ನಾಲಗೆ ಖಾರದಿಂದ ಚುರುಕ್ ಎಂದ ಕೂಡಲೇ ಜೋರಾಗಿ ಅಳುವ ಮಗುವನ್ನು ಸಮಾಧಾನಿಸಿ, ತೊಟ್ಟಿಲಿಗೆ ಹಾಕಿ ತೂಗಿ ಜೋಗುಳ ಹಾಡಿದ ಕೂಡಲೇ ನಿದ್ರೆ. ಖಾರ ಹಾಕಿದ ದಿನ ತುಸು ಹೆಚ್ಚೇ ನಿದ್ರೆ. ನನ್ನಿಬ್ಬರೂ ಮಕ್ಕಳು ರಾತ್ರಿ ಹಗಲು ಎರಡೂ ಹೊತ್ತು ಗಾಢವಾಗಿ ನಿದ್ರಿಸುತ್ತಿದ್ದರು. ಇದರಿಂದಾಗಿ ನಾನು ಬಾಣಂತನದ ಏಕತಾನತೆಯ ನಡುವೆ ಲವಲವಿಕೆಯಿಂದ ಇರಲು ಸಾಧ್ಯವಾಗುತಿತ್ತು. ಮಳೆರಾಯನ ಆರ್ಭಟದ ನಡುವೆ ದೊಡ್ಡ ದೊಡ್ಡ ಹಗಲುಗಳು, ದೀರ್ಘ ಇರುಳುಗಳು ಕಳೆದು ಹೋದದ್ದೇ ತಿಳಿಯುತ್ತಿರಲಿಲ್ಲ. ಎಷ್ಟೋ ರಾತ್ರಿಗಳು ಕರೆಂಟ್ ಸಹ ಇರುತ್ತಿರಲಿಲ್ಲ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆಗಾಲದಲ್ಲಿ ಬಾಣಂತಿಯ ಆರೈಕೆಯ ಕುರಿತ ಬರಹ ನಿಮ್ಮ ಓದಿಗೆ
ಮನೆಯೆಲ್ಲಾ ಗಂಧದ ಪರಿಮಳ, ಬಚ್ಚಲ ಹಂಡೆಯಲ್ಲಿ ಕುದಿಯುವ ನೀರು, ಸ್ನಾನದ ಹದಕ್ಕೆ ಕಲಸಿಟ್ಟ ಕಡಲೆಹಿಟ್ಟು. ಬಾಣಂತಿ ಕೋಣೆಯಿಂದ ಜೋರಾಗಿ ಅಳುವ ಕಂದನ ದನಿ. ಅಜ್ಜಿಯ ಕಾಲ ಮೇಲೆ ಅಂಗಾತ ಮಲಗಿರುವ ಕಂದನ ಎಳೆ ಮೈಗೆ ಹದ ಬಿಸಿಯ ಎಣ್ಣೆ ತಿಕ್ಕಲಾಗುತ್ತಿದೆ. ಕೈಗೆ, ಕಾಲಿಗೆ ಎಣ್ಣೆ ಹಚ್ಚಿ ಚೆನ್ನಾಗಿ ಉಜ್ಜುವ ಅಜ್ಜಿಯ ಕೈಯಿಂದ ಪಾರಾಗಲು, ಒಂದೇ ಸಮನೆ ಅಳುವ ಕಂದನ ಕೆನ್ನೆ ಕೋಪದಿಂದ ಕೆಂಪೇರಿದೆ. ಆದರೆ ಅಜ್ಜಿ ಬಿಡುವವಳಲ್ಲ. ಅಂಗಾತದ ನಂತರ ಬೋರಲು ಮಲಗಿಸಿಕೊಂಡು ಬೆನ್ನಿಗೆ ಎಣ್ಣೆ ಉಜ್ಜುವಳು. ನೆತ್ತಿಗೆ ಹಚ್ಚುವಳು. ಕೂರಿಸಿಕೊಂಡು, ಕಣ್ಣು, ಮೂಗು, ಕಿವಿಗೂ ಎಣ್ಣೆ ತಿಕ್ಕುವಳು. ಸಿಂಡಗಿರುವ ಮೂಗನ್ನು ನೀಳಗೊಳಿಸುವ, ಅಗಲ ಹಣೆ, ತಿದ್ದಿದ ಗಲ್ಲ ಮಾಡುವ ಚಮತ್ಕಾರ ಅಡಗಿದೆ ಅಜ್ಜಿಯ ಈ ಎಣ್ಣೆ ತಿಕ್ಕುವ ಕಲೆಯಲ್ಲಿ.
