ಕಾರ್ಟರ್ ತನ್ನ ಕವಿತೆಗಳಲ್ಲಿ, ಸರಳವಾದ, ಸ್ಪಷ್ಟವಾದ ಶೈಲಿಯನ್ನು ಇಷ್ಟಪಡುತ್ತಾರೆ. ದೀರ್ಘವಾದ ಸಂಕೀರ್ಣ ಕವಿತೆಗಳಿಗಿಂತ ಸರಳವಾದ ಕವಿತೆಗಳನ್ನು ಬರೆಯುವುದು ಹೆಚ್ಚು ಕಷ್ಟ ಎಂದು ಅವರ ಅಭಿಪ್ರಾಯ. ಸರಿಯಾಗಿರುವುದು ಮುಖ್ಯ. “ಇದು ಇದಕ್ಕೆ ಸರಿ ಅಥವಾ ಅದಕ್ಕೆ ಸರಿ ಎಂಬ ಪ್ರಶ್ನೆಯಲ್ಲ, ಅದು ಸರಿಯಾಗಿದೆ ಅಂತ ಅನಿಸಬೇಕು, ಅಷ್ಟೆ. ಕೆಲವೊಮ್ಮೆ ನಿಮಗೆ ಕವಿತೆಗಳ ಪುಸ್ತಕವೊಂದು ಸಿಗುತ್ತದೆ, ಅದರಲ್ಲಿ ಒಂದು ಕವಿತೆಯು ಕವಿ ಹೇಳುತ್ತಿರುವ ವಿಷಯಕ್ಕೆ ಸಂಪೂರ್ಣವಾಗಿ ಸರಿಯಾಗಿರಬಹುದು, ಅವನು ಅದನ್ನು ಹೇಳುತ್ತಿದ್ದಾನೆಂದು ಅವನಿಗೇ ತಿಳಿಯದಿರಬಹುದು.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಗಯಾನಾ (Guyana) ದೇಶದ ಖ್ಯಾತ ಕವಿ ಮಾರ್ಟಿನ್ ಕಾರ್ಟರ್-ರವರ (Martin Carter, 1927-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಮಾರ್ಟಿನ್ ವೈಲ್ಡ್ ಕಾರ್ಟರ್ 1927-ರಲ್ಲಿ ಬ್ರಿಟಿಷ್ ಗಯಾನಾದ (British Guiana – ಬ್ರಿಟಿಷ್ ಆಡಳಿತದಡಿಯಲ್ಲಿದ್ದಾಗ ‘ಗಯಾನಾ’-ವನ್ನು ಇಂಗ್ಲಿಷಿನಲ್ಲಿ ಹೀಗೆ ಬರೆಯುತ್ತಿದ್ದರು, ನಂತರ Guyana ಎಂದು ಬದಲಿಸಲಾಯಿತು) ಜಾರ್ಜ್‌ಟೌನ್-ನಲ್ಲಿ (Georgetown) ಜನಿಸಿದರು. ಅವರ ಕುಟುಂಬವು ಗಯಾನಾದ ಮಿಶ್ರ-ಜನಾಂಗದ ಮಧ್ಯಮ ವರ್ಗದ ಭಾಗವಾಗಿತ್ತು – ಅವರು ಆಫ್ರಿಕನ್, ಪೋರ್ಚುಗೀಸ್ ಹಾಗೂ ಅಮೆರಿಂಡಿಯನ್ ಪೂರ್ವಜರನ್ನು ಹೊಂದಿದ್ದಾರೆ. ಅವರ ತಂದೆ ಸರಕಾರಿ ಅಧಿಕಾರಿಯಾಗಿದ್ದರು, ಮತ್ತು ಅವರಿಗೆ ತತ್ವಶಾಸ್ತ್ರದ ಕಡೆ ಒಲವಿತ್ತು, ಓದುತ್ತಿದ್ದರು, ಚರ್ಚಿಸುತ್ತಿದ್ದರು. ಜೊತೆಗೆ ಅವರ ತಾಯಿಯೂ ಸಹ ಪುಸ್ತಕಪ್ರೇಮಿಯಾಗಿದ್ದರು ಹಾಗೂ ಕಾವ್ಯವಾಚನದಲ್ಲಿ ಆಸಕ್ತಿ ಹೊಂದಿದ್ದರು. ಮಾರ್ಟಿನ್ ಕಾರ್ಟರ್ 1939 ಮತ್ತು 1945-ರ ನಡುವೆ ಪ್ರತಿಷ್ಠಿತ ಕ್ವೀನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ವ್ಯಾಸಂಗ ಮುಗಿಯುತ್ತಿದ್ದಂತೆ, ಅವರಿಗೆ ಸರಕಾರಿ ನೌಕರಿ ದೊರೆಯಿತು, ಮೊದಲು ಅಂಚೆ ಕಚೇರಿಯಲ್ಲಿ ಕಾರ್ಯವಹಿಸಿದ ಅವರು, ನಂತರ ಜೈಲುಗಳ ಸೂಪರಿಂಟೆಂಡೆಂಟ್‌ನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ಅವರ ಮೊದಲ ಕವನಗಳು 1950-ರಲ್ಲಿ ‘ಥಂಡರ್’ (Thunder) ಹಾಗೂ ಮುಂದಿನ ವರ್ಷದಲ್ಲಿ ‘ಕೈಕ್-ಓವರ್-ಆಲ್’ (Kyk-Over-Al) ಎಂಬ ಪತ್ರಿಕೆಗಳಲ್ಲಿ ಪ್ರಕಟವಾಗಲು ಪ್ರಾರಂಭಿಸಿದವು. ಅವರು ‘ಥಂಡರ್’ ಪತ್ರಿಕೆಯಲ್ಲಿ ಎಂ. ಬ್ಲ್ಯಾಕ್ (M. Black) ಎಂಬ ಗುಪ್ತನಾಮದಲ್ಲಿ (ತಮ್ಮ ಸರಕಾರಿ ಹುದ್ದೆಯನ್ನು ರಕ್ಷಿಸಲು) ರಾಜಕೀಯ ಲೇಖನಗಳನ್ನು ಬರೆಯುತ್ತಿದ್ದರು. 1951-ರಲ್ಲಿ, The Hill of Fire Glows Red ಹೆಸರಿನ ಅವರ ಮೊದಲ ಕವನ ಸಂಗ್ರಹ, ಎ. ಜೆ. ಸೆಮೋರ್ ಅವರ (A. J. Seymour) ಮಿನಿಯೇಚರ್ ಪೊಯೆಟ್ ಸರಣಿಯಲ್ಲಿ (Miniature Poet Series) ಪ್ರಕಟವಾಯಿತು, ನಂತರ 1952-ರಲ್ಲಿ The Kind Eagle (Poems of Prison) (ಜೈಲು ಕವಿತೆಗಳು), ಮತ್ತು The Hidden Man (Other Poems of Prison) (ಜೈಲಿನ ಇತರ ಕವಿತೆಗಳು) ಪ್ರಕಟವಾದವು. ಮಾರ್ಟಿನ್ ಕಾರ್ಟರ್-ರವರು ಜೀವನದ ಈ ಹಂತದಲ್ಲಿ ಜೈಲು ಇನ್ನೂ ರೂಪಕವಾಗಿಯೇ ಇತ್ತು. ಕಾರ್ಟರ್ ಅವರ ಅಂತರರಾಷ್ಟ್ರೀಯ ಖ್ಯಾತಿಯನ್ನು ಸ್ಥಾಪಿಸಿದ Poems of Resistance from British Guiana ಸಂಗ್ರಹವನ್ನು 1954-ರಲ್ಲಿ ಲಂಡನ್ನಿನ ಕಮ್ಯುನಿಸ್ಟ್ ಪುಸ್ತಕಗಳ ಪ್ರಕಾಶಕರಾದ ಲಾರೆನ್ಸ್ ಮತ್ತು ವಿಶಾರ್ಟ್ (Lawrence and Wishart) ಪ್ರಕಾಶನದಿಂದ ಪ್ರಕಟವಾಯಿತು.
ಬ್ರಿಟಿಷ್ ಗಯಾನಾದಲ್ಲಿ ರಾಷ್ಟ್ರೀಯತಾವಾದಿ ಭಾವನೆ ಬೆಳೆಯುತ್ತಿತ್ತು, ಮತ್ತು ಮಾರ್ಟಿನ್ ಕಾರ್ಟರ್ ತಮ್ಮನ್ನು ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿಯ (ಪಿಪಿಪಿ) ಕೆಲಸಗಳಲ್ಲಿ ತೊಡಗಿಸಿಕೊಂಡರು. ಈ ಪಕ್ಷವನ್ನು 1950-ರಲ್ಲಿ ಫೋರ್ಬ್ಸ್ ಬರ್ನ್‌ಹ್ಯಾಮ್-ರ (Forbes Burnham) ಅಧ್ಯಕ್ಷತೆಯಲ್ಲಿ ಹಾಗೂ ಚೆಡಿ ಜಗನ್-ರ (Cheddi Jagan) ರಾಜಕೀಯ ನಾಯಕತ್ವದಲ್ಲಿ ಪ್ರಾರಂಭಿಸಲಾಯಿತು. “ಗಯಾನಾದಲ್ಲಿ ಎಲ್ಲರೂ ಎಡಪಂಥೀಯರಾಗಿದ್ದರು, ಇಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿತ್ತು,” ಎಂದು ಕಾರ್ಟರ್ ನೆನಪಿಸಿಕೊಳ್ಳುತ್ತಾರೆ. “ವಾಸ್ತವವಾಗಿ ಈ ಪಕ್ಷದ ಸದಸ್ಯರಲ್ಲದ ಏಕೈಕ ಜನರು ವೃತ್ತಿಪರರು, ವಕೀಲರು ಮತ್ತು ವೈದ್ಯರಾಗಿದ್ದರು, ಅವರು ರಾಜಕೀಯಕ್ಕೆ ಬಂದರೆ ತಮ್ಮ ಸ್ಥಾನಗಳನ್ನು ರಾಜಿ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದರು.”
ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿಯಲ್ಲಿ ಕಾರ್ಟರ್ ಸಕ್ರಿಯವಾಗಿ ಕೆಲಸ ಮಾಡತೊಡಗಿದರು; ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು ಮತ್ತು 1953-ರ ಚುನಾವಣೆಯಲ್ಲಿ ನ್ಯೂ ಆಮ್ಸ್ಟರ್‌ಡ್ಯಾಮ್ (New Amsterdam) ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು (ಅವರು ಹೀನಾಯವಾಗಿ ಸೋತರು ಮತ್ತು ನಂತರ ಎಂದಿಗೂ ಚುನಾವಣೆಗೆ ನಿಲ್ಲಲಿಲ್ಲ). ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿ ಚುನಾವಣೆಯನ್ನು ಗೆದ್ದಿತು ಮತ್ತು ಜಗನ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು; ಈ ಸರಕಾರವು 133 ದಿನಗಳ ಕಾಲ ಅಧಿಕಾರದಲ್ಲಿತ್ತು. ಗಯಾನಾ ದೇಶವು ಕಮ್ಯುನಿಸ್ಟರ ಕೈಯಲ್ಲಿ ಸೇರಿಬಿಟ್ಟಿದೆ ಎಂದು ವಾದಿಸಿ, ಬ್ರಿಟಿಷ್ ಸರಕಾರವು ಸೈನ್ಯವನ್ನು ಕಳುಹಿಸಿ ಸಂವಿಧಾನವನ್ನು ಅಮಾನತುಗೊಳಿಸಿತು. ರೊಮೇನಿಯಾದಲ್ಲಿ ಜರುಗಿದ ಸಮ್ಮೇಳನವೊಂದರಿಂದ ಹಿಂತಿರುಗುತ್ತಿದ್ದಾಗ ಕಾರ್ಟರ್ ಅವರನ್ನು ಟ್ರಿನಿಡಾಡ್‌ನಲ್ಲಿ ಬಂಧಿಸಲಾಯಿತು ಮತ್ತು ನಿಷೇಧಿತ ವಲಸಿಗ ಎಂದು ಘೋಷಿಸಲಾಯಿತು. ಅವರು ಮನೆಗೆ ತಲುಪುವ ಹೊತ್ತಿಗೆ, ಬ್ರಿಟಿಷ್ ಯುದ್ಧನೌಕೆಗಳು ಮತ್ತು ಸೈನಿಕರು ಅವರ ನಗರದ ಮೇಲೆ ಹಿಡಿತ ಸಾಧಿಸಿದ್ದರು. ಅವರ ಕಾವ್ಯವು ಹೊಸ ಶಕ್ತಿ ಮತ್ತು ತೀವ್ರತೆಯನ್ನು ಪಡೆದುಕೊಂಡಿತು.
1955-ರಲ್ಲಿ ಫೋರ್ಬ್ಸ್ ಬರ್ನ್‌ಹ್ಯಾಮ್-ರ ಗುಂಪು ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿಯಿಂದ ಬೇರ್ಪಟ್ಟು ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಪಕ್ಷವನ್ನು ರಚಿಸಿತು. ಭಾರತೀಯ ಮೂಲದ ಜಗನ್ ಹಾಗೂ ಆಫ್ರಿಕನ್ ಮೂಲದ ಬರ್ನ್‌ಹ್ಯಾಮ್ ವಿಭಜನೆಗೆ ಜನಾಂಗವು ಮುಖ್ಯ ನೇಮಕಾತಿದಾರನಾಗಿರುವುದನ್ನು ನೋಡಿ ಕಾರ್ಟರ್ ನಿರಾಶೆಗೊಂಡಿದ್ದರು, ಹಾಗೂ ಜಗನ್ ಅವರು ಕಾರ್ಟರ್-ರನ್ನು ಒಬ್ಬ “ಅಲ್ಟ್ರಾ ಲೆಫ್ಟ್” ಗುಂಪಿನ ಸದಸ್ಯನೆಂದು ಕೂಡ ಟೀಕಿಸಿದ್ದರು. ಈ ಕಾರಣಗಳಿಂದ ಕಾರ್ಟರ ಪಕ್ಷವನ್ನು ಬಿಟ್ಟು ಹೊರಬಂದರು.
1954-ರಿಂದ 1959-ರವರೆಗೆ ಕಾರ್ಟರ್ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು ಮತ್ತು 1961 ರವರೆಗೆ ಯಾವುದೇ ಕವಿತೆಗಳನ್ನು ಪ್ರಕಟಿಸಲಿಲ್ಲ. 1959-ರಲ್ಲಿ ಅವರು ಬೂಕರ್ಸ್ (ಆಗ ಗಯಾನಾದ ಸಕ್ಕರೆ ಎಸ್ಟೇಟ್‌ಗಳ ಮಾಲೀಕ ಸಂಸ್ಥೆ) ಎಂಬ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಮಾಹಿತಿ ಅಧಿಕಾರಿಯಾಗಿ ಸೇರಿದರು, 1965 ಮತ್ತು 1966-ರ ನಡುವೆ ‘ಬೂಕರ್ಸ್ ನ್ಯೂಸ್’ ಪತ್ರಿಕೆಯನ್ನು ಸಂಪಾದಿಸುತ್ತಿದ್ದರು. 1962-ರ ಗಲಭೆಗಳು ಅವರನ್ನು ಜಗನ್ ಸರ್ಕಾರದ ವಿರುದ್ಧ ಮುಷ್ಕರ ನಡೆಸುವವರ ಪರವಾಗಿ ಬೀದಿಗೆ ತಂದಿತು. Jail Me Quickly ಎಂಬ ಕವಿತೆಗಳ ಮಾಲೆಯು ಈ ಅವಧಿಯಲ್ಲಿ ಪ್ರಕಟವಾಯಿತು. 1967-ರಲ್ಲಿ ಅವರು ಬರ್ನ್‌ಹ್ಯಾಮ್ ಸರ್ಕಾರದಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು ಮತ್ತು 1968-ರಲ್ಲಿ ಅದೇ ಸರ್ಕಾರದಲ್ಲಿ ವಾರ್ತಾ ಸಚಿವರಾಗಿ ಸೇರಿ, “ಬಾಯಿಯನ್ನು ಯಾವಾಗಲೂ ಮುಚ್ಚಿಸಲಾಗುತ್ತೆ / ಅದು ಬದುಕಲು ಉಣ್ಣುವ ಆಹಾರದಿಂದ” ಎಂಬ ಕವನವನ್ನು ಬರೆದು, 1970-ರಲ್ಲಿ ರಾಜೀನಾಮೆ ನೀಡುವವರೆಗೆ ಆ ಹುದ್ದೆಯಲ್ಲಿದ್ದರು. ಈ ಹಂತದ ಹೊತ್ತಿಗೆ ಬರ್ನ್‌ಹ್ಯಾಮ್ ಸರ್ಕಾರದಲ್ಲಿ ಮೆಲ್ಲಮೆಲ್ಲನೆ ತಲೆಯೆತ್ತುತ್ತಿರುವ ಭ್ರಷ್ಟಾಚಾರ, ಸರ್ವಾಧಿಕಾರತ್ವ ಮತ್ತು ಜನಾಂಗೀಯತೆಯು ಯಾವನೇ ಒಬ್ಬ ಸಮಗ್ರತೆಯುಳ್ಳ ಮನುಷ್ಯ ಸಹಿಸಲಾಗದಷ್ಟು ಹೆಚ್ಚಾಗಿತ್ತು.
