ಕೋತಿಗಳನ್ನು ಹಿಡಿಯುವವರು ಒಂದು ಉಪಾಯ ಮಾಡುತ್ತಾರಂತೆ. ಚಿಕ್ಕ ಬಾಯಿಯುಳ್ಳ ಒಂದು ತಂಬಿಗೆಯಂತಹ ಪಾತ್ರೆಯೊಳಗೆ ಒಂದಿಷ್ಟು ಕಡಲೆಕಾಯಿಗಳನ್ನು ತಾವು ಹಿಡಿಯಬಯಸುವ ಕೋತಿಗೆ ಕಾಣಿಸುವ ಹಾಗೆ ಹಾಕುತ್ತಾರಂತೆ. ಕೋತಿ ಆ ಕಡಲೆಕಾಯಿಗಳನ್ನು ತಿನ್ನುವ ಆಸೆಯಿಂದ ಆ ತಂಬಿಗೆಯೊಳಕ್ಕೆ ಕೈಹಾಕುತ್ತದೆ, ತನ್ನ ಮುಷ್ಟಿಯಲ್ಲಿ ಆ ಕಡಲೆಕಾಯಿಗಳನ್ನು ಹಿಡಿದುಕೊಳ್ಳುತ್ತದೆ. ತಂಬಿಗೆಯಿಂದ ತನ್ನ ಕೈ ಹೊರತೆಗೆಯದಿದ್ದರೆ ಕೋತಿಗೆ ತಪ್ಪಿಸಿಕೊಂಡು ಓಡಿಹೋಗಲಾಗುವುದಿಲ್ಲ, ಆದರೆ ಕಡಲೆಕಾಯಿಯ ಮೇಲಿನ ಆಸೆಯು ಅವುಗಳನ್ನು ವಾಪಸ್ ತಂಬಿಗೆಗೆ ಹಾಕಲು ಕೋತಿಗೆ ಬಿಡುವುದಿಲ್ಲ! ಹೀಗಾಗಿ ಸ್ವಾತಂತ್ರ್ಯದ ಅವಕಾಶ ತನ್ನ ಕೈಯಲ್ಲೇ ಇದ್ದರೂ ಕೋತಿ ಬಂಧನಕ್ಕೆ ಒಳಗಾಗುತ್ತದೆ!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹನ್ನೆರಡನೆಯ ಬರಹ
ಚಿಕ್ಕಂದಿನಲ್ಲಿ ಒಂದು ಕಥೆ ಓದಿದ್ದೆ. ಒಬ್ಬ ದರ್ಜಿಯ ಬಳಿ ಲೋಭಿಯಾದ ಒಬ್ಬ ಗಿರಾಕಿ ಬರುತ್ತಾನೆ. ಟೋಪಿ ಹೊಲಿಯಲು ಒಂದು ಬಟ್ಟೆ ತಂದುಕೊಟ್ಟು ದರ್ಜಿಯನ್ನು “ಇದರಲ್ಲಿ ನನಗೊಂದು ಟೋಪಿ ಹೊಲಿದುಕೊಡಿ” ಅನ್ನುತ್ತಾನೆ. ದರ್ಜಿಯು ಆ ಬಟ್ಟೆಯ ಅಳತೆ, ಗಿರಾಕಿ ತಲೆಯ ಅಳತೆ ತೆಗೆದುಕೊಂಡು “ಆಗಲಿ ಹೊಲಿಯುವೆ” ಎಂದು ಹೇಳಿ, ಎಂಟು ದಿನ ಬಿಟ್ಟು, ತಯಾರಾದ ಟೋಪಿ ತೆಗೆದುಕೊಂಡು ಹೋಗುವಂತೆ ಹೇಳುತ್ತಾನೆ. ತುಂಬ ಆಸೆಬುರುಕ ಮನಸ್ಸಿದ್ದ ಆ ಗಿರಾಕಿ “ಇದರಲ್ಲಿ ಎರಡು ಟೋಪಿ ಹೊಲಿಯಕ್ಕಾಗುತ್ತಾ?” ಎಂದು ದರ್ಜಿಯನ್ನು ಕೇಳುತ್ತಾನೆ. ವಾಸ್ತವವಾಗಿ ಆ ಬಟ್ಟೆ ಒಂದು ಟೋಪಿಗಷ್ಟೇ ಅಲ್ಲಿಗಲ್ಲಿಗೆ ಸಾಕಾಗುವಂತಿರುತ್ತದೆ. ಆದರೆ ದರ್ಜಿಗೆ ಏನನ್ನಿಸಿತೋ ಗೊತ್ತಿಲ್ಲ; ತಮಾಷೆಗೋ, ಸಿಟ್ಟಿಗೋ, ಇಲ್ಲ ಗಿರಾಕಿಗೆ ತುಂಟತನದಿಂದಲೇ ಬುದ್ಧಿ ಕಲಿಸಬೇಕಂತಲೊ, “ಹಾಂ, ಹೊಲಿಯಬಹುದು” ಅನ್ನುತ್ತಾನೆ. ಗಿರಾಕಿಯ ಮುಖ ಊರಗಲ ಆಗುತ್ತೆ. ಆಸೆ ಇನ್ನೂ ಹೆಚ್ಚಾಗಿ `ಮತ್ತೆ …. ಮೂರು ಟೋಪಿ ಹೊಲಿಯಬಹುದಾ?’’ ಅನ್ನುತ್ತಾನೆ. ದರ್ಜಿ ಮನಸ್ಸಿನಲ್ಲೇ ನಕ್ಕಿರಬೇಕು! “ಯಾಕಾಗಲ್ಲ…. ಹೊಲೀಬಹುದು” ಅನ್ನುತ್ತಾನೆ. ಗಿರಾಕಿ “ನಾಲ್ಕು?” ಅನ್ನುತ್ತಾನೆ. ದರ್ಜಿ “ಖಂಡಿತ” ಅನ್ನುತ್ತಾನೆ. “ಹೋಗ್ಲಿ, ಐದು ಟೋಪಿ ಹೊಲಿದುಬಿಡ್ರಲ್ಲ” ಅನ್ನುತ್ತಾನೆ ಗಿರಾಕಿ! ದರ್ಜಿಯು “ಆಗ್ಲಿ, ಐದು ಟೋಪಿ ಹೊಲಿದಿಟ್ಟರ‍್ತೀನಿ, ಇವತ್ತಿಗೆಂಟು ದಿನ ಬಿಟ್ಟು ಬಂದು ತಗೊಂಡು ಹೋಗಿ” ಅನ್ನುತ್ತಾನೆ. `ಭಾರೀ ಲಾಭವುಂಟಾಯಿತು ತನಗೆ’ ಎಂಬ ಹುರುಪಿನಿಂದ ಹಿಗ್ಗಿ ಹೀರೆಕಾಯಿಯಾಗಿ ಗಿರಾಕಿ ಹೊರಡುತ್ತಾನೆ.
ಸರಿ, ಎಂಟು ದಿನ ಬಿಟ್ಟು ತನ್ನ `ಹೊಲಿದ ಟೋಪಿಗಳನ್ನು’ ತೆಗೆದುಕೊಂಡು ಹೋಗಲು ಗಿರಾಕಿ ದರ್ಜಿಯ ಬಳಿ ಬರುತ್ತಾನೆ. ಬಂದವನಿಗೆ ಒಂದು ಆಶ್ಚರ್ಯ ಕಾದಿರುತ್ತೆ. ದರ್ಜಿ ಐದು ಟೋಪಿಗಳನ್ನು ಹೊಲಿದಿರುತ್ತಾನೆ, ಆದರೆ ಆ ಟೋಪಿಗಳೆಲ್ಲ ಪುಟ್ಟಪುಟ್ಟ ಗೊಂಬೆಗಳಿಗೆ ಹಾಕುವಷ್ಟು ಚಿಕ್ಕದಾಗಿರುತ್ತವೆ! ದರ್ಜಿ ತನ್ನ ಐದೂ ಬೆರಳುಗಳಿಗೆ ಐದು ಟೋಪಿಗಳನ್ನು ಹಾಕಿಕೊಂಡು `ನೋಡಿ ನಿಮ್ಮ ಐದು ಟೋಪಿಗಳು, ಚೆನ್ನಾಗಿವೆಯಾ?’ ಎನ್ನುತ್ತ ತುಂಟನಗೆ ನಗುತ್ತಾನೆ! ಗಿರಾಕಿಗೆ ನಖಶಿಖಾಂತ ಕೋಪ ಬಂದು “ದರಿದ್ರದವನೇ, ನನ್ನ ಬಟ್ಟೆ ಹಾಳು ಮಾಡಿದೀಯಾ? ಐದು ಟೋಪಿ ಹೊಲೀತೀನಿ ಅಂತ ಒಪ್ಕೊಂಡು ಬೆರಳಿಗೆ ಹಾಕೋವಷ್ಟು ಚಿಕ್ಕ ಟೋಪಿ ಹೊಲ್ದಿದೀಯಾ!? ಎಷ್ಟೋ ಧೈರ್ಯ ನಿಂಗೆ! ಮಾಡ್ತೀನ್ ನೋಡು!” ಎಂದು ಏಕವಚನದಲ್ಲಿ ಮಾತಾಡುತ್ತ ಜೋರಾಗಿ ಜಗಳ ಕಾಯುತ್ತಾನೆ. ದರ್ಜಿಗೂ ಸಿಟ್ಟು ಬಂದು “ಒಂದು ಟೋಪಿಗೆ ಸಹಿತ ಸಾಲದಿರುವಷ್ಟು ಬಟ್ಟೆ ತಂದು ಐದು ಟೋಪಿ ಹೊಲಿ ಅಂತೀಯಲ್ಲ! ಬುದ್ಧಿ ಇದೆಯಾ ನಿಂಗೆ!? ನಿನ್ನ ಖಾಲಿತಲೆಗೆ ಟೋಪಿ ಬೇರೆ ಕೇಡು!” ಎಂದು ಬಯ್ದಾಡುತ್ತಾನೆ. ಹೀಗೇ ಮಾತಿಗೆ ಮಾತು ಬೆಳೆದು ಇಬ್ಬರೂ ಆ ಊರಿನ ನ್ಯಾಯಾಧೀಶರ ಬಳಿ ಹೋಗುತ್ತಾರೆ. ಅವರು ಇವರಿಬ್ಬರ ಅಹವಾಲನ್ನು ಕೇಳಿ, ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ಒಂದು ಒಳ್ಳೆಯ ತೀರ್ಪು ಕೊಡುತ್ತಾರೆ.” ಗಿರಾಕಿಯು ಒಂದೇ ಟೋಪಿಗೆ ಅಲ್ಲಿಗಲ್ಲಿಗೆ ಸರಿಯಾಗುವಷ್ಟು ಬಟ್ಟೆ ಕೊಟ್ಟು ಐದು ಟೋಪಿ ಹೊಲಿಯುವಂತೆ ಕೇಳಿದ್ದರಿಂದ ತನ್ನ ದುರಾಸೆಯ ವರ್ತನೆಗೆ ಶಿಕ್ಷೆಯಾಗಿ ತನ್ನ ಬಟ್ಟೆಯನ್ನು ಕಳೆದುಕೊಳ್ಳಬೇಕು. ದರ್ಜಿಯು ಗಿರಾಕಿಗೆ ಇರುವ ವಿಷಯವನ್ನು ಸರಿಯಾಗಿ ತಿಳಿಸದೆ ಕುಶಾಲಿಗಾಗಿ ಐದು ಚಿಕ್ಕ ಚಿಕ್ಕ ಟೋಪಿ ಹೊಲಿದಿದ್ದು, ತನ್ನ ಲಘುವರ್ತನೆಗಾಗಿ ತನ್ನ ಕೂಲಿಯನ್ನು ಕಳೆದುಕೊಳ್ಳಬೇಕು”. ಯಾರೂ ಪ್ರತ್ಯುತ್ತರ ಕೊಡಲಾಗದಷ್ಟು ನ್ಯಾಯಯುತವಾದ ಈ ತೀರ್ಮಾನಕ್ಕೆ ತಲೆಬಾಗಿದ ಇಬ್ಬರೂ ಪೆಚ್ಚುಮುಖ ಹಾಕಿಕೊಂಡು ಮನೆಗೆ ಹೋಗುತ್ತಾರೆ.
ಈ ಕಥೆ ನನಗೆ ಯಾವಾಗಲೂ ತುಂಬ ನೆನಪಾಗುತ್ತದೆ. ನಾವು ಸಮಯವೆಂಬ ದಾರದಿಂದ ಹೊಲಿಯುವ ಬದುಕನ್ನು ಹೊಲಿಯುವ ಸೃಷ್ಟಿಕರ್ತನೆಂಬ ದರ್ಜಿಯ ಜೊತೆ ಹೀಗೆಯೇ ಚೌಕಾಸಿ ಮಾಡ್ತೇವಾ? ಯಾಕೆ ಹೀಗೆ ಅನ್ನಿಸುತ್ತೆ ಅಂದರೆ, ನಮ್ಮ ಹತ್ತಿರ ಸಮಯ ಉಳಿಸುವ ಅದೆಷ್ಟು ಉಪಕರಣಗಳಿವೆ! ಉತ್ತಮ ವಾಹನಗಳು, ದೂರವಾಣಿಗಳು, ವಾಟ್ಸ್ಯಾಪು, ಮಿಂಚಂಚೆ, ಅಡಿಗೆಮನೆಯ ರುಬ್ಬುಯಂತ್ರಗಳು, ಇನ್ಸ್ಟ್ಯಾಂಟ್ ಪಾಟ್‌ಗಳು, ಬಿಸಿ ಮಾಡಿ ತಿನ್ನುವ ಸಿದ್ಧ ಆಹಾರಗಳು….. ಒಂದೇ ಎರಡೇ… ಅದೆಷ್ಟು ಸಮಯ ಉಳಿಸುವ ಯಂತ್ರಗಳು, ವಿಧಾನಗಳಿವೆ ನಮ್ಮ ಬಳಿ! ಆದರೆ ಸಮಯ ಎಲ್ಲಿದೆ!? ನಮ್ಮ ಹೊರೆಗೆಲಸವನ್ನು ಸುಲಭ ಮಾಡುವ ಯಂತ್ರಗಳನ್ನು ಹೊಂದಿರುವುದರಿಂದಾಗಿ ಸಮಯವನ್ನು ನಮಗಾಗಿ ಉಳಿಸಿಕೊಂಡ ನೆಮ್ಮದಿಯ ಮನಸ್ಥಿತಿ ಎಲ್ಲಿದೆ?
