Advertisement
ಬಾರ್ಬೆಡೋಸ್ ದೇಶದ ಕವಿ ಎಸ್ಟರ್ ಫಿಲಿಪ್ಸ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಬಾರ್ಬೆಡೋಸ್ ದೇಶದ ಕವಿ ಎಸ್ಟರ್ ಫಿಲಿಪ್ಸ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಫಿಲಿಪ್ಸ್ ಅವರ ಕವಿತೆಗಳಲ್ಲಿ ಅಪಾರವಾದ ಉದಾರ ಮನೋಭಾವವಿದೆ. ‘ವ್ಯಕ್ತಪಡಿಸಿದ ಪ್ರತಿಯೊಂದು ಕಲ್ಪನೆ ಅಥವಾ ಭಾವನೆಯು ಜನರು ಅಥವಾ ಅವರ ಸುತ್ತಲಿನ ಪ್ರಪಂಚದ ಮೇಲೆ ಅವಲಂಬಿತವಾಗಿರುವುದರಿಂದ ತನಗಾಗಿ ಮಾತ್ರ ಬರೆಯಲು ಎಂದಿಗೂ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ಅವರ ಧ್ವನಿ ಉದಾರವಾಗಿದೆ, ಅವರ ಭಾಷೆ ಪದರ ಪದರವಾಗಿರುತ್ತದೆ ಆದರೆ ಜಟಿಲವಲ್ಲ, ಮತ್ತು ಅವರ ವಿಷಯಗಳು ಸಾರ್ವತ್ರಿಕವಾಗಿವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ವೆಸ್ಟ್ ಇಂಡೀಸ್-ನ ಬಾರ್ಬೆಡೋಸ್ ದೇಶದ ಕವಿ ಎಸ್ಟರ್ ಫಿಲಿಪ್ಸ್-ರವರ (ESTHER PHILLIPS) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ವೆಸ್ಟ್ ಇಂಡೀಸ್ ದ್ವೀಪರಾಷ್ಟ್ರ ಬಾರ್ಬೆಡೊಸ್-ನ ಸೇಂಟ್ ಜಾರ್ಜ್ ನಗರದಲ್ಲಿ 1950-ರಲ್ಲಿ ಜನಿಸಿದ ಎಸ್ಟರ್ ಫಿಲಿಪ್ಸ್, ‘ಗ್ರೀನ್ಸ್’ ಎಂಬ ಗ್ರಾಮದಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಈಗ ಅಲ್ಲೇ ನೆಲೆಸಿರುವ ಎಸ್ಟರ್ ಫಿಲಿಪ್ಸ್ ಚಿಕ್ಕ ವಯಸ್ಸಿನಲ್ಲೇ ಬರೆಯಲು ಪ್ರಾರಂಭಿಸಿ, ಕೆರಿಬಿಯನ್ ಸಾಹಿತ್ಯ ಪತ್ರಿಕೋದ್ಯಮದ ಪ್ರವರ್ತಕವಾದ ಸಾಹಿತ್ಯ ಪತ್ರಿಕೆ BIM-ನಲ್ಲಿ ತನ್ನ ಮೊದಲ ಕವನವನ್ನು ಪ್ರಕಟಿಸಿದರು. 1999-ರಲ್ಲಿ, ಅವರು ಅಮೇರಿಕಾ-ದ ಮಯಾಮಿ ವಿಶ್ವವಿದ್ಯಾಲಯದಿಂದ ಸೃಜನಾತ್ಮಕ ಬರವಣಿಗೆಯಲ್ಲಿ MFA ಪದವಿ ಪಡೆದರು ಮತ್ತು ಅವರ ಪ್ರಬಂಧ ಕವನ ಸಂಗ್ರಹಕ್ಕಾಗಿ ಅಮೇರಿಕನ್ ಪೊಯೆಟ್ಸ್ ಅಕಾಡೆಮಿಯ ಆಲ್ಫ್ರೆಡ್ ಬೋವಾಸ್ ಕವನ ಪ್ರಶಸ್ತಿಯನ್ನು (Alfred Boas Poetry Prize) ಪಡೆದರು. 2007-ರಿಂದ ಅವರು BIM—Arts for the 21st Century ಎಂದು ಮರುನಾಮಕರಣಗೊಂಡ ಹಳೆಯ BIM ಪತ್ರಿಕೆಯ ಸಂಪಾದಕರಾಗಿದ್ದಾರೆ. ಅವರು ಸ್ಥಾಪಿಸಿದ ರೈಟರ್ಸ್ ಇಂಕ್ ಇಂಕ್ (Writers Ink Inc. collective) ಎಂಬ ಬರಹಗಾರರ ಸಮೂಹದ ಜತೆ ಜಂಟಿಯಾಗಿ 2012-ರಲ್ಲಿ ಬಿಮ್ ಸಾಹಿತ್ಯ ಉತ್ಸವ, ಪುಸ್ತಕ ಮೇಳ ಮತ್ತು ಮಕ್ಕಳ ಸಾಹಿತ್ಯ ಉತ್ಸವವನ್ನು ಸಂಯೋಜಿಸಿದರು.

ಎಸ್ಟರ್ ಫಿಲಿಪ್ಸ್ ನಾಲ್ಕು ಕವನ ಸಂಕಲನಗಳು ಮತ್ತು ಒಂದು ಕವನ ‘ಚ್ಯಾಪ್‌ಬುಕ್’-ನ್ನು ಪ್ರಕಟಿಸಿದ್ದಾರೆ, ಅವುಗಳಲ್ಲಿ ಇತ್ತೀಚಿನವು Leaving Atlantis (2015) ಮತ್ತು Witness in Stone (2021). ಅವರ ಕೃತಿಗಳು ಅನೇಕ ಸಂಕಲನಗಳಲ್ಲಿ ಪ್ರಕಟವಾಗಿವೆ ಮತ್ತು ಹಲವಾರು ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಕಾಣಿಸಿಕೊಂಡಿವೆ.

