ರೋಸೀ ಇದ್ದ ವಾಹನ ನೇರವಾಗಿ ಮಾರಿಕುಪ್ಪಮ್ ದಾಟಿ ಅರ್ಧ ಕಿಲೋಮೀಟರ್ ದೂರ ದಕ್ಷಿಣಕ್ಕೆ ಸಾಗಿ ದೊಡ್ಡದಾದ ಮತ್ತು ಎತ್ತರವಾದ ಗಣಿ ತ್ಯಾಜ್ಯದ ಗುಡ್ಡವನ್ನು ಸುತ್ತಾಕಿಕೊಂಡು ಪೂರ್ವಕ್ಕೆ ತಿರುಗಿ ಲಕ್ಷ್ಮೀಸಾಗರ ರಸ್ತೆಯಲ್ಲಿ ಒಂದು ಕಿ.ಮೀಟರ್ ದೂರ ಸಾಗಿ ರಸ್ತೆಯಲ್ಲಿ ನಿಂತುಕೊಂಡಿತು. ರೋಸೀ ಜೊತೆಗಿದ್ದ ಮಣಿ ವಾಹನದಿಂದ ಕೆಳಕ್ಕಿಳಿದು ವಾಹನದ ಬಾಗಿಲು ತೆರೆದು ರೋಸೀಯನ್ನು ಕೆಳಕ್ಕೆ ಇಳಿಯಲು ಸಹಾಯ ಮಾಡಿದ. ರೋಸೀ ಕೆಳಕ್ಕೆ ಇಳಿದು ಒಂದು ಸಲ ಸುತ್ತಲೂ ನೋಡಿ ಮಣಿ ಹಿಂದೆ ನಡೆದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ
ಅಂದು ರಾತ್ರಿ ಅದೇ ಗುಂಗಿನಲ್ಲಿದ್ದ ರೋಸೀ ಡಿನ್ನರ್ ಮಾಡಿ ಮಲಗಿಕೊಂಡುಬಿಟ್ಟಳು. ಮತ್ತೆ ಬೆಳಿಗ್ಗೆ ಎದ್ದು ತಿಂಡಿ ತಿನ್ನುತ್ತಿದ್ದಂತೆ ವಾಹನ ಬಂದು ಅತಿಥಿ ಗೃಹದ ಮುಂದೆ ನಿಂತುಕೊಂಡಿತು. ರೋಸೀ ವಾಹನದಲ್ಲಿ ಕುಳಿತು ಗಣಿಗಳ ಕಡೆಗೆ ಹೊರಟಳು. ನೂರಾ ಇಪ್ಪತ್ತು ವರ್ಷಗಳ ಹಿಂದೆ ಬ್ರಿಟನ್ನಿಂದ ತಂದು ಜೋಡಿಸಿದ್ದ ದೈತ್ಯ ಯಂತ್ರಗಳು, ಚಿನ್ನವನ್ನು ಪ್ರತ್ಯೇಕಿಸುವ ಮಿಲ್ಲುಗಳು, ದೈತ್ಯ ಹೆಡ್ಗೇರ್ ಶ್ಯಾಫ್ಟ್ಗಳನ್ನು ಮೂರು ಕಿ.ಮೀ.ಗಳ ಆಳಕ್ಕೆ ತಂಪು ಗಾಳಿ ಬೀಸುವ ವಿಮಾನದ ರೆಕ್ಕೆಗಳಂತೆ ಕಾಣಿಸುವ ದೊಡ್ಡದೊಡ್ಡ ಪ್ಯಾನ್ಗಳನ್ನು ನೋಡಿ ಮಾತೇ ಬರದೇಹೋದಳು. ಮಧ್ಯಾಹ್ನ ಬ್ರಿಟಿಷರು ಮತ್ತು ಇಟ್ಯಾಲಿಯನ್ನರು ಕಟ್ಟಿದ ಭವ್ಯವಾದ ಗ್ರಾನೈಟ್ ಕಲ್ಲುಗಳ ಬಂಗಲೆಗಳು, ಇನ್ನೂ ಅನೇಕ ರೀತಿಯ ಕಲೋನಿಯಲ್ ಶೈಲಿಯ ಕಟ್ಟಡಗಳನ್ನು ನೋಡಿ ಆಶ್ಚರ್ಯಪಟ್ಟಳು.
