ವಾಹನಗಳ ವಿಚಾರಕ್ಕೆ ಬಂದಾಗ ಗಾಳಿ ಇದ್ದರೆ ಗಾಲಿ ಓಡಲು ಸಾಧ್ಯ ಅಲ್ವೆ! ಸ್ವಲ್ಪ ಗಾಳಿ ಹೆಚ್ಚಾದರೂ ವಾಹನಗಳಾಗಲಿ, ಮನುಷ್ಯನಾಗಲಿ ಇರುವುದಿಲ್ಲ. ಗಾಳಿ ಹೆಚ್ಚಾಗಿ ಸೈಕಲ್ ಬರ್ಸ್ಟ್ ಆಯಿತು. ಅದೇ ಗಾಳಿ ಇಲ್ಲದೆ ಹೋದರೆ ಅದು ಓಡುವುದೇ ಇಲ್ಲ ಪಂಚರ್ ಆಗುತ್ತದೆ. ಅಂತೆಯೇ ಮಾನವ ಉಸಿರುಗಟ್ಟಿ ಸಾಯುತ್ತಾನೆ. ಹೌದು! ಮಾನವನ ಬದುಕು ಉಸಿರು ಹೋದಾಗ ‘ಸತ್ತರು’, ‘ಅದು’, ‘ಇದು’, ‘ಶವ’ ಎಂಬುದಾಗಿ ಮಾತನಾಡುತ್ತಾರೆ. ಅದೇ ಉಸಿರು ಇದ್ದಾಗ ‘ಅವರು’, ‘ಇವರು’ ಎನ್ನುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ತೊಂದನೆಯ ಬರಹ ನಿಮ್ಮ ಓದಿಗೆ
ಹುಲಿ ನಮ್ಮ ರಾಷ್ಟ್ರ ಪ್ರಾಣಿ. ತನ್ನದೇ ಆದ ಹೆಗ್ಗುರುತಿನೊಂದಿಗೆ ಇದು ಗುರುತಿಸಿಕೊಂಡಿದೆ. ಹುಲಿ ಸಂತತಿ ಭಾರತದಲ್ಲಿ ಗಣನೀಯವಾಗಿದೆ ಎನ್ನುವಾಗಲೆ ಅವುಗಳ ಮರಣದ ಸುದ್ದಿ ವಿಷಾದವನ್ನು ತಂದಿರಿಸಿದೆ. ಈಗ್ಗೆ ಕೆಲ ವರ್ಷಗಳ ಹಿಂದೆ ಕುವೆಂಪು ಅವರ ‘ಮಲೆನಾಡಿನ ಚಿತ್ರಗಳು’ ಎಂಬ ಪುಸ್ತಕವನ್ನು ಓದಿದ್ದೆ. ಅದರಲ್ಲಿನ ‘ಬಂದನಾ ಹುಲಿರಾಯ’ ಕಥೆಯಲ್ಲಿ ಹುಲಿಯಂಥ ಹುಲಿಯನ್ನು ವ್ಯಾಘ್ರ, ಟೈಗರ್ ಎಂದು ಭಯಾನಕವಾಗಿ ಕರೆಯುವುದಿಲ್ಲ; ಸೌಮ್ಯವಾಗಿ ‘ಹುಲಿ’ ಎಂದು ಕರೆಯುತ್ತೇವೆ. ಕನ್ನಡ ಭಾಷೆ ಅಷ್ಟು ಮಧುರ ಎಂಬ ಭಾವನೆಯ ವಾಕ್ಯವಿದೆ. ಈ ಹುಲಿಗೆ ಸಮನಾರ್ಥಕಗಳಾಗಿ ಶಾರ್ದೂಲ, ಪುಂಡರೀಕ, ದ್ವೀಪಿ, ತರಕ್ಷು ಮೊದಲಾದ ಪದಗಳು ಬರುತ್ತವೆ. ಮನುಷ್ಯ ಪಳಗಿಸಿ ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಬಹುದಾದ ಪ್ರಾಣಿ ಇದು. ಎಲ್ಲರಿಗೂ ತಿಳಿದಿರುವಂಥ ಗೋವಿನ ಹಾಡು ಪದ್ಯದಲ್ಲಿನ ‘ಪುಣ್ಯಕೋಟಿ’ ಕಥೆಯನ್ನು ತೆಗೆದುಕೊಂಡರೆ ಅದರಲ್ಲಿ ‘ಪುಣ್ಯಕೋಟಿ’ ಎಂಬ ಗೋವಿನ ನಿಯತ್ತನ್ನು ಕಂಡು ಅರ್ಬುದನೆಂಬ ಅಂಥಾ ಹುಲಿಯೇ ಆತ್ಮಹತ್ಯೆಗೆ ಶರಣಾಗುತ್ತದೆ. ಅಂದರೆ ಅದಕ್ಕೂ ಮನಸ್ಸು ಪರಿವರ್ತನೆಯಾಯಿತು ಎಂದಲ್ಲವೆ? ಸೋದಾಹರಣವಾಗಿ ನೋಡುವುದಾದರೆ ಹುಲಿಯನ್ನು ಎಂದಿಗೂ ‘ಗೋಮುಖ ನರ’ ಅಥವಾ ‘ಗೋಮುಖಮನುಷ್ಯ’ ಎನ್ನುವುದಿಲ್ಲ. ಆದರೆ ಮನುಷ್ಯನನ್ನು ‘ಗೋಮುಖ ವ್ಯಾಘ್ರ’ ಎನ್ನುತ್ತಾರೆ; ಇದೂ ಒಂದು ಕಾರಣ ಮನುಷ್ಯ ಮನದಲ್ಲಿ ಕ್ಲೀಷೆಯನ್ನಿರಿಸಿಕೊಂಡಿರುತ್ತಾನೆ ಎನ್ನುವುದಕ್ಕೆ.
ಈ ಪೀಠಿಕೆಯ ಮಾತುಗಳು ಇಲ್ಲೇಕೆ? ಎಂದರೆ ನಿನ್ನೆಯ ಪತ್ರಿಕೆಯಲ್ಲಿ ‘ಸೆಗಣಿ’ ಮಾಫಿಯಾಗಾಗಿ ಹುಲಿಗಳು ತಿಂದುಳಿದ ಅವುಗಳದ್ದೆ ಬೇಟೆ ಆಹಾರದಲ್ಲಿ ವಿಷ ಬೆರೆಸಿದ ಸುದ್ದಿ ಓದಿ ವಿಷಾದ ಅನ್ನಿಸಿದೆ. ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ, ಹಣ್ಣಿನೊಳಗೆ ಇರಿಸಿದ ಶಕ್ತಿಶಾಲಿ ಪಟಾಕಿಯನ್ನು ಆನೆ ಬಾಯಲ್ಲಿ ಇಟ್ಟಿದ್ದು…. ಇವೆಲ್ಲವೂ ಅಮಾನವೀಯ ಘಟನೆಗಳು. ಮಾನವ ಎನ್ನಿಸಿಕೊಂಡು ಅಮಾನವೀಯವಾಗಿ ವರ್ತಿಸುವುದು ಮನುಷ್ಯನ ಸಹಜ ಗುಣವಾಗುತ್ತಿರುವುದೇ? ಅನ್ನಿಸುತ್ತಿದೆ. ವಿವೇಕವಿದೆ ಮಾತನಾಡಲು ಬರುತ್ತದೆಯೆಂದು ಮಾತಿಲ್ಲದ ಪ್ರಾಣಿಗಳ ಸಂಗಡ ಅವಿವೇಕದಿಂದ ನಡೆದುಕೊಳ್ಳುವುದು ಯಾವ ನ್ಯಾಯ? ಎಂದು ಮನಸ್ಸು ಭಾರವಾಗಿರುವಾಗಲೆ ಸೈಕಲ್ ಪಂಕ್ಚರ್ ಆಗಿದೆ ಎಂದು ಅಳುತ್ತಾ ಬಂದ ಮಗನನ್ನು