೧
ಟ್ರಾಫಿಕ್ಕಿನಲಿ
ನಿಂತಾಗೊಮ್ಮೆ
ಗಮನಿಸಿ
ಎಷ್ಟೇ ದೊಡ್ಡ, ಸಣ್ಣಗಾಡಿಯಿರಲಿ
ಗಾತ್ರದಲೋ
ಶ್ರೇಷ್ಟತೆಯಲೋ
ಎಲ್ಲದರ ಮೇಲೂ
ಒಂದೊಂದು
ನೆಗ್ಗು ಇದ್ದೇ ಇರುತ್ತದೆ
ಥೇಟು
ಮನುಷ್ಯರಂತೆ…
೨
ಎಷ್ಟೆಲ್ಲ ಹೆದರುತ್ತಿದ್ದೆ ಕತ್ತಲಿಗೆ
ಈ ಹಿಂದೆ…
ಅಲ್ಲಿ ಇರಬಹುದೇನೋ ಹುಲಿ, ಚಿರತೆ,
ಕಾಣದ ಕಾಯ… ಅಥವಾ ದೈಯ
ಜಗ್ಗೆಂದು
ಸೀಳಿ ಕತ್ತಲ
ಎದೆಯ ಮೇಲೇರಿ
ಬರಬಹುದು
ಕತ್ತು ಸೀಳಬಹುದು
ಕುತ್ತಿಗೆ ಮುರಿಯಬಹುದು
ಹೆಚ್ಚು ಮಿಸುಕಾಡಿದಲ್ಲಿ
ಮೂಳೆಗಳ
ಚಟಚಟನೇ ಪುಡಿಗಟ್ಟಬಹುದು…
ಊಹೂಂ..
ಈಗೀಗ ಗೊತ್ತಾಗಿದೆ
ಕತ್ತಲಲ್ಲಿ
ಬೆಳಕಿಗೆ ಕಾದುನಿಂತ
ಕನಸುಗಳಿವೆ..
ಅಷ್ಟೇ
ನಿಜದ ಕತ್ತಲಿರುವುದು
ನಮ್ಮ ಅಪನಂಬಿಕೆಗಳಲ್ಲಿ
ನಂಬಿಸಿ
ಬಗೆವ ದ್ರೋಹಗಳಲ್ಲಿ
ಹಿಡಿದ ಹೂವಿನ ಕಾಂಡದಲ್ಲಿರುವ
ಮುಳ್ಳುಗಳಲ್ಲಿ ಅಷ್ಟೇ..

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಾಡೊಳಗ ಕಳದಾವು ಮಕ್ಕಾಳು’ ಮಕ್ಕಳ ನಾಟಕ . ‘ಚಿತ್ತ ಭಿತ್ತಿ’ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

ಎರಡೂ ಕವನಗಳು ಮನುಷ್ಯನ ಒರಟುತನ ಮತ್ತು ಅವನ ಅಂತರಂಗ ಬಯಸುವ ಬೆಳಕಿಗೆ ಒಡ್ಡುವ ಗುಣಗಳ ಕಾರಣಗಳಿಂದ ಪರಸ್ಪರ ಅವಲಂಬಿತವಾಗಿದೆ. ಒಳ್ಳೆಯ ಕವನ ಓದಲು ಸಿಕ್ಕಿತು.
“ನಿಜದ ಕತ್ತ್ತಲಿರುವದು ನಮ್ಮ ಅಪನಂಬಿಕೆಗಳಲ್ಲಿ” ಖಂಡಿತಾ ಹೌದು! ಸಣ್ಣದೊಂದು ಪದ್ಯದಲ್ಲಿ ಎಷ್ಟೆಲ್ಲಾ ಹೇಳಿದ್ದೀರಿ. ಅಭಿನಂದನೆಗಳು.