್ ಪ್ಯಾಟರ್ಸನ್ಗೆ ಯಾವ ರೀತಿಯ ಶಿಕ್ಷೆ ಸಿಗುತ್ತದೆ ಎನ್ನುವುದೂ ಕೂಡ ಇನ್ನೂ ತೀರ್ಮಾನವಾಗಿಲ್ಲ.

ಅಣಬೆ ಅಡುಗೆ ಮಾಡಿ ಬಡಿಸಿ ತಿನ್ನಿಸಿ ತನ್ನ ಅತ್ತೆ-ಮಾವಂದಿರನ್ನು ಮತ್ತು ಆಪ್ತ ಸ್ನೇಹಿತೆಯನ್ನು ಸಾಯಿಸಿದವಳು ಎನ್ನುವ ಎರಿನ್ ಪ್ಯಾಟರ್ಸನ್ ಖಾಯಂ ಕತೆ ಜನಜನಿತವಾಗಿದೆ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

