Advertisement
ಕನಸಿನಲ್ಲೂ ಬಯಸದ ಒಂದು ಭೀಕರ ಅಪಘಾತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕನಸಿನಲ್ಲೂ ಬಯಸದ ಒಂದು ಭೀಕರ ಅಪಘಾತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮೊದಲನೇ ಹಂತದಲ್ಲಿ ಅದಿರು ದೊರಕಲಿಲ್ಲವೆಂದರೆ ಎರಡನೇ ಹಂತಕ್ಕೆ ಅಂದರೆ ಮತ್ತೆ ನೂರು ಅಡಿಗಳ ಆಳಕ್ಕೆ ಇಳಿದು ಅಲ್ಲಿನ ಸುರಂಗಗಳಲ್ಲಿ ನಡೆದುಹೋಗಿ ಚಿನ್ನದ ಅದಿರಿನ ಕಲ್ಲುಗಳನ್ನು ಹುಡುಕಿ ಹೊಡೆದು ತರಬೇಕಾಗಿತ್ತು. ಸುರಂಗಗಳಲ್ಲಿ ಗಾಳಿ ತೀರಾ ಕಡಿಮೆ ಇದ್ದು ಸಂಪೂರ್ಣವಾಗಿ ಕತ್ತಲೇ ತುಂಬಿಕೊಂಡಿರುತ್ತದೆ. ಸುರಂಗಗಳಲ್ಲಿ ಹಳ್ಳ-ಕೊಳ್ಳ ಕೆಸರು ನೀರು ಕಲ್ಲು-ಮಣ್ಣು ಕಲ್ಲುಬಂಡೆಗಳು ಎಲ್ಲವನ್ನೂ ದಾಟಿ ಹೋಗಬೇಕಾಗುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

ಅಧ್ಯಾಯ – 11

ಕಾರ್ತಿಕ್ ಮತ್ತು ಆತನ ಗೆಳೆಯರು ಕೆಲವರು ಒಂದು ಭಾನುವಾರ ನಿಶ್ಯಬ್ದ ರಾತ್ರಿಯಲ್ಲಿ ಕಮ್ಯೂನಿಟಿ ಹಾಲ್ ಮುಂದಿದ್ದ ಮೈದಾನದಲ್ಲಿ ಚಾಪೆಗಳನ್ನು ಹಾಸಿಕೊಂಡು ಕಿವಿಗಳನ್ನು ನೆಲಕ್ಕಿಟ್ಟು ಏನೋ ಆಲಿಸುತ್ತಿದ್ದರು. ಮಧ್ಯೆ ಮಧ್ಯೆ ನಾಲ್ಕಾರು ಕಡೆಗೆ ಮೈದಾನದಲ್ಲಿ ಚಾಪೆಗಳನ್ನ ಆಗಾಗ ತಳ್ಳಿಕೊಂಡೋಗಿ ಕಿವಿಗಳನ್ನು ನೆಲಕ್ಕಿಟ್ಟು ಆಲಿಸಿದ ಮೇಲೆ ರಾತ್ರಿ ಸುಮಾರು ಒಂದು ಗಂಟೆಗೆ ಕಾರ್ತಿಕ್ “ಏಯ್… ಏಯ್… ಎಲ್ಲರೂ ಇಲ್ಲಿ ಬನ್ನಿ” ಎಂದು ಕೂಗಿಕೊಂಡ. ಎಲ್ಲರೂ ಆ ಕಡೆಗೆ ಓಡಿಬಂದರು.

