Advertisement
ಉತ್ತರ ಆಫ್ರಿಕಾದ ಇಸ್ಲಾಮಿಕ್ ರಾಷ್ಟ್ರ ಅಲ್ಜೀರಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಉತ್ತರ ಆಫ್ರಿಕಾದ ಇಸ್ಲಾಮಿಕ್ ರಾಷ್ಟ್ರ ಅಲ್ಜೀರಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಅಲ್ಜೀರಿಯಾದ ಜನರು ಫುಟ್‌ಬಾಲ್, ವಾಲಿಬಾಲ್ ಕ್ರೀಡೆಗಳ ಬಗ್ಗೆ ಹೆಚ್ಚು ಒಲವನ್ನು ಇಟ್ಟುಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ವರ್ಷಗಳಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಇಲ್ಲಿಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಬಾಕ್ಸಿಂಗ್‌ನಲ್ಲಿ ಸಾಧನೆ ಮೆರೆದಿದ್ದಾರೆ. ಸಾವಿರದೈನೂರು ಮೀಟರ್‌ಗಳ ಓಟದ ಸ್ಪರ್ಧೆಯಲ್ಲಿ ಅಲ್ಜೀರಿಯಾದ ಅಥ್ಲೀಟ್‌ಗಳ ಸಾಧನೆ ಮೆಚ್ಚುವಂಥದ್ದಾಗಿದೆ. ಹಲವು ಸಲ ಗೆಲುವಿನ ಮಾಲೆಯನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಅಲ್ಜೀರಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

ಉತ್ತರ ಆಫ್ರಿಕಾದ ರಾಷ್ಟ್ರಗಳಲ್ಲಿಯೇ ಅತೀ ದೊಡ್ಡ ದೇಶ ಎಂಬ ಹೆಗ್ಗಳಿಕೆ ಅಲ್ಜೀರಿಯಾದ್ದು. ಪ್ರಪಂಚದಲ್ಲಿ ಹತ್ತನೇ ಸ್ಥಾನ. ಇಲ್ಲಿಯ ಬಹುಪಾಲು ಭೂಮಿ ಮರಳುಗಾಡು. ಸಹಾರಾ ಮರುಭೂಮಿಯ ಭಾಗವಾಗಿ ಗುರುತಿಸಿಕೊಂಡಿದೆ ಅಲ್ಜೀರಿಯಾದ ಮರುಭೂಮಿ. ಈ ಕಾರಣದಿಂದಲೇ ಅಲ್ಜೀರಿಯಾದಲ್ಲಿ ತಾಪಮಾನ ಹೆಚ್ಚಿದೆ. ಐವತ್ತು ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ತಾಪಮಾನವನ್ನು ದಾಖಲಿಸಿದೆ ಇಲ್ಲಿಯ ಭೂಮಿ. ಬೈಜಾಂಟಿಯನ್ನರು, ಟರ್ಕರು, ಸ್ಪೇನರು, ರೋಮನ್ನರು ಮತ್ತು ಜರ್ಮನಿಕ್ ಬುಡಕಟ್ಟಿನವರು ತೀರಾ ಹಿಂದಿನ ಕಾಲಘಟ್ಟದಲ್ಲಿ ಅಲ್ಜೀರಿಯಾವನ್ನು ಆಳಿದ್ದಾರೆ. ಏಳನೇ ಶತಮಾನದಲ್ಲಿ ಅಲ್ಜೀರಿಯಾವು ಅರಬ್ಬರ ವಶವಾಯಿತು. ಈ ಸಂದರ್ಭದಲ್ಲಿ ಇಲ್ಲಿ ಬದುಕುತ್ತಿದ್ದ ಬಹುತೇಕ ಜನರು ಇಸ್ಲಾಮ್‌ಗೆ ಮತಾಂತರಗೊಂಡರು. ಅರಬ್ಬರು ಉತ್ತರ ಆಫ್ರಿಕಾದ ಪ್ರದೇಶಗಳನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು ಕ್ರಿ.ಶ. 647ರ ಕಾಲಘಟ್ಟದಲ್ಲಿ. ಇದು ಕೊನೆಗೊಂಡದ್ದು ಕ್ರಿ.ಶ. 709ರಲ್ಲಿ. ಈ ಬಗೆಯ ವಿದ್ಯಮಾನ ಅಲ್ಜೀರಿಯಾ ರೂಪುಗೊಳ್ಳುವುದಕ್ಕೆ ಎಡೆಮಾಡಿಕೊಟ್ಟಿತು. ಬೈಜಾಂಟಿಯನ್ ಸಾಮ್ರಾಜ್ಯದ ಮೇಲೆ ವಿಜಯ ಸಾಧಿಸಿದ ಅರಬ್ಬರು ಅಲ್ಜೀರಿಯಾವನ್ನು ತಮ್ಮದಾಗಿಸಿಕೊಂಡರು. ಆ ಬಳಿಕದ ನೂರು ವರ್ಷಗಳಲ್ಲಿ ಅಲ್ಜೀರಿಯಾವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡರು ಎನ್ನುವುದು ಐತಿಹಾಸಿಕವಾದ ಸತ್ಯ.

