ಖಾಲಿ ಖಯಾಲಿಗಳು
ಸುಮ್ಮನೆ ಕುಳಿತಿದ್ದೆ,
ಮೌನ ಕೇಳಿತು
ನನ್ನನೇಕೆ ಮರೆತಿದ್ದಿಯೆಂದು?
ನಿನ್ನ ಮರೆತಿದ್ದರೆ
ಸುಮ್ಮನೇಕೆ ಕುಳಿತಿರುತ್ತಿದ್ದೆನೆಂದೆ
ಮೌನ ಮೌನವಾಗಿ ಮರೆಯಾಯಿತು.
ನಾನೀಗ ಏಕಾಂಗಿ…
ಆಕಾಶದಲ್ಲಿರುವ
ನಕ್ಷತ್ರಗಳ ಎಣಿಸಲು
ಪ್ರಯತ್ನಿಸುತ್ತಿದ್ದೆ,
ನಕ್ಷತ್ರಗಳು ಮರೆಯಾಗಿ
ಈಗ ಎಣಿಸು ನೋಡೋಣ?
ಎಂದು ಕೆಣಕಿದವು.
ನನ್ನ ತಲೆಯ ಕೂದಲುಗಳನ್ನು
ಎಣಿಸಲು ಶುರುಮಾಡಿದೆ
‘ಅಜ್ಜಿಯ ಕಾಲದ ಹುಡುಗ’ನೆಂದು
ನಕ್ಷತ್ರಗಳು ನಕ್ಕವು..
ಕವಿತೆ ಬರೆಯಲೆಂದುಕೊಂಡೆ
ಸಾಲುಗಳನು ಗೀಚಿದೆ
ಅಕ್ಷರಗಳು ಹಾಳೆಯ ಮೇಲೆ ಮೂಡಿದವು
ಮನಸ ಮೇಲೆ ಮೂಡಲಿಲ್ಲ
ಹಾಳೆ ಮಡಚಿ ಬಿಸಾಡಿದೆ.
‘ಅಕ್ಷರಗಳಿಂದ ಪದ
ಪದಗಳಿಂದ ಸಾಲುಗಳು
ಸಾಲುಗಳಿಂದ ಕವಿತೆ
ಕವಿತೆಯೊಂದು ಭಾವ
‘ಭಾವ’ ಜೀವದ ಮೂಲವೆಂದು
ರೋದಿಸಿದವು ಅಕ್ಷರಗಳು.
ಕಾಗದವ ತೆರೆದು ಸಾಲುಗಳ
ಮತ್ತೊಮ್ಮೆ ಓದಲು ಶುರುಮಾಡಿದೆ
ಅಕ್ಷರಗಳು ಉಸಿರಾಡಿದವು..
ಮಧುಶಾಲೆಯಲಿ ಕುಳಿತಿದ್ದೆ,
ಮಧುಪಾನ ಮಾಡಲೆಂದಲ್ಲ;
ಮಧುಪಾನ ಮಾಡುವವರ
ಕೆಣಕಲೆಂದು.
‘ಎಲೈ ಮಧುಪಾನಿಗಳೇ,
ಹೂವಿನಿಂದ ಹೂವಿಗೆ
ಹಾರುವ ದುಂಬಿಗಳಂತೆ,
ಬಾರಿನಿಂದ ಬಾರಿಗೆ
ಹೋಗುವ ನಿಮಗೂ ನಮಗೂ
ಇರುವ ವ್ಯತ್ಯಾಸವಾದರು ಏನು?’
ಸವಾಲನೆಸೆದೆ ಕುಹುಕದಿಂದ.
‘ನೀವು ಪರಪಂಚದೊಳಗೆ,
ಪರಪಂಚ ನಮ್ಮೊಳಗೆ’ ಎಂಬ
ಮಧು ಪಾನಿಗಳ ಜವಾಬಿಗೆ
ಸೀಸೆ, ಗಿಲಾಸುಗಳಲ್ಲಿದ್ದ ಶರಾಬು
ಆನಂದದಿಂದ ತುಳುಕಾಡಿತು…

ಬಾಗಲಕೋಟೆ ಮೂಲದ ಮಯೂರ ಬಿ ಮಸೂತಿ ಸಾಫ್ಟವೇರ್ ಇಂಜನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ವೈಜ್ಞಾನಿಕ ಕಥೆಗಳನ್ನು ಹಾಗು ಪ್ರಬಂಧ ಬರೆಯುವುದು ಇವರ ಹವ್ಯಾಸ. ಇವರ ಸಣ್ಣ ಕಥೆಗಳು, ಹಲವಾರು ಪ್ರಬಂಧಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