ಸಮಾಧಾನ ಮಾಡುವುದು ದೊಡ್ಡ ಕೆಲಸವೆ ಆಗಿತ್ತು. ಹೋಗಲಿ ಪಾಪ ಎನ್ನುತ್ತಾ ತಕ್ಷಣವೇ ಸೈಕಲ್ ರಿಪೇರಿ ಅಂಗಡಿಗೆ ತೆರಳಿ ಪಂಕ್ಚರ್ ಹಾಕಿಸಿ ಬದಿಯಲ್ಲಿ ನಿಂತಿದ್ದಾಗಲೆ ಟ್ಯೂಬ್ ಸಿಡಿದಾಗ ಭಯ, ಬೇಜಾರು ಆಯಿತು. ಗಾಳಿ>ಗಾಲಿ ಈ ಎರಡೂ ಪದಗಳನ್ನು ನೋಡಿದರೆ ಳ>ಲ ಅಷ್ಟೆ ವ್ಯತ್ಯಾಸ ಅನ್ನಿಸುತ್ತದೆ.
ವಾಹನಗಳ ವಿಚಾರಕ್ಕೆ ಬಂದಾಗ ಗಾಳಿ ಇದ್ದರೆ ಗಾಲಿ ಓಡಲು ಸಾಧ್ಯ ಅಲ್ವೆ! ಸ್ವಲ್ಪ ಗಾಳಿ ಹೆಚ್ಚಾದರೂ ವಾಹನಗಳಾಗಲಿ, ಮನುಷ್ಯನಾಗಲಿ ಇರುವುದಿಲ್ಲ. ಗಾಳಿ ಹೆಚ್ಚಾಗಿ ಸೈಕಲ್ ಬರ್ಸ್ಟ್ ಆಯಿತು. ಅದೇ ಗಾಳಿ ಇಲ್ಲದೆ ಹೋದರೆ ಅದು ಓಡುವುದೇ ಇಲ್ಲ ಪಂಚರ್ ಆಗುತ್ತದೆ. ಅಂತೆಯೇ ಮಾನವ ಉಸಿರುಗಟ್ಟಿ ಸಾಯುತ್ತಾನೆ. ಹೌದು! ಮಾನವನ ಬದುಕು ಉಸಿರು ಹೋದಾಗ ‘ಸತ್ತರು’, ‘ಅದು’, ‘ಇದು’, ‘ಶವ’ ಎಂಬುದಾಗಿ ಮಾತನಾಡುತ್ತಾರೆ. ಅದೇ ಉಸಿರು ಇದ್ದಾಗ ‘ಅವರು’, ‘ಇವರು’ ಎನ್ನುತ್ತಾರೆ. ಕಣ್ಣಿಗೆ ಕಾಣದ ಗಾಳಿ ಎಷ್ಟು ಮಾತನಾಡಿಸುತ್ತದೆ ಅಲ್ಲವೆ? ಯಾರು ಹೇಳಿದರು ಎಂದು ತಿಳಿಯದ ಸುದ್ದಿಗಳನ್ನು ಗಾಳಿ ಸುದ್ದಿ ಇಲ್ಲವೆ ಗಾಳಿ ಮಾತು ಎನ್ನುವುದಿದೆ. ಹೇಗ್ಹೇಗೋ ಮಾತನಾಡುತ್ತಿದ್ದರೆ ‘ಗಾಳಿ ಬೀಸಿದೆ’ ಅರ್ಥಾತ್ ‘ದೆವ್ವ ಹಿಡಿದಿದೆ’ ಎನ್ನುವುದಿದೆ. ಗಾಳ ಎಂದರೆ ಸೆಳೆಯುವ ತಂತ್ರ. ಮೊದಲು ಮೀನಿಗೆ ಗಾಳ ಹಾಕುವುದು ನಂತರ ಮನುಷ್ಯನಿಗೆ ಗಾಳ ಹಾಕುವುದು ಎಂದಾಗಿರುವುದು ಬೇಟೆಯಾಡುವುದು, ಇಲ್ಲವೆ ಬಲೆಗೆ ಬೀಳಿಸಿಕೊಳ್ಳುವುದು ಎಂದರ್ಥವಲ್ಲವೆ? ಈ ಗಾಳ ಎಲ್ಲ ಮೀನಿಗೆ ಮನುಷ್ಯ ಮಾತ್ರ ಅನ್ನಿಸುತ್ತದೆ.

