1. ನಾಡಬೇಲಿಗಳ ಭಯ
ಮರ್ಯಾದಸ್ಥರ ನಾಡಲಿ
ಕಡು ಶಿಸ್ತಿನಿಂದರಳುವ ಹೂಗಳ ನಡುವೆ
ಅಶಿಸ್ತಿನಲಡಗಿದ ಚೆಲುವ ಚಿಮ್ಮಿದ
ಕಾಡ ಕುಸುಮ ನೀನು
ವಸಂತದ ಆ ಮುಂಜಾವು
ನನ್ನ ಕಣ್ಣಬೆಳಕು ತಾಕಿದ್ದೇ
ನನ್ನೆದೆ ಮಿದುವಿನಲಿ ಮೊಗ್ಗರಳಿ
ಹೂವಾಗಿ ಹೂವಿನ ತೋಟವಾಗಿ
ನೋಡನೋಡುತ್ತಲೇ ಹೂವಿನ
ದಟ್ಟ ಕಾನನವಾದವಳು
ಅತಿಭಾವುಕ ನಾನು
ಏಕಮನದ ಭೃಂಗವಾಗಿ
ಹಾರಿಹಾರಿ ಹಾಡಿದೆ
ಎದೆಯ ಕಾನನದಿ
ಜಿಂಕೆ ನವಿಲುಗಳ ಕುಣಿತ
ಎಷ್ಟಿದ್ದವು ಇಂಥ ದಿನಗಳು?
ಎಣಿಸಬಹುದು ಸರಳವಾಗಿ
ನಾಡತೋಟದ ಕಥೆಗಳೇ ಸಾಕಿತ್ತು
ನಿನ್ನ ಸೆರೆಹಿಡಿದು ಶರಣಾಗಿಸಲು
ರಕ್ತ ತೊಟ್ಟಿಕ್ಕುತ್ತದೆ ಕಥೆಯ ಹಂದರ
ಸ್ವಲ್ಪೇ ಸ್ವಲ್ಪ ಏರುಪೇರಾದರೂ
ಒಲವಿನುಸಿರ ತಾಳಕ್ಕೆ ಬದುಕುತ್ತಿದ್ದವನು
ದೂರಾದ ಕ್ಷಣ ಎದೆ ದಸಕ್ಕೆಂದು ಕುಸಿದು ಬಿದ್ದೆ
ಬಿಟ್ಟ ನಿನ್ನ ತೋಟದ ವಿಳಾಸ
ತಿಳಿದಿತ್ತು ಅಷ್ಟಿಷ್ಟು
ರೆಕ್ಕೆ ಕಿತ್ತ ಹಕ್ಕಿಗಳು
ಲೋಕದ ಗೊಡವೆಗಳಿಂದ
ಸ್ವತಂತ್ರವಾಗಿ ಹಾರುವಂತಿಲ್ಲ
ಇತಿಹಾಸದುದ್ದಕ್ಕೂ ನಿಂತ
ಅದೃಶ್ಯ ಬೇಲಿಗಳು ಪಹರೆ ಕಾಯುತ್ತಿವೆ
ಭಯಂಕರ ಭದ್ರಗೊಳ್ಳುತ್ತಿವೆ ಈಗಂತೂ
ಯಾವ ಪ್ರಭುಗಳ ಕಾಲವಿದು?
ನಿನ್ನಂಥ ಮೋಕ್ಷದ ಹಕ್ಕಿಗೂ
ತಪ್ಪಲಿಲ್ಲ ಬೇಲಿಗಳ ಭಯ
ಕೊನೆಯದಾಗಿ ಕೇಳಬೇಕೆಂದಿದ್ದೇನೆ
ಕಾಯಬಹುದೇ ನೀನೂ
ಅಕ್ಕ ಚನ್ನನಿಗೆ ಕಾದಂತೆ….?
ಸಂಬಂಧವೆಂಬುದು ಸಣ್ಣ ಸಂಗತಿಯಲ್ಲ
ರಕ್ತಕಾರಿದ ಸಂಬಂಧಿಗಳ ಮರೆಯುವಂತೆಯೂ ಇಲ್ಲ
ಹೊಟ್ಟೆ ಯಾಕೋ ರುಮ್ಮೆನ್ನುತ್ತಿದೆ
2. ಕರಗುವ ಕವಿತೆ
ಸಾವಿನ ನಂತರ ಬರೆವ
ಕಾವ್ಯದ ಆಳ ಅಗಲದ
ಅರಿವು ಮೂಡಿದ ಮೇಲೆ
ನಿರುಮ್ಮಳನಾಗಿ
ಬದುಕುತ್ತಿದ್ದೇನೆ
ಲೇಖನಿ ಹಿಡಿದ ಕೈ
ಮೊದಲಿನಂತೆ ನಿಲ್ಲುವುದಿಲ್ಲ
ನಡುಗುವುದಿಲ್ಲ
ಕವಿತೆಗಳು ಗಾಳಿಯಂತೆ ತೇಲಿ
ಮಳೆಯಂತೆ ತಂಪೆರೆದು
ಚುಕ್ಕಿಗಳಂತೆ ಪಳಪಳ
ಹೊಳೆಯುತ್ತವೆ
ಅಮಾವಾಸ್ಯೆಯ ಕತ್ತಲಲ್ಲಿ
ಹೊಲದ ನಡುವಿನ ಬೆಳೆ ಹಕ್ಕಿ
ಮನುಷ್ಯರೆಲ್ಲರ ಜೊತೆ
ಏಕಾಕಾರದ ಬಯಲಲ್ಲಿ ಕರಗಿ
ಲೀನವಾಗಿ
ಧ್ಯಾನಸ್ಥವಾಗುತ್ತವೆ

ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
