ವಿದ್ಯುತ್ ಇಲ್ಲದ ರಾತ್ರಿಗಳು, ನೆಟ್ವರ್ಕ್ ಇಲ್ಲದೆ ಲೋಕದ ಸಂಪರ್ಕ ಕಡಿದುಕೊಂಡ ಹಗಲುಗಳು. ಇದ್ದಕ್ಕಿದ್ದಂತೆ ಬೀಸುವ ಬಿರುಗಾಳಿ, ಉರುಳಿ ಬೀಳುವ ಮರಗಳು. ಕುಸಿದು ಬೀಳುವ ಗುಡ್ಡ. ಹೀಗೆ ಮಳೆ ಎಂದರೆ ಸಂತಸ, ಸೌಂದರ್ಯಗಳ ಜೊತೆಗೆ ಭಯಾನಕತೆಗಳ ಸಂಮಿಶ್ರಣ. ಕೆಲವೊಮ್ಮೆ ಈ ಮಳೆ ಜಿಗುಪ್ಸೆ ಬೇಸರವೆನಿಸಿದ್ದೂ ಇದೆ. ಆದರೆ ಮತ್ತೆ ಮತ್ತೆ ಈ ಮನ ಪ್ರತಿ ವರ್ಷದ ವರ್ಷಧಾರೆಗೆ ಹಪಹಪಿಸುತ್ತದೆ.
ಮಲೆನಾಡಿನ ಮಳೆಯ ದಿನಗಳ ಕುರಿತು ಭವ್ಯ ಟಿ.ಎಸ್. ಬರಹ ನಿಮ್ಮ ಓದಿಗೆ
ನಮ್ಮೂರಿಗೂ ಮಳೆಗೂ ಅವಿನಾಭಾವ ಸಂಬಂಧ. ನಿತ್ಯಹರಿದ್ವರ್ಣದ ದಟ್ಟ ಕಾನನದ ನಡುವಿನ ಮಲೆನಾಡಿನ ಪುಟ್ಟ ಊರು ನಮ್ಮದು. ಮಳೆ ಎಂದರೆ ಇಲ್ಲಿ ಹಾಗೆ ಬಂದು ಹೀಗೆ ಹೋಗುವ ಋತುವಲ್ಲ. ಮಳೆ ಎಂದರೆ ಬದುಕು. ಮಳೆ ಎಂದರೆ ಭಾವ. ಮಳೆ ಎಂದರೆ ಎದೆಯ ಬೀದಿಗಳಲ್ಲಿ ಹೊರಟ ಹಲವು ನೆನಪುಗಳ ಮೆರವಣಿಗೆ.
ಮೇ ಕೊನೆಯ ವಾರದಿಂದ ಮುಂಗಾರು ಕಾಲಿಟ್ಟಿತೆಂದರೆ ಸೆಪ್ಟೆಂಬರ್ ಕೊನೆವರೆಗೂ ಹಗಲು ರಾತ್ರಿ ಎಡೆಬಿಡದೆ ಸುರಿವ ಮಳೆಗೆ ನಮ್ಮೂರಿನ ಜನರು ಮಾನಸಿಕ ಮತ್ತು ದೈಹಿಕವಾಗಿ ಹೊಂದಿಕೊಂಡು ಬಿಟ್ಟಿದ್ದಾರೆ. ಬೇರೆ ಊರಿನಿಂದ ಇಲ್ಲಿಗೆ ಬಂದು ನೆಲೆಸಿದವರಿಗೆ ಇಂತಹ ಹೊಂದಾಣಿಕೆ ಹರಸಾಹಸವೇ ಸರಿ.
