“ನನ್ನ ಚಿತ್ತವನ್ನ ಅನಂತದ ಮೇಲೆ ಇರಿಸಲಿಲ್ಲವೆಂದಾದರೆ ಏನೋ ಸರಿ ಇಲ್ಲ ಅಂತ ಅನ್ನಿಸುವುದು. ಲೋಕದಲ್ಲಿ ನಾನೊಂದು ಪುಟಾಣಿ ಮೊಳೆಯಾಗಬೇಕು, ಪುಟ್ಟದಾದರೂ ಉಪಯೋಗಕ್ಕೆ ಬರುವಂಥದ್ದು. ಎಂದೆಂದಿಗೂ ಈ ತೊರೆಯಲ್ಲಿಯೇ ಇದ್ದು ಬಿಡಬೇಕೆನಿಸುತ್ತದೆ. ಗಾಳಿಮಡಿಲ ಹೂ, ಮುಳ್ಳು ಕಂಟಿಯ ಹೂ, ಬೇಲಿ ಹೂಗಳನ್ನ ತುಂಬು ಗೌರವದಿಂದ ಕಾಣಬೇಕೆನಿಸಿದೆ.”
ಅಮೆರಿಕದ ಕವಯತ್ರಿ ಮೇರಿ ಆಲಿವರ್ ಅವರ ಕೆಲವು ಕವಿತೆಗಳನ್ನು ಚೈತ್ರಾ ಶಿವಯೋಗಿಮಠ ಕನ್ನಡಕ್ಕೆ ತಂದಿದ್ದು “ಆಕಾಶ ನದಿ ಬಯಲು” ಶೀರ್ಷಿಕೆಯಡಿಯಲ್ಲಿ ಸಂಗ್ರಹ ಪ್ರಕಟವಾಗಿದೆ. ಈ ಕೃತಿಯ ಒಂದಷ್ಟು ಕವಿತೆಗಳು ಹಾಗೂ ಮೇರಿ ಆಲಿವರ್ ಪರಿಚಯಾತ್ಮಕ ಪುಟಗಳು ನಿಮ್ಮ ಓದಿಗೆ
ಮೇರಿ ಆಲಿವರ್ (Mary Oliver, ಸೆಪ್ಟೆಂಬರ್ 10, 1935 – ಜನವರಿ 17, 2019) ಮನುಷ್ಯ ಲೋಕ ಮತ್ತು ಪ್ರಾಣಿ-ಪಕ್ಷಿ-ಗಿಡ-ಮರಗಳ ಲೋಕದ ನಡುವೆ ಕೊಂಡಿಯಂತಿರುವ ಕವಿ. ಕಾಡಿನಲ್ಲಿ ಓಡಾಡುತ್ತ ಚಿಕ್ಕ ಚಿಕ್ಕ ಸಂಗತಿಗಳಲ್ಲಿ ದೊಡ್ಡ ಅರ್ಥ ಹೇಳುವ, ಸರಳ ಹಾಗೂ ಸ್ಪಷ್ಟ ಭಾಷೆಯನ್ನು ಬಳಸುವ ಅಮೆರಿಕದ ಜನಪ್ರಿಯ ಕವಿ. ಪ್ರಚಾರ ಪ್ರಸಿದ್ಧಿಯಿಂದ ಗಾವುದ ದೂರವೇ ನಿಲ್ಲುವ ಇವರು ಅಮೆರಿಕದ ಕಾವ್ಯ ಜಗತ್ತಿನ ಅತ್ಯಂತ ಪ್ರಭಾವಶಾಲಿಯಾದವರು. ಈಶಾನ್ಯ ದೇಶಗಳ ಆಧ್ಯಾತ್ಮಿಕ ಜಗತ್ತಿನ ಆಳ ಪ್ರಭಾವವನ್ನು ಹೊಂದಿದವರು. ಕಾವ್ಯವಲ್ಲದೇ ಕಾವ್ಯಾತ್ಮಕ ಪ್ರಬಂಧಗಳನ್ನೂ ಬರೆದವರು. ಬಿನ್ನಿಂಗ್ಟನ್ ಕಾಲೇಜ್ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಲ್ಲಿ ಕವಿತೆಯ ಕುರಿತು ಪಾಠ ಮಾಡಿದವರು. ಅವರಿಗೆ ಪುಲಿಟ್ಜ಼ರ್ ಪ್ರಶಸ್ತಿ (American Primitive – 1984), ನ್ಯಾಶನಲ್ ಬುಕ್ ಅವಾರ್ಡ್ (New and Selected Poems Volume 1 – 1992). ಲ್ಯಾನನ್ ಲಿಟರರಿ ಅವಾರ್ಡ್ – 1998, ಪೋಎಟ್ರಿ ಸೊಸೈಟಿ ಆಫ್ ಅಮೆರಿಕ ಅವಾರ್ಡ್, ಹಲವಾರು ಗೌರವ ಡಾಕ್ಟರೇಟುಗಳು ಹಾಗೂ ಚಿನ್ನದ ಪದಕಗಳು ಲಭಿಸಿವೆ.
