Advertisement
ಕಿನ್ನರಿ…

ಕಿನ್ನರಿ…

ಯಾವ ಪ್ರಚಾರವನ್ನೂ ಒಲ್ಲದ ತಮ್ಮ ಪಾಡಿಗೆ ತಾವಿರುವ ಈ ತಪಸ್ವಿನಿ ತಮ್ಮ ಪೂರ್ವಾಶ್ರಮದಲ್ಲಿ ಒಬ್ಬ ಶ್ರೇಷ್ಠ ಸಾಹಿತಿಯೂ ಆಗಿದ್ದರು. ನಾನು ಇವರ ಅದ್ಭುತ ವ್ಯಕ್ತಿತ್ವದ ಬಗ್ಗೆ ಬರೆದ ಒಂದು ಲೇಖನ ಇವರಿಗೆ ಮುಜುಗರ ತಂದಿತ್ತು. ಅಸಮಾಧಾನಕ್ಕೆ ಕಾರಣವಾಗಿತ್ತು. ಇಂತಹವರನ್ನು ಭೇಟಿ ಮಾಡಿಸಬೇಕೆಂದೂ ಅವರ ಸಮ್ಮುಖದಲ್ಲಿ ಒಂದು ಪತ್ರಿಕಾ ಸಭೆಯನ್ನು ಕರೆಯಬೇಕೆಂದೂ ನನ್ನ ಪರಿಚಯದ ಸಾಹಿತಿಯೊಬ್ಬರು ನನಗೆ ಬಹಳ ದಿನಗಳಿಂದ ದುಂಬಾಲು ಬಿದ್ದಿದ್ದರು. ಯಾರಿಗೂ ತಿಳಿಯದಂತೆ ಅಜ್ಞಾತವಾಗಿ ಬದುಕುತ್ತಿರುವ ಇವರನ್ನು ನಾನು ಒಮ್ಮೆ ಭೇಟಿಯಾಗಿ ಬಂದಿದ್ದುದೇ ಇದಕ್ಕೆ ಕಾರಣವಾಗಿತ್ತು.
ಗಿರಿಜಾ ಶಾಸ್ತ್ರಿ ಬರೆಯುವ “ಆ ಕಾಲದ ರಾಜಲಕ್ಷ್ಮಿ” ಸರಣಿ

“Be a Conduit!” ಕಾಂಡ್ಯೂಟ್! ಎಂತಹ ಅದ್ಭುತವಾದ ಪ್ರತಿಮೆ! ವಿದ್ಯತ್ ಬಲ್ಬಿನ ಒಳಗಿರುವ ತಂತಿಯ ಹಾಗಿರು! ‘ನಾನು’ ಎನ್ನುವುದು ಈ ತಂತಿಯ ಹಾಗೆ, ಬದುಕಿನ ಒಂದು ಸಾಧನ ಮಾತ್ರ ಎಂಬ ಅರಿವಿರಲಿ. ವಿದ್ಯುತ್ ಪ್ರಕಟಣೆಗೆ ತಂತಿ ಒಂದು ವಾಹಕವಷ್ಟೇ. ತಂತಿಗೆ ತಾನೇ ವಿದ್ಯುತ್ ಎನ್ನುವ ಭ್ರಮೆ ಇರಬಾರದು”- ಒಬ್ಬ ವಯೋವೃದ್ಧ ತಪಸ್ವಿನಿಯ ಬಾಯಿಂದ ಈ ಮಾತುಗಳು ಧ್ಯಾನಸ್ಥವಾಗಿ ಹೊರಬೀಳುತ್ತಿದ್ದವು. ಅವರು ಇದ್ದುದು, ಯಾರೂ ತುಳಿಯದ ಹಾದಿಯ ಬದಿಯ, ಹೇಳ ಹೆಸರಿಲ್ಲದ ಒಂದು ಅಜ್ಞಾತ ಆಶ್ರಮದಲ್ಲಿ.