ಅಲ್ಜೀರಿಯಾದ ರಾಜಧಾನಿಯಾಗಿರುವ ಅಲ್ಜಿಯರ್ಸ್ ನಗರವು ಬಿಳಿಯ ಬಣ್ಣದ ಕಟ್ಟಡಗಳಿಗಾಗಿ ಹೆಸರುವಾಸಿಯಾಗಿದೆ. ದೇಶದ ಅತೀ ದೊಡ್ಡ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ನಗರವು ‘ಅಲ್ಜರ್ ಲಾ ಬ್ಲಾಂಚೆ’ ಎಂದು ಕರೆಸಿಕೊಂಡಿದೆ. ಬ್ಲಾಂಚೆ ಎಂದರೆ ಬಿಳಿಯ ಬಣ್ಣದ್ದು ಎಂದರ್ಥ. ಈ ನಗರದಲ್ಲಿರುವ ಬಹುತೇಕ ಕಟ್ಟಡಗಳೆಲ್ಲವೂ ಬಿಳಿಯ ಬಣ್ಣದಿಂದ ಕಂಗೊಳಿಸುತ್ತಿರುತ್ತವೆ. ಇದರಿಂದಾಗಿ ಇಡಿಯ ನಗರವೇ ಶ್ವೇತವರ್ಣದ ಪಟ್ಟಣವಾಗಿ ಮಾನ್ಯತೆ ಪಡೆಯುವಂತಾಗಿದೆ. ಫ್ರೆಂಚ್ ಮತ್ತು ಅರಬ್ ವಾಸ್ತುಶಿಲ್ಪ ಶೈಲಿಗಳನ್ನು ಆಧರಿಸಿಕೊಂಡು ಇಲ್ಲಿನ ಕಟ್ಟಡಗಳು ನಿರ್ಮಾಣಗೊಂಡಿವೆ. ಮೂಲತಃ ಅಲ್ಜೀರಿಯಾವು ಒಟ್ಟೋಮನ್ ಸಾಮ್ರಾಜ್ಯದ ಭಾಗವಾಗಿತ್ತು. ಆದರೆ ತನ್ನದೇ ಆದ ಆಡಳಿತವನ್ನು ಹೊಂದಿತ್ತು. ಆದರೆ 1830ರ ವೇಳೆಗೆ ಫ್ರಾನ್ಸ್ ಧಾಳಿಯಿಂದಾಗಿ ಇದು ಫ್ರೆಂಚ್ ಆಕ್ರಮಿತ ಪ್ರದೇಶ ಎನಿಸಿಕೊಂಡಿತು. ಫ್ರೆಂಚರು ಮೊದಲು ವಶಪಡಿಸಿಕೊಂಡದ್ದು ದೇಶದ ರಾಜಧಾನಿಯನ್ನು. ಹೀಗೆ ಅಲ್ಜೀರಿಯಾವನ್ನು ಕೈಮುಷ್ಟಿಯೊಳಗೆ ಸೇರಿಸಿಕೊಂಡ ಫ್ರಾನ್ಸ್ ದೀರ್ಘಕಾಲ ತನ್ನ ವಶದಲ್ಲಿಯೇ ಇಟ್ಟುಕೊಂಡಿತು. ಅಂತಿಮವಾಗಿ 1962ರ ಜುಲೈ 5ರಂದು ಫ್ರಾನ್ಸ್ ದೇಶವು ಅಲ್ಜೀರಿಯಾಕ್ಕೆ ಸ್ವಾತಂತ್ರ್ಯ ನೀಡಿತು. ಅಂದರೆ ಸುಮಾರು ನೂರಾ ಮೂವತ್ತೆರಡು ವರ್ಷಗಳಷ್ಟು ಕಾಲ ಅಲ್ಜೀರಿಯಾದ ಜನತೆ ಫ್ರೆಂಚರ ಹಿಡಿತದಲ್ಲಿದ್ದರು.