ಎಸ್ಟರ್ ಫಿಲಿಪ್ಸ್ ಅವರ ಕಾವ್ಯವು ಅವರ ಕ್ರಿಶ್ಚಿಯನ್ ನಂಬಿಕೆ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಳೆದ ಬಾಲ್ಯದಿಂದ ಪ್ರಭಾವಿತವಾಗಿದೆ. ಅವರ ಕಾವ್ಯ ಆಂತರಿಕ ಜಗತ್ತನ್ನು ಗಮನಿಸುತ್ತದೆ, ಆದ್ದರಿಂದ ಅದು ವೈಯಕ್ತಿಕ ಸ್ವರವನ್ನು ಹೊಂದಿದೆ. ಫಿಲಿಪ್ಸ್ ಅವರು ಪದರ ಪದರದ ಆದರೆ ಸಹಜವಾದ, ಜಟಿಲವಲ್ಲದ ಭಾಷೆಯಲ್ಲಿ ತಮ್ಮನ್ನು ವ್ಯಕ್ತಪಡಿಸುತ್ತಾರೆ; ಇದರಲ್ಲಿ ಅವರು ತಮ್ಮ ಆಂತರಿಕ ಜಗತ್ತನ್ನು ಪ್ರತಿಬಿಂಬಿಸುವುದಲ್ಲದೆ ಅವರ ಓದುಗರ ಜಗತ್ತಿನೊಳಗೂ ಹೋಗುತ್ತಾರೆ. ಹೀಗೆ ಮಾಡುವ ಮೂಲಕ, ಫಿಲಿಪ್ಸ್ ಈ ಹಿಂದೆ ವ್ಯಕ್ತಪಡಿಸದ ಆಳವಾದ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಜಾಗವನ್ನು ಒದಗಿಸುವ ಗುರಿಯನ್ನು ಹೊಂದಿರುತ್ತಾರೆ, ಇದರಿಂದಾಗಿ “ಗುಣಪಡಿಸುವತ್ತ ಒಂದು ಮಾರ್ಗ”-ವನ್ನು (a path towards healing) ಸುಗಮಗೊಳಿಸುತ್ತಾರೆ. ಪ್ರೀತಿ, ದುಃಖ, ನೆನಪು ಮತ್ತು ‘ಇಲ್ಲದ ತಂದೆ’ (absent father) ಮುಂತಾದ ಅವರ ಕೃತಿಯಲ್ಲಿನ ವಿಷಯಗಳು ಸಾರ್ವತ್ರಿಕವಾಗಿವೆ, ಜತೆಗೆ ಕೆರಿಬಿಯನ್ ಜಾನಪದ ಸಂಸ್ಕೃತಿ ಮತ್ತು ದೇಶದ ವಸಾಹತುಶಾಹಿ ಇತಿಹಾಸಕ್ಕೂ ಸಂಬಂಧಿಸಿವೆ.

ಫಿಲಿಪ್ಸ್ ಅವರ ಕೃತಿಗಳು ಅದರಲ್ಲಿರುವ ನಂಬಿಕೆಯಿಂದ ನಿರೂಪಿಸಲ್ಪಟ್ಟಿದೆ – ತಮ್ಮ ದೇಶದ ಮೇಲಿನ ನಂಬಿಕೆ, ಕವಿಯ ಕೌಶಲದ ಮೇಲಿನ ನಂಬಿಕೆ, ಹಾಗೂ ಕ್ರಿಶ್ಚಿಯನ್ ಆಸ್ಥೆಯ ‘ಮಾಸ್ಟರ್ ಕ್ರಾಫ್ಟ್ಸ್‌ಮನ್’-ನ ಮೇಲಿನ ನಂಬಿಕೆ. ಜೇನ್ ಕಿಂಗ್ ಅವರು ‘ಕೆರಿಬಿಯನ್ ರಿವ್ಯೂ ಆಫ್ ಬುಕ್ಸ್‌’-ನಲ್ಲಿ ಫಿಲಿಪ್ಸ್-ರವರ ಕಾವ್ಯದ ಬಗ್ಗೆ ಹೀಗೆ ಹೇಳುತ್ತಾರೆ: ‘ಈಗಿನ ಮೆಟ್ರೋಪಾಲಿಟನ್ ಅಕಾಡೆಮಿಯು ಪಟ್ಟು ಹಿಡಿದು ಕ್ರಿಶ್ಚಿಯನೋತ್ತರ (post-Christian) ತಾಣವಾಗಿ ಮಾರ್ಪಟ್ಟಿರುವುದಾದ್ದರಿಂದ, ಫಿಲಿಪ್ಸ್-ರ ಕಾವ್ಯದಲ್ಲಿ ದೇವರ ಇಚ್ಛೆಯು ವಸಾಹತೋತ್ತರ ತಾಣಗಳಲ್ಲಿ (post-colonial spaces) ಮಾತ್ರ ಸಾಧ್ಯವಾಗಬಹುದಾದ ರೀತಿಯಲ್ಲಿ ಸದ್ದಿಲ್ಲದೆ ಪ್ರಸ್ತುತವಾಗಿದೆ. ಆದಾಗ್ಯೂ, ಫಿಲಿಪ್ಸ್ ಅವರು ತಮ್ಮ ಕಾವ್ಯದ ಮೇಲೆ ಪಾಶ್ಚಿಮಾತ್ಯ ಶಾಸ್ತ್ರೀಯ ಸಾಹಿತ್ಯದ ಪ್ರಭಾವವನ್ನು, ವಿಶೇಷವಾಗಿ ಶೇಕ್ಸ್‌ಪಿಯರ್, ಎಲಿಯಟ್ ಮತ್ತು ಶೇಯ್ಮಸ್ ಹೀನಿಯಲ್ಲಿ ಕಂಡುಬರುವ ತಾಂತ್ರಿಕ ಕರಕುಶಲತೆ ಮತ್ತು ಭಾಷಾ ವ್ಯಾಪ್ತಿಯ ಪ್ರಭಾವವನ್ನು ಒತ್ತಿಹೇಳುತ್ತಾರೆ. ಫಿಲಿಪ್ಸ್‌-ರಿಗೆ, ‘ಕವಿತೆಯಲ್ಲಿ ಆಲೋಚನೆಗಳು ಮತ್ತು ಭಾವನೆಗಳನ್ನು ಎಷ್ಟು ಶಕ್ತಿಯುತವಾಗಿ ಸಂವಹನ ಮಾಡಲಾಗಿದೆ ಎಂಬ ಮಾತು ಆ ಕವಿತೆ ಎಷ್ಟು ಕುಶಲತೆಯಿಂದ ರಚಿತವಾಗಿದೆ ಎಂಬುದರ ಮೇಲೆ ನಿರ್ಧಾರಿತವಾಗಿದೆ.’

ಫಿಲಿಪ್ಸ್ ಅವರ ಕವಿತೆಗಳಲ್ಲಿ ಅಪಾರವಾದ ಉದಾರ ಮನೋಭಾವವಿದೆ. ‘ವ್ಯಕ್ತಪಡಿಸಿದ ಪ್ರತಿಯೊಂದು ಕಲ್ಪನೆ ಅಥವಾ ಭಾವನೆಯು ಜನರು ಅಥವಾ ಅವರ ಸುತ್ತಲಿನ ಪ್ರಪಂಚದ ಮೇಲೆ ಅವಲಂಬಿತವಾಗಿರುವುದರಿಂದ ತನಗಾಗಿ ಮಾತ್ರ ಬರೆಯಲು ಎಂದಿಗೂ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ಅವರ ಧ್ವನಿ ಉದಾರವಾಗಿದೆ, ಅವರ ಭಾಷೆ ಪದರ ಪದರವಾಗಿರುತ್ತದೆ ಆದರೆ ಜಟಿಲವಲ್ಲ, ಮತ್ತು ಅವರ ವಿಷಯಗಳು ಸಾರ್ವತ್ರಿಕವಾಗಿವೆ. ಈ ಸಾವರ್ತ್ರಿಕತೆ, ‘ಕುಟುಂಬದ ಸಮಸ್ಯೆಗಳು’ ಎಂದು ವಿವರಿಸಲ್ಪಡುವ ಪ್ರೀತಿ, ದುಃಖ, ನೆನಪು ಮತ್ತು ವಿಶೇಷವಾಗಿ ಕೆರಿಬಿಯನ್ ಸಾಹಿತ್ಯದಲ್ಲಿ ಮತ್ತೆ ಮತ್ತೆ ಕಂಡುಬರುವ ‘ಇಲ್ಲದ ತಂದೆಯರ’ (absent fathers) ವಿಷಯಗಳಿಂದ ಮಾಡಲ್ಪಟ್ಟಿದೆ. ಆದರೂ ಅವರ ಕವಿತೆಗಳು ಸಮನ್ವಯಕ್ಕಾಗಿ ಶ್ರಮಿಸುತ್ತವೆ; ‘I don’t know my Father’ ಎಂಬ ಕವನವು ಆರಂಭದಿಂದಲೂ ಶೀರ್ಷಿಕೆಯಲ್ಲಿ ಬರುವ ಬುದ್ಧಿವಂತ ತಂದೆಯ ಕೊರತೆಯನ್ನು ಘೋಷಿಸುತ್ತದೆ, ಪದಗಳನ್ನು ‘ಅರ್ಥವಿಲ್ಲದ ಪದಗಳು’ ಎಂದು ವಿರೂಪಗೊಳಿಸಿದವನು, ಆದರೆ ಕವಿಯು ಇದನ್ನು ‘ಅವನ ಮುಖದ ಮೇಲೆ ಕೆತ್ತಿದ ದುಃಖವಾಗಿರಬಹುದು’ ಎಂದು ಸಹಾನುಭೂತಿಯಿಂದ ಗ್ರಹಿಸುತ್ತಾಳೆ. ‘The Mask’ ಎಂಬ ಕವನದಲ್ಲಿ ಸಹ ದುಃಖವನ್ನು ವ್ಯಕ್ತಪಡಿಸಲು ಇದೇ ರೀತಿಯ ಹೋರಾಟವನ್ನು ಒಳಗೊಂಡಿದೆ: ‘ಆ ಭೀತಿಯನ್ನು ವಿವರಿಸಲು ಯಾವದೇ ಪದಗಳಿಲ್ಲ. ಅವನು ನಮ್ಮನ್ನು ದೂರವಿಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ’, ಆದರೆ ಅಂತ್ಯವು ದೃಢಸಂಕಲ್ಪದಿಂದ ಕೂಡಿದೆ: ‘ಮುಖವಾಡದ ಹಿಂದೆ ನೋಡಿದೆ / ಆದಾಗ್ಯೂ ಅವನನ್ನು ಪ್ರೀತಿಸಲು ನಿರ್ಧರಿಸಿದೆ.’

‘Legacy’ ಎಂಬ ಕವನ ತನ್ನ ಮಕ್ಕಳನ್ನು ಒಂಟಿಯಾಗಿ ಬೆಳೆಸಲು ಬಿಡಲ್ಪಟ್ಟ ತಾಯಿಯ ಕುರಿತ ಕವನವಾಗಿದೆ; ಅವಳ ಸ್ಪರ್ಶವು ಕೋಮಲವಾಗಿಲ್ಲ, ಮತ್ತು ಅವಳ ಎತ್ತರದ ಧ್ವನಿ ಮನೆಯ ತುಂಬ ಒಂದು ‘ಬಲವಾದ’ ಶಬ್ದದಿಂದ ತುಂಬುತ್ತದೆ, ಇದನ್ನು ಕವಿಯು ನಂತರದ ಸಾಲುಗಳಲ್ಲಿ ಅದರ ಪೂರ್ಣ-ಹೃದಯತೆ ಮತ್ತು ಶಕ್ತಿಗಾಗಿ ಮೆಚ್ಚುತ್ತಾಳೆ,

ಅವಳ ಖಿನ್ನ ಗೀತೆಗಳು ನಮ್ಮನ್ನು ಶಬ್ದಗಳು,
ರೂಪಕಗಳು, ಲಯಗಳನ್ನು ಅನುಭವಿಸುವತ್ತ ಸೆಳೆದವು
ನಮ್ಮ ಜಗತ್ತನ್ನು ರೂಪಿಸಲು.

