Advertisement
ರಾಗಿಮುದ್ದೆಗೆ ಬಾದಾಮಿ ಹಾಲು ಎಕ್ಸ್‌ಚೇಂಜ್‌ ಆಫರ್!: ಬಸವನಗೌಡ ಹೆಬ್ಬಳಗೆರೆ ಸರಣಿ

ರಾಗಿಮುದ್ದೆಗೆ ಬಾದಾಮಿ ಹಾಲು ಎಕ್ಸ್‌ಚೇಂಜ್‌ ಆಫರ್!: ಬಸವನಗೌಡ ಹೆಬ್ಬಳಗೆರೆ ಸರಣಿ

ಇವರು ಎಂಟರಿಂದ ಪಿಯೂಸಿ, ಡೈರಿ ಡಿಪ್ಲೊಮೋ ಹುಡುಗರ ವಾರ್ಡನ್ ಆಗಿದ್ದರು. ಇವರು ವಾಲಿಬಾಲನ್ನು ಕಿರುಬೆರಳಲ್ಲಿ ತಿರುಗಿಸುತ್ತಿದ್ದರು. ಕಳ್ಳತನ ಮಾಡಿದ ಕಳ್ಳರನ್ನು ಕಂಡುಹಿಡಿಯೋದ್ರಲ್ಲಿ ಇವರು ಎಕ್ಸ್ ಪರ್ಟ್. ಹಾಸ್ಟೆಲ್ಲಿನಲ್ಲಿ ಯಾರೇ ಕಳ್ಳತನ ಮಾಡಲಿ ಪರ್ಫೆಕ್ಟ್ ಆಗಿ ಇವರೇ ಅಂತಾ ಕಂಡುಹಿಡಿಯುತ್ತಿದ್ದರು. ಒಂದೊಮ್ಮೆ ಕಳ್ಳತನ ಮಾಡಿ ಅವರ ಕೈಗೆ ಸಿಕ್ಕಿ ಬಿದ್ರೆ ಮುಗೀತು ಚಟ್ನಿ ಅರೆದಂತೆ ರುಬ್ಬಿಬಿಡ್ತಾ ಇದ್ರು! ಒಂದು ರೂಮಲ್ಲಿ ಕೂಡಿ ಹಾಕಿಕೊಂಡು ಹೊಡಿತಾ ಇದ್ರೆ ಆ ಶಬ್ದ ನಮ್ಮನ್ನು ಸ್ಥಂಭೀಭೂತರನ್ನಾಗಿಸುತ್ತಿತ್ತು. ಮತ್ತೆ ಜೀವನದಲ್ಲಿ ಇನ್ನೆಂದೂ ಕಳ್ಳತನ ಮಾಡಿರಬಾರದು ಆ ರೀತಿಯಾಗಿ ಶಿಕ್ಷೆ ಕೊಡ್ತಾ ಇದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿನಾರನೆಯ ಕಂತು ನಿಮ್ಮ ಓದಿಗೆ

