ಇತ್ತೀಚೆಗೆ ಕೆಪಿಎಸ್ಸಿ ಪೂರ್ವಭಾವೀ ಪರೀಕ್ಷೆ ನಡೆಯಿತು. ಆ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅಚ್ಚಾಗಿದ್ದ ಪ್ರಶ್ನೆಗಳು ಸರಿ ಇದ್ದವು. ಅವೇ ಪ್ರಶ್ನೆಗಳು ಕನ್ನಡಕ್ಕೆ ಅನುವಾದ ಮಾಡುವಾಗ ದೋಷಗಳು ಸಂಭವಿಸಿದ್ದವು. ಆದಕಾರಣ ಪರೀಕ್ಷೆಯನ್ನೆ ರದ್ದುಮಾಡಿ ಇಲ್ಲವಾದರೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರನ್ನು ಪಾಸು ಮಾಡಿ ಎನ್ನುವ ಬೇಡಿಕೆಗಳು ಬಂದವು. ಕಳೆದ ಶನಿವಾರದ ವರದಿಯ ಪ್ರಕಾರ ಪೂರ್ವಭಾವಿ ಪರೀಕ್ಷೆಯ ಗೊಂದಲಗಳು ಇತ್ಯರ್ಥವಾಗುವವರೆಗೆ ಮುಖ್ಯ ಪರೀಕ್ಷೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿಮೂರನೆಯ ಬರಹ ನಿಮ್ಮ ಓದಿಗೆ
Word travels world ಎಂಬ ಮಾತಿದೆ. ಅಂತೆಯೇ ನಿತ್ಯಸಂಚಾರಿಗಳು ಈ ಪದಗಳು. ತತ್ಸಂಬಂಧಿ ಉದಾಹರಣೆಯಾಗಿ ಕ್ರಿಸ್ತಪೂರ್ವದ ಗ್ರೀಕ್ ಪ್ರಹಸನಗಳಲ್ಲಿ ನಮ್ಮ ಕನ್ನಡ ಪದಗಳು ಬಳಕೆಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಯಾವುದೋ ಭಾಷೆಯ ಪದಗಳು ಇನ್ಯಾವುದೋ ಭಾಷೆಯಲ್ಲಿ ಮಿಳಿತವಾಗುವುದಕ್ಕೆ ಭಾಷೆಯ ನಿರಂತರ ಪ್ರವಹಕತೆಯೇ ಕಾರಣ. ಪದಪದಗಳ ಭಾಷಾಂತರ, ರೂಪಾಂತರಗಳಲ್ಲಿ ಮಿಂದು ಸಂಭ್ರಮಿಸಬಹುದಾದ ವಿಭ್ರಮಿಸಬಹುದಾದ ತಿಣುಕಾಡುವ ಪ್ರಸಂಗಗಳು ಈ ಸಂಚಾರದಲ್ಲಿ ಎದುರಾಗುತ್ತವೆ. ಹಾಗೆ ನಾವು ಅನುವಾದ ಮಾಡಬೇಕೆಂದಾಗ ಆ ಪದದ ಮೂಲದ ಅರ್ಥ ಅನರ್ಥವಾಗದಂತೆ ಇನ್ನೊಂದು ಪದವನ್ನು ಬಳಸಬೇಕು.
