ನವರೋಜಿ ಶಾಲೆಗೆ ಸೇರಿದ ಕಾಲಾವಧಿ ಎಂತಹುದೆಂದರೆ, ಮುಂಬೈ, ನಗರವಾಗಿ, ಪ್ರಾಂತ್ಯವಾಗಿ, ಶಿಕ್ಷಣ ಕ್ಷೇತ್ರದಲ್ಲಿ ನಾನಾ ರೀತಿಯ ಪ್ರಯೋಗ, ಪರಿವರ್ತನೆಗಳನ್ನು ಕಾಣುತ್ತಿದ್ದ ದಿನಗಳವು. ನೂರಾರು ಕನಸಿಗರು, ಪ್ರಯೋಗಶೀಲರು, ವಿಶಾಲ ಹೃದಯದ ಪಾಶ್ಚಿಮಾತ್ಯರು, ಎಲ್ಲರಿಗೂ ಶಿಕ್ಷಣದ ಬಗ್ಗೆ ಆಸಕ್ತಿ. ಭಾರತೀಯರನ್ನು ಹೊಸ ವಿಚಾರಗಳಿಗೆ, ಕಲಿಯುವ ಪದ್ಧತಿಗಳಿಗೆ ತೆರೆಯುವ ಹುಮ್ಮಸ್ಸು. ನವರೋಜಿ ಈ ಎಲ್ಲ ಕನಸು, ಪ್ರಯೋಗಗಳ ಫಲಾನುಭವಿ. ಮೊದಲನೆಯ ತಲೆಮಾರಿನ ಫಲಾನುಭವಿ.
ಕೆ. ಸತ್ಯನಾರಾಯಣ ಹೊಸ ಕೃತಿ “ದಾದಾಭಾಯಿ ನವರೋಜಿ” ಕೆಲವು ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಇಂದು ನವರೋಜಿ ಅವರ ೨೦೦ನೇ ಹುಟ್ಟುಹಬ್ಬ, ಅದರ ಪ್ರಯುಕ್ತ ಈ ಕೃತಿಯ ಒಂದು ಬರಹ ನಿಮ್ಮ ಓದಿಗೆ
ಬಾಲ್ಯ ಮತ್ತು ಯೌವ್ವನದ ಪೂರ್ವ ದಿನಗಳು ಒಬ್ಬ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂಬುದು ನಿಜ. ಆದರೆ ವ್ಯಕ್ತಿಯು ಕೂಡ ಇವುಗಳನ್ನು ರೂಪಿಸುತ್ತಿರುತ್ತಾನೆ, ನಿರೂಪಿಸುತ್ತಿರುತ್ತಾನೆ. ಈ ಎರಡೂ ನೆಲೆಗಳು ಸೇರಿ ಅವನ ವ್ಯಕ್ತಿತ್ವವು ರೂಪುಗೊಳ್ಳುತ್ತದೆ.
ದಾದಾಭಾಯಿಯವರ ವ್ಯಕ್ತಿತ್ವ, ಹೋರಾಟ, ಕಾಣಿಕೆ ಮತ್ತು ಕಾಣ್ಕೆ, ಇತರ ಸ್ವಾತಂತ್ರ‍್ಯ ಹೋರಾಟಗಾರರಿಗಿಂತ ಭಿನ್ನ. ಇದಕ್ಕೆ ಮೊದಲನೆ ಮತ್ತು ಮುಖ್ಯ ಕಾರಣವೆಂದರೆ, ಅವರು ಎಲ್ಲರಿಗಿಂತ ಹಿರಿಯರು. ಗಾಂಧಿಗಿಂತ ೪೫ ವರ್ಷಗಳ ಮುಂಚೆ, ನೆಹರೂಗಿಂತ ೬೫ ವರ್ಷಗಳ ಮುಂಚೆ ಹುಟ್ಟಿದವರು. ಪಾರ್ಸಿ ಜನಾಂಗಕ್ಕೆ ಸೇರಿದವರು. ಮುಂಬೈ ನಗರದ ಜೀವನ ಅವರನ್ನು ರೂಪಿಸಿತು ನಿಜ. ಆದರೆ ಮುಂಬೈ ನಗರಕ್ಕೂ ಕೂಡ ನಗರವಾಗಿ ಮೊದ ಮೊದಲ ವರ್ಷಗಳು ಅವು. ೧೮೩೦, ೧೮೪೦, ೧೮೫೦ರಲ್ಲಿ ಮುಂಬೈ ಕೂಡ ಒಂದು ವಿಶಾಲವಾದ ಹಳ್ಳಿಯಿಂದ ಒಂದು ಸಣ್ಣ ರೇವು ಪಟ್ಟಣವಾಗಿ, ಬಹಳ ನಿಧಾನವಾಗಿ ವಿಕಾಸವಾಗುತ್ತಿತ್ತು. ಶಾಲೆಗಳಿರಲಿಲ್ಲ. ನವರೋಜಿಯವರ ತಲೆಮಾರಿನ ಮಕ್ಕಳೇ ಇಂಗ್ಲಿಷ್ ಭಾಷೆಯನ್ನು ಕಲಿತ ಮೊದಲ ತಲೆಮಾರಿನವರು. ಶಾಲೆಗಳ ಸಂಖ್ಯೆ ಕೂಡ ಬಹಳ ಕಡಿಮೆ. ಸ್ಥಳೀಯ ಭಾಷೆಯಲ್ಲೇ ಕಲಿಯಬೇಕು. ಇಂಗ್ಲಿಷ್ ಶಾಲೆಗಳಿಗೆ ಪ್ರವೇಶ ಪಡೆಯುವುದೇ ದುಸ್ತರ. ಹೆಣ್ಣು ಮಕ್ಕಳಿಗಂತೂ ಶಿಕ್ಷಣವೇ ಇಲ್ಲ. ಸ್ಥಳೀಯ ಶಾಲೆಗಳಲ್ಲಿ ಸಾಂಪ್ರದಾಯಿಕ ಶಿಕ್ಷಣ ಮತ್ತು ಕಲಿಕಾ ವಿಧಾನಕ್ಕೇ ಹೆಚ್ಚು ಒತ್ತು. ಹೆಚ್ಚಿನ ಶಿಕ್ಷಕರು ಇಂಗ್ಲೆಂಡಿನವರು, ಸ್ಕಾಟ್‌ಲೆಂಡಿನವರು, ಐರ್‌ಲ್ಯಾಂಡಿನವರು. ನವರೋಜಿಯವರ ಅದೃಷ್ಟ, ಅವರಿಗೆ ಕಲಿಸುತ್ತಿದ್ದ ಹೆಚ್ಚಿನ ಶಿಕ್ಷಕರೆಲ್ಲ ಸ್ಕಾಟ್‌ಲ್ಯಾಂಡ್, ಐರ್‌ಲ್ಯಾಂಡಿನವರಾಗಿದ್ದು ಭಿನ್ನ ರೀತಿಯ ವಿಚಾರಗಳನ್ನು ಇವರ ಮನಸ್ಸಿನಲ್ಲಿ ಬಿತ್ತಿದವರು.
