Advertisement
ರೋಸಿ ಮೇಡಂ ಕಂಡ ಕತ್ತಲ ಸಾಮ್ರಾಜ್ಯ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ರೋಸಿ ಮೇಡಂ ಕಂಡ ಕತ್ತಲ ಸಾಮ್ರಾಜ್ಯ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಶಿಲೆಗಳಲ್ಲಿ ಈ ರೀತಿಯಾಗಿ ಚಿನ್ನ ನೋಡಿದ ರೋಸೀ ಸ್ವಲ್ಪ ಹೊತ್ತು ಮಾತು ಬರದೇಹೋದಳು. ನಂತರ ಚೇತರಿಸಿಕೊಂಡು ಬ್ಯಾಟರಿಗಳನ್ನು ಆಫ್ ಮಾಡುವಂತೆ ತಿಳಿಸಿ ಕತ್ತಲಲ್ಲಿ ಕಣ್ಣುಗಳನ್ನು ಹಿಗ್ಗಿಸಿಕೊಂಡು, ಕುಗ್ಗಿಸಿಕೊಂಡು ಗೋಡೆಗಳಲ್ಲಿದ್ದ ಚಿನ್ನವನ್ನು ನೋಡಲು ಪ್ರಯತ್ನಿಸಿದಳು. ಸುಮಾರು ಹೊತ್ತು ರೋಸೀ ಅದೇ ರೀತಿಯಾಗಿ ನೋಡಿದಳು. ಆಕೆಯ ಜೊತೆಗೆ ಬಂದಿದ್ದ ಇಬ್ಬರು ಅಧಿಕಾರಿಗಳು ಅದೇ ರೀತಿಯಾಗಿ ಹಲವಾರು ಸಲ ನೋಡಿ ಬೆರಗುಗೊಂಡಿದ್ದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

ಪ್ರಯಾಣ ಮಾಡಿದ ಆಯಾಸದಿಂದ ನಿದ್ದೆಗೆ ಜಾರಿಕೊಂಡಿದ್ದ ರೋಸೀ ಮಧ್ಯಾಹ್ನ ಒಂದು ಗಂಟೆಗೆ ಎದ್ದು ಕಾಲಿಂಗ್ ಬೆಲ್ ಒತ್ತಿದಳು. ಔಟ್ ಹೌಸ್‌ನಲ್ಲಿದ್ದ ಜಾನ್ಸನ್ ಬಾಗಿಲು ತೆರೆದುಕೊಂಡು ಒಳಗಡೆ ಬಂದ. ರೋಸೀ, “ಈಗ ಲಂಚ್ ಏನು ಮಾಡಲು ಸಾಧ್ಯ?” ಎಂದಳು. ಜಾನ್ಸನ್ ಒಂದು ದೊಡ್ಡ ಪಟ್ಟಿಯನ್ನು ರೋಸೀ ಕೈಗೆ ಕೊಟ್ಟ. ರೋಸೀ, “ಮೊದಲಿಗೆ ಒಂದು ಟೀ ಮಾಡಿಕೊಂಡು ಬಾ. ಅಷ್ಟರಲ್ಲಿ ನಾನು ಇದನ್ನು ನೋಡ್ತೀನಿ” ಎಂದಳು. ಜಾನ್ಸನ್ ಟೀ ಜೊತೆಗೆ ಎರಡು ರೀತಿಯ ಬಿಸ್ಕಟ್‌ಗಳನ್ನು ಟ್ರೇನಲ್ಲಿ ಇಟ್ಟುಕೊಂಡು ಬಂದಿದ್ದ. “ಥ್ಯಾಂಕ್ಯೂ ಜಾನ್ಸನ್ ಈಗ ಏನಾದರೂ ಲೈಟಾಗಿ ಮಾಡು. ನಾನ್‌ವೆಜ್ ಏನು ಮಾಡುವುದಕ್ಕಾಗುತ್ತೆ?” ಎಂದಳು. ಜಾನ್ಸನ್, “ಮ್ಯಾಮ್, ನಾನ್ ವೆಜ್ ಎರಡು ಕನಿಷ್ಠ ಗಂಟೆ ಮೊದಲು ಹೇಳಬೇಕು” ಎಂದ. ರೋಸೀ, “ಓಕೆ, ಫೈನ್. ಡಿನ್ನರ್‌ನಲ್ಲಿ ಮಾಡುವಿಯಂತೆ. ಈಗ ಸೌಥ್ ಇಂಡಿಯನ್ ಐಟಮ್ಸ್ ನಿನಗೆ ಏನು ಇಷ್ಟಾನೊ ಅದನ್ನೇ ಮಾಡು. ಆದರೆ ಕಾರ ಕಡಿಮೆ ಇರಲಿ” ಎಂದಳು. ಜಾನ್ಸನ್, “ಮಸಾಲೆ ದೋಸೆ, ಚೆಟ್ನಿ ಸಾಂಬಾರ್” ಎಂದ. ರೋಸೀ, “ಓಕೆ. ನೈಸ್. ಜೊತೆಗೆ ಫಿಲ್ಟರ್ ಕಾಫಿ” ಎಂದಳು. ಜಾನ್ಸನ್ ಕಿಚ್ಚನ್ ಒಳಕ್ಕೆ ಹೋದ. ರೋಸೀ, “ಮಿ.ಜಾನ್ಸನ್, ಇನ್ನೊಂದು ವಿಷಯ. ಎಲ್ಲವನ್ನೂ ಬರೆದಿಡು. ಐ ವಿಲ್ ಪೇ ಪಾರ್ ದಟ್” ಎಂದಳು.

