Advertisement
ಮುಸ್ಸಂಜೆಯ ಮಧುರವಾಗಿಸುವ ಪರಿ

ಮುಸ್ಸಂಜೆಯ ಮಧುರವಾಗಿಸುವ ಪರಿ

ಅವರು ಅಪ್ಪನ ಚಡ್ಡಿ ದೋಸ್ತ್. ಅದೊಂದು ಕಾಲ್ ಇಡೀ ವಾತಾವರಣವನ್ನು ತಿಳಿಯಾಗಿಸಿತು. ಹೋದವರು ಹೋಗೇ ಬಿಟ್ಟರು. ಎಲ್ಲಿ ಹುಡುಕಿದರೂ ಸಿಗುವುದೂ ಇಲ್ಲ, ಹಿಂದಿರುಗಿ ಬರುವುದೂ ಇಲ್ಲ. ಆದರೆ ಇದ್ದವರು ಇನ್ನೂ ಇರಲೇ ಬೇಕಾದ ಅನಿವಾರ್ಯ. ತಮ್ಮ ಸಮಯ ಬರುವವರೆಗೆ… ಅದೂ ಇದ್ದಷ್ಟು ಕಾಲ ನೆಮ್ಮದಿಯಿಂದ ದಿನಗಳೆಯಬೇಕು ಎನಿಸಿ ಈ ರೀತಿ ಮಾಡಿದೆ. ಆದರೂ ಅಪ್ಪನ ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗುವಂತಿದೆ.
ಕಾವ್ಯಶ್ರೀ ಮಹಾಗಾಂವಕರ ಬರಹ ನಿಮ್ಮ ಓದಿಗೆ

ಬದುಕಿನ ಮಧ್ಯ ಭಾಗದಲ್ಲಿ ಬಂದು ನಿಂತಾಗ ಏನೇನೋ ಆಲೋಚನೆಗಳು. ಜೀವನದ ಅದೆಷ್ಟೋ ಏಳು, ಬೀಳುಗಳ ದಾಟಿ, ಸಿಹಿ ಕಹಿ ಗಳಿಗೆಗಳ ಅನುಭವಿಸಿ, ಸುಖ ದುಃಖದ ಕ್ಷಣಗಳಿಗೆ ಸ್ಪಂದಿಸಿ, ಅನೇಕ ತಿರುವುಗಳ ಹಾಯ್ದು ಮುಂದ್ಹೋಗುವಾಗ, ಈ ಜೀವ ತನ್ನಿಂದ ತಾನೇ ಗಟ್ಟಿಗೊಂಡಿತ್ತು. ಏನೇ ಬರಲಿ ನಿಭಾಯಿಸಬಲ್ಲೆ ಎನ್ನುವ ಹಂತ ತಲುಪುವವರೆಗೆ ಅರ್ಧ ಆಯಸ್ಸು ಕರಗಿತ್ತು. ಹೀಗೆ ಜವಾಬ್ದಾರಿಗಳ ನಿಭಾಯಿಸುತ್ತ, ಮುಂದೆ ಸಾಗುತ್ತಿರುವಾಗ, ಕ್ಷಣ ಕಾಲ ನಿಂತು ಹಿಂದಿರುಗಿ ನೋಡಿದೆ. ಪರಿವಾರ, ಬಂಧು, ಬಳಗ, ಸ್ನೇಹಿತರಲ್ಲಿ ಇದ್ದವರೆಷ್ಟೊ? ಹೋದವರೆಷ್ಟೊ? ಇಂಥ ಸಮಯದಲ್ಲಿ ತೀರಾ ಹತ್ತಿರವಾಗಿ ಇರುವ ಹಿರಿಯ ಜೀವವೆಂದರೆ ಅಪ್ಪ!