ಒಬ್ಬೊಬ್ಬರೇ ಅಲ್ಲಿ ಚಾಪೆ ಹಾಸಿ ಮಲಗಿಕೊಂಡು ನೆಲಕ್ಕೆ ಕಿವಿ ಇಟ್ಟು ಸಾವಧಾನವಾಗಿ ಆಲಿಸಿದರು. ಅದೇ ಸ್ಥಳದಲ್ಲಿ ಇನ್ನೂ ಇಬ್ಬರು ಮೂವರು ಹುಡುಗರು ಚಾಪೆಗಳನ್ನು ತೆಗೆದುಕೊಂಡು ಬಂದು ನೆಲದ ಮೇಲೆ ಹತ್ತಿರತ್ತಿರ ಹಾಸಿಕೊಂಡು ಆಲಿಸತೊಡಗಿದರು. ಕೆಳಗೆ ಎಲ್ಲೋ ಆಳದಲ್ಲಿ ಅತಳ ವಿತಳ ಪಾಥಾಳದಲ್ಲಿ ನೀರು ತೊಟ್ಟಿಕ್ಕುವ ಸದ್ದು ಪಟ್.. ಪಟ್.. ಎಂದು ಕೇಳಿಸುತ್ತಿದೆ. ಅದು ಅವರಿಗೆ ಪುಳಕಗೊಳ್ಳುವ ವಿಷಯವಾಗಿತ್ತು. ನೆಲದ ಮೇಲಿನಿಂದ ಮಣ್ಣು, ನಂತರ ಶಿಲೆಗಳ ಬಿರುಕುಗಳ ಮೂಲಕ ಇಂಗುವ ನೀರು ತೊಟ್ಟಿಕ್ಕುತ್ತ ಕೆಳಗೆ ಗಣಿಗಳ ಒಳಗೆ ಆಳದಲ್ಲಿ ನಿಂತಿರುವ ನೀರಿನ ಮೇಲೆ ಬೀಳುವ ಸದ್ದು ಹೊರಗೆ ಹೋಗಲು ಸ್ಥಳವಿಲ್ಲದೆ ಅದು ಜೋರಾಗಿ ಮೇಲಕ್ಕೆ ಪ್ರತಿಧ್ವನಿಸುತ್ತಿತ್ತು.

ಇದೇ ರೀತಿಯ ಅನುಭವ ಅನೇಕ ಕಾಲೋನಿಗಳಲ್ಲಿ ನಿಶ್ಯಬ್ದ ರಾತ್ರಿಗಳಲ್ಲಿ ಕೇಳಿಸುತ್ತಿತ್ತು. ಅದು ಮೇಲಿನಿಂದ ನೆಲದಲ್ಲಿ ಇಂಗುವ ನೀರು. ಆಳದಲ್ಲಿ ಸುರಂಗಗಳಲ್ಲಿ, ಶ್ಯಾಫ್ಟ್ ಮತ್ತು ಸಿಂಕ್‌ಗಳಲ್ಲಿ ತುಂಬಿಕೊಂಡಿರುವ ನೀರಿನ ಮೇಲೆ ಬೀಳುವ ಸದ್ದಾಗಿತ್ತು. ತೊಟ್ಟಿಕ್ಕುವ ಆ ನೀರಿನ ತೊಟ್ಟುಗಳು ಗುರುತ್ವಾಕರ್ಷಣೆಯಿಂದ ಆಳಕ್ಕೆ ಬೀಳುವಾಗ ಹೆಚ್ಚು ವೇಗವನ್ನು ಪಡೆದುಕೊಳ್ಳುತ್ತಿದ್ದವು. ಶ್ಯಾಫ್ಟ್‌ಗಳ ಮೇಲಿಂದ ಎರಡು ಕಿ.ಮೀ.ಗಳ ಆಳಕ್ಕೆ ಬೀಳುವ ನೀರಿನ ತೊಟ್ಟುಗಳು ಎಷ್ಟು ವೇಗವನ್ನು ಪಡೆದುಕೊಳ್ಳುತ್ತವೆ ಎಂದರೆ, ಅವು ತೊಟ್ಟಿಕ್ಕುವ ಸದ್ದು ನೆಲದ ಮೇಲೆ ನಿಂತಿರುವ ಕಾರ್ಮಿಕರಿಗೂ ಕೆಲವೊಮ್ಮೆ ಕೇಳಿಸುತ್ತಿತ್ತು.

