ಪ್ರೇಮವೇ ಗೆಲುವುದು ಅನ್ನುವ ಶೀರ್ಷಿಕೆಯನ್ನೇ ನೋಡಿ. ಪ್ರೇಮ ಗೆಲ್ಲುವುದು ʻನಾನುʼ ನೋತಾಗ ಅಲ್ಲವೇ!. ಪ್ರೇಮ ಗೆದ್ದಿತು ಅನ್ನುವುದು ಬರಿಯ ಒಬ್ಬರ, ಪುಣ್ಯವಿದ್ದರೆ ಪಾಲ್ಗೊಂಡ ಇಬ್ಬರ ಮೈಮನಸುಗಳಿಗೆ ಮಾತ್ರ ಗೊತ್ತಿರುವ ಸಂಗತಿಯಾಗಬಹುದು, ಭಾಷೆಯನ್ನು ಬಲ್ಲ ಎಲ್ಲರಿಗೂ ಇದನ್ನು ಮನದಟ್ಟು ಮಾಡಿಸುವುದು ಎಷ್ಟು ಕಷ್ಟ. ಪ್ರೀತಿ ಶೃಂಗಾರದ ಬಯಕೆ, ತವಕ, ನೆನಪು, ಅವನ್ನೆಲ್ಲ ನುಡಿಯಾಗಿ ಕಾಣುವ ಹಂಬಲ ಇವೆಲ್ಲವೂ ಓದುಗರಲ್ಲೂ ಇರಬೇಕು. ಅಂದರೆ ಪ್ರೇಮವನ್ನು ಬಯಸುವ ಓದುಗ ಮನಸೂ ಬೇಕು.
ದೀಪಾ ಗೋನಾಳ ಕವನ ಸಂಕಲನ “ನಿನ್ನ ನೆನಪ ಕುಡಿದವಳು” ಕುರಿತು ಓ.ಎಲ್. ನಾಗಭೂಷಣ ಸ್ವಾಮಿ ಬರಹ
ದೀಪಾ ಗೋನಾಳ ಅವರ ಈ ಸಂಕಲನ ‘ನಿನ್ನ ನೆನಪ ಕುಡಿದವಳು’ ಓದು ಸಲೀಸಾಗಿರಲಿಲ್ಲ. ಈ ಸಂಕಲನ ಕ್ರಮವಿಲ್ಲದೆ ಅಸ್ತವ್ಯಸ್ತವಾಗಿ ಮನಸಲ್ಲಿ ಇಳಿದು, ಊರಿ, ನಿಧಾನವಾಗಿ ಬೆಳೆದುಕೊಂಡು ಹೀಗೆ ಬರೆಸಿಕೊಂಡಿದೆ. ಬರೆಯಬೇಕೆಂಬ ಒತ್ತಡ ಹುಮ್ಮಸ್ಸು ಕವಿಗಳಿಗೆ ಹೇಗೋ ಓದಬೇಕೆಂಬ ಹಂಬಲ ಓದುಗರಿಗೂ ಹಾಗೆ ಮೂಡಬೇಕು, ಹಾಗೆ ಹಂಬಲ ಮೂಡಿದರೂ ಓದಿದ್ದನ್ನು ಒಳಗೊಳ್ಳುವ ಮನಸ್ಥಿತಿ ಇರಬೇಕು, ಅಲ್ಲೊಂದು ಇಲ್ಲೊಂದು ಕವಿತೆ ಓದುವುದು ಅಂದರೆ ಬಸ್ಸಿನಲ್ಲೋ ರೈಲಿನಲ್ಲೋ ಕಂಡ ಮುಖ ಮನಸಿನಲ್ಲಿ ಅಚ್ಚೊತ್ತುವ ಹಾಗೆ; ಒಂದೇ ವಿಷಯದ ಬಗ್ಗೆ ಹಲವು ಕವಿತೆಗಳ ಸಂಕಲನ ಓದಿ ಅದರಲ್ಲೂ ಆ ಬಗ್ಗೆ ಬರೆಯಬೇಕೆಂದು ಓದಿ ಭಾವಗಳನ್ನು ಜಾರದ ಹಾಗೆ ಮನಸಿನಲ್ಲಿ ಕಾದಿಟ್ಟುಕೊಂಡು, ಹೀಗನ್ನಿಸಿದ್ದನ್ನು ಹೀಗೆ ಹೇಳಬೇಕು ಅಂತ ಮಾತು ಹೊಂದಿಸಿ ಬರೆಯುವುದು ಸುಲಭವಲ್ಲ. ಯಾವುದೋ ಪದ್ಯ ಅದರ ಯಾವುದೋ ಸಾಲು, ಇನ್ಯಾವುದೋ ಕವಿತೆಯ ಭಾವ, ಅದು ಮತ್ತೆ ಇನ್ನೊಂದರ ಜೊತೆಗೆ ಇನ್ನೊಂದು ಈ ಥರ ಬೆರೆತು ಸಂಕಲನವೊಂದು ಮನಸಿನಲ್ಲಿ ಸಂಕಲನಗೊಳ್ಳುವುದು ಸಮಯ ಬೇಡುವ ಪವಾಡ. ಹಾಗೆ ಓದುಗರನ್ನು ಇಷ್ಟಿಷ್ಟೆ ಸೆಳೆದು ಸಾವಕಾಶ ಬೆಳೆದು ನಿಲ್ಲುವ ಗುಣವಿದೆ ದೀಪಾ ಗೋನಾಳ ಅವರ ಈ ಸಂಕಲನಕ್ಕೆ ಇದೆ.