ಚಿಕ್ಕವನಿದ್ದಾಗ ರಾಗಿ ಮುದ್ದೆ ಉಣ್ಣೋಕೆ ನಾನೆಷ್ಟು ವಿರೋಧ ಮಾಡ್ತಿದ್ನೋ ನನ್ನ ಹಣೆಬರಹಕ್ಕೆ ಹೈಸ್ಕೂಲ್‌ನಿಂದ ನನ್ನ ಓದು ಮುಗಿಯೋವರೆಗೂ ಹಾಸ್ಟೆಲ್‌ನಲ್ಲಿ ಮುದ್ದೆ ತಿನ್ನೋ ಪರಿಸ್ಥಿತಿ ಬಂತು. ಆಗ ಮಲ್ಲಾಡಿಹಳ್ಳೀಲಿ ಕರ್ನಾಟಕದ ಎಲ್ಲಾ ಭಾಗಗಳಿಂದ ಹುಡುಗ, ಹುಡುಗಿಯರು ಸೇರುತ್ತಾ ಇದ್ದರು. ಮುದ್ದೆಯನ್ನೇ ನೋಡಿರದ, ತಿನ್ನದ ಕೆಲ ಮಕ್ಕಳೂ ಸೇರಿದ್ದರು! ಅವರು ಮುದ್ದೆ ತಿನ್ನೋದನ್ನ ನೋಡಿದ್ರೆ ನಗು ಬರ್ತಾ ಇತ್ತು. ಅದನ್ನು ಕಿತ್ತು ಸಣ್ಣ ಗುಕ್ಕು ಮಾಡಿಕೊಂಡು ಸಾಂಬಾರ್‌ನಲ್ಲಿ ಉರುಳಿಸಿ, ಜಗಿಯದೇ ಹಾಗೇ ನುಂಗುವ ಬದಲು ಅದನ್ನು ಜಗಿದು ಅನ್ನ ತಿಂದ ಹಾಗೆ ತಿನ್ನೋಕೆ ಹೋಗ್ತಾ ಇದ್ರು! ಅದು ಹೇಗೆ ರುಚಿ ಬರುತ್ತೆ ಹೇಳಿ ಹೀಗೆ ಜಗಿದರೆ? ಅವರು ಮೊದ ಮೊದಲು ಮುದ್ದೆ ಅಂದರೆ ‘ವ್ಯಾಹ್’ ಅನ್ತಿದ್ರು. ಬರು ಬರುತ್ತಾ ನಾವು ತಿನ್ನೋ ವಿಧಾನ ಕಲಿತು ಅದರ ರುಚಿಗೆ ಮಾರು ಹೋಗಿ ಮುದ್ದೆ ಅಂದ್ರೆ ‘ವ್ಹಾವ್’ ಅನ್ನೋಕೆ ಶುರು ಮಾಡಿದ್ರು. ನಮ್ಮ ಹಾಸ್ಟೆಲ್‌ನಲ್ಲಿ ಮುದ್ದೆಯನ್ನು ಎಷ್ಟು ಬೇಕಾದ್ರೂ ತಿನ್ನಬಹುದಾದ್ದರಿಂದ ಅವರಲ್ಲಿ ಕೆಲವರು ಎರಡರಿಂದ ಮೂರು ಮುದ್ದೆ ತಿನ್ನೋಕೆ ಶುರು ಮಾಡಿದ್ರು! ಮನೇಲಿ ಮನೆಯವರಿಗೆ ಬೇಕಾದಷ್ಟು ಮುದ್ದೆ ಮಾಡೋಕೆ ಈಗಿನ ಕೆಲವರಿಗೆ ಕಷ್ಟ, ಅಂಥಾದ್ರಲ್ಲಿ ಹಾಸ್ಟೆಲ್‌ನಲ್ಲಿದ್ದ ಎಲ್ಲರಿಗೂ, ಆಶ್ರಮದಲ್ಲಿ ಕೆಲಸ ಮಾಡ್ತಿದ್ದವರಿಗೂ ಮುದ್ದೆ ಒಟ್ಟಾರೆಯಾಗಿ ಒಂದು ಹೊತ್ತಿಗೆ ಐದುನೂರರಿಂದ ಆರುಮೂರು ಮುದ್ದೆಗಳನ್ನು ಹೇಗೆ ಮಾಡ್ತಿದ್ರು? ಅನ್ನೋದನ್ನು ನೆನಪಿಸಿಕೊಂಡು ಆ ಅಡುಗೆ ಭಟ್ಟರಿಗೆ ಒಂದು ಸೆಲ್ಯೂಟ್ ಹೇಳಬೇಕೆನಿಸುತ್ತೆ.

