Advertisement
ಮಾನವೀಯತೆಯ ಧರ್ಮವೊಂದು ಈ ಬದುಕಿಗೆ ಸಾಕಲ್ಲವೇ!

ಮಾನವೀಯತೆಯ ಧರ್ಮವೊಂದು ಈ ಬದುಕಿಗೆ ಸಾಕಲ್ಲವೇ!

ಇದನ್ನೆಲ್ಲ ನೋಡಿ ಇನ್ನೊಂದು ಧರ್ಮದ ಜನ ಅಲ್ಲಿಗೆ ಧಾವಿಸಿದರು. ಅವರೂ ಕೂಡ ಹಳ್ಳಿಯ ಜನರಿಗೆ ಕೆಲವು ಅಮಿಷವನ್ನು ನೀಡಲು ಶುರುಮಾಡಿದರು. ಮಳೆ ಬರುವಾಗ ವ್ಯವಸಾಯ ಮಾಡಿ ತಿನ್ನುತ್ತಿದ್ದ ಜನರಿಗೆ, ಉಚಿತವಾಗಿ ಮಾಂಸವನ್ನು ನೀಡಿದರು. ಸಿಹಿ ಇಷ್ಟಪಡುತ್ತಿದ್ದ ಕಾಡುಜನಾಂಗದವರಿಗೆ ಪಾಯಸ ನೀಡಿ ಒಲಿಸಿಕೊಂಡರು. ಖಾಯಿಲೆ ಬಂದವರಿಗೆ ಕೆಲವು ಔಷಧಿಗಳನ್ನು ನೀಡಿ ಚಮತ್ಕಾರ ಎನ್ನುವಂತೆ ಬಿಂಬಿಸಿದರು. ಇದೆಲ್ಲಾ ನಮ್ಮ ದೇವರಿಂದ ಮಾತ್ರ ಸಾಧ್ಯ ಎಂದು ನಿಧಾನವಾಗಿ ಅವರ ದೇವರ ಬಗ್ಗೆ ತಿಳಿಸುತ್ತಾ ಹೋದರು.
ಪ್ರಶಾಂತ್‌ ಬೀಚಿ ಅಂಕಣ

 

ಬ್ರಹ್ಮಾಂಡದಲ್ಲಿ ಭೂಮಿಯೆಂಬುದು ಒಂದು ಸಣ್ಣ ಗ್ರಹ, ಈ ಭೂಮಿಯಲ್ಲಿರುವ ಲಕ್ಷಾಂತರ ಜೀವಿಗಳಲ್ಲಿ ಮಾನವನೆಂಬ ಕ್ರಿಮಿ ಯಾವ ಲೆಕ್ಕ. ಇಂತಹ ಮಾನವರಲ್ಲಿ ಅವರವರದ್ದೆ ಆದ ಧರ್ಮಗಳು, ಜಾತಿಗಳು, ಉಪಜಾತಿಗಳು ಮತ್ತು ಅದರ ಪಂಗಡಗಳು.

ಪೂರ್ವ ಆಫ್ರಿಕಾದ ತಾಂಜಾನಿಯ ಎನ್ನುವ ಸಣ್ಣ ದೇಶದಲ್ಲಿ ಸುಮಾರು ಹನ್ನೆರಡು ವರ್ಷಗಳನ್ನು ಕಳೆದಿದ್ದೆ ಜೀವನದ ಬಹುಮುಖ್ಯ ಘಟ್ಟ. ಬದುಕಿನ ಅನೇಕ ತಿರುವುಗಳನ್ನು ಮತ್ತು ಜೀವನದ ಬಹು ಮುಖಗಳನ್ನು ನೋಡಲು ಅನುಕೂಲವಾಗಿದ್ದೆ ಅಲ್ಲಿ. ಆಫ್ರಿಕಾ ಅಂದೊಂಡನೆ ಜನರಿಗೆ ಏನೇನೋ ಕುತೂಹಲ ಅಥವ ವಿಭಿನ್ನ ಆಲೋಚನೆಗಳು ಸುಳಿದಾಡುವುದು ವಿಶೇಷವೇನಲ್ಲ. ಭೂಮಿಯ ಮೇಲಿನ ಎಲ್ಲಾ ಖಂಡಗಳಲ್ಲಿ ಆಫ್ರಿಕಾ ಖಂಡದ ವಿಶೇಷವೇ ಅಂಥದ್ದು. ಹಿಂದುಳಿದ ದೇಶಗಳ ಕೊಂಪೆಯಾಗಿದ್ದರೂ ಉಳಿದೆಲ್ಲಾ ದೇಶಗಳಿಗಿಂತ ಅನೇಕ ವಿಷಯಗಳಲ್ಲಿ ಮುಂದಿದೆ. ಕಗ್ಗತ್ತಲೆ ಖಂಡವೆನಿಸಿಕೊಂಡರೂ ಮಾನವೀಯ ಗುಣಗಳಲ್ಲಿ ವಿಶ್ವಕ್ಕೆ ಬೆಳಕು ನೀಡುತ್ತಿದೆ.