ಇದು ಮಲೆನಾಡಿನ ಬಾಣಂತನದ ಕಥೆ. ಮಳೆಗಾಲದೊಂದಿಗೆ ನನ್ನ ಬಾಣಂತನದ ಸವಿನೆನಪುಗಳು ಸಹ ಗರಿಗೆದರುತ್ತವೆ. ನನ್ನ ಇಬ್ಬರೂ ಮಕ್ಕಳು ಹುಟ್ಟಿದ್ದು ಮಳೆಗಾಲದಲ್ಲಿ. ಈ ವಿಷಯದಲ್ಲಿ ನಾನು ಪುಣ್ಯವಂತೆ. ಹೊರಗೆ ಬಿಟ್ಟುಬಿಡದೆ ಸುರಿವ ಮಲೆನಾಡಿನ ಮಳೆಯಲ್ಲಿ ಬಾಣಂತಿ ಕೋಣೆಯಲ್ಲಿ ಮಗುವೊಂದಿಗೆ ಬೆಚ್ಚಗೆ ಮಲಗುವ ಭಾಗ್ಯ. ಮಳೆ ಒದಗಿಸುವ ಸುಖ ನಿದ್ರೆಯ ಸೊಗ. ಹಗಲು, ಇರುಳು ಕಂದನಿಗೆ ಮಳೆರಾಯನ ಜೋಗುಳ. ಬಾಣಂತಿ ಮತ್ತು ಮಗುವಿಗೆ ಎಣ್ಣೆ ಹಚ್ಚಿ ಮಾಡಿಸುವ ಬಿಸಿನೀರಿನ ಅಭ್ಯಂಜನಕ್ಕೆ ಮಳೆಗಾಲವೇ ಸೂಕ್ತ. ಈ ಅಭ್ಯಂಜನದ ನಂತರ ಎರಡೆರಡು ರಗ್ಗು ಹೊದೆಸಿ ಮಲಗಿಸಿ ಬೆವರಿಳಿಸಿದರೆ ಮಾತ್ರ ಬಾಣಂತನ ಯಶಸ್ವಿಯಾದಂತೆ.
ಮಲೆನಾಡಿನಲ್ಲಿ ಬಾಣಂತಿಯ ಹಸಿ ಮೈ ಒಣಗುವವರೆಗೆ ಅಂದರೆ ಹೆರಿಗೆಯಾಗಿ ಹದಿನೈದು ದಿನಗಳ ಕಾಲ ಬಾಣಂತಿ ಪಥ್ಯ ಮಾಡಲಾಗುತ್ತದೆ. ಈ ಸಮಯದಲ್ಲಿ ಕಾಳು ಮೆಣಸು ಹೆಚ್ಚು ಉಪಯೋಗಿಸುತ್ತಾರೆ. ಕಾಳುಮೆಣಸಿನ ಪುಡಿಯನ್ನು ಜೋನಿಬೆಲ್ಲದೊಂದಿಗೆ ಕಲಸಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಡುತ್ತಾರೆ. ಬಾಣಂತಿ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಉಂಡೆಯನ್ನು ಸೇವಿಸಬೇಕು. ಹಾಲು ಹಾಕದ ಕಪ್ಪು ಕಾಫಿ, ಬ್ರೆಡ್ ಬೆಳಗ್ಗಿನ ಉಪಾಹಾರ. ಕಾಳು ಮೆಣಸಿನಸಾರಿನ ಜೊತೆಗೆ ಒಂದು ಮುಷ್ಟಿ ಅನ್ನ ಮಾತ್ರ ಮಧ್ಯಾಹ್ನ ಊಟಕ್ಕೆ. ಬಾಣಂತಿಗೆ ಹೊಟ್ಟೆ ನಿಲ್ಲಬಾರದು ಎಂದು ಈ ರೀತಿಯ ಪಥ್ಯ ಪಾಲಿಸಲಾಗುತ್ತದೆ.