ಸ್ವಾತಂತ್ರ್ಯವನ್ನು ಪಡೆಯಬೇಕೆಂಬ ಅದಮ್ಯ ಬಯಕೆಯಿಂದ ಕೊನೆಯ ಎಂಟು ವರ್ಷಗಳಲ್ಲಿ ತೀವ್ರವಾದ ಹೋರಾಟವನ್ನು ಸಂಘಟಿಸಿದ್ದರು ಅಲ್ಜೀರಿಯನ್ನರು. ಈ ಹೋರಾಟದಲ್ಲಿ ಮಡಿದವರ ಸಂಖ್ಯೆ ನಾಲ್ಕು ಲಕ್ಷಗಳಿಗೂ ಹೆಚ್ಚು. ಈ ವಿಚಾರವನ್ನು ಫ್ರೆಂಚ್ ಇತಿಹಾಸಕಾರರೇ ಬಹಿರಂಗಪಡಿಸಿದ್ದಾರೆ. ಅಲ್ಜೀರಿಯಾದ ರಾಷ್ಟ್ರಗೀತೆಯಲ್ಲಿಯೂ ಸಹ ಅವರ ಸ್ವಾತಂತ್ರ್ಯ ಹೋರಾಟದ ಚಿತ್ರಣವಿದೆ. ಫ್ರೆಂಚರ ವಿರುದ್ಧದ ಸಂಘರ್ಷದ ರೀತಿಯನ್ನು ಈ ಗೀತೆಯಲ್ಲಿ ವರ್ಣಿಸಲಾಗಿದೆ. ಸ್ವಾತಂತ್ರ್ಯವನ್ನು ಪಡೆಯಬೇಕಾದರೆ ಸಶಸ್ತ್ರ ಹೋರಾಟವನ್ನು ಕೈಗೊಳ್ಳಲೇಬೇಕು ಎಂಬ ಆಶಯ ಈ ಗೀತೆಯಲ್ಲಿದೆ. ಇದನ್ನು ‘ಕಸ್ಸಾಮನ್’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಅಲ್ಜೀರಿಯಾದ ರಾಷ್ಟ್ರಧ್ವಜದ ವಿನ್ಯಾಸದಲ್ಲಿ ಇಸ್ಲಾಮಿಕ್ ಪ್ರಭಾವ ಇದೆ. ಸರ್ಕಾರದ ನಡಾವಳಿಗಳ ಮೇಲೂ ಸಹ ಇಸ್ಲಾಮಿಕ್ ಛಾಯೆ ಕಂಡುಬರುತ್ತದೆ. ಇಸ್ಲಾಮ್‌ಗೆ ಹೊರತುಪಡಿಸಿ ಬೇರೆ ಯಾವುದೇ ಧರ್ಮಗಳಿಗೆ ಮತಾಂತರ ಮಾಡುವಂತಿಲ್ಲ. ಇದು ಅಲ್ಜೀರಿಯಾದಲ್ಲಿರುವ ಕಾನೂನಾಗಿದೆ. ಅಲ್ಜೀರಿಯಾದ ನ್ಯಾಯಾಂಗ ವ್ಯವಸ್ಥೆಯನ್ನು ಸಂಮ್ಮಿಶ್ರಿತ ನ್ಯಾಯಾಂಗ ವ್ಯವಸ್ಥೆಯಾಗಿ ಗುರುತಿಸಬಹುದು. ಫ್ರೆಂಚ್ ನ್ಯಾಯಾಲಯ ಮಾದರಿಯನ್ನು ಒಳಗೊಂಡ ಈ ದೇಶದಲ್ಲಿ ಷರಿಯಾ ಕಾನೂನಿನ ಪರಿಪಾಲನೆಯಿದೆ. ವಸಾಹತುಶಾಹಿ ಕಾಲಘಟ್ಟದ ಪ್ರಭಾವದಿಂದಾಗಿ ಫ್ರೆಂಚ್ ನ್ಯಾಯಾಲಯ ಮಾದರಿ ರೂಪುಗೊಂಡಿದೆ. ದೇಶದ ಅಧಿಕೃತ ಧರ್ಮ ಎನಿಸಿಕೊಂಡಿರುವ ಇಸ್ಲಾಂ ಕಾರಣದಿಂದಾಗಿ ಷರಿಯಾ ಕಾನೂನು ಮುನ್ನೆಲೆಗೆ ಬಂದಿದೆ.

ಹತ್ತು ವರ್ಷಗಳ ಅಂತರ್ಯುದ್ಧವನ್ನು ಕಂಡಿದೆ ಅಲ್ಜೀರಿಯಾ ದೇಶ. ಈ ಯುದ್ಧ ಹೀನಾತಿಹೀನ ವಿದ್ಯಮಾನ ಎಂದು ಕರೆಸಿಕೊಂಡಿದೆ. ದೇಶ ಸ್ವಾತಂತ್ರ್ಯ ಪಡೆದ ಮೂವತ್ತು ವರ್ಷಗಳ ನಂತರ ನಡೆದ ಯುದ್ಧವಿದು. ಆ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಇಸ್ಲಾಮಿಸ್ಟ್ ಗುಂಪಿನವರು ಜಯ ಸಾಧಿಸಿದ್ದರು. ಆದರೆ ಇದನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಕೆರಳಿದ ಇಸ್ಲಾಮಿಸ್ಟ್ ಬಂಡುಕೋರರ ಗುಂಪು ಅಲ್ಜೀರಿಯನ್ ಸರ್ಕಾರದ ವಿರುದ್ಧ ಸಮರ ಸಾರಿತು. 1992ರ ಜನವರಿ 11ರಂದು ಆರಂಭಗೊಂಡ ಅಂತರ್ಯುದ್ಧ 2002ರ ಫೆಬ್ರವರಿ 8ರವರೆಗೂ ನಡೆಯಿತು. ಈ ಮಧ್ಯೆ 1994ರ ಅವಧಿಯಲ್ಲಿ ಸಂಘರ್ಷ ತೀವ್ರಗೊಂಡು ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳುವಂತಾಯಿತು. ನಾಗರಿಕರ ವಿರುದ್ಧ ಹಿಂಸಾಚಾರ ನಡೆಯಿತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನರು ಈ ಅಂತರ್ಯುದ್ಧದಿಂದಾಗಿ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.

