Advertisement
ಬರೀ ನಾಲ್ಕು ಗೋಡೆಯ ಮಧ್ಯೆ ಕಲಿಯುವುದೇ ಶಿಕ್ಷಣವಲ್ಲ…!!: ಬಸವನಗೌಡ ಹೆಬ್ಬಳಗೆರೆ ಸರಣಿ

ಬರೀ ನಾಲ್ಕು ಗೋಡೆಯ ಮಧ್ಯೆ ಕಲಿಯುವುದೇ ಶಿಕ್ಷಣವಲ್ಲ…!!: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ಪಟ್ಟಣದ ಮಕ್ಕಳಿಗೆ ಭತ್ತ, ಕುಂಬಳಕಾಯಿ ಇಟ್ಟು ಭತ್ತ ಬೆಳೆಯುವ ಗಿಡ ತೋರಿಸಿ ಕುಂಬಳಕಾಯಿ ಬೆಳೆಯುವ ಗಿಡ ಹೇಗಿರಬಹುದು ಎಂದು ಕೇಳಿದರಂತೆ. ಆಗ ಅವರು ಚಿಕ್ಕ ಭತ್ತವನ್ನು ಬೆಳೆಯುವ ಗಿಡವೇ ಈ ರೀತಿ ಇರಬೇಕಾದರೆ ಇಷ್ಟು ದಪ್ಪನೆಯ ಕುಂಬಳಕಾಯಿಯ ಬೆಳೆಯುವ ಗಿಡದ ಕಾಂಡ ಇನ್ನೂ ದಪ್ಪದಾಗಿರಬೇಕು. ಬಹುಷಃ ಇದು ದೊಡ್ಡ ಮರದಲ್ಲಿ ಬೆಳೆಯುತ್ತದೆಯೇನೋ ಎಂದು ಉತ್ತರಿಸಿದರಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ಇತ್ತೀಚೆಗೆ ಕ್ರೀಡೆಗಳು, ಸಾಂಸ್ಕೃತಿಕ ಸ್ಪರ್ಧೆಗಳು ಅಂದ್ರೆ ಪೋಷಕರು ಅಷ್ಟಕ್ಕಷ್ಟೇ ಎಂಬಂತೆ ವರ್ತಿಸುತ್ತಾರೆ. ಮಕ್ಕಳು ಹುಟ್ಟಿರೋದೇ ಡಾಕ್ಟರ್ ಅಥವಾ ಇಂಜಿನಿಯರ್ ಆಗಲಿಕ್ಕೋ ಅಥವಾ ಇನ್ನಾವುದೋ ದುಡ್ಡು ಮಾಡೋ ಕೋರ್ಸ್ ಮಾಡಲಿಕ್ಕೋ ಎಂಬಂತೆ ಭಾವಿಸಿರುತ್ತಾರೆ!! ಅದಕ್ಕೆ ನಾನು ತಮಾಷೆಯಾಗಿ ‘ಶಿಕ್ಷಣ ವೆಂದರೆʼ ಒಂದು ಹಂತದವರೆಗೆ ಮಕ್ಕಳ ಮೇಲೆ ಹಣ ವಿನಿಯೋಗಿಸಿ ನಂತರ ಆ ಹಣಕ್ಕೆ ಬಡ್ಡಿ ಸಮೇತ ಮಕ್ಕಳಿಂದ ಮರು ಬಯಸುವುದು’ ಎಂದು ಹೇಳುತ್ತಿರುತ್ತೇನೆ. ನಾವು ಬಾಳೋದೇ ಮತ್ತೊಬ್ಬರಿಗೋಸ್ಕರ, ಮತ್ತೊಬ್ಬರನ್ನು ಮೆಚ್ಚಿಸುವುದಕ್ಕೋಸ್ಕರ ಎಂಬಂತೆ ವರ್ತಿಸುತ್ತಿರುತ್ತೇವೆ!! ನನ್ನ ಮಗ ಅಥವಾ ಮಗಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ನೋಡೋದೇ ಇಲ್ಲ. ಬದಲಾಗಿ ಪಕ್ಕದ ಮನೆಯವನು ಅಥವಾ ನೆಂಟರಿಸ್ಟರ ಮಗ ಯಾವ ಕೋರ್ಸ್ ಓದುತ್ತಾನೆ/ಳೆ ಎಂಬುದರ ಮೇಲೆ ಅವರ ಮಗ/ಳ ಕೋರ್ಸ್‌ನ ಆಯ್ಕೆ ನಿರ್ಧಾರವಾಗಿರುತ್ತದೆ!! ಟಿವಿಯ ರಿಯಾಲಿಟಿ ಶೋನಲ್ಲಿ ಯಾರಾದ್ರೂ ‘ಸರಿಗಮಪ ಸ್ಪರ್ಧೆ’ ಯಲ್ಲಿ ಗೆದ್ದರೋ, ಇಂತಹ ಮನೋಭಾವ ಇರುವ ಪೋಷಕರು ತಮ್ಮ ಮಕ್ಕಳಿಗೆ ಸಂಗೀತದ ಬಗ್ಗೆ ಒಲವು ಇಲ್ಲದಿದ್ದರೂ ಕೂಡ ಅವರನ್ನು ಸಂಗೀತ ಕ್ಲಾಸ್‌ಗೆ ಸೇರಿಸುತ್ತಾರೆ!! ನೃತ್ಯ ಸ್ಪರ್ಧೆಯ ರಿಯಾಲಿಟಿ ಶೋ ಬಂದತಕ್ಷಣ ತಮ್ಮ ಮಕ್ಕಳನ್ನು ನೃತ್ಯ ತರಬೇತಿಗೆ ಸೇರಿಸುತ್ತಾರೆ. ತೀರಾ ಇತ್ತೀಚೆಗೆ ಚೆಸ್ ಸ್ಪರ್ಧೆಯಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಆದ ‘ಗುಕೇಶ್’ ರ ಸುದ್ದಿ ಬಂದ ಮಾರನೇ ದಿನ ನಗರದಲ್ಲಿ ಚೆಸ್ ಕೋಚಿಂಗ್ ಸೆಂಟರ್‌ಗಳ ಫ್ಲೆಕ್ಸ್‌ಗಳು ಎಲ್ಲೆಲ್ಲಿಯೂ ರಾರಾಜಿಸುವುದನ್ನು ನೋಡಿ ನನಗೆ ಆಶ್ಚರ್ಯವಾಗಿತ್ತು. ಇವರಿಗೂ ಗೊತ್ತು ಪೋಷಕರು ಆ ನ್ಯೂಸ್ ನೋಡಿ ತಮ್ಮ ಮಕ್ಕಳನ್ನೂ ಚೆಸ್ ಚಾಂಪಿಯನ್ ಮಾಡಬೇಕೆಂದು ಕೋಚಿಂಗ್ ಸೆಂಟರ್‌ಗಳಿಗಾಗಿ ಹುಡುಕಾಟ ನಡೆಸುತ್ತಾರೆಂದು!!