ನೀರು ತೊಟ್ಟಿಕ್ಕುವ ಸದ್ದು ಹೊರಗೆ ಹೋಗಲು ಬೇರೆ ದಾರಿ ಇಲ್ಲದೆ ಅದು ಪ್ರತಿಧ್ವನಿಯಾಗಿ ಹಿಂದಕ್ಕೆ ಬರುತ್ತಿತ್ತು. ನೀರಿನ ತೊಟ್ಟುಗಳು ಬೀಳುವ ಸದ್ದು ಒಂದು ದೊಡ್ಡ ಪೈಪಿನ ಮೂಲಕ ಕೂಗುವಂತೆ ಮರುಧ್ವನಿಸುತ್ತಿದ್ದವು. ಕೆಲವು ಸಲ ನೀರಿನ ತೊಟ್ಟುಗಳು ಮೇಲಿನಿಂದ ಆಳದಲ್ಲಿ ಕೆಳಗೆ ನಿಂತಿರುವ ಕಾರ್ಮಿಕರ ಕಣ್ಣುಗಳ ಮೇಲೆ ಬಿದ್ದು ಕಣ್ಣೋಟ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಮಕ್ಕಳಿಗೆ ಮತ್ತು ಯುವಕರಿಗೆ ಇದೊಂದು ಆಟವಾಗಿ ತೋರುತ್ತಿದ್ದರೂ ಅದು ಆಳದ ಗಣಿಗಳ ಒಳಗಿನ ಒಂದು ವಿಚಿತ್ರ ಕಥೆಯನ್ನು ಹೇಳುತ್ತಿತ್ತು. ಇದರ ಮೇಲೆ ಹುಡುಗರು ಬೆಟ್ಟಿಂಗ್ ಕೂಡ ಕಟ್ಟುತ್ತಿದ್ದರು. ಯಾರು ಮೊದಲಿಗೆ ಸದ್ದು ಬರುವುದನ್ನು ಹುಡುಕುತ್ತಿದ್ದರೊ ಅವರಿಗೆ ಹಣ.

ಕಾಲೋನಿಗಳಲ್ಲಿ ಇರುವ ಕಮ್ಯೂನಿಟಿ ಹಾಲ್‌ಗಳಲ್ಲಿ ರಾತ್ರಿ ಅಲ್ಲೇ ಓದಿಕೊಂಡು ಮಲಗಿಕೊಳ್ಳುವ ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಕಮ್ಯೂನಿಟಿ ಹಾಲ್‌ಗಳಲ್ಲಿ ಮಲಗಲು ಅವಕಾಶ ನೀಡಲಾಗಿತ್ತು. ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಪದವೀದರರು ಉಚಿತವಾಗಿ ಟ್ಯೂಷನ್ ಹೇಳಿಕೊಟ್ಟು ಮನೆಗಳಿಗೆ ಕಳುಹಿಸಿಬಿಡುತ್ತಿದ್ದರು. ಕಮ್ಯೂನಿಟಿ ಹಾಲ್ ಮತ್ತು ಕ್ಲಬ್ಬುಗಳನ್ನು ನೋಡಿಕೊಳ್ಳಲು ಕೆಲವು ಸಮಿತಿಗಳಿದ್ದು ಅವರು ರಾತ್ರಿಹೊತ್ತು ಬಂದು ವಿದ್ಯಾರ್ಥಿಗಳು ಏನಾದರು ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವರೇ ಎನ್ನುವುದನ್ನು ಗಮನಿಸುತ್ತಿದ್ದರು. ಹಾಗೇನಾದರೂ ಮಾಡಿದರೆ ಅವರ ಪೋಷಕರಿಗೆ ತಿಳಿಸಿ ಕ್ರಮ ತೆಗೆದುಕೊಳ್ಳುತ್ತಿದ್ದರು.