ಅಲ್ಜೀರಿಯಾದಲ್ಲಿ ಇಂದು ನೆಲೆಸಿರುವ ಹೆಚ್ಚಿನವರು ಅರಬ್ ಮೂಲದವರು. ಅಮಾಜಿಗ್ ಜನಾಂಗದವರು ಇಲ್ಲಿ ಅಲ್ಪಸಂಖ್ಯಾತರು. ಇವರು ಅರಬ್ ಸಾಂಸ್ಕೃತಿಕ ಪರಂಪರೆಯ ಜೊತೆಗೆ ತಮ್ಮ ಸಾಂಸ್ಕೃತಿಕ ಪರಂಪರೆಗೆ ಒತ್ತು ನೀಡುತ್ತಾರೆ. ತಮ್ಮತನವನ್ನು ಕಾಯ್ದುಕೊಳ್ಳಬೇಕೆಂಬ ಭಾವನೆ ಇವರಲ್ಲಿ ಬಲವಾಗಿದೆ. ವಿಶೇಷವಾಗಿ ಭಾಷೆಯ ದೃಷ್ಟಿಯಿಂದ ಈ ಬಗೆಯ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಇಲ್ಲಿಯ ಸರ್ಕಾರವೂ ಸಹ ಇವರ ಮನೋಭಾವಕ್ಕನುಗುಣವಾಗಿ ಪ್ರತಿಸ್ಪಂದಿಸುವ ಆಸಕ್ತಿ ತೋರಿಸಿದೆ. ಅಮಾಜಿಗ್ ಭಾಷೆಗಳನ್ನು ಶಾಲೆಗಳಲ್ಲಿ ಕಲಿಸುವುದರ ಕಡೆಗೆ ಒಲವು ತೋರುತ್ತಿದೆ. ಅಲ್ಜೀರಿಯಾದಲ್ಲಿ ಅರೇಬಿಕ್ ಭಾಷೆಯ ಬಳಕೆ ವ್ಯಾಪಕವಾಗಿದೆ. ಜೊತೆಗೆ ಫ್ರೆಂಚ್, ಬರ್ಬರ್ ಮಾತನಾಡುವ ಜನರೂ ಇದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಸಲಾಗುತ್ತಿದೆ. ಆದರೆ ವ್ಯವಹಾರದ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಗೆ ಏನೇನೂ ಪ್ರಾಮುಖ್ಯತೆ ಇಲ್ಲ.

ಅಲ್ಜೀರಿಯಾದ ಹೆಚ್ಚಿನ ಜನರು ಮೆಡಿಟರೇನಿಯನ್ ಕರಾವಳಿಯಲ್ಲಿ ಬದುಕುತ್ತಿದ್ದಾರೆ. ಇನ್ನೂ ಕೆಲವರು ದೇಶದ ಉತ್ತರ ಭಾಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇಲ್ಲಿಯ ಎಂಭತ್ತು ಶೇಕಡಾದಷ್ಟು ಭೂಮಿಯು ಮರಳಿನಿಂದ ಆವೃತವಾಗಿದೆ. ಹನ್ನೆರಡು ಶೇಕಡಾದಷ್ಟು ಜನರು ಮಾತ್ರವೇ ಒಳನಾಡಿನಲ್ಲಿ ಬದುಕುತ್ತಿದ್ದಾರೆ. ಉತ್ತರ ಭಾಗವು ಬೇಸಿಗೆ ಮತ್ತು ಮಳೆಯ ವಾತಾವರಣವನ್ನು ಪ್ರಧಾನವಾಗಿ ಹೊಂದಿದೆ. ದಕ್ಷಿಣ ಭಾಗವು ಶುಷ್ಕವಾಗಿದೆ.

ನೈಸರ್ಗಿಕ ಅನಿಲದ ಉತ್ಪಾದನೆ ಮತ್ತು ಮಾರಾಟ ಕ್ಷೇತ್ರದ ಬಹುದೊಡ್ಡ ಶಕ್ತಿ ಎನಿಸಿಕೊಂಡಿದೆ ಅಲ್ಜೀರಿಯಾ. ವಿಶ್ವದ ಹತ್ತನೇ ಅತೀ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪ ಇರುವುದು ಅಲ್ಜೀರಿಯಾದಲ್ಲಿ. ನೈಸರ್ಗಿಕ ಅನಿಲವನ್ನು ಅತ್ಯಧಿಕ ಪ್ರಮಾಣದಲ್ಲಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಇದಕ್ಕೆ ಆರನೇ ಸ್ಥಾನ. ನೈಸರ್ಗಿಕ ಅನಿಲದಿಂದಲೇ ಬಹುದೊಡ್ಡ ಆದಾಯವನ್ನು ಗಳಿಸುತ್ತಿದೆ ಈ ದೇಶ. 2019ನೇ ಇಸವಿಯಲ್ಲಿ ಇಲ್ಲಿನ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸಬ್ಸಿಡಿ ನೀಡಿತ್ತು. ಇದರಿಂದಾಗಿ ಅತೀ ಕಡಿಮೆ ದರಕ್ಕೆ ಪೆಟ್ರೋಲ್ ನೀಡುವ ವಿಶ್ವದ ಐದನೇ ರಾಷ್ಟ್ರ ಎಂಬ ಗುರುತಿಸುವಿಕೆಗೆ ಒಳಗಾಗಿತ್ತು ಅಲ್ಜೀರಿಯಾ. ಹೀಗೆ ನೈಸರ್ಗಿಕ ಅನಿಲದ ದಿಶೆಯಿಂದ ಅಪಾರ ಪ್ರಮಾಣದ ಲಾಭವನ್ನು ದೇಶ ಗಳಿಸುತ್ತಿದೆ. ಬೇರೆ ರಾಷ್ಟ್ರಗಳ ಜೊತೆಗೆ ಹೆಚ್ಚೇನೂ ಸಾಲ ಮಾಡಿಕೊಂಡಿಲ್ಲ. ಆದರೂ ಸಹ ಇಲ್ಲಿಯ ಜನರು ಬಡತನದ ಬದುಕನ್ನೇ ನಡೆಸುತ್ತಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಇಪ್ಪತ್ತೈದು ಶೇಕಡಾದಷ್ಟು ಜನರ ದಿನನಿತ್ಯದ ಆದಾಯ ಒಂದು ಡಾಲರನ್ನು ದಾಟುವುದಿಲ್ಲ.