ಪಾರ್ಸಿ ಜನಾಂಗ, ಅಲ್ಪಸಂಖ್ಯಾತ ಜನಾಂಗ. ಬಡತನ ಮತ್ತು ಸಾಂಪ್ರದಾಯಿಕತೆ, ಆಧುನಿಕ ಜೀವನಶೈಲಿ ಮತ್ತು ಶಿಕ್ಷಣದ ಬಗ್ಗೆ ಹಿಂಜರಿಕೆ ಮತ್ತು ಗೊಂದಲ. ಆದರೆ ಬಡತನದಿಂದ ಹೊರ ಬರಬೇಕಾದರೆ ಸಾಂಪ್ರದಾಯಿಕತೆ, ಕುರುಡು ಅಚರಣೆ, ಇದನ್ನೆಲ್ಲ ಪ್ರಶ್ನಿಸಬೇಕು, ಇದರಿಂದೆಲ್ಲ ಹೊರ ಬರಬೇಕು.
ಈ ಎಲ್ಲ ಅಂಶಗಳನ್ನು ಪರಿಗಣಿಸಿದರೂ ನವರೋಜಿಯವರದು ಅದೃಷ್ಟದ ಬಾಲ್ಯ ಮತ್ತು ಯೌವ್ವನವೆಂದು ಹೇಳಬಹುದು. ಮುಂಬೈ ಹೊಸ ಶಿಕ್ಷಣ ವ್ಯವಸ್ಥೆಯ ದಿಕ್ಕಿನಲ್ಲಿ ಮೊದಲ ಮತ್ತು ಸ್ಪಷ್ಟ ಹೆಜ್ಜೆಗಳನ್ನಿಟ್ಟಾಗ, ಪಾರ್ಸಿ ಸಮಾಜ ತನ್ನ ಸಾಂಪ್ರದಾಯಿಕತೆಯಿಂದ ಹೊರ ಬರಲು ಮೈ ಕೊಡವಿಕೊಳ್ಳುತ್ತಿದ್ದ ದಿನಗಳಲ್ಲೇ ನವರೋಜಿಯವರು ತಮ್ಮ ವ್ಯಕ್ತಿತ್ವವನ್ನು ಕೂಡ ರೂಪಿಸಿಕೊಳ್ಳುತ್ತಿದ್ದರು. ಈ ಎಲ್ಲ ಬೆಳವಣಿಗೆಗಳ ಫಲಾನುಭವಿಯಾದರು. ಬದಲಾವಣೆಗಳನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು, ವೈಯಕ್ತಿಕ ನೆಲೆಯಲ್ಲಿ ನಾನಾ ರೀತಿಯಲ್ಲಿ ಹೋರಾಡಿದರು. ಎಷ್ಟರ ಮಟ್ಟಿಗೆ ಎಂದರೆ, ಸ್ವಾತಂತ್ರ‍್ಯ ಚಳವಳಿಯನ್ನು ಅವರು ಪ್ರಾರಂಭಿಸದಿದ್ದರೂ, ವಸಾಹತುಶಾಹಿಯ ವಿರುದ್ಧ ಪ್ರತಿಭಟನೆಯ ನೆಲೆಗಳನ್ನು ರೂಪಿಸದೆ ಹೋಗಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಅವರು ತಂದ ಸುಧಾರಣೆ ಮತ್ತು ಅದರಲ್ಲಿ ತಾವು ತೊಡಗಿಸಿಕೊಂಡದ್ದು, ಸ್ತ್ರೀ ಶಿಕ್ಷಣಕ್ಕೆ ಬೆಂಬಲಿಸಿದ್ದು, ಸಾಂಪ್ರದಾಯಿಕ ಪಾರ್ಸಿ ಸಮಾಜದಲ್ಲಿ ಹಲವು ಸುಧಾರಣೆಗಳಿಗೆ ಕಾರಣವಾದದ್ದು, ಇವಿಷ್ಟನ್ನೇ ಪರಿಗಣಿಸಿದರೂ ನವರೋಜಿಯವರು ಹೊಸ ಭಾರತದ ನಿರ್ಮಾಣಕ್ಕೆ ಅಸ್ತಿಭಾರ ಹಾಕಿದವರಲ್ಲಿ ಪ್ರಮುಖರಾಗಿದ್ದಾರೆ. ಹೀಗಾಗಿ, ನವರೋಜಿಯವರ ಬಾಲ್ಯ, ಯೌವ್ವನದ ದಿನಗಳ ಓದೆಂದರೆ, ಮೊದಲ ತಲೆಮಾರಿನ ಸ್ವಾತಂತ್ರ‍್ಯ ಹೋರಾಟಗಾರನೊಬ್ಬನ ಭಿನ್ನ ಪ್ರೇರಣೆಗಳನ್ನು ತಿಳಿದುಕೊಳ್ಳುವ ವಿವರಗಳ ಓದೇ ಆಗಿರುತ್ತದೆ.