1970-ರ ದಶಕದಲ್ಲಿ, ಕಾರ್ಟರ್ ಅವರ ಕವಿತೆಗಳು ಹೆಚ್ಚು ವೈಯಕ್ತಿಕ ಮತ್ತು ಚಿಂತನಶೀಲ ಧ್ವನಿಯನ್ನು ಪಡೆದುಕೊಂಡವು. ಅವರ Poems of Succession ಸಂಕಲನವನ್ನು ನ್ಯೂ ಬೀಕನ್ ಪ್ರಕಾಶನದವರು 1978-ರಲ್ಲಿ ಪ್ರಕಟಿಸಿದರು. ಅದೇ ವರ್ಷದಲ್ಲಿ, ವಾಲ್ಟರ್ ರಾಡ್ನಿ ನೇತೃತ್ವದಲ್ಲಿ ವರ್ಕಿಂಗ್ ಪೀಪಲ್ಸ್ ಅಲೈಯನ್ಸ್ ಬರ್ನ್‌ಹ್ಯಾಮ್ ಮತ್ತು ಪಿಎನ್‌ಸಿ ತಮ್ಮ ಭ್ರಷ್ಟ ಗುಂಪನ್ನು ಶಾಶ್ವತ ರಾಜಕೀಯ ಅಧಿಕಾರದಲ್ಲಿ ಸ್ಥಾಪಿಸುವ ಪ್ರಯತ್ನಗಳ ವಿರುದ್ಧ ರಾಜಕೀಯ ಮತ್ತು ಭೌತಿಕ ಹೋರಾಟವನ್ನು ಪ್ರಾರಂಭಿಸಿದಾಗ ಕಾರ್ಟರ್ ರಾಜಕೀಯ ಹೋರಾಟಕ್ಕೆ ಮತ್ತೆ ಪ್ರವೇಶಿಸಿದರು. 1978-ರಲ್ಲಿ ಪಿಎನ್‌ಸಿ ಚುನಾವಣೆಗಳನ್ನು ನಡೆಸಲು ನಿರಾಕರಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಿಎನ್‌ಸಿ ಗೂಂಡಾಗಳು ಪ್ರೀತಿಯ ರಾಷ್ಟ್ರಕವಿ ಕಾರ್ಟರ್ ಅವರನ್ನು ಥಳಿಸಿದ್ದರು; 1979-ರ ಪ್ರದರ್ಶನದಲ್ಲಿ ಅವರು ಉಪಸ್ಥಿತರಿದ್ದರು, ಅಲ್ಲಿ ಕ್ಯಾಥೋಲಿಕ್ ಸ್ಟ್ಯಾಂಡರ್ಡ್ ಪತ್ರಿಕೆಯ ಛಾಯಾಗ್ರಾಹಕ, ಜೆಸುವಿಟ್ ಪಾದ್ರಿ, ಫಾದರ ಬರ್ನರ್ಡ್ ಡಾರ್ಕ್ ಅವರನ್ನು ಹಗಲು ಹೊತ್ತಿನಲ್ಲಿ ಹತ್ಯೆ ಮಾಡಲಾಯಿತು. ಅವರ ಕಾವ್ಯದಲ್ಲಿ ಕೋಪ ಹಾಗೂ ಕಹಿತನ ಮತ್ತೆ ಮರಳಿ ಬಂತು.
ಅವರ ‘ಗಯಾನಾದ ಜನರಿಗೆ ಮುಕ್ತ ಪತ್ರ’ವು ಪಿಎನ್‌ಸಿ ಗಯಾನೀಸ್ ಸಮಾಜವನ್ನು ಯಾವ ಕೆಟ್ಟ ಆಳಕ್ಕೆ ಕೊಂಡೊಯ್ಯುತ್ತಿದೆ ಎಂಬುದರ ಬಗ್ಗೆ ಗಮನ ಸೆಳೆಯುವ ಒಂದು ಧೈರ್ಯಶಾಲಿ ಸಾರ್ವಜನಿಕ ಪ್ರಯತ್ನವಾಗಿತ್ತು. ಇದಕ್ಕೆ ಕಾರ್ಟರ್ ಅವರ ಕಾವ್ಯಾತ್ಮಕ ಪ್ರತಿಕ್ರಿಯೆಯು Poems of Affinity 1978-80 (Release Publishers, 1980) ಎಂಬ ಸಂಕಲನದಲ್ಲಿರುವ ಸಂಕ್ಷಿಪ್ತ, ಒಗಟಿನಂತಹ, ದಟ್ಟವಾದ ಬಹು-ಪದರದ ಕವಿತೆಗಳಲ್ಲಿ ಬಂದಿತು, ಇದು ಬರ್ನ್‌ಹ್ಯಾಮ್ ಆಡಳಿತದ ದುಷ್ಕೃತ್ಯಗಳು ಮರೆತುಹೋದ ನಂತರವೂ ನೆನಪಿನಲ್ಲಿ ಉಳಿಯುವ ಕರಾಳ ಕಾಲದ ಕತ್ತಲೆಯ ಹೃದಯವನ್ನು ಕಲಾವಿದ ಹೇಗೆ ಕೂಲಂಕಷವಾಗಿ ವಿಶ್ಲೇಷಿಸಬಹುದು ಎಂಬುದರ ಕುರಿತು ಒಂದು ನಿರರ್ಗಳ ಹೇಳಿಕೆಯನ್ನು ಒದಗಿಸುತ್ತದೆ.
ಕಾರ್ಟರ್ ತನ್ನ ಕವಿತೆಗಳಲ್ಲಿ, ಸರಳವಾದ, ಸ್ಪಷ್ಟವಾದ ಶೈಲಿಯನ್ನು ಇಷ್ಟಪಡುತ್ತಾರೆ. ದೀರ್ಘವಾದ ಸಂಕೀರ್ಣ ಕವಿತೆಗಳಿಗಿಂತ ಸರಳವಾದ ಕವಿತೆಗಳನ್ನು ಬರೆಯುವುದು ಹೆಚ್ಚು ಕಷ್ಟ ಎಂದು ಅವರ ಅಭಿಪ್ರಾಯ. ಸರಿಯಾಗಿರುವುದು ಮುಖ್ಯ. “ಇದು ಇದಕ್ಕೆ ಸರಿ ಅಥವಾ ಅದಕ್ಕೆ ಸರಿ ಎಂಬ ಪ್ರಶ್ನೆಯಲ್ಲ, ಅದು ಸರಿಯಾಗಿದೆ ಅಂತ ಅನಿಸಬೇಕು, ಅಷ್ಟೆ. ಕೆಲವೊಮ್ಮೆ ನಿಮಗೆ ಕವಿತೆಗಳ ಪುಸ್ತಕವೊಂದು ಸಿಗುತ್ತದೆ, ಅದರಲ್ಲಿ ಒಂದು ಕವಿತೆಯು ಕವಿ ಹೇಳುತ್ತಿರುವ ವಿಷಯಕ್ಕೆ ಸಂಪೂರ್ಣವಾಗಿ ಸರಿಯಾಗಿರಬಹುದು, ಅವನು ಅದನ್ನು ಹೇಳುತ್ತಿದ್ದಾನೆಂದು ಅವನಿಗೇ ತಿಳಿಯದಿರಬಹುದು.”
ಕಮಾಉ ಬ್ರಾಥ್‌ವೆಯಿಟ್ (Kamau Brathwaite) ಮತ್ತು ಗೋರ್ಡನ್ ರೋಹ್ಲರ್ (Gordon Rohlehr) ಅವರಂತಹ ವಿಮರ್ಶಕರ ಪ್ರಬಂಧಗಳು ಕಾರ್ಟರ್ ಅವರನ್ನು ಕೆರಿಬಿಯನ್ ಕವಿಗಳಲ್ಲಿ ಅತ್ಯಂತ ಮುಂಚೂಣಿಯಲ್ಲಿ ಪರಿಗಣಿಸಬೇಕೆಂದು ಸ್ಪಷ್ಟಪಡಿಸಿದ್ದರೂ, ಇತರ ಕವಿಗಳನ್ನು ಹೊರತುಪಡಿಸಿ, ಅವರ ಖ್ಯಾತಿ ಗಯಾನಾವನ್ನು ಮೀರಿ ಹೆಚ್ಚು ವಿಸ್ತರಿಸಲಿಲ್ಲ ಮತ್ತು ಅವರನ್ನು ಕೇವಲ ಪ್ರತಿಭಟನೆಯ ಕವಿಯಾಗಿ ನೋಡುವ ಪ್ರವೃತ್ತಿ ಇತ್ತು. ನಂತರ ಪ್ರಕಟವಾದ ಹಲವಾರು ಲೇಖನಗಳು ಆ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಾರಂಭಿಸಿವೆ. ರೂಪರ್ಟ್ ರೂಪನರೈನ್ (Rupert Roopnaraine) ಅವರ ಅದ್ಭುತ ಪ್ರಬಂಧ, ”Web of October: Rereading Martin Carter” (Peepal Tree, 1987) ಮಾರ್ಟಿನ್ ಕಾರ್ಟರ್-ರವರ ಕಾವ್ಯದಲ್ಲಿ ವೈಯಕ್ತಿಕ ಮತ್ತು ತಾತ್ವಿಕತೆಯು ರಾಜಕೀಯವನ್ನು ಎಷ್ಟು ಸಂಪೂರ್ಣವಾಗಿ ಪ್ರವೇಶಿಸುತ್ತದೆ, ಹಾಗೆಯೇ ರಾಜಕೀಯ ಹೇಗೆ ಅವರ ವೈಯಕ್ತಿಕ ಮತ್ತು ತಾತ್ವಿಕ ನಿಲುವುಗಳಲ್ಲಿ ಪ್ರವೇಶಿಸಿವೆ, ಹೇಗೆ ಅಂತರ್ವ್ಯಾಪಿಸಲ್ಪಟ್ಟಿದೆ ಎಂಬುದನ್ನು ತೋರಿಸಿದೆ.