ಹಿಂದೆ ಅಡಿಗೆ, ಪ್ರಯಾಣ, ಪತ್ರ ವ್ಯವಹಾರ, ಬಟ್ಟೆ ಹೊಲಿಸುವುದು, ಒಡವೆ ಮಾಡಿಸುವುದು, ಸಮಾರಂಭದ ತಯಾರಿ….. ಇವೆಲ್ಲ ಎಷ್ಟು ಸಮಯ ತೆಗೆದುಕೊಳ್ಳುತ್ತಿದ್ದವಲ್ಲ!! ಉದಾಹರಣೆಗೆ ಒತ್ತು ಶ್ಯಾವಿಗೆ ಎಂಬ ಸಾಂಪ್ರದಾಯಿಕ ತಿಂಡಿ ಮಾಡುವುದನ್ನೇ ತೆಗೆದುಕೊಳ್ಳಿ. ಹೊಗೆ ತುಂಬಿದ ಸೌದೆ ಒಲೆಯ ಅಡಿಗೆಮನೆಯಲ್ಲಿ ಒಂದು ಕೋಣೆಯಷ್ಟು ಉದ್ದದ ಮರದ ದಿಮ್ಮಿಯನ್ನು ಬಳಸಿ 3-4 ಜನ ಸೇರಿ ಒತ್ತುಶ್ಯಾವಿಗೆ ಒತ್ತುತ್ತಿದ್ದುದನ್ನು ನಾನು ಸ್ವತಃ ನೋಡಿದ್ದೇನೆ, ನನ್ನ ಬಾಲ್ಯಕಾಲದಲ್ಲಿ. ಹಿಂದಿನ ದಿನ ಅಕ್ಕಿ ನೆನೆಹಾಕಿ, ಒರಳುಕಲ್ಲಿನಲ್ಲಿ ಹಿಟ್ಟು ರುಬ್ಬಿ, ಒಲೆಯ ಮೇಲೆ ಇಟ್ಟು ಅದನ್ನು ತೊಳಸಿ(ಉಕ್ಕರಿಸಿ) ನಂತರ ನೀರುಕೈ ಮಾಡಿಕೊಂಡು ಅದರ ಉಂಡೆಗಳನ್ನು ಮಾಡಿಕೊಂಡು ಆ ಉಂಡೆಗಳನ್ನು ಹಬೆಯ ಪಾತ್ರೆಯಲ್ಲಿಟ್ಟು ಬೇಯಿಸಿ, ನಂತರ ಶ್ಯಾವಿಗೆ ಮಣೆಯಲ್ಲಿ ಒತ್ತಿ … ರಾಮಾರಾಮಾ…. ಇಷ್ಟೆಲ್ಲ ಮಾಡಿದ ಮೇಲೆ ಅಂಟಂಟಾಗಿರುವ ಆ ಮಣೆ, ಪಾತ್ರೆಗಳನ್ನೆಲ್ಲ ತೊಳೆದು, ಇಷ್ಟು ಸಾಲದೆಂಬಂತೆ ಆ ಶ್ಯಾವಿಗೆಗಾಗಿ ಕಾಯಿಹಾಲು, ಚಟ್ನಿ, ನಿಂಬೆ ಒಗ್ಗರಣೆಗಾಗಿ ಮಾಡಬೇಕಾದ ತಯಾರಿ….. ಅಬ್ಬಬ್ಬ… ಅದಕ್ಕೆ ಹೋಲಿಸಿದರೆ ಈಗ ಕೇವಲ ಪೊಟ್ಟಣ ಕತ್ತರಿಸಿ ಬಿಸಿನೀರಿನಲ್ಲಿ ಮೂರು ನಿಮಿಷ ನೆನೆಸಿದ ತಕ್ಷಣ ತಗೋ ಬಿಸಿಬಿಸಿ ಒತ್ತು ಶ್ಯಾವಿಗೆ ನಿಮ್ಮ ಮುಂದೆ ಪ್ರತ್ಯಕ್ಷ! ಇದೇನು ಸಾಮಾನ್ಯವಾದ ಬದಲಾವಣೆಯೇ!
ಇನ್ನು ಪತ್ರದ ಮೂಲಕ ಏನಾದರೂ ಮಾಹಿತಿ, ವಿಚಾರ, ಭಾವನೆಗಳನ್ನು ಹಂಚಿಕೊಳ್ಳುವ ವಿಷಯಕ್ಕೆ ಬರೋಣ, ಮೂವತ್ತು ವರ್ಷಗಳ ಹಿಂದೆ ಹೀಗೆ ಮಾಡಬೇಕೆಂದರೆ ಕಾಗದ, ಪೆನ್ನು, ಅಂಚೆ ಲಕೋಟೆ, ಅಂಚೆ ಚೀಟಿ ಇವನ್ನೆಲ್ಲ ಜೋಡಿಸಿಕೊಂಡು ಪತ್ರ ಬರೆದು, ಲಕೋಟೆಗೆ ಹಾಕಿ ಅಂಟಿಸಿ, ಅಂಚೆ ಪೆಟ್ಟಿಗೆಗೆ ಹಾಕಿ… ಅದು ತಲುಪಲು ದಿನಗಟ್ಟಲೆ ಕಾದು, ಮತ್ತೆ ಪ್ರತ್ಯುತ್ತರಕ್ಕಾಗಿ ಕಾದು ಕಾದು… ದೇವರೇ… ಅದೇ ಒಂದು ದೀರ್ಘ ಪ್ರಕ್ರಿಯೆ ಆಗುತ್ತಿತ್ತಲ್ಲ!