*****
ಕಾಣೆಯಾಗೋಣ…?
ಈ ಸತ್ಯ ತಿಳಿದುಕೋ. ಪಾತರಗಿತ್ತಿ ಪುಸ್ತಕ ಬರೆಯೋದಿಲ್ಲ, ನೈದಿಲೆ, ಕೆನ್ನೀಲಿಗಳೂ ಸಹ. ಅಂದರೆ ಅವಕ್ಕೆ ಗೊತ್ತಿಲ್ಲ ತಾವ್ಯಾರು ಅನ್ನೋದು. ಬದುಕಿದ್ದೀವಿ ಅಂತಲೂ ಗೊತ್ತಿಲ್ಲ.
ನಮ್ರತೆ ಹಸಿರು ಸಂಕುಲದ ಇನಾಮು. ಪೊಳ್ಳು ಹಮ್ಮು ಮನುಷ್ಯರುಗುಳುವ ನಂಜು. ಒಮ್ಮೊಮ್ಮೆ ಕಳೆದುಹೋಗಬೇಕೆನ್ನುವ ಬಹುಕಾಲದ ಹಂಬಲ, ನನ್ನ ಮೇಲೆ ಹಬೆಯಾಡುವುದು. ಹರೆಯ ಕಳೆದು, ವಯಸ್ಸು ಬಲಿತಂತೆಲ್ಲ ಜವಾಬುದಾರಿಗಳು ಹೆಗಲಿಗೇರಿದವು, ಏಸೊಂದು ಭಾರದ ಕೋಟುಗಳು. ನಾನೇನು ಅವು ಬೇಕೆಂದು ಬೆನ್ನಟ್ಟಿ ಹೋಗಲಿಲ್ಲ, ದೂಷಿಸುವುದೂ ಇಲ್ಲ. ಆದರೆ ಬೇಡವೆಂದು ದೂರ ತಳ್ಳಲು ಸಮಯ ತೆಗೆದುಕೊಂಡೆ. ಈಗ ಈ ಚೈತ್ರಕಾಲದಲಿ, ಮಂಡಿಯೂರಿ ಕೆನ್ನೀಲಿ ಹೂಗಳ ಮೇಲೆ ಮುಖ ಒತ್ತುವೆ, ಆ ತೇವ, ತಾಜಾತನ, ಅನಂತತೆಯ ಭಾವ. ನನ್ನ ಚಿತ್ತವನ್ನ ಅನಂತದ ಮೇಲೆ ಇರಿಸಲಿಲ್ಲವೆಂದಾದರೆ ಏನೋ ಸರಿ ಇಲ್ಲ ಅಂತ ಅನ್ನಿಸುವುದು. ಲೋಕದಲ್ಲಿ ನಾನೊಂದು ಪುಟಾಣಿ ಮೊಳೆಯಾಗಬೇಕು, ಪುಟ್ಟದಾದರೂ ಉಪಯೋಗಕ್ಕೆ ಬರುವಂಥದ್ದು. ಎಂದೆಂದಿಗೂ ಈ ತೊರೆಯಲ್ಲಿಯೇ ಇದ್ದು ಬಿಡಬೇಕೆನಿಸುತ್ತದೆ. ಗಾಳಿಮಡಿಲ ಹೂ, ಮುಳ್ಳು ಕಂಟಿಯ ಹೂ, ಬೇಲಿ ಹೂಗಳನ್ನ ತುಂಬು ಗೌರವದಿಂದ ಕಾಣಬೇಕೆನಿಸಿದೆ.
ಮಕ್ಕಳಿಗೆ ಎಲ್ಲವನ್ನೂ ಕಲಿಸಬೇಕು. ನಮ್ಮದೇನಿದೆ ಈಗ, ಮಕ್ಕಳು ಮುಖ್ಯತಾನೆ. ಅವರಿಗೆ ಡೈಸಿ, ತಿಳಿ ನೀಲಿ ಹೂಗಳ ತೋರಿಸಿ. ಕವಳೆ ಹಣ್ಣು, ಕಾರೆ ಹಣ್ಣುಗಳ ರುಚಿ ತೋರಿಸಿ. ಅತ್ತಿ ಹಣ್ಣು, ತಾಟಿಲಿಂಗು ಹಣ್ಣು, ಸುವರ್ಣಗೆಡ್ಡೆ ಎಲ್ಲದರ ರುಚಿ ಹತ್ತಿಸಿ. ಶಾಲೆಗೆ ಹೋಗುವಾಗ ಜೇಬಿನಲ್ಲಿ ಪೆಪ್ಪರಮಿಂಟು ಹಾಕಿ ಕಳಿಸಿ. ಬಯಲು, ಕಾಡು, ಹೊಲ ಗದ್ದೆ ಸುತ್ತಾಡಿಸಿ. ಲಾಭ ಗಳಿಕೆ ಪಾಳೇಗಾರಿಕೆಯಿಂದ ದೂರವಿರುವ ಪ್ರಪಂಚ ಕೊಡಿ. ತೊರೆಯಲ್ಲಿ ನಿಲ್ಲಿಸಿ, ತೊರೆಗೆ ಇದಿರಾಗಿ ನಡೆಯಲು ಬಿಡಿ. ಮಕ್ಕಳು ಹಸಿರು ಹರವು, ಎಲೆ ಕಡ್ಡಿ, ಸುಂದರ ಹೂ ಅರಳು, ಆ ನಿಶ್ಯಬ್ದ ಬದುಕು ಪ್ರೀತಿಸುವುದನ್ನು ಕಂಡು ಖುಷಿ ಪಡಿ. ಭಕ್ತಿ ಪ್ರಾರ್ಥನೆಯ ಮುನ್ನುಡಿ. (…ಪ್ರಬಂಧದ ತುಣುಕು)
*****
ಕನ್ನಡಕ್ಕೆ ಬಂದ ಮೇರಿ ಆಲಿವರಳ ಎರಡು ಪದ್ಯಗಳು…
೧. ಪರ್ಸಿ ಮತ್ತು ಪುಸ್ತಕ
ಪರ್ಸಿಗೆ ನಾನು ಓದೋದು ಇಷ್ಟವಿಲ್ಲ
ಪುಸ್ತಕದ ಮೇಲೆ ತಲೆ ಇಟ್ಟು ಕುಂಯ್ಗುಡುತ್ತಾ
ಕಣ್ಣ್ ತಿರುಗಿಸುವನು
ಒಮ್ಮೊಮ್ಮೆ ಸೀನಿ ಬಿಡುವನು
ಅವನಂತಾನೆ:
‘ಹೊತ್ತು ಮೂಡಿದೆ, ಗಾಳಿ ತಗ್ಗಿದೆ,
ಹೊಳೆ ಇಳಿದಿದೆ, ಅಕ್ಕಪಕ್ಕದ
ನಾಯಿ ಆಟ ಆಡ್ತಿವೆ’
ನಾನಂತೀನಿ:
‘ಅಯ್ಯೋ ತಾಳು ಪರ್ಸಿ,
ಇಲ್ಲಿ ನೋಡು
ಭಾಷೆಯ ಸೊಗಡು