ಅವರ ಆಯ್ದ ಕವಿತೆಗಳ ಸಂಕಲನ 1989-ರಲ್ಲಿ (Demerara Publishers) ಹೊರಬಂತು ಹಾಗೂ, ಮತ್ತೆ, 1997-ರಲ್ಲಿ (Red Thread Press) ಇದರದ್ದೇ ವಿಸ್ತೃತ ಪರಿಷ್ಕೃತ ಸಂಪುಟವೊಂದು ಪ್ರಕಟವಾಯಿತು. ಈ ಸಂಪುಟದ ಪ್ರಕಟಣೆಯಿಂದ ಕಾರ್ಟರ್ ಅವರ ಕಾವ್ಯವು ಎಷ್ಟು ಗಣನೀಯವಾಗಿದೆ, ಅತ್ಯುನ್ನತ ಗುಣಮಟ್ಟದ್ದಾಗಿದೆ ಎಂಬುದನ್ನು ಮೊದಲ ಬಾರಿಗೆ ನೋಡಲು ಸಾಧ್ಯವಾಯಿತು. ಸ್ಪ್ಯಾನಿಷ್ ಭಾಷೆಗೆ ಅನುವಾದಗೊಂಡ ಅವರ ಆಯ್ದ ಕವಿತೆಗಳ ದ್ವಿಭಾಷಾ ಇಂಗ್ಲಿಷ್/ಸ್ಪ್ಯಾನಿಷ್ ಸಂಗ್ರಹ, Poesias Escogidas (Peepal Tree, 1999), ಕಾರ್ಟರ್ ಒಬ್ಬ ವಿಶ್ವಕವಿ, ಅವರನ್ನು ಶ್ರೇಷ್ಠ ಲ್ಯಾಟಿನ್ ಅಮೇರಿಕನ್ ಕವಿಗಳಾದ ನೆರೂಡಾ, ಗಿಯ್ಯೆನ್ ಮತ್ತು ಸೀಸಾರ್ ವಲೇಹೊ ಅವರ ಅತ್ಯುನ್ನತ ಸಹವಾಸದಲ್ಲಿ ನೋಡಬೇಕೆಂದು ಓದುಗರಿಗೆ ನೆನಪಿಸಿತು.
2000-ರಲ್ಲಿ, ಪೀಪಲ್ ಟ್ರೀ ಪ್ರಕಾಶನವು ಸ್ಟುವರ್ಟ್ ಬ್ರೌನ್ (Stewart Brown) ಅವರ ಸಂಪಾದಕತ್ವದಲ್ಲಿ All Are Involved: The Art of Martin Carter ಎಂಬ ಮಾರ್ಟಿನ್ ಕಾರ್ಟರ್-ರ ಬದುಕು ಬರಹಗಳ ಬಗ್ಗೆ ಒಂದು ವಿಮರ್ಶಾ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿತು. ಈ ಪ್ರಬಂಧ ಸಂಕಲನವು ಬಹುತೇಕ ಎಲ್ಲಾ ಪ್ರಮುಖ ಕೆರಿಬಿಯನ್ ವಿಮರ್ಶಕರು, ಹಾಗೂ ಲ್ಯಾಮಿಂಗ್ ಮತ್ತು ವಾಲ್ಕಾಟ್ ಸೇರಿದಂತೆ ಕಾರ್ಟರ್ ಅವರ ಸಮಕಾಲೀನರು, ಮತ್ತು ಕಾರ್ಟರ್ ಅವರ ಕಾವ್ಯಾತ್ಮಕ ಮತ್ತು ಮಾನವೀಯ ಉದಾಹರಣೆಗಳಿಗೆ ಋಣಿಯಾಗಿರುವ ಯುವ ಬರಹಗಾರರ ಪ್ರಬಂಧಗಳೊಂದಿಗೆ, ಕಾರ್ಟರ್ ಅವರ ಮಹಾನ್ ಸಾಧನೆಯನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ವಿಧಾನಗಳನ್ನು ಒದಗಿಸಿತು.
1990-ರ ದಶಕದಲ್ಲಿ ಕಾರ್ಟರ್ ಸ್ವತಃ ಅನಾರೋಗ್ಯದಿಂದ ಬಳಲುತ್ತಿದ್ದರು, ಮತ್ತು ಅವರಿಗೆ ದೊರಕಿದ ಮನ್ನಣೆಯ ಬಹುಪಾಲು ಅವರ ಜೀವನದ ಕೊನೆಯಲ್ಲಿ ಅಥವಾ ಅವರ ನಿಧನದ ನಂತರ ಬಂದಿರುವುದು ದುಃಖಕರವಾದ ಸಂಗತಿ. ಅವರು ಎಂದಿಗೂ ಖ್ಯಾತಿಯನ್ನು ಬಯಸಲಿಲ್ಲ, ಅವರ ಕೃತಿಗಳ ಸ್ವಯಂ-ಪ್ರಚಾರಕರಾಗಿರಲಿಲ್ಲ. ಅವರು ಬರೆದ ಕವಿತೆಗಳನ್ನು ಅವರು ಬರೆಯಬೇಕಾಗಿತ್ತು. All Are Involved ವಿಮರ್ಶಾ ಪ್ರಬಂಧ ಸಂಕಲನ ಅವರ ಸಹ ಬರಹಗಾರರು ಅವರನ್ನು ಎಷ್ಟು ಗೌರವಿಸುತ್ತಾರೆ ಎಂಬುದನ್ನು ಪ್ರದರ್ಶಿಸುತ್ತದೆ. ಈ ಸಹ ಬರಹಗಾರರ ಆಚೆಗೆ ಕಾರ್ಟರ್ ಅವರ ಕಾವ್ಯವನ್ನು ತಮ್ಮ ಹೃದಯಗಳಲ್ಲಿ ನೆಲೆಕೊಟ್ಟ ಅಸಂಖ್ಯಾತ ಗಯಾನಾ ದೇಶವಾಸಿಗಳಿದ್ದರು.
1989-ರಲ್ಲಿ ಕಾರ್ಟರ್ ಅವರ ಆಯ್ದ ಕವಿತೆಗಳಿಗೆ ಬರೆದ ಮುನ್ನುಡಿಯಲ್ಲಿ, ಕವಿ ಮತ್ತು ಕಾದಂಬರಿಕಾರ ಇಯನ್ ಮೆಕ್‌ಡೋನಲ್ಡ್ (Ian McDonald) ಹೀಗೆ ಬರೆದಿದ್ದಾರೆ: “ಅವರು ಯಾವುದೇ ಸಂದೇಹವಿಲ್ಲದೆ, ಕೆರಿಬಿಯನ್ ಪ್ರದೇಶದಲ್ಲಿ ಹೊರಹೊಮ್ಮಿದ ಅತ್ಯುತ್ತಮ ಕವಿಗಳಲ್ಲಿ ಒಬ್ಬರು. ಮತ್ತು ಅವರ ಕಾವ್ಯದ ವೈವಿಧ್ಯಮಯ ಸೂಕ್ಷ್ಮತೆ ಮತ್ತು ಬಲವು ಅವರನ್ನು ನಿಸ್ಸಂದೇಹವಾಗಿ ವಿಶ್ವ ಕವಿಗಳ ಮುಂಚೂಣಿಗೆ ಕೊಂಡೊಯ್ಯುತ್ತದೆ. ಅವರ ಹಲವಾರು ಕವಿತೆಗಳಿಗೆ ಕಾರಣವಾದ ರಾಜಕೀಯವನ್ನು ಮರೆತುಹೋದ ನಂತರ ಮತ್ತು ಅವರು ಕಟುವಾಗಿ ಆರೋಪಿಸಿದ ಸಮಾಜವನ್ನು “ಸಂಪೂರ್ಣವಾಗಿ ಗಲ್ಲಿಗೇರಿಸಿದ” ನಂತರ, ಅವರ ಕಾವ್ಯವು ಹೊಸ ಪೀಳಿಗೆಯಲ್ಲಿ ಸಹಾನುಭೂತಿಯ ನಾದವನ್ನು ನುಡಿಸುತ್ತಲೇ ಇರುತ್ತದೆ.”