ನಮ್ಮ ಮನೆಯಲ್ಲಾದರೆ ಮುದ್ದೆ ತೆಳುವಾಗಿದ್ದರೆ ಹಾಸ್ಟೆಲ್ಲಿನಲ್ಲಿ ‘ಕಾರ್ಕ್ ಬಾಲ್’ ಇದ್ದಂಗೆ ಇರ್ತಿದ್ವು. ಅದರಲ್ಲಿ ಕೆಲವೊಮ್ಮೆ ಗಂಟುಗಳು ಸಿಗುತ್ತಿದ್ದವು. (ಗಂಟು ಎಂದರೆ ಹಿಟ್ಟು ಬೇಯದೇ ಹಾಗೆ ಇರುವ ಮುದ್ದೆಯ ಅಂಶ) ಮುದ್ದೆ ರುಚಿ ಸಿಗಬೇಕಾದ್ರೆ ಸಾಂಬಾರ್ ರುಚಿ ಚೆನ್ನಾಗಿರಬೇಕು. ಆದರೆ ಹಾಸ್ಟೆಲ್‌ನಲ್ಲಿ‌ ಸಾಂಬಾರ್ ರುಚಿ ಸಾಮಾನ್ಯವಾಗಿರುತ್ತಿದ್ದರಿಂದ ಮುದ್ದೆ ರುಚಿ ಎನಿಸ್ತಾ ಇರಲಿಲ್ಲ. ನಮ್ಮ ಹಾಸ್ಟೆಲ್ಲಿನಲ್ಲಿ ಊಟಕ್ಕೆ ಹೋಗುವಾಗ ತಟ್ಟೆ ಲೋಟದ ಜೊತೆಗೆ ‘ಭಗವದ್ಗೀತೆ ಪುಸ್ತಕ’ ವನ್ನು ಒಯ್ಯಬೇಕಾಗಿತ್ತು. ಎಲ್ಲಾ ಮಕ್ಕಳಿಗೂ ಬಡಿಸುವ ತನಕ ನಾವು ಊಟ ಮಾಡುವಂತಿರಲಿಲ್ಲ. ಆ ಸಮಯದಲ್ಲಿ ಭಗವದ್ಗೀತೆ ಹೇಳಬೇಕಾಗಿತ್ತು. ಧರ್ಮಕ್ಷೇತ್ರೇ ಕುರುಕ್ಷೇತ್ರೇ …… ಎಂದು ಹೇಳೋಕೆ ಶುರು ಮಾಡಿದ್ರೆ ಹತ್ತರಿಂದ ಹದಿನೈದು ಶ್ಲೋಕದ ತನಕವೂ ನಮ್ಮ ಪಠಣ ಮುಂದುವರೆಯುತ್ತಿತ್ತು. ಭಗವದ್ಗೀತೆ ಪುಸ್ತಕ ತೆಗೆದುಕೊಂಡು ಹೋಗದೇ ಇದ್ರೆ ಅಂದು ನಮಗೆ ಊಟ ತಕ್ಷಣ ಕೊಡ್ತಾ ಇರಲಿಲ್ಲ. ಒಂದೆರಡು ಏಟು ಕೊಟ್ಟು ನಂತರ ಊಟ ಕೊಡುತ್ತಿದ್ದರು. ಇದರಿಂದ ನಾವು ಅಪ್ಪಿತಪ್ಪಿಯೂ ಊಟಕ್ಕೆ ಭಗವದ್ಗೀತೆ ಪುಸ್ತಕ ಒಯ್ಯೋದನ್ನು ಮರೆಯುತ್ತಾ ಇರಲಿಲ್ಲ. ಒಂದು ದಿನ‌ ಊಟ ಬಡಿಸುವಾಗ ಕರೆಂಟ್ ಹೋಯ್ತು. ಆಶ್ರಮ ಹಳ್ಳಿಯಲ್ಲಿದ್ದುದ್ದರಿಂದ ಇದು ಮಾಮೂಲಿಯಾಗಿತ್ತು. ತಕ್ಷಣ ಜನರೇಟರ್ ಆನ್ ಮಾಡ್ತಾ ಇದ್ದುದರಿಂದ ಕರೆಂಟ್ ಸಮಸ್ಯೆ ಅಷ್ಟು ತೊಂದರೆ ಅನಿಸ್ತಾ ಇರಲಿಲ್ಲ. ಆದರೆ ಆ ದಿನ‌ ಮಾತ್ರ ಜನರೇಟರ್ ಆನ್ ಮಾಡೋದು ತುಸು ತಡ ಆಯ್ತು. ಆಗ ಸೀನಿಯರ್ ಹುಡುಗರು ಏನು ಮಾಡಿದ್ರು ಅಂದ್ರೆ ಮುದ್ದೆಯನ್ನು ಕಿತ್ತು ಕಿತ್ತು ಗೋಲಿಯಂತೆ ಮಾಡಿ ಎಸೆಯೋಕೆ ಶುರು ಮಾಡಿದ್ರು. ಮೊದಲಿಗೆ ಸ್ವಲ್ಪ ಎನಿಸಿದರೂ ಸ್ವಲ್ಪ ಹೊತ್ತಾದ ಮೇಲೆ ಇದು ಹೆಚ್ಚಾಯ್ತು. ಬಹುಶಃ ಇದರ ಏಟು ಹಾಸ್ಟೆಲ್ ವಾರ್ಡನ್ ಬಿದ್ದಿತ್ತಾದ್ದರಿಂದ ಕರೆಂಟ್ ಬಂದ ಮೇಲೆ ಎಲ್ಲಾ ಹುಡುಗರಿಗೂ ವಾರ್ಡೆನ್ ಹೊಡೆತ ಕೊಟ್ಟರು. ಆಗ ಕೊಡುತ್ತಿದ್ದ ಹೊಡೆತಗಳು ಸಾಮಾನ್ಯವಾಗಿರಲಿಲ್ಲ. ಸಿಕ್ಕಾಪಟ್ಟೆ ನೋವನ್ನುಂಟು ಮಾಡುತ್ತಿದ್ದವು.