“ನಿಮ್ಮ ಮನೆ ಎಷ್ಟು ಸ್ವಚ್ಛವಾಗಿದೆ. ಬಹುಶಃ ಹೆಚ್ಚು ಸಾಮಾನುಗಳಿಲ್ಲದಿರುವುದೇ ಇದಕ್ಕೆ ಕಾರಣವಿರಬೇಕು” ಎಂದ ನನ್ನ ಮಾತಿಗೆ ಅವರು ಕುರ್ಚಿಯಲ್ಲಿ ಕೂರುತ್ತಾ ನನ್ನನ್ನೂ ಕೂರಲು ಹೇಳುತ್ತಾ, “ಇದೂ ಹಾಗೆಯೇ..” ಕಸ ತುಂಬಿಕೊಂಡಷ್ಟೂ ಅದರ ನಿರ್ಮೂಲನ ಕಷ್ಟ ಎನ್ನುವ ಹಾಗೆ ತಮ್ಮ ತಲೆಯ ಕಡೆಗೆ ಕೈ ತೋರಿಸಿದರು. ಆನಂತರ ನಿರ್ಮೋಹಿ ಸ್ವಲ್ಪ ಹೊತ್ತು ಮೌನವಾದರು.

ಯಾವ ಪ್ರಚಾರವನ್ನೂ ಒಲ್ಲದ ತಮ್ಮ ಪಾಡಿಗೆ ತಾವಿರುವ ಈ ತಪಸ್ವಿನಿ ತಮ್ಮ ಪೂರ್ವಾಶ್ರಮದಲ್ಲಿ ಒಬ್ಬ ಶ್ರೇಷ್ಠ ಸಾಹಿತಿಯೂ ಆಗಿದ್ದರು. ನಾನು ಇವರ ಅದ್ಭುತ ವ್ಯಕ್ತಿತ್ವದ ಬಗ್ಗೆ ಬರೆದ ಒಂದು ಲೇಖನ ಇವರಿಗೆ ಮುಜುಗರ ತಂದಿತ್ತು. ಅಸಮಾಧಾನಕ್ಕೆ ಕಾರಣವಾಗಿತ್ತು. ಇಂತಹವರನ್ನು ಭೇಟಿ ಮಾಡಿಸಬೇಕೆಂದೂ ಅವರ ಸಮ್ಮುಖದಲ್ಲಿ ಒಂದು ಪತ್ರಿಕಾ ಸಭೆಯನ್ನು ಕರೆಯಬೇಕೆಂದೂ ನನ್ನ ಪರಿಚಯದ ಸಾಹಿತಿಯೊಬ್ಬರು ನನಗೆ ಬಹಳ ದಿನಗಳಿಂದ ದುಂಬಾಲು ಬಿದ್ದಿದ್ದರು. ಯಾರಿಗೂ ತಿಳಿಯದಂತೆ ಅಜ್ಞಾತವಾಗಿ ಬದುಕುತ್ತಿರುವ ಇವರನ್ನು ನಾನು ಒಮ್ಮೆ ಭೇಟಿಯಾಗಿ ಬಂದಿದ್ದುದೇ ಇದಕ್ಕೆ ಕಾರಣವಾಗಿತ್ತು. “ಅವಳು ಹೋಗಿಬಿಟ್ಟಳೆಂದು ಹೇಳಿಬಿಡಿ, ಹೊರಗಿನ ಪ್ರಪಂಚದಿಂದ ಮನಸ್ಸು ವಿಮುಖವಾದ ಮೇಲೆ ನಾನು ಇರುವ ಅಥವಾ ಇಲ್ಲದಿರುವುದರ ನಡುವೆ ಹೆಚ್ಚೇನೂ ವ್ಯತ್ಯಾಸವಿರುವುದಿಲ್ಲ”, ಆ ಸಾಹಿತಿಗಳ ಕೋರಿಕೆಯನ್ನು ಮುಟ್ಟಿಸಿದಾಗ ಅವರು ಹೀಗೆಂದು ಪ್ರತಿಕ್ರಿಯಿಸಿದ್ದರು.

ಅಲ್ಲಿದ್ದಷ್ಟು ಹೊತ್ತು ಸುಮಾರು ಎರಡು ಗಂಟೆಗಳ ಕಾಲ ಸತತವಾಗಿ, ‘ನಾನು’ ಮತ್ತು ‘ನನ್ನದು’ ಎನ್ನುವುದರ ಸುತ್ತಲೇ ಗಿರಕಿಹೊಡೆಯುವ ಮನುಷ್ಯ ಸ್ವಭಾವದ ಬಗ್ಗೆ ಮಾತನಾಡಿದರು. ಅದರಿಂದ ತಪ್ಪಿಸಿಕೊಳ್ಳವುದರ ಅಗತ್ಯದ ಕುರಿತು ಹೇಳಿದರು. “ವ್ಯಕ್ತಿ ವಿಕಸನ ಮಹತ್ವವಾದ ಸಂಗತಿಯೇನೋ ಸರಿ. ಆದರೆ ನಮಗೆ ಸಾಮಾಜಿಕ ಹೊಣೆಗಾರಿಕೆಯೂ ಅಷ್ಟೇ ಮುಖ್ಯವಲ್ಲವೇ” ಎಂದ ನನಗೆ ಎಂದಿನಿಂದ ಕೊರೆಯುತ್ತಿದ್ದ ಒಂದು ಪ್ರಶ್ನೆಯನ್ನು ಅವರ ಮುಂದಿಟ್ಟೆ. ಅಸಂಖ್ಯ ಸಾಧುಸಂತರು ಮೆರೆಯುತ್ತಿರುವ ಈ ನಮ್ಮ ನಾಡಿನಲ್ಲಿ ದಿನಂಪ್ರತಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆಯಲ್ಲಾ ಯಾಕೆ? ಅವರೆಲ್ಲಾ ಯಾಕೆ ಅಸಹಾಯಕರಾಗಿ ಕೈಕಟ್ಟಿ ಕುಳಿತಿದ್ದಾರೆ? ಅವರಿಗೆ ಏನು ಮಾಡಲೂ ಸಾಧ್ಯವಿಲ್ಲವೇ? ಎಂಬ ನನ್ನ ಭಾವೋದ್ರೇಕದ ಮಾತಿಗೆ, “ನಮ್ಮ ಸಂಸ್ಕೃತಿ ಇಷ್ಟಾದರೂ ಸುರಕ್ಷಿತವಾಗಿರುವುದು ಅವರ ಕಾರಣದಿಂದಲೇ” ಎಂಬ ಅವರ ಮಾತನ್ನು ನನಗೆ ಒಪ್ಪಲಾಗಲಿಲ್ಲ. “ನಮ್ಮ ನಾಡು ದೇವಿಯರ ನಾಡು” ಎಂದೆಲ್ಲಾ ಜಂಭ ಕೊಚ್ಚಿಕೊಳ್ಳುವ ನಮಗೆ ನಮ್ಮ ರೀತಿ ನೀತಿಗಳಲ್ಲಿ ಕಂಡು ಬರುವ ವೈರುಧ್ಯಗಳ ಬಗೆಗೆ ಗಮನಸೆಳೆದಾಗ, ನಮ್ಮ ಜನ ದೇವಿಯನ್ನು ಮರೆತಿದ್ದಾರೆ ಎಂದರು. ಆ ಸಿಂವಾಹಿನಿ ಇನ್ನೆಂದು ತ್ರಿಷೂಲ ಧರಿಸಿ ಬರುತ್ತಾಳೋ ಕಾದು ನೋಡಬೇಕಾಗಿದೆ! ಎಂದೆ.

