Advertisement
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ

ಒಂದು ದಿನ ಕ್ಯಾಂಪಸ್ಸಿಗೆ ಬಂದ ಚಂದ್ರಮೌಳಿ ಸಂಜೆ ಸುಧಾಳೊಂದಿಗೆ ಟೀ ಕುಡಿಯುತ್ತಾ “ನೋಡು, ನಾನು ಕಲ್ಕತ್ತಾಗೆ ಹೋಗ್ತಿದ್ದೀನಿ. ಈ ಹೋರಾಟ ಎಲ್ಲ ಶಕ್ತಿಗುಂದುತ್ತಾ ಇದೆ. ಇದ್ರಿಂದೆಲ್ಲ ಏನಾದ್ರೂ ಆಗುತ್ತೆ ಅನ್ನೋ ನಂಬಿಕೆನೂ ನನಗಿಲ್ಲ. ಒಂದು ಅಮೆರಿಕನ್ ಕಂಪೆನಿಯಿಂದ ಒಳ್ಳೆ ಆಫರ್ ಇದೆ. ಎರಡು ವರ್ಷದ ಮೇಲೆ ಸ್ಟೇಟ್ಸ್‌ಗೆ ಹೋಗೋ ಛಾನ್ಸೂ ಇದೆ. ನಿಂಗೆ ಇದು ದ್ರೋಹದ ಥರ ಕಾಣಿಸಬಹುದು, ಪರ್ಸನಲ್ ಲೆವೆಲ್‌ನಲ್ಲೂ… ಆದ್ರೆ ನಿನ್ನಲ್ಲಿ ಮಾತ್ರಾ ಪ್ರಾಮಾಣಿಕವಾಗಿ ಹೇಳ್ತಿದೀನಿ….” ಎಂದೆಲ್ಲಾ ಹೇಳಿ ಮಾಯವಾಗಿದ್ದ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ “ಯಾರಲ್ಲಿ, ಕಳೆದಿರುಳು….” ನಿಮ್ಮ ಈ ಭಾನುವಾರದ ಓದಿಗೆ

ಅಸ್ಸಾಂನ ಟೀ ಕಾರ್ಮಿಕರ ಬವಣೆ ಬಗ್ಗೆ ಜಯಶಂಕರ್ ಮತ್ತು ಚಂದ್ರಮೌಳಿ ವಿವರಿಸಿದ ರೀತಿ ನಮ್ಮನ್ನೆಲ್ಲಾ ಆಳವಾಗಿ ತಟ್ಟಿತ್ತು. ಅವರನ್ನು ಸಂಘಟಿಸುವ ಬಗ್ಗೆ ಜಯಶಂಕರ್ ಉತ್ಕಟ ಲಹರಿಯಲ್ಲಿ, ಅಷ್ಟೇ ಬದ್ಧತೆಯಲ್ಲಿ ಮಾತನಾಡಿದ ರೀತಿ ಹೇಗಿತ್ತೆಂದರೆ ನಮ್ಮಲ್ಲಿ ಒಂದಿಬ್ಬರು ಆಗ್ಗಿಂದ್ದಾಗ್ಯೇ ಲಗೇಜು ಪ್ಯಾಕು ಮಾಡುವ ಮಟ್ಟಿಗೆ ಬಂದಿದ್ದರು.

ಲೈಬ್ರರಿಯ ಗೋಡೆಯುದ್ದಕ್ಕೂ ಹರಡಿದ್ದ ಭೂಪಟದ ದಪ್ಪ ಗಾಜಿನ ಧೂಳಿನ ಮೇಲೆ ಬೆರಳಲ್ಲೇ ನದಿರೇಖು ಮೂಡಿಸುತ್ತಾ ಅಸ್ಸಾಮನ್ನು ಕಣ್ತುಂಬಾ ನೋಡಿ ತಡವಿದ್ದೆ. ಅಷ್ಟಕ್ಕೂ ನಾನು ಅಸ್ಸಾಂ ನೋಡಿರಲಿಲ್ಲ.
ಇಂದಿಗೂ ನೋಡಿಲ್ಲ.

ಇವೆಲ್ಲ ಆಗಾಗ ನೆನಪಾಗುವುದಿದೆ. ಆಯ್ಕೆಯ ಸ್ವಾತಂತ್ರ್ಯವಿದ್ದಾಗಲೂ ದುರ್ಗಮವಾದದನ್ನು ಆರಿಸಲು ಮನಸ್ಸು ಹಿಂದೇಟು ಹಾಕುತ್ತದೆ. ಸೆಕ್ಯೂರ್ ಆದದ್ದರಲ್ಲಿ ನೆಲೆಗೊಳ್ಳಲು ತವಕಿಸುತ್ತದೆ.

ರಾಮಗೋಪಾಲ್ ನನ್ನಲ್ಲಿಗೆ ಬಂದ ಕಾರಣಕ್ಕೆ ಇವೆಲ್ಲ….. ಮತ್ತೆ…..

ರಾಮಗೋಪಾಲ್ ಎಂಜಿನಿಯರಿಂಗ್ ಮುಗಿಸಿ, ಕೆಲಸಕ್ಕೆ ಸೇರುವ ಇಚ್ಛೆಯಿಲ್ಲದೇ ಹೆತ್ತವರ ಆತಂಕ, ಒತ್ತಾಯಗಳನ್ನು ಎದುರಿಸುವ ಧೈರ್ಯವೂ ಇಲ್ಲದೇ, ಹಳ್ಳಿ ಗೀಳು ಹತ್ತಿಸಿಕೊಂಡ ಹುಡುಗ. ಹರ್ಷ ಕೌಲಗಿ ಮೂಲಕ ನನ್ನ ಮನೆಗೆ ಕೆಲವು ದಿನಗಳ ಮಟ್ಟಿಗೆ ಬಂದವನು. ಯಥಾಪ್ರಕಾರ ಹೆತ್ತವರ ಒತ್ತಾಯಕ್ಕೆ ಎಂಜಿನಿಯರಿಂಗ್ ಸೇರಿ ಆರಂಭದಲ್ಲಿ ಕೊಸಕೊಸ ಮಾಡಿ, ಆಮೇಲೆ ಚೆನ್ನಾಗೇ ಓದಿದವನು. ಗ್ರಾಮಾಂತರ ಪ್ರದೇಶಗಳಿಗೆ ತಕ್ಕ ತಂತ್ರಜ್ಞಾನ ಅಂತ ಒದ್ದಾಡುತ್ತಾ ಇದ್ದ. ಈ ಪ್ರವರ ನೀಡಿದ್ದು ಹರ್ಷ ಕೌಲಗಿಯೇ.

ಟಿಪಿಕಲ್ ಎಂಜಿನಿಯರಿಂಗ್ ಹುಡುಗ, ಎಣ್ಣೆಗಪ್ಪಿನ, ನೀಳ ಹುಡುಗ, ದಪ್ಪಗ್ಲಾಸು, ಮೊಡವೆ ಮುಚ್ಚಲು ಕುರುಚಲು ಗಡ್ಡ, ಕಾರ್ಡ್ರಾಯ್ ಪ್ಯಾಂಟ್. ಸೇವ್ ಅರ್ಥ್ ಮುಂತಾದ ಬರಹಗಳ ಟಿ ಶರ್ಟು. ತೇಪೆ ಹಾಕಿದರೂ ಉತ್ಕೃಷ್ಟ ಬೆಲೆಯ ಬೆನ್ನಿಗೇರಿಸುವ ಬ್ಯಾಗ್, ಸುಮಾರಾಗಿ ಇಕೋ ಬ್ರಿಗೇಡಿನ ವಟುವಿನಂತಿದ್ದ.

ಹಾಸ್ಟೆಲ್‌ನಲ್ಲಿರುವ ನಮ್ಮ ಮಗ ಇನ್ನು ನಾಲ್ಕೈದು ವರ್ಷ ಕಳೆದರೆ ಹೀಗೆ ಬೆಳೆದಿರುತ್ತಾನೆ ಎಂಬ ಕಕ್ಕುಲತೆಯಲ್ಲಿ ನನ್ನಾಕೆ ಆತನನ್ನು ವಾತ್ಸಲ್ಯದಲ್ಲಿ ಬರಮಾಡಿಕೊಂಡಳು.