ಮೆಸ್ಸಿಗೆ ಸೇರಿದ ಹುಡುಗರಿಗೆ ಮುದ್ದೆ ತಿನ್ನೋ ಆಸೆ. ಹಾಸ್ಟೆಲ್ಲಿಗೆ ಸೇರಿದ ನಮಗೆ ಬಾದಾಮಿ ಹಾಲು ಕುಡಿಯೋ ಆಸೆ. ಮೆಸ್ಸಿನಲ್ಲಿ ಊಟ ಮಾಡ್ತಿದ್ದವರಿಗೆ ಬೆಳಗ್ಗೆ ತಿಂಡಿ ಆದ ಮೇಲೆ ಬಾದಾಮಿ ಹಾಲು ಕೊಡ್ತಾ ಇದ್ರು. ಆಗ ನಾವು ಒಂದು ಒಪ್ಪಂದಕ್ಕೆ ಬಂದ್ವಿ. ಅದೇನಪ್ಪ ಅಂದ್ರೆ ಒಂದು ಲೋಟದಲ್ಲಿ‌ ನಾವು ಮುದ್ದೆಯನ್ನು‌ ತಂದು ಕೊಡಬೇಕಾಗಿತ್ತು. ಅದಕ್ಕೆ ತಕ್ಕಂತೆ ಆ ರೀತಿ ಮುದ್ದೆ ತರಿಸಿಕೊಂಡವರು ಹಾಲು ತಂದುಕೊಡ್ತಾ ಇದ್ರು. ಆದರೆ ಮುದ್ದೆ ಲೋಟದಲ್ಲಿ ತಂದು‌ಕೊಡೋದು ಆಗ ಅಷ್ಟು ಸುಲಭ ಇರಲಿಲ್ಲ. ಡೈನಿಂಗ್ ಹಾಲಲ್ಲಿ ನಿಲ್ತಿದ್ದ ಶಿವಕುಮಾರ್ ವಾರ್ಡನ್ ಕಣ್ತಪ್ಪಿಸಿ ತರೋದು ಕಷ್ಟ ಆಗ್ತಿತ್ತು. ಟವೆಲ್ಲಿನ ಒಳಭಾಗದಲ್ಲಿ‌ ಈಗಿನವರು ಎಣ್ಣೆ ಬಾಟಲೀನ‌ ಮುಚ್ಕೊಂಡು ಹೋದಂಗೆ ನಾವೂ ಮುದ್ದೇನ ಲೋಟದಲ್ಲಿ ಅದುಮಿಕೊಂಡು ಅದರ ಮೇಲೆ ಸಾಂಬಾರ್ ಹಾಕಿಕೊಂಡು ಹಾಗೆ ಮುಚ್ಚಿಟ್ಕೊಂಡು ತರ್ತಾ ಇದ್ವಿ. ಸಿಕ್ಕಿಬಿದ್ರೆ ಹೊಡೆತಾ ಬೀಳ್ತಾ ಇದ್ವು. ಆದ್ರೂ ನಾನು ಮೊಂಡ ಧೈರ್ಯ ಮಾಡಿ ಅಶೋಕ ಮೇಟಿ ಅನ್ನೋ ರಾಯಚೂರಿನಿಂದ ಬಂದಿದ್ದ ನನ್ನ‌ ಗೆಳೆಯನೊಬ್ಬನಿಗೆ ಮುದ್ದೆ ತಂದುಕೊಟ್ಟು ಬಾದಾಮಿ ಹಾಲಿನ ರುಚಿ ಸವಿದಿದ್ದೆ. ಮತ್ತೊಮ್ಮೆ ಇದೇ ರೀತಿ ಮಾಡಲು ಹೋಗಿ ಸಿಕ್ಕಿಬಿದ್ದು ವಾರ್ಡನ್ ಹತ್ರ ಬಯ್ಯಿಸಿಕೊಂಡಿದ್ದೆ. ಚೆನ್ನಾಗಿ ಓದುತ್ತಾ ಇದ್ದ ಕಾರಣಕ್ಕೋ ಏನೋ ಗೊತ್ತಿಲ್ಲ ಅವರು ಹೊಡೆಯಲಿಲ್ಲ ಬದಲಾಗಿ ಅಶೋಕ ಮೇಟಿಗೆ ಹಾಸ್ಟೆಲ್ಲಿನಲ್ಲಿ ಒಂದು ಸಲ‌ ಊಟ ಮಾಡೋಕೆ ಅನುಮತಿ ಕೊಟ್ರು!