ಆದರೆ ಕೆಲವು ಹುಡುಗರು ರಾತ್ರಿ 11 ಗಂಟೆಯಾದ ಮೇಲೆ ಕಮ್ಯೂನಿಟಿ ಹಾಲ್ ಹಿಂದುಗಡೆ, ಇಲ್ಲ ಮೈದಾನದ ಅಂಚಿನಲ್ಲಿದ್ದ ಮರಗಿಡಗಳ ಕೆಳಗೆ ಕುಳಿತುಕೊಂಡು ಬೀಡಿ, ಸಿಗರೇಟ್ ಸೇದುವುದು ಮತ್ತು ಕೆಲವು ತರಲೇ ಹುಡುಗರು ಕಳ್ಳತನವಾಗಿ ಕುಡಿಯುತ್ತಿದ್ದರೂ ಕೂಡ. ಈ ರೌಡಿ ಹುಡುಗರನ್ನು ಇತರ ಹುಡುಗರು ಎದುರಾಕಿಕೊಳ್ಳಲು ಸಾಧ್ಯವಿಲ್ಲದೆ ಸುಮ್ಮನಿರುತ್ತಿದ್ದರು. ಕೆಲವೊಮ್ಮೆ ಜಗಳ, ಹೊಡೆದಾಟಗಳು ನಡೆದು ಸಮಿತಿಗಳ ಮುಂದೆ ಪಂಚಾಯತಿಗಳು ನಡೆಯುತ್ತಿದ್ದವು. ಒಟ್ಟಿನಲ್ಲಿ ಎಲ್ಲವೂ ಒಟ್ಟೊಟ್ಟಾಗಿ ನಡೆಯುತ್ತಿದ್ದವು. ಕೆಲವೊಮ್ಮೆ ಪೋಷಕರೇ ಗೂಂಡಾಗಳಂತೆ ವರ್ತಿಸುತ್ತಿದ್ದರು. ಆದರೂ ಕೆಲವು ಹಿರಿಯರು ಮತ್ತು ಕಾರ್ಮಿಕ ಮುಖಂಡರುಗಳ ಮಾತಿಗೆ ಗೌರವ ಕೊಡುತ್ತಿದ್ದರು. ಹೆಣ್ಣುಮಕ್ಕಳು ಮಾತ್ರ ಮನೆಗಳಲ್ಲೇ ಓದಿಕೊಂಡು ಮಲಗಿಕೊಳ್ಳಬೇಕಾಗಿತ್ತು. ಹೆಚ್ಚು ಮಕ್ಕಳಿರುವ ಮನೆಗಳಲ್ಲಿ ಎಲ್ಲರೂ ಮಲಗಿಕೊಳ್ಳುವುದು ಹಿಂಸೆಯಾಗುತ್ತಿತ್ತು. ಅದಕ್ಕಾಗಿ ಮನೆಯ ಪಕ್ಕದಲ್ಲಿ ಒಂದು ಪಡಸಾಲೆ ಹಾಕಿಕೊಳ್ಳುತ್ತಿದ್ದರು.

ಒಂದು ಕತ್ತಲರಾತ್ರಿ. ಗಣಿ ಕಾರ್ಮಿಕರ ಕಾಲೋನಿ ಮಧ್ಯದಲ್ಲಿರುವ ಕಮ್ಯೂನಿಟಿ ಹಾಲ್‌ನಲ್ಲಿ ಮಲಗಿದ್ದ ಇಬ್ಬರು ಯುವಕರು ಎದ್ದು ಸೈಕಲ್‌ಗಳನ್ನು ತೆಗೆದುಕೊಂಡು ಹೊರಡುತ್ತಾರೆ. ದಾರಿಯಲ್ಲಿ ಅವರ ಜೊತೆಗೆ ಇನ್ನಿಬ್ಬರು ಯುವಕರು ಸೇರಿಕೊಳ್ಳುತ್ತಾರೆ. ಗಣಿ ಕಾಲೋನಿಗಳನ್ನು ದಾಟಿ ಕತ್ತಲಲ್ಲಿ ಸಾಕಷ್ಟು ದೂರ ಕಾಡಿನಲ್ಲಿ ಹೋದ ಮೇಲೆ ಕಲ್ಲುಮುಳ್ಳು ಪೊದೆಗಳ ಒಳಗೆ ಅವಿತಿಟ್ಟಿದ್ದ ಹಗ್ಗಗಳು ಮತ್ತು ಗೋಣಿ ಚೀಲಗಳನ್ನು ಬ್ಯಾಟರಿಗಳ ಬೆಳಕಿನಲ್ಲಿ ಹುಡುಕಿ ತೆಗೆದುಕೊಂಡರು. ನಂತರ ಸೈಕಲ್‌ಗಳನ್ನು ಅಲ್ಲೇ ಬಚ್ಚಿಟ್ಟು ಸ್ವಲ್ಪ ದೂರ ನಡೆದು ಹೋಗಿ ಒಂದು ಹಳೆ ಗಣಿ ಶ್ಯಾಫ್ಟ್ ಹತ್ತಿರ ನಿಂತುಕೊಂಡರು. ಅದು ಹಳೆ ಗಣಿ ಶ್ಯಾಫ್ಟ್ ಆಗಿದ್ದು ಗಣಿ ಮೇಲಿದ್ದ ಹೆಡ್‌ಗೇರ್‌ಅನ್ನು ಸಂಪೂರ್ಣವಾಗಿ ಕೆಡವಿ ಕಳ್ಳತನ ಮಾಡಲಾಗಿತ್ತು. ಉಳಿದಿದ್ದ ಗಣಿಗೆ ಸಿಮೆಂಟ್ ಹಾಕಿ ಸೀಲ್ ಮಾಡಿದ್ದರು. ಆದರೆ ಅದನ್ನೂ ಸಹ ಹೊಡೆದು ಹಾಕಿ ಅದು ತೆರೆದ ಬಾವಿಯಂತೆ ಕಾಣಿಸುತ್ತಿತ್ತು.