(ದೀಪಾ ಗೋನಾಳ)
ಪ್ರೇಮ ಅಥವಾ ಶೃಂಗಾರದ ಬರಹಗಳ ಸಂಕಲನ ಯಾಕೆ ಮಾಡುತ್ತಾರೆ? ಸಹಜವಾಗಿ ಜನರಾಡುವ ಮಾತಿನ ರೀತಿಯಲ್ಲಿ ಮೂಡಿದ ಗಾಥಾ ಸಪ್ತಶತಿ ನೆನಪಾಯಿತು, ಶೃಂಗಾರ ಕುರಿತು ನೂರು ಕಿರು ಪದ್ಯಗಳ ಗೊಂಚಲು ಕಟ್ಟಿದವನೇ ನೀತಿಯನ್ನು ಕುರಿತು ನೂರು, ವೈರಾಗ್ಯದ ಬಗ್ಗೆ ಮತ್ತೂ ನೂರು ನೂರು ಕವಿತೆಗಳ ಪಾಠ ಹೇಳಿದ ಭರ್ತೃಹರಿ ನೆನಪಾದ, ದೇವ ಕೃಷ್ಣನ ಆರಾಧನೆಯ ನೆಪದಲ್ಲಿ ಗಂಡು ಕೃಷ್ಣನಿಗೆ ಆದ ರಾಧೆಯ ಅನುಭವಗಳನ್ನೇ ನುಡಿಗೊಳಿಸಿದ ಜಯದೇವ ನೆನಪಾದ, ಕೃಷ್ಣನನ್ನು ಹಿಂದಕ್ಕೆ ಸರಿಸಿ ರಾಧೆಯ ಕಣ್ಣಿಂದ ಕೃಷ್ಣಾನುಭವವನ್ನು ಚಿತ್ರಗೊಳಿಸುವ ವಿದ್ಯಾಪತಿಯ ರಚನೆ ನೆನಪಾದವು, ಗೆಳತಿಯ ಒಡನಾಟದ ಶೃಂಗಾರವನ್ನೆ ಕವಿತೆ ಮಾಡಿದ ಪ್ರಾಚೀನ ಗ್ರೀಕ್ ಲೇಖಕಿ ಸಾಫೋ ನೆನಪಾದಳು ಹಾಗೇ ಕೋಟಿಗಟ್ಟಲೆ ಮನುಷ್ಯ ಜೀವಗಳು ಲಕ್ಷಾಂತರ ವರ್ಷ ಅತ್ಯಂತ ಆಪ್ತವಾಗಿ ಅನುಭವಿಸಿರುವ, ಅನುಭವಿಸುತ್ತಿರುವ, ಮುಂದೆಯೂ ಅನುಭವಿಸುವ ಪ್ರೀತಿಯ ಭಾವವನ್ನು ಕುರಿತು ನಿಜವಾಗಿ ಬರೆಯುವುದು, ಬರೆದು ಓದುಗರ ಮನಸು ಮುಟ್ಟುವುದು, ಮುಟ್ಟಿ ಆಯಾ ಭಾಷೆಯಲ್ಲಿ ಶಾಶ್ವತ ನೆನಪಾಗಿ ಉಳಿಯುವುದು ಅಸಾಧ್ಯವೆಂಬಷ್ಟು ಕಷ್ಟವೆಂದು ಹೇಳಿದ ನೆರೂಡನ ಮಾತು ತಟ್ಟನೆ ಮಿಂಚಿತು. ಹೀಗೆ ವಿಚಾರದ ಕುದುರೆ ಏರಿ ಕೊನೆಯಿರದೆ ಸಂಚಾರ ಹೊರಡುವ ಮನಸನ್ನು ಮತ್ತೆ ದೀಪಾ ಅವರ ಸಂಕಲನಕ್ಕೆ ಎಳೆದುಕೊಂಡು ಬಂದೆ.