ಇನ್ನು ಸಾರಿಗೆ ಸಂಪರ್ಕದ ವಿಚಾರ ತೆಗೆದುಕೊಳ್ಳೋಣ. ಕಾಲ್ನಡಿಗೆ, ಎತ್ತಿನ ಗಾಡಿ, ಕುದುರೆ ಸಾರೋಟುಗಳ ಕಾಲದಿಂದ ಬಹಳ ಮುಂದೆ ಬಂದಾಯಿತಲ್ಲ ನಾವು. ನಮ್ಮ ಬಾಲ್ಯಕಾಲದಲ್ಲೂ ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಸಾರಿಗೆ ಸಂಪರ್ಕ ಅಷ್ಟೊಂದೇನೂ ಸುಲಭವಾಗಿರಲಿಲ್ಲ. ಯಾವಾಗಲೋ ಬರುವ ಬಸ್ಸು, ರೈಲುಗಳಿಗಾಗಿ ಕಾಯುತ್ತಾ ಕೂರುವುದು, ಆಟೊರಿಕ್ಷಾ-ಟ್ಯಾಕ್ಸಿಗಳಿಗೆ ಕೊಡಲು ಹಣ ಇಲ್ಲದೆ ಕಷ್ಟ ಪಡುವುದು, ಅಂತರ್ಜಾಲದ ಮೂಲಕ ಟಿಕೆಟು ಕಾದಿರಿಸುವ ಸೌಲಭ್ಯ ಆಗ ಇರದೆ ಇದ್ದ ಕಾರಣ ಬಸ್ಸು, ರೈಲು ಕಾದಿರಿಸಲು ಗಂಟೆಗಟ್ಟಲೆ ಸರದಿ ಸಾಲಲ್ಲಿ ನಿಲ್ಲುವುದು, ಒಂದು ಸ್ಕೂಟರು, ಬೈಕು ಕೊಂಡರೆ ಅಷ್ಟೈಶ್ವರ್ಯ ಬಂದಷ್ಟು ಖುಷಿಪಡುವುದು… ಅಯ್ಯೋ…. ಹಾಗಿತ್ತಾ ಕಾಲ!? ಎಂದು ಅಚ್ಚರಿ ಪಡುವಂತಾಗುತ್ತದೆ. ಈಗ ನಗರದ ಮೆಟ್ರೋ ರೈಲುಗಳು, ಕರೆದ ಕಡೆಗೆ `ಇದೋ ಬಂದೆ’ ಎಂದು ಬರುವ ಓಲಾ, ಊಬರ್ ಆಧಾರಿತ ರಿಕ್ಷಾ – `ಕ್ಯಾಬ್’ಗಳು, ಬೈಕ್ ಟ್ಯಾಕ್ಸಿ ರ‍್ಯಾಪಿಡೋ, ಬಾಡಿಗೆಗೆ ಓಡಿಸಲು ಸಿಗುವ ಕಾರು-ಸ್ಕೂಟರುಗಳು, ವಾಹನಗಳಲ್ಲಿ ಲಭ್ಯವಿರುವ ಥರಾವರಿ ಆಯ್ಕೆಗಳು … ಇಂಗ್ಲಿಷ್‌ನಲ್ಲಿ `ಸ್ಪಾಯಿಲ್ಟ್ ಫಾರ್ ಚಾಯ್ಸ್ʼ (ಆಯ್ಕೆಗಳ ಅತಿವೃಷ್ಟಿ) ಅಂತಾರಲ್ಲ ಹಾಗೆ. ಆದರೆ ನಮಗೆ ನೆಮ್ಮದಿ ಎಲ್ಲಿದೆ?

ಪ್ರಶ್ನೆ ಎಂದರೆ ಇವೆಲ್ಲವುಗಳಿಂದ ಸಮಯ ಉಳಿಸಿದೆವಲ್ಲ, ಅದು ಹೋದದ್ದಾದರೂ ಎಲ್ಲಿಗೆ? `ಉಳಿಸಿದ’ ಸಮಯದಲ್ಲಿ ಒಂದು ಇಷ್ಟದ ಕೆಲಸ ಮಾಡುವ ಕಡೆ, ಅಥವಾ ವಿಶ್ರಾಂತಿ ತಗೊಳ್ಳುವ ಕಡೆ ಹತ್ತು ಕೆಲಸಗಳನ್ನು ಯೋಜಿಸಿಕೊಂಡೆವೇ? ವಾರಕ್ಕೆ ಹತ್ತೆಂಟು ತರಗತಿ, ತರಬೇತಿಗೆ ದಾಖಲೆ ಮಾಡಲ್ಪಟ್ಟು ಒದ್ದಾಡುವ ಮಕ್ಕಳು, ಆಸ್ಪತ್ರೆಯಿಂದ ಆಸ್ಪತ್ರೆಗೆ `ಸೂಪರ್ ಸ್ಪೆಷಾಲಿಟಿ’ ಹೆಸರಿನಲ್ಲಿ ಧಾವಿಸುವ ವೈದ್ಯರು, ಸಮಯದ ಅಳತೆ ಮೀರಿ, ತಮ್ಮ ಶಕ್ತಿ ಮೀರಿ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಒದ್ದಾಡುವ ಲೇಖಕರು, ಕಲಾವಿದರು, `ವಾರಕ್ಕೆ ತೊಂಬತ್ತು ಗಂಟೆ ಕೆಲಸ ಮಾಡಿರಿ, ಎಪ್ಪತ್ತೆರಡು ಗಂಟೆ ಕೆಲಸ ಮಾಡಿರಿ… ಹೆಂಡತಿಯ ಮುಖ ನೋಡುತ್ತ ಕುಳಿತು ಏನು ಮಾಡುತ್ತೀರಿ!’ ಎಂದು ಅಪ್ಪಣೆ ಕೊಡಿಸುವ ಉದ್ಯಮಪತಿಗಳು, ತಮ್ಮ ಒಂದು ಮಳಿಗೆ/ಶಾಲೆ ಚೆನ್ನಾಗಿ ನಡೆಯುತ್ತಿದ್ದಾಗ ಪ್ರಯಾಣಿಸಲು ಕಷ್ಟಕರವಾದಷ್ಟು ದೂರದೂರದ ಜಾಗಗಳಲ್ಲಿ ಇನ್ನೊಂದು ಮಳಿಗೆ/ಶಾಲೆ ತೆರೆದು ಒಟ್ಟಿಗೆ ಎರಡು, ಮೂರು ಸಂಸ್ಥೆಗಳನ್ನು ನಿರ್ವಹಿಸಲು ಹೆಣಗಾಡುವ ಹೋಟಲ್ ಉದ್ಯಮಿಗಳು, ವಸ್ತ್ರ ವಿನ್ಯಾಸಕರು, ಶಾಲಾ ಸಂಸ್ಥಾಪಕರು, ಒಟ್ಟಿನಲ್ಲಿ ನಮ್ಮ ಸಮಯದ ಮೇಲೆ ನಾವು ಹಾಕಿಕೊಳ್ಳುವ ಒತ್ತಡ ಅಪಾರ. ಇದರಿಂದ ಎಂತೆಂತಹ ಅಪಾಯಗಳು ಆಗುತ್ತಿವೆ ಎಂಬ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ.
****
ಕೇವಲ ಇಪ್ಪತ್ತಾರು ವಯಸ್ಸಿನ ಯುವತಿ, `ಇ ಅಂಡ್ ವೈ’ ಸಂಸ್ಥೆಯ ಉದ್ಯೋಗಿ ಕೆಲಸದ ಒತ್ತಡ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಕ್ಕಪುಟ್ಟ ವಯಸ್ಸಿನವರು ಹೃದಯಾಘಾತ ಆಗಿ ಸಾಯುತ್ತಿರುವುದು ಇವೆಲ್ಲ ಒತ್ತಡದ ಪರಮಾವಧಿ ನಮ್ಮ ಜೀವನ ಎಂಬುದನ್ನು ತೋರಿಸುತ್ತಿದೆ ಅಲ್ಲವೇ?
ದಿನಾ ನಾನು `ಗೌರಮ್ಮ’ ಎಂಬ ಹೆಸರಿನ ನನ್ನ ಸ್ಕೂಟರಿನಲ್ಲಿ ಕಾಲೇಜಿಗೆ ಹೋಗುವಾಗ ಸಂಚಾರ ನಿಲುಗಡೆಗಳಲ್ಲಿ ನನ್ನ ಸುತ್ತಮುತ್ತ ನಿಂತು ಕಾಯುವ ಯುವ ಸವಾರರು ಒಂದೇ ಸಮನೆ ತಮ್ಮ ಚಲನವಾಣಿಯಲ್ಲಿ ಕಿವಿಯಡಕಗಳ(ಇಯರ್ ಫೋನ್) ಸಹಾಯದಿಂದ ಮಾತಾಡುತ್ತಲೇ ಇರುವುದನ್ನು ಗಮನಿಸಿದ್ದೇನೆ. ಒಮ್ಮೊಮ್ಮೆ ಬಿರುಸಾಗಿ ಜಗಳ ಕೂಡ ಆಡುತ್ತಿರುತ್ತಾರೆ. ಪಾಪ, ಗಾಡಿ ಓಡಿಸುವಾಗಲೂ ನೆಮ್ಮದಿಯಾಗಿರುವುದಕ್ಕೆ ಸಾಧ್ಯವಿಲ್ಲವಲ್ಲಪ್ಪ ದೇವರೇ ಎಂದು ಮರುಗುತ್ತದೆ ಮನಸ್ಸು.
ನನ್ನ ಸಹೋದ್ಯೋಗಿನಿಯೊಬ್ಬರಿಗೆ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ ಎನ್ನುವಷ್ಟು ಶ್ರೀಮಂತಿಕೆ ಇದೆ. ಕೈಕಾಲುಗಳಿಗೆ ಸೇವೆ ಮಾಡುವ ಆಳುಕಾಳುಗಳು, ಕಾರು-ಕಾರಿನ ಚಾಲಕ, ಮನೆಯಲ್ಲಿ ಅಡಿಗೆಯವರು ಮುಂತಾದ ಎಲ್ಲ ಅನುಕೂಲಗಳೂ ಇವೆ. ಆದರೂ ಸದಾ ಒತ್ತಡದಿಂದ ಬಳಲುತ್ತಾರೆ ಆಕೆ. ಒಮ್ಮೆ ಅವರ ಚರ್ಮದ ಮೇಲೆ ಕಪ್ಪು ಕಪ್ಪು ಚುಕ್ಕೆಗಳಾಗಿದ್ದವು. ನಾನು ಕಾರಣ ಕೇಳಿದಾಗ, `ಇವು ಒತ್ತಡದಿಂದ ಆಗುತ್ತವಂತೆ’ ಅಂದರು. ಅಯ್ಯೋ ಅನ್ನಿಸಿತು.