ಮಾರ್ಟಿನ್ ಕಾರ್ಟರ್ ಎಂದಿಗೂ ಗಯಾನಾವನ್ನು ತೊರೆಯಲಿಲ್ಲ. ಬೇರೆ ದೇಶದಲ್ಲಿ ಮನೆಮಾಡಲು ಬಯಸದೆ ತನ್ನ ಪ್ರೀತಿಯ ಸಮಾಜ ಅಳುಗುವುದನ್ನು ಸಹಿಸಿಕೊಂಡ ಕೆಲವೇ ಕೆರಿಬಿಯನ್ ಬರಹಗಾರರಲ್ಲಿ ಅವರು ಒಬ್ಬರು. ಅವರಿಗೆ ನೈಪಾಲ್ ಅಥವಾ ವಾಲ್ಕಾಟ್ ಅವರ ಮನ್ನಣೆ ಸಿಕ್ಕಿಲ್ಲ, ಮತ್ತು ಅವರ ಕೃತಿಗಳ ಸಂಖ್ಯೆ ತುಲನಾತ್ಮಕವಾಗಿ ಸಣ್ಣದಾಗಿದೆ. ಆದರೆ ಅವರಿಗೆ ದೊರಕಿರುವ ಗೌರವ ಸಾಹಿತ್ಯಿಕ ಖ್ಯಾತಿಯನ್ನು ಅಪ್ರಸ್ತುತಗೊಳಿಸುತ್ತದೆ. ಏಕೆಂದರೆ, ವಸಾಹತುಶಾಹಿ ನಂತರದ ಗಯಾನಾದ ಕರಾಳತೆ ಮತ್ತು ಗೊಂದಲವನ್ನು ಕಾರ್ಟರ್-ಗಿಂತ ಹೆಚ್ಚಾಗಿ ಬೇರೆ ಯಾರೂ ಶೋಧಿಸಿಲ್ಲ. ಪರಕೀಯತೆ ಮತ್ತು ಕಹಿ ಅನುಭವಗಳ ಹೊರತಾಗಿಯೂ, ಅವರು ತಮ್ಮ ಸಮಾಜಕ್ಕೆ ಅಮೂಲ್ಯವಾದ ಸಾಹಿತ್ಯಿಕ ಪರಂಪರೆಯನ್ನು ನೀಡಿದ್ದಾರೆ.
ಮಾರ್ಟಿನ್ ಕಾರ್ಟರ್-ರವರ ‘ಬದುಕು-ಬರಹ’ ಕುರಿತ ಈ ಪರಿಚಯವನ್ನು ಬ್ರೂಸ್ ಪ್ಯಾಡಿಂಗ್ಟನ್ ಬರೆದ ‘Martin Carter: The Poems Man’ (Caribbean Beat, Issue 13, Spring 1995) ಎಂಬ ಲೇಖನದ ಹಾಗೂ Peepal Tree Press ಪ್ರಕಾಶನದ ಜಾಲತಾನದಲ್ಲಿರುವ ಮಾರ್ಟಿನ್ ಕಾರ್ಟರ್-ರವರ ಪರಿಚಯ ಲೇಖನದ ಆಯ್ದ ಭಾಗಗಳನ್ನು ಅನುವಾದಿಸಿ, ಸೇರಿಸಿ ಬರೆಯಲಾಗಿದೆ.
೧
ಒಂದು ಸಣ್ಣ ಶಹರದ ಮುಸ್ಸಂಜೆಯಲ್ಲಿ
ಮೂಲ: In a Small City at Dusk
ಒಂದು ಸಣ್ಣ ಶಹರದ ಮುಸ್ಸಂಜೆಯಲ್ಲಿ
ಹಕ್ಕಿಯಾವುದು ಬಾವಲಿಯಾವುದೆಂದು
ಗುರುತಿಸುವುದು ಕಷ್ಟ.
ಎರಡೂ ವೇಗವಾಗಿ ಹಾರುತ್ತವೆ:
ಒಂದು ಕತ್ತಲೆಯಿಂದ ದೂರ
ಒಂದು ಕತ್ತಲೆಯ ಕಡೆಗೆ.
ಹಕ್ಕಿ ಹಾರುತ್ತದೆ ಮರದಲ್ಲಿರುವ ಗೂಡಿನ ಕಡೆಗೆ.
ಬಾವಲಿ ಹಾರುತ್ತದೆ ಮರದ ಕೊಂಬೆಗಳಲ್ಲಿರುವ
ಔತಣದ ಕಡೆಗೆ.
ಒಂದಕ್ಕಿನ್ನೊಂದರ ಪರಿಚಯವಿಲ್ಲ,
ಅರಸುತ್ತವೆ ಎರಡೂ
ಕೊಕ್ಕಿನಿಂದ, ಪಂಜಗಳಿಂದ, ಕೈಗಳಿಂದ ನೆಡಲಾದ
ಈ ಮಹಾ ಮಣ್ಣಿನಲ್ಲಿ ಬೆಳೆದ
ಅದೇ ಮರವನ್ನು.
ಗೊತ್ತಿತ್ತು ನನಗೆ, ನಾನಿಲ್ಲಿ ಬಂದು ನೆಲೆಸುವ ಮುಂಚೆಯೇ,
ಈ ಶಹರದಲ್ಲಿ ಇಷ್ಟೊಂದು ಮನೆಗಳು ಏಳುವ ಮುನ್ನವೂ
ಹೀಗೇ ಮಾಡುತ್ತಿತ್ತು ಮುಸ್ಸಂಜೆ ಹಕ್ಕಿಗೂ ಬಾವಲಿಗೂ,
ಹೀಗೇ ಮಾಡುತ್ತೆ ಮನುಷ್ಯನಿಗೂ.
೨
ಧ್ವನಿಗಳು
ಮೂಲ: Voices
ಹಸಿರು ಮರವೊಂದರ ಹಿಂದೆ ಮಳೆಯ ಸೂರ್ಯಾಸ್ತದಲ್ಲಿ
ಇಡೀ ಆಕಾಶ ಮಡಿಯುತ್ತಿದೆ ಹಕ್ಕಿಗಳ ರಾಹಿತ್ಯದಲ್ಲಿ.
ರಸ್ತೆಯಲ್ಲಿ ಬಿದ್ದಿವೆ ನೀರಿನ ವಿಶಾಲ ಹಳ್ಳಗಳು
ಮರಳಿನಲ್ಲಿ ಕುಸಿಯುತ್ತಿರುವ ನೆನಪುಗಳ ಮಹಾಸಾಗರಗಳಂತ.
ಗೆಲುವೆಂಬುದು ಮಳೆಯಾಗಿರುವ ವಿಜಯದ ಅಗ್ನಿಪರೀಕ್ಷೆಗಳಲ್ಲಿ
ಸೂರ್ಯ ಬಹು ಬೇಗ ತನ್ನನ್ನು ಬದ್ಧನಾಗಿಸಿಕೊಂಡಿರುವನು –
ಗಾಳಿಯ ವಿಶಾಲ ಹೂದಾನಿಯಲ್ಲಿರುವ ಅಗ್ನಿಕುಸುಮವೇ,
ತಿರುಗಿ ಬಾ, ತಿರುಗಿ ಬಾ ಈ ಲೋಕದ ಮನೆಯ ಕಡೆಗೆ
ಮಹಾಸಾಗರ ಬತ್ತಿದಾಗ ಮರಳಿನಲ್ಲಿ ಕಾಣಿಸುವ
ಕಡುಗೆಂಪು ಹರಳು ಮರಣಸೂಚಕದ ಒಡವೆ
ಬೆಳಕಿನ ಜೀವವು ಮತ್ತೆಲ್ಲೋ ಇರುತ್ತದೆ,
ಮಳೆಯ ಹತ್ತಿರ, ಮರದ ಹತ್ತಿರ,
ಅವು ಒಂಟಿಯಾಗಿರುವಾಗ.
ಓ ಮೊದಲಿಗೆ ಚಿಗುರುವ ಎಲೆಯೇ,
ಓ ಕೊನೆಗೆ ಉದುರುವ ಹಣ್ಣೇ,
ನಿಮ್ಮ ಬೇರುಗಳು ಮೊದಲು ಬಂದವು
ನಿಮ್ಮನ್ನು ಗಾಳಿಗೆ ಅರ್ಪಿಸುವ ಮುನ್ನ.
ಕಲ್ಲುಗಳು ಬಿದ್ದು ಮುಳುಗಿದ ನೀರಿನ ಅಂಚಿನಲಿ
ಮನುಷ್ಯ ಎತ್ತರ ಬೆಳೆದಾಗ ಆಕಾಶ ಅರಳಿತು ಆಗ.
ಆಕಾರ ಆವಿಯಾದ ವಿಚಿತ್ರ ವಿಸರ್ಜನೆಯ ಸುಳಿವನ್ನು
ಒಂದು ಬಸವನಹುಳುವಿಗೆ ಪತ್ತೆಹಚ್ಚಲಾಯಿತು,
ಒಂದು ಪದದಲ್ಲಿ ಕಂಡುಹಿಡಿಯಲಾಯಿತು:
ಗಾಳಿಯ ವಿಶಾಲ ಹೂದಾನಿಯಲ್ಲಿರುವ ಅಗ್ನಿಕುಸುಮವೇ,
ತಿರುಗಿ ಬಾ, ತಿರುಗಿ ಬಾ ಈ ಲೋಕದ ಮನೆಯ ಕಡೆಗೆ.