ವೆಸ್ಟ್ ಇಂಡೀಸ್-ನ ಇಂಗ್ಲಿಷ್ ಆಡುಭಾಷೆಯಲ್ಲಿರುವ ‘Steal Away’ ಎಂಬ ಕವನ ಗುಲಾಮರನ್ನು ‘ನಿನ್ನ ದುಃಖಗಳನ್ನು / ನೀರಿನೊಳಗೆ ಬಿಟ್ಟುಬಿಡು’ ಎಂದು ಒತ್ತಾಯಿಸುತ್ತದೆ, ಹೀಗೆ ನೀರಿನ ಮಡಿಕೆಯೊಳಗೆ ಮಾತಾಡಿದರೆ ಗುಲಾಮರ ಯಜಮಾನರು ಕೇಳಿಸಿಕೊಳ್ಳುವುದಿಲ್ಲ; ಈ ಕವನದ ಕಿರಿದಾಗಿಸಿದ ಧ್ವನಿಸಾಮ್ಯದ ನಿರ್ಮಾಣದಲ್ಲಿ ಮಂತ್ರಾತ್ಮಕ ಪ್ರಭಾವವಿದೆ.

ಎಸ್ಟರ್ ಫಿಲಿಪ್ಸ್ ಅವರು ಹಲವಾರು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಬಾರ್ಬೆಡೊಸ್-ನ ಜೈಲು ವ್ಯವಸ್ಥೆಯಲ್ಲಿ ಸಹ ಅಧ್ಯಾಪನ ಮಾಡಿದ್ದಾರೆ. ಅವರು ಫ್ರಾಂಕ್ ಕಾಲಿಮೋರ್ ಲಿಟರರಿ ಎಂಡೋಮೆಂಟ್ ಕಮಿಟಿಯಲ್ಲಿ (Frank Collymore Literary Endowment Committee) ಸೇವೆ ಸಲ್ಲಿಸಿದ್ದಾರೆ ಮತ್ತು 2023-ರಲ್ಲಿ, ಆಫ್ರಿಕಾದಿಂದ ಕೆರಿಬಿಯನ್‌ ದ್ವೀಪಗಳಿಗೆ ಗುಲಾಮರಾಗಿ ತರಿಸಲಾದ ಮಹಿಳೆಯರ ಅನುಭವಗಳನ್ನು ಸಂಶೋಧಿಸುವ ಉದ್ದೇಶಕ್ಕಾಗಿ ಲಂಡನ್‌-ನ SOAS (School of Oriental and African Studies) ವಿಶ್ವವಿದ್ಯಾಲಯದಿಂದ ‘Poet in Residence’ ಆಗಿ ’Visiting Fellowship’ ಪಡೆದರು. ಫೆಬ್ರವರಿ 2018-ರಲ್ಲಿ, ಎಸ್ಟರ್ ಫಿಲಿಪ್ಸ್-ರನ್ನು ಬಾರ್ಬೆಡೊಸ್ ದೇಶದ ಮೊದಲ ರಾಷ್ಟ್ರ ಕವಿಯನ್ನಾಗಿ (Poet Laureate) ನೇಮಿಸಲಾಯಿತು. 2023-ರಲ್ಲಿ, The Order of the Republic of Barbados (OR) ಗೌರವದಿಂದ ಅವರನ್ನು ಸನ್ಮಾನಿಸಲಾಯಿತು.


ಡ್ರ್ಯಾಕ್ಸ್ ಹಾಲ್
ಮೂಲ: Drax Hall

ನನ್ನ ಎಂಟೋ ಒಂಬತ್ತೋ ವಯಸ್ಸಿನಲ್ಲಿ
ನಾನು ನಸುಕನ್ನು ಪ್ರೀತಿಸಲು ಕಲಿತಿರಬೇಕು,
ಕೈಯಲ್ಲಿ ಪಾತ್ರೆಯನ್ನು ಹಿಡಿಕೊಂಡು,
ನನ್ನಜ್ಜ ತನ್ನ ದನಗಳನ್ನು ಕಟ್ಟಿದ್ದ
ಡ್ರಾಕ್ಸ್ ಹಾಲ್ -ನ ಅಂಗಳಕ್ಕೆ ಹಾಲು
ತರಲು ನಡೆದು ಹೋಗುವಾಗ.

ತಣ್ಣನೆಯ ಮುಂಜಾನೆಗಳು, ಇಬ್ಬನಿಯಲ್ಲಿ ತೊಯ್ದ
ಬೇಲಿಗಿಡದ ಸಾಲುಗಳು; ಮುಂಜಾನೆಯ ಮುನ್ನ ಅರಳುವ
ತಡಋತುವಿನ ಹೂವುಗಳಲ್ಲಿ ಮೆಲ್ಲಮೆಲ್ಲನೆ ಹೊಮ್ಮುತ್ತಿರುವ ಹಳದಿ ಬಣ್ಣ;
ರಸ್ತೆಯ ಎರಡೂ ಬದಿಯ ಬಂಡೆಗಳ ಬಿರುಕುಗಳಲ್ಲಿ
ಬರ್ಡ್-ವೈನ್ ಎಲೆಗಳ ಗೊಂಚಲುಗಳಿಂದ
ಇಣುಕುತ್ತಿರುವ ನೇರಳೆ ಬಣ್ಣ,
ಪ್ಲಮ್ ಹಣ್ಣುಗಳ, ಮಾಗಿದ ಪೇರಳೆ ಹಣ್ಣುಗಳ
ಪರಿಮಳ ಗಲ್ಲಿಗಳಿಂದ ಚಿಮ್ಮಿ, ಗಾಳಿಯನ್ನು ಆವರಿಸುತ್ತದೆ.