ಕನ್ನಡ ನುಡಿ, ನಮ್ಮ ಹೆಣ್ಣು
ನಮ್ಮ ತೋಟದಿನಿಯ ಹಣ್ಣು
ಪಡುವ ಕಡಲ ಹೊನ್ನ ಹೆಣ್ಣು
ನನ್ನ ಜೀವದುಸಿರು ಕಣ್ಣು
ಇವಳ ಸೊಬಗನವು ತೊಟ್ಟು ನೋಡಬಸಿದೆ
ಅವಳ ತೊಡುಗೆ ಇವಳಿಗಿಟ್ಟು ಹಾಡಬಯಸಿದೆ.. ಎಂದು ಇಂಗ್ಲಿಷ್ ಕವಿತೆಯ ಸಾಲುಗಳನ್ನು ಬಿ.ಎಂ.ಶ್ರೀಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇಂಗ್ಲಿಷಿನವರು ಮೆಚ್ಚಲಿ ಎಂದಾಗಲಿ ಕನ್ನಡದವರು ಇಲ್ಲಿ ಉತ್ಕೃಷ್ಟ ಪದಗಳನ್ನು ಬಳಸಿದ್ದಾರೆ ಎಂದು ಹೊಗಳಲಿ ಎಂದಾಗಲಿ ಶ್ರೀಯವರು ಬಯಸದೆ ನೇರವಾಗಿ ಸರಳವಾಗಿ ಅನುವಾದಿಸಿದ್ದಾರೆ. ಇಲ್ಲಿ ಅರ್ಥವತ್ತತೆಗೆ, ಸರಳತೆಗೆ, ಭಾಷಾ ಬಾಂಧವ್ಯಕ್ಕೆ ಬಿ.ಎಂ. ಶ್ರೀಯವರ ಒಲವಿರುವುದನ್ನು ಕಾಣಬಹುದು. ಆದರೆ ಆಧುನಿಕರಲ್ಲಿ ಇಂಥ ಬದ್ಧತೆ ಇಂದಿಗೆ ಇಲ್ಲವಾಗಿದೆ ಎಂಬುದೆ ವಿಷಾದದ ಸಂಗತಿ.
ಕನ್ನಡ ಭಾಷೆ ಹೇರಳವಾದ ಪದಸಂಪತ್ತಿರುವ ಭಾಷೆ. ಇಂಥಹುದರಲ್ಲಿ ಸೀಮಿತವಾಗಿ, ಮನಸ್ಸಿಗೆ ಹೊಳೆದ ಪದಗಳನ್ನು ಅನುವಾದದಲ್ಲಿ ಬಳಸಿದರೆ ಅನರ್ಥವೇ. ಇಂಗ್ಲಿಷಿನಲ್ಲಿ pay the Fees or clear the fees ಎನ್ನುವುದನ್ನು ಕನ್ನಡದಲ್ಲಿ ನೇರವಾಗಿ tie the fees ಎಂದುಬಿಟ್ಟರೆ ನಗೆಪಾಟಲಾಗಬೇಕಾಗುತ್ತದೆ. Tie ಎಂದರೆ ಕನ್ನಡದಲ್ಲಿ ಕಟ್ಟು ಇಂಗ್ಲಿಷಿನಲ್ಲಿ ಕತ್ತಿಗೆ ಕಟ್ಟುವ ಟೈ ಎಂಬರ್ಥವೂ ಬರುತ್ತದೆ. ಪರಸ್ಪರ ಪದಗಳು ಭಾಷಾವಲಯಕ್ಕೆ ಸೇರ್ಪಡೆಯಾದಾಗ ಕೆಲವು ಸರಿಹೋಗಬಹುದು ಕೆಲವು ಇಲ್ಲ. ಉದಾಹರಣೆಗೆ ಆದರೆ ಇಂಗ್ಲಿಷಿನ ಮೂಲವನ್ನು ಅರ್ಥಮಾಡಿಕೊಳ್ಳದೆ ಕಿಟಕಿ ಹಾಕು ಎನ್ನುವುದನ್ನು close the window ಎನ್ನುವ ಬದಲು put the window ಎಂದರೆ ಸರಿಯಾದ ಅರ್ಥವನ್ನು ಕೊಡುವುದಿಲ್ಲ. ಇಂಥ ಅನರ್ಥಗಳಿಗೆ ಇನ್ನೊಂದು ನಿದರ್ಶನವನ್ನು ಕೊಡುವುದಾದರೆ ತಮಿಳುನಾಡಿನ ದೇವಾಲಯವೊಂದರಲ್ಲಿ way to free darshan ಎಂದಿದ್ದನ್ನು ‘ಉಚಿತ ದರ್ಶನಕ್ಕೆ ಬಾಯಿ’ ಎಂದು ಅನುವಾದ ಮಾಡಿದ್ದರು. ಆ ತಪ್ಪು ಬೋರ್ಡ್ ಒರೆಸಿ ಹಾಕಿಸುವುದರಲ್ಲಿ ನಮ್ಮ ಕನ್ನಡಿಗರು ಯಶಸ್ವಿಯಾಗಿದ್ದು ಹಳೆಯ ವಿಚಾರ. ಅಂದ ಹಾಗೆ ಇಂಗ್ಲಿಷಿನ ಉಚ್ಚಾರಣೆಯನ್ನು ಆಧರಿಸಿ ANDALMMA TMPLE STREET ಎಂಬುದನ್ನು ಆನ್ ಡಲ್ಲಮ್ಮ ಬೀದಿ ಎಂದು ತಪ್ಪಾಗಿ ಬರೆಸಿದ್ದು ಬಹಳ ಚರ್ಚೆ ಆಗಿತ್ತು ಎನ್ನಿ.