ರೋಸೀ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಬಂದಳು. ಮಧ್ಯಾಹ್ನ ಎರಡು ಗಂಟೆಗೆ ಮಸಾಲೆ ದೋಸೆ, ಚೆಟ್ನಿ ಮತ್ತು ಸಾಂಬಾರ್ ತಿಂದ ರೋಸೀ, “ನಮ್ಮ ಪೂರ್ವಜರು ಇಂತಹ ರುಚಿರುಚಿ ತಿಂಡಿಗಳನ್ನು ತಿನ್ನುತ್ತಿದ್ದರೆ?” ಎಂದು ಪ್ರಶ್ನಿಸಿದಳು. ಜಾನ್ಸನ್, “ಇದೇನು ಮ್ಯಾಮ್, ನೀವು ಎಷ್ಟು ದಿನ ಇರ್ತೀರಿ?” ಎಂದ. ರೋಸೀ “ಹತ್ತು ದಿನ ಇಲ್ಲಿ ಇರ್ತೀನಿ. ಅನಂತರ ಹಂಪಿ, ಬೇಲೂರು ಹಳೆಬೀಡು, ಮೈಸೂರು, ಊಟಿ, ಬೆಂಗಳೂರು ನೋಡಿಕೊಂಡು ಲಂಡನ್‌ಗೆ ಹೊರಟುಹೋಗ್ತಿನಿ” ಎಂದಳು. ಜಾನ್ಸನ್, “ಹತ್ತು ದಿನಗಳಲ್ಲಿ ನಿಮಗೆ ಏನೇನು ಸಾಧ್ಯಾನೊ ಎಲ್ಲಾ ತಿಂಡಿಗಳ ರುಚಿಯನ್ನೂ ಮಾಡಿ ತೋರಿಸ್ತೀನಿ” ಎಂದ. ರಾತ್ರಿಯ ಡಿನ್ನರ್‌ನಲ್ಲಿ ಮಟನ್ ಕರ‍್ರಿ, ಚಿಕನ್ ಬಿರಿಯಾನಿ, ಅನ್ನ ರಸಂ ಮಾಡಿ ತಿನ್ನಿಸಿ ರೋಸೀಗೆ ಬೆರಗು ಹುಟ್ಟಿಸುವಂತೆ ಮಾಡಿದ್ದ. ಹೊರದೇಶಗಳಿಂದ ಬರುತ್ತಿದ್ದ ಅದೂ ಕೂಡ ವಿಶೇಷವಾಗಿ ಇಂಗ್ಲೆಂಡ್‌ನಿಂದ ಬರುತ್ತಿದ್ದ ಅತಿಥಿಗಳಿಗೆ ಜಾನ್ಸನ್ ಅವರ ಅಪ್ಪ ಅಮ್ಮ, ಅವನ ಅಜ್ಜ ಅಜ್ಜಿ ಇದೇ ಅತಿಥಿ ಗೃಹದಲ್ಲಿ ಅಡಿಗೆ ಮಾಡುತ್ತಿದ್ದರು ಎಂದು ತಿಳಿಸಿದ.