ವಾಟರ್ಮನ್-ಸ್ಟ್ರಾ-ದಲ್ಲಿರುವ ಪಾಳು ಗಿರಣಿಯನ್ನು
ದಾಟಿದ ನಂತರ, ವಿಶಾಲವಾದ ಆಕಾಶ ನನ್ನ ಜತೆ ನಡೆಯುತ್ತದೆ;
ಗುಲಾಬಿ, ಬೂದು, ನೀಲ ಬಣ್ಣಗಳು
ಎಷ್ಟು ಕೋಮಲ ಬಣ್ಣಗಳೆಂದರೆ
ಯಾಕೆಂದು ನನಗೆ ಅರಿವಿಲ್ಲದೆಯೇ
ಉಸಿರು ಬಿಗಿ ಹಿಡಿದಿದ್ದೆ.
ಆದರೆ ಆ ನಿರಾಳದಲ್ಲಿ ಏನೋ ಇತ್ತು;
ಏನೆಂದು ಗುಬ್ಬಿಗಳಿಗೆ, ಕಬ್ಬಕ್ಕಿಗಳಿಗೆ ಗೊತ್ತಿತ್ತು,
ಗೊತ್ತಿದ್ದರೂ, ಸುಮ್ಮನಿದ್ದವು.
ಜೀರುಂಡೆಗಳ, ಮಿಡತೆಗಳ ಎಡೆಬಿಡದ ಹಾಡಿನಲ್ಲಿತ್ತು;
ತನ್ನ ಪೊದೆಗಳೊಳಗೆ ಗಾಳಿ ಸರಿಯುವಾಗ
ಖಸ್ ಹುಲ್ಲಿನ ಪಿಸುಮಾತಿನಲ್ಲಿತ್ತು;
ಸದ್ದಿಲ್ಲದ, ತನ್ನಿಚ್ಛೆಯಂತೆ ಯಾ ನಾನು ಕಲ್ಪಿಸಿಕೊಂಡಂತೆ
ರೂಪಾಂತರಗೊಳ್ಳುವ ಮೋಡಗಳಲ್ಲಿತ್ತು.

ಇದೇ ಕಾವ್ಯದ ಆರಂಭವಾಗಿತ್ತು:
ಕತ್ತಲಲ್ಲಿ ಅರೆ-ಅಡಗಿಕೊಂಡಿರುವ
ಪ್ರಿಸ್ಮ್-ಗಾಗಿರುವ ಹುಡುಕಾಟವಿದು;
ನಾಡಿಮಿಡಿತಕ್ಕೆ ಶ್ರುತಿ ಹೊಂದಿಸಿಕೊಂಡಿರುವ ಕಿವಿ,
ಪೊದೆಗಳ, ಕುರಚಲು ಗಿಡಗಂಟೆಗಳ ಏರಿಳಿತ,
ನಮ್ಮ ಸುತ್ತಲಿನ ಗದ್ದಲವನ್ನು ಮೀರಿ ನುಡಿಯುತ್ತದೆ.

ಹೇಗೆ ಗೊತ್ತಾಗುವುದು ನನಗೆ ಆ ಮುಂಜಾನೆಗಳಲ್ಲಿ
ನನ್ನ ಕಾವ್ಯದೇವಿ ನನ್ನ ಜತೆ ಡ್ರ್ಯಾಕ್ಸ್ ಹಾಲ್-ನ
ಅಂಗಳದವರೆಗೂ ನಡೆದು ಬರುತ್ತಿದ್ದಾಳೆಂದು,
ಆ ನಸುಕೇ ನನ್ನ ಮೊದಲ ಕವನವಾಗಿದ್ದಾಗ.

* ‘ಡ್ರ್ಯಾಕ್ಸ್ ಹಾಲ್’ ಎಂಬುದು ಬಾರ್ಬೆಡೋಸ್‌-ನ ಅತಿ ಹಳೆಯ ಸಕ್ಕರೆ ಎಸ್ಟೇಟ್‌-ಗಳಲ್ಲಿ ಒಂದು; ಹಾಗೂ ಬಾರ್ಬೆಡೋಸ್ ದ್ವೀಪದ ಅತಿ ಹಳೆಯ ತೋಟದ ಮನೆಯ ಕಟ್ಟಡ ಈ ಎಸ್ಟೇಟ್-ನಲ್ಲಿದೆ.


ಅಮ್ಮನಿಂದ ಬಂದ ಆಸ್ತಿ
ಮೂಲ: Legacy

ನನ್ನಮ್ಮನ ಸ್ಪರ್ಷ ಕೋಮಲವಾಗಿರಲಿಲ್ಲ.
ಎಲ್ಲವೂ ಉಚ್ಛಸ್ವರದ್ದಾಗಿತ್ತು.
ಅವಳು ಮೃದುವಾದ ಆಲಾಪನೆಗಳ ಹಾಡುತ್ತಿರಲಿಲ್ಲ,
ಮೆರಗಿಸಿದ ಕುರ್ಚಿಯ ಮೇಲೆ ಒಪ್ಪವಾಗಿ, ನಯವಾಗಿ ಕೂರುತ್ತಿರಲಿಲ್ಲ;
ಅವಳ ಸಂಪೂರ್ಣ ಭಾರವನ್ನು ಬೆತ್ತದ ಕುರ್ಚಿಯೊಂದು ಹೊರುತ್ತಿತ್ತು.
ಅವಳದ್ದು ಉದ್ದನೆಯ, ತೆಳ್ಳನೆಯ ಚೂಪಾದ ಬೆರಳುಗಳಾಗಿರಲಿಲ್ಲ,
ಕಲಾತ್ಮಕ ಮನಸ್ಸನ್ನು ಸೂಚಿಸುವಂತಹ ಬಾಗಿದ ಬೆರಳುಗಳಾಗಿರಲಿಲ್ಲ;
ಅವಳ ಗಿಡ್ಡ ಬೆರಳುಗಳು ದಪ್ಪವಾಗಿದ್ದವು,
ಬಿರುಕುಬಿಟ್ಟ ಉಗುರುಗಳ ಅಡಿಯಲ್ಲಿ ಮಣ್ಣಿನ ಕಣಗಳು ಮನೆ ಮಾಡಿದ್ದವು.
ದೃಢಸಂಕಲ್ಪ ಸೂಚಿಸುವ ಅವಳ ಮುಂದೂಡಿದ ಕೆಳದವಡೆ ಹಾಗೂ
ಅವಳ ಸುತ್ತ ಇರುವ ದುಃಖದ ಪ್ರಭೆಯಿಂದ ನನ್ನಮ್ಮ
ಪಿಯಾನೋವನ್ನು ಮಾತ್ರ ನುಡಿಸುತ್ತಿರಲಿಲ್ಲ ಎಂಬ ಅರಿವಾಯಿತು.
‘ಸ್ಕೋರ್’ ಎನ್ನುವ ಪದ ಅವಳಿಗೆ ಸಂಗೀತಸೂಚಿ ಮಾತ್ರ ಆಗಿರಲಿಲ್ಲ,
ಹಳೆಯ ಮುಯ್ಯಿಗಳನ್ನು ತೀರಿಸಿಕೊಳ್ಳುವುದೂ ಆಗಿತ್ತು –
ಒಂದು ಸಣ್ಣ ತಪ್ಪು, ಒಂದು ಸ್ವರ ಅವಳನ್ನು ಬಿಟ್ಟುಕೊಡಬಹುದು.