“ನಿನಗೆ ಬೇಕಾದಂತೆ ಓಡಾಡು, ಆದ್ರೆ ನಮ್ಮ ಟೈಂ ಟೇಬಲ್ಲಿಗೆ ಹೊಂದಿಕೋ. ಊಟ ತಿಂಡಿ ವಿಚಾರದಲ್ಲಿ ನಾಚಿಕೆ, ಹಿಂಜರಿಕೆ ಬೇಡ” ಎಂದೆ. ಮೂರು ದಿನ ಹೀಗೆ ಕಳೆದ. ಸಹಜ ಲವಲವಿಕೆ, ಕುತೂಹಲದ ಹುಡುಗ-ತೋಟದ ಕೂಲಿಗಳೊಂದಿಗೆ ಕೈಜೋಡಿಸಿದ. ನೀರಿನ ಪೈಪು ರಿಪೇರಿ ಮಾಡಿದ. ಹಂಡೆಸ್ನಾನದ ಸುಖ ಅನುಭವಿಸಿದ. ರಾತ್ರಿ ಮಾತಿಗಿಳಿದಾಗ ತನ್ನ ತಾಂತ್ರಿಕ ಜ್ಞಾನದ ಮೂಲಕ ನಿಮಗೇನಾದರೂ ಸಹಾಯ ಮಾಡಬಹುದೇ? ಎಂದೂ ಚರ್ಚಿಸಿದ.

ನಾನು ಎಲ್ಲವನ್ನೂ ಕನಿಷ್ಠಕ್ಕಿಳಿಸಿದೋನು ಎಂದೆ. ನಕ್ಕು ಸುಮ್ಮನಾದ. ನಮ್ಮ ಕಾಲದ ಆವಿಷ್ಕಾರಗಳು ಹೇಗೆ ಪ್ರಾಕ್ಟಿಕಲ್ಲಾಗಿರಲ್ಲ ಎಂದು ಸೋದಾಹರಣಪೂರ್ವಕ ಚರ್ಚಿಸಿದ್ದೂ ಆಯಿತು. ನಾಲ್ಕನೇ ದಿನ ನಮ್ಮೂರಿನ ಕೇಂದ್ರಕ್ಕೂ ಹೋಗಿ, ಅಂಗಡಿ ಮುಗ್ಗಟ್ಟು, ಹೆಂಡದಂಗಡಿ ಗರಜು ಗುಲ್ಲು ನೋಡಿಯೂ ಬಂದ. ಅದರ ಮಾರನೇ ದಿನ, ಬೆಳಿಗ್ಗೆ ತಿಂಡಿ ಮುಗಿಸಿದ್ದೇ,
“ಅಂಕಲ್ ನಾಳೆ ಬೆಂಗಳೂರಿಗೆ ವಾಪಸ್ ಹೋಗ್ತೀನಿ…” ಎಂದ. ಎಂಟತ್ತು ದಿನ ಉಳಿಯುತ್ತಾನೆ ಎಂದು ಹರ್ಷ ಕೌಲಗಿ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ನಮ್ಮಿಂದೇನಾದರೂ ಅಪಚಾರವಾಯಿತೇ ಎಂದೂ ಗೊಂದಲಕ್ಕೆ ಬಿದ್ದು ಅವನನ್ನು ವಿಚಾರಿಸಿದೆ.

“ಹಾಗೇನೂ ಇಲ್ಲ.., ನಂಗೆ ಏನೇನೋ ಗೊಂದಲ… ಸ್ವಲ್ಪ ದಿನ ಬಿಟ್ಟು ಮತ್ತೆ ಬರ್ತೇನೆ….” ಎಂದವನು ನಾನು ತೋಟಕ್ಕಿಳಿದಾಗ, ನನ್ನ ಜೊತೆಯೇ ಬಂದು… ಅಷ್ಟು ಸುತ್ತಿದ ಬಳಿಕ,
“ಅಂಕಲ್, ನಿಮಗೆ ಚಂದ್ರಮೌಳಿ ಗೊತ್ತಾ..?” ಎಂದು ಕೇಳಿದ. ಅದು ಎಷ್ಟು ಅಚಾನಕ್ಕಾಗಿತ್ತೆಂದರೆ, ನನಗೆ ಅಚ್ಚರಿ, ಅಸಹನೆ ಎರಡೂ ಹುಟ್ಟಿತು.
“ಯಾರು, ಯಾವ ಚಂದ್ರಮೌಳಿ?” ಎಂದು ಕೇಳಿದೆ.

“ನಿಮಗೆ ಪರಿಚಯ ಅಂದ್ಕೊಂಡಿದ್ದೆ. ಅವರು ಮತ್ತು ಜಯಶಂಕರ ನಿಮ್ಮ ಕಾಲದ ಲೆಜೆಂಡ್ಸ್ ಅಂತೆ… ನನಗ್ಯಾರೋ ಹೇಳಿದ್ರು…” ಎಂದ ಕೊಂಚ ಅಪರಾಧೀ ಭಾವದಲ್ಲಿ.

“ಹಾಗಲ್ಲಪ್ಪಾ… ಚಂದ್ರಮೌಳಿ ಗೊತ್ತು ಅನ್ನೋದು ಪಾಸ್ಟ್ಟೆನ್ಸ್. ಈಗೆಲ್ಲಿದಾನೆ, ಏನಾಗಿದಾನೆ…. ಗೊತ್ತಿಲ್ಲ… ಹತ್ತಿಪ್ಪತ್ತು ವರ್ಷದ ಹಿಂದಿನ ಕಥೆ ಅಲ್ವೇ?” ಎಂದೆ.

ನನ್ನ ಕಿರಿಕಿರಿ ಅರ್ಥವಾದವನಂತೆ ಬೆನ್ನು ಹತ್ತುವ ಧಾಟಿ ಬಿಟ್ಟು ಗಂಭೀರ ಧ್ವನಿಯಲ್ಲಿ,
“ನಂಗೆ ಅವರ ಮೂರ್ನಾಲ್ಕು ಆರ್ಟಿಕಲ್ಸ್ ಸಿಕ್ತು, ಅವರು ಗ್ಲೋಬ್ ಟ್ರಾಟರ್ ಅಂತೆ, ಕಲ್ಕತ್ತಾದಲ್ಲಿದ್ರಂತೆ, ಆಮೇಲೆ ಬಿಹಾರಕ್ಕೆ ಹೋದ್ರಂತೆ, ಅಲ್ಲಿಂದಾಚೆಗೆ ಯಾರಿಗೂ ಗೊತ್ತಿಲ್ಲ… ಸುಮ್ನೆ ಅಷ್ಟಿಷ್ಟು ಕತೆಗಳಿದಾವೆ…” ಎಂದ.

ನಾನು ಪ್ರತಿಕ್ರಿಯಿಸಲಿಲ್ಲ. ನಮ್ಮ ಸ್ಮೃತಿಯ ತೀವ್ರತೆ ಈ ಕಿರಿಯರಿಗೆ ಅರ್ಥವಾಗಬೇಕೆಂದೇನೂ ಇಲ್ಲವಲ್ಲ….

*****

ಚಂದ್ರಮೌಳಿ ಮುಟ್ಟದ ಫೀಲ್ಡ್ ಇಲ್ಲ, ಸೆಳೆಯದ ಹುಡುಗಿ ಇಲ್ಲ ಅನ್ನೋದು ನಮ್ಮ ಕಾಲದ ಕ್ಯಾಂಪಸ್‌ನ ಗಾದೆ ಮಾತಾಗಿತ್ತು. ಬೆಳ್ಳಿ ಚಮಚ ಇಟ್ಟುಕೊಂಡೇ ಹುಟ್ಟಿದ ಶ್ರೀಮಂತ. ಚಿತ್ರ ಬರೀತಿದ್ದ, ಹಾಡುತ್ತಿದ್ದ, ಗಿಟಾರ್, ಬ್ಯಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್…. ಹೀಗೆ ಅವನ ಹರಹು, ಜೊತೆಗೇ ಯೆಜ್ಡಿ ಬೈಕಲ್ಲಿ ರಾತ್ರಿ ಬೆಳಗಾಗೋದರ ಒಳಗೆ, ಭೂಮಿ ಸುತ್ತು ಹಾಕಿ ಬರಬಲ್ಲ ಛಾತಿ ಬೇರೆ.

ಕ್ಯಾಂಪಸ್‌ಗೆ ಅವನು ಬಂದ ಕಾಲ, ಹೋರಾಟದ ಕಾವಿನ ದಿನಗಳು. ಅತ್ತಿತ್ತ ನೋಡುವಷ್ಟರಲ್ಲಿ, ಈ ಹೋರಾಟ ರ‍್ಯಾಡಿಕಲ್ ಚರ್ಚೆಗಳಲ್ಲಿ ಎಷ್ಟು ಮುಳುಗಿ ಬಿಟ್ಟನೆಂದರೆ, ಅಷ್ಟುದಿನ ತೊಡಗಿಸಿಕೊಂಡಿದ್ದವರಿಗೆ ಹೊಟ್ಟೆಯುರಿ ಹುಟ್ಟುವಷ್ಟು. ಅವನು ಮತ್ತು ಜಯಶಂಕರ್ ವಿಚಿತ್ರ ಜೋಡಿ. ಸದಾ ಸಂಯಮ, ಸ್ಪಷ್ಟ, ಸಾಧ್ಯ ವಿವರಗಳ ಮೂಲಕ ಎಲ್ಲರನ್ನೂ ಸೇರಿಸಿಕೊಂಡು ಹೆಜ್ಜೆ ಇಡುವ ಜಯಶಂಕರ್ ನಮಗೆ ಹೆಚ್ಚು ಹಿತ. ನಾವು ಅವನನ್ನು ಪಿಗ್ಮಿ ಕಲೆಕ್ಟರ್ ಎಂದು ಕರೆಯುತ್ತಿದ್ದೆವು.