ಇಲ್ಲಿ ನನಗೆ ಬೇಸರವೆನಿಸೋದು ಇಂಥವರ ಕೈಯಲ್ಲಿ ಸಿಕ್ಕ ಆ ಮಕ್ಕಳ ಸ್ಥಿತಿ ಇನ್ನೇನಾಗಬೇಡ ಎಂದು? ಇತ್ತೀಚೆಗಂತೂ ನೀಟ್ ಪರೀಕ್ಷೆ ತನ್ನ ಪರಿಧಿಯನ್ನು ಪ್ರಾಥಮಿಕ ಶಾಲೆಯ ಮಕ್ಕಳವರೆಗೂ ವಿಸ್ತರಿಸಿಕೊಂಡಿದೆ!! ಆಟವಾಡಿಕೊಂಡು ಬಾಲ್ಯವನ್ನು ಕಳೆಯಬೇಕಾಗಿದ್ದ ಉಳ್ಳವರ ಕೆಲ ಮಕ್ಕಳು ರಜಾ ಅವಧಿಯಲ್ಲೂ ಆ ಕೋಚಿಂಗ್, ಈ ಕೋಚಿಂಗ್ ಅಂತಾ ತಮ್ಮ ಅಜ್ಜ ಅಜ್ಜಿಯ ಮನೆಗೋ, ಸಂಬಂಧಿಕರ ಮನೆಗೋ ಹೋಗುವುದನ್ನು ನಿಲ್ಲಿಸಿಬಿಟ್ಟಾಗಿದೆ. ಈ ಮೂಲಕ ಮಕ್ಕಳಿಗೆ ಸಂಬಂಧದ ಮೌಲ್ಯ ಸಾಮಾಜೀಕರಣವಾಗುವ ಅವಕಾಶದಿಂದ ಕಳೆದುಕೊಳ್ಳುವ ಹಾಗೆ ಮಾಡಲಾಗಿದೆ!! ಕೆಲವರಂತೂ ಮಕ್ಕಳನ್ನು ಹೊರಗೆ ಬಿಡದೇ ಫಾರಂ ಕೋಳಿ ತರಹ ಮಕ್ಕಳನ್ನು ಬೆಳೆಸುತ್ತಾರೆ. ಇಂತಹವರು ಮುಂದೆ ತಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೋ ಎಂದೆನಿಸುತ್ತದೆ. ಇದಕ್ಕೆ ಪೂರಕವಾಗಿ ಒಂದು ನಿದರ್ಶನವನ್ನು ಹೇಳುವುದಾದರೆ…