ಹೀಗೆ ಮುಂಗಾರಿನ ಅಬ್ಬರದಲ್ಲಿ ಅಲ್ಲೊಂದೆಡೆ ಮನೆಗೆ ಕಾಳಿಂಗ ಸರ್ಪ ಬಂದಿತ್ತಂತೆ. ಮೊನ್ನೆ ನಮ್ಮ ಸ್ನೇಹಿತರ ಮನೆಗೆ ಕರಿನಾಗರ ಬಂದಿತ್ತಂತೆ ಎನ್ನುವುದೆಲ್ಲಾ ಗಾಳಿ ಸುದ್ದಿ ಎಂದು ತಿಳಿದಿದ್ದೆ. ಇಲ್ಲ ನಿಜವಾಗಿಯೂ ಕರಿನಾಗರ ಬಂದಿತ್ತಂತೆ. ಅಬ್ಬಾ ಹೆಗಾಗಿರಬೇಡ ಅವರಿಗೆ. ನಾಗರಹಾವು ಕೇಳಿದ್ದೇವೆ, ಇದ್ಯಾವುದು ‘ಕರಿ ಹಾವು’ ಎನ್ನದಿರಿ… ಕಪ್ಪುಬಣ್ಣದ ನಾಗರಹಾವು ಅಷ್ಟೆ. ನಾವು ಅವುಗಳ ಜಾಗದಲ್ಲಿ ಇರುವುದಕ್ಕೆ ಅನ್ನಿಸುತ್ತೆ ಅವುಗಳ ಜಾಗವನ್ನು ಒಮ್ಮೊಮ್ಮೆ ವಿಸಿಟ್ ಮಾಡಿ ಹೋಗೋದು. ಅವುಗಳ ನೆನಕೆಯಲ್ಲಿಯೇ ನಾಗರತ್ನ, ನಾಗವೇಣೀ ಫಣಿವೇಣಿ, ನಾಗಾಂಬಿಕ, ನಾಗರಾಜ, ನಾಗೇಂದ್ರ, ಫಣೀಶ, ಶೇಷಶಯನ, ಪನ್ನಗ, ನಾಗಭೂಷಣ ಇತ್ಯಾದಿ ಇತ್ಯಾದಿ ಹೆಸರುಗಳು ಇರುವುದು ಅನಿಸುತ್ತದೆ… ಇವುಗಳಲ್ಲೆಲ್ಲಾ ಸರ್ಪವನ್ನು ಉಲ್ಲೇಖಿಸಿರುವುದೇ. ‘ನಾಗರ ಹಾವು’ ಅನ್ನುವಂಥದಕ್ಕೆ ‘ಸರ್ಪ’ ಅನ್ನುವ ಏಕೈಕ ಅನನ್ಯ ಶಬ್ದವಿದೆ. ಇದೊಂದು ಅನನ್ಯ ಜೀವಿ. ಈ ‘ಫಣಿ’ ಅಂದರೆ ಹೆಡೆಯುಳ್ಳದ್ದು ಎಂದರ್ಥ.