ನಮ್ಮ ಹಾಸ್ಟೆಲ್ ವಾರ್ಡನ್ ಆಗಿ ಡಿಸಿ (ಡಿ.ಚಂದ್ರಪ್ಪ) ಇದ್ದರು. ಶಿವಕುಮಾರ್ ಹಾಗೂ ಮಲ್ಲಪ್ಪ ವಾರ್ಡನ್ ಇದ್ದರು. ಡಿಸಿ ಯವರನ್ನು ಕಂಡರೆ ಹಾಸ್ಟೆಲ್ಲಿನ‌ ಹುಡುಗರು ನಡುಗುತ್ತಿದ್ದರು. ಡಿಸಿ ವಾರ್ಡನ್ ಸರ್ ಇವರು “ಮಿಲಿಟರಿಯಿಂದ ಬಂದವರಂತೆ, ಕಾಲಿಗೆ ಗುಂಡು ತಗುಲಿ‌ ಅಲ್ಲಿಂದ ಬಿಟ್ಟು ಬಂದರಂತೆ” ಎಂಬ ಮಾತುಗಳನ್ನು ನಾವು ಸೀನಿಯರ್ ಹುಡುಗರಿಂದ ಕೇಳಿದ್ದೆವು. ಇವರು ಎಂಟರಿಂದ ಪಿಯೂಸಿ, ಡೈರಿ ಡಿಪ್ಲೊಮೋ ಹುಡುಗರ ವಾರ್ಡನ್ ಆಗಿದ್ದರು. ಇವರು ವಾಲಿಬಾಲನ್ನು ಕಿರುಬೆರಳಲ್ಲಿ ತಿರುಗಿಸುತ್ತಿದ್ದರು. ಕಳ್ಳತನ ಮಾಡಿದ ಕಳ್ಳರನ್ನು ಕಂಡುಹಿಡಿಯೋದ್ರಲ್ಲಿ ಇವರು ಎಕ್ಸ್ ಪರ್ಟ್. ಹಾಸ್ಟೆಲ್ಲಿನಲ್ಲಿ ಯಾರೇ ಕಳ್ಳತನ ಮಾಡಲಿ ಪರ್ಫೆಕ್ಟ್ ಆಗಿ ಇವರೇ ಅಂತಾ ಕಂಡುಹಿಡಿಯುತ್ತಿದ್ದರು. ಒಂದೊಮ್ಮೆ ಕಳ್ಳತನ ಮಾಡಿ ಅವರ ಕೈಗೆ ಸಿಕ್ಕಿ ಬಿದ್ರೆ ಮುಗೀತು ಚಟ್ನಿ ಅರೆದಂತೆ ರುಬ್ಬಿಬಿಡ್ತಾ ಇದ್ರು! ಒಂದು ರೂಮಲ್ಲಿ ಕೂಡಿ ಹಾಕಿಕೊಂಡು ಹೊಡಿತಾ ಇದ್ರೆ ಆ ಶಬ್ದ ನಮ್ಮನ್ನು ಸ್ಥಂಭೀಭೂತರನ್ನಾಗಿಸುತ್ತಿತ್ತು. ಮತ್ತೆ ಜೀವನದಲ್ಲಿ ಇನ್ನೆಂದೂ ಕಳ್ಳತನ ಮಾಡಿರಬಾರದು ಆ ರೀತಿಯಾಗಿ ಶಿಕ್ಷೆ ಕೊಡ್ತಾ ಇದ್ರು. ನಾವು ಎಂಟನೇ ತರಗತಿಯಲ್ಲಿದ್ದಾಗ ಒಬ್ಬ ನಲತ್ತೈದು ಹೀರೋ ಪೆನ್ ಕದ್ದು ಸಿಕ್ಕಿಬಿದ್ದಿದ್ದ! ಈ ಕಳ್ಳತನ‌ ಮಾಡಿದವನನ್ನು‌ ಕಂಡುಹಿಡಿದದ್ದೇ ಸೋಜಿಗ. ಯಾಕೆಂದ್ರೆ ಸಿಕ್ಕಿಬಿದ್ದಿದ್ದವನು ನೋಡೋಕೆ ಹಾಗೆ ಅನಿಸ್ತಾ ಇರಲಿಲ್ಲ! ಡಿಸಿ ವಾರ್ಡನ್ ಸರ್ ಕರೆಂಟ್ ಹೋದಾಗ ನಮಗೆ ಗೊತ್ತಿಲ್ಲದಂತೆ ಬಂದು ನಮ್ಮ ರೂಮಿನ ಬಾಗಿಲ ಬಳಿ ನಿಲ್ತಾ ಇದ್ರು. ನಾವೇನ್ ಮಾತಾಡ್ತೀವಿ ಅಂತಾ ಕೇಳಿಸಿಕೊಳ್ತಾ ಇದ್ರು. ಮುನ್ನೂರರಿಂದ ನಾನೂರು ವಿದ್ಯಾರ್ಥಿಗಳನ್ನು ಅದ್ಹೇಗೆ ಕಂಟ್ರೋಲ್ ಮಾಡ್ತಿದ್ರು ಅಂತಾ ಈಗ ನೆ‌ನಪಿಸಿಕೊಂಡರೆ ಸೋಜಿಗ ಎನಿಸುತ್ತೆ!