ಮುಂಬೈನ ಮಾಂಡ್ವಿ ಎಂಬ ಹಳ್ಳಿಯಲ್ಲಿ ೪.೯.೧೮೨೫ರಂದು ನವರೋಜಿ, ಪಲಾಂಜಿ ದೊರ್ಡಿ ಮತ್ತು ಮನೇಕಬಾಯಿ ದಂಪತಿಗಳಿಗೆ ಮೊದಲ ಮಗುವಾಗಿ ಜನಿಸಿದರು. ಈ ದಂಪತಿಗಳಿಗೆ ನವರೋಜಿ ಒಬ್ಬನೇ ಮಗ. ದಾದಾ ಎಂದರೆ ಅಜ್ಜ ಹಿರಿಯ ಎಂದೇ ಅರ್ಥ. ತಂದೆ-ತಾಯಿಗಳಿಗೆ ಈ ಮಗು ಹೇಗೆ ಭಾರತದ ಪಿತಾಮಹ, ರಾಷ್ಟ್ರೀಯತೆಯ ಪಾಠಗಳ ಅಜ್ಜನಾಗುವನೆಂದು ಹೇಗೆ ತಿಳಿದಿತ್ತು ಎಂದು ಜೀವನ ಚರಿತ್ರಾಕಾರರು ತಮಾಷೆ ಮಾಡುತ್ತಾರೆ. ಇವರ ಕುಟುಂಬವು ವಾಸಿಸುತ್ತಿದ್ದ ಕಡಕ್ ಬಡಾವಣೆ ಪ್ರದೇಶದ ಸುತ್ತು ಮುತ್ತ ಯಹೂದಿಗಳು, ಪೋರ್ಚುಗೀಸರು, ಬೇರೆ ಬೇರೆ ಪಂಗಡಗಳ ಮುಸ್ಲಿಮರು, ಕ್ರೈಸ್ತರು, ಬೆಸ್ತರು ಕೂಡ ವಾಸವಾಗಿದ್ದರು. ೫೬ ಭಾಷೆಗಳಿಗೆ, ೧೮ ಜಾತಿ ಜನಾಂಗಗಳಿಗೆ, ನಾನಾ ರೀತಿಯ ವೇಷಭೂಷಣಗಳಿಗೆ ದಾದಾಜಿಯವರಿಗೆ ಬಾಲ್ಯದಲ್ಲೇ ಪ್ರವೇಶ ದೊರೆಯಿತು. ೧೮೨೦-೧೮೩೦ರ ದಶಕದಲ್ಲಿ ಮುಂಬೈ ಅಫೀಮು ಮತ್ತು ಹತ್ತಿ ವ್ಯಾಪಾರದ ಕೇಂದ್ರವಾಗಿದ್ದು, ದೊಡ್ಡ ಪ್ರಮಾಣದ ವಹಿವಾಟಿನ ನಗರವಾಗುತ್ತಿತ್ತು.
ಭಾರತೀಯರ ಬಡತನ ಮತ್ತು ಬದುಕಿನ ಆರ್ಥಿಕ ಆಯಾಮಗಳ ಬಗ್ಗೆ ದಾದಾಭಾಯಿಯವರು ಮೊದಲಿನಿಂದಲೂ ಏಕೆ ಹೆಚ್ಚು ಗಮನ ಕೊಡುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ಅವರ ಕೌಟುಂಬಿಕ ಹಿನ್ನೆಲೆಯಲ್ಲೇ ಇದೆ. ಪೂರ್ವಜರು ಮೂಲತಃ ಬರೋಡಾ ಸೀಮೆಯ ನವಸಾರಿ ಎಂಬ ಹಳ್ಳಿಯವರು. ದಾದಾಭಾಯಿಯವರ ಕಾಲಕ್ಕೆ ಬಡತನ ವ್ಯಾಪಿಸಿಕೊಂಡಿದ್ದರೂ ಮೊದಲಿಗೆ ಸ್ಥಿತಿವಂತರಾಗಿದ್ದವರು. ಪೂರ್ವಜರೊಬ್ಬರು ಸುಗಂಧ ದ್ರವ್ಯ ತಯಾರಿಯ ವ್ಯಾಪಾರದಲ್ಲಿ ಹೆಸರು ಪಡೆದು, ಜಹಾಂಗೀರ್, ನೂರ್ ಜಹಾನ್‌ರನ್ನು ಆಸ್ಥಾನದಲ್ಲಿ ಭೇಟಿ ಮಾಡಿ, ವಿಶೇಷ ಸುಗಂಧ ದ್ರವ್ಯಗಳನ್ನು ಪರಿಚಯಿಸಿ, ಕಾಣಿಕೆಯಾಗಿ ಕೊಟ್ಟು ಭೂಮಿಯನ್ನು ಉಡುಗೊರೆಯಾಗಿ ಪಡೆದಿದ್ದರಂತೆ. ಮೊಘಲ್ ಸಾಮ್ರಾಜ್ಯ ಕುಸಿದದ್ದು, ಗುಜರಾತ್‌ನ ಬೇರೆ ಬೇರೆ ಭಾಗಗಳ ಮೇಲೆ ಮರಾಠಿಗರ ನಿರಂತರ ದಾಳಿ, ಈಸ್ಟ್ ಇಂಡಿಯಾ ಕಂಪನಿ ಬೇರು ಬಿಡುತ್ತಿದ್ದದ್ದು ಸ್ಥಳೀಯರ ವ್ಯಾಪಾರ-ವಹಿವಾಟು ಕಡಿಮೆ ಆಗುತ್ತಿದ್ದುದು, ಪದೇ ಪದೇ ಎದುರಾಗುತ್ತಿದ್ದ ಕ್ಷಾಮ, ಇದೆಲ್ಲದರಿಂದಾಗಿ, ಬಹುತೇಕ ಕುಟುಂಬಗಳು ಹಿಂದಿನ ವೈಭವವನ್ನು ಕಳೆದುಕೊಂಡು ಬಡವರಾದರು. ನವರೋಜಿಯವರ ಪೂರ್ವಜರು ಪಾರ್ಸಿ ಸಂಪ್ರದಾಯದ ಪುರೋಹಿತರು. ಧಾರ್ಮಿಕ ಸೇವೆಗಳನ್ನು ಸಮುದಾಯಕ್ಕೆ ಒದಗಿಸುತ್ತಿದ್ದವರು, ಮಾರ್ಗದರ್ಶನ ಮಾಡುತ್ತಿದ್ದವರು. ದಾದಾಭಾಯಿ ಹುಟ್ಟುವ ಹೊತ್ತಿಗೆ ಇವರ ಕುಟುಂಬಗಳಲ್ಲಿ ಬಡತನ ಎಷ್ಟು ವ್ಯಾಪಕವಾಗಿತ್ತೆಂದರೆ, ನವರೋಜಿಯವರ ತಂದೆ, ಪೌರೋಹಿತ್ಯದ ಜೊತೆಗೆ, ಬೇಸಾಯವನ್ನು ಕೂಡ ಮಾಡುತ್ತಿದ್ದರು. ಬಡತನವನ್ನು ದಾದಾಭಾಯಿ ಅಧ್ಯಯನದ ಮೂಲಕ ತಿಳಿದವರಲ್ಲ. ಅದು ಕುಟುಂಬದ ದಿನನಿತ್ಯದ ಬದುಕಿನ ಶೈಲಿ, ವಿವರವಾಗಿತ್ತು.
ದಾದಾಭಾಯಿಯವರ ಬಾಲ್ಯ ಸಾಂಪ್ರದಾಯಿಕವಾಗಿಯೇ ಕಳೆಯಿತು. ಪ್ರಾರ್ಥನೆ, ಆಚರಣೆ, ಇವುಗಳಲ್ಲಿ ತೊಡಗಿ, ಪರಂಪರೆಯಿಂದ ಬಂದ ಪೌರೋಹಿತ್ಯದ ವೃತ್ತಿಗೇ ತಯಾರಾಗುತ್ತಿದ್ದರು. ಆದರೆ ಇವರ ನಾಲ್ಕನೇ ವರ್ಷದಲ್ಲಿ, ಇವರ ತಂದೆ ತೀರಿ ಹೋದದ್ದರಿಂದ, ಪರಂಪರೆಯನ್ನು ಮುಂದುವರಿಸುವ ಅವಶ್ಯಕತೆ, ಒತ್ತಾಯ ಬರಲಿಲ್ಲ. ಅವಿದ್ಯಾವಂತ ತಾಯಿಯೇ ಆಸಕ್ತಿ ವಹಿಸಿ, ಉಪನಯನವಾಗಿದ್ದ ಮಗನನ್ನು ಸ್ಥಳೀಯ ಶಾಲೆಯೊಂದರಲ್ಲಿ ಕಲಿಸುತ್ತಿದ್ದ ಗುಜರಾತಿ ಮೆಹ್ತಾರ ಬಳಿ ಸೇರಿಸಿದಳು. ನವರೋಜಿ ಶಾಲೆಗೆ ಸೇರಿದ ಕಾಲಾವಧಿ ಎಂತಹುದೆಂದರೆ, ಮುಂಬೈ, ನಗರವಾಗಿ, ಪ್ರಾಂತ್ಯವಾಗಿ, ಶಿಕ್ಷಣ ಕ್ಷೇತ್ರದಲ್ಲಿ ನಾನಾ ರೀತಿಯ ಪ್ರಯೋಗ, ಪರಿವರ್ತನೆಗಳನ್ನು ಕಾಣುತ್ತಿದ್ದ ದಿನಗಳವು. ನೂರಾರು ಕನಸಿಗರು, ಪ್ರಯೋಗಶೀಲರು, ವಿಶಾಲ ಹೃದಯದ ಪಾಶ್ಚಿಮಾತ್ಯರು, ಎಲ್ಲರಿಗೂ ಶಿಕ್ಷಣದ ಬಗ್ಗೆ ಆಸಕ್ತಿ. ಭಾರತೀಯರನ್ನು ಹೊಸ ವಿಚಾರಗಳಿಗೆ, ಕಲಿಯುವ ಪದ್ಧತಿಗಳಿಗೆ ತೆರೆಯುವ ಹುಮ್ಮಸ್ಸು. ನವರೋಜಿ ಈ ಎಲ್ಲ ಕನಸು, ಪ್ರಯೋಗಗಳ ಫಲಾನುಭವಿ. ಮೊದಲನೆಯ ತಲೆಮಾರಿನ ಫಲಾನುಭವಿ. ಬಡತನದಿಂದ ಹೊರ ಬರಬೇಕಾದರೆ, ಶಿಕ್ಷಣದ ಮೂಲಕ ಮಾತ್ರ ಸಾಧ್ಯ ಎಂಬ ನವರೋಜಿಯವರ ತಿಳುವಳಿಕೆ ರೂಪುಗೊಂಡದ್ದು ಈ ದಿನಗಳಲ್ಲೇ, ಇಂತಹ ವಾತಾವರಣದಲ್ಲೇ. ನವರೋಜಿ ಫಲಾನುಭವಿ ಮಾತ್ರ ಆಗಲಿಲ್ಲ, ಸಮಾಜದ ಎಲ್ಲ ವರ್ಗಗಳಿಗೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೂ ಕೂಡ ಶಿಕ್ಷಣದ ಸೌಲಭ್ಯ, ಅವಕಾಶ ಸಿಗಬೇಕೆಂದು ನಾನಾ ರೀತಿಯ ಪ್ರಯೋಗಗಳನ್ನು ಮಾಡಿದವರು.
ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ, ರಾಜಕಾರಣ ಒಂದು ಪ್ರಮುಖ ಆಸಕ್ತಿಯಾದ ಮೇಲೂ, ಭಾರತದಲ್ಲಿ ನಡೆಯಬೇಕಾದ ಶೈಕ್ಷಣಿಕ ಕ್ರಾಂತಿಯ ಅಗತ್ಯವನ್ನು ನಿರಂತರವಾಗಿ ಪ್ರತಿಪಾದಿಸುತ್ತಿದ್ದರು.
ಪಾಶ್ಚಾತ್ಯ ಶಿಕ್ಷಣ ಮಾದರಿಯಿಂದ ಪ್ರೇರಿತವಾದ ವಿದ್ಯಾ ಸಂಸ್ಥೆಗಳು ವ್ಯಾಪಕವಾಗಿ ಈ ದಿನಗಳಲ್ಲಿ ಪ್ರಾರಂಭವಾಗಿದ್ದರಿಂದ, ಮುಂಬೈ ಪ್ರಾಂತ್ಯವು ಸಾಂಪ್ರದಾಯಿಕತೆ, ಹಳೆಯ ರೂಢಿ ರಿವಾಜುಗಳಿಂದ ಬಿಡುಗಡೆ ಪಡೆಯಿತು ಎಂದು ಹೇಳುವಾಗ ಮರೆಯಬಾರದ ಒಂದು ಸಂಗತಿಯೆಂದರೆ, ಬ್ರಿಟಿಷರ ಪ್ರವೇಶಕ್ಕೆ ಮುನ್ನವೇ ದೇಶೀಯ, ಸ್ಥಳೀಯ ಶಿಕ್ಷಣ ಸಂಸ್ಥೆಗಳು ಚೆನ್ನಾಗಿ ಬೇರು ಬಿಟ್ಟಿದ್ದವು, ಮತ್ತು ಈ ಸಂಸ್ಥೆಗಳ ಜಾಲವನ್ನೇ ಹೊಸ ರೀತಿಯ ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡವು ಎಂಬುದನ್ನು. ಈ ಹೊಸತನಕ್ಕೆ ಕಾರಣನಾದವನು ಮೌಂಟ್ ಸ್ಟೂವರ್ಟ್ ಎಲ್‌ಫಿನ್‌ಸ್ಟೋನ್ ಎಂಬ ರಾಜ್ಯಪಾಲ. ಹಳೆಯ ರೀತಿಯ ಶಿಕ್ಷಣವನ್ನು ಮುಂದುವರಿಸುತ್ತಲೇ ಇಂಗ್ಲಿಷ್ ಭಾಷೆಯನ್ನು ಕಲಿಸುವುದು ಕೂಡ ಜಾರಿಗೆ ಬಂತು. ದೇಶೀಯ ವಿದ್ಯಾ ಸಂಸ್ಥೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಹಿಂದಿನಿಂದಲೂ ಗಣಿತದ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದರು.
ನವರೋಜಿಯವರಲ್ಲೂ ಮೊದಲಿನಿಂದಲೂ ಗಣಿತದ ಬಗ್ಗೆ ವಿಶೇಷವಾದ ಒಲವಿತ್ತು. ನವರೋಜಿಯವರು ದೇಶೀಯ ಶಾಲೆಗೆ ಸೇರಲು ಕಾರಣರಾಗಿದ್ದ ಅದೇ ಮೆಹ್ತಾ ಅಧ್ಯಾಪಕರೇ, ದಾದಾಭಾಯಿ ಇಂಗ್ಲಿಷ್ ಶಾಲೆಯನ್ನು ಸೇರಲು ಕೂಡ ಕಾರಣರಾದರು. ಬೀಜಗಣಿತ, ವ್ಯಾಕರಣ, ಭೂಗೋಳ, ಈ ವಿಷಯಗಳ ಜೊತೆಗೆ, ಇಂಗ್ಲಿಷ್ ಸಾಹಿತ್ಯ ಮತ್ತು ಚರಿತ್ರೆಯ ಪರಿಚಯ ಕೂಡ ಅಯಿತು. ನವರೋಜಿಯವರಿಗೆ ಆ ದಿನಗಳಲ್ಲಿ ಬಹಳ ಪ್ರಿಯವಾಗಿದ್ದ ಗ್ರಂಥವೆಂದರೆ, The Improvement of Mind ಎಂಬ ಇಸಾಕ್ ವ್ಯಾಟನ್ ರಚಿತ ಕೃತಿ. ನಾಲ್ಕು ಜನ ಸೇರಿದ ಕಡೆ ಆರ‍್ಷಕವಾಗಿ ಪಾರ್ಸಿ ಕಾವ್ಯ ವಾಚನ ಮಾಡುವುದರಲ್ಲೂ ದಾದಾಭಾಯಿ ಹೆಸರು ಗಳಿಸಿದರು. ಗಣಿತದ ಬಗ್ಗೆ ಮಾತ್ತ ಆಸಕ್ತಿ, ಕಲಿಯುವಿಕೆ ಮುಂದುವರಿದೇ ಇತ್ತು. ಬ್ರಿಟನ್ ಪ್ರವಾಸ ಕಥನಕಾರನೊಬ್ಬ ಆ ದಿನಗಳಲ್ಲಿ ನವರೋಜಿಯವರ ಶಾಲೆಗೂ ಭೇಟಿ ನೀಡಿದ. ನವರೋಜಿಯವರ ಚುರುಕು ಬುದ್ಧಿ, ಪ್ರತ್ಯುತ್ಪನ್ನಮತಿಯನ್ನು ಗುರುತಿಸಿ ದಾಖಲಿಸಿದ. ಈ ದಿನಗಳಲ್ಲೇ ಹನ್ನೊಂದನೇ ವಯಸ್ಸಿನ ದಾದಾಭಾಯಿಗೆ ಏಳು ವರ್ಷದ ಗುಲಾಬಿಯೊಡನೆ ಲಗ್ನ ಕೂಡ ಆಯಿತು.