ಕೃಷಿಭೂಮಿಯೆಲ್ಲಾ ನಗರವಾಗಿರುವ ಈ ಹೊತ್ತಿನಲ್ಲಿ ‘ನಾಗರಹಾವನ್ನು’ ‘ನಗರಹಾವು’ ಎಂದರೂ ತಪ್ಪಿಲ್ಲ ಅಲ್ವ! ಇಲ್ಲಿ ಬೇಂದ್ರೆಯವರ ಉದಾಹರಣೆಯೊಂದು ನೆನಪಿಗೆ ಬರುತ್ತಿದೆ. ಅದೇನೆಂದರೆ ಸ್ವಾತಂತ್ರ್ಯ ಚಳವಳಿಯಲ್ಲಿ ಬೇಂದ್ರೆಯವರು ಭಾಗವಹಿಸಿದರು ಎಂಬ ಕಾರಣಕ್ಕೆ ಅವರನ್ನು ‘ಮುಗಧ’ ಎಂಬ ಗ್ರಾಮದಲ್ಲಿ ಗೃಹ ಬಂಧನದಲ್ಲಿ ಇರಿಸಿರುತ್ತಾರೆ. ಬೇಂದ್ರೆಯವರನ್ನು ನೋಡಿಕೊಂಡು ಬರಲು ಅವರ ಅಭಿಮಾನಿಗಳು ಅದೆ ಮುಗಧ ಗ್ರಾಮಕ್ಕೆ ತೆರಳುತ್ತಾರೆ. ಬೇಂದ್ರೆಯವರು ಆತ್ಮೀಯತೆಯಿಂದ ಅಭಿಮಾನಗಳನ್ನು ಬರಮಾಡಿಕೊಂಡು ಕುಡಿಯಲು ನೀರು ಕೊಡಲು ಗಡಿಗೆಯ ಬಾಯಿ ತೆರೆದರೆ ಅಲ್ಲಿ ಏನೋ ಸರಸರನೆ ಓಡಾಡಿದಂತಾಗುತ್ತದೆ. ಗಾಬರಿಯಾದವರು ಕತ್ತೆತ್ತಿ ಮೇಲೆ ನೋಡಿದರೆ ಅಲ್ಲೂ ಸರಸರ ಸದ್ದು… ಹಾಗೆ ಹಗ್ಗದ ಮಂಚದ ಕೆಳಗೆ ನೋಡಿದರೆ ಅಲ್ಲಿಯೂ ಅವುಗಳು ಹೆಡಿಬಿಚ್ಚಿ ನಿಂತಿವೆ ಸರ್ಪಗಳು. ಆತಂಕದಿಂದ ಅವರು ಬೇಂದ್ರೆಯವರಿಗೆ “ಮಾಸ್ತರ ಯಾಕ್ ಹಿಂಗ ಹೊಡೆಯೋದಲ್ಲೇನ್ರಿ” ಅಂದರೆ ಬೇಂದ್ರೆಯವರು “ಅಲ್ಲೋ ತಮ್ಮಾ ನಾವ ಅವು ಇರೂ ಜಾಗಕ್ ಬಂದೀವಿ ಅಂದಮ್ಯಾಗ ನಾವ ಹೊಂದ್ಕೋತ ಹೊಗಬೇಕ; ಅವಿಂದ ನನಿಗೇನ ತ್ರಾಸಿಲ್ಲ ಹೊಡೆಯೋದ್ಯಾಕ” ಎಂದರಂತೆ. ಎಂಥಾ ದಯಾಭಾವವಿದ್ದವರು ಅಲ್ವೇ! ‘ಕಲ್ಲನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ” ಎಂಬ ವಚನದ ಮಾತುಗಳು ಇಂದಿಗೂ ವೈಚಾರಿಕತೆಯ ಹೊಳಹಿನಿಂದ ಹೆಚ್ಚು ಹತ್ತಿರವಾಗಿವೆ.