ಒಬ್ಬಾತ ತನ್ನ ಮನೆಯ ಮುಂದೆ ಗಿಡಗಳನ್ನು ನೆಟ್ಟು ಅವನ್ನು ಚೆನ್ನಾಗಿ ಆರೈಕೆ ಮಾಡಿ ಬೆಳೆಸುತ್ತಾನೆ. ತುಸು ಹೆಚ್ಚೇ ನೀರು, ಗೊಬ್ಬರ ಹಾಕಿ ಅವಕ್ಕೆ ಯಾವುದೇ ಕೊರತೆ ಮಾಡದಂತೆ ಬೆಳೆಸುತ್ತಾನೆ. ಒಮ್ಮೆ ಮಳೆಗಾಲದಲ್ಲಿ ಗಾಳಿ ಮಳೆ ಜಾಸ್ತಿಯಾಗಿ ಮರವಾದ ಗಿಡಗಳು ಬೀಳುತ್ತವೆ. ಆಗ ಅವನಿಗೆ ಆಶ್ಚರ್ಯವಾಗಿ ಒಬ್ಬರ ಬಳಿ ಹೋಗಿ “ಸರ್ ಕಾಡಲ್ಲಿರುವ ಮರಗಳು ಎಷ್ಟೇ ಬಿರುಗಾಳಿ ಮಳೆ ಬಂದರೂ ಏನೂ ಆಗುವುದಿಲ್ಲ. ಆದರೆ ನನ್ನ ಮನೆಯ ಮುಂದೆ ಎಷ್ಟೊಂದು ಆರೈಕೆ ಮಾಡಿ ಬೆಳೆಸಿದ ಗಿಡಗಳೇಕೆ ಹೀಗೆ ಬಿದ್ದಿವೆ” ಎಂದು ಕೇಳುತ್ತಾನೆ. ಆಗ ಅವರು ಕೊಟ್ಟ ಉತ್ತರ ತುಂಬಾ ಮಾರ್ಮಿಕವಾಗಿತ್ತು. “ನೀವು ಚೆನ್ನಾಗಿ ಆರೈಕೆ ಮಾಡಿದ್ದಕ್ಕಾಗಿಯೇ ಅವು ಹೀಗೆ ಬಿದ್ದಿವೆ. ನೀರು ಗೊಬ್ಬರವನ್ನು ಆಗಾಗ್ಗೆ ಹಾಕಿದ್ದರಿಂದಲೇ ಅವು ತಮ್ಮ ಬೇರನ್ನು ತಳಭಾಗಕ್ಕೆ ಇಳಿಸಿಕೊಳ್ಳಲಿಲ್ಲ. ಬೇರುಗಳು ಮಣ್ಣಲ್ಲಿ ಆಳವಾಗಿ ಇಳಿಯದೇ ಮೇಲ್ಭಾಗದಲ್ಲಿ ಮಾತ್ರ ಬೆಳೆದಿವೆ. ಇದರಿಂದ ಅವುಗಳ ಆಧಾರ ಗಟ್ಟಿಯಾಗಿರದೇ ಅವು ಬಿದ್ದಿವೆ. ಆದರೆ ಕಾಡಿನಲ್ಲಿರುವ ಮರಗಳು ನೀರಿಗಾಗಿ ತಮ್ಮ ಬೇರನ್ನು ಆಳವಾಗಿ ಬೆಳೆಸಿಕೊಂಡಿರುವರಿಂದ ಅವು ಬೀಳುವುದಿಲ್ಲ” ಎಂದರಂತೆ!! ಈ ಮಾತನ್ನು ಮಕ್ಕಳನ್ನು ಬೆಳೆಸುವ ವಿಷಯಕ್ಕೆ ಅನ್ವಯಿಸುವುದಾದರೆ ಮಕ್ಕಳಿಗೂ ಅಷ್ಟೇ ನಾವು ಅವರು ಕೇಳಿ ಕೇಳಿದ್ದನ್ನೆಲ್ಲಾ ಕೊಡಿಸಿ ಅವರಿಗೆ ಕಷ್ಟ ಗೊತ್ತಿಲ್ಲದೇ ಬೆಳೆಸಿದರೆ ಮುಂದೆ ಇದರ ಪರಿಣಾಮವನ್ನು ಪೋಷಕರೇ ಅನುಭವಿಸಬೇಕಾಗಬಹುದು. ಒಂದೊಮ್ಮೆ ಯಾರಾದರೂ ಪೋಷಕರ ಬಳಿ ಮಕ್ಕಳನ್ನು ಬೆಳೆಸುವ ಬಗ್ಗೆ ಚರ್ಚಿಸುತ್ತಿರುವಾಗ ಅವರು “ನಾವಂತೂ ಕಷ್ಟದಲ್ಲಿ ಬೆಳೆದೆವು, ಆದರೆ ನಮ್ಮ ಮಕ್ಕಳು ಆ ರೀತಿ ಕಷ್ಟ ಪಡಬಾರದು” ಎಂಬ ಉತ್ತರ ಕೊಡುತ್ತಾರೆ!!