“ಒಂದು ಹೆಜ್ಜೆ… ಸಧ್ಯಕ್ಕೆ ಸಾಕು.. ನಿಮ್ಮ ಮಿತಿಯಲ್ಲಿ ಕೆಲಸ ಮಾಡಿ…” ಎನ್ನುವ ನಿಲುವು ಜಯಶಂಕರನದ್ದು.

ಚಂದ್ರಮೌಳಿಯೋ, “ಮಿತಿಗಳನ್ನು ಮೀರದಿದ್ದರೆ, ಮಾನವ ಚೈತನ್ಯಕ್ಕೆ ಅರ್ಥವೇ ಇಲ್ಲ…. ಜಿಗಿಯೋದು ಕಲೀಬೇಕು” ಎಂದು ಹಂಗಿಸುವ, ಛೇಡಿಸುವ ಧಾಟಿಯಲ್ಲಿ ಹೇಳುತ್ತಾ ಗುಂಪನ್ನು ಕ್ರಿಯಾಶೀಲವಾಗಿಸುತ್ತಿದ್ದವನು.

ಹತ್ತಾರು ಸಂಘಟನೆ, ಚಳವಳಿಗಳ ರೂಪುರೇಷೆಗಳನ್ನು ಊನವಿಲ್ಲದಂತೆ ಯೋಜಿಸುವವನು ಜಯಶಂಕರ್, ಪಾದರಸದಂತೆ ಓಡಾಡಿ ಅದನ್ನು ಹೆಣೆದು ಬರುವವನು ಚಂದ್ರಮೌಳಿ. ನಾನೇ ಒಮ್ಮೆ ಆತನ ಜೊತೆ ಬೈಕಿನಲ್ಲಿ ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರ ಒಳಗೆ ಐದು ತಾಲೂಕು ಕೇಂದ್ರಗಳನ್ನು ಸುತ್ತಿದ್ದೆ. ಪೋಲೀಸರಿಗೆ ಆಯಾ ತಾಲೂಕುಗಳ ಚಳವಳಿಯ ಸಾಂದ್ರತೆಯೇ ಅರ್ಥವಾಗದೇ ಮಂತ್ರಿ ಕೈಲಿ ಎಸ್ಪಿ, ಡಿಸಿಗಳು ಉಗಿಸಿಕೊಂಡದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ.

ಹಾಗೆಂದು ಚಂದ್ರಮೌಳಿ ವೇದಿಕೆ ಮೇಲೆ ಭಾಷಣ ಬಿಗಿಯಲಾರ. ಎಳೆದರೂ “ಇಲ್ಲ ಬ್ರದರ್, ಅದೆಲ್ಲಾ ನನ್ ಕೈಲಾಗಲ್ಲ” ಎಂದು ಕೈಯಾಡಿಸಿ ಜಯಶಂಕರನನ್ನು ಎತ್ತಿ ಕೂರಿಸುತ್ತಿದ್ದ. ತರ್ಕಬದ್ಧ, ಆತ್ಮೀಯ ಮಾತುಗಾರಿಕೆಯ ಜಯಶಂಕರನ ಮಾತಿಗೆ ಬಡಿದು ಹಾಕಲು ಕಾಯುತ್ತಿದ್ದ ಪೋಲೀಸರೂ ತಲೆದೂಗುತ್ತಿದ್ದರು.

“ಜಯಶಂಕರ್ ಕೈಗೆ ಸಿಗದೇ ಹೋಗಿದ್ದಿದ್ರೆ… ಹೆಂಗೆಂಗೋ ಪ್ಲೇ ಬಾಯ್ ಥರ ಆಗ್ಬಿಡ್ತಿದ್ದೆ….” ಎಂದು ಚಂದ್ರಮೌಳಿ ಕೃತಜ್ಞತೇಲಿ ಹೇಳುತ್ತಿದ್ದ.

ಆ ಎರಡು ವರ್ಷ ಸವೆಯುತ್ತಿದ್ದಂತೆ ಒಂದು ವಿಷಯ ನಮಗೆಲ್ಲಾ ಸ್ಪಷ್ಟವಾಗತೊಡಗಿತು. ನಮ್ಮ ‘ರಾಜ್ಯಮಟ್ಟದ ನಾಯಕರಿಗೆ’ ಇವರಿಬ್ಬರೂ ಅಚ್ಚುಮೆಚ್ಚಾಗಿದ್ದರು. ಸ್ಪಷ್ಟ, ನೈತಿಕ ನಿಲುವು ಮತ್ತು ಬದ್ಧತೆಗಳನ್ನು ವ್ರತ ಎಂಬಂತೆ ಧಾರಣೆ ಮಾಡಿಕೊಂಡಿದ್ದ ಜಯಶಂಕರನಿಗೆ ಅವರೊಂದಿಗೆ ಏಗುವುದು ಸಾಧ್ಯವಿಲ್ಲ ಎನ್ನುವ ಸತ್ಯ ಒಂದಾದರೆ, ಎಗ್ಗಿಲ್ಲದೇ ನುಗ್ಗುವ ಆಕ್ಟಿವಿಸಂನ ಹೊರತಾಗಿಯೂ, ಶುದ್ಧ ಅನೈತಿಕವೆನ್ನಿಸುವ ತನ್ನ ಜೀವನ ಶೈಲಿಯ ಕಾರಣಕ್ಕೆ ಚಂದ್ರಮೌಳಿ ಈ ನಾಯಕರಿಗೆ ನುಂಗಲಾರದ ತುತ್ತಾಗಿದ್ದ ಎಂಬ ಸಂಗತಿ ಕೂಡಾ.

ಒರಟು ಗಡ್ಡ, ಚೌಕ ಕಡೆದ ಸುಂದರ ಮುಖ. ಚಂದ್ರಮೌಳಿಯ ಕಣ್ಣುಗಳು ‘ಚೆ’ ಯ ಕಣ್ಣಿನಂತಿವೆ ಎಂದು ನನಗೂ ಅನ್ನಿಸಿದ್ದಿದೆ. ಇನ್ನು ಹುಡುಗಿಯರು ಹುಚ್ಚೇಳುವುದು ಕಷ್ಟವೇ?

ಪಕ್ಕಾ ಸಂಪ್ರದಾಯಸ್ಥರ ಮನೆಯ, ಭರತನಾಟ್ಯ ಕಲಿಯುತ್ತಿದ್ದ ಕಲ್ಯಾಣೀ, ಆಗಲೇ ಮಾಡೆಲಿಂಗ್‌ನ ಕನಸಲ್ಲಿ ತೊನೆಯುತ್ತಿದ್ದ ವಿನಯಾ, ಊಟಿಯಲ್ಲಿ ಕಲಿತು, ನೆಲಮುಟ್ಟದ ಸಿರಿವಂತಿಕೆಯ ಅಪ್ಸರೆ ಸಿಲ್ವಿಯಾ.. ಇವನ ಹೋರಾಟದ ಎಳ್ಳಿನ ಭಾಗವೂ ಅರ್ಥವಾಗದ ಹುಡುಗಿಯರು ಇವನಿಗೆ ಗಂಟು ಬೀಳುತ್ತಿದ್ದರು. ಆ ಬಗ್ಗೆ ನಮಗೂ ಕಿಚ್ಚಿರಲಿಲ್ಲ. ಇವೆಲ್ಲಾ ಕ್ಲಾಸ್ ವಾರ್‌ನ ಭಾಗವೇ ಎಂದು ಕೆಲ ಕಾಮ್ರೇಡುಗಳು ಬೆನ್ನು ತಟ್ಟಿದ್ದಿದೆ.

ಆದರೆ ಎಲ್ಲರೂ ಕೊಂಚ ಕಸಿವಿಸಿ ಪಟ್ಟಿದ್ದು ಸುಧಾಳ ಪ್ರಕರಣದಲ್ಲಿ. ಈ ಸುಧಾಗೆ ಪ್ರಗತಿಪರ ವಿಚಾರಗಳನ್ನು ತುರುಕಿದ ಗುರು ಚಂದ್ರಮೌಳಿ. ಅವಳು ಅವನನ್ನು ಮುಗಿಬಿದ್ದು ಪ್ರೀತಿಸತೊಡಗಿದ್ದಳು. ಹೋರಾಟದ ಹಾದಿಯಲ್ಲಿ ಜೊತೆ ಜೊತೆಯಲ್ಲಿ ಹೆಜ್ಜೆ ಇಡುವುದೋ, ಪುಟ್ಟ ಸಂಸಾರ ಕಟ್ಟಿ ಉತ್ಕಟವಾಗಿ ಬದುಕುವುದೋ ಎಂಬ ದ್ವಂದದಲ್ಲಿ ಅವಳಿದ್ದಳು. ಚಂದ್ರಮೌಳಿಯ ಮನೆಯ ಸಿರಿವಂತಿಕೆ ಕಾರಣಕ್ಕೆ, ಅವನೂ ಒಂದು ಹಂತದ ಬಳಿಕ ಸಂಸಾರಿಯಾದಾನೂ ಎಂಬ ಆಸೆಯೂ ಇದ್ದಿರಬಹುದು.