ಅಂದಹಾಗೆ ಇತ್ತೀಚೆಗೆ ಕೆಪಿಎಸ್ಸಿ ಪೂರ್ವಭಾವೀ ಪರೀಕ್ಷೆ ನಡೆಯಿತು. ಆ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅಚ್ಚಾಗಿದ್ದ ಪ್ರಶ್ನೆಗಳು ಸರಿ ಇದ್ದವು. ಅವೇ ಪ್ರಶ್ನೆಗಳು ಕನ್ನಡಕ್ಕೆ ಅನುವಾದ ಮಾಡುವಾಗ ದೋಷಗಳು ಸಂಭವಿಸಿದ್ದವು. ಆದಕಾರಣ ಪರೀಕ್ಷೆಯನ್ನೆ ರದ್ದುಮಾಡಿ ಇಲ್ಲವಾದರೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರನ್ನು ಪಾಸು ಮಾಡಿ ಎನ್ನುವ ಬೇಡಿಕೆಗಳು ಬಂದವು. ಕಳೆದ ಶನಿವಾರದ ವರದಿಯ ಪ್ರಕಾರ ಪೂರ್ವಭಾವಿ ಪರೀಕ್ಷೆಯ ಗೊಂದಲಗಳು ಇತ್ಯರ್ಥವಾಗುವವರೆಗೆ ಮುಖ್ಯ ಪರೀಕ್ಷೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದೆ. ಭಾಷಾಂತರಲೋಪ, ತಪ್ಪು ಮುದ್ರಣ, ವಾಕ್ಯಗಳು ಸರಿಯಾಗಿ ಅರ್ಥ ಆಗದೇ ಇರುವುದು, ಬೇರೆಯದೆ ಅರ್ಥ ಬರುವುದು ಇತ್ಯಾದಿ ಸಮಸ್ಯೆಗಳು ಕನ್ನಡ ಅವತರಿಣಿಕೆಯಲ್ಲಿ ಇವೆ. ಆಯೋಗವನ್ನು ಈ ಕುರಿತು ಕೇಳಲಾಗಿ ಗೌಪ್ಯತೆಯ ಕಾರಣದಿಂದ ಅತ್ಯಲ್ಪ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಿಸಿರುವುದರಿಂದ ಹೀಗಾಗಿದೆ ಎನ್ನುವ ಕಾರಣವನ್ನು ಆಯೋಗ ನೀಡಿದೆ. ತಪ್ಪದ ಪದ ಬಳಕೆ> ತಪ್ಪಾದ ಪದಬಳಕೆ. (45) ವಿಧೇಯತ>ವಿಧೇಯಕ (97) ಸ್ಯಾಯಿಕ ಪುನರಂ> ಪುನರ್ ಪರೀಶಲನೆ ಇತ್ಯಾದಿ ದೋಷಗಳನ್ನು ಆ ಪತ್ರಿಕೆಯಲ್ಲಿ ಪಟ್ಟಿ ಮಾಡಬಹುದು.