ರಾತ್ರಿ ಒಂದು ಕಡೆಗಿರಲಿ, ಹಗಲು ಕೂಡ ಹಸು ಕುರಿ ಮೇಕೆಗಳು ಅನೇಕ ಸಲ ಈ ಗಣಿ ಶ್ಯಾಫ್ಟ್‌ಗಳಲ್ಲಿ ಬಿದ್ದುಹೋಗುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ಕೊಲೆ ಮಾಡಿದ ಹೆಣಗಳನ್ನು ರಾತ್ರಿ ಹೊತ್ತು ರಹಸ್ಯವಾಗಿ ತಂದು ಆ ಗಣಿಗಳ ಒಳಕ್ಕೆ ಹಾಕಿದ ಉದಾಹರಣೆಗಳೂ ಇವೆ. ಗಣಿ ಹತ್ತಿರದಲ್ಲಿದ್ದ ಮರಕ್ಕೆ ಹಗ್ಗವನ್ನು ಗಟ್ಟಿಯಾಗಿ ಬಿಗಿದುಕಟ್ಟಿ ಮೊದಲಿಗೆ ಒಬ್ಬ ಗೋಣಿಚೀಲ ಮತ್ತು ಬ್ಯಾಟರಿ ಜೊತೆಗೆ ಹಗ್ಗವನ್ನು ಹಿಡಿದುಕೊಂಡು ಬಾವಿಯಲ್ಲಿ ಇಳಿಯುವಂತೆ ನಿಧಾನವಾಗಿ ಇಳಿದುಕೊಂಡ. ಅವನು ಸುರಂಗಗಳಲ್ಲಿ ಕಲ್ಲುಗಳನ್ನು ಹೊಡೆಯಲು ಗೋಣಿ ಚೀಲದಲ್ಲಿ ಸುತ್ತಿಗೆ ಮತ್ತು ಉಳಿಗಳನ್ನು ಇಟ್ಟುಕೊಂಡಿದ್ದ. ಅವನ ಹಿಂದೆ ಇನ್ನಿಬ್ಬರು ಅದೇ ರೀತಿಯಾಗಿ ಗೋಣಿ ಚೀಲಗಳ ಜೊತೆಗೆ ಇಳಿದುಕೊಂಡರು. ಮೂವರೂ ಹಳೆ ಗಣಿ ಒಳಗೆ ಇಳಿದುಕೊಂಡ ನಂತರ ಮೇಲೆ ಉಳಿದುಕೊಂಡಿದ್ದ ಯುವಕ ಹಗ್ಗವನ್ನು ಬಿಚ್ಚಿಕೊಂಡು ಕತ್ತಲಲ್ಲಿ ಹೊರಟುಹೋದ.