ದೀಪಾ ಗೋನಾಳ ಅವರ ಈ ಸಂಕಲನದ ರಚನೆಗಳಲ್ಲಿ ಇನಿಯರ ಆಪ್ತ ಲೋಕ ನುಡಿರೂಪವನ್ನು ತಾಳಿದೆ. ಹಾಗೆ ನುಡಿರೂಪ ತಾಳುವಾಗ ಬಹಳಷ್ಟು ರಚನೆಗಳಿಗೆ ಕಥನದ ರೂಪ ದೊರೆತಿದೆ. ಈ ಕಥನವನ್ನು ಹೇಳುತಿರುವುದು ಹೆಣ್ಣು ಪಾತ್ರ. ಹಾಗಾಗಿ ಶೃಂಗಾರ, ಪ್ರೀತಿಗಳನ್ನು ಕುರಿತು ಹೆಣ್ಣು ಮನಸಿನ ವಿವಿಧ ಪದರಗಳಲ್ಲಿ ಅವಿತಿರುವ ಭಾವಗಳು ಮುಖ್ಯವಾಗುತ್ತವೆ. ಸನ್ನಿವೇಶವೊಂದು ಮೂಡಿಸುವ ಭಾವವನ್ನು ಹೊಸತೊಂದು ಕೋನದಿಂದ ನೋಡಿ ಅದಕ್ಕೆ ಆ ನೋಟಕ್ಕೆ ತಕ್ಕ ನುಡಿ ಒದಗಿಬಂದಾಗ ರಚನೆ ಓದುಗರದ್ದು ಅಂದರೆ ಮನುಷ್ಯರೆಲ್ಲರದ್ದೂ ಆಗುತ್ತದೆ. ಯಾವುದನ್ನು ಪ್ರೀತಿ ಅಥವಾ ಶೃಂಗಾರ ಅನ್ನುತ್ತೇವೋ ಅದರ ಪೂರ್ಣವೆನಿಸುವಂಥ ಅನುಭವ ದೊರೆಯುವುದು ಎಷ್ಟು ಅಪರೂಪವೋ ಆ ಅನುಭವಕ್ಕೆ ತಕ್ಕ ನುಡಿರೂಪ ದೊರೆಯುವುದೂ ಅಷ್ಟೇ ಅಪರೂಪ. ಹಾಗಾಗಿ ಭಾಷೆಯೊಂದರ ನೆನಪಿನಲ್ಲಿ ನೂರು ಕಾಲ ಉಳಿದುಕೊಳ್ಳುವ ಪ್ರೇಮಕವಿತೆಗಳ ಸಂಖ್ಯೆ ಅಷ್ಟು ಅಲ್ಪ ಪ್ರಮಾಣದ್ದಾಗುತ್ತದೆ.
ಪ್ರೇಮವೇ ಗೆಲುವುದು ಅನ್ನುವ ಶೀರ್ಷಿಕೆಯನ್ನೇ ನೋಡಿ. ಪ್ರೇಮ ಗೆಲ್ಲುವುದು ʻನಾನುʼ ನೋತಾಗ ಅಲ್ಲವೇ!. ಪ್ರೇಮ ಗೆದ್ದಿತು ಅನ್ನುವುದು ಬರಿಯ ಒಬ್ಬರ, ಪುಣ್ಯವಿದ್ದರೆ ಪಾಲ್ಗೊಂಡ ಇಬ್ಬರ ಮೈಮನಸುಗಳಿಗೆ ಮಾತ್ರ ಗೊತ್ತಿರುವ ಸಂಗತಿಯಾಗಬಹುದು, ಭಾಷೆಯನ್ನು ಬಲ್ಲ ಎಲ್ಲರಿಗೂ ಇದನ್ನು ಮನದಟ್ಟು ಮಾಡಿಸುವುದು ಎಷ್ಟು ಕಷ್ಟ. ಪ್ರೀತಿ ಶೃಂಗಾರದ ಬಯಕೆ, ತವಕ, ನೆನಪು, ಅವನ್ನೆಲ್ಲ ನುಡಿಯಾಗಿ ಕಾಣುವ ಹಂಬಲ ಇವೆಲ್ಲವೂ ಓದುಗರಲ್ಲೂ ಇರಬೇಕು. ಅಂದರೆ ಪ್ರೇಮವನ್ನು ಬಯಸುವ ಓದುಗ ಮನಸೂ ಬೇಕು.