ಅಪ್ಪನಿಗೀಗ ಎಂಬತ್ತೆರಡು ದಾಟಿದೆ. ನೋಡಲು ಸಾಹಿತ್ಯಲೋಕದ ಹಾ.ಮಾ.ನಾಯಕರಂತೆ ಕಾಣುತ್ತಾರೆ ಎಂದು ಹೇಳುತ್ತಿದ್ದ ಕಾಲವೂ ಒಂದಿತ್ತು. ಬೀದರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ನೆನಪು… ಅದರ ಸಮ್ಮೇಳನಾಧ್ಯಕ್ಷರು ಹಾಮಾನಾ. ಆಗ ಅಪ್ಪನನ್ನು ಕಂಡು, ‘ಇದೇನು ಹಾಮಾನಾ ಇಲ್ಲಿ?’ ಎಂದು ಚೇಷ್ಟೆ ಮಾಡಿದ್ದರು. ಈಗಲೂ ಅದೇ ಬಿಳಿ ಕೂದಲಿನ ಜೊತೆ ಬಿಳಿ‌ದಾಡಿಯೂ ಸೇರಿದೆ. ಆದರೆ ಮೊದಲಿನ ದಷ್ಟಪುಷ್ಟ ಸದೃಢಕಾಯ ಈಗ ಉಳಿದಿಲ್ಲ. ದಿನೇ ದಿನೇ ತೆಳ್ಳಗಾಗಿ ದೇಹ ದಣಿದಂತೆ ತೋರುತ್ತದೆ. ಕಣ್ಣಿಗೆ ಕಾಣುವಂತೆ ದೈಹಿಕ ದಣಿವು ಇರಬಹುದು, ಆದರೆ ಮಾನಸಿಕ ಉತ್ಸಾಹಕ್ಕೇನೂ ಕುಂದಿಲ್ಲ. ಧ್ವನಿ ಬಹಳ ಗಟ್ಟಿಯಾಗಿದೆ.

‘ಸರ್ ಮೆತ್ತಗಾಗ್ಯಾರ ಖರೆ ಅವಾಜ್ ನೋಡ್ರಿ!’ ಎಂದು ಬೆರಗಾಗುವವರೂ ಇದ್ದಾರೆ.
ನಿತ್ಯ ನಡಿಗೆ, ವ್ಯಾಯಾಮ, ಮಾತುಕತೆ, ಓದುವ ಹವ್ಯಾಸ ಎಲ್ಲವೂ ನಿರಂತರ. ಇಂದಿಗೂ ಅವರದು ಮಹತ್ವಾಕಾಂಕ್ಷಿಯಾಗೇ ಇರುವ ಅಲೋಚನೆಗಳು.

‘ನಾ ನೀ ಕೂಡಿ ಮಗನ ಬಲ್ಲಿ ಹೋಗರ್ ಮಗಾ. ಏರೋಪ್ಲೇನ್‌ದಾಗ ಯಾನ್ ಯಾನ್ ತಕ್‌ಲೀಪ್ ಇರಲ್ದು. ಭಾರತದಲ್ಲೇ ತಿರುಗಾಡಿದರೆ ಪ್ರವಾಸ ಕಷ್ಟ. ಹೊರಗಿನ್ ದೇಶದ್ ಪ್ರವಾಸ ಬಿಲ್‌ಕುಲ್ ಅರಾಮ್. ನಡಿ ಮಗಾ ನಿನ್ ಜವಾಬ್ದಾರಿ ಮುಗ್ಸು, ಖಾಲಿ ಆಗು, ನಿನ್ ತಮ್ಮನ ಬಲ್ಲಿ ಅಮೆರಿಕಾಗ ಹೋಗರಿ.’

ಹೀಗೆ ಹೇಳುವ ಅಪ್ಪನ ಜೀವನೋತ್ಸಾಹ ಕಂಡು ಮನದಲ್ಲೇ ಬೆರಗಾದೆ. ಅವನನ್ನೇ ದೃಷ್ಟಿಸಿ ನೋಡಿದೆ. ಬಾಯಲ್ಲಿ ಇರಬಹುದಾದ ಕೆಲವೇ ಕೆಲವು ಹಲ್ಲುಗಳು, ಏನು ಕೊಟ್ಟರೂ ತಿನ್ನುತ್ತೇವೆ ಎನ್ನುವಂತಿವೆ.

‘ಅಪ್ಪ ಊಟಕ್ಕೆ ಕಡಕ್ ರೊಟ್ಟಿ ಅವ. ಹ್ಯಾಂಗ ಮಾಡೋದು?’

‘ಉಂತಾ ಮಗಾ. ಹಲ್ಲಿಗಿ ಬರ್ತಾವ. ಸೈ ಹತ್ತುತದ.’