ಬಾಲ್ಯವನ್ನು ಎಂಜಾಯ್ ಮಾಡಿದ ವಿಷಯದಲ್ಲಿ ನಾವೇ ಪುಣ್ಯವಂತರು ಎನಿಸುತ್ತೆ. ಅಕ್ಟೋಬರ್ 2 ಕ್ಕೆ ಶುರುವಾಗುತ್ತಿದ್ದ ‘ದಸರಾ ರಜೆ’ಯು ಅಕ್ಟೋಬರ್ 30 ಕ್ಕೆ ಮುಗಿಯೋದು. ಏಪ್ರಿಲ್ 1 ಕ್ಕೆ ಶುರುವಾಗುತ್ತಿದ್ದ ‘ಬೇಸಿಗೆ ರಜಾ’ವು ಮುಗಿಯುತ್ತಿದ್ದುದು ಜೂನ್ 1 ಕ್ಕೆ!! ಅಲ್ಲದೇ ಡಿಸೆಂಬರ್ ಕೊನೇ ವಾರದಲ್ಲಿ ‘ಕ್ರಿಸ್‌ಮಸ್ ರಜಾ’ ಇರುತ್ತಿತ್ತು. ಈಗ ಬಿಡಿ ಎಲ್ಲಾ ರಜೆಗಳಿಗೂ ಕತ್ತರಿ ಪ್ರಯೋಗ. ಇರುವ ರಜೆಯೂ ಟ್ಯೂಷನ್ ಪಾಲು!! ಆಗ ಚೂರುಪಾರು ಕೊಟ್ಟ ಹೋಂವರ್ಕನ್ನು ಮುಗಿಸುತ್ತಿದ್ದ ನಾವು ರಜೆಯಲ್ಲಿ ನೆರೆಯವರೊಂದಿಗೆ ಆಡಿದ್ದೋ ಆಡಿದ್ದು!! ಗೋಲಿ, ಬುಗುರಿ, ಚಿನ್ನಿದಾಂಡು, ಗಾಲಿಯಾಟ, ಚಾವಂಗ, ಆನೆ ಆಟ…. ಸಂಜೆಯಾಗುತ್ತಿದ್ದಂತೆ ದೇಗುಲದಲ್ಲಿ ಮಾಡುತ್ತಿದ್ದ ಭಜನೆಗೆ ಹೋಗುತ್ತಿದ್ದುದು, ನಮ್ಮೂರಲ್ಲಿ ವೀರಗಾಸೆ ಕಲಿಯುವವರನ್ನು ನೋಡಲು ಹೋಗುತ್ತಿದ್ದುದು, ಮಳೆ ಬಂದ ತಕ್ಷಣ ಬಿದ್ದ ಮಾವಿನ ಹಣ್ಣುಗಳನ್ನು ಹೆಕ್ಕಲು ಹೋಗುತ್ತಿದ್ದುದನ್ನು ನೆನಪಿಸಿಕೊಂಡರೆ ಖುಷಿ ಎನಿಸುತ್ತದೆ. ಕೆಲವರು ತಮ್ಮ ಸಂಬಂಧಿಕರ ಮನೆಗೆ ಹೋದರೆ, ಕೆಲವರು ತಮ್ಮ ಪೋಷಕರಿಗೆ ಸಹಾಯ ಮಾಡುತ್ತಿದ್ದರು. ಇವುಗಳಿಂದ ಹಿಂದಿನವರು ಭಾವನಾತ್ಮಕವಾಗಿ ಗಟ್ಟಿ ಆಗುತ್ತಿದ್ದರು. ತಮಗೆ ಅರಿವಿಲ್ಲದೇ ತಮ್ಮ ಪೋಷಕ ವೃತ್ತಿಯನ್ನು ಕಲಿಯುತ್ತಿದ್ದರು. ರಜೆಯು ಜೀವನ ಕಲಿಕೆಗೆ ಸಹಾಯಕವಾಗುತ್ತಿತ್ತು.