ಈ ಸಂಕಲನದ ರಚನೆಗಳಲ್ಲಿ ಒಟ್ಟಾರೆ ಒಂದು ವಿನ್ಯಾಸ ಕಾಣುತ್ತದೆ. ಇಲ್ಲಿರುವುದು ಇನಿಯರ ಆಪ್ತಾನುಭವದ ಲೋಕ. ಅದಕ್ಕೆ ನೆರವಾಗುವಂತೆ ಮುಖ್ಯವಾಗಿ ಮಾಗಿಯ ಋತುವಿನಲ್ಲಿ ಮೂಡುವ ಭಾವಲಹರಿಯೂ ಇತರ ರಚನೆಗಳಲ್ಲಿ ಹೊರಗಿನ ಪರಿಸರದ ಬಲು ಸೂಕ್ಷ್ಮ ಸೂಚನೆಗಳೂ ಇವೆ. ಗಾಂಧಿಯನ್ನು ಕುರಿತ ರಚನೆಯೊಂದನ್ನು ಹೊರತುಪಡಿಸಿ ಹೊರಗಿನ ಲೋಕ ಇಲ್ಲಿ ನೇರವಾಗಿ ಕಾಣದು. ಆದರೂ ಎರಡು ಜೀವಗಳ ವರ್ತನೆಯಾಗಿ ಸಮಾಜ ವಿಧಿಸಿದ ಕಟ್ಟುಪಾಡು, ವಿಧಿಗಳ ಸೂಚನೆ ಇದ್ದೇ ಇದೆ.
ಈ ಸಂಕಲನದ ಮೊದಲ ರಚನೆ ಇಲ್ಲಿನ ಎಲ್ಲ ಬರವಣಿಗೆಯನ್ನು ನಿರೂಪಿಸುತ್ತಿರುವ ಪಾತ್ರವೇ ದೂರದಿಂದ ನೋಡಿ, ತೂಗಿ, ತನ್ನ ಮತ್ತು ತನ್ನ ಮಾತಿನ ಬೆಲೆಯನ್ನು ತಾನೇ ನೋಡಿದ ಹಾಗಿದೆ. ಹಾಗಾಗಿ ಇದು ಗದ್ಯದ ರೀತಿಯ ರಚನೆ, ಇಲ್ಲಿನ ಉಳಿದ ರಚನೆಗಳ ಟೀಕು ಅನಿಸುತ್ತದೆ. ಮತ್ತೆಂದೂ ತನ್ನೆಡೆಗೆ ʻತಿರುಗಿ ನೋಡದʼ ಇನಿಯ; ʻನಾಳೆಗಳೇ ಇರದ ಪ್ರೇಮಕತೆʼಯ ಜೊತೆ ʻಹರಟೆʼ ಅವನಿಗೆ ಕೇಳಿಸದ ಹಾಗೆ ʻದೂರುವʼ ಆಸೆ, ಕೇಳಿಸಿದರೆ ಅನ್ನುವ ʻಗಾಬರಿʼ, ಪ್ರೇಮ ಹುಣ್ಣಾಗಿದೆ, ಆದರೂ ಉಳಿಸಿಕೊಳ್ಳುವೆ, ವೇದನೆಗೆ ಒಗ್ಗಿಹೋಗಿದ್ದೇನೆಯೇ ಅನ್ನುವ ಸ್ವ-ಅವಲೋಕನ, ತನ್ನ ಬಿಂಬವನ್ನು ತೋರುವ ಕನ್ನಡಿಯೊಡನೆ ʻಜಗಳʼ, ತನ್ನ ಬಗ್ಗೆಯೇ ಹುಟ್ಟುವ ʻಮರುಕʼ, ʻಕಾತರʼ ಮತ್ತು ʻನಿರಾಸೆಗಳʼ ಹೊಯ್ದಾಟ, ಪ್ರೇಮವೇ ಗೆಲುವುದೆಂಬ ಹತಾಶ ಅನಿಸುವಂಥ ಭರವಸೆ ಎಲ್ಲವೂ ಇಲ್ಲಿವೆ.