ಆದರೆ ಏಕಾಏಕಿ ಚಂದ್ರಮೌಳಿ ಒಂದು ದಿನ “ನಿಂಗೆ ನನ್ ಕೈಲಿ ಏಗೋದು ಸಾಧ್ಯ ಇಲ್ಲ, ನಂಗೆ ಹೆಣ್ಣಿನ ಆಕರ್ಷಣೆ ಸದಾ ಇದೆ….. ನಂಗ್ಯಾಕೋ ಈ ಸಂಸಾರ ಅದೂ ಇದೂ ಅಂತ ಹಗ್ಗವಿಲ್ಲದೇ ಕಟ್ಟಿಸಿಕೊಳ್ಳಲು ಮನಸ್ಸಿಲ್ಲ…” ಎಂದನಂತೆ. ಯಾವ ಹೆಣ್ಣು ತಾನೇ ಇದನ್ನು ಒಪ್ಪಿಯಾಳು?
ಆ ದಿನಗಳಲ್ಲಿ ಚಂದ್ರಮೌಳಿ ಹೈದರಾಬಾದ್, ಮದ್ರಾಸ್ ಎಂದೆಲ್ಲಾ ಓಡಾಡುತ್ತಿದ್ದ. ದಿಢೀರನೆ ಕ್ಯಾಂಪಸ್ಸಿಗೆ ಬರುತ್ತಿದ್ದ. ಸುಧಾ ಅವನಿಗಾಗಿ ಹುಚ್ಚುಗಟ್ಟಿ ಕಾಯುತ್ತಿದ್ದಳು. ಅವನೂ ಅಷ್ಟೇ, ಪ್ರೀತಿಯನ್ನೇನೂ ಕಡಿತಗೊಳಿಸಿದಂತೆ ಕಾಣಲಿಲ್ಲ.

ಆದರೆ ಸುಧಾಗೆ ಆಘಾತ, ಅವಮಾನ ಮತ್ತು ಚಂದ್ರಮೌಳಿಯ ಬಗ್ಗೆ ಜಿಗುಪ್ಸೆ ಹುಟ್ಟಿದ್ದು, ತದನಂತರದ ಚಂದ್ರಮೌಳಿಯ ಹೇಳಿಕೆ. ಅಕ್ಷರಶಃ ಇಂದಿಗೂ ಅವನ ಬಗ್ಗೆ ನಮ್ಮ ತೀರ್ಪು ನಿಂತಿರುವುದು ಈ ಹೇಳಿಕೆಯ ಮೇಲೆಯೇ. ಇದಾದ ಮೇಲೆ ಚಂದ್ರಮೌಳಿ ನಮ್ಮ ಕಣ್ಣಿಗೆ ಬೀಳಲಿಲ್ಲ ಎಂಬುದೂ ನಮ್ಮ ತೀರ್ಪನ್ನು ಸಮರ್ಥಿಸುವಂತಿತ್ತು.

ಒಂದು ದಿನ ಕ್ಯಾಂಪಸ್ಸಿಗೆ ಬಂದ ಚಂದ್ರಮೌಳಿ ಸಂಜೆ ಸುಧಾಳೊಂದಿಗೆ ಟೀ ಕುಡಿಯುತ್ತಾ “ನೋಡು, ನಾನು ಕಲ್ಕತ್ತಾಗೆ ಹೋಗ್ತಿದ್ದೀನಿ. ಈ ಹೋರಾಟ ಎಲ್ಲ ಶಕ್ತಿಗುಂದುತ್ತಾ ಇದೆ. ಇದ್ರಿಂದೆಲ್ಲ ಏನಾದ್ರೂ ಆಗುತ್ತೆ ಅನ್ನೋ ನಂಬಿಕೆನೂ ನನಗಿಲ್ಲ. ಒಂದು ಅಮೆರಿಕನ್ ಕಂಪೆನಿಯಿಂದ ಒಳ್ಳೆ ಆಫರ್ ಇದೆ. ಎರಡು ವರ್ಷದ ಮೇಲೆ ಸ್ಟೇಟ್ಸ್‌ಗೆ ಹೋಗೋ ಛಾನ್ಸೂ ಇದೆ. ನಿಂಗೆ ಇದು ದ್ರೋಹದ ಥರ ಕಾಣಿಸಬಹುದು, ಪರ್ಸನಲ್ ಲೆವೆಲ್‌ನಲ್ಲೂ… ಆದ್ರೆ ನಿನ್ನಲ್ಲಿ ಮಾತ್ರಾ ಪ್ರಾಮಾಣಿಕವಾಗಿ ಹೇಳ್ತಿದೀನಿ….” ಎಂದೆಲ್ಲಾ ಹೇಳಿ ಮಾಯವಾಗಿದ್ದ.

ಜಿಗುಪ್ಸೆ, ಕಹಿ, ದುಃಖದಲ್ಲಿ ಸುಧಾ ಕೊರಡಿನಂತಾಗಿದ್ದಳು. ನಮಗೂ ಮೌಳಿಯ ಈ ಮಿಸ್ಟರಿ ಬಿಡಿಸಲಾಗಲಿಲ್ಲ.

ಈ ವೇಳೆಗೆ ಜಯಶಂಕರ್ ತುಮಕೂರು ಬಳಿಯ ಕಾಲೇಜಲ್ಲಿ ಉಪನ್ಯಾಸಕನಾಗಿ ಸೇರಿದ್ದರೂ, ಸಂಘಟನೆ ಅಂತ ವಾರಾಂತ್ಯಕ್ಕೆ ಕ್ಯಾಂಪಸ್ಸಿಗೆ ಬರುತ್ತಿದ್ದ.

ಆದರೆ ನನಗೆ ಅಚ್ಚರಿ ಹುಟ್ಟಿಸಿದ್ದು, ಸುಧಾ ನನ್ನಲ್ಲಿ ಹೇಳಿದ ಇನ್ನೊಂದು ವಿವರ. ಅಷ್ಟೆಲ್ಲ ಹುಡುಗಿಯರ ಜೊತೆಗೆ ಓಡಾಡಿದಾಗಲೂ ಒಮ್ಮೆಯೂ ಚಂದ್ರಮೌಳಿ ದೈಹಿಕ ಸಂಪರ್ಕಕ್ಕಿಳಿದಿರಲಿಲ್ಲ ಅನ್ನೋದು. ಅದು ನಿಜವೇ ಇರಬಹುದು, ಅಥವಾ ಸುಧಾಳನ್ನು ಇಂಪ್ರೆಸ್ ಮಾಡಲು ಹೇಳಿರಲೂಬಹುದು.

ಆ ವೇಳೆಗೆ ಹೋರಾಟದ ಆವೇಗವೆಲ್ಲಾ ಕಡಿಮೆಯಾಗತೊಡಗಿತ್ತು. ಪರಿಸ್ಥಿತಿ, ಪರ್ಸನಲ್ ಅಂಜುಬುರುಕ ಸ್ಥಿತಿಗಳ ಒತ್ತಡಕ್ಕೆ ಕನಸುಗಳೂ ನಲುಗತೊಡಗುತ್ತವೆ. ಅವುಗಳಲ್ಲೂ ಅನಾಥ ಮಾಡಿ ದೋಣಿ ಹತ್ತುವ ಪ್ರಕ್ರಿಯೆ ನಮ್ಮಲ್ಲೂ ಜರುಗಿತು.

ನನ್ನಂಥವನು ಸೈಕಲ್ ಡೈನಮೋದ ಹಾಗೆ, ತುಳಿಯುತ್ತಿದ್ದರಷ್ಟೇ ಬೆಳಕು. ನನಗೆ ಅಕೆಡಮಿಕ್ ಸಾಧನೆಗೆ ಬೇಕಾದ ಪ್ರತಿಭೆಯೂ ಇರಲಿಲ್ಲ, ಕೆಲಸಕ್ಕೆ ಸೇರಬೇಕಾದ ಜರೂರತ್ತೂ ಇರಲಿಲ್ಲ. ಒಂದಷ್ಟು ಸ್ಪಂದನ, ಸಂಪರ್ಕದ ಆಂಟೆನಾ ಉಳಿಸಿಕೊಂಡು ಊರು ಸೇರಿದೆ. ಒಂದಷ್ಟು ಓದೋದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೋಗೋದು, ಹೀಗೆ ಸುಸಂಸ್ಕೃತವಾಗಿ ಬಾಳುವ ಪುರಾವೆ ಉಳಿಸಿಕೊಂಡೆ.