*****

ನಿನ್ನೆ ರಾತ್ರಿ ಅಂದರೆ ಇಪ್ಪತ್ತನಾಲ್ಕು ಗಂಟೆಗಳ ಹಿಂದೆ ಹಗ್ಗ ಬಿಚ್ಚಿಕೊಂಡು ಹೋಗಿದ್ದ ಯುವಕ ಮತ್ತೆ ಕತ್ತಲ ರಾತ್ರಿಯಲ್ಲಿ ಆಟೋದಲ್ಲಿ ಬಂದು ಹಗ್ಗವನ್ನು ಅದೇ ರೀತಿಯಾಗಿ ಮರಕ್ಕೆ ಗಟ್ಟಿಯಾಗಿ ಕಟ್ಟಿ ಗಣಿ ಒಳಕ್ಕೆ ಬಿಟ್ಟ. ನಂತರ ಗಣಿ ಮುಂದೆ ಕುಳಿತುಕೊಂಡು ಬಗ್ಗಿ ಗಣಿ ಒಳಕ್ಕೆ ಕೂಗುತ್ತ ಸಣ್ಣು ಕಲ್ಲುಗಳನ್ನು ಗಣಿ ಒಳಕ್ಕೆ ಎಸೆದ. ಗಣಿಯ ಒಳಗಿಂದ ನಿನ್ನೆ ಇಳಿದವರ ಕೂಗುವ ಸದ್ದು ಕೇಳಿಸಿತು. ಕೆಲವು ನಿಮಿಷಗಳಾದ ಮೇಲೆ ಹಗ್ಗವನ್ನು ಮೇಲಕ್ಕೆ ಎಳೆದುಕೊಂಡಾಗ ಅದಿರು ತುಂಬಿದ ಗೋಣಿ ಚೀಲದ ಮೂಟೆ ಮೇಲಕ್ಕೆ ಬಂದಿತು. ಮೇಲಿದ್ದವನು ಕಷ್ಟಪಟ್ಟು ಅದೇ ರೀತಿ ನಾಲ್ಕಾರು ಗೋಣಿ ಚೀಲಗಳನ್ನು ಮೇಲಕ್ಕೆ ಎಳೆದುಕೊಳ್ಳುತ್ತ ಸುಸ್ತಾಗಿಹೋದ. ನಂತರ ನಿನ್ನೆ ರಾತ್ರಿ ಗಣಿ ಒಳಕ್ಕೆ ಇಳಿದುಕೊಂಡಿದ್ದ ಮೂವರೂ ಕಳ್ಳರು ಒಬ್ಬೊಬ್ಬರಾಗಿ ಹಗ್ಗ ಹಿಡಿದುಕೊಂಡು ಮೇಲಕ್ಕೆ ಹತ್ತಿಬಂದು ಉಸ್ಸಪ್ಪ ಎಂದು ನೆಲದ ಮೇಲೆ ಉರುಳಿಕೊಂಡರು. ಅವರು ಮೊದಲನೇ ಹಂತದ ಸುರಂಗದಿಂದ (ನೂರು ಅಡಿಗಳ ಆಳ) ಚಿನ್ನದ ಅದಿರು ತರಬೇಕಾದರೆ ಸುರಂಗಗಳ ಕತ್ತಲಲ್ಲಿ ನಡೆದುಹೋಗಿ ಚಿನ್ನ ಇರುವ ಕಲ್ಲುಗಳನ್ನು ಹುಡುಕಿ ಅವುಗಳನ್ನು ಸುತ್ತಿಗೆಗಳಿಂದ ಹೊಡೆದು ಮೇಲಕ್ಕೆ ತರಬೇಕಾಗಿತ್ತು.

ಮೊದಲನೇ ಹಂತದಲ್ಲಿ ಅದಿರು ದೊರಕಲಿಲ್ಲವೆಂದರೆ ಎರಡನೇ ಹಂತಕ್ಕೆ ಅಂದರೆ ಮತ್ತೆ ನೂರು ಅಡಿಗಳ ಆಳಕ್ಕೆ ಇಳಿದು ಅಲ್ಲಿನ ಸುರಂಗಗಳಲ್ಲಿ ನಡೆದುಹೋಗಿ ಚಿನ್ನದ ಅದಿರಿನ ಕಲ್ಲುಗಳನ್ನು ಹುಡುಕಿ ಹೊಡೆದು ತರಬೇಕಾಗಿತ್ತು. ಸುರಂಗಗಳಲ್ಲಿ ಗಾಳಿ ತೀರಾ ಕಡಿಮೆ ಇದ್ದು ಸಂಪೂರ್ಣವಾಗಿ ಕತ್ತಲೇ ತುಂಬಿಕೊಂಡಿರುತ್ತದೆ. ಸುರಂಗಗಳಲ್ಲಿ ಹಳ್ಳ-ಕೊಳ್ಳ ಕೆಸರು ನೀರು ಕಲ್ಲು-ಮಣ್ಣು ಕಲ್ಲುಬಂಡೆಗಳು ಎಲ್ಲವನ್ನೂ ದಾಟಿ ಹೋಗಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಳಿದು ಚಿನ್ನದ ಅದಿರನ್ನು ಕಳ್ಳತನ ಮಾಡಿಕೊಂಡು ಬರುವುದು ಬಹಳ ಅಪಾಯಕಾರಿ ಕೆಲಸ. ಆದರೆ ಇವರು ಕನಿಷ್ಟ 24 ಗಂಟೆಗಳ ಕಾಲ ಸುರಂಗಗಳಲ್ಲಿದ್ದು ಅದಿರನ್ನು ಕಳ್ಳತನ ಮಾಡಿಕೊಂಡು ಮೇಲಕ್ಕೆ ಬಂದಿದ್ದರು. ಮೇಲಕ್ಕೆ ಬಂದವರು ಪ್ರಾಣವನ್ನು ಉಳಿಸಿಕೊಳ್ಳಲು ತೀವ್ರವಾಗಿ ಉಸಿರಾಟ ನಡೆಸುತ್ತಿದ್ದರು. ನಂತರ ಆಟೋದಲ್ಲಿ ಬಂದಿದ್ದವನು ತಂದಿದ್ದ ತಿಂಡಿಗಳನ್ನು ಕತ್ತಲಲ್ಲೇ ಗಬಗಬನೆ ತಿಂದು ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡರು.