*****

ಮರುದಿನ ಬೆಳಿಗ್ಗೆ ಮಣಿ ಒಂಬತ್ತು ಗಂಟೆಗೆ ಮಣಿ ವಾಹನದಲ್ಲಿ ಬಂದು ರೋಸೀಯನ್ನು ಕರೆದುಕೊಂಡು ಹೊರಟ. ಮಣಿ ಎಲ್ಲಾ ೧೦ ದಿನಗಳ ಕಾರ್ಯಕ್ರಮದ ವೇಳಾಪಟ್ಟಿಯ ಕಾಪಿ ಒಂದನ್ನು ರೋಸೀಗೆ ಕೊಟ್ಟ. ರೋಸಿ ತೆಗೆದುಕೊಂಡು ನೋಡಿ, “ಥ್ಯಾಂಕ್ಯೂ” ಎಂದಳು. ಜೀಪು ವಾಡಿಯರ್ ರಸ್ತೆಯಲ್ಲಿ ನೇರವಾಗಿ ಹೋಗಿ ಅತ್ಯಂತ ಆಳವಾದ ಚಾಂಪಿಯನ್ ಗಣಿಯ ಮುಂದೆ ನಿಂತುಕೊಂಡಿತು. ರೋಸೀಗೆ ಮೊದಲೇ ತಿಳಿಸಿದ್ದರಿಂದ ಜೀನ್ಸ್ ಪ್ಯಾಂಟು, ಟೀ ಶರ್ಟ್ ಜೊತೆಗೆ ಕಾಲಿಗೆ ಮೈನಿಂಗ್ ಬೂಟುಗಳನ್ನು ಹಾಕಿಕೊಂಡಿದ್ದಳು. ಸೆಕ್ಯೂರಿಟಿ ಆಕೆಯ ಸೊಂಟದ ಮೇಲೆ ಬೆಲ್ಟ್ ಸುತ್ತಿ ಬ್ಯಾಟರಿಯನ್ನು ಕಟ್ಟಿ ತಲೆಗೆ ಹೆಲ್ಮೆಟ್ ಹಾಕಿ ಹೆಲ್ಮೆಟ್ ಮೇಲೆ ಲ್ಯಾಂಪ್ ಸಿಕ್ಕಿಸಿದರು. ಅನಂತರ ಕೆಲವು ಸೂಚನೆಗಳನ್ನು ಕೊಟ್ಟು ಇಬ್ಬರು ಅಧಿಕಾರಿಗಳು ಕೇಜ್‌ನಲ್ಲಿ ರೋಸೀಯನ್ನು ಕರೆದುಕೊಂಡು ನೇರವಾಗಿ ಎರಡು ಕಿ.ಮೀ.ಗಳ ಆಳಕ್ಕೆ ಹೋಗಿ ಇಳಿದರು. ರೋಸೀ ಕಣ್ಣುಗಳ ಮುಂದೆ ಕತ್ತಲೇ ತುಂಬಿಕೊಂಡಂತಿತ್ತು. ನಂತರ ನಿಧಾನವಾಗಿ ಕಣ್ಣುಗಳ ಒಳಗೆ ದೀಪಗಳ ಬೆಳಕು ಒತ್ತಿಕೊಂಡಂತಾಗಿ ಸುತ್ತಲಿನ ಚಿತ್ರಣಗಳು ಮೂಡತೊಡಗಿದವು. ಮಣಿ ಆಕೆಯ ಹಿಂದೆಯೇ ಇದ್ದ.