ಇವೆಲ್ಲಾ ಹತ್ತಿಪ್ಪತ್ತು ವರ್ಷದ ನೆನಪ ನೇಯ್ಗೆಯ ವಿವರ. ಈ ಅವಧಿಯಲ್ಲಿ ಯಾರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ಹುಡುಕುವ ಮನಸ್ಸಾಗಲೀ ಅವಶ್ಯಕತೆಯಾಗಲಿ ಇರಲಿಲ್ಲ.

ಇವೆಲ್ಲಾ ರಾಮಗೋಪಾಲನಿಗೆ ಹೇಳುವ ವಿಷಯಗಳಲ್ಲ. ಆದರೂ ಒಂದಿಷ್ಟನ್ನು ಚುಟುಕಾಗಿ ಹೇಳಿದೆ. ಅವನಿಗೆ ಆಘಾತವೂ ಆಗಲಿಲ್ಲ, ಅಚ್ಚರಿಯೂ ಆಗಲಿಲ್ಲ. ಸನ್ಮಾರ್ಗದಲ್ಲಿ ಬದಲಾವಣೆಯೋ, ಕಡು ಹೋರಾಟದ ಮೂಲಕ ಬದಲಾವಣೆಯೋ ಎಂಬ ಧ್ಯಾನದಲ್ಲಿದ್ದ ಹುಡುಗನಿಗೆ ಗೊಂದಲ ಬಗೆಹರಿದಿರಲಿಲ್ಲ. ಆದ್ದರಿಂದ ಅವನಿಗೆ ನಿರ್ದಿಷ್ಟ ಅಭಿಪ್ರಾಯವೂ ಇರಲಿಲ್ಲ.

ರಾಮಗೋಪಾಲ ಬೆಂಗಳೂರಿಗೆ ಹೋದ. ನಾನು ಮತ್ತೆ ನನ್ನ ನಿತ್ಯದಲ್ಲಿ ಮುಳುಗಿದೆ.

*****

ಮೂರು ತಿಂಗಳ ಬಳಿಕ ಫೋನು ಮಾಡಿ ರಾಮಗೋಪಾಲ ಹಾಜರಾದ. ಈ ಬಾರಿ ಇನ್ನೊಂದಷ್ಟು ಪುಸ್ತಕಗಳೂ ಇದ್ದವು. ಈ ಬಾರಿ ಅವನು ಹೆಚ್ಚು ಸನ್ನದ್ಧನಾಗಿ ಬಂದಂತಿತ್ತು. ಹಿಂದ್ ಸ್ವರಾಜ್, ಸಾಯಿನಾಥ್…. ಹೀಗೆ. ಒಂದಷ್ಟು ದಿನ ಉಳ್ಕೊತೀನಿ ಅಂದವನು, ಎರಡೇ ದಿನಕ್ಕೆ ಶೃಂಗೇರಿ ಕಡೆಗೆ ಹೋಗಿ ಬರುತ್ತೇನೆ ಅಂದ. ಅಲ್ಲಿಂದ ಬಂದವನು ಕುಂದಾಪುರ, ಹೆಬ್ರಿಗೂ ಹೋಗಿ ಬಂದ. ನನಗ್ಯಾಕೋ ಕಸಿವಿಸಿಯಾಗಿ ಅವನನ್ನು ಕರೆದು,
“ನೋಡು, ಗುಟ್ಟುಗುಟ್ಟಾಗಿ ಏನನ್ನೂ ಮಾಡಬೇಡ, ಎಲ್ಲಿ ಹೋಗ್ತೀಯಾ, ಏನು, ಎತ್ತ ಅನ್ನೋದನ್ನ ಚುಟುಕಾಗಿ ಹೇಳು, ಪ್ರಾಮಾಣಿಕವಾಗಿರು” ಎಂದೆ ಕೊಂಚ ಕಟುವಾಗಿ.

ಮಲೆನಾಡಿನ ಬದಲಾದ ಸನ್ನಿವೇಶದಲ್ಲಿ ಈ ಹುಡುಗ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವುದು ನನಗೆ ಬೇಕಿರಲಿಲ್ಲ.

ಅವನು ಕೊಂಚ ಅಪ್ರತಿಭನಾಗಿ “ಕ್ಷಮಿಸಿ ಅಂಕಲ್, ನಿಮಗೆ ಆತಂಕ ಹುಟ್‌ಸ್ದೆ…” ಎಂದು ಕ್ಷಮೆಯಾಚಿಸಿದ. ಅವನ ಹವಣಿಕೆ ಇದ್ದದ್ದು ಅದೇನೋ ತಂತ್ರಜ್ಞಾನಾಧಾರಿತ ಜೀವನೋಪಾಯದ ಬಗ್ಗೆ. ಅದನ್ನು ಬೆಂಗಳೂರಿನ ಯಾವುದೋ ಎನ್‌ಜಿಓ ಪ್ರಾಯೋಜಿಸಿದ್ದಂತೆ.

ಇವನು ಕೊಡಲಿ, ಕೋವಿವರೆಗೆ ಹೋಗುವ ಕುಳ ಅಲ್ಲ ಅನ್ನಿಸಿ ನನಗೂ ಸಮಾಧಾನವಾಯಿತು.

ಆದರೆ ಈ ಕಥೆಯೂ ಸುಳ್ಳಾಗಿದ್ದರೆ ಎನ್ನಿಸಿದ್ದೇ, ಬೆನ್ನು ಹುರಿಯಲ್ಲಿ ಛಳಕು ಮೂಡಿತು. ಅಚಾನಕವಾಗಿ ರಾಮಗೋಪಾಲ ತೆಗೆದು ತೋರಿಸಿದ ಪುಸ್ತಕದ ದರ್ಶನದ ಆಘಾತದಿಂದ ನಾನಿನ್ನೂ ಹೊರಬಂದಿಲ್ಲ. “Inviting Revolution-Tribal Situation in India” ಅನ್ನುವ ಶೀರ್ಷಿಕೆ. ಲೇಖಕ ಚಂದ್ರಮೌಳಿ. ಸಾಮಾನ್ಯ ದರ್ಜೆಯ ಮುದ್ರಣದ ಟಿಪಿಕಲ್ ಎಡಪಂಥೀಯ ಪುಸ್ತಕ. ಸುಮ್ಮನೆ ಪುಟ ತಿರುವಿದೆ, ಸಾಧ್ಯವಾದಷ್ಟು ನಿರ್ವಿಕಾರ ಭಾವದಲ್ಲಿ. ಪ್ರಕಟವಾಗಿ ಐದು ವರ್ಷವಾಗಿತ್ತು. ಅರ್ಪಣೆಯಲ್ಲಿ TO, J&S ಎಂದಿತ್ತು.

“ಅಂಕಲ್ ಈ ಮೌಳಿ ಅಮೆರಿಕನ್ ಎಂಎನ್‌ಸಿ ಸೇರಿದ್ದ ಅಂದ್ರಲ್ಲಾ… but he was into something else” ಎಂದ ರಾಮಗೋಪಾಲ್.
“ಆದ್ರೆ, ಅವನು ಸ್ಟೇಟ್ಸ್‌ಗೆ ಹೋಗಿದ್ನಂತಲ್ಲಾ…” ಎಂದೆ ಅಪ್ರತಿಭನಾಗಿ. ಗೊತ್ತಿಲ್ಲ ಎಂಬಂತೆ ರಾಮಗೋಪಾಲ್ ತಲೆ ಅಲ್ಲಾಡಿಸಿ “ಅಂಕಲ್ ಅವರ ಕಾಮ್ರೇಡ್ ಫ್ರೆಂಡ್ ಜಯಶಂಕರ್ … where is he now?” ಎಂದೂ ಕೇಳಿದ.

“ಗೊತ್ತಿಲ್ಲ, ಅವನೂ ಒಂದಷ್ಟು ದಿನ ಟೀಚ್ ಮಾಡಿ, ದಲಿತ ಸಂಘಟನೆ, ಅದೂ ಇದೂ ಅಂತಿದ್ದೋನು ಆಮೇಲೆ ಕಲ್ಕತ್ತಾಗೆ ಹೋದನಂತೆ. ಹೋರಾಟ ಅವನಿಗಿಷ್ಟ. ಅದರಲ್ಲೇ ಮುಳುಗಿರಬೋದು…” ಎಂದೆ.

“ಅರ್ಪಣೆನಲ್ಲಿರೋ ಜೆ, ಜಯಶಂಕರ್ ಅಂತೆ” ಎಂದ ರಾಮಗೋಪಾಲ್. ಎಸ್ ಬಗ್ಗೆ ನಾನೇನೂ ಹೇಳಲಿಲ್ಲ.