ತನ್ನದೇ ಮಂದ ಗತಿಯಲ್ಲಿ ಅವಳು ಈ ಗೀತೆಯನ್ನು ಹಾಡುವ ರೀತಿ:

“O my darling, O my darling Clementine,
Thou art lost and gone forever, dreadful sorry Clementine,”

ಬಹುಬೇಗ ಕಳೆದು ಹೋದ ಅವಳ ಕೌಮಾರ್ಯಕ್ಕೆ
ಇದು ಅವಳ ವಿದಾಯಗೀತೆಯಾಗಿತ್ತು.
ಈಗ ತನ್ನ ಮಕ್ಕಳ ಗುಂಪನ್ನು ಸಂರಕ್ಷಿಸುತ್ತಾ,
ಅಡ್ಡ ತೆರವುಗಳ ಪಾಶದಿಂದ ಆದಷ್ಟು ಇಂಪಾದ ಸಂಗಿತವನ್ನು
ಅವಳು ಕಸಿದುಕೊಳ್ಳುತ್ತಾಳೆ.

ವರುಷಗಳ ನಂತರ ಕಷ್ಟದ ಸಮಯದಲ್ಲಿ, ಮನೆಯಿಂದ ಬಹು ದೂರ,
ಸ್ವಲ್ಪ ಶ್ರುತಿತಪ್ಪಿದ ಪಿಯಾನೋದ ಧ್ವನಿ ಕೇಳಿಬರುತ್ತೆ,
ಆಗ ಕಾಣುತ್ತಾಳೆ ಅವಳು, ನಾನವಳನ್ನು ಅಂದೆಂದೂ ಕಂಡಿರದ ಹಾಗೆ:
ಮೂಲ-ಮಾತೆ, ಜೀವನದ, ಕಲೆಯ ಪ್ರವರ್ತಕಿ,
ಎಲ್ಲ ಪ್ರತಿಬಂಧನೆಗಳ ಹೊರತಾಗಿಯೂ
ಅವಳು ಚಿತ್ರಕಲಾವಿದೆ, ನರ್ತಕಿ, ಕವಿಯನ್ನು ಹಡೆದಳು.
ಅವಳ ಖಿನ್ನ ಗೀತೆಗಳು ನಮ್ಮನ್ನು ಶಬ್ದಗಳು,
ರೂಪಕಗಳು, ಲಯಗಳನ್ನು ಅನುಭವಿಸುವತ್ತ ಸೆಳೆದವು
ನಮ್ಮ ಜಗತ್ತನ್ನು ರೂಪಿಸಲು.


ಸದ್ದಿಲ್ಲದೆ ನಡೆದುಹೋಗು
ಮೂಲ: Steal Away

ಪಿಸುಮಾತಿನಲ್ಲಿ ಹಾಡು ನೀನು
ಸದ್ದಿಲ್ಲದೆ ನಡೆದುಹೋಗು
ಅವನಿಗೆ ನಿನ್ನ ಮಾತು ಕೇಳಿಸದಿರಲಿ

ನಿನಗೆ ದೇವರಲ್ಲಿ
ಮೊರೆಯಿಡಬೇಕೆಂದನಿಸಿದಾಗ
ಈ ವೃತ್ತದೊಳಗೆ ಬಾ
ಬಗ್ಗಿ ಮಂಡಿಯೂರಿ
ನಿನ್ನ ದುಃಖಗಳನ್ನು
ನೀರಿನೊಳಗೆ ಬಿಟ್ಟುಬಿಡು

ನಿನಗೆ ಕೋಪ ನೆತ್ತಿಗೇರಿದಾಗ
ಕಿರುಚಬೇಕೆಂದನಿಸಿದಾಗ
ಅವನಿಗೆ ನಿನ್ನ ಮಾತು ಕೇಳಿಸದಿರಲಿ
ನಿನ್ನ ಬಾಯನ್ನು ಮುಚ್ಚಿಕೊ
ನೀರಿನೊಳಗೆ ಉಸಿರುಬಿಡು
ನಿನ್ನ ತಲೆಯಲ್ಲಿರುವ ಬಿಸಿಯೆಲ್ಲ
ಮಂಜಿನಂತೆ ಮೇಲೆಕ್ಕೇರಲಿ
ಮಳೆಯಂತೆ ಇಳಿದು ಸಂತೈಸಲಿ

ನೀರಿನೊಳಗೆ ಮೆಲುದನಿಯಲ್ಲಿ ಮಾತಾಡು
ಆ ದಿವ್ಯಚೇತನ ಕೇಳಿಸಿಕೊಳ್ಳಲಿ
ಹೇಳು ಆ ಚೇತನಕ್ಕೆ ಬೇಗನೆ ಬಿಡುಗಡೆಗಾಗಿ
ನೀನು ಪ್ರಾರ್ಥಿಸುತ್ತಿರುವೆಯೆಂದು

ಪಿಸುಮಾತಿನಲ್ಲಿ ಹಾಡು ನೀನು
ಸದ್ದಿಲ್ಲದೆ ನಡೆದುಹೋಗು
ಅವನಿಗೆ ನಿನ್ನ ಮಾತು ಕೇಳಿಸದಿರಲಿ,
ಮರುದಿನ ಬಂದು ನಿನ್ನನ್ನು ಕೊಂದಾನು.