ಆಗ ನಾವು ಊಟಕ್ಕೆ ಸರದಿ ಸಾಲಿನಲ್ಲಿ‌ ಹೋಗಬೇಕಾಗಿತ್ತು. ಕೆಲವರು ಹಾಗೆ ಹೋಗುವಾಗ ಕಿರುಬೆರಳಿನಿಂದ ತಟ್ಟೆಯನ್ನು ತಿರುಗಿಸ್ತಾ ಇದ್ರು. ಅವರು ಆ ರೀತಿ ತಿರುಗಿಸುತ್ತಾ ಇರೋದನ್ನು ನೋಡ್ತಿದ್ರೆ ಕೃಷ್ಣ ಸುದರ್ಶನ ಚಕ್ರ ತಿರುಗಿಸೋದಂಗೆ ತಿರುಗಿಸ್ತಾರಲ್ಲಾ! ಅದು ಹೇಗೆ ಇವರು ಬ್ಯಾಲೆನ್ಸ್ ಮಾಡ್ತಾರೆ ಅಂತಾ ಮನಸಲ್ಲಿ‌ ಪ್ರಶ್ನೆ ಏಳೋದು. ನಾನೂ ಹಲವು ಬಾರಿ ಈ ರೀತಿ ಮಾಡಲು ಪ್ರಯತ್ನಿಸಿ ಸೋತಿದ್ದೆ. ಆ ರೀತಿ ಸೋತಿದ್ದೆ ಒಳ್ಳೇದಾಯ್ತು ಅಂತಾ ಒಂದು ದಿನ ಅನಿಸ್ತು. ಯಾಕೆಂದರೆ ಈ ರೀತಿ ತಿರುಗಿಸೋರನ್ನು‌ ಕಂಡರೆ ‘ಡಿಸಿ’ ಕಡುಕೋಪಿ‌ ಆಗ್ತಾ ಇದ್ರು. “ಅಲ್ರೋ ಊಟ ಮಾಡೋ ತಟ್ಟೆಯನ್ನು ಆ ರೀತಿ ತಿರುಗಿಸುತ್ತೀರಾ? ಊಟ ಅಂದ್ರೆ ಅನ್ನಪೂರ್ಣೇಶ್ವರಿ ದೇವಿಯ ಪ್ರಸಾದ. ಅದನ್ನು ತಿನ್ನೋ ತಟ್ಟೇನಾ ತಿರುಗಿಸಿದ್ರೆ ಅದು ಆ ದೇವರಿಗೆ ಮಾಡೋ ಅವಮಾನ” ಅಂತಾ ಹೇಳಿ ತಿರುಗಿಸಿದವನನ್ನು‌ ಕರೆದು ಅವನ ತಟ್ಟೆಯನ್ನು ಗೋಡೆ ಮೇಲೆ ಇಟ್ಟು (ನೆಲಕ್ಕೆ ಲಂಬವಾಗಿ ಬರುವಂತೆ) ಅದರ ಮೇಲೆ ಒಂದು ದೊಡ್ಡ ಕಲ್ಲನ್ನು ಹಾಕಿಸಿ ಬಿಡ್ತಾ ಇದ್ರು! ವೃತ್ತಾಕಾರವಾಗಿದ್ದ ತಟ್ಟೆ ಅವರ ಈ ಶಿಕ್ಷೆಗೆ ಸಿಕ್ಕು ನಜ್ಜುಗುಜ್ಜಾಗಿ ಬಿಡುತ್ತಿತ್ತು. ಹೀಗೆ ತಟ್ಟೆ ಕಳೆದುಕೊಂಡವರೆಷ್ಟೋ… ಆ ಹುಡುಗರು ಮತ್ತೆ ಹೊಸ ತಟ್ಟೆ ಕೊಂಡುಕೊಳ್ಳಬೇಕಾಗುತ್ತಿತ್ತು. ಈ ರೀತಿ ಆದಂತೆ ತಟ್ಟೆ ಕಳ್ಳತನಗಳೂ ಶುರುವಾದವು. ಆಗ ನಾವು ಬಣ್ಣದಿಂದ ನಮ್ಮ ಇನ್ಷಿಯಲ್ಲನ್ನು ನಮ್ಮ ನಮ್ಮ ತಟ್ಟೆಯ ಮೇಲೆ ಹಾಕಿಸಿಕೊಳ್ಳೋದಿಕ್ಕೆ ಶುರು ಮಾಡಿದ್ವಿ. ಈ ರೀತಿ ಮಾಡಿದ್ರೂ ಕೆಲವರು ಹೆಸರನ್ನು ಅಳಿಸಿ ಹಾಕಿಕೊಳ್ಳೋದನ್ನು ನೋಡಿ ನಮ್ಮ ನಮ್ಮ ತಟ್ಟೆಗಳನ್ನು ಟ್ರಂಕಿನಲ್ಲಿ ಹಾಕಿ ಬೀಗ ಹಾಕಿಕೊಳ್ಳೋದಿಕ್ಕೆ ಪ್ರಾರಂಭ ಮಾಡಿದ್ವಿ!

ಇದು ತಟ್ಟೆ ಕಥೆಯಾದರೆ, ಆಗಲೇ ಹೇಳಿದ ಕಳ್ಳತನವಾಗುತ್ತಿದ್ದ ಹೀರೋ ಪೆನ್ನು ನಾವು ಓದುವಾಗ ಬಹುತೇಕ ಹುಡುಗರ ಕೈಲಿ‌ ಅದರಲ್ಲೂ ಇಂಗ್ಲೀಷ್ ಮೀಡಿಯಂ ಓದುವವರ ಕೈಲಿ ಇರ್ತಾ ಇತ್ತು. ಆಗ ಇದರ ಬೆಲೆ ಮೂವತ್ತೈದರಿಂದ ನಲವತ್ತು ರೂಪಾಯಿ. ಸಿಲ್ವರ್ ಬಣ್ಣದ ಹೀರೋ ಪೆನ್ನು ಬೆಲೆ ನಲವತ್ತು ರೂಪಾಯಿ ಇತ್ತು, ಕಂದು ಬಣ್ಣದ ಪೆನ್ನಿನ ಬೆಲೆ ಮೂವತ್ತೈದು ರೂಪಾಯಿ. ಅದರ ಮೇಲೆ ಮೇಡ್ ಇನ್ ಚೈನಾ ಎಂದು ಬರೆಯಲಾಗಿತ್ತು. ಇದಕ್ಕೆ ಇಂಕು ಹಾಕಲು ‘ಬ್ರಿಲ್’ ಇಂಕ್ ಬಾಟೆಲ್ ಇಟ್ಕೊಳ್ತಾ ಇದ್ವಿ. ಇದರ ಜೊತೆ ಗಾಡಿಗೊಂದು ಸ್ಟೆಪ್ನಿ ಇದ್ದಂಗೆ ಬಾಲ್ ಪೆನ್ನನ್ನೂ ಇಟ್ಕೊಳ್ತಾ ಇದ್ವಿ. ಆಗ ರೆನಾಲ್ಡ್ಸ್ ಪೆನ್ನು ಸಿಕ್ಕಾಪಟ್ಟೆ ಫೇಮಸ್. ಆ ಪೆನ್ನು ಇಟ್ಕೊಂಡಿದ್ರೆ ಏನೋ ಒಂಥರಾ ಗ್ರೇಡ್ ಅಂತಾ ನಾವೇ ಭಾವಿಸಿಕೊಳ್ತಾ ಇದ್ವಿ. ಒಂದೊಮ್ಮೆ ಇಂಕ್ ಪೆನ್ನು ಕೈಕೊಟ್ರೆ ಅಂತಾ ದೂರಾಲೋಚನೆ ಮಾಡಿ ಬಾಲ್ ಪೆನ್ನನ್ನು ಜೊತೆಯಲ್ಲಿ ಇಟ್ಕೊಂಡಿರ್ತಾ ಇದ್ವಿ. ರೆನಾಲ್ಡ್ಸ್ ಪೆನ್ನನ್ನು ಯಾರಾದ್ರೂ ಕದ್ಕೊಂಡು ಹೋಗ್ತಾರೇನೋ ಅಂತಾ ಚಿಕ್ಕ ಪೇಪರಿನಲ್ಲಿ ಹೆಸರು ಬರೆದು ಅದನ್ನು ಕಾಣುವಂತೆ ಪೆನ್ನಿನ‌ ಮುಂಭಾಗದ ಪಾರದರ್ಶಕ ಭಾಗದಲ್ಲಿ ಇಡ್ತಾ ಇದ್ವಿ.