ನನಗೆ ಬೇಕೆನಿಸಿದ ರೀತಿಯಲ್ಲಿ ಇಲ್ಲಿನ ರಚನೆಗಳನ್ನು ಓದುತ್ತಾ ಇನಿಯರಿಬ್ಬರ ಪಾತ್ರ, ಮುಖ್ಯವಾಗಿ ಇನಿಯಳ ಪಾತ್ರ ಇಷ್ಟಿಷ್ಟೇ ಜೀವ ಪಡೆದವು. ನನ್ನ ಮನಸನ್ನು ಬಹಳ ಸೆಳೆದ ರಚನೆಗಳನ್ನಷ್ಟೇ ಗಮನಿಸುತ್ತಾ ಇನಿಯರು ನನ್ನ ಮನಸಿನಲ್ಲಿ ರೂಪ ತಳೆದ ಬಗೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ʻಶೃಂಗಾರದ ಹೊಳೆʼ ಇಷ್ಟವಾಯಿತು. ಒಂದೊಂದೂ ಸ್ಟಾಂಜಾ ಒಂದೊಂದು ಅನುಭವಕ್ಕೂ ಆ ಅನುಭವಕ್ಕೆ ಕಾರಣವಾಗುವ ಕ್ರಿಯೆಗೂ ಮಾತಿನ ರೂಪಕೊಡುವ ಹಂಬಲಕ್ಕೆ ಮೀಸಲಾಗಿದೆ. ಮೈಮನಸುಗಳು ಒಟ್ಟಾಗಿ ಪಡೆದ ಅನುಭವವನ್ನು ಆಕೆ ಹೇಳುತಿದ್ದಾಳೆ. ಇದನ್ನು ಓದಿದ ಮೇಲೆ ʻನಿಮ್ಮ ಕವಿಗೆ ಹೇಳಿ,ʼ ಬೇರೆ ಥರ ಕಂಡಿತು. ಇನಿಯಳ ಒಲವಿನ ಕಡಲನ್ನು ಎಷ್ಟು ಗಮನಿಸಬೇಕೋ ಅಷ್ಟು ಗಮನಿಸದ ಇನಿಯನನ್ನು ದೂರುವ ಈ ರಚನೆಯನ್ನು ಓದುತ್ತಿರುವಂತೆ ಗಂಡಸೆರಲ್ಲ ಇಷ್ಟೇ ಅನ್ನುವ ಭಾವ ಅವಳಲ್ಲಿ ಮೂಡಿದ್ದು ತಿಳಿಯುತ್ತದೆ. ʻಇನ್ನೂ ಉಳಿದಿದ್ದೇನೆ ಹಳೆಯ ವಿಳಾಸದಲ್ಲಿʼ ಇನಿಯಳ ಭಾವನಿಷ್ಠೆ, ಅವನು ಬಂದಾನೆಂಬ ಆಸೆ, ಬರಲೆಂಬ ಹಂಬಲ, ಅವನು ಬಂದಾಗ ನಾನು ಇಲ್ಲೇ ಇರಬೇಕು ಅನ್ನುವ ತವಕ ಎಲ್ಲ ವ್ಯಕ್ತವಾಗಿವೆ. ಇಂಥ ಮನಸಿನಲ್ಲಿ ಶೃಂಗಾರದ ಹೊಳೆಯಲ್ಲಿ ಮಿಂದ ನೆನಪು, ಇಬ್ಬರ ನಡುವೆ ಪ್ರೇಮವಾದ ಗಳಿಗೆಯ ನೆನಪು. ಇವಾದ ತಕ್ಷಣ ಬರುವ ʻಮುಚ್ಚಿಡುʼ ಪ್ರೇಮದ ನಿವೇದನೆಯ ಜಟಿಲತೆಯನ್ನು ಸೂಚಿಸಿ ಪ್ರೇಮಕ್ಕೂ ಸಮಾಜ ಒಪ್ಪಿದ ನೀತಿಗೂ ಸಂಬಂಧವಿಲ್ಲ ಅನ್ನುವುದನ್ನು ಮತ್ತೆ ಸಾಬೀತು ಮಾಡುತ್ತದೆ. ಪುರಾಣದಲ್ಲಿ ಬರುವ ರಾಧೆಗೆ ಇದ್ದ ಕೃಷ್ಣನ ಕುರಿತ ಪ್ರೀತಿ, ವಿಸೀ ಅವರು ಬರೆದಿರುವ ʻಸೆಳೆʼ ಕವಿತೆಯಲ್ಲಿ ಬರುವ ಮದುವೆಯಾದವನನ್ನು ಹಂಬಲಿಸುತ್ತಾ ನಿನ್ನ ವರಿಸಿದವಳಿಗಿಂತ ನಾನೇ ಉತ್ತಮ ಅನ್ನುವ ವಿಶ್ವಾಸ. ನಿನ್ನ ಬಯಸುವ ಇನ್ನೊಂದು ಕಣ್ಣಿಗೆ ನಮ್ಮ ಪ್ರೇಮದ ಕುರುಹು ಕಾಣದ ಹಾಗೆ ಬಚ್ಚಿಡು ಎಂದು ಕೇಳಿಕೊಳ್ಳಬೇಕಾದ ಅಸಹಾಯಕತೆ ಎಲ್ಲವೂ ನೆನಪಾದವು. ಈ ರಚನೆಯಲ್ಲಿ ನಾಟಕೀಯಗುಣವಿದೆ. ನುಡಿಯುತ್ತಿರುವ ಪಾತ್ರ ಪತ್ನಿಯದೋ ಪ್ರೇಯಸಿಯದೋ ಅನ್ನುವುದು ಅಸ್ಪಷ್ಟವಾಗಿರುವುದೂ ಚಂದವೇ. ಪ್ರೀತಿಸುವ ಮತ್ತು ಜೊತೆಗೆ ಇರಲೇಬೇಕಾದ ಹೆಣ್ಣುಗಳ ವ್ಯತ್ಯಾಸ ಒಲಿದ ಹೆಣ್ಣಿನ ಮಾತಿನಲ್ಲಿ ವ್ಯಕ್ತವಾಗುತ್ತವೆ, ಆಕೆಗೆ ತನ್ನ ಬಗ್ಗೆ ಇರುವ ಕಾನ್ಫಿಡೆನ್ಸ್, ಪ್ರೇಮಿಯ ಬಗ್ಗೆ ಇರುವ ಕಳಕಳಿ ಎಲ್ಲ ಮೂಡಿದವು. ಪ್ರೇಮ ನಿವೇದನೆಗೆ ಸಾಮಾಜಿಕ ನೀತಿ ಹೇಗೆ ದೊಡ್ಡ ತೊಡಕು ಅನ್ನುವ ಪ್ರಶ್ನೆಯನ್ನು ಈ ಸಂಕಲನ ಮಂಡಿಸುತ್ತದೆ ಅನಿಸಿತು. ಇದಕ್ಕೆ ಸುಲಭದ ಉತ್ತರವಿಲ್ಲ.