ವಾಯುವ್ಯ ಆಫ್ರಿಕನ್ ಚಿರತೆ ಎಂದು ಕರೆಯಲ್ಪಡುವ ಸಹಾರನ್ ಚಿರತೆಯು ತೀವ್ರವಾಗಿ ಅಳಿವಿನಂಚಿನಲ್ಲಿರುವ ಜೀವ ಪ್ರಭೇದವಾಗಿದೆ. ಇಡಿಯ ಪ್ರಪಂಚದಲ್ಲಿ ಈಗ ಈ ಚಿರತೆಗಳ ಸಂಖ್ಯೆ ಐನೂರಕ್ಕಿಂತ ಹೆಚ್ಚೇನೂ ಇಲ್ಲ. ಇವುಗಳಲ್ಲಿ ಹೆಚ್ಚಿನ ಚಿರತೆಗಳು ಅಲ್ಜೀರಿಯಾದಲ್ಲಿ ಕಂಡುಬರುತ್ತವೆ. ಸಹಾರಾ ಮರುಭೂಮಿಯೇ ಈ ಚಿರತೆಗಳಿಗೆ ಪ್ರಮುಖ ನೆಲೆಯಾಗಿರುವ ಕಾರಣ ಸಹಾರಾ ಮರುಭೂಮಿ ಇರುವ ಅಲ್ಜೀರಿಯಾದಲ್ಲಿ ಈ ಚಿರತೆಗಳು ಉಳಿದುಕೊಂಡಿವೆ. ಅಲ್ಜೀರಿಯಾದ ಒಂಟೆಗಳು ಐತಿಹಾಸಿಕ ಪ್ರಾಮುಖ್ಯತೆ ಪಡೆದುಕೊಂಡಿವೆ. ಫ್ರೆಂಚ್ ಆಳ್ವಿಕೆ ಇದ್ದ ಸಮಯದಲ್ಲಿ ಫ್ರೆಂಚ್ ಸೇನೆಯಲ್ಲಿ ಅಲ್ಜೀರಿಯಾದ ಒಂಟೆಗಳನ್ನು ಬಳಸಲಾಗುತ್ತಿತ್ತು. ಈ ಒಂಟೆದಳವನ್ನು ಮೆಹರಿಸ್ಟೆ ಎಂದು ಕರೆಯಲಾಗುತ್ತಿತ್ತು. ಅಲ್ಜೀರಿಯಾದ ಅಲೆಮಾರಿ ಬುಡಕಟ್ಟು ಜನಾಂಗದವರಿಂದ ಈ ಒಂಟೆಗಳನ್ನು ಸೈನ್ಯದಲ್ಲಿ ಸೇರಿಸಿಕೊಳ್ಳಲಾಯಿತು. ಸಹಾರಾ ಮರುಭೂಮಿಯುದ್ದಕ್ಕೂ ಗಸ್ತು ತಿರುಗುವ ಹೊಣೆಗಾರಿಕೆ ಈ ಒಂಟೆದಳಗಳದ್ದಾಗಿತ್ತು. ಅಲ್ಜೀರಿಯಾದ ಈ ಒಂಟೆದಳಗಳು ಎರಡನೇ ಮಹಾಯುದ್ಧದಲ್ಲಿಯೂ ಭಾಗವಹಿಸಿದ್ದವು. ಅಲ್ಜೀರಿಯಾಕ್ಕೆ ಸ್ವಾತಂತ್ರ್ಯ ದೊರೆತ ನಂತರ ಹೊಸದಾಗಿ ಬಂದ ಸರ್ಕಾರವು ಈ ದಳಗಳನ್ನು ವಿಸರ್ಜಿಸಿತು.