ಪೆನ್ನನ್ನೇ ಕದ್ದಿರೋನು ಆ ಹೆಸರ ಬರೆದಿದ್ದ ಶೀಟನ್ನು ಎಸೆಯಬಹುದು ಅಂತಾ ಯಾರೂ ಆಲೋಚನೆ ಮಾಡದೇ ಬಹುತೇಕರು ಹೀಗೆ ಮಾಡ್ತಿದ್ರು. ರೆನಾಲ್ಡ್ಸ್ ಪೆನ್ನಿನ ಮೇಲ್ಭಾಗದಲ್ಲಿ ಇದ್ದ ಪ್ರಿಂಟೆಡ್ ಹೆಸರನ್ನು ಬ್ಲೇಡಿನಲ್ಲಿ ಕೆತ್ತಿ‌ INDIA ಎಂದು ಬರುವಂತೆ ಮಾಡಿಕೊಂಡು‌ ಹಲವರಿಗೆ ತೋರಿಸಿ‌ ಖುಷಿ ಪಡ್ತಾ ಇದ್ವಿ.. ಆದರೆ ಇಂಕ್ ಪೆನ್ನಿನ ಸಹವಾಸದಿಂದ ಶಾಲೆಯಲ್ಲಿ ಹುಡುಗರ ಹಲವರ ಶರ್ಟುಗಳ ಹಿಂಭಾಗ ಹಿಂದೆ ಕುಳಿತವರು ಮಾಡಿದ ತರಲೆಯ ಪ್ರಭಾವದಿಂದ ಇಂಕಿನಿಂದ ಅಂಗಿಯು ಚಿತ್ತಾರ ಮೂಡಿಸಿದಂತಾಗುತ್ತಿತ್ತು! ಆಗ ನಮಗೆ ಹೀರೋ ಪೆನ್ನಲ್ಲಿ ಬರೆಯೋಕೆ ಖುಷಿ ಸಿಗೋದು. ಸ್ಪೀಡಾಗಿ ಬರೆಯಬಹುದಿತ್ತು. ಆದರೆ ಇಂದು ಆ ಪೆನ್ನುಗಳ ಬಳಕೆ ಇಲ್ಲ. ಈಗೇನಿದ್ರೂ ಯೂಸ್ ಆ್ಯಂಡ್ ಥ್ರೋ ಪೆನ್ನುಗಳು. ಪರಿಸರಕ್ಕೆ ಇವು ಮಾರಕವಾದರೂ ಅನಿವಾರ್ಯವಾಗಿ ಇವನ್ನೇ ಬಳಸುವಂಥ ಪರಿಸ್ಥಿತಿ ಈಗ ಇದೆ. ಇಂಥಾ ಪೆನ್ನಿನಿಂದ ಪರಿಸರ ರಕ್ಷಿಸೋ ಪ್ರಬಂಧ ಬರೆಸಿದ್ರೆ ಅದೆಷ್ಟು ಸರಿ? ಎಂದು ನಾನು ಹಲವಾರು ಸಲ ಅಂದುಕೊಳ್ಳುತ್ತೇನೆ. ‘ಕಾಲಕ್ಕೆ ತಕ್ಕಂತೆ ನಡೀಬೇಕು’ ಎಂಬ ಮಾತಿಗೆ ಕಟ್ಟುಬಿದ್ದು ಈ ರೀತಿ ಪೆನ್ನನ್ನೇ ಬಳಸ್ತಾ ಇದ್ದೇನೆ.