ಐವತ್ತಕ್ಕು ಹೆಚ್ಚು ದೇಶಗಳಿರುವ ಖಂಡದಲ್ಲಿ ಒಂದೊಂದು ದೇಶವೂ ತನ್ನದೇ ಮಹತ್ವವನ್ನು ಹೊಂದಿದ್ದು ಅದರದ್ದೆ ದಾರುಣ ಕತೆಯನ್ನು ಸಾರುತ್ತದೆ. ಕಾಮುಕರ ಸಮೂಹಕ್ಕೆ ವಯಸ್ಸಿನ ಕನ್ಯೆಯರು ಸಿಕ್ಕರೆ ಮುಕ್ಕುವಹಾಗೆ ವಿಶ್ವದ ಎಲ್ಲಾ ದೇಶಗಳು ಆಫ್ರಿಕಾ ಖಂಡದ ದೇಶಗಳನ್ನು ಮುಕ್ಕುತ್ತಿವೆ. ಹಣವಂತರ ಕೈಯಲ್ಲಿ ಗುಣವಂತ ಮುಗ್ಧರು ನರಳಿದಂತಾಗಿದೆ. ಧರ್ಮದ ಹೆಸರಿನಲ್ಲಿ ಅಧರ್ಮರು ಮಾನವೀಯತೆಯನ್ನು ಕಗ್ಗೊಲೆ ಮಾಡುತ್ತಿದ್ದಾರೆ.

ಆಫ್ರಿಕಾದ ಅನೇಕ ದೇಶಗಳಲ್ಲಿ ಕಾಡು ಜನಾಂಗಗಳೆ ಅವರಿಗೆ ಜಾತಿ, ಬದುಕುವುದೆ ಧರ್ಮ. ಇಪ್ಪತ್ತನೆ ಶತಮಾನದ ಮಧ್ಯದ ತನಕ ಹೊರಜಗತ್ತಿನ ಅನೇಕ ಧರ್ಮದ ಅರಿವು ಅವರಿಗಿರಲಿಲ್ಲ. ತಾಂಜಾನಿಯಾದಂತಹ ಸಣ್ಣ ದೇಶದಲ್ಲೂ ನೂರಕ್ಕೂ ಹೆಚ್ಚು ಜನಾಂಗಗಳಿದೆ. ಅವರವರ ಜನಾಂಗದ ಜನರ ಮಧ್ಯೆ ಒಂದು ಮನೆಯವರಂತೆ ಇದ್ದು, ಉಳಿದ ಜನಾಂಗದ ಜನರ ಜೊತೆ ಸಾಮರಸ್ಯ ಹೊಂದಿರುತ್ತಾರೆ. ರಾಜಕೀಯ ಸುಳಿಯದಿದ್ದರೆ ಅವರೆಲ್ಲರೂ ಒಂದೆ. ಬದುಕಿಗೆ ಏನು ಬೇಕು ಅದನ್ನು ಮಾಡಿಕೊಂಡು ಅವರ ಪಾಡಿಗೆ ಸಂತೋಷವಿರುವ ಜನರು ಅವರು. ತಮಗಿದ್ದ ಜಾಗದಲ್ಲಿ ಬೇಸಾಯ, ಜಾನುವಾರುಗಳನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಾರೆ. ನಿಸರ್ಗವೆ ದೇವರು, ನಂಬಿಕೆಯೆ ಮಾರ್ಗ, ತಿನ್ನುವುದೆ ಆಹಾರ, ಕುಡಿಯುವುದೇ ಪಾನೀಯ. ಮಳೆಯಾದಾಗ ವ್ಯವಸಾಯ ಮಾಡಿ ಸಸ್ಯಹಾರ ಸೇವನೆ, ಅದಿಲ್ಲದಾಗ ಬೇಟೆಯಾಡಿ ಮಾಂಸಹಾರ ಸೇವನೆ. ಅಗತ್ಯಕ್ಕೆ ಬೇಕಿದ್ದಷ್ಟು ಮಾತ್ರ ಶೇಖರಣೆ. ಸುಂದರ ಸುಖಮಯ ಜೀವನ ಆ ಭಾಗದ ಎಲ್ಲಾ ಜನಾಂಗದವರದ್ದು.