ಈ ಉತ್ತರ ಕೇಳಿ ಬೆರಗಾದೆ. ಅಂದು ಕಡಕ್ ರೊಟ್ಟಿ, ನೆಕ್ಕಿಟ್ಟು, ಚಟ್ನಿ ಮೊಸರು, ಅನ್ನ, ಸಾರು, ಮಜ್ಜಿಗೆ ಎಲ್ಲವೂ ಕತ್ತರಿಸಿದ್ದೇ…
‘ಅಪ್ಪಾ ಬಾಯಲ್ಲಿ ಅಲ್ಲೊಂದು ಇಲ್ಲೊಂದು ಹಲ್ಲು ಕಾಣ್ತಾವಲ’
‘ಹೂಂ ಮಗಾ’
‘ರೊಟ್ಟಿ ಹ್ಯಾಂಗ್ ಉಂಡಿ?’

‘ಉಳ್ಳಾಕ್ ಬಂತು ಉಂಡ. ಬರಲ್ಹೋದುರ್ ಹ್ಯಾಂಗ್ ಉಳ್ಳಿ?’
ಹೀಗೆ ಅಪ್ಪನಿಗೆ ಎಲ್ಲವನ್ನೂ ಮಾಡುವ ಉಮೇದು. ತಾನು ಯಾವುದರಲ್ಲೂ ಕಡಿಮೆ ಇಲ್ಲ. ವಯಸ್ಸು ಅಡ್ಡಿ ಎಂದು ತಿಳಿಯಲೇ ಬಾರದು ಎನ್ನುವ ಹಠ ಎದ್ದು ಕಾಣುತ್ತಿತ್ತು.

ಪ್ರತಿದಿನ ಬೆಳಿಗ್ಗೆ ನಾವು ನಿದ್ದೆಗಣ್ಣಿನಲ್ಲಿ ಎದ್ದು ಬರುವಾಗ, ಅಪ್ಪ ವಿಭೂತಿ ಹಚ್ಕೊಂಡು ಕೂತಿರುತ್ತಿದ್ದ.

‘ಅಬ್ಬಾ! ಇಷ್ಟು ಬೇಗ ಸ್ನಾನ ಆಯ್ತಾ?’

‘ಇಲ್ಲ ಮಗಾ… ಮಾರಿ ತೊಳ್ಕೊಂಡಾ ಇಬತ್ತಿ ಹಚ್ಕೊಂಡ. ಈಗ್ ಚಾಯ್ ಕಾಫಿ ಏನಾರೆ ಕುಡ್ತೀರಲ? ಕುಡ್ದ ಮ್ಯಾಲ ಮೈ ತೊಳ್ಕೊತಾ, ಮತ್ತ್ ಇವತಿ ಹಚ್ಕೊಂಡ್ರಾಯ್ತು.’
‘ಆಯ್ತಪ್ಪ’
ನಕ್ಕು ಮುಂದೆ ಸಾಗುತ್ತಿದ್ದೆ.

ಬೆಳಗಿನ ಕಾಫಿಗೂ ಒಂದು ಉತ್ಸಾಹದ ತಯಾರಿ. ಮನಸಿಗೆ ಮುದ ತಂದುಕೊಂಡು, ಇಷ್ಟಪಟ್ಟು ಕುಡಿಯುವಾಗ ಬರುವ ಕಮೆಂಟ್….
‘ಮಗಾ ನೀ ಸಕ್ರಿ ಇಲ್ದೆ ಚಾಯ್, ಕಾಫಿ ಕುಡ್ಸಿ, ಛಲೊ ರಾಟಿ ಹಾಕಿದಿ. ಕಾಫಿ ಅಂದ್ರ ಸಕ್ರಿ ಇಲ್ಲದ್ದು ಅಂತ ಖಾತ್ರಿ ಆಗ್ಯಾದ. ಶುಗರ್‌ಲೆಸ್ ಆದ ಕಾಫಿ ಅಂದರೆ ಹೀಂಗೆ, ಇದೇ ಕಾಫಿ! ಸಕ್ರಿ ಹಾಕಿದ್ ಕಾಫಿ ರುಚಿ ನೆಪ್ಪೇ ಬರಲ್ಲ.’

ಅಪ್ಪನ ದೇಹ ಕೃಶವಾಗಿ ಎಲುಬು, ಚರ್ಮ ಎರಡೇ ಕಾಣುತ್ತಿದೆ. ಶರೀರವೆಲ್ಲಾ ಸುಕ್ಕುಗಟ್ಟಿ ಮುಪ್ಪು ಯಾವ ಪರಿ ಅಡರಿಕೊಂಡಿದೆ ಅಂದರೆ ಹಳೆ ಫೋಟೊ ನೋಡಿದಾಗ ದೇವಾನಂದ ತರಹ ಕಾಣುವವನು. ಆದರೆ ಈಗ! ಅಜಗಜಾಂತರ! ಇರಲಿ. ಬಟ್ಟೆಯಂತೆ ಮೈ ಚರ್ಮ ನೆರಿಗೆಗಟ್ಟಿದ್ದರೂ, ಅದರಲ್ಲಿಯ ಕಾಂತಿಯೇ ಬೇರೆ. ಅಪ್ಪನ ಗೆಳೆಯರು ಬಂದಾಗ,
‘ಸಿದ್‌ಬಟ್ಟೆ ನಿನಗ್ ವಯಸ್ಸ್ ಆದ್ರುನು ಛಲೊ ಕಾಣ್ತಿ ನೋಡು.’

ಇಷ್ಟು ಹೇಳಿದ್ದೇ ತಡ ಅಪ್ಪನ ಮುಖ ಅರಳಿ ಇಷ್ಟಗಲವಾಗುತ್ತಿತ್ತು. ಹಳೆಯ ನೆನಪುಗಳು ಮುಕ್ಕರಿಸಿದ್ದು ಅವನ ಮುಖದ ನಗುವಿನಿಂದಲೇ ತಿಳಿದು ಬಂತು. ಅವನ ಮನಸು ಹಿಂದೆ ಓಡುತ್ತಿದೆ ಎನಿಸಿ, ಏನು ಹೇಳಬಹುದೆಂದು ಕಾದು ಕುಳಿತೆ…

‘ಏ ಈರಭಧ್ರಪ್ಪ ನಮ್ಮಕ್ಕ ಭಾಗಕ್ಕ ನನಗ್ ಎಷ್ಟ ಮಾಯಾ ಮಾಡ್ತಿದುಳು. ನಮ್ ಗುಣೆಮ್ಮಕ್ಕ “ಬಾಬು ಬಾಬು” ಅಂತ ಕರ್ದು ಅನ್ನ ಆಂಭೂರ್ ಮಾಯಾದ್ಲೆ ಉಣುಸ್ತಿದ್ಲು. ಸಣ್ಣವ್ವ ತನ್ನ ಮಗನ್ಕಿಂತ ನನಗೇ ಬಗಿತಿದ್ಲು. ಇಗೊತ್ತ್ ನೋಡ್ ಯಾರೂ ಇಲ್ಲ. ಎಲ್ಲಾರು ಹೊಂಟ್ಹೋದ್ರುʼ.

ಒಂದು ಕ್ಷಣ ವಾತಾವರಣವೆಲ್ಲಾ ನೀರವ ಮೌನದಿಂದ ಆವರಿಸಿತು. ಅಪ್ಪ ಏನೋ ನೆನಪಾದಂತೆ ಥಟ್ ಅಂತ ಶುರು ಹಚ್ಕೊಂಡ…
‘ಮಾಣಿಕಪ್ಪ ಈಗ ನಾ ಇದ್ದ. ಈರಭದ್ರಪ್ಪ ಹನ, ನೀವ್ ಇದ್ದೀರಿ… ಹಿಂಗೆ ಐದಾರ ಮಂದಿ ಉಳ್ದೆವು. ಬಾಕಿ ಎಲ್ಲಾರೂ ಹೊಂಟ್ಹೋದ್ರು. ಮಾರುತಿರಾವ್ ಹೋದ್ರು… ನಮ್ ಕಾಡಾದಿ ನಮ್ಕಾ ಭಾಳ ಸಣ್ಣಾವ್ರಿ! ಅವ ಯಾಕ್ ಹೊಗಣಿತ್ತು?’

ಯಾಕೊ ಅಲ್ಲಿ ಸುಳಿದಾಡುವ ಗಾಳಿಯಲಿ ದುಃಖದ ವಾಸನೆ ಇದ್ದಂತೆ ತೋರಿತು. ಅದರ ಛಾಯೆ ಅಳಿಸಲೇ ಬೇಕಿತ್ತು. ಇನ್ನು ನಾನು ಸುಮ್ಮನಿರುವಂತಿಲ್ಲ ಎಂದುಕೊಂಡು, ಮಧ್ಯೆ ಪ್ರವೇಶಿಸಿದೆ.