೩
ಮಗುವೊಂದು ಕಡಲಿನತ್ತ ಓಡಿತು
ಮೂಲ: The Child Ran Into the Sea
ಮಗುವೊಂದು ಕಡಲಿನತ್ತ ಓಡಿತು
ಆದರೆ ಅಲೆಗಳನ್ನು ಕಂಡು ತಿರುಗಿ ಓಡಿ ಬಂತು,
ಏಕೆಂದರೆ
ಬಾನಂಚಿನಲ್ಲಿ ಕಾಣುವ ಕಡಲು ಹಾಗೂ
ದಡವನ್ನು ಕೊರೆಯುತ್ತಿರುವ ಕಡಲು
ಒಂದೇ ಕಡಲಲ್ಲವೆಂದು ಮಗುವಿಗೆ ಗೊತ್ತಿರಲಿಲ್ಲ.
ಪ್ರತಿ ಮಗುವು ಬಯಸುವುದೆಲ್ಲ ಯಾವಾಗಲೂ
ದೂರದಲ್ಲಿರುತ್ತದೆ; ಬಾನಂಚಿನ ಕಡಲಿನಂತೆ.
ಆವಾಗ, ಪಕ್ಕದಲ್ಲಿರುವ ಕಡಲತೀರದಲ್ಲಿ
ಪ್ರತಿ ಮಗುವಿನ ಕಾಲಬುಡದಲ್ಲಿ
ದ್ವೀಪಗಳ, ಭೂಖಂಡಗಳ ಅಂಚುಗಳನ್ನು
ಕಡಿಯುತ್ತಿರುವ ಕಿರಿ ನೀರು
ತುಸು ಹೆಚ್ಚಾಗೇ ಕೆಲಸ ಮಾಡುತ್ತೆ,
ಕಡಲಿನೆಡೆಗೆ, ಬಾನಂಚಿನೆಡೆಗೆ
ಓಡಲು ಬಯಸುವ
ಇನ್ಯಾವುದೋ ಒಂದು ಮಗುವಿನ
ಅಸ್ಫುಟ ಬಾಯಿಯ ಕೊನೆಗಳಲ್ಲಿ
ನೊರೆಯಂತಹ ಉಗುಳಿಗಿಂತ
ಸ್ವಲ್ಪ ಹೆಚ್ಚಾಗೇ ಕೆಲಸ ಮಾಡುತ್ತೆ.
೪
ಕಹಿ ಮರ
ಮೂಲ: Bitter wood
ಇಲ್ಲಿವೆ ಡ್ರ್ಯಾಗನ್‌ಗಳು,
ಹಾಗೂ ಮರಗಳಿಂದ ಮಾಡಿದ ಕಹಿ ಬಟ್ಟಲುಗಳು;
ಹಾಗೂ ಕುದುರೆಗಳ ಗೊರಸುಗಳು,
ಅವು ಸದ್ದು ಮಾಡಕೂಡದು.
ಹಾಗಿದ್ದೂ, ಮನೆಗಳ ಸೂರುಗಳ ಮೇಲೆ
ಬಡಗಿಗಳು ನಡೆದಾಡುತ್ತಿದ್ದಾರೆ,
ಹಿಂದೊಮ್ಮೆ ಭವ್ಯ ಭೂಪಟಗಳ ಲೂಟಿಯ ಮೇಲೆ
ನಡೆದಾಡುತ್ತಿದ್ದ ನಕಾಶೆಗಾರರಂತೆ.
ಇಲ್ಲಿ ಇದ್ದೇನೆ ನಾನು, ಈ ಮಹಾ ಜ್ಯಾಮಿತಿಯಲ್ಲಿ,
ಇರುವೆಗಳ ಗುಂಪು ಹಾಗೂ ಅದೇ ಕಹಿ ಮರದಿಂದ ಮಾಡಿದ
ವೃಕ್ಷವೊಂದರ ಸ್ವಾತಂತ್ರ್ಯದ ಹಸಿರು ನೋಟದ ನಡುವೆ.
೫
ಬಾಯಿಯನ್ನು ಯಾವಾಗಲೂ ಮುಚ್ಚಿಸಲಾಗುತ್ತೆ
ಮೂಲ: A Mouth is always Muzzled
ನಾಲಗೆಯ ಆವರಣದಲ್ಲಿ
ಕಿವಿಯ ಅರಾಜಕತೆ ಮನೆಮಾಡಿದೆ;
ದೃಷ್ಟಿಯ ಗದ್ದಲದಲ್ಲಿ
ಉದ್ದೇಶದ ನಿರ್ಣಯವಾಗಿದೆ.
ಇದನ್ನು ಬೇರೊಂದು ರೀತಿಯಲ್ಲಿ ಕೂಗಿಹೇಳಬಹುದು
ಅದು ಸರಳವಾಗಿ ಕೇಳಿಸುವುದೆಂದಾದರೆ;
ಆದರೆ ಬಾಯಿಯನ್ನು ಯಾವಾಗಲೂ ಮುಚ್ಚಿಸಲಾಗುತ್ತೆ
ಅದು ಬದುಕಲು ಉಣ್ಣುವ ಆಹಾರದಿಂದ.
ಮಳೆಯೇ ಮಾಡಿಗೆ ಕಾರಣವಾಗಿತ್ತು.
ಹುಟ್ಟೇ ಹಾಸಿಗೆಗೆ ಕಾರಣವಾಗಿತ್ತು.
ಆದರೆ ಜೀವನವೆನ್ನುವ ಪ್ರಶ್ನೆ
ದಾರಿ ಯಾವುದು ಸಾಯುವುದಕ್ಕೆಂದು ಕೇಳುತ್ತದೆ.
೬
ಇರುವುದು ಸದಾ
ಮೂಲ: Being Always
ಸದಾ ನನ್ನನ್ನು ಈ ಲೋಕದೊಳು ಜೋಡಿಸಿಕೊಳ್ಳುವುದು,
ಹಾಗೂ ಜಗತ್ತನ್ನು ನನ್ನೊಳು ಜೋಡಿಸಿಕೊಳ್ಳುವುದು,
ಇದೇ ನನ್ನ ಇರುವಿಕೆ.
ಎರಡನ್ನೂ ಹೇಗೆ ಮಾಡುವುದೆಂಬುದು ಕಷ್ಟವೇ.
ನಾನು ಈ ಪ್ರಶ್ನೆಯನ್ನು ಕೇಳಲೇಬೇಕು,
ಯಾವುದನ್ನಾದರೂ ಸರಿ, ನಾನು ಯಾಕೆ ಜೋಡಿಸಬೇಕು,
ಎಲ್ಲವೂ ಆಗಲೆ ಜೋಡಿಸಿಯಾಗಿರುವಾಗ:
ಪ್ರೇಮ ಹಾಗೂ ಸಾವಿನ ನಿಗೂಢ ನಿಯಮಗಳಿಂದ,
ನಶ್ವರ ನ್ಯಾಯಾಂಗದಿಂದ,
ಕಾಲದ ಗೊಂಬೆಮನೆಯ ಬದಲಾಯಿಸಬಹುದಾದ
ತಲೆಗಳಿಂದ, ಕಾಲುಗಳಿಂದ, ಕೈಗಳಿಂದ?
ಮತ್ತೊಂದು ಮನೆಯಲ್ಲಿ,
ಕಾಲದ ಮನೆಯಲ್ಲಲ್ಲ,
ಕಾಲ ತಂತಾನೇ ನನ್ನ ಹಾಗೂ
ಲೋಕದ ಬದಲುಗಳನ್ನು ಜೋಡಿಸುತ್ತೆ.
೭
ಬಾಗಿದ ಬೆನ್ನು
ಮೂಲ: Bent
ರಸ್ತೆಯಲ್ಲಿ ಸೂರ್ಯ ರೇಗಾಡುತ್ತಿದ್ದಾನೆ.
ಮುದುಕಿಯೊಬ್ಬಳ ಬಾಗಿದ ಬೆನ್ನು
ಈ ಜಗತ್ತಿನ ಹಗುರವಾದ, ಅಸಹನೀಯವಾದ ಸಂಕಟದಿಂದ
ತುಂಬಿದ ಬಕೆಟ್ಟನ್ನು ಪುನರುಜ್ಜೀವಿಸುತ್ತದೆ.
ಹಲವು ವರುಷಗಳ ಘಾತವಿದು.
ಅವಳ ಬಾಗಿದ ಬೆನ್ನು, ಕಾಲದ ತಪ್ಪು ಹೆಜ್ಜೆ, ಹೆದರಿಕೆ,
ಎಲ್ಲವೂ ಬೂದಿ;
ಒಂದು ಅದ್ಭುತ ಬಯಕೆಯ ನಜ್ಜುಗುಜ್ಜಾದ ಮೋಡ.
ಅವಳನ್ನು ನಾನು ಕೊನೆಯ ಬಾರಿ ಕಂಡಿದ್ದಾಗ
ತನ್ನ ಬೆನ್ನ ಮೇಲೆ ಹೊತ್ತ ವರುಷಗಳ ಘಾತಗಳಿಗಿಂತ
ಅವಳು ಹೆಚ್ಚು ಪ್ರಾಮಾಣಿಕಳಾಗಿದ್ದಳು.
ಆ ನೀಲ ಅನಂತ ಆಕಾಶ
ಅವಳನ್ನು ಅನುಕರಿಸುತ್ತದೆ, ಬಾಗಿ.