* ತಮ್ಮ ರಹಸ್ಯ ಕೂಟಗಳ ಸಮಯದಲ್ಲಿ, ಗುಲಾಮ-ಯಜಮಾನರಿಗೆ ಕೇಳಿಸದಂತೆ ಗುಲಾಮರು ನೀರಿನ ಮಡಕೆಯ ಮೇಲೆ ಮಾತನಾಡುವುದನ್ನು ಅಭ್ಯಾಸ ಮಾಡುತ್ತಿದ್ದರು.


ಮತ್ತೂ, ಮತ್ತೊಮ್ಮೆ
ಮೂಲ: And Yet Again

ಈ ರಾತ್ರಿ ನಿನಗೆ ಕೊಡಲಿಚ್ಛಿಸುವೆ
ನೇರಳೆ ಬಣ್ಣದ ಹೂವಿನ ಬೊಗಸೆಯಲ್ಲಿ
ಹಿಡಿದ ಈ ಬೆಳದಿಂಗಳನ್ನು;
ದಿನ ಕೊನೆಯಾಗುವುದರ ಬಗ್ಗೆ
ಯಾವುದೇ ದ್ವೇಷವಿಟ್ಟುಕೊಳ್ಳದ
ಜೀರುಂಡೆಗಳ ಈ ಗಾನಮೇಳವನ್ನು.
ಈ ಇರುಳುಗಾಳಿಯಡಿಯಲ್ಲಿ ಹುಳಿ-ಹುಲ್ಲಿನ
ತಂಪಾದ ಮಧುರತೆಯ ಸಾರತೆಗೆದು
ನಿನ್ನ ಮುಖದ ಬಿಗಿಯನ್ನು ಸಾಂತ್ವನಗೊಳಿಸಲು ಬಯಸುವೆ.
ನಿನ್ನ ವೀರೋಚಿತ ಮೌನದಿಂದ ಆಚೆಗೆ
ಮುಕ್ತ, ಅಸಂಬದ್ಧ ಆನಂದದ ಕಡೆ ನಿನ್ನನ್ನು ಸೆಳೆಯಲು ಬಯಸುವೆ.
ಬೇಗನೆ ಉದಯಿಸಿದ ನಕ್ಷತ್ರಗಳನ್ನು
ಹಗ್ಗವಾಗಿ ಹೆಣೆದು ನಿನಗೆ ಕೊಡಲು ಬಯಸುವೆ
ಅದನ್ನು ಹಿಡಿದುಕೊಂಡು ನೀನು ನಿನ್ನ ಹಳೆಯ ನೋವುಗಳನ್ನು,
ಪುಡಿಪುಡಿಯಾಗಿ ಧೂಳಾದ ನಿನ್ನ ನಂಬಿಕೆಗಳನ್ನು
ದಾಟಿ ಮುಂದೆ ಹೋಗುವಿಯೆಂಬ ಆಸೆಯಿಂದ.
ಈ ಬಯಕೆ ಅಸ್ಪಷ್ಟ ವಸ್ತುವೇನೂ ಅಲ್ಲ;
ಆತ್ಮ ತನ್ನ ಇನ್ನೊಂದು ತನುವನ್ನು ಬಯಸುವ ಹಂಬಲವಿದು
ಅಲ್ಲಿ ಅಗತ್ಯಕ್ಕೆ ಪದಗಳ ಅಡ್ಡಿ ಕಂಡುಬರುವುದಿಲ್ಲ.

ಈಗ, ಎಲ್ಲದರ ಹೊರತಾಗಿಯೂ …
ಈ ತವಕವೊಂದೇ ಉಳಿದಿದೆ,
ಈ ಮತ್ತೊಮ್ಮೆ ತಲುಪುವುದೊಂದೇ ಉಳಿದಿದೆ.


ನಿಜನುಡಿವ ಮೂಳೆಗಳು
ಮೂಲ: The Truthful Bones

ನಮ್ಮ ಪುರ್ವಜರ ಸಮಾಧಿ ಸ್ಥಳಗಳನ್ನು
ಹುಡುಕಿ ಮರು-ಪಡೆಯುವ ಕಾಲ ಬರುತ್ತದೆ.
ಆ ದಿನಗಳಲ್ಲಿ ನಾವು ಮೌನವಾಗಿರೋಣ—

ನಿಜನುಡಿವ ಮೂಳೆಗಳು ಮಾತನಾಡುತ್ತವೆ ಆಗ.
ಗಾಯಗೊಂಡ, ಮುರಿದ, ಛಿದ್ರಗೊಂಡ, ಒಡೆದ
ಇವರ ಮೂಳೆಗಳು ಯಾರ ಗಮನಕ್ಕೂ ಬಾರದ
ಇತಿಹಾಸ ಪುಸ್ತಕಗಳು ಅಥವಾ ಪ್ರಾಚೀನ ದಾಖಲೆಗಳಿಗಿಂತ
ಹೆಚ್ಚಿನದನ್ನು ನಮಗೆ ಹೇಳುತ್ತವೆ.

ಅಗೋ ಇಲ್ಲಿ ನೋಡು, ಇನ್ನೂ ಜೋಡಿಯಾಗೇ ಇರುವ ಉದ್ದನೆಯ ಮೂಳೆ—
ಇಲ್ಲಿ ನೋಡು ತರುಣ ಮೂಳೆಗಳು, ಉಮೇದಿಗೆ ಕೋಳ ತೊಡಿಸಿದ,
ದಿನವಿಡೀ ಬಿಸಿಲಲ್ಲಿ ಶಕ್ತಿ ಮೀರಿ ದುಡಿದು ಒಡೆದ,
ಮಾಗುವ ಮುಂಚೆಯೇ ಕೊಳೆತ ಮೂಳೆಗಳು.