“ಹಾವುಗಳು ಸ್ವಪ್ರದೇಶ ಪ್ರೇಮಿಗಳು ಆಗಂತುಕರನ್ನು ಶತ್ರುಗಳೆಂದೇ ಭಾವಿಸುವ ಹುಟ್ಟರಿವು ಇವುಗಳ ಸ್ವಭಾವ. ತಮ್ಮ ರಾಜ್ಯ, ತಾವು ಓಡಿಯಾಡುವ ಪ್ರದೇಶ ತಮ್ಮ ವ್ಯವಹಾರಗಳು ಇವುಗಳಲ್ಲಿ ಮತ್ತಾರಿಗೂ ಸುಳಿಯುವ ಹಕ್ಕಿಲ್ಲ ತಿಳಿದೂ ತಿಳಿದು ಇಂತ ಪಾಳೆಯದೊಳಕ್ಕೆ ಕಾಲಿಡುವುದು ಅಪಾಯಕರವಾದದ್ದೆ” ಎಂದು ಬಿಜಿಎಲ್ ಸ್ವಾಮಿಯವರು ತಮ್ಮ ‘ಹಸುರು ಹೊನ್ನು’(ಪುಟ.ಸಂ67) ಪುಸ್ತಕದಲ್ಲಿ ಹೇಳುತ್ತಾರೆ. ಎಷ್ಟು ಸತ್ಯ ಅಲ್ವ ಅವರ ಮಾತುಗಳು! ಮನುಷ್ಯ ತಾನೆಲ್ಲಿ ಇರುತ್ತಾನೋ ಅಲ್ಲಿಗೆ ಹೊಂದಿಕೊಂಡರೆ ಸಮಸ್ಯೆಗಳೇ ಬರುವುದಿಲ್ಲ. ಬದಲಾಗಿ ಪರಿಸರವನ್ನು ತನಗೆ ಬೇಕಾದ ಹಾಗೆ ಹೊಂದಿಸಿಕೊಳ್ಳಲು ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಮನುಷ್ಯ ಪ್ರಕೃತಿಯೊಂದಿಗೆ ಹೊಂದಿಕೊಳ್ಳಲಾರ. ತತ್ಫಲವಾಗಿಯೇ ಅರಣ್ಯ ನಾಶ, ಪರಿಸರ ಮಾಲಿನ್ಯ, ಅನನ್ಯ ಜೀವಸಂಕುಲಗಳ ನಾಶವಾಗಿರುವುದು. ಪಾತ್ರೆ ತುಂಬಾ ಊಟವಿದೆ ಎಂದ ಮಾತ್ರಕ್ಕೆ ಅದನ್ನು ಯದ್ವಾತದ್ವಾ ತಿಂದು ಯಾರೂ ಹಾಳು ಮಾಡುವುದಿಲ್ಲ. ಅಂತೆಯೇ ನಾವಿರುವ ಪರಿಸರ, ಪರಿಸರಸದ ಜೀವಸಂಕುಲ ಇತ್ಯಾದಿಗಳ ಬಗ್ಗೆ ಕಾಳಜಿ ಇದ್ದರೆ ನಿಜವಾದ ನಾಗರಿಕನಾಗಬಹುದು.