ರೋಸೀಗೆ ಆಶ್ಚರ್ಯವೋ ಆಶ್ಚರ್ಯ. ಎಲ್ಲೆಲ್ಲೂ ವಿದ್ಯುತ್ ಬಲ್ಬ್‌ಗಳು. ತಣ್ಣಗೆ ಬೀಸಿಬರುವ ಏಸಿ ಕಂಪ್ರಸ್ಸರ್ ಗಾಳಿ. ರೋಸೀ ಗಣಿಯ ಒಳಗೆ ಇಳಿದಿದ್ದು ಇದೇ ಮೊದಲು. ಜೊತೆಯಲ್ಲಿದ್ದ ಗಣಿ ಅಧಿಕಾರಿ, “ಮ್ಯಾಮ್ ನಿಧಾನವಾಗಿ ಕೆಳಗೆ ನೋಡಿಕೊಂಡು ನಡೆಯಿರಿ. ಹಾಗೆಯೇ ಮೇಲೆ ಕೂಡ ನೋಡಿಕೊಂಡು ನಡೆಯಬೇಕು. ತಲೆಗೆ ಕಲ್ಲುಗಳು ಹೊಡೆದುಬಿಡುತ್ತವೆ” ಎಂದ. ಸ್ವಲ್ಪ ದೂರ ಸುರಂಗದಲ್ಲಿ ನಡೆದ ಮೇಲೆ ಸುರಂಗದ ಒಳಗಿಂದ ಎದುರಿಗೆ ರೈಲುಗಳ ಮೇಲೆ ಅದಿರನ್ನು ತುಂಬಿಕೊಂಡ ಉದ್ದನೇ ಟ್ರಾಲಿಗಳು ಬರುತ್ತಿದ್ದವು. ಇನ್ನೂ ಸ್ವಲ್ಪ ದೂರ ಹೋದ ಮೇಲೆ ಅಲ್ಲೊಂದು ರೈಲು ಜಂಕ್ಷನ್ ಸಿಕ್ಕಿತು.

ಜಂಕ್ಷನ್‌ನಿಂದ ಇನ್ನಷ್ಟು ದೂರ ಹೋದ ಮೇಲೆ ಜೊತೆಯಲ್ಲಿದ್ದ ಅಧಿಕಾರಿ ಚಿನ್ನವಿರುವ ಕ್ವಾರ್ಟ್ಝ್ ಶಿಲೆಗಳನ್ನು ತೋರಿಸಿ “ಇದೇ ಚಿನ್ನ ದೊರಕುವ ಶಿಲೆಗಳು” ಎಂದು ಬ್ಯಾಟರಿ ಹಾಕಿ ತೋರಿಸಿದ. ರೋಸೀ ಬೆರಗಾಗಿ ಅದನ್ನು ಬೆರಳುಗಳಲ್ಲಿ ಮುಟ್ಟಿಮುಟ್ಟಿ ನೋಡಿದಳು. ಬೆರಳುಗಳು ಸುಡುತ್ತಿವೆ ಏನೋ ಎನ್ನುವಷ್ಟು ಬಿಸಿ. ಆ ಸುರಂಗದ ಗೋಡೆಗಳು ಸಾಕಷ್ಟು ಬಿಸಿಯಿಂದ ಕೂಡಿದ್ದು ಶಿಲೆಗಳ ಗೋಡೆಗಳಲ್ಲಿ ಚಿನ್ನದ ಧೂಳು/ಪೋಗುಗಳು ಮಿರಮಿರ ಮಿನುಗುತ್ತಿದ್ದವು. ಬಿಳಿ ಹಳದಿಮಿಶ್ರಿತ ಹತ್ತಿಯಷ್ಟೇ ಸಣ್ಣನೆ ಎಳೆಗಳ ರೀತಿಯ ಚಿನ್ನದ ಪೋಗುಗಳು, ಆಕಾಶದಲ್ಲಿ ಗುಡುಗಿನ ಜೊತೆಗೆ ಕಾಣಿಸಿಕೊಳ್ಳುವ ಸಿಡಿಲು-ಬೆಳಕಿನ ಮಿಂಚು ಎಳೆಗಳಂತೆ. ಕತ್ತಲ ಆಕಾಶದಲ್ಲಿ ಕಣ್ಣಿಗೆ ಕಾಣದಷ್ಟು ದೂರದಲ್ಲಿ ಹೊಳೆಯುವ ನಕ್ಷತ್ರಗಳ ಧೂಳು… ಹೀಗೆ ವರ್ಣಿಸಲಾರದ ರೀತಿಯಲ್ಲಿ ಚಿನ್ನ ಬ್ಯಾಟರಿಗಳ ಬೆಳಕಿನಲ್ಲಿ ಹೊಳೆಯುತ್ತಿತ್ತು.