ಇನ್ನು Elevator ಎಂಬ ಪದದ ಉದಾಹರಣೆಯನ್ನು ನೋಡೋಣ! ಈ ಇಂಗ್ಲಿಷಿನ ಪದವನ್ನು ಕನ್ನಡಕ್ಕೆ ತರುವಾಗ ಏರಿಳಿತೇರು ಎಂದು ಅನುವಾದಿಸಿದ್ದರು. ಈ ಶಬ್ದವನ್ನು ಬಳಕೆ ಮಾಡಿದ್ದು ಖಂಡಿತಾ ಒಪ್ಪುವಂಥದ್ದಲ್ಲ. ಇಲ್ಲಿ ತೇರು ಎಂದರೆ ರಥ ಎಂದಾಗುತ್ತದೆ. ಏರಿಳಿತೇರು ಪದದ ಪ್ರಕಾರ ರಥ ಏರಿ ಇಳಿಯುತ್ತದೆ ಎಂಬುದಾಗಿ, ಸಾಮಾನ್ಯವಾಗಿ ರಥವು ಮುಂದೆ ಸಾಗುತ್ತದೆ ವಿನಃ ಏರುವುದಿಲ್ಲ ಅಲ್ವೆ! ಹೀಗೆ ತಪ್ಪು ಶಬ್ದ ಪ್ರಯೋಗ ಮಾಡುವುದಕ್ಕಿಂತ ಕನ್ನಡದಲ್ಲಿ ಲಿಫ್ಟ್ ಎಂದಾಗಲಿ, ಏರಿಳಿ ಜಾರು, ಏರಿಳಿಏಣಿ, ಚಲಿಸುವ ಮೆಟ್ಟಲು, ಏರುತ್ತ ಇಳಿಯುತ್ತಾ ಚಲಿಸುವ ಮೆಟ್ಟಲು ಎನ್ನಬಹುದಿತ್ತು. ಪದಗಳ ಆಕರ್ಷಣೆಗೆ ಒಳಗಾದಾಗ ಹೀಗಾಗುತ್ತದೆ. Twinkle Twinkle little star ಶಿಶು ಪದ್ಯವನ್ನು ಎಸ್.ಜಿ ನರಸಿಂಹಾಚಾರ್ಯರು ಮಿರುಗು ಮಿರುಗೆಲೆ ನಕ್ಷತ್ರ ಎಂದು ಸರಳವಾಗಿ ಕನ್ನಡೀಕರಿಸಿಲ್ವೆ? ರಮ್ಯ ಪದಗಳ ಹುಡುಕಾಟ, ಪದಶಃ ಅರ್ಥ ಹುಡುಕುವಿಕೆ ಅನುವಾದದಲ್ಲಿ ಇರಬಾರದು ಅಷ್ಟೆ!

ತಮಾಷೆ ಎಂದರೆ ನಮ್ಮಮ್ಮ ಶಾರದೆ ಉಮಾಮಹೇಶ್ವರಿ….. ಎಂಬ ಕೀರ್ತನೆಯನ್ನು ನನ್ನ ಸ್ನೇಹಿತೆ My Mummy Sharade….. ಎಂದೇ ಹಾಡುತ್ತಿದ್ದಳು. ಇಲ್ಲಿ ಅರ್ಥವೂ, ಓಘವೂ, ಗೇಯ ಗುಣವೂ ಕೆಡುವುದಿಲ್ಲ. ನಮ್ಮ ನಮ್ಮಲ್ಲೇ ನಡೆಯುವ ಹಾಸ್ಯ ಗೋಷ್ಠಿಗೆ ಇವು ಒಗ್ಗುತ್ತವೆ ಬಿಡಿ! ಇಂಗ್ಲಿಷ್ ಭಾಷೆ ನಮ್ಮ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಬಾರದು ಎಂಬ ಉದ್ದೇಶದಿಂದ ತರಗತಿಗೆ ಬಂದ ಟೀಚರ್ ಇನ್ಮುಂದೆ ನನ್ನ ತರಗತಿಯಲ್ಲಿ ಇಂಗ್ಲೀಷಿನಲ್ಲಿಯೇ ಮಾತನಾಡಬೇಕೆಂದಾಗ ಹುಡುಗನೊಬ್ಬ ತನ್ನ ಹಾಗು ತಂದೆಯ ಹೆಸರನ್ನು (ನಾಗರಾಜ) Snake King, (ಕರಿಗೌಡ) Black Gowda ಅನುವಾದಿಸಿ ಹೇಳಿದ್ದು, ಪ್ರೇಮಿಯೊಬ್ಬ ಪ್ರೇಯಸಿಯಲ್ಲಿ ಇಂಗ್ಲಿಷ್ ಕಲಿಯುವಾಗ ಶಾಂತಿಯಿಂದ ನಿದ್ರೆ ಮಾಡುವುದು ಎಂಬುದಕ್ಕೆ Rest in Pease ಎಂಬ ಅನುವಾದವನ್ನು ಕೇಳುವುದು ಹಾಸ್ಯದ ತುಣುಕುಗಳೆ ಸರಿ! ಆದರೆ ಇಲ್ಲಿ ನಾಮಪದವನ್ನು ಅನುವಾದ ಮಾಡಲಾಗದು ಎಂಬ ಭಾಷಾಂತರ ನಿಯಮ ತಿಳಿಯುತ್ತದೆ. ಪದಗಳ ನಿಜವಾದ ಅರ್ಥವನ್ನು ತಿಳಿಯದೆ ಪದಶಃ ಅನುವಾದ ಮಾಡಿ ನಿಜಕ್ಕೂ ಅರ್ಥಹೀನತೆಯನ್ನು ಅರ್ಥ ಲೋಪವನ್ನೇ ತಂದೊಡ್ಡುವ ಇಂಗ್ಲಿಷ್ ಪದಗಳ ಕನ್ನಡಾನುವಾದವನ್ನು ಇಲ್ಲಿ ನೋಡೋಣ.