ವಿಚಾರ, ಒಳನೋಟ, ತಮಾಷೆ,
ಏರಿಳಿತದ, ಕೆಚ್ಚು ಹಚ್ಚಿ ಬಲ ತುಂಬುವಂಥಾ
ಎಂತೆಂಥ ಚೆಂದಚೆಂದದ ಕಥೆಗಳಿವೆ ಪುಸ್ತಕದಲ್ಲಿ’
ಪರ್ಸಿ ಅನ್ನುವನು:
‘ಹೌದೌದು ಒಂದ್ಸಲ ಇಡಿಯಾಗಿ
ಪುಸ್ತಕ ತಿಂದು ಹಾಕಿದ್ದೀನಿ ಬಿಡು
ಅಷ್ಟೇ ಸಾಕು, ಸರಿ ನಡಿ ಈಗ ಹೋಗೋಣ’
೨. ಬತ್ತ
ಹುಲಿಯ ಕಿತ್ತಳೆ ಪಾದದಡಿ
ಎರೆ ಮಣ್ಣಲ್ಲಿ
ಬೆಳೆದ
ಇದರ ದೇಟು
ಮೊಂಬತ್ತಿಗಿಂತಲೂ ತೆಳುವು
ನಿಡುಪಾದ ನಿಡುಪು
ಎಲೆಗಳಂತು ಬೆಳ್ಳಕ್ಕಿ ಪುಕ್ಕ
ಬಣ್ಣ ಮಾತ್ರ ಹಚ್ಚ ಹಸುರು
ಚಟಪಟ ಚಟಪಟ ಸಿಡಿಯುವ
ತೆನೆ ತುಂಬಿದ ಕಾಳು
ಏಯ್,
ಹುಲಿ ಕುಲದವನೇ
ಬಡಿಸಿದ ಎಲೆ ಮುಂದೆ
ಸುಮ್ಮನೆ ಬಂದು ಕುಕ್ಕರ ಬಡಿಯಬೇಡ
ಬಡಿಸಿದ್ದನ್ನೇ ತಿಂದು ತೇಗಬೇಡ
ಬಾ…
ಗದ್ದೆಗೆ ಇಳಿ
ಅಗೋ, ಫಳಫಳಿಸುವ ಪಾತಿಯ ನೀರು
ಬೆಳೆದು ನಿಂತ ಪೈರು
ಬಾ,
ಮೇಜನ್ನು ಅಲಂಕರಿಸಿದ ಬಿಳಿಬಟ್ಟೆ
ದೋಸ್ತಿ ತೊರೆದು ತುಸು ದೂರ ಬಾ
ಕೈ ತುಂಬಾ ವರ ನೀಡಿದ
ಭೂಮ್ತಾಯಿ ಕೆಸರು ನಿನ್ನ ಹಿಡಿ ತುಂಬಲಿ…

೨೦೧೧ರಲ್ಲಿ ‘ಓಪ್ರಾಹ್ ಕಾಮ್’ ಗಾಗಿ ಮಾರಿಯಾ ಶ್ರಿವೆರ್ ನಡೆಸಿದ ಮೇರಿ ಆಲಿವರ್ ಸಂದರ್ಶನದ ಆಯ್ದ ಭಾಗ:
I. ಮೇರಿ, ನೀವು ನನಗೆ ಹೇಳಿದ ಪ್ರಕಾರ ಅಂದು ಇಂದು ಎಂದೆಂದಿಗೂ ಕಾವ್ಯ ನಿಮ್ಮೊಳಗಿನ ದ್ವನಿ ಅಂತಃ ಪ್ರೇರಣೆ. ನಿಮ್ಮೊಳಗಿನ ಧ್ವನಿಯನ್ನು ಹೇಗೆ ಗುರುತಿಸುವಿರಿ?