ಆದರೆ ಈಗ ಪೋಷಕರು ಮಕ್ಕಳಿಗೆ ಇವೂ ಸಹ ಶಿಕ್ಷಣದ ಭಾಗವೇ ಎಂಬುದನ್ನು ಮರೆತು, “ಬರೀ ಒಂದು ಸೀಮಿತ ಪ್ರದೇಶದಲ್ಲಿ, ಸೀಮಿತ ಅವಧಿಯಲ್ಲಿ, ಒಂದು ಸೀಮಿತ ಪಠ್ಯಪುಸ್ತಕದಲ್ಲಿ ಇರೋದನ್ನು ಕಲಿಸುವುದೇ ಶಿಕ್ಷಣ” ಎಂಬ ನಂಬಿಕೆ ನಮ್ಮ ಜನರಲ್ಲಿ ಬೇರೂರಿರುವುದು ಬೇಸರ ತರಿಸೋ ಸಂಗತಿಯಾಗಿದೆ. ಇದರ ಫಲವಾಗಿ ಇಂದು ನಮ್ಮ ಮಕ್ಕಳು ಫಸ್ಟ್ ರ್ಯಾಂಕ್ ರಾಜು ತರಹ ಆಗುತ್ತಿದ್ದಾರೆ. ಮತ್ತೊಬ್ಬರ ಜೊತೆ ಬೆರೆಯುವುದನ್ನು ಕಲಿಯುತ್ತಿಲ್ಲ. ಗುರು ಹಿರಿಯರು, ಕಿರಿಯರ ಜೊತೆ ಹೇಗೆ ಮಾತನಾಡಬೇಕೆಂಬುದನ್ನು ಕಲಿಯುತ್ತಿಲ್ಲ. ಹೊಂದಾಣಿಕೆಯ ಮನೋಭಾವ ಹೋಗಿ ಬರೀ ತಾನು ತಾನಷ್ಟೇ ಎಂಬ ಸ್ವಾರ್ಥ ಭಾವನೆ ಬೆಳೆಸಿಕೊಳ್ಳುತ್ತಿದ್ದಾರೆ. ಗಿಡ ಮರ ಪ್ರಕೃತಿಯನ್ನು ಬರೀ ಲಾಭದ ದೃಷ್ಟಿಯಲ್ಲಿ ನೋಡುವ ಪರಿಪಾಠ ಬೆಳೆಯುತ್ತಿದೆ. ತನ್ನೂರಿನಲ್ಲಿರುವ ಗಿಡ ಮರ ಪಕ್ಷಿಗಳ ಹೆಸರೂ ಗೊತ್ತಿಲ್ಲದ ಸ್ಥಿತಿ ಎದುರಾಗಿದೆ. ಇನ್ನೂ ಕೆಲವರಿಗೆ ಯಾವ ಬೆಳೆ ಹೇಗೆ ಬೆಳೆಯುತ್ತದೆ ಎಂಬುದೂ ಗೊತ್ತಿರುವುದಿಲ್ಲ ಎಂಬುದೂ ಪರಮಾಶ್ಚರ್ಯದ ಸಂಗತಿಯೇ!! ಇದಕ್ಕೆ ಒಂದು ತಮಾಷೆಯ ಪ್ರಸಂಗ ಹೇಳುವುದಾದರೆ:

ಒಮ್ಮೆ ಪಟ್ಟಣದ ಮಕ್ಕಳಿಗೆ ಭತ್ತ, ಕುಂಬಳಕಾಯಿ ಇಟ್ಟು ಭತ್ತ ಬೆಳೆಯುವ ಗಿಡ ತೋರಿಸಿ ಕುಂಬಳಕಾಯಿ ಬೆಳೆಯುವ ಗಿಡ ಹೇಗಿರಬಹುದು ಎಂದು ಕೇಳಿದರಂತೆ. ಆಗ ಅವರು ಚಿಕ್ಕ ಭತ್ತವನ್ನು ಬೆಳೆಯುವ ಗಿಡವೇ ಈ ರೀತಿ ಇರಬೇಕಾದರೆ ಇಷ್ಟು ದಪ್ಪನೆಯ ಕುಂಬಳಕಾಯಿಯ ಬೆಳೆಯುವ ಗಿಡದ ಕಾಂಡ ಇನ್ನೂ ದಪ್ಪದಾಗಿರಬೇಕು. ಬಹುಷಃ ಇದು ದೊಡ್ಡ ಮರದಲ್ಲಿ ಬೆಳೆಯುತ್ತದೆಯೇನೋ ಎಂದು ಉತ್ತರಿಸಿದರಂತೆ!!

ಇನ್ನು ಅಂಕಗಳ ವಿಷಯ ಬಿಡಿ. ಇತ್ತೀಚೆಗಂತೂ ಮಕ್ಕಳು ತೆಗೆಯುತ್ತಿರುವ ಅಂಕಗಳನ್ನು ನೋಡಿ ನನಗೆ ತಲೆ ತಿರುಗಿ ಬೀಳುವಂತಾಗುತ್ತದೆ. ಯಾರನ್ನು ಕೇಳಿದ್ರೂ ಡಿಸ್ಟಿಂಕ್ಷನ್ ಮಾರ್ಕ್ಸ್‌ಗಳೇ! ಜಸ್ಟ್ ಪಾಸ್ ಆಗೋರು ಕಡಿಮೆ. ನಾವು ಓದುವಾಗ ಶೇಕಡಾ 80 ಅಂಕಗಳು ಬಂದರೆ ತುಂಬಾ ಇಂಟಲಿಜೆಂಟ್ ಅಂತಾ ಭಾವಿಸುತ್ತಿದ್ದರು. ಕೆಲ ಹುಡುಗರು ನನ್ನ ಅಂಕಗಳನ್ನು ಕೇಳಿದಾಗ ಅವರಿಗೆ ಅಂಕಗಳನ್ನು ಹೇಳುವಾಗ ನನಗೆ ವಿಪರೀತ ನಾಚಿಕೆಯೆನಿಸುತ್ತದೆ!! ಆದರೆ ವಿಪರ್ಯಾಸವೆಂದರೆ ಇಷ್ಟು ಹೆಚ್ಚು ಅಂಕಗಳನ್ನು ಪಡೆಯುವ ಹಲವು ಮಕ್ಕಳಿಗೆ ಒಂದು ಕಚೇರಿಯಲ್ಲಿ ಒಂದು ಬೇಡಿಕೆಗೆ ಅರ್ಜಿ ಬರೆಯೋಕೂ ಬರುವುದಿಲ್ಲ!! ಪಾಸಾದ ಕೆಲವರಿಗೆ ತಡವರಿಸದೇ ಸುಲಲಿತವಾಗಿ ಅರ್ಥ ಮಾಡಿಕೊಂಡು ಓದಲೂ ಬರುವುದಿಲ್ಲ!! ಈ ವಿಷಯದಲ್ಲಿ ಶಿಕ್ಷಣವು ಹಿಂದೆಯೇ ಚೆನ್ನಾಗಿತ್ತೇನೋ ಎನಿಸುತ್ತದೆ.