ಎಲ್‌ಫಿನ್‌ಸ್ಟೋನ್ ಶಿಕ್ಷಣ ಸಂಸ್ಥೆಯಲ್ಲಿ ಬೇರೆ ಬೇರೆ ದೇಶಗಳಿಂದ, ಹಿನ್ನೆಲೆಯಿಂದ ಬಂದ ಶಿಕ್ಷಕರು ಇದ್ದರು. ವಿದ್ಯಾರ್ಥಿಗಳ ಮೇಲೆ ಪ್ರೀತಿಯೂ ಇತ್ತು. ಆದರೆ ಬ್ರಿಟಿಷ್ ಸರ್ಕಾರವು ಧನಸಹಾಯ ನೀಡುವುದರಲ್ಲಿ ಉದಾರವಾಗಿರಲಿಲ್ಲ. ಭಾರತೀಯ ವ್ಯಾಪಾರಿಗಳು ಮತ್ತು ಸೇಠ್‌ಗಳು ಈ ಕೊರತೆಯನ್ನು ತುಂಬಿದರು. ಈ ಸಂಸ್ಥೆಗಳಲ್ಲಿ ಬೋಧಿಸುತ್ತಿದ್ದ ವಿಷಯಗಳನ್ನು ಗಮನಿಸಿದರೆ, ಗಣಿತ, ವಿಜ್ಞಾನಕ್ಕೇ ಹೆಚ್ಚು ಪ್ರಾಮುಖ್ಯತೆಯಿತ್ತು. Natural Philosophy ಎಂದು ಕಲಿಸುತ್ತಿದ್ದ ಪಾಠಗಳು ಮುಂದೆ ಭೌತಶಾಸ್ತ್ರ, ರಸಾಯನಶಾಸ್ತ್ರವನ್ನು ಆಳವಾಗಿ ಕಲಿಯುವಂತೆ ಪ್ರೇರೇಪಿಸುತ್ತಿದ್ದವು. ವಿದೇಶಿ ಶಿಕ್ಷಕರಲ್ಲದೆ ಬಾಲಗಂಗಾಧರ ಜಂಬೇಕರ್ ಶಾಸ್ತ್ರಿ ಮತ್ತು ನವರೋಜಿ ಫಾರೋನ್‌ಜಿ ಎಂಬ ಭಾರತೀಯ ಅಧ್ಯಾಪಕರು ಕೂಡ ಇದೇ ಸಂಸ್ಥೆಗಳಲ್ಲಿ ಕಲಿಸುತ್ತಿದ್ದರು. ಉಳಿದ ಶಿಕ್ಷಕರಂತೆ ಇಬ್ಬರೂ ಕೂಡ ಬೇರೆ ಬೇರೆ ಜ್ಞಾನಶಾಖೆಗಳಲ್ಲಿ, ಶಿಸ್ತುಗಳಲ್ಲಿ ಆಸಕ್ತರಾಗಿದ್ದವರು. ಜಂಬೇಕರ್, ನವರೋಜಿಯವರು ಇಂಗ್ಲಿಷ್ ಶಾಲೆಗೆ, ಕಾಲೇಜು ಶಿಕ್ಷಣಕ್ಕೆ ಆಯ್ಕೆಯಾಗುವುದರಲ್ಲೂ ಕೂಡ ಪ್ರಮುಖ ಪಾತ್ರ ವಹಿಸಿದರು. ಜಂಬೇಕರ್ ಶಾಸ್ತ್ರಿಯ ಬಹುಶ್ರುತ ಆಸಕ್ತಿ ಮತ್ತು ವಿದ್ಯಾರ್ಥಿ ಪ್ರೇಮವು ನವರೋಜಿಯವರ ಮೇಲೆ ಬಹಳ ಪರಿಣಾಮ ಬೀರಿದಂತಿದೆ. ಸಮಾಜ ಸುಧಾರಣೆ, ನ್ಯಾಯಾಂಗ, ಶಿಕ್ಷಣ, ಸಾರ್ವಜನಿಕ ಆಡಳಿತದ ಕ್ಷೇತ್ರಗಳಲ್ಲಿ ಮುಂದೆ ಹೆಸರು ಮಾಡಿದ ಗಣ್ಯರೆಲ್ಲ ಇದೇ ಸಂಸ್ಥೆಯಲ್ಲಿ ನವರೋಜಿಯವರಿಂದ ತರಬೇತಿ ಪಡೆದವರೇ. ಶಿಕ್ಷಕರಾಗಿ ನವರೋಜಿ ಎಷ್ಟು ಜನಪ್ರಿಯರಾಗಿದ್ದರೆಂದರೆ, ಎಲ್‌ಫಿನ್‌ಸ್ಟೋನ್ ಕಾಲೇಜಿನಲ್ಲೇ ಕ್ರಮೇಣ ಅವರನ್ನು ಪ್ರಾಧ್ಯಾಪಕರಾಗಿ ನೇಮಿಸಿಕೊಳ್ಳಲಾಯಿತು. ಹೀಗೆ ಪ್ರಾಧ್ಯಾಪಕರಾಗಿ ನೇಮಕಗೊಂಡ ಭಾರತೀಯರಲ್ಲಿ ನವರೋಜಿಯವರೇ ಮೊದಲಿಗರಾಗಿದ್ದರು.