ಬೇರೆ ದಾರಿ ಇಲ್ದೆ ಇರುವಾಗ ಆ ಧ್ವನಿಯನ್ನ ನೀವು ಕೇಳಿಸಿಕೊಳ್ಳಲೇಬೇಕು. ನಮ್ಮೆಲ್ಲರೊಳಗೂ ಒಂದು ಹಸಿವಿದೆ. ಅದು ಸುಖಕ್ಕಾಗಿ ಹಂಬಲಿಸುವ ಹಸಿವು. ಅದಕ್ಕೆ ಸಾಧ್ಯವಾದಷ್ಟು ನಾನು ಖುಷಿಯಾಗಿರುತ್ತಿದ್ದೆ. ನನ್ನ ಯೌವನವನ್ನೆಲ್ಲ ಓದು, ಬರೆಹ, ‘ಓಹಿಯೋ’ದ ಕಾಡು ಸುತ್ತೋದರಲ್ಲಿ ಕಳೆದೆ. ಆಗೆಲ್ಲ ನಾನು ಬರೆದಿದ್ದನ್ನು ಉದ್ದಕ್ಕೆ ಹಾಸಿದ್ದರೆ ಭೂಮಿಯಿಂದ ಚಂದ್ರನವರೆಗೂ ಮತ್ತೆ ವಾಪಸ್ ಚಂದ್ರನಿಂದ ಭೂಮಿವರೆಗೂ ಆಗುತ್ತಿತ್ತೇನೋ… ಅದೇನು ಅಷ್ಟು ಚೆನ್ನಾಗಿರಲಿಲ್ಲ, ತೀರಾ ವಾಚ್ಯವಾಗಿತ್ತು. ಆದರೆ ನೀವು ಪ್ರೀತಿಸುವುದನ್ನು, ನೀವು ಪ್ರಾಮಾಣಿಕವಾಗಿ ಆಗುಮಾಡುತ್ತಾ ಹೋದರೆ ಇನ್ನಷ್ಟು ಮೊನಚಾಗಬಹುದು.
II. ನೀವು ಕಾಡಿನಲ್ಲಿ ಅಲೆದಾಡಿ ಕವಿತೆ ಬರೆಯುವಾಗಲೆಲ್ಲ ಜನರು ನಿಮ್ಮನ್ನು ಹುಚ್ಚಿ ಅಂದುಕೊಂಡರೆ?
ನನ್ನ ಅಪ್ಪ ಅಮ್ಮ ನಾನೇನ್ ಮಾಡ್ತಿದ್ದೀನಿ ಅಂತ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ, ಬಹುಶಃ ಅದು ನನಗೊಂದು ವರದಾನವಾಗಿಯೇ ಪರಿಣಮಿಸಿತು. ಆದರೆ ‘ಪ್ರಾವಿನ್ಸ್ ಟೌನ್’ನಲ್ಲಿ ಹೀಗೊಂದು ಮುದ್ದಾದ ಪುಟ್ಟ ಕಥೆಯಿದೆ. ಮೇರಿ ಏನಾದರೂ ನಡ್ಕೊಂಡು ಹೋಗ್ತಾ ಇರೋವಾಗ, ನಡಿಗೆ ನಿಧನಿಧಾನವಾಗೋಕೆ ಶುರುವಾದರೆ, ಕೊನೆಗೆ ಅವಳೇನಾದರೂ ನಿಂತುಕೊಂಡು ಗೀಚುತ್ತಾ ಇದ್ರೆ, ಅದೊಂದು ಯಶಸ್ವಿ ವಾಕಿಂಗ್!
III. ನೀವು ಜೊತೆಗೆ ಪುಟ್ಟ ನೋಟ್ ಪುಸ್ತಕ ಇಟ್ಟುಕೊಂಡೆ ಓಡಾಡ್ತೀರಾ ಅಲ್ವಾ?
ಹೌದು, ತತ್ತಕ್ಷಣವೇ ಏನ್ ಅನ್ಸುತ್ತೋ ಅದನ್ನ ಬರ್ಕೊಂಡ್ಬಿಡಬೇಕು. ಇಲ್ಲಾಂದ್ರೆ ನೀವೇನು ಯೋಚನೆ ಮಾಡುತ್ತಿದ್ದರೋ, ಅದು ಮರೆತು ಹೋಗಿ ಬಿಡಬಹುದು. ನಾನೊಂದು ನಿಯಮ ಹಾಕಿಕೊಂಡಿದ್ದೇನೆ. ನಸುಕಿನ ಜಾವ ಮೂರು ಗಂಟೆಗೆ ಎದ್ದು ಏನಾದ್ರೂ ಯೋಚನೆ ಮಾಡಿದರೆ ಅದನ್ನ ಬರೆದುಬಿಡ್ತೇನೆ. ಬೆಳಕು ಹರಿಯೋವರ್ಗೂ ಕಾಯೋದಿಲ್ಲ- ಅದು ಕಳೆದು ಹೋಗ್ಬಿಡಬಹುದಲ್ವಾ?