ಆನೆಯನ್ನು ಕರಿ, ಗಜ, ಹಸ್ತಿ, ದಂತಿ ಎಮದೂ ಕರೆಯುವುದಿದೆ. ಜೊತೆಗೆ ಆನೆಗಳನ್ನು ದ್ವಿಪಗಳು ಎನ್ನುತ್ತಾರೆ. ತಿನ್ನುವಾಗ ಸೊಂಡಿಲನ್ನು ಉಪಯೋಗಿಸುತ್ತದೆ ಎನ್ನುವ ಕಾರಣಕ್ಕೆ. ‘ಕರಿ’ಯುವುದು ಎಂದರೆ ಎಣ್ಣೆಯಲ್ಲಿ ಬೇಯಿಸು ಎಂಬ ಅರ್ಥ ಬರುತ್ತದೆ. ‘ಕರಿ’ ಎಂದರೆ ‘ಸಾಂಬಾರು’ ಎಂಬ ಪದ ಬರುತ್ತದೆ. ಆಣೆ ಎಂದರೆ ನಾಣ್ಯ ಎಂದು ಎಲ್ಲರಿಗೂ ಗೊತ್ತಿರುವಂಥದ್ದೆ. ಪ್ರಮಾಣಕ್ಕೂ ಆಣೇ ಎನ್ನುವುದಿದೆ. ‘ಕರಿ’ ಎಂದರೆ ಮೈಸೂರು ಕನ್ನಡದಲ್ಲಿ ಯಾರನ್ನಾದರು ಹತ್ತಿರಕ್ಕೆ ಬರುವಂತೆ ಮಾಡು ಎಂಬರ್ಥವೂ ಬರುತ್ತದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೇಗೌಡರ ಆನೆ ದೀರ್ಘಗದ್ಯದಲ್ಲಿ ಆನೆ ಒಂದು ಪ್ರಾಣಿ ಎನ್ನುವ ಕಾರಣಕ್ಕೆ ಮೂಡಿಗೆರೆ ಪೇಟೆಯ ಸುತ್ತು ಏನೇ ಘಟನೆಗಳು ನಡೆದರೂ ಅವೆಲ್ಲದಕ್ಕೆ ಆನೆಯೇ ಕಾರಣ ಅಂದು ದೂರುವುದು, ಅಲ್ಲಾ ವಿದ್ಯಾಮಾನಗಳ ವೈಫಲ್ಯತೆಯನ್ನು ಅದಕ್ಕೆ ಆರೋಪಿಸುವುದು ಮನುಷ್ಯನ ಹುಂಬತನವನ್ನು ತೋರಿಸುತ್ತದೆ. ಮನುಷ್ಯನ ನಡುವೆ ಶ್ರಮಜೀವಿಯಾಗಿ ಆನೆ ಕಂಡುಬರುತ್ತದೆ ಅಷ್ಟೆ. ಇದೊಂದು ವೈರುಧ್ಯವೆ ಸರಿ!
ಇವುಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಪ್ರಾಣಿ ಮತ್ತು ಮನುಷ್ಯರ ನಡುವೆ ಆಗುತ್ತಿರುವ ಸಂಘರ್ಷಗಳು ನೆನಪಾಗುತ್ತವೆ. ಮಲೆನಾಡಿನ ಬಹುತೇಕ ಕಡೆ ಆನೆ ಮತ್ತು ಮನುಷ್ಯ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಸ್ತೆಯ ಮರಗಳ ಮೇಲೆ ಇರಬೇಕಾದವು ಈಗ ವಿದ್ಯುತ್ ಕಂಬಗಳ ಮೇಲಿವೆ ಕಾಡಿನಲ್ಲಿರಬೇಕಾದವು ರಸ್ತೆ ಬದಿ ಬಲಿ ಅಡ್ಡಾಡುತ್ತಿರುತ್ತವೆ.