ಶಿಲೆಗಳಲ್ಲಿ ಈ ರೀತಿಯಾಗಿ ಚಿನ್ನ ನೋಡಿದ ರೋಸೀ ಸ್ವಲ್ಪ ಹೊತ್ತು ಮಾತು ಬರದೇಹೋದಳು. ನಂತರ ಚೇತರಿಸಿಕೊಂಡು ಬ್ಯಾಟರಿಗಳನ್ನು ಆಫ್ ಮಾಡುವಂತೆ ತಿಳಿಸಿ ಕತ್ತಲಲ್ಲಿ ಕಣ್ಣುಗಳನ್ನು ಹಿಗ್ಗಿಸಿಕೊಂಡು, ಕುಗ್ಗಿಸಿಕೊಂಡು ಗೋಡೆಗಳಲ್ಲಿದ್ದ ಚಿನ್ನವನ್ನು ನೋಡಲು ಪ್ರಯತ್ನಿಸಿದಳು. ಸುಮಾರು ಹೊತ್ತು ರೋಸೀ ಅದೇ ರೀತಿಯಾಗಿ ನೋಡಿದಳು. ಆಕೆಯ ಜೊತೆಗೆ ಬಂದಿದ್ದ ಇಬ್ಬರು ಅಧಿಕಾರಿಗಳು ಅದೇ ರೀತಿಯಾಗಿ ಹಲವಾರು ಸಲ ನೋಡಿ ಬೆರಗುಗೊಂಡಿದ್ದರು. ಆಶ್ಚರ್ಯವೆಂದರೆ ಕತ್ತಲ ಆಕಾಶದಲ್ಲಿ ಮನೆಯ ಮೇಲೆ ಮಲಗಿಕೊಂಡು ಆಕಾಶದ ಕಡೆಗೆ ನೋಡಿದಾಗ ದೂರದಲ್ಲಿ ಕಾಣಿಸುವ ನಕ್ಷತ್ರಗಳಂತೆ ಚಿನ್ನದ ಧೂಳು ಆಕೆಯ ಕಣ್ಣುಗಳಲ್ಲಿ ಮಿನುಗತೊಡಗಿತು. ವಿಜ್ಞಾನಿಗಳು ಹೇಳುವಂತೆ ಮನುಷ್ಯನ ದೇಹ ಒಂದು ಅದ್ಭುತ ಬ್ರಹ್ಮಾಂಡವೇ ಆಗಿದೆ. ಅದಕ್ಕಾಗಿಯೇ ಪ್ರಖ್ಯಾತ ಭೌತಶಾಸ್ತ್ರಜ್ಞ Carl Sagan, “Each and every atom of my body is a part of stars once upon a time’’ ಎಂದಿದ್ದಾನೆ. ಅಂದರೆ ಮನುಷ್ಯನ ದೇಹ ಇಂದು ನಿನ್ನೆಯದಲ್ಲ. ಬ್ರಹ್ಮಾಂಡದ ಜೊತೆಗೆ ಬ್ರಹ್ಮಾಂಡದ ಹುಟ್ಟಿನೊಂದಿಗೆ ಸಂಬಂಧ ಹೊಂದಿದೆ.

ಈಗ ಕತ್ತಲ ಸುರಂಗದಲ್ಲಿನ ಚಿನ್ನದ ಧೂಳು ರೋಸೀ ಕಣ್ಣುಗಳಲ್ಲಿ ಆಕಾಶದಲ್ಲಿನ ನಕ್ಷತ್ರಗಳಂತೆ ಹೊಳೆಯುತ್ತಿತ್ತು. ಚಿನ್ನದ ಹುಟ್ಟು ಭೂಮಿಯ ಜೊತೆಗೆ ಸಂಬಂಧ ಹೊಂದಿದ್ದರೆ ಭೂಮಿಯ ಹುಟ್ಟು ಬ್ರಹ್ಮಾಂಡದ ಜೊತೆಗೆ (ನೆಬ್ಯುಲಾ ಜೊತೆಗೆ) ಸಂಬಂಧ ಹೊಂದಿದೆ. ಅದೆಲ್ಲವನ್ನೂ ಇಲ್ಲಿ ವಿವರಿಸಿದರೆ ಶುದ್ಧ ವಿಜ್ಞಾನವಾಗಿಬಿಡುತ್ತದೆ. ಪ್ರತಿಯೊಬ್ಬ ಮನುಷ್ಯ, ಪ್ರಾಣಿ, ಗಿಡಮರಗಳು ಪಂಚಭೂತಗಳಿಂದಲೇ ನಿಸರ್ಗದಲ್ಲಿ ಸೃಷ್ಟಿಯಾದಂತವು. ಹಾಗಾಗಿ ಮನುಷ್ಯನಲ್ಲಿ ಮಣ್ಣು, ಗಾಳಿ, ಬೆಂಕಿ, ನೀರು, ಆಕಾಶ (ಎಲ್ಲವೂ ಆಕಾಶದ ಅಂಶವೇ) ಸೇರಿಕೊಂಡಿದೆ. ಹಾಗಾಗಿ ನಾವು ಕತ್ತಲಲ್ಲಿ ಎಷ್ಟೋ ದೂರದಲ್ಲಿರುವ ನಮ್ಮದೇ ದೇಹದ ಕಣಗಳಾದ ನಕ್ಷತ್ರಗಳನ್ನು ನಮ್ಮ ಕಣ್ಣುಗಳ ಬೆಳಕಿನಿಂದ ನೋಡಬಹುದಾಗಿದೆ.