ಇಪ್ಪತ್ತೊಂದನೆ ಶತಮಾನದ ಶುರುವಿನಲ್ಲಿ ನಾನು ತಾಂಜಾನಿಯಾಕ್ಕೆ ಹೋಗಿದ್ದು. ಅಲ್ಲಿಯ ಅನೇಕ ಕಾಡು ಜನಾಂಗದವರ ಜೊತೆಗೆ ಒಡನಾಟ ಬೆಳೆಸಲು, ಅವರ ಬಗ್ಗೆ ತಿಳಿಯಲು ಕೆಲವು ಪರಿಚಿತ ಸಂಘ ಸಂಸ್ಥೆಗಳಿಂದ ಸಹಾಯವಾಯಿತು. ಒಂದು ಸರ್ಕಾರೇತರ ಆರೋಗ್ಯ ಸಂಸ್ಥೆಗೆ ಆಗಾಗ ವಾರಾಂತ್ಯದಲ್ಲಿ ಭೇಟಿ ಕೊಡುತ್ತಿದ್ದೆ. ಒಮ್ಮೆ ಹೋದಾಗ ಅಲ್ಲಿ ಅನೇಕ ಜನರು ಹೊಟ್ಟೆ ನೋವಿನಿಂದ ನರಳುತ್ತಿದ್ದರು, ಅವರಿಗೆಲ್ಲ ಚಿಕಿತ್ಸೆ ಕೊಡುವಲ್ಲಿ ಆ ಸಂಸ್ಥೆಯ ಜನ ನಿರತರಾಗಿದ್ದರು. ಒಂದೇ ಸಮನೆ ಅಷ್ಟೊಂದು ಜನಕ್ಕೆ ಹೊಟ್ಟೆ ನೋವು ಬರಲು ಕಾರಣವಿತ್ತು.

ಭೂಮಿಯ ಮೇಲಿನ ಎಲ್ಲಾ ಖಂಡಗಳಲ್ಲಿ ಆಫ್ರಿಕಾ ಖಂಡದ ವಿಶೇಷವೇ ಅಂಥದ್ದು. ಹಿಂದುಳಿದ ದೇಶಗಳ ಕೊಂಪೆಯಾಗಿದ್ದರೂ ಉಳಿದೆಲ್ಲಾ ದೇಶಗಳಿಗಿಂತ ಅನೇಕ ವಿಷಯಗಳಲ್ಲಿ ಮುಂದಿದೆ. ಕಗ್ಗತ್ತಲೆ ಖಂಡವೆನಿಸಿಕೊಂಡರೂ ಮಾನವೀಯ ಗುಣಗಳಲ್ಲಿ ವಿಶ್ವಕ್ಕೆ ಬೆಳಕು ನೀಡುತ್ತಿದೆ.