ನವರೋಜಿಯವರ ಈ ಕಾಲಾವಧಿಯ ಬದುಕಿನ ಇನ್ನೆರಡು ಮುಖ್ಯ ಆಯಾಮಗಳೆಂದರೆ, ಹತ್ತಾರು ಸಾರ್ವಜನಿಕ ಸಂಸ್ಥೆಗಳನ್ನು ರೂಪಿಸಿದ್ದು, ಸಾರ್ವಜನಿಕ ಅಭಿಪ್ರಾಯ, ಚಿಂತನೆಗಳಲ್ಲಿ ತೊಡಗುವಂತೆ ಸಾರ್ವಜನಿಕರನ್ನು ನಿರಂತರವಾಗಿ ಪ್ರೇರೇಪಿಸುತ್ತಿದ್ದದ್ದು ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಂಸ್ಥೆಗಳನ್ನು ಹುಟ್ಟುಹಾಕಿದ್ದು, ಮನೆ ಮನೆಗೆ ತಿರುಗಿ ಹೆಣ್ಣು ಮಕ್ಕಳು ಶಾಲೆಗಳಿಗೆ ಬರುವಂತೆ ಪ್ರೇರೇಪಿಸುತ್ತಿದ್ದುದು. ಈ ಎಲ್ಲ ಚಟುವಟಿಕೆಗಳಿಗೆ ನವರೋಜಿಯವರಿಗೆ ಬೆಂಬಲವಾಗಿ ನಿಂತಿದ್ದು, ಮುಂಬೈ-ಗುಜರಾತಿನ ವ್ಯಾಪಾರಿಗಳು ಮತ್ತು ಪಾರ್ಸಿ ಸಮುದಾಯದ ಶ್ರೀಮಂತರು. ಪಾರ್ಸಿ ಸಮುದಾಯವನ್ನು ಸಾಂಪ್ರದಾಯಿಕತೆಯಿಂದ ಬಿಡಿಸುವುದು, ಆಧುನಿಕತೆ, ವೈಚಾರಿಕತೆಯ ದಿಕ್ಕಿನಲ್ಲಿ ತೆರೆಯುವುದು ಕೂಡ ನವರೋಜಿಯವರ ಸಮಯ, ಆಸಕ್ತಿಯನ್ನು ಪಡೆಯುತ್ತಿತ್ತು. ಹೊಸ ಪತ್ರಿಕೆ, ಹೊಸ ಪ್ರಕಟಣೆಗಳು ಕೂಡ ಮೂಡಿ ಬಂದವು. ನವರೋಜಿಯವರು ಸ್ಥಾಪಿಸಿದ ಸಂಘ-ಸಂಸ್ಥೆಗಳು, ವಿಜ್ಞಾನ, ವಾಣಿಜ್ಯ, ರಾಜಕೀಯ, ಪ್ರಜಾತಂತ್ರ, ಹೀಗೆ ಹತ್ತು ಹಲವು ವಿಷಯಗಳನ್ನು ಚರ್ಚಿಸುತ್ತಿದ್ದವು. ಈ ಎಲ್ಲ ಸಂಸ್ಥೆಗಳಿಗೂ ನಾಯಕತ್ವ ವಹಿಸುವಂತಹ ನಾಯಕತ್ವದ ಗುಣಗಳನ್ನು ನವರೋಜಿ ಈಗಾಗಲೇ ಸಾಬೀತು ಪಡಿಸಿದ್ದರು. ಮತ್ತು ಮುಂಬೈ ಹಾಗೂ ಪಾರ್ಸಿ ಸಮುದಾಯ ಈ ರೀತಿ ನಾಯಕನೊಬ್ಬನ ಬರುವಿಗಾಗಿ ಕಾಯುತ್ತಿತ್ತು ಎಂದು ಕಾಣುತ್ತದೆ.
ಮುಂದೆ ಭಾರತದ ಸ್ವಾತಂತ್ರ‍್ಯ ಹೋರಾಟಗಾರರೆಲ್ಲ ಕಾನೂನು, ನ್ಯಾಯಾಂಗ, ವಕೀಲಿಕೆಯ ಹಿನ್ನೆಲೆಯಿಂದ ಮೂಡಿ ಬಂದವರಲ್ಲವೇ! ಈ ದಿಕ್ಕಿನಲ್ಲಿ ಕೂಡ ನವರೋಜಿಯವರು ಹೊರಡುವ ಸೂಚನೆಗಳಿದ್ದವು. ಒಬ್ಬ ಇಂಗ್ಲಿಷ್ ನ್ಯಾಯಾಧೀಶ, ನವರೋಜಿಯವರನ್ನು ಉನ್ನತ ಕಾನೂನು ಶಿಕ್ಷಣಕ್ಕೆ ಇಂಗ್ಲೆಂಡಿಗೆ ಕಳಿಸುವುದಾದರೆ ನಾನೇ ಅರ್ಧ ವೆಚ್ಚವನ್ನು ಭರಿಸುತ್ತೇನೆ ಎಂದು ಮುಂದೆ ಬಂದರು. ಇನ್ನರ್ಧ ವೆಚ್ಚವನ್ನು ಪಾರ್ಸಿ ಶ್ರೀಮಂತರು ವಹಿಸುವುವೆಂದು ಸೂಚಿಸಿದರು. ಪಾರ್ಸಿ ಸಮುದಾಯ ಇದಕ್ಕೆ ಒಪ್ಪಲಿಲ್ಲ. ನವರೋಜಿಯವರನ್ನು ಕ್ರೈಸ್ತರನ್ನಾಗಿ ಪರಿವರ್ತಿಸುವ ಉಪಾಯವಿದೆಂದು ಭಯ ಪಟ್ಟರು. ಇಲ್ಲದಿದ್ದರೆ, ನವರೋಜಿ ಇಂಗ್ಲೆಂಡಿನಲ್ಲಿ ತರಬೇತಿ ಪಡೆದ ಮೊದಲ ಭಾರತೀಯ ವಕೀಲರಾಗುತ್ತಿದ್ದರು.