೮
ಹಸಿವಿನ ವಿಶ್ವವಿದ್ಯಾಲಯ
ಮೂಲ: University of Hunger
ಈ ತೆರೆದು ಬಿದ್ದಿರುವ ಬೆಂಗಾಡು,
ಇದೇ ಹಸಿವಿನ ವಿಶ್ವವಿದ್ಯಾಲಯವೆ?
ಈ ದೀರ್ಘ ನಡೆ,
ಇದೇ ಮನುಜನ ತೀರ್ಥಯಾತ್ರೆಯೆ?
ಹಸಿವಿನ ಮುದ್ರೆ ಈ ನಾಡೆಲ್ಲ ಅಲೆದಾಡುತ್ತಿದೆ,
ಬಹುಕಾಲ ಮರೆತಿದ್ದರ ಮೇಲೆ ಹಸಿರು ಮರ ಬಾಗಿದೆ,
ಜೀವದ ಬಯಲುಗಳು ಹಠಾತ್ ಸ್ನಾಯುಸೆಳೆತಗಳಲ್ಲಿ ಏರಿಳಿಯುತ್ತಿವೆ,
ಮನುಜರ ಸೂರುಗಳು ಸಂಕಟದಲ್ಲಿ ಬೆಸೆದುಹೋಗಿವೆ.
ಹೇಸರಗತ್ತೆಯ ಗೊರಸುಗುರುತುಗಳ ತುಳಿದು
ನಡೆದುಕೊಂಡು ಬರುತ್ತಾರವರು,
ಆ ಹಳೆಯ ಸೇತುವೆಯನ್ನು,
ಆ ಹೆಮ್ಮೆಯ ಗೋರಿಯನ್ನು
ದಾಟಿಕೊಂಡು ಬರುತ್ತಾರವರು.
ಆ ಹಠಾತ್ ಪಲಾಯನ,
ಆ ಭಯ, ಆ ಸಮಯ.
ದೂರದ ಜಲಪ್ರವಾಹದ ಹಳ್ಳಿಯಿಂದ ಬರುತ್ತಾರವರು,
ನಡುಗಾಳಿಯನ್ನು ದಾಟಿ ನಡುಭೂಮಿಗೆ ಬರುತ್ತಾರವರು,
ನಗ್ನತೆಯ ಸಾಮಾನ್ಯ ಹೊತ್ತಿನಲ್ಲಿ.
ಅವರ ಲೋಹದ ಹುಬ್ಬುಗಳು ಹಸಿವಿನ
ಅವಳಿ ಸಲಾಕೆಗಳು, ಅವಳಿ ಋತುಗಳು.
ಬತ್ತಿಸುತ್ತಿರುವ ಬರ ಹಾಗೂ ನೆರೆ
ಅವರನ್ನು ಹಿಯಾಳಿಸುತ್ತವೆ.
ಮರಳಿನಲ್ಲಿ ಅರೆಹೂತಿರುವವರು, ಅವರು ಕರಿಯರೆ?
ಈ ಶೂನ್ಯದಲ್ಲಿ,
ಈ ಅತಿಶಯದಲ್ಲಿ,
ಈ ನೆರಳುರಹಿತ ಲೋಕದಲ್ಲಿ ದನಿಯಿಲ್ಲದಿದ್ದವರು,
ಇವರು ಅವರೆ?
ವರುಷದ ಮಣ್ಣು-ನೆಲವನ್ನು ತುಳಿಯುತ್ತಾ
ಗಾಢ ಕರಿ ನೀರು ಹಾಗೂ ಹಾರಾಡುತ್ತಿರುವ
ಕುರುಡು ಬಾವಲಿಯ ಕಡಲ ಧ್ವನಿಯ ಜತೆ
ಬೆರೆತುಕೊಳ್ಳುತ್ತಾ ಬರುವರವರು.
ಮನುಜನ ಈ ಪಯಣ ಬಲು ದೀರ್ಘವಾದದ್ದು
ಬದುಕು ಸಹ ದೀರ್ಘವಾದದ್ದು,
ಅವಧಿಯೂ ವಿಸ್ತಾರವಾದದ್ದು.
ಗಾಳಿ ಹಾಗೂ ನೆನಪಿನ ಬಹುದೂರತ್ವ ಬರೀ ಧೂಳೆ?
ನಿದ್ದೆಯಿಲ್ಲದ ನೆಲಗಪ್ಪೆಗಳ ಮೌನ ಮಳೆಯ ಸೂಚನೆಯೆ?
ಒಡೆದ ಚಿಮಣಿಗಳು ಗಾಳಿಯಲ್ಲಿ ಹೊಗೆಯಾಡುವುದಿಲ್ಲವೆ?
ಗುಡಿಸಲುಗಳು ಹಾಗೂ ಕೋಚುಕೋಚಾದ
ಕಬ್ಬಿಣದ ಗುಪ್ಪೆಗಳು ಕಂದು ಬಣ್ಣದ ಕಸವೆ?
ವಿಶಾಲವಾದ ನಗರದೆಡೆಗೆ ಉದ್ದುದ್ದ ಸಾಲುಗಳಲ್ಲಿ ನಡೆದು ಬರುತ್ತಾರವರು.
ಸ್ವರ್ಣಚಂದ್ರವೇನು ಆಕಾಶದಲ್ಲಿ ದೊಡ್ಡ ನಾಣ್ಯದ ಹಾಗೆ ಕಾಣುತ್ತಿದೆಯೆ?
ಮಾಂಸದ ನೆಲೆದಡಿಯಲ್ಲಿರುವುದು ಎಲುಬುಗಳ ನೆಲವೆ?
ಬಂಡೆಯ ಮೇಲೆ ಒಡೆಯುತ್ತಿರುವುದು ಕಾಯಿಲೆಬಿದ್ದ ಕೊಕ್ಕೆ?
ಮನುಜನ ಈ ಪಯಣ ಬಲು ದೀರ್ಘವಾದದ್ದು
ಬದುಕು ಸಹ ದೀರ್ಘವಾದದ್ದು,
ಅವಧಿಯೂ ವಿಸ್ತಾರವಾದದ್ದು.
ಬೀಸುತ್ತಿರುವ ಕಠೋರ ಗಾಳಿ ಎಷ್ಟು ಥಂಡಿ
ನೆಲದಲ್ಲಿ ಹೂತಿರುವ ಗುದ್ದಲಿ ಎಷ್ಟು ಥಂಡಿ.
ಹಡಗಿನ ಜಾಡಿನಲ್ಲಿ ರೆಕ್ಕೆಗಳ ಪಟಪಟಿಸುತ್ತಾ
ಬರುವ ಕಡಲಹಕ್ಕಿಗಳ ಹಾಗೆ ಬರುತ್ತಾರವರು.
ಸೂರ್ಯಾಸ್ತದ ಚಿತ್ರಹಿಂಸೆ ನೇರಳೆಬಣ್ಣದ
ಗಾಯಪಟ್ಟಿಗಳ ಅಡಿಯಲ್ಲಿ ಹುಗಿದಿದೆಯೆ?
ಮುಸ್ಸಂಜೆಯಲ್ಲಿ ಧೂಳಿನ ಹಾಗೆ
ಹರಡಿರುವುದು ಬೆಂಕಿಯ ಪುಡಿಯೆ?
ಸುಕ್ಕುಗಟ್ಟಿದ ಮರಳಿನಲ್ಲಿ ನೀರು
ಹಬ್ಬಿದ ಬಿಳಿ ನೊರೆಯ ಗಾನವೆ?
ರಾತ್ರಿಯ ದೀರ್ಘ ರಸ್ತೆಗಳು ಏರಿಳಿಯುತ್ತಿವೆ
ನಾರಿಯೊಬ್ಬಳ ತೊಡೆಗಳನ್ನು
ಹುಟ್ಟಿನ ಕುಹರವನ್ನು ಬತ್ತಲಾಗಿಸುತ್ತಾ.
ಬಡಿಯುವ ಡೋಲು ಮರಳಿಬರುತ್ತದೆ
ಹಾಗೇ ನಂದಿಹೋಗುತ್ತದೆ,
ಗಡ್ಡಧಾರಿ ಪುರುಷರು ಕೆಳಕುಸಿದು ನಿದ್ರಿಸುತ್ತಾರೆ,
ಮುಂಜಾನೆಯ ಹುಂಜಗಳು ಎದ್ದು ನಿಂತು
ಕಹಳೆಗಳ ಹಾಗೆ ಕೂಗುತ್ತವೆ.
ಮುಂಜಾನೆಯಲ್ಲಿ ಚಂದ್ರ ಮಡಿಯುವುದನ್ನು
ಕಂಡವರು ನಸುಕಿನಲ್ಲಿ ಎದ್ದವರೆ?
ಶಂಖ ಮೊಳಗುವುದನ್ನು, ಉಕ್ಕಿನ ಆಯುಧಗಳ
ಖಣಿಲುಗಳನ್ನು ಕೇಳಿದವರು ಇವರೆ?
ಈ ಶೂನ್ಯದಲ್ಲಿ
ಈ ಅತಿಶಯದಲ್ಲಿ
ಈ ನೆರಳುರಹಿತ ಲೊಕದಲ್ಲಿ
ದನಿಯಿಲ್ಲದಿದ್ದವರು
ಇವರು ಅವರೆ?