‘ಅಪ್ಪ ಬೆಂಗಳೂರಿನ ಹಿರೇಮಠ ಕಾಕಾನ ಫೋನ್ ಬಂತು’
ಹಾಗೆ ಹೇಳುತ್ತ ನಾನೇ ಕಾಲ್ ಮಾಡಿ ಮಾತಾಡಿಸಿ, ನಂತರ ಅಪ್ಪನಿಗೆ ಕೊಟ್ಟೆ.

ಅವರು ಅಪ್ಪನ ಚಡ್ಡಿ ದೋಸ್ತ್. ಅದೊಂದು ಕಾಲ್ ಇಡೀ ವಾತಾವರಣವನ್ನು ತಿಳಿಯಾಗಿಸಿತು. ಹೋದವರು ಹೋಗೇ ಬಿಟ್ಟರು. ಎಲ್ಲಿ ಹುಡುಕಿದರೂ ಸಿಗುವುದೂ ಇಲ್ಲ, ಹಿಂದಿರುಗಿ ಬರುವುದೂ ಇಲ್ಲ. ಆದರೆ ಇದ್ದವರು ಇನ್ನೂ ಇರಲೇ ಬೇಕಾದ ಅನಿವಾರ್ಯ. ತಮ್ಮ ಸಮಯ ಬರುವವರೆಗೆ… ಅದೂ ಇದ್ದಷ್ಟು ಕಾಲ ನೆಮ್ಮದಿಯಿಂದ ದಿನಗಳೆಯಬೇಕು ಎನಿಸಿ ಈ ರೀತಿ ಮಾಡಿದೆ. ಆದರೂ ಅಪ್ಪನ ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗುವಂತಿದೆ.

ಮುಂಜಾನೆ ಹುಟ್ಟಿದ ಸೂರ್ಯ ಸಂಜೆ ಮುಳುಗಲೇಬೇಕು ನಿಜ. ಆದರೆ ಮುಳುಗುವ ರವಿಯ ಪ್ರಖರತೆಗೆ ಎಂದಾದರೂ ಕುಂದುಂಟು ಆಗಿದ್ದಿದ್ದೆಯೆ? ಇನ್ನೇನು ಈಗಲೊ ಆಗಲೊ ಮುಳುಗುತ್ತಾನೆ ಎಂದರೂ, ಆ ಅಡರಿದ ಕೆಂಪು ಢಾಳಾಗಿ ಹೊಳೆದು, ನೋಡುಗರ ಮನ ತಣಿಸುವ ಪರಿ ಅಪ್ಯಾಯಮಾನ. ಹೊತ್ತೇರಿ, ಸೂರ್ಯ ನೆತ್ತಿಯ ಮೇಲೆ ಬಂದು, ಇಳಿಹೊತ್ತಾಗಿ, ನಂತರ ಎಲ್ಲವೂ ಕತ್ತಲು…ಶಾಂತ… ಮನುಷ್ಯನೂ ಹಾಗೇ ಅಲ್ಲವೆ? ಈ ಬದುಕಿನಲ್ಲಿ… ಹುಟ್ಟು, ಬಾಲ್ಯ, ಯೌವನ, ವೃದ್ಧಾಪ್ಯದ ಹಂತಗಳನ್ನು ದಾಟುತ್ತ ಕ್ರಮಿಸುವ ಜೀವನ ಯಾತ್ರೆ. ಈ ಪಯಣದಲಿ ಸುಗಮವಾಗಿ ಸಾಗಲು ಉಸಿರು ನಿಮಿತ್ತ. ಇದರ ಒಳಹೊರ ಸುಳಿದಾಡುವಿಕೆ ನಿರಂತರ ಇರುವವರೆಗೂ ಜೀವ ಚೇತನ್ಯ! ನಿಂತ ಕ್ಷಣವೇ ಜೀವ ಮರದ ಕೊರಡು!

ಈ ಕಾಯ ಜೀವ ಚೈತನ್ಯವಾಗಿರುವಾಗಲೇ ಮರದ ಕೊರಡಾಗದಂತೆ ಎಚ್ಚರ ವಹಿಸಬೇಕಲ್ಲವೆ? ಅಪ್ಪನಂತೆ!

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