ಇವುಗಳಿಗೆಲ್ಲ ನಾವುಗಳೆ ನೇರ ಹೊಣೆ. ಅರಣ್ಯ ನಾಶರಿಂದ ಮಳೆ ಕಡಿಮೆಯಾಗುತ್ತದೆ ಎನ್ನಬಹುದಾದರೂ ಮಳೆ ಬಂದರೂ ಅದನ್ನು ಹಿಡಿದಿಡುವ ಕ್ಷಮತೆಯನ್ನು ನಾವೆ ಹಾಳು ಮಾಡಿದ್ದೇವೆ. ಅಂದರೆ ಆಳವಾಗಿ ಇಳಿದ ಬೇರುಗಳ ಮೂಲಕ ಭೂಮಿಯನ್ನು ಪ್ರವೇಶಿಸುತ್ತವೆ ಎಂದಾದರೆ ಅಂಥ ಮರಗಳನ್ನು ನಾವು ನಾಶ ಮಾಡಿದ್ದೇವೆ. ತತ್‌ಪರಿಣಾಮವಾಗಿ ಬಿಸಿ ತಾಪಮಾನವನ್ನು ಎದುರಿಸಬೇಕಾಗಿದೆ. ಜಲಮೂಲಗಳು ಬತ್ತಿ ಹೋಗುತ್ತಿವೆಯಾದ್ದರಿಂದ ಸಹಜವಾಗಿ ಕಾಡಿನ ಪ್ರಾಣಿಗಳು ಆಹಾರಕ್ಕಾಗಿ ನೀರಿಗಾಗಿ ನಾಡಿಗೆ ಬರುತ್ತಿವೆ.

ತಮಿಳುನಾಡಿನಿಂದ ಪ್ರಾರಂಭವಾಗುವ ಪಶ್ಚಿಮ ಘಟ್ಟ ಪ್ರದೇಶಗಳು ಮನುಷ್ಯನ ನಾಗರೀಕತೆಯ ಹಂಬಲದಿಂದ ಸವಕಾಲುಗುತ್ತಿವೆ. ಅಭಿವೃದ್ದಿ ಹಂಬಲದಿಂದ ಇರುವ ನೈಸರ್ಗಿಕ ಸಂಪತ್ತನ್ನು ನಾಶ ಮಾಡಿಕೊಂಡರೆ ಅನೇಕ ಜೀವ ವೈವಿಧ್ಯಗಳನ್ನು ಕಳೆದುಕೊಳ್ಳಬೇಕಾಗುತ್ತಿದೆ. ಮುಂದೊಮ್ಮೆ ಚಿತ್ರದಲ್ಲಿರುವ ಪ್ರಾಣಿಗಳ ಪರಿಚಯವನ್ನು ಮಾಡಿಕೊಡಬೇಕಾಗುತ್ತದೆ. ಪ್ರಾಣಿಗಳು ಪಕ್ಷಿಗಳು ನಮ್ಮ ಮೋಜಿಗಾಗಿ ಇವೆ ಎನ್ನುವ ತರ್ಕ ನಮ್ಮದಾಗಿದೆ. ಹಾಗಾಗಿ ಅವುಗಳನ್ನು ಮನಸ್ಸೋ ಇಚ್ಛೆ ಬಳಸಿಕೊಳ್ಳುವುದು ಖುಷಿಗಾಗಿ ಭೇಟೆಯಾಡುವುದು, ಮಾಂಸಕ್ಕಾಗಿ ಬೇಟೆಯಾಡುವುದು ಹಣಕ್ಕಾಗಿ ಕಳ್ಳಸಾಗಣೆ ಮಾಡುವುದು ನಡೆದೇ ಇದೆ. ನಮ್ಮ ಉಪಯೋಗಕ್ಕೆ ಪ್ರಾಣಿಗಳನ್ನು ಹೀನಾಯವಾಗಿ ಬಳಸಿಕೊಳ್ಳುವುದು ತಪ್ಪಲ್ಲವೆ? ಬಲ, ನಿಯತ್ತು, ಶಕ್ತಿ, ಸೌಂದರ್ಯ ಇವುಗಳಿಗಲ್ಲಿ ಮುಷ್ಯನಿಗಿಂತ ಅವುಗಳು ಮೇಲು ವಿವೇಕ ಮತ್ತು ಮಾತನಾಡುವ ಶಕ್ತಿ ಇರುವ ಮನುಷ್ಯ ಇವುಗಳ ಮೇಲೆ ಹಕ್ಕು ಸಾಧಿಸುವುದು ಖಂಡನೀಯ ಅಲ್ವೆ!

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.