(ಚೈತ್ರಾ ಶಿವಯೋಗಿಮಠ)
IIII. ಕವಿಯಾಗಿ ಗುರುತಿಸಿಕೊಳ್ಳುವುದಕ್ಕೆ ನಿಮಗೆ ಏನ್ ಅನ್ಸುತ್ತೆ?
ನಾನೊಂಥರಾ ಬದುಕಿನ ವರದಿಗಾರಳು – ಲಯಬದ್ಧವಾದ ರಾಗದಂತಿರುವ ಪದಗಳನ್ನು ಬಳಸುವವಳು. ನನ್ನನ್ನು ನಾನು ಕವಿ ಅಂತ ಅಂದುಕೊಳ್ಳಲೇ ಇಲ್ಲ. ಸುಮ್ಮನೆ ಎದ್ದೇಳ್ತೀನಿ, ಬರಿತಾ ಹೋಗ್ತೀನಿ. ನನ್ನ ಈ ಪುಟ್ಟ ಬದುಕಿನಲ್ಲಿ ಸರಿಯಾದೊಂದು ಕೆಲಸ ಅನ್ನೋದು ಇರಲೇ ಇಲ್ಲ. ತೀರಾ ಸಣ್ಣವಳಿದ್ದಾಗ ಬರಿಬೇಕು ಅಂತ ನಿರ್ಧಾರ ಮಾಡಿದ್ಮೇಲೆ ಹಾಗೇ ಬರೆದೆ ಕೂಡ. ಆಗ ನನ್ನ ಹತ್ರ ಏನೇನಿರೋದಿಲ್ಲ ಎನ್ನುವ ಒಂದು ದೊಡ್ಡ ಪಟ್ಟಿಯನ್ನೇ ಮಾಡಿಕೊಂಡಿದ್ದೆ.
IIIII. ಅಂದರೆ, ಏನೂ ಇರೋದಿಲ್ವೇ?
ಹೌದು, ಇರೋದಿಲ್ಲ. ಕವಿಗಳು ಯಾವತ್ತೂ ದುಡ್ಡು ಮಾಡೋದಿಲ್ಲ. ಒಂದು ಮನೆ ಒಂದು ಒಳ್ಳೆ ಕಾರ್, ಆಚೆ ಹೋಗಿ ಚಂದ ಚಂದದ ಬಟ್ಟೆ ತಗೊಳ್ಳಕ್ಕಾಗ್ಲಿಲ್ಲ. ಒಂದೊಳ್ಳೆ ಹೋಟೆಲ್‌ಗೆ ಹೋಗಿ ಊಟ ಕೂಡ ಮಾಡೋಕಾಗಿಲ್ಲ. ಅವಶ್ಯವಾದದ್ದು ಮಾತ್ರ ನನ್ನ ಹತ್ರ ಇತ್ತು. ಮಾಸ್ತರಿಕೆ ಕೆಲಸಗಳನ್ನು ತೆಗೆದುಕೊಂಡೆ. ಆದರೆ ಯಾವುದೂ ಅಷ್ಟು ಇಂಟರೆಸ್ಟಿಂಗ್ ಅನ್ನಿಸಲಿಲ್ಲ. ಬಹುಶಃ ನನಗೇ ಅದರ ಬಗ್ಗೆ ಇಂಟರೆಸ್ಟ್ ತಗೋಬೇಕು ಅನ್ನಿಸಲಿಲ್ಲ. ಆಗಲೇ ಮುಂಜಾನೆ ಕೋಳಿ ಕೂಗುವ ಮುಂಚೆ ಏಳುವ ಅಭ್ಯಾಸ ಮಾಡಿಕೊಂಡೆ. ನಿಮಗೆ ಗೊತ್ತಾ ನಾನು ನಸುಕಿನ ಜಾವ ಐದು ಗಂಟೆಗೆಲ್ಲಾ ಎದ್ದು ಬಿಡುತ್ತಿದ್ದೆ. ಒಂದಿಷ್ಟು ಹೊತ್ತು ಏನಾದರೂ ಬರೆಯಬಹುದು ಅಂತ. ನನ್ನ ಮಾಲೀಕರಿಗೆ, ನನ್ನ ಅತ್ಯುತ್ತಮ ಎರಡನೇ ದರ್ಜೆಯ ಕೆಲಸವನ್ನು ಕೊಡಬಹುದು ಅಂತ. (ಜೋರಾಗಿ ನಗು…)
*****
“ಆಕಾಶ ನದಿ ಬಯಲು” ಕುರಿತು ‘ಓ ಎಲ್ ನಾಗಭೂಷಣಸ್ವಾಮಿ’ ಅವರು ಬೆನ್ನುಡಿಯಲ್ಲಿ ಹೀಗೆ ಹೇಳುತ್ತಾರೆ.