ಒಂದು ವರ್ಷದ ಹಿಂದೆ, ಒಂದು ಹಳ್ಳಿಗೆ ಗುಂಪೊಂದು ಬಂತು. ಬಂದವರೆ, ನೀವೆಲ್ಲಾ ನಮ್ಮ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು. ನಿಮ್ಮ ಒಳಿತನ್ನು ಬಯಸಿ ಬಂದಿದ್ದೇವೆ, ತೆಗೆದುಕೊಳ್ಳಿ ಎಂದು ಅವರಿಗೆ ಹೊದಿಯಲು ಕಂಬಳಿ ಮತ್ತು ಬಟ್ಟೆಗಳನ್ನು ಕೊಟ್ಟು ಹೋದರು. ಅದಾದ ಕೆಲವು ದಿನಗಳಲ್ಲಿ ಬಂದು ಆಹಾರ ಪದಾರ್ಥವನ್ನು ಕೊಟ್ಟರು. ಹೀಗೆ ಅನೇಕ ದಿನಗಳು ಒಂದಲ್ಲಾ ಒಂದು ವಸ್ತುಗಳನ್ನು ಪ್ರತೀ ವಾರ ಕೊಡುತ್ತಿದ್ದರು. ಹಳ್ಳಿಯವರಿಗೂ ಇವರ ಒಳ್ಳೆತನದ ಬಗ್ಗೆ ಮನ ಕರುಗಿತು. ತಿಂಗಳಾದ ಮೇಲೆ ನಿಮಗೆಲ್ಲ ಒಳಿತನ್ನು ಮಾಡಬೇಕೆಂದಿದ್ದು ನಮ್ಮ ಗುರುಗಳು, ಅವರಿಗಾಗಿ ಸಣ್ಣ ಪ್ರಾರ್ಥನೆ ಮಾಡಿ ಎಂದು ಪ್ರತೀ ವಾರ ಪ್ರಾರ್ಥನೆ ಮಾಡಿಸಿದರು. ಹಾಡು ಹೇಳಿಕೊಟ್ಟರು, ಕಥೆ ಹೇಳಿದರು, ಅವರ ಗುರುಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಿ, ನೀವು ದಿನಾ ಪ್ರಾರ್ಥನೆ ಮಾಡಿದರೆ ನಿಮಗೆ ಇನ್ನೂ ಒಳ್ಳೆಯದಾಗುತ್ತದೆ ಎಂದು ಸಾರಿದರು. ಮುಂದೆ ಸಾಗಿ ಪ್ರತೀ ವಾರ ನಾವು ಬಂದಾಗ ಪ್ರಾರ್ಥನೆ ಮಾಡಲು ಒಂದು ಪ್ರಾರ್ಥನಾ ಮಂದಿರ ಕಟ್ಟೋಣ ಎಂದು ಅದನ್ನೂ ಮಾಡಿದರು. ನಿಮ್ಮೆಲ್ಲರ ಒಳಿತಿಗಾಗಿ ನಮ್ಮಲ್ಲಿ ಯಾರಾದರೂ ಇಲ್ಲೆ ಇರುತ್ತೇವೆ ಎಂದು ಉಳಿಯಲು ಅನುಕೂಲವಾಗುವಂತೆ ಮನೆ ಕಟ್ಟಿಕೊಂಡರು. ಅವರ ಪ್ರಾರ್ಥನೆ, ಪದ್ಧತಿ, ರೀತಿ-ನೀತಿಗಳನ್ನು ಅನುಸರಿಸುವವರಿಗೆ ಒಂದು ಧರ್ಮದ ಹಣೆಪಟ್ಟಿ ಹಚ್ಚಿದರು. ಅಲ್ಲಿಗೆ ಹಳ್ಳಿಯ ಅನೇಕ ಜನ ತಮ್ಮ ಜನಾಂಗದ ಪದ್ಧತಿಯನ್ನು ತ್ಯಜಿಸಿ, ತಮ್ಮ ಜನರನ್ನು ತ್ಯಜಿಸಿ ಬೇರೆ ಪಂಗಡವನ್ನು ಮಾಡಿಕೊಂಡರು.

ಇದನ್ನೆಲ್ಲ ನೋಡಿ ಇನ್ನೊಂದು ಧರ್ಮದ ಜನ ಅಲ್ಲಿಗೆ ಧಾವಿಸಿದರು. ಅವರೂ ಕೂಡ ಹಳ್ಳಿಯ ಜನರಿಗೆ ಕೆಲವು ಅಮಿಷವನ್ನು ನೀಡಲು ಶುರುಮಾಡಿದರು. ಮಳೆ ಬರುವಾಗ ವ್ಯವಸಾಯ ಮಾಡಿ ತಿನ್ನುತ್ತಿದ್ದ ಜನರಿಗೆ, ಉಚಿತವಾಗಿ ಮಾಂಸವನ್ನು ನೀಡಿದರು. ಸಿಹಿ ಇಷ್ಟಪಡುತ್ತಿದ್ದ ಕಾಡುಜನಾಂಗದವರಿಗೆ ಪಾಯಸ ನೀಡಿ ಒಲಿಸಿಕೊಂಡರು. ಖಾಯಿಲೆ ಬಂದವರಿಗೆ ಕೆಲವು ಔಷಧಿಗಳನ್ನು ನೀಡಿ ಚಮತ್ಕಾರ ಎನ್ನುವಂತೆ ಬಿಂಬಿಸಿದರು. ಇದೆಲ್ಲಾ ನಮ್ಮ ದೇವರಿಂದ ಮಾತ್ರ ಸಾಧ್ಯ ಎಂದು ನಿಧಾನವಾಗಿ ಅವರ ದೇವರ ಬಗ್ಗೆ ತಿಳಿಸುತ್ತಾ ಹೋದರು.