ಬಾಲ್ಯಕ್ಕೂ ಮಳೆಗೂ ಸವಿನೆನಪುಗಳ ಸುಂದರ ನಂಟು. ಮಳೆಗಾಲದಲ್ಲಿ ಆರಂಭವಾಗುವ ಶಾಲೆಗೆ ಹೋಗಲು ಪುಸ್ತಕಗಳನ್ನು ಪ್ಲಾಸ್ಟಿಕ್ ಬೈಂಡ್‌ಗಳಿಂದ ಭದ್ರಗೊಳಿಸುತ್ತಿದ್ದೆವು. ನಾನು ಪ್ರಾಥಮಿಕ ಶಾಲೆಗೆ ಹೋಗುವಾಗ ಅಪ್ಪ ನನಗೊಂದು ರೈನ್ ಕೋಟ್ ತಂದುಕೊಟ್ಟಿದ್ದರು. ಆದರೆ ಶಾಲೆಯಲ್ಲಿ ನನ್ನ ಬಹುತೇಕ ಗೆಳೆಯ ಗೆಳತಿಯರು ಕಂಬಳಿಕೊಪ್ಪೆ ಹೋಲುವ ಪ್ಲಾಸ್ಟಿಕ್ ಕೊಪ್ಪೆ ಧರಿಸಿ ಬರುತ್ತಿದ್ದರು. ನನಗಂತೂ ರೈನ್ ಕೋಟ್‌ಗಿಂತ ಆ ಪ್ಲಾಸ್ಟಿಕ್ ಕೊಪ್ಪೆಯೇ ಆಪ್ಯಾಯಮಾನವೆನಿಸಿತು. ಮನೆಯಲ್ಲಿ ಹಟ ಹಿಡಿದು ಕೊಡಿಸುವವರೆಗೂ ಮುಷ್ಕರ ಮಾಡಿದೆ. ಕೊನೆಗೂ ಅಪ್ಪ ಪ್ಲಾಸ್ಟಿಕ್ ಕೊಪ್ಪೆ ತಂದು ಕೊಟ್ಟಾಗ ಅದನ್ನು ಧರಿಸಿ ಗೆಳತಿಯರೊಡನೆ ಶಾಲೆಗೆ ಹೊರಟಾಗ ಅದೇನೋ ಹೇಳಲಾರದ ಸಂಭ್ರಮ.
ಕಾಲಭೈರವನ ರುದ್ರ ನರ್ತನದಂತೆ ಸುರಿವ ಮಳೆಯಲ್ಲಿ ಶಿಕ್ಷಕರು ಬರದ ತರಗತಿಯಲ್ಲಿ ಮನಸೋ ಇಚ್ಛೆ ಗಲಾಟೆ ಮಾಡಲು ನಮಗೆ ಅವಕಾಶ ಸಿಗುತಿತ್ತು. ಶಾಲೆಗೆ ಬರುವ ಮತ್ತು ಹೋಗುವ ದಾರಿಯುದ್ದಕ್ಕೂ ರಸ್ತೆಯ ಹೊಂಡಗಳು, ಚರಂಡಿಯಲ್ಲಿ ಹರಿವ ನೀರಿನೊಳಗೆ ಕಾಲು ಹಾಕಿ ಕುಣಿಯುತ್ತಾ ಒಬ್ಬರಿಗೊಬ್ಬರು ನೀರು ಹಾರಿಸಿಕೊಂಡು ನಲಿಯುತ್ತಿದ್ದೆವು.
ನಿರಂತರ ಸುರಿದ ಮಳೆಗೆ ಪಾಚಿಗಟ್ಟಿದ ನೆಲದ ಮೇಲೆ ನಡೆಯಲು ತುಂಬಾ ಚತುರಿರಬೇಕು. ಕಾಲು ಜಾರಿ ನಿಯಂತ್ರಣ ತಪ್ಪಿ ಬಿದ್ದೆವೆಂದರೆ ಸುತ್ತಲಿನ ಜನರಿಗೆ ಪುಕ್ಕಟೆ ಮನರಂಜನೆ. ಗಾಳಿಗೆ ಕೈ ನಿಯಂತ್ರಣ ತಪ್ಪಿ ಹಾರಿಹೋಗುವ, ಉಲ್ಟಾ ಮಡಚಿಕೊಂಡು ಹಾಸ್ಯರಸ ಬಿತ್ತರಿಸುವ ಛತ್ರಿಗಳನ್ನು ಹಿಡಿದುಕೊಳ್ಳಲು ನಿಪುಣತೆ ಬೇಕು!!