ಇಂದು ನನಗೆ ಸಾಕಷ್ಟು ಸೌಲಭ್ಯಗಳಿರಬಹುದು. ಮೂರು ಹೊತ್ತೂ ಬಾದಾಮಿ ಹಾಲು ಕುಡಿಯೋ ಸ್ಥಿತಿ ನನಗೆ ಇರಬಹುದು. ಆದರೆ ಹೈಸ್ಕೂಲಿನಲ್ಲಿ ಮುದ್ದೆ ತಂದುಕೊಟ್ಟು ಕುಡಿಯುತ್ತಿದ್ದ ಆ ಬಾದಾಮಿ ಹಾಲಿನ ರುಚಿಯೇ ಬೇರೆ, ಆ ಅನುಭವವೇ ಬೇರೆ. ಸ್ವಲ್ಪವೇ ಮಕ್ಕಳಿರುವ ಶಾಲೆಯಲ್ಲಿ ಇಂದು ಏನಾದ್ರೂ ಯಾರದ್ದಾದರೂ ವಸ್ತು ಕಳ್ಳತನವಾದಾಗ ಕಂಡುಹಿಡಿಯೋಕೆ ನಮ್ಮ ಕೈಲಿ ಆಗೋಲ್ಲ. ಅಂತಾದ್ರಲ್ಲಿ ಡಿಸಿ ವಾರ್ಡ‌ನ್ ನೆನೆಸ್ಕೊಂಡ್ರೆ ಅತ್ಯಾಶ್ಚರ್ಯ ಆಗುತ್ತೆ. ಆಶ್ರಮದ ಗೌರವಧನಕ್ಕೆ ದುಡಿದು, ನಮಗೆ ಚೆನ್ನಾಗಿ ಓದಿಸಿ ನಮ್ಮ ಸರ್ವಾಂಗೀಣ ಬೆಳವಣಿಗೆಗೆ ತಮ್ಮದೇ ಆದ ಸೇವೆ ಮಾಡಿ, ಒಂದು ನೌಕರಿ ಹಿಡಿಯುವಂತೆ ಮಾಡಿದ ಎಲ್ಲಾ ವಾರ್ಡನ್‌ಗಳಿಗೆ ಮತ್ತೊಮ್ಮೆ ಮಗದೊಮ್ಮೆ ನಮನಗಳನ್ನು ಸಲ್ಲಿಸುತ್ತೇನೆ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

5 Comments

  1. SHASHI KUMAR

    ನಿಮ್ಮ ಹೈಸ್ಕೂಲ್ ನೆನಪುಗಳು ತುಂಬಾ ಚೆನ್ನಾಗಿದೆ ಸರ್.

    Reply
  2. Puneetg

    ಗೌಡ್ರೆ ನಿಮ್ಮ ಬರಹ ಸೂಪರ್ ಇದೆ. ಈ ಕಥೆ ಓದಿ ನನ್ನ ಹಾಸ್ಟೆಲ್ ದಿನಗಳು ಜ್ಞಾಪಕಕ್ಕೆ ಬಂತು. ನಾವು ಮೊಟ್ಟೆ ಡಬಲ್ ಟ್ರಿಪ್, ಬುಕೆಟ್ ತುಂಬಾ ಮಜ್ಜಿಗೆ ಕುಡಿತಿದ್ವಿ. ಅದೂ ಕೂಡ ಚಾಲೆಂಜ್ ಮೇಲೆ. ತುಪ್ಪ ಉಪ್ಪಿನಕಾಯಿ ಆವಿಷ್ಕೊಂಡ್ ತಿಂತಿದ್ವಿ. ಯಾರು ಏನು ತಿನ್ನೊಲ್ಲ ಅಂದ್ರೆ ನಂಗೆ ಹಾಕು ಅಂತಿದ್ವಿ. ತಿನ್ನೋ ವಿಚಾರ ಬಂದ್ರೆ ಹಾಸ್ಟೆಲ್ ಹುಡ್ಗರ್ ಸೂಪರ್ ಗುರು. ನಾವು ಚಾಲೆಂಜ್ ಹಕ್ತಿದ್ವಿ. ನೀನ್ ಎನ್ ಆದ್ರೂ ಅಡುಗೆ ಮಾಡು ತ್ತಿಂದಾಕ್ತೀವಿ ಅಂತ.

    Reply
  3. Jayalakshmi N G

    ಬಾಲ್ಯದ ನೆನಪುಗಳೊಂದಿಗೆ ಬರಹ ಸುಂದರವಾಗಿದೆ.

    Reply
  4. Pradeep

    Mesmerising hostel days
    Thank you

    Reply
  5. G s shsshidhar

    ವರ್ತಮಾನದ ಈಗಿನವರು ಎಣ್ಣೆ ಬಾಟಲನ್ನು ಟವಲ್ನಲ್ಲಿ ಅವುಸಿಕೊಂಡು ಹೋಗೋ ಟೆಕ್ನಿಕ್…
    ಅನ್ನು ಆಗಿನ ಜಮಾನದ ಸ್ಟೀಲ್ ಲೋಟದ ಒಳಗೆ ಮುದ್ದೆ ಅಡಗಿಸಿ exchange offer ಬಾದಾಮ್ ಮಿಲ್ಕ್ ಪಡೆಯೋ ಟೆಕ್ನಿಕ್….ತೌಲನಿಕ ಚೋರ ತಂತ್ರ.
    ನಿಮ್ ಬರಹದ ಹೈಲೈಟು.

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