“ಚಂದ್ರಮೌಳಿ ಎಲ್ಲಿದಾನೆ ಅಂತೇನಾದ್ರೂ ಕ್ಲೂ ಇದ್ಯಾ…?” ಎಂದು ಕೇಳಿದೆ.

ರಾಮಗೋಪಾಲ್ ತಲೆ ತಗ್ಗಿಸಿದವನು, ಮತ್ತೆ ತಲೆ ಎತ್ತಿ, ನನ್ನಲ್ಲೇ ಕಣ್ಣು ನೆಟ್ಟು, ಪಿಸುಗುಡುವ ದನಿಯಲ್ಲಿ,
“He was murdered a month back…… ಜಾರ್ಖಂಡ್‌ನಲ್ಲಿ. ಮಾಮೂಲೀ ಎನ್‌ಕೌಂಟರ್. ಅಲ್ಲಿ ನರೇನ್ ಅನ್ನೋ ಹೆಸರಿತ್ತು.” ಎಂದ. ಎದೆಯೊಳಗಿಂದ ಏನೋ ಗಂಟಲವರೆಗೆ ಏರಿ, ಉಸಿರೆಳೆದುಕೊಂಡೆ.

“ನಿಜ ಅಂಕಲ್, ನನ್ನ ಕ್ಲಾಸ್‌ಮೇಟ್ ರಾಂಚಿಯವನು, ಫೋನ್ ಮಾಡಿ, ನಿನ್ನ ಸ್ಟೇಟ್‌ನೋನು, ತುಂಬಾ ಪಾಪ್ಯುಲರ್ ಆಗಿದ್ದ. ಆದರೆ ಅವನ ಮುಖ ಬಿಡಿ ಫೋಟೋನೂ ನೋಡಿದೋರಿಲ್ಲ… ಎಂದು ಹೇಳ್ದ…” ಎಂದು ನಿಟ್ಟುಸಿರು ಬಿಟ್ಟ.

ಹಾಗೇ ತೋಟ ಸುತ್ತಿ ಮನೆಗೆ ವಾಪಾಸ್ಸಾದೆವು. ಏಕಾ ಏಕಿ ಊಟ ತಿಂಡಿ ಎಲ್ಲಾ ಯಾಂತ್ರಿಕವಾದದ್ದು ಗಮನಿಸಿದ ನನ್ನವಳು, “ಯಾಕೆ ಒಂಥರಾ ಇದೀರ…” ಎಂದು ಕೇಳಿದಳು. ನಾನು ಏನೋ ಹೇಳಿ ಪಾರಾದೆ.

“ನಾಳೆ ನಿಮ್ಮನೆಗೆ ಬರ್ತಿದೀವಿ. ಮಗನ ಬಗ್ಗೆ ನಿಮ್ಮಲ್ಲಿ ಮಾತಾಡಬೇಕು… ಅವನಲ್ಲಿ ಹೇಳಿದರೂ ಓಕೆ, ಆದರೆ ಅವನು ಕಿರಿಕಿರಿ ಮಾಡಿಕೊಳ್ಳೋದು ಬೇಡ” ಎಂದೆಲ್ಲಾ ಅಂಗಲಾಚಿದರು.

ನಾನು ಆ ಮಾಹಿತಿ ರಾಮಗೋಪಾಲನಿಗೆ ತಿಳಿಸಿ “ಒರಟಾಗಿ ವರ್ತಿಸಬೇಡ, ಸಂಯಮ ಇರಲಿ, ಅವರ ಆತಂಕ ಅರ್ಥ ಮಾಡಿಕೊ” ಎಂದೂ ಹೇಳಿದೆ. ಅವನು ಏನೂ ಪ್ರತಿಕ್ರಿಯಿಸಲಿಲ್ಲ.

ಬೆಳಿಗ್ಗೆ ಅಪ್ಪ ಅಮ್ಮ ಬಂದರೆ ಇಲ್ಲೇ ಇರಲಿ, ತಾನು ಶೃಂಗೇರಿಗೆ ಹೋಗಿ ಬರುವುದಾಗಿ ಹೇಳಿ, ನನ್ನ ಪ್ರತಿಕ್ರಿಯೆಯನ್ನು ಗಮನಿಸದೇ ಹೊರಟುಹೋದ. ಅವನು ಹೋದ ಗಂಟೆಯೊಳಗೆ ಅವನ ಅಪ್ಪ ಅಮ್ಮ ಕಾರಲ್ಲಿ ಹಾಜರಾದರು. ನನಗೆ ಅಸಾಧ್ಯ ಇರುಸು ಮುರುಸಾಯಿತು. ಈ ಶುನಃಶ್ಯೇಪ ಬರದೇ ಇದ್ದರೆ, ನಾನೇ ಅವನನ್ನು ಬಚ್ಚಿಟ್ಟಿದ್ದೇನೆ ಅಂತ ಈ ಹೆತ್ತವರು ಭಾವಿಸಿದರೆ ಎಂಬ ಭಾವ ಅದು. ಪುಣ್ಯವಶಾತ್ ಅವರು ಸಜ್ಜನಿಕೆಯಿಂದಲೇ ಮಾತನಾಡಿದರು.

ಹೆತ್ತವರ ಮಾಮೂಲಿ ಸಂಕಟ. ಮಗ ಓದಿದಾನೆ, ಒಳ್ಳೆ ಕೆಲಸ ಹಿಡಿದು ಬಾಳಲಿ ಎಂಬ ಅಭಿಲಾಷೆ. ವರ್ಧಮಾನದ ವರಾತಗಳಲ್ಲಿ ಮಗ ಆತಂಕ ಹುಟ್ಟಿಸುತ್ತಿದ್ದಾನೆ ಎಂಬ ಅಳಲು. ನಾಳೆ ಸರಿಹೋಗಿ ದಾರಿಗೆ ಬಂದಾನೆಂಬ ವಿಶ್ವಾಸ.

ರಂಗನಾಥ್, ರಾಮಗೋಪಾಲನ ಅಪ್ಪ- ಪೇಚಾಡುತ್ತಾ, ಇದನ್ನೆಲ್ಲಾ ವಿವರಗಳಲ್ಲಿ ಹೇಳಿದ. “ಕೆಲಸಕ್ಕೆ ಸೇರಲ್ಲ ಅಂತಿದಾನೆ.. ಎಷ್ಟು ಕಷ್ಟ ಪಟ್ಟಿದೀನಿ ಓದಿಸೋಕೆ… ಏನೋ ನಿರೀಕ್ಷೆ ಇರುತ್ತಲ್ಲಾ… ಸಾರ್..” ಇತ್ಯಾದಿ.

“ಸಂಜೆ ಬರ್ತಾನಲ್ಲಾ, ಆರಾಮಾಗಿ ಮಾತಾಡೋಣ” ಎಂದಿದ್ದೇ, “ನಾವೂ ಶೃಂಗೇರಿ ನೋಡ್ಕೊಂಡು ಬರ್ತೀವಿ…” ಎಂದು ಹೊರಟೇ ಬಿಟ್ಟರು. ಮಗನಿಲ್ಲದ ಕಾರಣ, ದಿನವಿಡೀ ಏನು ಮಾತಾಡಬಹುದೆಂಬ ಗೊಂದಲದಿಂದ ಪಾರಾಗಲು ಈ ದಾರಿ ಹುಡುಕಿರಬಹುದು. ನಾನೂ ಹ್ಞೂಂ ಅಂದು ಇಬ್ಬರನ್ನೂ ಬೀಳ್ಕೊಟ್ಟೆ.

ಸಂಜೆ ಐದಕ್ಕೆ ರಾಮಗೋಪಾಲ್ ಮನೆಗೆ ಮರಳಿದ. ಅವನು ಬಂದ ಹತ್ತೇ ನಿಮಿಷಕ್ಕೆ ಅವನ ಹೆತ್ತವರೂ ಹಾಜರಾದರು. ಅಲ್ಲೆಲ್ಲೋ ಕಾದು ಗಮನಿಸಿ, ಅವನು ಮರಳಿದ್ದು ಖಚಿತಪಡಿಸಿಕೊಂಡೇ ಬಂದಿರಬೇಕು. ಇಲ್ಲವಾದರೆ ಅಷ್ಟು ಕಾಕತಾಳೀಯವಾಗಿ ಸಮಯ ಹೊಂದಿಸಲು ಸಾಧ್ಯವೇ ….
ಅಪ್ಪ ಅಮ್ಮನ ಮುಖ ಕಂಡಿದ್ದೇ ರಾಮಗೋಪಾಲನ ಮುಖ ಕೆಂಪೇರಿತು. ಆ ವೇಳೆಗೆ ಅವನ ಅಮ್ಮ ಬುಟ್ಟಿಯಿಂದ ಹೂ ಹಣ್ಣು ತೆಗೆದು ನನ್ನಾಕೆಗೆ ಕೊಟ್ಟು ಮುಸಮುಸ ಅಳತೊಡಗಿದಳು. ಇಡೀ ದೃಶ್ಯ ರಾಮಗೋಪಾಲನಿಗೆ ಅಸಾಧ್ಯ ಲಜ್ಜೆ, ಸಿಟ್ಟು ಬರಿಸಿದ್ದು ಸ್ಪಷ್ಟವಿತ್ತು.