(ಮಧ್ಯಭಾಗದಲ್ಲಿ ಪದಗಳ ಅರ್ಥಗಳ ತಪ್ಪು ಪ್ರಯೋಗಗಳಿವೆ)
BROKEN CAR ಮುರಿದಿರುವ ಕಾರು ಹಾಳಾಗಿರುವ ಕಾರು
BREAK A LEG ಕಾಲು ಮುರಿ ಶುಭವಾಗಲಿ ಎಂಬ ಹಾರೈಕೆ ಇರುತ್ತದೆ.
HIT THE SACK ಗೋಣೀಚೀಲಕ್ಕೆ ಹೊಡಿ ನಿದ್ರೆ ಮಾಡು
UNDER THE WEATHER ಹವಾಮಾನ ಕೆಳಗೆ ಸೌಖ್ಯವಿಲ್ಲ
TURN BLIND EYE ಕುರುಡು ಕಣ್ಣು ಸುತ್ತು ನೋಡಿದ್ದು ನೋಡಿದ ಹಾಗೆ ಇರುವುದು
SPILL THE BEANS ಬೀನ್ಸನ್ನು ಚೆಲ್ಲು ಗೌಪ್ಯತೆಗೆ ಧಕ್ಕೆ ತರುವುದು
HEADWEIGHT ತಲೆಭಾರ ತಮ್ಮ ಬಗ್ಗೆ ಹೆಚ್ಚು ಮಾತನಾಡುವವರನ್ನು ಹೇಳುವುದು
HEAD WEIGHT ತಲೆ ಉದ್ದ ವಿಪರೀತ ಅಸಂಬಧ್ಧ ಮಾತನಾಡುವುದು
FLOW CHART ಹರಿವಿನ ಚಿತ್ರ ಗತಿನಕ್ಷೆ
ಇವೆಲ್ಲಾ ಉದಾಹರಣೆಗಳು ಅಷ್ಟೆ! ನಾನೂ ಇಲ್ಲಿ ಪದ ಅರ್ಥ ಎಂಬುದಾಗಿ ಬಿಡಿಸಿ ಬರೆದಿರುವೆ. ಒಂದುವೇಳೆ ಪದ ಅರ್ಥ ಎರಡೂ ಕೂಡಿಸಿ ಪದಾರ್ಥ (ಮೇಲೋಗರ, ತರಕಾರಿ ಬಳಸಿ ಮಾಡಿದ ಗೊಜ್ಜು) ಮಾಡಿದರೆ ಓದುಗರ ಮನಸ್ಸು ಅಡುಗೆ ಮನೆಯೆಡೆಗೆ ಸಂಚರಿಸುತ್ತಿತ್ತೇನೋ? ಬೆಟ್ಟದ ಹೂ ಚಿತ್ರದ ಬಿಸಿಲೇ ಬರಲಿ ಮಳೆಯೇ ಇರಲಿ ಎಂಬ ಹಾಡನ್ನು ತೆಗೆದುಕೊಂಡರೆ ಅಲ್ಲಿ ಕನ್ನಡ ಪದಗಳ ನೇರ ಅನುವಾದವೇ ಇದೆ. ಆದರೆ ಮನರಂಜನೆಯ ದೃಷ್ಟಿ ಮತ್ತು ಹಳ್ಳಿ ಹುಡುಗನೊಬ್ಬನ ಭಾವನೆಯನ್ನು ಶೆರ್ಲಿ ಮೇಡಂಗೆ ಇಂಗ್ಲಿಷಿನಲ್ಲಿ ಹೇಳಬಯಸುವ ಇರಾದೆ ಇರುವುದರಿಂದ ಎಲ್ಲೂ ಆಭಾಸ ಅನ್ನಿಸುವುದಿಲ್ಲ.