ಮಳೆಗಾಲದಲ್ಲಿ ಅಮ್ಮ ಮಾಡುವ ಅಡುಗೆಗಳೆಂದರೆ ಬಲು ಪ್ರಿಯ. ಹುರುಳಿ ಕಟ್ಟಿನ ಸಾರು, ಬೇಯಿಸಿದ ಅಥವಾ ಸುಟ್ಟ ಹಲಸಿನ ಬೀಜ, ಹುಳಿ ಹಾಕಿ ಬತ್ತಿಸಿದ ಮೀನು ಸಾರು, ಕಡುಬು, ಅಕ್ಕಿ ರೊಟ್ಟಿ, ಹಲಸಿನ ಹಣ್ಣಿನ ಮುಳಕ, ಕೆಸುವಿನ ಸೊಪ್ಪಿನ ಪಲ್ಯ, ಹುರಿದ ಅಣಬೆ, ಕಳಲೆ ಪಲ್ಯ ಆಹಾ!! ಹೀಗೆ ಮಳೆಗಾಲದಲ್ಲಿ ಬಾಯಲ್ಲಿ ನೀರೂರಿಸುವ ರುಚಿಕರ ಖಾದ್ಯಗಳು ಮನಸ್ಸಿಗೆ ಮುದ ನೀಡುತ್ತಿದ್ದವು.
ನಮ್ಮೂರಿನ ಸುತ್ತಲಿನ ಪ್ರಕೃತಿ ಮಳೆಗಾಲದಲ್ಲಿ ಕಣ್ಣು ಕೋರೈಸುವ ಸೌಂದರ್ಯ ಧರಿಸುತ್ತದೆ. ಹಚ್ಚಹಸಿರಿನ ಬೆಟ್ಟಗುಡ್ಡಗಳ ನಡುವೆ ಹರಿವ ಹಳ್ಳ ಹೊಳೆ ಜಲಪಾತಗಳು ಅದ್ಭುತ ಕಲಾವಿದನ ಕೈಯಿಂದ ಮೂಡಿದ ಚಿತ್ರಕಲಾಕೃತಿಯಂತಹ ದೃಶ್ಯ ಮಾಧುರ್ಯವನ್ನು ಮೂಡಿಸುತ್ತವೆ.

ಇಲ್ಲಿನ ಹೊಳೆ, ಜಲಾಶಯಗಳು ಮಳೆಗಾಲದಲ್ಲಿ ಮೈದುಂಬಿಕೊಂಡು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಹಾಗೆಯೇ ಇಲ್ಲಿನ ದಾರಿಗಳು ಸಣ್ಣ ಸಣ್ಣ ಜಲಪಾತಗಳಿಂದ ಕಂಗೊಳಿಸುತ್ತವೆ.
ನಮ್ಮೂರಿನ ಮಳೆಗಾಲವೆಂದರೆ ಅದೊಂದು ನವೀನ ದೃಶ್ಯ ಕಾವ್ಯವೇ ಸರಿ. ಎಂತಹ ಬರಡು ಹೃದಯದಲ್ಲೂ ಭಾವನೆಗಳನ್ನು ಕೆರಳಿಸುವ ಶಕ್ತಿ ನಮ್ಮೂರ ಮಳೆಗಿದೆ. ಸೂರ್ಯ ಇಣುಕಿ ಕೂಡಾ ನೋಡದ ಈ ನಾಲ್ಕು ತಿಂಗಳು ಮಳೆ ನಿಂತರೆ ಮಂಜು ಆಕ್ರಮಿಸಿ ಫ್ರಿಡ್ಜ್‌ನೊಳಗೆ ಕುಳಿತ ಅನುಭವ. ಮಾಡಿಟ್ಟ ಅಡುಗೆ ಮೂರು ನಾಲ್ಕು ದಿನ ಕೆಡದಂತಹ ತಂಪು ಹವೆ.