“ನೋಡು ಅವರ ಆತಂಕ ಜೆನ್‌ವಿನ್ ಆದದ್ದು, ನೀನು ಗಂಭೀರವಾಗಿ ಉತ್ತರ ಕೊಡಬೇಕು..” ಎಂದು ಅವನಿಗೆ ಹೇಳಿ, ನಾನು ತೋಟದ ನೆಪ ಮಾಡಿ ಎದ್ದು ಹೋದೆ. ಅನ್ಯರ ಮನೆಯಲ್ಲಿ ಶಿಷ್ಟಾಚಾರ ಮೀರಿ ರಂಪ ಮಾಡುವುದು ಸಾಧ್ಯವೇ ಇಲ್ಲದ ಮಧ್ಯಮ ವರ್ಗದ ಪೇಟೆ ಮಂದಿಯಷ್ಟೇ.
ನಾನು ವಾಪಸ್ಸಾದಾಗ ಒಂದು ಸ್ಮಶಾನ ಮೌನವಿತ್ತು. ಅಪ್ಪ ಅಮ್ಮ ಗೆಲುವಿನ ಆದರೆ ಆಯಾಸದ ನಗು ಚೆಲ್ಲಿದರು. ರಾತ್ರಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ, ಅದಕ್ಕೆ ಸಂಬಂಧಿಸಿದ ಸ್ನಾನ, ಊಟದ ಕ್ರಿಯೆಗಳಿಂದಾಗಿ ಒತ್ತಡ ಒಂದು ಹದಕ್ಕೆ ಬಂತು.

ರಾತ್ರಿ ಅವನ ಅಪ್ಪ ಅಮ್ಮನಿಗೆ ಮಲಗಲು ಏರ್ಪಾಟು ಮಾಡಿ, ರಾಮಗೋಪಾಲನನ್ನು ವಿಚಾರಿಸಿದೆ. ಅವನು ಹಟ ಬಿಟ್ಟಿರಲಿಲ್ಲವಾದರೂ ಅವನ ಅಮ್ಮನ ಕಣೀರು ಅವನನ್ನು ಮೆತ್ತಗೆ ಮಾಡಿದಂತಿತ್ತು.

“ರಾಮ್, ನೀನು ಕೆಲಸಕ್ಕೆ ಸೇರ್ತೀಯಾಂದ್ರೆ ಓಕೆ. ಕೊನೆಗೂ you cannot escape reality and relationships. ಹಾಗಂತ ಲಕ್ಶುರಿನಲ್ಲಿರೋಕೆ ಈ ದೇಶ ಬಿಡಲ್ಲ, ಡೋಂಟ್ ವರಿ…” ಎಂದು ಅವನ ಬೆನ್ನು ಬೆನ್ನು ತಟ್ಟಿದೆ.

“ಅಂಕಲ್, ನಾನು ಆ ಉನ್ಮಾದದಲ್ಲಿ ಕಳೆದುಹೋದರೆ… ದುಡ್ಡು ಮಾಡ್ಕೊಂಡು… ವಾಪಾಸಾಗ್ತೀನಂತ ಹೋದವರ‍್ಯಾರೂ ಬಂದಿಲ್ಲ… ಎಂಎನ್‌ಸಿ ಸೇರ್ತೀನಂತ ಸುಳ್ಳು ಹೇಳಿ ಫೀಲ್ಡಿಗೆ ಇಳ್ದೋರು ಚಂದ್ರಮೌಳಿ ಮಾತ್ರಾ… why should every one of us end up in cubicles?” ಎಂದು ಆರ್ತನಾಗಿ ಕೇಳಿದ.

ನನ್ನ ಕಣ್ಣಾಲಿ ತುಂಬಿ ಬಂತು.
“ನಂಗೊತ್ತಿಲ್ಲ… ಬಟ್… ಮೌಳಿ… ನಾನು ಅವನನ್ನ ತುಂಬಾ ಹೀನಾಯವಾಗಿ ಕಂಡೆ ಅನ್ಸತ್ತೆ…” ಎಂದು ತೊದಲಿದೆ.

ಬೆಳಿಗ್ಗೆ ರಾಮಗೋಪಾಲ್ ತೋಟಕ್ಕೆ ಹೋದ ನೆಪದಲ್ಲಿ ತಮ್ಮೊಳಗೆ ಆದ ಒಪ್ಪಂದದ ವರದಿಯನ್ನು ರಂಗನಾಥ್ ಒಪ್ಪಿಸಿದ. ಕೆಲಸಕ್ಕೆ ಸೇರ್ತೀನಿ, ಆದ್ರೆ ಪದೇ ಪದೇ ಒತ್ತಡ ಹಾಕಬಾರದು… ಒಂದು ಹಂತದಲ್ಲಿ ಏನಾದರೂ ನಿರ್ಧಾರ ತೊಗೊಂಡ್ರೆ ಅಡ್ಡಿ ಹೇಳಬಾರದು.. ಇತ್ಯಾದಿ. ಅವನು ತೋಟದಿಂದ ಬರುವ ಮೊದಲೇ ಮುಖ್ಯವಾದದ್ದೇನೋ ಮಾತಾಡಬೇಕೆಂಬ ಭಾವದಲ್ಲಿ ರಂಗನಾಥ್ ಕೂತ ಕುರ್ಚಿಯಲ್ಲೇ ಮಿಸುಕಾಡಿ,
“ಸರ್, ಜಯಶಂಕರ್ ನಿಮಗೆ ಗೊತ್ತಲ್ಲಾ…?” ಎಂದು ಕೇಳಿದ. ನನಗೆ ದಿಗ್ಭ್ರಮೆಯಾಯಿತು; ಧಿಗ್ಗನೆ ಪ್ರಶ್ನೆಗಳಾಗಿ ನೆನಪು ಎದ್ದು ಬರುವ ರೀತಿಗೆ.

“Yes and no….” ಎಂದೆ ನಾನು.
ಅವನು ಬೆಪ್ಪಾಗಿ ನನ್ನನ್ನೇ ನೋಡಿದ.
“ನಾನು ಓದ್ತಾ ಇದ್ದಾಗಿನ ಪರಿಚಯ. ಇಪ್ಪತ್ತು ವರ್ಷ ಹಳೇದು…” ಎಂದೆ.
ಅವನು ಸಾವರಿಸಿಕೊಂಡು ನನ್ನನ್ನು ಸಮಾಧಾನಿಸುವ ರೀತಿಯಲ್ಲಿ,
“ಸರ್, ಅವರು ವಿ.ಸಿ. ಆಗಿದಾರೆ” ಎಂದ.
“ಹೌದಾ, ಯಾವ ಯುನಿವರ್ಸಿಟಿಲಿ?” ಎಂದೆ ಅಚ್ಚರಿಯಲ್ಲಿ.
“ಯೂನಿವರ್ಸಿಟಿ ಅಲ್ಲ ಸರ್, ವೆಂಚರ್ ಕ್ಯಾಪಿಟಲಿಸ್ಟ್, ಚೆನ್ನೈನಲ್ಲಿದಾರೆ, ಅವ್ರು ಒಂದು ಮಾತು ಹೇಳಿದ್ರೆ ಎಂಎನ್‌ಸಿಗಳಲ್ಲಿ ಕೆಲಸ ಸಿಗತ್ತೆ ಸಾರ್” ಎಂದ.

ಅರ್ಥವಾಗದೇ ಅವನ ಮುಖ ನೋಡಿದೆ.

“ಸರ್, ಅವರ ರೆಫರೆನ್ಸ್ ಯಾರೋ ಕೊಟ್ರು, ಮೊನ್ನೆ ಅವರು ಬೆಂಗ್ಳೂರಿಗೆ ಬಂದಾಗ ಹಾಗೂ ಹೀಗೂ ಭೇಟಿ ಮಾಡಿ ರಾಮು ಸಿ.ವಿ. ಕೊಟ್ಟೆ. ನಿಮ್ಮ ಕೇರಾಫ್‌ನಲ್ಲಿದಾನೆ ಅಂದೆ….” ಇಷ್ಟಿಷ್ಟೇ ಉರುಳಿಸುತ್ತಾ ಹೇಳಿದ.
ರಂಗನಾಥನ ಹವಣಿಕೆಗೆ ನಾನು ಅವಾಕ್ಕಾದೆ.