ಆಮೇಲೆ, ʻಆಯ್ಕೆʼ ಅನ್ನುವ ರಚನೆ ಇಷ್ಟವಾಯಿತು. ಇನಿಯನಿಗಾಗಿ ಹಂಬಲಿಸುತ್ತಾ, ಅವನು ದೂರವಾದ ಮೇಲೂ ಹೆಣ್ಣು ತನ್ನ ಬದುಕನ್ನು ಕಟ್ಟಿಕೊಂಡ ಬಗೆ ಇಲ್ಲಿದೆ. ಅವನು ಮಾಡಿಕೊಂಡ ʻಆಯ್ಕೆʼಯ ಬಗ್ಗೆ ಸಿಟ್ಟಿಗಿಂತ ತನ್ನ ಬದುಕಿನ ವಾಸ್ತವ ಎದುರಿಸುವ ಗಟ್ಟಿತನ ಮೆಚ್ಚುಗೆಯಾಯಿತು. ಪ್ರೇಮ ಬರೀ ಸೆಂಟಿಮೆಂಟಲ್ ಆದರೆ ನೋವು ಮಾತ್ರ ಖಚಿತ. ʻಆಯ್ಕೆʼ ಎಂಬ ಈ ರಚನೆ ʻಇನ್ನೂ ಉಳಿದಿದ್ದೇನೆ ಹಳೆಯ ವಿಳಾಸದಲ್ಲಿʼ ರಚನೆಯ ಇನ್ನೊಂದು ಮಗ್ಗುಲು ಅನಿಸಿತು.
ʻಅಕಾಲಿಕ ಮಳೆಗೊಂದು ಬೆಚ್ಚನೆ ಪದ್ಯʼದಲ್ಲಿ ಇನಿಯಳು ತನ್ನ ಅಪೇಕ್ಷೆಯನ್ನು ಎಲ್ಲ ಸಂಕೋಚದೊಡನೆಯೂ ಇನಿಯನಿಗೆ ಮುಕ್ತವಾಗಿ ಹೇಳುವ ರೀತಿ ಇಷ್ಟವಾಯಿತು. ʻಮತ್ತೆ ಸೋನೆʼ ಅಚ್ಚುಕಟ್ಟಾಗಿ ರೂಪ ಪಡೆದಿದೆ. ಇನಿಯರ ಒಲವು ಇಡೀ ಭೂಮಿಗೆ ಹೊಸತನ್ನು ತರುವುದೆಂಬ ಭಾವ ಇಲ್ಲಿದೆ. ಚಿತ್ತಾಲರ ಕಾಮಸೂತ್ರ ಕವಿತೆಯಲ್ಲಿ ʻನಾವೇ ಮನುಕುಲದ ತಂದೆ ತಾಯಿʼ ಎಂದುಕೊಳ್ಳುವ ಇನಿಯರ ಜೋಡಿ ನೆನಪಾಯಿತು. ʻಪತ್ರʼ ಬಹಳ ಇಷ್ಟವಾದ ಇನ್ನೊಂದು ರಚನೆ ಇದು ಪತ್ರದ ಮೂಲಕ ಮನಸು ತೋಡಿಕೊಳ್ಳುತಿದ್ದ ಕಾಲದ್ದು. ಬಹಳ ಅನ್ ಕಾಮನ್ ಹೋಲಿಕೆಗಳನ್ನು ಬಳಸುತ್ತಾ, ಪತ್ರವನ್ನು ನಿರೀಕ್ಷಿಸುವ, ಓದುವ ಹೆಣ್ಣು ಮನಸಿನ ಹತ್ತೆಂಟು ಭಾವಗಳನ್ನು ತೀರ ಹೊಸ ಬಗೆಯಲ್ಲಿ ಹಿಡಿದಿಟ್ಟಿರುವ ರೀತಿ ಇಷ್ಟವಾಯಿತು, ನೋಟದ ಸಂಪರ್ಕ ಅತಿ ಸಲೀಸಾದ ಕಾಲ ಇದು. ಒಲಿದವರ ಮಾತು ಕೇಳುವುದು, ಒಲಿದವರನ್ನು ನೋಡುವುದು ಅಪರೂಪವಾಗಿದ್ದ, ʻದೂರʼವೇ ಪ್ರೇಮದ ಇಂಧನವಾಗುತ್ತಿದ್ದ ಕಾಲಘಟ್ಟದ ಮನಸ್ಥಿತಿಯ ಚಿತ್ರ ಇದು ಅನಿಸಿತು.