ಮನುಜನ ಈ ಪಯಣ ಬಲು ದೀರ್ಘವಾದದ್ದು
ಬದುಕು ಸಹ ದೀರ್ಘವಾದದ್ದು
ಹಾಗೂ ಅವಧಿ ವಿಸ್ತಾರವಾದದ್ದು.
೯
ನನ್ನ ಮುಷ್ಟಿಯನ್ನು ಬಿಗಿಯುತ್ತೇನೆ
ಮೂಲ: I Clench My Fist
ನೀನು ಬರುತ್ತಿ ಭಯಾನಕ ಸಾವುಗಳ ಯುದ್ಧನೌಕೆಗಳಲ್ಲಿ,
ನಿನ್ನ ಕೈಗಳು ಕೊರೆಯಾ ಜನರ ರಕ್ತದಿಂದ ಕೆಂಪಾಗಿವೆ, ಗೊತ್ತಿದೆ ನನಗೆ,
ನಿನ್ನ ಬೆರಳು ಬಂದೂಕಿನ ಕುದುರೆಯ ಮೇಲೆ ಕಂಪಿಸುತ್ತಿದೆ, ಗೊತ್ತಿದೆ ನನಗೆ,
ಆದರೂ ನಾನು ಶಪಿಸುವೆ ನಿನ್ನನ್ನು – ಖಾಕಿ ತೊಟ್ಟ ಅಪರಿಚಿತನೆ!
ಬ್ರಿಟಿಷ್ ಸೈನಿಕನೆ, ಖಾಕಿ ತೊಟ್ಟವನೆ,
ಹುಷಾರು, ನೋಡಿ ಹೆಜ್ಜೆಯಿಡು.
ನನ್ನ ಸತ್ತ ಪೂರ್ವಜ ‘ಅಕ್ಕಾಬ್ರೆಹ್’* ಗೋರಿಯಲ್ಲಿ ನರಳುತ್ತಿದ್ದಾನೆ,
ರಾತ್ರಿಯಲ್ಲಿ ಎದ್ದು ಬೆಂಕಿ ಕಾರುವ ಕಣ್ಣುಗಳಿಂದ ನೋಡುತ್ತಾನೆ,
ಏಕೆಂದರೆ
ನೀನು ಅವನ ಎದೆಯ ಮೇಲೆ ನಡೆಯುತ್ತಿರುವೆ,
ಅವನ ಹೃದಯವನ್ನು ತುಳಿಯುತ್ತಿರುವೆ.
ನೀವು ಕಡಲದಾರಿಯಿಂದ ಸಾವಿರ ಸಂಖ್ಯೆಯಲ್ಲಿ ಬರುವಿರಿ
ನೀವು ಮಿಡತೆಗಳ ಹಾಗೆ ರಸ್ತೆಗಳಲ್ಲಿ ನಡೆದು ಬರುವಿರಿ
ನೀವು ಬಂದೂಕನ್ನು ನನ್ನ ಹೃದಯಕ್ಕೆ ನೇರ ಗುರಿಯಿಡುವಿರಿ
ಆದರೂ, ಬಿಗಿದ ಮುಷ್ಟಿಯನ್ನು ಏರಿಸುವೆ ಮೇಲಕ್ಕೆ ನಾನು;
ಬಿಡುಗಡೆಯ ಹಾಡನ್ನು ಹಾಡುವೆ ನಾನು.
* Accabreh: ವಾಸಾಹತುಶಾಹಿ ಬ್ರಿಟಿಷ್ ಆಡಳಿತದ ವಿರುದ್ಧ ಆಫ್ರಿಕಾದಿಂದ ತರಿಸಿದ ಗುಲಾಮರಿಂದ 1763 ಇಸವಿಯ 23 ಫೆಬ್ರವರಿಯಂದು ಗಯಾನಾದ ಬರ್ಬಿಸ್-ನಲ್ಲಿ (Berbice) ಪ್ರಾರಂಭವಾದ ವಿದ್ರೋಹದ ಒಬ್ಬ ಮುಖಂಡ. ಈ ವಿದ್ರೋಹವನ್ನು ‘ದ ಬರ್ಬಿಸ್ ರೆಬೆಲಿಯನ್’ ಎಂದು ಕರೆಯುತ್ತಾರೆ.
೧೦
ಹೊಸತಾಗಿ ಹಾಗೂ ಹಳೆಯದಂತೆ
ಮೂಲ: As New and as Old
೧
ಪ್ರತಿ ದಿನವೂ ಒಂದು ಹೊಸ ದಿನದಷ್ಟೇ
ಹಳೆಯದಾಗಿರುತ್ತೆ.
ಕಾಲ ತನ್ನನ್ನೇ ಪ್ರತಿನಿಧಿಸುತ್ತೆ.
ರಾತ್ರಿಯು ನಕ್ಷತ್ರಗಳ ಆಳ್ವಿಕೆಯನ್ನು
ನಕಲು ಮಾಡುತ್ತೆ,
ನಾವು ಬೆಳಕಿನ ಚೆನ್ನಾದ ಕಿರಣಗುಚ್ಛವನ್ನು
ನಕಲುಮಾಡಿದಂತೆ.
ಸುಣ್ಣದ ಕಡ್ಡಿಯ ಬರಹಗಳಿಂದ ತುಂಬಿದ
ಒಂದು ಮಗುವಿನ ಕರಿಹಲಗೆ.
ಕೀಟಗಳ ಋತುವಿನಲ್ಲಿ ಅಕ್ಷರಗಳ ಭರವಸೆ.
ದಿನಗಳ ಋತುವಿನಲ್ಲಿ ಮೃಗದ ತೆವಳು.
ಕ್ಷಮೆ ಬೇಡುವವನಲ್ಲ ನಾನು,
ನೆನಪಿದೆ ನನಗೆ ಪ್ರತಿ ದಿನವೂ
ಒಂದು ಹೊಸದಿನ ಯಾಕೆಂದು.
ಹುಲ್ಲುಗಾವಲುಗಳಲ್ಲಿ ತಿರುಗಾಡಿದ
ನನ್ನ ಬಾಲ್ಯದಷ್ಟೇ ಹಳೆಯದು, ಹೊಸತು ಕೂಡ.
ಈ ಲೋಕವೊಂದು ಥಂಡಿ ಗಾಳಿ.
ಬಾಯಾರಿಕೆಯ ಉಗ್ರ ತಾಣದಲ್ಲಿ ಒಂದು ಲೋಟ ಸಿಹಿ ನೀರು.
ಓ ಮಳೆಯೆ, ವಿದಾಯ ನಿನಗೆ.
ನಿನ್ನ ಉಚ್ಛಮೇಘದ ರುಚಿಯನ್ನು
ಮತ್ತೆ ಯಾವಾಗ ಸವಿಯುವೆ ನಾನು?
ಹಿಂದೊಮ್ಮೆ ಹಳೆಯ ದಿನದಂದು
ಹಳೆಯ ದೇವರುಗಳಿಗೆ ದ್ರೋಹ ಬಗೆದೆವು,
ಈಗ ನಾವು
ಹೊಸ ದೇವರುಗಳಿಗೆ ದ್ರೋಹ ಬಗೆಯಲು
ಹವಣಿಸುತ್ತಿದ್ದೇವೆ
ಹೊಸ ದಿನದಂದು.
II
ಈ ಮುಂಜಾನೆ ಹೊಸತು,
ಆದರೆ ಇದನ್ನು ಮಾಡಿದ ಸೂರ್ಯ ಹಳೆಯವನು.
ಹೊಸತು ಹಾಗೂ ಹಳೆಯದು
ಈ ಲೋಕದ ಮಹಾದುಃಖದ ಮುಖವಾಗಿದೆ,
ನಮ್ಮ ಮೌನ ದುಡಿಮೆ
ಈ ಗಾಳಿಯ ಗಂಟಲಲ್ಲಿ, ಅದರ ಧ್ವನಿಪೆಟ್ಟಿಗೆಯಲ್ಲಿ,
ನಮ್ಮ ನುಡಿಯ ಮನೆಯನ್ನು ಕಟ್ಟುವಾಗ
ನಾವು ಆಲಿಸುವ ಹಾಗೂ ಕೇಳುವ
ಒಂದು ತರಹದ ಸಂಗೀತದಂತೆ.
ಮರದ ರೆಂಬೆಯೊಂದರಲ್ಲಿರುವ ಹಸಿರು ಎಲೆ
ನಮ್ಮ ಕಾಲದ ಅಪಮಾನಕರ ವ್ಯೋಮವನ್ನು ಬೆಟ್ಟಾಡಿಸುತ್ತೆ.
ಅದರ ಪರಿಮಾಣ ನಾವಾಗಿರುತ್ತೇವೆ.

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ. ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ ‘ಬಾಲ್ಟಿಕ್ ಕಡಲ ಗಾಳಿ’ ಇತ್ತೀಚೆಗೆ ಪ್ರಕಟವಾಗಿದೆ.