ಹೆಣ್ಣು ಮಕ್ಕಳ ಶಿಕ್ಷಣವು ವ್ಯಾಪಕವಾಗಿ ಹರಡದಿದ್ದರೆ, ಪುರುಷರು ಕೌಟುಂಬಿಕ ಜೀವನದಲ್ಲಾಗಲೀ ಸಾರ್ವಜನಿಕ ಜೀವನದಲ್ಲಾಗಲೀ ಇಡಿಯಾಗಿ ಅರಳಲು ಸಾಧ್ಯವಿಲ್ಲ ಎಂದು ಬಾಲ್ಯ ವಿವಾಹಕ್ಕೆ ಒಳಗಾದ ನವರೋಜಿಯವರು ಸರಿಯಾಗಿಯೇ ಗುರುತಿಸಿದ್ದರು. ಬ್ರಿಟನ್ ಸರ್ಕಾರವು ಭಾರತದಲ್ಲಿ ಶಿಕ್ಷಣ ಹರಡುವುದನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಹೆಣ್ಣು ಮಕ್ಕಳ ಶಿಕ್ಷಣ ಎಂದರೆ ಮೂಗು ಮುರಿಯುತ್ತಿತ್ತು. ಭಾರತೀಯ ತಂದೆ-ತಾಯಿಗಳನ್ನು ಒಲಿಸುವುದು ಕೂಡ ಕಷ್ಟವಿತ್ತು. ನವರೋಜಿಯವರು ಪಟ್ಟು ಬಿಡದೆ ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಲೇ ಇದ್ದರು.
ಕಾಮಾ ಕುಟುಂಬದವರು ಲಂಡನ್‌ನಲ್ಲಿ ಒಂದು ವ್ಯಾಪಾರಿ ಸಂಸ್ಥೆಯನ್ನು ಪ್ರಾರಂಭಿಸುತ್ತೇವೆ, ಆ ಸಂಸ್ಥೆಯಲ್ಲಿ ನವರೋಜಿ ಪಾಲುದಾರರಾಗಬೇಕೆಂಬ ಸೂಚನೆ ಕೊಟ್ಟಾಗ, ದಾದಾಭಾಯಿ ಒಪ್ಪಿದರು ಮತ್ತು ಅವರ ಜೊತೆ ಹೊರಟರು. ಪ್ರಾಧ್ಯಾಪಕರು ಹೀಗೆ ಶಿಕ್ಷಣ ಕ್ಷೇತ್ರವನ್ನು ಬಿಟ್ಟು ವ್ಯಾಪಾರಿ ಸಂಸ್ಥೆಯೊಂದರಲ್ಲಿ ಪಾಲುದಾರರಾಗಿ ಕೆಲಸ ಮಾಡಲು ಒಪ್ಪಿ ಹೊರಟದ್ದು ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡಿತು. ವಿಶೇಷವಾಗಿ ದಾದಾಭಾಯಿಯವರ ಜೊತೆ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಯ ಒಡನಾಡಿಗಳಿಗೆ. “Dadabhai What a Fall??” ಎಂದು ಗೇಲಿ ಮಾಡಿದರು. ಇಲ್ಲ, ಮತ್ತೆ ಕೆಲವೇ ವರ್ಷಗಳಲ್ಲಿ ಮುಂಬೈ ಮತ್ತು ಎಲ್‌ಫಿನ್‌ಸ್ಟೋನ್ ಸಂಸ್ಥೆಗೆ ಹಿಂದಿರುಗುತ್ತೇನೆ ಎಂಬ ನವರೋಜಿಯವರ ಭರವಸೆ ಹಾಗೇ ಉಳಿಯಿತು. ಇದೆಲ್ಲ ನಡೆದದ್ದು ೧೮೫೫ರಲ್ಲಿ.

ಅಂದರೆ ತಮ್ಮ ಬದುಕಿನ ಮೂವತ್ತು ವರ್ಷಗಳೊಳಗೇ ದಾದಾಭಾಯಿ ಎಷ್ಟೆಲ್ಲ ಸಾಧಿಸಿದ್ದರು, ಎಷ್ಟು ಕ್ಷೇತ್ರಗಳಲ್ಲಿ ಎಷ್ಟೊಂದು ಆಸಕ್ತಿ ಇತ್ತು ಎಂಬುದನ್ನು ಗಮನಿಸಬಹುದು. ಆದರೆ ಅವರ ಮುಂದಿನ ಬದುಕಿನ ವಿಚಾರಗಳು, ಹೋರಾಟದ ಸ್ವರೂಪ ಮತ್ತು ವೈವಿಧ್ಯಮಯ ಆಸಕ್ತಿಗಳು ರೂಪುಗೊಂಡದ್ದು ಮೊದಲ ಮೂವತ್ತು ವರ್ಷಗಳಲ್ಲೇ ಎಂಬುದು ಕೂಡ ನಮಗೆ ಗೊತ್ತಾಗುತ್ತದೆ. ಈ ದೃಷ್ಟಿಯಿಂದ ನವರೋಜಿಯವರ ಬದುಕಿನ ಮೊದಲ ಮೂವತ್ತು ವರ್ಷಗಳ ಬದುಕನ್ನು ಇನ್ನೂ ವಿವರವಾಗಿ, ಸೂಕ್ಷ್ಮವಾಗಿ ಅಧ್ಯಯನ ಮಾಡುವ ಅಗತ್ಯವಿದೆ.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