ಇರಲಿ! ಈಗ ನುಡಿಗಟ್ಟುಗಳ ಬಗ್ಗೆ ಮಾತನಾಡೋಣ! ನುಡಿಗಟ್ಟು ಪದದ ಪದಶಃ ಅರ್ಥವನ್ನು ಹೇಳುವುದಾದರೆ ಮಾತುಗಳ ಕಟ್ಟು ಅಥವಾ ಸಮೂಹ ಎಂಬುದಾಗಿ. ಇವುಗಳಲ್ಲಿ ಎರಡು ಅರ್ಥ ಬರುತ್ತದೆ. ಒಂದು ಪದಶಃ ಅರ್ಥ ಇನ್ನೊಂದು ವ್ಯಂಜನಾರ್ಥ ಅಥವಾ ಲಕ್ಷ್ಯಾರ್ಥ. ಅವುಗಳು ಆಯಾ ಭಾಷಾ ಜಾಯಮಾನಕ್ಕೆ ಸಂಬಂಧಿಸಿದ್ದು. ನುಡಿಗಟ್ಟುಗಳನ್ನು ಭಾಷಾಂತರ ಮಾಡಲಾಗದು. ಹಾಗಾದರೆ ಅಪಾರ ಅರ್ಥದ ಬದಲಾಗಿ ಅಪಾರ್ಥವಾಗುತ್ತವೆ. ಉದಾಹರಣೆಗೆ ‘ಕಾಲು ಕೀಳು’ ಇಂಗ್ಲಿಷಿನಲ್ಲಿ to leave a place ಎಂದಾಗಾಗುತ್ತದೆ. ಅದರ ಬದಲು pull the leg ಎಂದರೆ ನುಡಿಗಟ್ಟಿನ ತಪ್ಪು ಗ್ರಹಿಕೆ ಆಗುತ್ತದೆ. ಅದೇ ರೀತಿ ಇಂಗ್ಲಿಷಿನ Sound Party ಆರ್ಥಿಕವಾಗಿ ಸಧೃಢವಾಗಿರುವ ವ್ಯಕ್ತಿಯನ್ನು ಸಂಕೇತಿಸುತ್ತದೆ. ಅದನ್ನೆ ಕನ್ನಡದಲ್ಲಿ ಗದ್ದಲದ ಪಾರ್ಟಿ ಎಂದೋ ಶಬ್ದ ಪಕ್ಷ ಎಂದೋ, ಕನ್ನಡದ ಕಣ್ಣುರಿಯನ್ನು Eye fire, ಹೊಟ್ಟೆಕಿಚ್ಚನ್ನು stomach fire ಎಂದು ಅನುವಾದ ಮಾಡಿದರೆ ತಲೆನೋವನ್ನು Head ache ಎಂದುಬಿಟ್ಟರೆ ಅರ್ಥಹೀನವಾಗುತ್ತದೆ. ಹೊಸ ಪದಗಳು ಇಲ್ಲವೆ ಪದಪುಂಜಗಳು ನಮ್ಮ ಜಾಯಮಾನಕ್ಕೆ ಬರುವಾಗ ಅವುಗಳ ಮೂಲದಂತೆ ಇಲ್ಲವೆ ನಮ್ಮ ಪದಪುಂಜಗಳು ಯಥಾವತ್ತಾಗಿ ಆ ಭಾಷೆಗೆ ಹೋಗುತ್ತವೆ ಎನ್ನಲು ಸಾಧ್ಯವಿಲ್ಲ. ಅಕ್ಷರಶಃ ಅನುವಾದ ಆಗಿಬಿಟ್ಟರೆ ಮೂಲ ಅರ್ಥವೆ ಕೆಡುತ್ತದೆ.