ನಗರಗಳ ವಾಹನ ದಟ್ಟಣೆಯು ಯಾರ ಬದುಕಿನ ದೈನಂದಿನ ವಾಸ್ತವವಾಗಿರುತ್ತದೋ ಅವರ‍್ಯಾರೂ ಕೂಡ ಒತ್ತಡ ಕೊಡುವ ಸನ್ನಿವೇಶಗಳಿಂದ ಹೊರತಲ್ಲ. ಕೌಟುಂಬಿಕ, ಔದ್ಯೋಗಿಕ, ಸಾಮಾಜಿಕ ಒತ್ತಡಗಳು, ಅದರಲ್ಲೂ ಅತ್ಯಾಸಕ್ತಿಯ ಕ್ಷೇತ್ರವೊಂದರಲ್ಲಿ(ಪ್ಯಾಷನ್) ಕೆಲಸ ಮಾಡುವ ಹಂಬಲ ಇರುವ ಜನರು ನಾನಾ ಪರಿಯ ಇಕ್ಕಟ್ಟುಗಳಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತಾರೆ. ಅನೇಕ ಸಲ ಇದರಿಂದಾಗಿ ಆರೋಗ್ಯದ ಸಮಸ್ಯೆ, ಸಂಬಂಧ ನಿರ್ವಹಣೆಯಲ್ಲಿ ತೊಡಕು ಕೂಡ ಕಾಣಿಸಿಕೊಳ್ಳುತ್ತವೆ. ಚಿಕ್ಕ ವಯಸ್ಸಿನವರನ್ನು ಕಾಡುವ ಸಂತಾನಹೀನತೆ, ಅದಕ್ಕಾಗಿ ಐವಿಎಫ್ ಕೇಂದ್ರಗಳಿಗೆ ಅಲೆದಾಡುತ್ತಾ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವುದು ಇವೆಲ್ಲ ನಮ್ಮ ಬದುಕು ಎಲ್ಲಿಯೋ ಹದ ತಪ್ಪಿದೆ ಎಂಬುದಕ್ಕೆ ಸಾಕ್ಷಿಗಳು ತಾನೇ.
ಕೋತಿಗಳನ್ನು ಹಿಡಿಯುವವರು ಒಂದು ಉಪಾಯ ಮಾಡುತ್ತಾರಂತೆ. ಚಿಕ್ಕ ಬಾಯಿಯುಳ್ಳ ಒಂದು ತಂಬಿಗೆಯಂತಹ ಪಾತ್ರೆಯೊಳಗೆ ಒಂದಿಷ್ಟು ಕಡಲೆಕಾಯಿಗಳನ್ನು ತಾವು ಹಿಡಿಯಬಯಸುವ ಕೋತಿಗೆ ಕಾಣಿಸುವ ಹಾಗೆ ಹಾಕುತ್ತಾರಂತೆ. ಕೋತಿ ಆ ಕಡಲೆಕಾಯಿಗಳನ್ನು ತಿನ್ನುವ ಆಸೆಯಿಂದ ಆ ತಂಬಿಗೆಯೊಳಕ್ಕೆ ಕೈಹಾಕುತ್ತದೆ, ತನ್ನ ಮುಷ್ಟಿಯಲ್ಲಿ ಆ ಕಡಲೆಕಾಯಿಗಳನ್ನು ಹಿಡಿದುಕೊಳ್ಳುತ್ತದೆ. ತಂಬಿಗೆಯಿಂದ ತನ್ನ ಕೈ ಹೊರತೆಗೆಯದಿದ್ದರೆ ಕೋತಿಗೆ ತಪ್ಪಿಸಿಕೊಂಡು ಓಡಿಹೋಗಲಾಗುವುದಿಲ್ಲ, ಆದರೆ ಕಡಲೆಕಾಯಿಯ ಮೇಲಿನ ಆಸೆಯು ಅವುಗಳನ್ನು ವಾಪಸ್ ತಂಬಿಗೆಗೆ ಹಾಕಲು ಕೋತಿಗೆ ಬಿಡುವುದಿಲ್ಲ! ಹೀಗಾಗಿ ಸ್ವಾತಂತ್ರ್ಯದ ಅವಕಾಶ ತನ್ನ ಕೈಯಲ್ಲೇ ಇದ್ದರೂ ಕೋತಿ ಬಂಧನಕ್ಕೆ ಒಳಗಾಗುತ್ತದೆ! ವಿಚಿತ್ರವಾದರೂ ಸತ್ಯ ಇದು.