ಈಗ ಬೆಳಗಿನ ಜಾವ ನಾಲ್ಕು ಗಂಟೆ. ನಾಲ್ಕಾರು ಚಿನ್ನದ ಅದಿರಿರುವ ಗೋಣಿ ಮೂಟೆಗಳನ್ನು ಆಟೋದಲ್ಲಿ ಹಾಕಿಕೊಂಡರು. ಇಬ್ಬರು ಯುವಕರು ಆಟೋದಲ್ಲಿ ಕುಳಿತುಕೊಂಡು ಗಣಿ ಕಾಲೋನಿಗಳನ್ನು ದಾಟಿ ಸಂದಿಗೊಂದಿಗಳಲ್ಲಿ ಸುತ್ತಿಕೊಂಡು ರಾಬರ್ಟ್ಸನ್‌ಪೇಟೆ ಹೊರವಲಯದ ಕಡೆಗೆ ಹೊರಟರು. ಇನ್ನಿಬ್ಬರು ಯುವಕರು ಪೊದೆಗಳಲ್ಲಿ ಬಚ್ಚಿಟ್ಟಿದ್ದ ಸೈಕಲ್‌ಗಳನ್ನು ತೆಗೆದುಕೊಂಡು ಏನೂ ಗೊತ್ತೇ ಇಲ್ಲದಂತೆ ಬೆಳಗಿನ ಜಾವದಲ್ಲಿ ಕಮ್ಯೂನಿಟಿ ಹಾಲ್‌ಗೆ ಬಂದು ಮಲಗಿಕೊಂಡರು. ಮಧ್ಯೆ ದಾರಿಯಲ್ಲಿ ಒಬ್ಬ ಯುವಕ ಆಟೋದಿಂದ ಇಳಿದುಕೊಂಡು ಎಲ್ಲಿಗೊ ಹೋಗಿಬಿಟ್ಟ. ಕೊನೆಗೆ ಆಟೋದಲ್ಲಿ ಉಳಿದುಕೊಂಡಿದ್ದು ಚಾಲಕ ಮಾತ್ರ. ಆಟೋ ಒಂದು ಹಳೆ ಮನೆಯ ಕಾಂಪೌಂಡ್ ಒಳಕ್ಕೆ ಹೋಗಿ ನಿಂತುಕೊಂಡಿದ್ದೆ ಮನೆ ಒಳಗಿಂದ ಇಬ್ಬರು ದಾಂಡಿಗರು ಬಂದು ಗೋಣಿ ಚೀಲದ ಮೂಟೆಗಳನ್ನು ತೆಗೆದುಕೊಂಡು ಮನೆ ಒಳಕ್ಕೆ ಹೋಗಿಬಿಟ್ಟರು. ಆಟೋದಲ್ಲಿ ಒಂದವನು ಒಂದು ಮೂಲೆಯಲ್ಲಿ ಆಟೋ ನಿಲ್ಲಿಸಿ ಇನ್ಯಾವುದೊ ಸಂದಿಯಲ್ಲಿ ಹೊರಟುಹೋದ.

(ಹಿಂದಿನ ಕಂತು: ರೋಸೀ ಮತ್ತು ಪೂರ್ವಜರ ಸಮಾಧಿಗಳು..)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