ವಿದ್ಯುತ್ ಇಲ್ಲದ ರಾತ್ರಿಗಳು, ನೆಟ್ವರ್ಕ್ ಇಲ್ಲದೆ ಲೋಕದ ಸಂಪರ್ಕ ಕಡಿದುಕೊಂಡ ಹಗಲುಗಳು. ಇದ್ದಕ್ಕಿದ್ದಂತೆ ಬೀಸುವ ಬಿರುಗಾಳಿ, ಉರುಳಿ ಬೀಳುವ ಮರಗಳು. ಕುಸಿದು ಬೀಳುವ ಗುಡ್ಡ. ಹೀಗೆ ಮಳೆ ಎಂದರೆ ಸಂತಸ, ಸೌಂದರ್ಯಗಳ ಜೊತೆಗೆ ಭಯಾನಕತೆಗಳ ಸಂಮಿಶ್ರಣ. ಕೆಲವೊಮ್ಮೆ ಈ ಮಳೆ ಜಿಗುಪ್ಸೆ ಬೇಸರವೆನಿಸಿದ್ದೂ ಇದೆ. ಆದರೆ ಮತ್ತೆ ಮತ್ತೆ ಈ ಮನ ಪ್ರತಿ ವರ್ಷದ ವರ್ಷಧಾರೆಗೆ ಹಪಹಪಿಸುತ್ತದೆ.
ಸುರಿವ ಮಳೆಯಲ್ಲಿ ಬೆಚ್ಚಗೆ ಹೊದ್ದು ಮಲಗಿದರೆ ನಿದ್ರಾದೇವಿ ಆಗಮಿಸಿ ಕನಸಿನ ಲೋಕಕ್ಕೆ ಕರೆದೊಯ್ದಂತೆ. ಬೆಳಕು ಹರಿದರೂ ಮುದುಡಿ ಮಲಗಬೇಕು ಎನಿಸುವಷ್ಟು ಚಳಿ. ನಸುಕಿನಲ್ಲೇ ಎದ್ದು ಗದ್ದೆ ಕೆಲಸಕ್ಕೆ ಇಳಿವ ರೈತರು ನಿಜಕ್ಕೂ ದೇವಮಾನವರೇ. ತೋಟಗಳಲ್ಲಿ, ಗುಡ್ಡ ಕಾಡಿನಲ್ಲಿ ತಿರುಗುವ ಇವರಿಗೆ ಕಾಲಿಗೆ ಹತ್ತಿ ಕಚ್ಚಿಕೊಳ್ಳುವ ಇಂಬಳಗಳು ಒಂದು ರೀತಿ ಸ್ನೇಹಿತರಂತೆ. ಅಪ್ಪಿ ತಪ್ಪಿ ಈ ಇಂಬಳ ( ಲೀಚ್) ಗಳು ಶಾಲೆಗೆ ಬರುವ ಮಕ್ಕಳ ಕಾಲುಗಳಿಗೆ ಹತ್ತಿ ಶಾಲೆವರೆಗೆ ಬಂದು ಕಾಣಿಸಿದವೆಂದರೆ ಅಲ್ಲೊಂದು ಕೋಲಾಹಲವೇ ಸೃಷ್ಟಿಯಾಗುತ್ತಿತ್ತು. ಈಗಲೂ ಈ ಇಂಬಳಗಳ ಕಂಡರೆ ನನಗೆ ಅವ್ಯಕ್ತ ಭಯ.

ಹೇಳುತ್ತಾ ಹೋದರೆ ಮಳೆಗಾಲದೊಂದಿಗೆ ಗರಿಗೆದರುವ ಸಾವಿರಾರು ಸವಿನೆನಪುಗಳ ಸರಮಾಲೆಯೇ ಕಣ್ತುಂಬಿಕೊಂಡು ಮೈ ಮನ ನವಿರೇಳುತ್ತದೆ. ನಮ್ಮೂರ ಮಳೆಗಾಲದ ರಸದೌತಣ ಸವಿಯಲು ಖಂಡಿತ ಒಮ್ಮೆ ಬನ್ನಿ ಮಲೆನಾಡಿಗೆ….