ʻತಬ್ಬಿಕೊಂಡೇ ಇದ್ದರೆʼ ಒಂದು ಥರ ಬದಲಾವಣೆಯ ಪದ್ಯ. ಪ್ರೀತಿ ಅನ್ನುವುದು ಒಟ್ಟಿಗೆ ಇರುವುದು ಮಾತ್ರವಲ್ಲ, ಒಟ್ಟಿಗೆ ಇರುವುದು ಅನ್ನುವುದರಲ್ಲಿ ದೂರ ಇರಬೇಕಾದ ಅಗತ್ಯದ ಸೂಚನೆಯೂ ಇದೆ. ದೂರವಾಗದಿದ್ದರೆ ಹತ್ತಿರವಾಗುವುದು ಹೇಗೆ ಎಂದು ಲಾರೆನ್ಸ್ ಕೇಳಿದ ಪ್ರಶ್ನೆ ನೆನಪಾಯಿತು. ʻಕಲ್ಲಾಗುವ ಕಷ್ಟʼ ಅಹಲ್ಯೆಯ ಕಥೆಯನ್ನು ಬೇರೊಂದು ನೋಟದಲ್ಲಿ ಕಾಣುವ ಯತ್ನ. ಗಂಡಿಗೆ ಹೆಣ್ಣು ಜೀವ ಅರ್ಥವಾಗದು ಅನ್ನುವ ದನಿ ಇದೆ. ʻನಿಮ್ಮ ಕವಿಗೆ ಹೇಳಿʼಯಲ್ಲೂ ಇಂಥದೇ ದನಿ ಇತ್ತು. ʻಕೆಂಪು ರಾತ್ರಿʼ ಹೆಣ್ಣು ಜೀವಕ್ಕೆ ಮಾತ್ರ ಸಾಧ್ಯವಿರುವ ತೀವ್ರ ಮತ್ತು ಆಪ್ತ ಅನುಭವ. ʻಸೀರೆʼ ರಚನೆಯಲ್ಲಿ ಕೈಗೆ ಸೋಕುವ ವಾರ್ಡ್‌ರೋಬಿನ ಸೀರೆ ಮನಸಿನಲ್ಲೆಬಿಸುವ ಹಲವು ನೆನಪು, ನೆನಪುಗಳ ನೋವಿನ ಭಾವಕ್ಕೆ ಮಾತಿನ ರೂಪ ಕೊಟ್ಟಿದೆ.

(ಓ.ಎಲ್. ನಾಗಭೂಷಣ ಸ್ವಾಮಿ)
ʻಮ್ಯಾಜಿಕ್ ಪೆಟ್ಟಿಗೆʼ ಅಪ್ಪ-ಮಗಳ ಪ್ರೇಮದ ಚಿತ್ರವಿರುವ ತೀರ ಬೇರೆ ಥರದ ರಚನೆ. ಅಪ್ಪನ ಹತ್ತಿರದ ಇದ್ದ ಮ್ಯಾಜಿಕ್ ಪೆಟ್ಟಿಗೆ ನಿಜವಾಗಿ ಮ್ಯಾಜಿಕ್ ಅನಿಸುತಿತ್ತು, ತಾನು ತನ್ನ ಮಗಳಿಗೆ ತಂದುಕೊಟ್ಟಿರುವ ಅಂಥದೇ ಪೆಟ್ಟಿಗೆ ಯಾವತ್ತೂ ಅಪ್ಪನ ಮ್ಯಾಜಿಕ್ ಪೆಟ್ಟಿಗೆ ಆಗದು ಅನ್ನುವ ಮಾತು ತಂದೆಯ ಪ್ರೀತಿ, ಪೋಷಣೆ ಹೇಗೆ ಅನನ್ಯ, ವಿಶಿಷ್ಟ ಅನ್ನುವುದನ್ನು ಹೇಳುತ್ತದೆ. ‘ಚಂದ್ರʼ ಮನ ಸೆಳೆಯುವಂಥ ಫ್ಯಾಂಟಸಿ: ʻನಾಲ್ಕು ದಿನ ಸಲಹಿದ ಊರಿನ ನೆನಪಲ್ಲಿʼ ಮತ್ತೊಂದು ಬೇರೆ ರೀತಿಯ ರಚನೆ. ಇಲ್ಲಿನ ಉಳಿದ ರಚನೆಗಳ ಜೊತೆಯಲ್ಲಿ ಇರಿಸಿ ನೋಡಿದಾಗ ಇನಿಯರು ಕೆಲವು ಕಾಲ ಬದುಕಿದ್ದ ಊರನ್ನು ಬಿಟ್ಟು ತೆರಳುವ ನೋವನ್ನು ಹೇಳುತ್ತದೆ ಅನಿಸಿತು. ʻರಟ್ಟೆಯ ಮೇಲೆ ಹಲ್ಕಚ್ಚುʼ ಇನಿಯರ ಆಪ್ತ ಅನುಭವವನ್ನು ಮತ್ತೊಮ್ಮೆ ನಮಗೂ ದಾಟಿಸುತ್ತದೆ. ʻಕತೆ ಬರೆಯುವʼ ಎಂಬ ರಚನೆಯಲ್ಲಿ ಇನಿಯನ ಹಲವು ಆಯಾಮಗಳು ಕಂಡು ಸಂಕಲನದ ಕೊನೆಗೆ ಅವನ ಪಾತ್ರ ಜೀವಂತವಾಯಿತು ಅನಿಸಿತು.