ಅಲ್ಜೀರಿಯಾದ ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡ ಫೆನ್ನೆಕ್ ಫಾಕ್ಸ್ ತನ್ನ ಚಿಕ್ಕ ಗಾತ್ರದಿಂದ ಹೆಸರುವಾಸಿಯಾಗಿದೆ. ವಿಶ್ವದಲ್ಲಿಯೇ ಅತೀ ಚಿಕ್ಕದಾದ ಕೋರೆಹಲ್ಲು ಇರುವುದು ಈ ಪ್ರಾಣಿಗೆ. ಇದರ ಕಿವಿಯೂ ಸಹ ತೀರಾ ಚಿಕ್ಕದಾಗಿದೆ. ದೀರ್ಘ ಸಮಯ ನೀರಿಲ್ಲದೆ ಬದುಕುವುದು ಇದರ ಬಹುದೊಡ್ಡ ಶಕ್ತಿಯಾಗಿದೆ. ಈ ಜೀವಿಗೆ ಗುರುತಿಸುವಿಕೆಯನ್ನು ನೀಡುವ ಕಾರಣಕ್ಕಾಗಿಯೇ ಅಲ್ಜೀರಿಯಾದ ಫುಟ್‌ಬಾಲ್ ತಂಡವನ್ನು ‘ಲೆಸ್ ಫೆನ್ನೆಕ್ಸ್’ ಎಂದು ಗುರುತಿಸಲಾಗುತ್ತದೆ. ಅಲ್ಜೀರಿಯಾದಲ್ಲಿ ಪ್ರಮುಖವಾಗಿ ಖರ್ಜೂರವನ್ನು ಬೆಳೆಸಲಾಗುತ್ತದೆ. ಇದನ್ನು ‘ಖರ್ಜೂರದ ಭೂಮಿ’ ಎಂದೇ ಕರೆಯಲಾಗುತ್ತದೆ. ಖರ್ಜೂರವನ್ನು ಅತೀ ಹೆಚ್ಚು ಬೆಳೆಯುವ ರಾಷ್ಟ್ರಗಳ ಪೈಕಿ ಹತ್ತನೆಯ ಸ್ಥಾನ ಅಲ್ಜೀರಿಯಾಕ್ಕೆ. ಇಲ್ಲಿಯ ಜನರು ಖರ್ಜೂರವನ್ನು ಇಷ್ಟಪಟ್ಟು ತಿನ್ನುತ್ತಾರೆ. ಅಲ್ಜೀರಿಯಾದಲ್ಲಿ ಬೆಳೆಯುವ ಖರ್ಜೂರಗಳ ವಿಶೇಷತೆಯೆಂದರೆ ಅವುಗಳ ಸುವಾಸನೆ. ಉತ್ತಮ ಗುಣಮಟ್ಟದಿಂದ ಕೂಡಿರುತ್ತವೆ. ಈ ದೇಶಕ್ಕೆ ಬಂದವರನ್ನು ಖರ್ಜೂರ ಮತ್ತು ಹಾಲನ್ನು ನೀಡಿ ಸ್ವಾಗತಿಸುವ ಪದ್ಧತಿಯಿದೆ. ಖರ್ಜೂರ ಇಲ್ಲಿಯ ಸಂಸ್ಕೃತಿಯಲ್ಲಿ ಬೆರೆತುಹೋಗಿದೆ. ಮರುಭೂಮಿಯಿಂದ ಕೂಡಿರುವ ನಾಡಾದ ಅಲ್ಜೀರಿಯಾವು ಖರ್ಜೂರದ ಬೆಳೆಗೆ ಪ್ರಾಮುಖ್ಯತೆ ನೀಡಿರುವುದು ಸಹಜ ಸಂಗತಿಯಾಗಿದೆ. ಅಲ್ಜೀರಿಯಾದ ಹವಾಮಾನವು ಉಳಿದ ಬೆಳೆಗಳಿಗೂ ಪೂರಕವಾಗಿದೆ. ಕರಾವಳಿ ಪ್ರದೇಶಗಳಲ್ಲಿ ಸಿಟ್ರಸ್, ಗೋಧಿ ಮೊದಲಾದವುಗಳನ್ನು ಬೆಳೆಯಲಾಗುತ್ತದೆ.

ಕೆಲವು ಪ್ರಮುಖ ಪರಿಸರ ಸಮಸ್ಯೆಗಳನ್ನು ಅಲ್ಜೀರಿಯಾದಲ್ಲಿ ಕಾಣಬಹುದು. ತೀರಾ ಸಾಂಪ್ರದಾಯಿಕವಾದ ಕೃಷಿ ಪದ್ಧತಿಯನ್ನೇ ಇನ್ನೂ ಅನುಸರಿಸಲಾಗುತ್ತಿದೆ. ದನ ಕರುಗಳನ್ನು ಅತಿಯಾಗಿ ಮೇಯಿಸಲಾಗುತ್ತಿದೆ. ಇದರಿಂದ ಮಣ್ಣಿನ ಸವೆತ ಉಂಟಾಗುತ್ತಿದೆ. ಪರಿಸರ ಮಲಿನಗೊಳ್ಳುತ್ತಿರುವುದು ಇನ್ನೊಂದು ಬಹುಪ್ರಮುಖ ಸಮಸ್ಯೆ. ಮುಖ್ಯವಾಗಿ ಜಲಮಾಲಿನ್ಯದ ಸಮಸ್ಯೆಯಿದೆ. ಪೆಟ್ರೋಲಿಯಂ ಸಂಸ್ಕರಣಾ ತ್ಯಾಜ್ಯಗಳು, ಕಚ್ಚಾ ಕೊಳಚೆ ನೀರು, ಕೈಗಾರಿಕಾ ತ್ಯಾಜ್ಯಗಳು ಮೊದಲಾದವುಗಳು ನೀರಿನ ಮೂಲಗಳನ್ನು ಸೇರಿಕೊಳ್ಳುತ್ತಿವೆ. ಎತ್ತರದ ಅಟ್ಲಾಸ್ ಪರ್ವತಗಳಿಂದಾಗಿ ಮತ್ತು ವಿಶಾಲವಾದ ಸಹಾರಾ ಮರುಭೂಮಿಗಳಿಂದಾಗಿ ಹವಾಮಾನದ ಮೇಲೆ ಕೆಟ್ಟ ಪರಿಣಾಮ ಆಗುತ್ತಿದೆ. ಮಳೆ ನೆರಳು ಪರಿಣಾಮ ಉಂಟಾಗುತ್ತಿದೆ. ವಿದ್ಯುತ್ ಮತ್ತು ಇಂಧನ ಉತ್ಪಾದನೆಯ ಕಾರಣಕ್ಕಾಗಿ ನಡೆಯುವ ಚಟುವಟಿಕೆಗಳಿಂದಾಗಿ ಪರಿಸರಕ್ಕೆ ತೀರಾ ಮಾರಕವಾದ ಹಸಿರುಮನೆ ಅನಿಲಗಳು ಹೊರಸೂಸುತ್ತಿವೆ.