ಇನ್ನು ಸಭೆ ಸಮಾರಂಭಗಳಲ್ಲಿ ಗೌರವ ರಕ್ಷೆ ಕೊಡುವುದಕ್ಕೆ ಇಂಗ್ಲಿಷಿನಲ್ಲಿ Guard Of Honors ಎನ್ನುತ್ತಾರೆ ಅದನ್ನೆ ಕನ್ನಡದಲ್ಲಿ ಗೌರವದ ಗಾರ್ಡು ಎಂದು ಬಳಸಿದರೆ ಮೂಲ ಪದದ ಸೌಂದರ್ಯವೇ ಇಲ್ಲವಾಗುತ್ತದೆ. ಸೇನಾ ಸಮಾರಂಭಗಳ ಕಡೆಯಲ್ಲಿ ಗಣ್ಯರಿಗೆ ನೀಡುವ ಚಹಾಕೂಟಕ್ಕೆ High tea ಎನ್ನುತ್ತಾರೆ. ಅದನ್ನು ಎತ್ತರದ ಟೀ ಎಂದು ಅನುವಾದಿಸಿದರೆ ಆಭಾಸವೇ ಸರಿ! ಇನ್ನು ನಮ್ಮ ಗಡಿಭಾಗದ ಊರುಗಳ ವಿಷಯಕ್ಕೆ ಬಂದಾಗ ಹೊಟೇಲುಗಳಲ್ಲಿ ಬೋರ್ಡ್ ಬರೆಸುವಾಗ ಅಪ್ಪಂ ಮಾಡುವವರು ಬೇಕಾಗಿದ್ದಾರೆ ಎನ್ನುವ ಬದಲು ಅಪ್ಪ ಮಾಡುವವರು ಬೇಕಾಗಿದ್ದಾರೆ ಎಂದು ಬರೆಸಿದರೆ, ಇಲ್ಲಿ ಉಪ್ಪಿನಕಾಯಿ ದೊರೆಯುತ್ತದೆ ಎಂದು ಬರೆಯುವುದರ ಬದಲಿ ಇಲಿ ಉಪ್ಪಿನಕಾಯಿ ಎಂದು ಬರೆದರೆ ದ್ವಂದ್ವಾರ್ಥವಾಗುತ್ತದೆ. ಸರಿಯಾಗಿ ತಿಳಿಯದೆ ಭಾಷಾಂತರ ಮಾಡುವುದಕ್ಕಾಗಿ ಮೈಲುಗಲ್ಲಿನ ದೋಷದ ಉದಾಹರಣೆಯನ್ನು ಇಲ್ಲಿ ಗಮನಿಸಬಹುದು.
ಸಿಗಂದೂರು 78
SIGANDURU 78
ಕೊಲ್ಲೂರು 93
KOLLUR 96
ಭಟ್ಕಳ 76
BHATKAL 73
ಇಲ್ಲಿ ನಮೂದಿಸಿರುವ ಕಿಲೋಮೀಟರುಗಳ ವಿವರ ಒಂದೇ ಆಗದೆ ಇರುವುದರಿಂದ ಇಂಗ್ಲಿಷಿನಲ್ಲಿರುವ ಸಂಖ್ಯೆಗಳು ಸರಿಯಿವೆಯೋ? ಕನ್ನಡದಲ್ಲಿ ಸಂಖ್ಯೆಗಳು ಸರಿಯಿವೆಯೋ ಎಂದನ್ನಿಸುತ್ತದೆ.

ಇನ್ನೂ ಗಂಭೀರ ಹಾಗು ವಿಷಾದದ ಸಂಗತಿಯೆಂದರೆ ಸ್ವತಃ ಸಂಸ್ಕೃತ ಭಾಷೆಯ ಬಳಕೆಯಿಲ್ಲದೆ, ಇತರ ಭಾಷೆಗಳ ಗೋಜಲುಗಳ ಕಾರಣದಿಂದ ಸಂಸ್ಕೃತ ಕೃತಿಗಳ ಮೂಲ ಅರ್ಥ ಇಂದು ಮುಕ್ಕಾಗುತ್ತಿದೆ. ಅತ್ಯಾಯಿಕ ಕಾರ್ಯೋ ಮಂತ್ರಿಪರಿಷದ್ ಭ್ರೂಯಾತ್ ಅಂದರೆ ಆರ್ಥಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಂತ್ರಿಪರಿಷತ್ ಸಭೆ ಕರೆಯುವುದು ಎಂಬುದಾಗಿ ‘ಕೌಟಿಲ್ಯನ ಅರ್ಥಶಾಸ್ತ್ರ’ದಲ್ಲಿ ಬರೆದಿದೆ. ಇಂಗ್ಲಿಷಿನಲ್ಲಿ ಅನುವಾದವಾದಾಗ emergency ಇದ್ದಾಗ ಮಂತ್ರಿಪರಿಷತ್ ಸಭೆ ಕರೆಯಬೇಕು ಎಂಬರ್ಥದಲ್ಲಿ ಬರೆದಿದೆ. ಯಾವ emergency ಎಂಬುದು ಸ್ಪಷ್ಟವಾಗಿಲ್ಲ. ಅಂದರೆ ಸರಿಯಾದ ಅರ್ಥ ಗ್ರಹಿಸದೆ ಹೋದರೆ ನಮ್ಮ ಮೂಲಪರಂಪರೆಗೆ ಸಂಬಂಧಿಸಿದ ಪರಿಪ್ರೇಕ್ಷಗಳೆ ಅರ್ಧಸತ್ಯಗಳಾಗುತ್ತವೆ. ವನಮಾಲ ವಿಶ್ವನಾಥ್ ಅವರ ಹರಿಶ್ಚಂದ್ರ ಕಾವ್ಯದ ಅನುವಾದ THE LIFE OF HARISHCHANDRA ವನ್ನು ಓದಿದಾಗ ಇಂಥ ಆಭಾಸಗಳು ಕಂಡುಬರುವುದಿಲ್ಲ. ಆದರೆ ಕಾವ್ಯಾಸ್ವಾದನೆ ವಿಚಾರಕ್ಕೆ ಬಂದರೆ ಕನ್ನಡಿಗರಿಗೆ ಹರಿಶ್ಚಂದ್ರನ ಭಾವಾನಾ ಲಹರಿಯೇ ಆಪ್ತ ಎನಿಸುತ್ತದೆ.

ವಾಕ್ಯರಚನೆಗಳ ವಿಧಾನ, ಪದಬಳಕೆ, ಮುಂತಾದ ಒಂದೊಂದು ಭಾಷೆಯ ಪರಿಪ್ರೇಕ್ಷ ಇನ್ನೊಂದು ಭಾಷೆಗೆ ಒಗ್ಗದೆ ಇರಬಹುದು. ಆತುರಕ್ಕೆ ಬಿದ್ದು ಮೂಲಪದದ ಅರ್ಥವನ್ನು ತಪ್ಪಾಗಿ ಗ್ರಹಿಸಿದರೆ ನಾವು ಆ ಭಾಷೆಗೆ ಮಾಡುವ ಅವಮಾನವೆ ಸರಿ! ಇಂಗ್ಲಿಷಿನ HOLYSHIT ಕನ್ನಡ ಭಾಷೆಗೆ ಒಗ್ಗುವ ಪದವೇ ಅಲ್ಲ. That is rubbish ಅನ್ನು ಕನ್ನಡದಲ್ಲಿ ಕಸ ಎಂದರೆ ತಪ್ಪಾಗುತ್ತದೆ. Break even point ಸಮವಾಗಿ ತುಂಡರಿಸುವ ಬಿಂದು ಎಂದರೆ ಬಾಲಿಷ ಅನುವಾದ ಎನಿಸುತ್ತದೆ. ಇಂಥ ತಪ್ಪುಗಳು ಆಗಲೇಕೂಡದು. ಒಟ್ಟು ಅನುವಾದಕ್ಕೆ ಕುಳಿತವರು ಅವಧಿ, ಕೃತಿಗಳ ಮಿತಿಯನ್ನು ಹೇರಿಕೊಳ್ಳಬಾರದು. ಭಾಷೆಯ ಅಂತರಾಳಕ್ಕೆ ಇಳಿಯುವ ಪ್ರಯತ್ನ ಮಾಡಿ ಅನುವಾದವನ್ನು ಅರ್ಥಗರ್ಭಿತವಾಗಿಸಬೇಕು. ಅದಕ್ಕೆ ಮೂಲ ಭಾಷೆಯ ಮೇಲಿನ ಹಿಡಿತ ಇರಬೇಕು. ಅದಕ್ಕಿಂತ ಮುಖ್ಯವಾಗಿ ಅನುವಾದದ ಪ್ರೀತಿ, ಆಸಕ್ತಿಯಿರಬೇಕು.

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

ಅನುವಾದದಲ್ಲಿನ ಅವಾಂತರಗಳ ಚಂದದ ಲೇಖನ ಸುಮಾ👌🏼👏