ಇಲ್ಲಿವೆ ನೋಡಿ ಕಠಿಣದುಡಿಮೆಯಿಂದ ಗಾಯಗೊಂಡ ಬೆರಳ ಮೂಳೆಗಳು,
ಮಚ್ಚುಕತ್ತಿಯ, ಕಬ್ಬಿನ ಜಲ್ಲೆಗಳ ಹರಿತವಾದ ಎಲೆಗಳ,
ಒರಟು ನೆಲದ ಹಾಗೂ ಸುಣ್ಣದಕಲ್ಲುಗಳ ಗಾಯದ ಗುರುತುಗಳು .
ಇವು ಏನಾದರೂ ಒಂದು ಕಾಲದಲ್ಲಿ ಕಲಾಕರ್ಮಿಗಳ,
ಬೆಳ್ಳಿ, ಬಂಗಾರ, ಕಂಚುಗಳನ್ನು ಆಭರಣಗಳಾಗಿ
ರೂಪಿಸುವ ಕುಶಲತೆಯುಳ್ಳ ಕೈಗಳಾಗಿರಬಹುದೇ?
ಆ ಪ್ರಾಚೀನ ವಿದ್ಯೆ, ಆಚರಣೆಗಳು ಎಂದೆಂದಿಗೂ ಕಳೆದುಹೋದವೆ?

ಇಲ್ಲಿ ನೋಡಿ ನಮ್ಮ ಅಜ್ಜಿಯರ, ಮುತ್ತಜ್ಜಿಯರ,
ಅವರ ಅಜ್ಜಿಯರ ಮೂಳೆಗಳು,
ಬರೀ ಸರಕುಗಳಂತೆ ಮಾರಾಟವಾದ ದೇಹಗಳು.
ಅವರ ದವಡೆಗಳನ್ನು ನೋಡಿ, ಬಲಾತ್ಕಾರದ ನೋವುಗಳನ್ನು,
ಛಾಟಿಯ ಏಟುಗಳನ್ನು, ಗಂಟಲಲ್ಲೆ ತಡೆಹಿಡಿದ ಚೀತ್ಕಾರಗಳನ್ನು
ಸಹಿಸಲಿಕ್ಕಾಗದೆ ಹಲ್ಲು ಕಚ್ಚಿಕೊಂಡಾಗ
ಸಿಡಿದೊಡೆದ ಹಲ್ಲುಗಳ ಕುಳಿಗಳನ್ನು ನೋಡಿ!

ಇಲ್ಲಿ ನೋಡಿ, ಶ್ರೋಣಿಯ ಮೂಳೆಗಳು
ಮುರಿಯುವ ತನಕ ಅಗಲಿಸಲಾದ ಶ್ರೋಣಿಯ ಕುಹರ,
ಗರ್ಭದಿಂದ ಗೋರಿಯವರೆಗೂ ಗುಲಾಮತನದಲ್ಲಿ ಬದುಕಬೇಕಾದ
ಹೊಸ ಅತ್ಮಗಳನ್ನು ಮಥಿಸಲಿಕ್ಕಾಗಿರುವ ಬರಿಯ ಗಾಣಗಳು ಇವು!

***************

ಮೂಳೆಗಳೆಲ್ಲ ಮಾತನಾಡಿದ ನಂತರ – ನಮ್ಮದೇ ರಕ್ತ
ಮಾಂಸಗಳಿಂದ ಹೊದಿಸಲಾದ ಈ ಮೂಳೆಗಳು –
ಬಹುಕಾಲದ ನೆನಪುಗಳನ್ನು ಹೊತ್ತ ಗಾಳಿಯು
ಅದುಮಿಟ್ಟ ದುಃಖಗಳನ್ನು ಬಿಚ್ಚಿ ಬಿಡುಗಡೆ ಮಾಡಲಿ:
ನರಳಾಟ, ನಿಟ್ಟುಸಿರು, ಕಣ್ಣೀರು, ಕೋಪ –
ಶತಮಾನಗಳ ಯಾತನೆಯ ಭಾರದಿಂದ ಬಳಲಿದ
ಗಾಳಿಯು ತನ್ನ ಹೊರೆಯನ್ನು ಇಳಿಸುವವರೆಗೂ.

ಅನಂತರದ ನಿಶ್ಶಬ್ದದಲ್ಲಿ, ಈ ಒಣ ಮೂಳೆಗಳಿಗೆ ಹೇಳು:
“ನಿಮ್ಮ ಬದುಕು ವ್ಯರ್ಥವಾಗಲಿಲ್ಲ. ನಮ್ಮ ಮಕ್ಕಳು ನಿಮ್ಮಿಂದ
ಪಡೆದ ವಿವೇಕ ಹಾಗೂ ಚೈತನ್ಯದ ಉಡುಗೊರೆಗಳಿಗಾಗಿ ನನ್ನಿ:

ಇನ್ನೂ ಬರೆದಿರದ ಪದವನ್ನು ಕೇಳಿಸಿಕೊಳ್ಳಲೆಂದು ಚಾರಣರ ಕಿವಿ ಕೊಟ್ಟಿರಿ,
ಸಾಗರದ ಆಳಗಳು ಸಹ ಹಿಡಿದಿಡಲಾಗದಂತಹ ಹಾಡುಗಳ ಕೊಟ್ಟಿರಿ,
ಡೋಲಿನ ಕರೆಯನ್ನು ಅನುಭವಿಸಲು ಅಂಗಾಂಗಳನ್ನು ಕೊಟ್ಟಿರಿ,
ಪ್ರತಿಯೊಂದು ಒಡೆದ ಮೂಳೆಯ ಚೂರನ್ನು ಜೀವನದ
ವರ್ತುಲದೊಳಗೆ ಸೆಳೆಯುವಂತಹ ನೃತ್ಯವನ್ನು ಕೊಟ್ಟಿರಿ.

ನಿಮ್ಮ ಧೈರ್ಯ, ನಿಮ್ಮ ದೃಢತೆಯ ಕತೆಗಳನ್ನು ಹೇಳುವ
ಈ ಪ್ರತಿರೋಧದ ತಾಣಗಳಿಗಾಗಿ ನಿಮಗೆ ನನ್ನಿ.”

ಪ್ರೀತಿಯ ಪೂರ್ವಜರೆ, ಬಹುವರ್ಷಗಳ ನಂತರ
ನೀವು ಮಾತನಾಡಿದಿರಿ, ನಾವು ಆಲಿಸಿದೆವು.

ನಿಮ್ಮ ಆತ್ಮಗಳಿಗೆ ಶಾಂತಿ ಸಿಗಲಿ. ನಿಮಗೆ ಶಾಂತಿ ಸಿಗಲಿ.

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