ಅಲ್ಜೀರಿಯಾದ ರಾಜಧಾನಿಯಾದ ಅಲ್ಜೀರ್ಸ್ ನಗರದಲ್ಲಿ ದ ಜಾಮಾ ಎಲ್ ದ ಜಝೈರ್ ಹೆಸರಿನ ಬೃಹತ್ ಮಸೀದಿಯಿದೆ. ಇದು ಮಹಾ ಮಸೀದಿ ಎಂದು ಪ್ರಖ್ಯಾತವಾಗಿದೆ. ಸುಮಾರು 270 ಮೀಟರ್‌ಗಳಷ್ಟು ಎತ್ತರದ ಮಿನಾರ್ ಈ ಮಸೀದಿಗಿದ್ದು, ವಿಶ್ವದ ಅತೀ ಎತ್ತರದ ಮಿನಾರ್ ಎನಿಸಿಕೊಂಡಿದೆ. ವಿಶ್ವದ ಅತೀ ದೊಡ್ಡ ಮಸೀದಿಗಳ ಪಟ್ಟಿಯಲ್ಲಿ ಮೆಕ್ಕಾ ಮತ್ತು ಮದೀನಾದಲ್ಲಿರುವ ಮಸೀದಿಗಳ ನಂತರದ ಸ್ಥಾನ ಅಲ್ಜೀರಿಯಾದಲ್ಲಿರುವ ಮಸೀದಿಯದ್ದಾಗಿದೆ. ಅಲ್ಜೀರಿಯಾದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಏಳು. ಬೆನಿ ಹಮ್ಮದ್ ಅಲ್ ಕ್ವಾಲಾ ನಗರ, ತಸ್ಸಿಲಿ ಎನ್ ಅಜ್ಜರ್ ಹೆಸರಿನ ಮರಳುಗಲ್ಲಿನ ಪ್ರಸ್ಥಭೂಮಿ, ಒ ಝ಼ಬ್ ಕಣಿವೆ, ಡಿಜೆಮಿಲಾ ನಗರ, ತಿಪಾಸಾ ಹೆಸರಿನ ಬಂದರು, ಟಿಮ್‌ಗಡ್ ನಗರ ಮತ್ತು ಅಲ್ಜೀರ್ಸ್ ಕಸ್ಬಾ ಕೋಟೆ ಇವುಗಳು ವಿಶ್ವ ಪರಂಪರೆಯ ತಾಣಗಳು ಎನಿಸಿಕೊಂಡಿವೆ.

ಅಲ್ಜೀರಿಯನ್ ಆಹಾರ ಪದ್ಧತಿಯು ಬೇರೆ ಬೇರೆ ರಾಷ್ಟ್ರಗಳ ಪ್ರಭಾವಕ್ಕೆ ಒಳಗಾಗಿದೆ. ಆಹಾರ ಧಾನ್ಯಗಳು ಇಲ್ಲಿನ ಜನರಿಗೆ ಪರಿಚಯವಾದುದರ ಹಿನ್ನೆಲೆಯಲ್ಲಿ ಬೇರೆ ರಾಷ್ಟ್ರಗಳ ಪಾತ್ರವಿದೆ. ಬಾರ್ಲಿಯನ್ನು ಪರಿಚಯಿಸಿದವರು ರೋಮನ್ನರು. ಅಮೇರಿಕಾ ಜೊತೆಗಿನ ವ್ಯಾಪಾರದಿಂದಾಗಿ ಅಲ್ಜೀರಿಯಾವು ಆಲೂಗಡ್ಡೆ, ಚೀನೀಕಾಯಿ, ಮೆಣಸಿನಕಾಯಿ, ಟೊಮ್ಯಾಟೋ ಮೊದಲಾದ ತರಕಾರಿಗಳ ಬಗೆಗೆ ತಿಳುವಳಿಕೆ ಗಳಿಸಿಕೊಂಡಿತು. ಮಸಾಲೆ ಪದಾರ್ಥಗಳಾದ ಶುಂಠಿ, ದಾಲ್ಚಿನ್ನಿ, ಲವಂಗ, ಕೇಸರಿ, ಜಾಯಿಕಾಯಿ ಇವುಗಳು ಪರಿಚಯವಾದದ್ದು ಅರಬ್ಬರಿಂದ. ಆಲೀವ್ ಎಣ್ಣೆ, ಕಿತ್ತಳೆ ಇವುಗಳ ಬಗೆಗೆ ಅರಿತುಕೊಂಡದ್ದು ಸ್ಪೇನ್‌ನವರಿಂದ. ದಾರಿಮಧ್ಯೆ ಕೆಫೆಗಳನ್ನು ನಿರ್ಮಿಸುವ ರೀತಿಯನ್ನು ಕಲಿಸಿದ ಫ್ರೆಂಚರು ಉದ್ದವಾದ ಬ್ರೆಡ್ ತಯಾರಿಸುವ ವಿಧಾನವನ್ನೂ ಅಲ್ಜೀರಿಯನ್ನರಿಗೆ ಪರಿಚಯಿಸಿಕೊಟ್ಟರು. ಗೋಧಿ ಕೃಷಿ ಪರಿಚಯವಾದದ್ದು ಬರ್ಬರ್‌ಗಳ ಮೂಲಕ. ಅಲ್ಜೀರಿಯಾದ ರಾಷ್ಟ್ರೀಯ ಖಾದ್ಯ ಎನಿಸಿಕೊಂಡ ಕೂಸ್ ಕೂಸ್ ತಯಾರಾದದ್ದೂ ಸಹ ಬರ್ಬರ್‌ಗಳಿಂದಲೇ. ಗೋಧಿಯಿಂದ ಮಾಡುವ ಈ ಭಕ್ಷ್ಯವನ್ನು ಮಾಂಸ, ತರಕಾರಿಗಳ ಜೊತೆಗೆ ಸೇರಿಸಿ ಬಡಿಸಲಾಗುತ್ತದೆ. ಬೇಯಿಸಿದ ಮೊಟ್ಟೆಗಳ ಜೊತೆಗೆ ಟೊಮ್ಯಾಟೋ, ಈರುಳ್ಳಿ ಮತ್ತು ಮೆಣಸುಗಳ ಮಸಾಲೆಯನ್ನು ಒಳಗೊಂಡ ಖಾದ್ಯವನ್ನು ಚಕ್ಚೌಕಾ ಎಂದು ಕರೆಯಲಾಗುತ್ತದೆ. ಕುರಿ ಅಥವಾ ದನದ ಮಾಂಸಕ್ಕೆ ಮಸಾಲೆ ಸೇರಿಸಿ ತಯಾರಿಸಿದ ಮೆರ್ಗೆಜ್ ಖಾದ್ಯವು ಅಲ್ಜೀರಿಯನ್ನರಿಗೆ ನೆಚ್ಚಿನ ಆಹಾರವಾಗಿದೆ. ಟೊಮ್ಯಾಟೋ, ಕಡಲೆಯ ಜೊತೆಗೆ ಕುರಿಮರಿಯ ಮಾಂಸವನ್ನು ಸೇರಿಸಿ ತಯಾರಿಸಿದ ಸಾಂಪ್ರದಾಯಿಕ ಸೂಪ್‌ಗೆ ಹರಿರಾ ಎನ್ನುವ ಹೆಸರಿದೆ. ಮಕ್ರೌಡ್ ಎನ್ನುವ ಭಕ್ಷ್ಯವನ್ನು ಖರ್ಜೂರ ಮತ್ತು ಗೋಡಂಬಿಗಳಿಂದ ತುಂಬಿದ ರವೆ ಪೇಸ್ಟ್ರಿಯನ್ನು ಜೇನುತುಪ್ಪದಲ್ಲಿ ನೆನೆಸಿ ತಯಾರಿಸಲಾಗುತ್ತದೆ. ಮಸಾಲೆ ಸವರಿದ ಕುರಿಮರಿಯ ಮಾಂಸವನ್ನು ಬೆಣ್ಣೆಯಲ್ಲಿ ಸಂಪೂರ್ಣವಾಗಿ ಹುರಿದರೆ ಮೆಚೌಯಿ ಎಂಬ ಭಕ್ಷ್ಯ ತಯಾರಾಗುತ್ತದೆ. ಎಟ್ಜೈ ಎನ್ನುವುದು ಪುದೀನಾದಿಂದ ಮಾಡಿದ ಚಹಾ ಆಗಿದ್ದು, ಅಲ್ಜೀರಿಯಾದ ಬಹುತೇಕರಿಗೆ ಮೆಚ್ಚಿನ ಪಾನೀಯವಾಗಿದೆ. ಇದನ್ನು ಉಡುಗೊರೆಯಾಗಿಯೂ ಕೊಡುವ ಕ್ರಮವಿದೆ.

ಅಲ್ಜೀರಿಯಾದ ಜನರು ಫುಟ್‌ಬಾಲ್, ವಾಲಿಬಾಲ್ ಕ್ರೀಡೆಗಳ ಬಗ್ಗೆ ಹೆಚ್ಚು ಒಲವನ್ನು ಇಟ್ಟುಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ವರ್ಷಗಳಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಇಲ್ಲಿಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಬಾಕ್ಸಿಂಗ್‌ನಲ್ಲಿ ಸಾಧನೆ ಮೆರೆದಿದ್ದಾರೆ. ಸಾವಿರದೈನೂರು ಮೀಟರ್‌ಗಳ ಓಟದ ಸ್ಪರ್ಧೆಯಲ್ಲಿ ಅಲ್ಜೀರಿಯಾದ ಅಥ್ಲೀಟ್‌ಗಳ ಸಾಧನೆ ಮೆಚ್ಚುವಂಥದ್ದಾಗಿದೆ. ಹಲವು ಸಲ ಗೆಲುವಿನ ಮಾಲೆಯನ್ನು ಕೊರಳಿಗೇರಿಸಿಕೊಂಡಿದ್ದಾರೆ.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