2 ನೇ ತರಗತಿ ಓದಿದ್ದ ನಮ್ಮಜ್ಜ ದಿನಪತ್ರಿಕೆಯನ್ನು ತಪ್ಪಿಲ್ಲದೇ ಓದುತ್ತಿದ್ದರು!! ಇತ್ತೀಚೆಗೆ ನನ್ನ ಗೆಳೆಯರೊಬ್ಬರ ಮನೆಗೆ ಹೋದಾಗ ಅವರಮ್ಮ ಸರಿಸುಮಾರು 80 ವರ್ಷ ವಯಸ್ಸು ಇರಬಹುದು. ಅವರು ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಪುಸ್ತಕವನ್ನು ಓದುತ್ತಿದ್ದರು. ನನಗೆ ಅಚ್ಚರಿಯಾಗಿ ಅವರು ಓದಿದ ಕ್ಲಾಸ್ ಕೇಳಿದೆ. ಅವರು 7 ನೇ ತರಗತಿ ಎಂದಾಗ ನನಗೆ ಅಚ್ಚರಿಯ ಜೊತೆಗೆ ಖೇದವೂ ಆಯ್ತು. ಆ ವಯಸ್ಸಿನಲ್ಲಿ ಓದುತ್ತಿದ್ದುದು ಅಚ್ಚರಿ ತರಿಸಿದರೆ, ಈಗೀಗ ಮಾಸ್ಟರ್ ಡಿಗ್ರಿ ಮಾಡಿದವರೂ ಈ ರೀತಿಯ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವುದಿಲ್ಲವಲ್ಲ ಎಂಬುದು ಖೇದ ತರಿಸಿತು.