ದಿನಕಳೆದಂತೆ ಅವರ ದೇವರಿಗಾಗಿ ಮತ್ತು ಅವರ ದೇವರ ಪ್ರಾರ್ಥನೆಗಾಗಿ ಮಂದಿರವನ್ನು ಕಟ್ಟಿದರು. ಹೀಗೆ ಆ ಹಳ್ಳಿಯಲ್ಲಿದ್ದ ಒಂದು ಜನಾಂಗ, ಎರಡು ಬೇರೆ ಬೇರೆ ಧರ್ಮದ ಹೆಸರಿನಲ್ಲಿ ಇಭ್ಭಾಗವಾಗಿತ್ತು. ತಮ್ಮ ಧರ್ಮದ ಪಾಲನೆಗೆ ಜಾಸ್ತಿ ಜನ ಬರಲೆಂದು ಹಳ್ಳಿಯ ಎಲ್ಲರಿಗೂ ಸಿಹಿಯನ್ನು ನೀಡಲು ಒಂದು ಧರ್ಮದವರು ಯೋಜಿಸಿದರು. ಇದು ಧರ್ಮದ ಪ್ರಚಾರ ಅಲ್ಲ, ಎಲ್ಲರೂ ಸಂತಸದಲ್ಲಿರಬೇಕೆಂದು ನೀಡುತ್ತಿದ್ದೇವೆ ಎಂದು ಎಲ್ಲರಿಗೂ ಪಾಯಸವನ್ನು ಹಂಚಿದರು. ತಮ್ಮ ಧರ್ಮದವರಿಗೆ ಪಾಯಸ ನೀಡಿದರು, ಬೇರೆ ಧರ್ಮ ಪಾಲಿಸುವವರಿಗೆ ನೀಡಿದ ಪಾಯಸದಲ್ಲಿ ಆಮಶಂಕೆ (ಬೇಧಿ) ಬರುವ ಮಾತ್ರೆ ಕಲಸಿದ್ದರು. ಮಾರನೆ ದಿನ ಅನೇಕರಿಗೆ ಹೊಟ್ಟೆ ನೋವು ಮತ್ತು ಬೇಧಿ ಶುರುವಾದಾಗ, ಅವರಿಗೆಲ್ಲಾ ಪುಡಿಯ ರೂಪದಲ್ಲಿನ ಮಾತ್ರೆಯನ್ನು ನೀಡಿ, ಇದು ನಮ್ಮ ದೇವರ ಪ್ರಸಾದ, ಸೇವಿಸಿದರೆ ಸರಿ ಹೋಗುತ್ತದೆ ಎಂದು ನೀಡಿದರು. ಅದನ್ನು ತಗೆದುಕೊಂಡ ಅನೇಕರು ಸರಿ ಹೋದರು. ಅಂಥಹವರನ್ನು ಬೇರೆ ಧರ್ಮದಿಂದ ಇವರ ಧರ್ಮಕ್ಕೆ ಸೆಳೆದುಕೊಂಡರು. ಜಾಸ್ತಿ ಪಾಯಸ ತಿಂದಿದ್ದವರಿಗೆ ಇವರು ಕೊಟ್ಟ ಮಾತ್ರೆ ಫಲಿಸದೆ ಹತ್ತಿರಲ್ಲೆ ಇದ್ದ ಆರೋಗ್ಯ ಸಂಸ್ಥೆಗೆ ಬಂದು ಸೇರಿದ್ದರು.

ನೆಮ್ಮದಿಯ ಸಂಗತಿಯೆಂದರೆ, ಅಲ್ಲಿಗೆ ಬಂದು ಸೇರಿದ್ದ ಎಲ್ಲಾ ಜನರೂ ಹುಷಾರಾಗಿ ಹಿಂತಿರುಗಿದರು. ಆದರೆ ಒಂದು ಮನೆಯಂತಿದ್ದ ಆ ಜನಾಂಗ ಎರಡು ಪಂಗಡವಾಗಿತ್ತು. ಬೇರೆ ಬೇರೆ ಧರ್ಮದವರು ಪ್ರಾರ್ಥಿಸುವ ದೇವರ, ಪಾಲಿಸುವ ಪದ್ಧತಿಯ ಅನುಯಾಯಿಗಳಾಗಿ ಅವರದೇ ಜನಾಂಗದ ಜನರ ಜೊತೆಗೆ ಮನಸ್ತಾಪಗೊಂಡು ಮಾನವತೆಯನ್ನು ಮರೆತಿದ್ದರು. ಇದುವರೆಗೂ ಬದುಕುವುದೇ ಧರ್ಮವೆಂದು ತಿಳಿದಿದ್ದ ಜನರಿಗೆ ಧರ್ಮವನ್ನೆ ಬದುಕನ್ನಾಗಿಸಿದರು.

ಒಂದು ಧರ್ಮವನ್ನು ಮುಗಿಸಿ ಇನ್ನೊಂದು ಧರ್ಮ ಬೆಳಗುವುದು ಧರ್ಮವೇ?

About The Author

ಪ್ರಶಾಂತ್‌ ಬೀಚಿ

ಪ್ರಶಾಂತ್‌ ಬೀಚಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ತಾಂಜಾನಿಯಾ (ಪೂರ್ವ ಆಫ್ರಿಕಾ), ಯೂಕೆ ಯಲ್ಲಿ ಕೆಲವು ವರುಷ ಇದ್ದು ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ‘ಲೇರಿಯೊಂಕ’ (ಅನುವಾದಿತ ಕಾದಂಬರಿ) ಮತ್ತು ‘ಕಿಲಿಮಂಜಾರೋ’ ಪ್ರಕಟಿತ ಪುಸ್ತಕಗಳು. ವಸುದೇವ ಭೂಪಾಲಂ ದತ್ತಿ, ದ ರಾ ಬೇಂದ್ರೆ ಮತ್ತು ಪರಮೇಶ್ವರ ಭಟ್ಟ್ ಪ್ರಶಸ್ತಿಗಳು ದೊರೆತಿವೆ.

1 Comment

  1. Ravishankar Bale

    ಬಹಳ ಒಳ್ಳೆಯ, ಗಾಢ, ಸೂಕ್ಷ್ಮ ಗಮನ ಮತ್ತು ಬರಹ, ಪ್ರಶಾಂತ್ ಅವ್ರೇ.
    ಸಂಘಟಿತ ಧರ್ಮಗಳ ಅಂಧ ವಿಶ್ವಾಸಗಳ ಮಟ್ಟ ಎಲ್ಲೆ ಮೀರಿ ಮೂಲ ಜನಾಂಗಗಳು ತಮ್ಮನ್ನೇ ಏಮಾರಿಸಿ ಕೊಳ್ಳುತ್ತಾರೆ. ಆಗ ಸದುದ್ಧೇಶ ಪೂರಿತ dogma ಹಾಗೂ ಬುಡಕಟ್ಟು ಸಮೂಹಗಳ ಮೇಲಿನ ಆಚಾರ, ಅತ್ಯಾಚಾರಗಳನ್ನು justify ಮಾಡುವ ಹಂತ ತಲುಪುತ್ತದೆ. ಈ ಎಲ್ಲ “ನಾಗರೀಕತೆ”ಗಳು ಈಗ ಪೂರ್ಣ ವೃತ್ತಾಕಾರ ಸಂಚರಿಸಿ ನಮ್ಮಲ್ಲಿ ಬಹುತೇಕರು, ಪುರಾತನ ಜೀವನ ಶೈಲಿಗೆ ಮರಳುವತ್ತ ಪ್ರಚೋದನೆ, ಯೋಚನೆ ಈಗ ಆರಂಭವಾಗಿದೆ ಎನಿಸುತ್ತೆ.

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