ಬಾಣಂತಿ ಏನೇ ಸೇವಿಸಿದರೂ ಮಗುವಿನ ಆರೋಗ್ಯದ ಬಗ್ಗೆ ಯೋಚಿಸಬೇಕು. ಹಣ್ಣು ಹಂಪಲು, ಮೊಸರು ಮಜ್ಜಿಗೆ ಇಂತಹ ತಂಪು ಪದಾರ್ಥಗಳನ್ನು ಒಂದು ತಿಂಗಳು ಕಾಲ ನೀಡುವುದಿಲ್ಲ. ಹದಿನೈದು ದಿನಗಳ ನಂತರ ಕಾಳು ಮೆಣಸು, ಹಿಪ್ಪಲಿ, ಜಾಯಿಕಾಯಿ, ಬಜೆ, ಶುಂಠಿ ಮೊದಲಾದವುಗಳನ್ನು ಸೇರಿಸಿ ಮಾಡಿದ ಲೇಹ ನೀಡಲಾಗುತ್ತದೆ. ಒಂದು ವಾರ ಗೋಧಿಯ ಅಂಬಲಿ, ಇನ್ನೊಂದು ವಾರ ಮೆಂತ್ಯೆ ಅನ್ನವನ್ನು ತುಪ್ಪ ಹಾಕಿ ನೀಡಲಾಗುತ್ತದೆ. ತಿಂಗಳ ನಂತರ ಗೋಧಿ, ಮೆಂತ್ಯೆ ಬೆರೆಸಿದ ಅಕ್ಕಿಹಿಟ್ಟಿನ ಕಡುಬನ್ನು ತುಪ್ಪದ ಜೊತೆಗೆ ಕೊಡುತ್ತಾರೆ.
ಮಗುವಿಗೆ ಪ್ರತಿದಿನ ಎಣ್ಣೆ ಮಸಾಜ್ ನಂತರ ಬಿಸಿ ನೀರಿನ ಸ್ನಾನ. ಎಣ್ಣೆ ಮತ್ತು ನೀರು ಆರೋಗ್ಯವನ್ನು ವರ್ಧಿಸುತ್ತದೆ ಎಂಬುದು ಅಜ್ಜಿಯ ಸಲಹೆ. ಸೋಪು ಮತ್ತು ಶಾಂಪು ಬದಲು ಕಡಲೆ ಹಿಟ್ಟು ಹಚ್ಚಿ ಸ್ನಾನ ಮಾಡಿಸುತ್ತಾರೆ. ಬಾಣಂತಿಗೆ ಸ್ನಾನದ ಮೊದಲು ಮೈಗೆಲ್ಲಾ ಅರಿಶಿನ ಮತ್ತು ಕಾಡು ಜೀರಿಗೆ ಹಾಕಿ ಬಿಸಿ ಮಾಡಿದ ಎಣ್ಣೆ ಹಚ್ಚುತ್ತಾರೆ. ಇದರಿಂದ ಬಾಣಂತಿ ಮೈಯ ನಂಜು ನಿವಾರಣೆಯಾಗುತ್ತದೆ ಎನ್ನುತ್ತಾರೆ. ಸ್ನಾನದ ನಂತರ ಧೂಪದ ತಟ್ಟೆಯಲ್ಲಿ ಕೆಂಡದ ಮೇಲೆ ಗಂಧದ ಚಕ್ಕೆಗಳನ್ನು ಉದುರಿಸಿ ಬರುವ ಆ ಹೊಗೆಯಲ್ಲಿ ಮಗುವಿನ ಒದ್ದೆ ತಲೆಯನ್ನು ಒಣಗಿಸಿ, ನಂತರ ಬಾಣಂತಿಯ ಕೂದಲನ್ನೂ ಒಣಗಿಸುತ್ತಾರೆ. ಬಾಣಂತಿ ಇರುವ ಮನೆಯಲ್ಲಿ ಗಂಧ ಮತ್ತು ಕಡಲೆ ಹಿಟ್ಟಿನ ಘಮ ಹರಡಿರುತ್ತದೆ. ವಾರದಲ್ಲಿ ಎರಡು ದಿನ ಮಗುವಿಗೆ ಖಾರ ಹಾಕುತ್ತಾರೆ. ಅಂದರೆ ಬಜೆ, ಜಾಯಿಕಾಯಿಗಳನ್ನು ನುಣುಪಾದ ತೇಯುವ ಕಲ್ಲಿನಲ್ಲಿ ಹಾಲಿನೊಂದಿಗೆ ತೇದು ಜೇನುತುಪ್ಪ, ಹಾಲಿನೊಂದಿಗೆ ಒಳಲೆಯಲ್ಲಿ ಕುಡಿಸುವುದು.

ನಾಲಗೆ ಖಾರದಿಂದ ಚುರುಕ್ ಎಂದ ಕೂಡಲೇ ಜೋರಾಗಿ ಅಳುವ ಮಗುವನ್ನು ಸಮಾಧಾನಿಸಿ, ತೊಟ್ಟಿಲಿಗೆ ಹಾಕಿ ತೂಗಿ ಜೋಗುಳ ಹಾಡಿದ ಕೂಡಲೇ ನಿದ್ರೆ. ಖಾರ ಹಾಕಿದ ದಿನ ತುಸು ಹೆಚ್ಚೇ ನಿದ್ರೆ. ನನ್ನಿಬ್ಬರೂ ಮಕ್ಕಳು ರಾತ್ರಿ ಹಗಲು ಎರಡೂ ಹೊತ್ತು ಗಾಢವಾಗಿ ನಿದ್ರಿಸುತ್ತಿದ್ದರು. ಇದರಿಂದಾಗಿ ನಾನು ಬಾಣಂತನದ ಏಕತಾನತೆಯ ನಡುವೆ ಲವಲವಿಕೆಯಿಂದ ಇರಲು ಸಾಧ್ಯವಾಗುತಿತ್ತು. ಮಳೆರಾಯನ ಆರ್ಭಟದ ನಡುವೆ ದೊಡ್ಡ ದೊಡ್ಡ ಹಗಲುಗಳು, ದೀರ್ಘ ಇರುಳುಗಳು ಕಳೆದು ಹೋದದ್ದೇ ತಿಳಿಯುತ್ತಿರಲಿಲ್ಲ. ಎಷ್ಟೋ ರಾತ್ರಿಗಳು ಕರೆಂಟ್ ಸಹ ಇರುತ್ತಿರಲಿಲ್ಲ. ಆದರೆ ಮೂರು ತಿಂಗಳ ನಂತರ ಕರೆಂಟ್ ಇಲ್ಲದೇ ದೀಪದ ಮಂದ ಬೆಳಕಿನಲ್ಲಿ ಮಗುವನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು.