ಈಗ ಬೀಸುತ್ತಿದ್ದ ತಂಪು ಗಾಳಿ ಕಡಿಮೆಯಾಗಿ ರೋಸೀ ಮೈಯಲ್ಲಾ ಬೆವರುತ್ತಿತ್ತು. ಚಿನ್ನ ಶಿಲೆಗಳಲ್ಲಿ ಹೇಗೆ ದೊರಕುತ್ತದೆ ಎನ್ನುವ ವಿಚಾರ ಮಾತ್ರ ರೋಸೀಗೆ ಅರ್ಥವಾಗಿತ್ತು. ಬ್ಯಾಟರಿ ಬೆಳಕಿನಲ್ಲಿ ರೋಸೀ ಈಗ ಬ್ರಹ್ಮಾಂಡದಲ್ಲಿ ಸುತ್ತಾಕುತ್ತಿರುವಂತೆ ಊಹಿಸಿಕೊಂಡಳು. ತಾನು ಕೋಲಾರ ಚಿನ್ನದ ಗಣಿಗಳ ಒಂದು ಸುರಂಗದಲ್ಲಿ ಎರಡು ಕಿ.ಮೀ.ಗಳ ಆಳದಲ್ಲಿ ಇರುವುದಾಗಿ ಜ್ಞಾಪಕಕ್ಕೆ ಬಂದಿತು. ನಂತರ ಅಧಿಕಾರಿಗಳು ರೋಸೀಯನ್ನು ಸುಮಾರು ದೂರ ಸುರಂಗಗಳಲ್ಲಿ ನಡೆಸಿಕೊಂಡು ಹೋಗಿ ಡ್ರಿಲ್ಲಿಂಗ್ ಮಾಡುವ ವಿಧಾನ, ದೊಡ್ಡದೊಡ್ಡ ಶಿಲೆಗಳನ್ನು ಒಡೆಯುವ ಯಂತ್ರಗಳನ್ನು ಮತ್ತು ಅಂಡರ್‌ಗ್ರೌಂಡ್‌ನಲ್ಲಿ ನಡೆಯುವ ಎಲ್ಲಾ ಕೆಲಸಗಳನ್ನು ತೋರಿಸಿಕೊಂಡು ಮೇಲಕ್ಕೆ ಬಂದಿದ್ದರು. ರೋಸೀ ತನಗೆ ಗೊತ್ತಿಲ್ಲದ ಎಂದೂ ಊಹಿಸದ ಒಂದು ಪ್ರಪಂಚವನ್ನು ನೋಡಿಕೊಂಡು ಭೂಮಿ ಮೇಲಕ್ಕೆ ಬಂದರೂ ಇನ್ನೂ ಪಾತಾಳ ಸುರಂಗಗಳ ಗುಂಗಿನಲ್ಲೇ ಇದ್ದಳು. ಅಲ್ಲಿಂದ ನೇರವಾಗಿ ಅತಿಥಿ ಗೃಹಕ್ಕೆ ಹೋಗಿ ಸ್ನಾನ ಮಾಡಿ, ಊಟ ಮಾಡಿ ನೋಟ್ಸ್ ಮಾಡಲು ಕುಳಿತುಕೊಂಡುಬಿಟ್ಟಳು. ರೋಸೀ ಬೆಳಗಿನಿಂದ ನೋಡಿದ ಸಂಪೂರ್ಣ ವಿಷಯಗಳನ್ನು ನೋಟ್ಸ್ ಮಾಡಿ ಮುಗಿಸುವವರೆಗೂ ಎದ್ದೇಳಲೇ ಇಲ್ಲ.

(ಹಿಂದಿನ ಕಂತು: ಪಾಥಾಳದಲ್ಲೊಂದು ಭಯಾನಕ ಅಪಘಾತ)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