ರಜೆ ಮುಗಿದು ಇನ್ನೇನು ಶಾಲಾ ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ಪೆನ್ನು ನೋಟ್ ಪುಸ್ತಕಗಳ ಖರೀದಿ ನೋಡಿದರೆ ನನಗೆ ನನ್ನ ಬಾಲ್ಯ ನೆನಪಾಗುತ್ತದೆ. 3 ನೇ ತರಗತಿಯವರೆಗೂ ನನಗೆ ನೋಟ್ ಪುಸ್ತಕವನ್ನು ಕೊಡಿಸಿರಲಿಲ್ಲ. ಬಳಪದ ಸ್ಲೇಟಿನಲ್ಲೇ ಬರೆಯಬೇಕಾಗಿತ್ತು. 3 ನೇ ತರಗತಿಗೂ, ಅದೂ 100 ಪುಟದ ವಿದ್ಯಾ ಲೇಖಕ್ ನೋಟ್ ಪುಸ್ತಕ ತೆಗೆದುಕೊಂಡು ಅದರಲ್ಲಿ ಬರೆಯುವುದಲ್ಲಿ ಖುಷಿ ಕಂಡಿದ್ದೆ. ಒಂದು ಪೆನ್ಸಿಲ್ ಅನ್ನು ಮುರಿದು ಎರಡು ಮಾಡಿಕೊಂಡು ಅದರಲ್ಲಿ ಒಂದನ್ನು ಬಚ್ಚಿಟ್ಟುಕೊಂಡು ಮತ್ತೊಂದನ್ನು ಬಳಸುತ್ತಿದ್ದೆ. ಜ್ಯಾಮಿತಿ ಬಾಕ್ಸ್ ಅನ್ನು ತೆಗೆದುಕೊಂಡಿದ್ದು 5ನೇ ತರಗತಿಗೆ. ಆಗ ನಟರಾಜ ಬ್ರ್ಯಾಂಡಿನ ಜ್ಯಾಮಿತಿ ಪೆಟ್ಟಿಗೆ ಇಟ್ಟುಕೊಳ್ಳೋದು ಹೆಮ್ಮೆಯ ವಿಷಯವಾಗಿತ್ತು. ಪೆನ್ನಿನಲ್ಲಿ ರೆನಾಲ್ಡ್ಸ್ ಪೆನ್ನು, ನಟರಾಜ ಪೆನ್ಸಿಲ್ ಇಟ್ಟುಕೊಳ್ಳುವುದೂ ಸಹ ನಮ್ಮ ಸ್ಥಿತಿವಂತಿಕೆಯ ಕುರುಹು ಎನಿಸಿಕೊಳ್ಳುತ್ತಿತ್ತು. ಬರೆಯಲು 50 ಪೈಸೆಯ ರೀಫಿಲ್ ಆಗ ಸಾಮಾನ್ಯವಾಗಿತ್ತು. ಬ್ಯಾಗ್ ವಿಷಯಕ್ಕೆ ಬಂದರೆ ಈಗಿನಂತ ಬ್ಯಾಗುಗಳು ಇಲ್ಲ. ಹಿಂದಿನ ಕಾಲದ ಲೇಖಕರು ಹಾಕಿಕೊಳ್ಳುತ್ತಿದ್ದ ಬ್ಯಾಗನ್ನೇ ಹೋಲುವ ಬ್ಯಾಗನ್ನು ಇಟ್ಟುಕೊಳ್ಳುತ್ತಿದ್ದೆವು. ಸೆಕಂಡ್ ಹ್ಯಾಂಡ್ ಬುಕ್ಸ್‌ಗಳೇ ನಮಗೆ ಆಧಾರವಾಗಿದ್ದವು. ನಮಗೆ ನಮ್ಮ ಪೋಷಕರು ಬೇಕಾಬಿಟ್ಟಿ ಕೊಡಿಸುತ್ತಿರಲಿಲ್ಲ. ಶೂ ಗಳು ಇಲ್ಲ, ಬೇರೆ ಬೇರೆ ಸಮವಸ್ತ್ರಗಳು ಇಲ್ಲ. ಹರಿದ ಚಡ್ಡಿಗೆ ತೇಪೆ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆವು. ಇದ್ದುದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಓದುತ್ತಿದ್ದೆವು.

ಮಕ್ಕಳು ಕೇಳಿ ಕೇಳಿದ್ದನ್ನೆಲ್ಲಾ ಕೊಡಿಸುವ, ಕಷ್ಟವೇ ಗೊತ್ತಿಲ್ಲದಂತೆ ಮಕ್ಕಳನ್ನು ಬೆಳೆಸುತ್ತಿರುವ ಪೋಷಕರು, ಮಕ್ಕಳಲ್ಲಿ ಕಮ್ಮಿಯಾಗುತ್ತಿರುವ ಹೊಂದಾಣಿಕೆ ಗುಣವನ್ನು ನೋಡಿ ಇಷ್ಟೆಲ್ಲಾ ಹೇಳಬೇಕೆನಿಸಿತು. ಇದರ ಬಗ್ಗೆ ನೀವೇನಂತೀರಾ?

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

1 Comment

  1. ಹಂದಿಕುಂಟೆ ನಾಗರಾಜ

    ಚೆನ್ನಾಗಿದೆ, ನೆನಪಿನ ಗಣಿ ಮೊಗೆದಷ್ಟೂ ಆಳ

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