ಕೃಷ್ಣ-ಗೋಪಿಯರ ಪಾತ್ರ ಪಲ್ಲಟವಾಗುವ ಪ್ರೇಮದ ಹೊಳೆ, ಇನಿಯರು ಬಾನು ಬುವಿಯಾಗಿ ಹಿಗ್ಗುವ ಪರಿಯನ್ನು ಹೇಳುವ ʻಮತ್ತೆ ಸೋನೆ ಹೊರಗೆʼ. ʻಕುಡಿಯೋಣ ಬಾ ಸಾಕಿʼ ನ್ಯಾಯಾಲಯ ಪರಿಭಾಷೆಗಳನ್ನು ಬಳಸುವ ʻದಟ್ಸಾಲ್ʼ, ಪೋಸ್ಟ್ ಕಾರ್ಡಲ್ಲಿ ಆದ ಬದಲಾವಣೆಯ ಮೂಲಕ ಲೋಕದಲ್ಲಿ ಆದ ಬದಲಾವಣೆಯನ್ನು ಸೂಚಿಸುವ ʻಗಾಂಧಿʼ ಒಟ್ಟು ಸಂಕಲನದ ಬರಹಕ್ಕೆ ಬೇರೆ ಆಯಾಮಗಳನ್ನು ಜೋಡಿಸಿದರೂ ಭಾಷೆಯ ಬಳಕೆ, ರಚನೆಯ ಸಡಿಲತನಗಳ ಕಾರಣಕ್ಕೆ ತುಂಬ ಮೆಚ್ಚಲು ಆಗಲಿಲ್ಲ.

ಪ್ರೇಮದ ಕವಿತೆಗೆ ಭಾಷೆ ನವಿರಾಗಿಯೂ ಇರಬೇಕು, ದೃಢವಾಗಿಯೂ ಇರಬೇಕು. ಇದಲ್ಲದೆ ಬೇರೆ ಪದ ಸಲ್ಲದು ಇಲ್ಲಿ ಅನ್ನುವ ಥರ ಪದ ಜೋಡಣೆ, ಆಯ್ಕೆ ಇರಬೇಕು. ಸ್ಪಷ್ಟತೆಯ ಜೊತೆ ಅನೇಕಾರ್ಥ ಸಾಧ್ಯತೆಗಳೂ ಬೇಕು. ಓದುಗರಲ್ಲಿ ಭಾವದ ಒಂದು ಲೋಕವನ್ನೇ ಭಾಷೆಯ ಮೂಲಕ ಕಟ್ಟಬೇಕು. ದೀಪಾ ಗೋನಾಳ ಅವರಿಗೆ ಆ ಶಕ್ತಿ ಇದೆ. ತಮ್ಮ ರಚನೆಗಳನ್ನು ಮತ್ತೆ ಮತ್ತೆ ಪರಿಶೀಲಿಸುವ ಕವಿತೆಗೆ ಪೂರ್ಣರೂಪಕೊಡುವ ತಾಳ್ಮೆ ದೀಪಾ ಅವರಿಗೆ ಬರಲಿ, ಓದುಗರ ಮನಸಿನಲ್ಲಿ ಅವರ ರಚನೆಗಳು ಅವರವರ ಪ್ರೀತಿಯ ಲೋಕದ ವಿವರಗಳಾಗಲಿ ಎಂದು ಹಾರೈಸುವೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