ಈ ಬಾಣಂತನಕ್ಕೆ ತಿಂಗಳುಗಳಿಂದ ಪೂರ್ವಸಿದ್ಧತೆ ನಡೆದಿರುತ್ತದೆ. ಬಾಣಂತಿ ಪಥ್ಯ, ಲೇಹಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸುವುದು. ಬಾಣಂತಿ ಕೋಣೆಯನ್ನು ಸಜ್ಜುಗೊಳಿಸುವುದು. ತೊಟ್ಟಿಲು ಕಟ್ಟುವುದು. ಆಗೆಲ್ಲಾ ಈಗಿನ ತರಹದ ಕಬ್ಬಿಣ ಅಥವಾ ಪ್ಲಾಸ್ಟಿಕ್ ತೊಟ್ಟಿಲುಗಳು ಇರುತ್ತಿರಲಿಲ್ಲ. ಬೆತ್ತದಿಂದ ಹೆಣೆಯಲಾದ ಸುಂದರ ಕರಕುಶಲತೆಯ ತೊಟ್ಟಿಲನ್ನು ಬಾಣಂತಿ ಕೋಣೆಯ ಮಾಳಿಗೆಗೆ ಕಟ್ಟಲಾಗುತ್ತಿತ್ತು. ಬಾಣಂತಿ ಕೋಣೆಗೆ ಬರುವಾಗ ಕೈ ಕಾಲು ತೊಳೆದು ಶುಭ್ರವಾಗಿ ಬರಬೇಕು. ಮಗು ಮತ್ತು ಬಾಣಂತಿ ನೋಡಲು ಬಂಧುಗಳು ಭೇಟಿ ನೀಡುವುದು ಸಾಮಾನ್ಯ. “ಬಾಲೆ ಮತ್ತೆ ಬಾಣ್ತಿ ಹೆಂಗದಾರೆ, ಮಾತಾಡ್ಸ್ಕಂಡು ಹೋಗಾನ ಅಂತ ಬಂದ್ವಿ” ಎನ್ನುತ್ತಾ ಬರುವ ನೆಂಟರು ಬಾಲೆ ಕೈಯಲ್ಲಿ ಹಣ ಕೊಡದೇ ಹೋಗುವುದಿಲ್ಲ. ಇನ್ನೂ ಅಕ್ಕಪಕ್ಕದ ಮನೆಯವರು ಬಾಣಂತಿ ಇರುವ ಮನೆಗೆ ಬಂದು ಬಾಲೆಗೆ ನೀರು ಹಾಕಲು ಸಹಾಯ ಮಾಡುತ್ತಾರೆ. ಮಗುವಿನ ತೊಟ್ಟಿಲಿಗೆ ಹಾಸಲು ಮೆತ್ತನೆಯ ಹತ್ತಿಬಟ್ಟೆಗಳನ್ನು ಚಿಕ್ಕದಾಗಿ ಕತ್ತರಿಸಿ ತೊಳೆದು, ಒಣಗಿಸಿ ಸಂಗ್ರಹಿಸಿಟ್ಟಿರುತ್ತಾರೆ. ಪದೇ ಪದೇ ಬದಲಾಯಿಸಬೇಕಾಗುವ ಈ ಬಟ್ಟೆಗಳನ್ನು ಒಗೆಯಬೇಕು. ಮಳೆಗಾಲದಲ್ಲಿ ಮನೆಯ ಹೊರಗೆ, ಒಳಗೆ ಈ ಬಟ್ಟೆಗಳನ್ನು ಒಣಗಿಸಲು ದಾರಗಳನ್ನು ಕಟ್ಟಿರುತ್ತಾರೆ.