ನಾವು ಆಶ್ರಮದಿಂದ ಹೊರಬೀಳುವಾಗ ಆ ತಪಸ್ವಿನಿ ನನ್ನ ಕೆನ್ನೆ ಹಿಂಡಿ, ಪ್ರೀತಿಯಿಂದ ತಬ್ಬಿ ಹಿಡಿದು “ನೀವು ನೇರವಾಗಿ ರಣಾಂಗಣಕ್ಕೆ ಧುಮುಕಿ ಕತ್ತಿಯನ್ನು ಹಿಡಿಯಬೇಕಾಗಿಲ್ಲ. ಇರುವ ಜಾಗದಿಂದಲೇ You can create vibrations sitting at a corner. It is possible ನಿಮ್ಮ ಎಲ್ಲಾ ಆದರ್ಶಗಳನ್ನೂ ಬದುಕಿನೊಳಗೆ translate ಮಾಡಿಕೊಳ್ಳಿ. Try to probe.. just one call is enough” ಎಂದರು. ನಂಬರೇ ಗೊತ್ತಿಲ್ಲವಲ್ಲಾ ಎಲ್ಲಿಗೆ, ಯಾರಿಗೆ ಕರೆಮಾಡಲಿ? ಎಂದದ್ದಕ್ಕೆ. ಅದು ನಿಮ್ಮೊಳಗೇ ಇದೆ. ಕ್ರಮೇಣ ಗೊತ್ತಾಗುತ್ತದೆ, try, try. ಸಾಮಾನ್ಯ ಬದುಕನ್ನು ಬದುಕಬೇಡಿ! ಎಂದರು.

ಆಶ್ರಮದಿಂದ ಹೊರಬಂದು ಮುಖ್ಯ ರಸ್ತೆಗೆ ಇಳಿದು ನಮ್ಮ ಕಾರು ಶಹರದ ಕಡೆಗೆ ಓಡುತ್ತಿತ್ತು. ರಸ್ತೆಗೆ ಅಡ್ಡವಾಗಿ ಪೋಲೀಸರ ಕಾವಲು ನಿಂತಿತ್ತು! ಚುನಾವಣೆಯ ದಿನ ಹತ್ತಿರವಾದ್ದರಿಂದ, ನೋಟಿನ ಕಂತೆಗಳನ್ನು ಹೊತ್ತೊಯ್ಯುತ್ತಿರಬಹುದೆಂಬ ಶಂಕೆಯಿಂದ ಎಲ್ಲ ವಾಹನಗಳನ್ನೂ ತಪಾಸು ಮಾಡಲು ಆ ಪೋಲೀಸರು ಕಾವಲು ನಿಂತಿದ್ದರೆಂದು ತಿಳಿದುಬಂತು. ಆದರೆ ಅವರು ನಮ್ಮನ್ನೇನೂ ತಡೆಯಲಿಲ್ಲ. ಮನೆಗೆಬಂದು ಮಲಗಿದೆ ಆ ತಾಪಸಿಯ ಪ್ರೀತಿ ತುಂಬಿದ ಕಣ್ಣುಗಳು ಕಾಡಹತ್ತಿದವು.

ಕಾಯಕ್ಕೆ ನೆರಳಾಗಿ ಕಾಡಿತ್ತು ಮಾಯೆ
ಚೆನ್ನಮಲ್ಲಿಕಾರ್ಜುನಾ.. ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು!

(ಮುಗಿಯಿತು)

About The Author

ಗಿರಿಜಾ ಶಾಸ್ತ್ರಿ

ಗಿರಿಜಾ ಶಾಸ್ತ್ರಿ ಅವರಿಗೆ ಕವಿತೆ ಮತ್ತು ವಿಮರ್ಶೆ ಬರೆಯುವುದರಲ್ಲಿ ಆಸಕ್ತಿ. ಮುಂಬಯಿ ವಿ.ವಿ.ಯಿಂದ  "ಆಧುನಿಕ ಕನ್ನಡ ಕಥಾ ಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ" ವಿಷಯದ ಕುರಿತು ಪಿಎಚ್.ಡಿ. ಮಾಡಿದ್ದಾರೆ. ಇವರ ೭-೮ ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