ಅನುಭವಗಳನ್ನು ಸ್ಪಷ್ಟವಾಗಿ, ಸರಳವಾಗಿ ಹೇಳುತ್ತ ‘ಮಾಮೂಲು’ ಸಂಗತಿಯ ಗಹನತೆ ಓದುಗರ ಮನಸನ್ನು ಆವರಿಸುವ ಹಾಗೆ ಮಾಡುವ ಶಕ್ತಿ ಇಲ್ಲಿಯ ಕವಿತೆಗಳಿಗೆ ಇದೆ. ಕನ್ನಡದ ಕವಿಯಾಗಿ ಹೆಸರು ಮಾಡಿರುವ ಚೈತ್ರಾ ಶಿವಯೋಗಿಮಠ ಅವರು ಆಯ್ದ ಮೇರಿ ಅಲಿವರ್ ಕವಿತೆಗಳನ್ನು ಕನ್ನಡಗೊಳಿಸಿ ಕಾವ್ಯಾಸಕ್ತರ ಅಗತ್ಯವೊಂದನ್ನು ಪೂರೈಸಿದ್ದಾರೆ. ಜೊತೆಗೆ ಕವಿ-ವಿಮರ್ಶಕಿಯೂ ಆಗಿ ಮೇರಿ ಆಲಿವರ್ ಬದುಕು, ಬರಹ ಕುರಿತ ಹಾಗೆ, ಆಕೆಯ ಕಾವ್ಯ ಸ್ವರೂಪದ ಬಗ್ಗೆ ಓದುಗರ ಕುತೂಹಲ ಕೆರಳಿಸುವಂಥ ಪರಿಚಯವನ್ನು ಬರೆದಿದ್ದಾರೆ. ಕವಿಯ ಸಂದರ್ಶನವನ್ನೂ ಅನುಬಂಧದಲ್ಲಿ ಸೇರಿಸಿ ಇನ್ನೊಂದು ಭಾಷೆಯ ಕವಿಯನ್ನು ಕನ್ನಡಿಸುವವರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ಚೈತ್ರಾ ಅವರ ಅನುವಾದದ ಮೂಲಕ ಮತ್ತೆ ಹೊಸ ಸಾಧ್ಯತೆಗಳನ್ನು ತೋರುವಂತೆ ಈಗ ಕನ್ನಡಕ್ಕೆ ಬಂದಿದೆ. ಅನುವಾದದ ರೀತಿ ಕನ್ನಡಕ್ಕೆ ಸಹಜ ಅನಿಸುವಂತೆ, ತಮ್ಮ ಮನೋಧರ್ಮಕ್ಕೆ ಒಗ್ಗುವ ಕವಿಯನ್ನು ಆಯ್ಕೆ ಮಾಡಿಕೊಂಡು ಆಕೆಯ ನೋಟವನ್ನು ತಮ್ಮದು ಮಾಡಿಕೊಂಡು ಈ ಅನುವಾದ ರೂಪಿಸಿದ್ದಾರೆ.
(ಕೃತಿ: ಆಕಾಶ ನದಿ ಬಯಲು (ಮೇರಿ ಆಲಿವರ್ ಕವಿತೆಗಳು), ಆಯ್ಕೆ ಮತ್ತು ಅನುವಾದ : ಚೈತ್ರಾ ಶಿವಯೋಗಿಮಠ, ಪುಟಗಳು: 110, ಬೆಲೆ: ₹ 150, ಪ್ರಕಾಶನ: ಸುಗಮ ಪುಸ್ತಕ, ಹಲಸಂಗಿ)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