ಬಾಣಂತಿ ಇರುವ ಮನೆಯಲ್ಲಿ ಅಮ್ಮಂದಿರಿಗೆ ಮುಂಜಾನೆಯಿಂದ ರಾತ್ರಿಯವರೆಗೂ ಬಿಡುವಿಲ್ಲದ ಕೆಲಸಗಳು. ರಾತ್ರಿ ಸಹ ಗಾಢನಿದ್ರೆಗೆ ಜಾರುವಂತಿಲ್ಲ. ನಿದ್ದೆಯಿಂದ ಎಚ್ಚರವಾಗುವ ಮಗುವನ್ನು ಎತ್ತಿ ಹಾಲೂಡಿಸಲು ಬಾಣಂತಿಯ ಪಕ್ಕ ಮಲಗಿಸುವುದು, ಮಲಗಿದ ಮಗುವನ್ನು ತೊಟ್ಟಿಲಲ್ಲಿ ಮಲಗಿಸುವುದು, ಒದ್ದೆ ಬಟ್ಟೆ ಬದಲಾಯಿಸುವುದು ಹೀಗೆ ಬಾಣಂತನ ಮಾಡುವವರು ಸದಾಕಾಲ ಎಚ್ಚೆತ್ತಿರಬೇಕು. ಆದರೆ ಅಮ್ಮಂದಿರ ತಾಳ್ಮೆಗೆ ಹೋಲಿಕೆಯಿಲ್ಲ. ಇವೆಲ್ಲಾ ಕೆಲಸಗಳಿಗೆ ಗೊಣಗದೆ ನಗುಮೊಗದಿಂದ, ಸಂಭ್ರಮದಿಂದ ಮಾಡುವ ಅವರಿಗೆ ಕೋಟಿ ನಮನಗಳು.
ಬಾಣಂತಿ ಇರುವ ಮನೆಯಲ್ಲಿ ಹಿರಿಕಿರಿಯರೆಲ್ಲರಿಗೂ ಸಂತಸ. ಚಿಕ್ಕಮಕ್ಕಳು ಇಡೀ ದಿನ ಮಗುವಿನ ಸ್ನಾನ, ಪಾನ ಅದರ ನಗು, ಆಟಗಳನ್ನು ಗಮನಿಸುತ್ತ ರಂಜನೆ ಪಡೆಯುತ್ತಾರೆ. ಮಗುವಿನ ಗೊಂಬೆ ಹಿಡಿದು ತಾವು ಸಹ ಬಾಣಂತನದ ಆಟವಾಡುತ್ತಾರೆ. ಇನ್ನೂ ಹಿರಿಯರಿಗೆ ಮನೆ ತುಂಬಿದ ಮಗುವಿನ ಅಳು, ಕೇಕೆ ಸದ್ದು ಮುದ ನೀಡುತ್ತದೆ.

ಮಲೆನಾಡಿನ ನಡುವಿನ ತವರೆಂಬ ಬೆಚ್ಚಗಿನ ಗೂಡಿನಲ್ಲಿ ಬಾಣಂತನದ ದಿನಗಳು ಜೀವಭಾವದೊಳಗೆ ಹಚ್ಚಹಸಿರಿನ ಸಿಹಿ ನೆನಪಾಗಿ, ನವಿರು ಅನುಭವಗಳ ಗುಚ್ಛವಾಗಿ ಎದೆಯೊಳಗೆ ಮರಮರಳಿ ಅರಳಿ ಹಿತ ನೀಡುತ್ತಿರುತ್ತದೆ.


ಚಂದದ ಬರಹ
ಬಹಳ ಸುಂದರವಾದ ಬರಹ..ಚಿಕ್ಕದಾಗಿ ಚೊಕ್ಕವಾಗಿ, ಅರ್ಥಪೂರ್ಣವಾಗಿದೆ.
ಮನೆ ಮನಸ್ಸುಗಳೆರಡೂ ತುಂಬಿದ ಸಂಭ್ರಮ ಮಗು ಹುಟ್ಟಿದ ಕ್ಷಣ. ತಾಯಿ ತನ್ನ ಮುದ್ದು ಕಂದನೋಡನೆ ತನ್ನ ತವರು ಮನೆಯಲ್ಲಿ ಅನುಭವಿಸುವ ನವಿರಾದ ಈ ಖುಷಿಯನ್ನು ಬಹಳ ಚೆನ್ನಾಗಿ ವರ್ಣಿಸಿದ್ದೀರಿ. ನಮಗೆಲ್ಲ ಓದಿನ ಖುಷಿ ಕೊಟ್ಟ ಲೇಖನ.