“ಸರ್, ನೀವೊಂದು ಲೆಟರ್ ಕೊಟ್ರೆ ಚೆನ್ನಾಗಿರುತ್ತೆ” ಎಂದ. ನಾನು ಮಾತಾಡಲಿಲ್ಲ.
“ನಿಮ್ಮ ನೆನಪಿದೆ ಸಾರ್ ಅವರಿಗೆ, ಇನ್ನೂ…” ಎಂದ.
“ನಿಮಗ್ಯಾರು ಇದೆಲ್ಲ ಐಡಿಯಾ ಕೊಟ್ರು?” ಎಂದೆ ಕಿರಿಕಿರಿಯಲ್ಲಿ.
ಅವನು ಹೆಮ್ಮೆಯಲ್ಲಿ, ಆ ಹೆಮ್ಮೆಯಲ್ಲಿ ನನಗೂ ಪಾಲು ನೀಡುವ ಸಂಚಿನ ಧಾಟಿಯಲ್ಲಿ,
“ಇಲ್ಲಾ ಸಾರ್, ನಾನು ನಿಮ್ಮ ರೆಫರೆನ್ಸ್ ಹೇಳಿದಾಗ ಜೆಎಸ್ ಅವರೇ, “let him write a letter ಅಂದ್ರು ಸಾರ್…” ಎಂದ.
ನಾನೇನು ಹೇಳಲಿ, ಸುಮ್ಮನೆ ಕುಳಿತಿದ್ದವನು ತಟಕ್ಕನೆ,
“ಏನು ಬರೀಲಿ ಹೇಳಿ…?” ಎಂದೆ.
“ನೀವೇ ಬರೀರಿ ಸಾರ್…” ಎಂದ. ತಾರೀಫಿನ ಧಾಟಿಯಲ್ಲಿ.

ಇಪ್ಪತ್ತು ವರ್ಷಗಳ ನೆನಪು ಉಗ್ಗಡಿಸಿ ಬಂತು. ಪ್ರಿಯ ಜಯಶಂಕರ್ ಎಂದು ಬರೆದು ರಾಮಗೋಪಾಲ್ ಬಗ್ಗೆ ನಾಲ್ಕು ಸಾಲು ಬರೆದೆ. ಹಳೆ ದಿನಗಳು ನೆನಪಾಗುತ್ತಿವೆ ಎಂದೂ ಸೇರಿಸಿದೆ. ಆಮೇಲೆ ಕಾಗದದ ಮೇಲೆ ಪೆನ್ನು ತಗುಲದಷ್ಟು ಎತ್ತರ ಹಿಡಿದು, ಮೌಳಿ ಎರಡನೇ ಸಾರಿ ಸತ್ತ… ಎಂದು ಗಾಳಿಯಲ್ಲಿ ಬರೆದು ಆ ಪತ್ರವನ್ನು ರಂಗನಾಥ್‌ಗೆ ನೀಡಿದೆ.

ಅವನು ಹುಳ್ಳಗೆ ನಕ್ಕು, “ತುಂಬಾ ಚೆನ್ನಾಗಿದೆ ಸಾರ್… ಇಂಟಿಮೇಟ್ ಆಗಿದೆ. ಆದ್ರೆ ಇಂಗ್ಲಿಷಲ್ಲಿದ್ರೆ ಬೆಟರ್ ಅಲ್ವೇ…?” ಎಂದು ಸಂಕೋಚ ನಟಿಸುತ್ತಾ, ಅನುನಯದಲ್ಲಿ ಅದೊಂದು ಧರ್ಮಸಂಕಟದ ಪ್ರಶ್ನೆಯೆಂಬಂತೆ ಹೇಳಿದ. ಆಮೇಲೆ,
“ಸಾರ್ ನೀವು ತಪ್ಪು ತಿಳ್ಕೊಳ್ದೇ ಇದ್ರೆ, ನಾನೇ ಒಂದು ಡ್ರಾಫ್ಟ್ ಹಾಕಿದೀನಿ…” ಎಂದು ನನ್ನ ಪ್ರತಿಕ್ರಿಯೆಗೂ ಕಾಯದೇ, ನೀಟಾಗಿ ಟೈಪು ಮಾಡಿದ ಪತ್ರ.

ನಾನೇ ಬರೆದಂತಿದ್ದ ಪತ್ರ ಅದು. “ನೀನೆಷ್ಟು ವಿವೇಕ ಪ್ರಜ್ಞೆ ಮೂಲಕ ಜೀವನದಲ್ಲಿ ಮೇಲೆ ಬಂದಿದ್ದೀಯ, ಉಳಿದವರೆಲ್ಲಾ ಚೆಲ್ಲಿ ಚೆದುರಾದರೂ, ನೀನು ಮಾತ್ರಾ ಯಶಸ್ಸಿನ ಶೃಂಗ ಏರಿ ಹೊಸ ಹುಡುಗರಿಗೆ ಮಾದರಿ ಆಗಿದ್ದೀಯಾ. ಈಗ ಈ ರಾಮಗೋಪಾಲನಿಗೂ ನಿನ್ನ ಮಾರ್ಗದರ್ಶನ, ಸಹಾಯ ಬೇಕು” ಎಂದೆಲ್ಲಾ ಬರೆದಿದ್ದ ಪತ್ರ. ಅವನು ಎಷ್ಟು ಜಾಗ್ರತೆಯಿಂದ ನಮ್ಮ ಹಿನ್ನೆಲೆ ಸಂಗ್ರಹಿಸಿದ್ದನೆಂದರೆ, ಖಾಸಗೀತನಕ್ಕೂ ಲಗ್ಗೆ ಇಡುವಷ್ಟು. ಅದನ್ನೆಲ್ಲ ಮೂರೇ ಪ್ಯಾರಾದಲ್ಲಿ ಭಟ್ಟಿ ಇಳಿಸಿದ್ದ. ನಾನೂ ಅಷ್ಟು ಸಾಂದ್ರವಾಗಿ, ಅಡಕವಾಗಿ ಬರೆಯುವುದು ಕಷ್ಟವಿತ್ತೇನೋ. ಅವನ ಡೆಡ್ಲೀ ಕಸುಬುದಾರಿಕೆ ನೋಡಿ ಮೈಯಲ್ಲಿ ಮುಳ್ಳೆದ್ದಿತು.

ಅದನ್ನೇ ದಿಟ್ಟಿಸುತ್ತಾ ಕೂತವನು, ನಿಟ್ಟುಸಿರೆಳೆದು, ಸಹಿ ಮಾಡುವ ಜಾಗದಲ್ಲಿ ಕರಾರುವಾಕ್ಕಾಗಿ ಸಹಿ ಮಾಡಿ, ತಲೆ ಎತ್ತಿದರೆ, ಒಳಬರುತ್ತಿದ್ದ ರಾಮಗೋಪಾಲನ ನೆರಳು ನನ್ನವರೆಗೂ ಚಾಚಿತ್ತು.

*****

ನಾನು ತುಂಬಾ ಕತೆ ಬರೆದಿಲ್ಲ. ಅದ್ಯಾಕೋ ಕಥೆ ಬರೆಯುವ ತಕ್ಷಣದ ಧಾರಣಾ ಶಕ್ತಿ ಮತ್ತೆ ಉಳಿಯಲೇ ಇಲ್ಲ. ಈ ಕಥೆ ನನ್ನ ಗೆಳೆಯರಿಬ್ಬರ ಸಾವು ಕಾಡಿದ ಕಾರಣ ಬರೆದದ್ದು. ಹೋರಾಟದ ಕನಸು ಎಂದೂ ಬತ್ತದಂತೆ ನೋಡಿಕೊಳ್ಳಬಲ್ಲ ಸ್ರೋತಗಳವರು. ನನ್ನ ಮಟ್ಟಿಗೆ ಈ ಕತೆ ಒಂದು ರೀತಿಯ ಅಲೆಗರಿ. ಕನ್ನಡದ ಕಥಾಲೋಕದ ಹಿನ್ನೆಲೆಗಿಂತ ಸಾಮಾಜಿಕ ಸ್ಥಿತ್ಯಂತರದ ಹಿನ್ನೆಲೆ ನನಗೆ ಮುಖ್ಯವಾಗಿ ಕಂಡಿದೆ. ನಮ್ಮ ಬರೆವಣಿಗೆ ಅಷ್ಟರ ಮಟ್ಟಿಗೆ ರಿಕ್ತವಾಗಿದೆ. Deeper probing of contradictions is the soul of writing. There could be other ways of writing. But. but this is central to our times..

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಸುಧಾ ಆಡುಕಳ

    ತುಂಬಾ ಇಷ್ಟವಾಯ್ತು. ಕನ್ನಡದಲ್ಲಿ ಈ ರೀತಿಯ ಕಥನಗಳು ಅಪರೂಪ. ಸಿನೆಮಾದ ಕ್ಯಾಮರಾದಂತೆ ಪ್ರತಿಸಾಲುಗಳು ಅದೆಷ್ಟೋ ದೃಶ್ಯಗಳನ್ನು ದಾಟಿಸುತ್ತವೆ.

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