ನಾವು ಆಧುನಿಕ ಮನುಷ್ಯರು ಸಹ ಈ ಕೋತಿಗಳ ಹಾಗೆ ಆಗಿಬಿಟ್ಟಿದ್ದೇವೇನು? ಹಣ, ದೊಡ್ಡದಾದ ಸ್ವಂತಮನೆ, ವ್ಯಾಪಾರಿ ಲಾಂಛನ ಹೊತ್ತ (ಬ್ರ್ಯಾಂಡೆಡ್) ದುಬಾರಿ ಬಟ್ಟೆಗಳು, ಸುಖವಸ್ತುಗಳು, ಕೀರ್ತಿ, ಹೆಸರು, ಸ್ಥಾನಮಾನ, ಮನ್ನಣೆ, ವಿದೇಶ ಪ್ರವಾಸ, ವಿದೇಶ ವಾಸ…… ಈ ಕಡಲೆಕಾಯಿಗಳ ಆಸೆಯಿಂದ ಕೊನೆಯಿಲ್ಲದ ದುಡಿಮೆ, ಸಹಿಸಲಾಗದ ಒತ್ತಡ ಹಾಗೂ ಹೂಟ, ಮಸಲತ್ತು ತಂತ್ರ, ಕುಟಿಲ ಕೂಟೋಪಾಯಗಳೆಂಬ (ಸ್ಕೀಮಿಂಗ್) ಸೆರೆಮನೆಗೆ ನಮ್ಮನ್ನ ನಾವೇ ಹಾಕಿಕೊಂಡಿದ್ದೇವೆಯೋ, ಕೋತಿ ತಂಬಿಗೆಯಲ್ಲಿ ಕೈ ಸಿಕ್ಕಿಸಿಕೊಂಡಂತೆ? ಇದಕ್ಕಾಗಿ ನಾವು ಕೊಡುವ ಬೆಲೆ ನಮ್ಮ ಆರೋಗ್ಯ ಹಾಗೂ ನೆಮ್ಮದಿ ಅಲ್ಲವೆ? ಹಳೆಯ ಕಾಲದಲ್ಲಿ ಜಾಣಪೆದ್ದು ಎಂಬ ಪದಪ್ರಯೋಗ ಇತ್ತು. ಜಾಣಪೆದ್ದರಾದೆವೇ ನಾವು?

ಇದರಿಂದ ಹೊರಗೆ ಬಂದು ನಿಜವಾಗಿಯೂ ಜಾಣರಾಗುವ ವಿವೇಕಿಗಳಾಗುವ ದಾರಿ ಯಾವುದು? ನಾನು ಸೇರಿದಂತೆ ನಮ್ಮ ಸಹಜೀವಿಗಳು ಅಂದರೆ ನಾವೆಲ್ಲರೂ ಬಹುಶಃ ಹೇಳಲು ಮತ್ತು ಆಚರಿಸಲು ಕಲಿಯಬೇಕಾದ ಒಂದು ಪದ `ಸಾಕುʼ. ಎಷ್ಟು ಬೇಕು, ಎಷ್ಟು ಸಾಕು ಎಂಬ ಪ್ರಜ್ಞೆಯ ದೀಪವನ್ನು ನಮ್ಮೊಳಗೆ ಹತ್ತಿಸಿಕೊಳ್ಳುವುದೇ ನಮಗಿರುವ ಪರಿಹಾರ ಮಾರ್ಗ ಅನ್ನಿಸುತ್ತದೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

ಒಂದೊಳ್ಳೆಯ ಲೇಖನ. ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಅವಶ್ಯಕ. ನಮ್ಮ ಕಾಲದಲ್ಲಿ ನಾವು ಬದುಕಿದ ರೀತಿಯೇ ನಮಗೆ ತಾಳ್ಮೆ ಕಳಿಸಿತ್ತು. ಈಗ ಹಾಗಲ್ಲ ‘ಸಮಾಜದಲ್ಲಿ ಸರೀಕರೆದುರು ತಲೆ ಎತ್ತಿ ಬಾಳಬೇಕೆಂದರೆ ನಮಗೂ ಸ್ವಂತ ಮನೆ ಇರಬೇಕಲ್ಲವೇ’ ಎಂಬ ಆಸೆ! ನಂತರ ‘ಮನೆಯ ಮುಂದೆ ಕಾರಿಲ್ಲದಿದ್ದರೆ ಹೇಗೆ?!’ ಎಂಬ ದುರಾಸೆ. ಹೀಗೆ ಒಂದಕ್ಕೊಂದು ಸೇರಿಕೊಂಡು ಈ ಪರಿಸ್ಥಿತಿಗೆ ಬಂದಿದ್ದೇವೆ. ನಿರೀಕ್ಷೆ ಕಡಿಮೆ ಇದ್ದಷ್ಟು ಸಿಕ್ಕಿದ್ದರಲ್ಲಿ ಸಂತೋಷ ಪಡುತ್ತೇವೆ. ‘ಜಾಣ ಪೆದ್ದು’ ಪದ ನನಗೆ ಗೊತ್ತಿಲ್ಲ ಆದರೆ ‘ಅತಿಬುದ್ದಿವಂತರ’ಬಗ್ಗೆ ಗೊತ್ತು ಅವರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ.,