ಸಾಯಂಕಾಲ ಐದು ಗಂಟೆಗೆ ಅತಿಥಿಗೃಹ ಸೇರಿಕೊಂಡು ಅಂದು ನೋಡಿದ ವಿಷಯಗಳನ್ನೆಲ್ಲ ರಾತ್ರಿ ಒಂಬತ್ತು ಗಂಟೆಯವರೆಗೂ ನೋಟ್ಸ್ ಮಾಡಿಕೊಂಡಳು. ಜಾನ್ಸನ್ ನಿಧಾನವಾಗಿ ಬಂದು ಬಾಗಿಲು ಕುಟ್ಟಿ ಡಿನ್ನರ್ ಬಗ್ಗೆ ಜ್ಞಾಪಿಸಿದ. ಡಿನ್ನರ್ ಮರತೇಹೋಗಿದ್ದ ರೋಸೀ ಡೈನಿಂಗ್ ಹಾಲ್ಗೆ ಬಂದು ಕುಳಿತುಕೊಂಡಳು. ಅವಳಿಗೆ ಊಟ ಮಾಡುತ್ತಿದ್ದರೂ ಊಟದ ಬಗ್ಗೆ ಜ್ಞಾನವೇ ಇರಲಿಲ್ಲ. ದಿನವೆಲ್ಲ ನೋಡಿದ ಚಿತ್ರಣಗಳೇ ಅವಳ ತಲೆ ತುಂಬಾ ತುಂಬಿಕೊಂಡಿದ್ದವು. ಕೊನೆಗೆ ರೋಸೀ, “ಊಟ ತುಂಬಾ ಚೆನ್ನಾಗಿದೆ. ಬೆಳಿಗ್ಗೆ ಒಂಬತ್ತು ಗಂಟೆಗೆ ನಿನಗೆ ಇಷ್ಟವಾದ ತಿಂಡಿಯನ್ನೇ ಮಾಡು. ಆದರೆ ಕಾರ ಮಾತ್ರ ಕಡಿಮೆ ಇರಲಿ” ಎಂದಳು. ಇಂಗ್ಲೆಂಡ್ನಿಂದ ಬರುವಾಗ ಅವರ ತಾಯಿ ಹೇಳಿದ ರುಚಿರುಚಿ ತಿಂಡಿಗಳನ್ನು ಕೇಳಿ ಚೆನ್ನಾಗಿ ಮಾಡಿಸಿಕೊಂಡು ಸವಿಯಬೇಕು ಎಂದುಕೊಂಡಿದ್ದ ಆಕೆ ಅವುಗಳ ಬಗ್ಗೆ ಮರತೇಹೋಗಿದ್ದಳು.
ಮರುದಿನ ರೋಸೀ ಕೆಜಿಎಫ್ ನಗರದ ಗಣಿ ಪ್ರದೇಶಗಳ ಒಳಗೆ ಮತ್ತು ನಗರದ ಸುತ್ತಮುತ್ತಲೂ ಬಿದ್ದಿರುವ ಹತ್ತಾರು ಗಣಿ ತ್ಯಾಜ್ಯ ಗುಡ್ಡಗಳನ್ನು ನೋಡುತ್ತ ಅವುಗಳ ಮೇಲೆ ಹತ್ತಿ ಓಡಾಡಿದಳು. ಅನಂತರ ಬ್ರಿಟನ್ನಿನ ರಾಬರ್ಟ್ಸನ್ ಸ್ಥಾಪನೆ ಮಾಡಿದ ಬಡಾವಣೆ ರಾಬರ್ಟ್ಸನ್ಪೇಟೆ ಮತ್ತು ಅದರ ಮಧ್ಯೆ ಇರುವ ಆಧುನಿಕ ಮಾರುಕಟ್ಟೆಯನ್ನು ನೋಡಿದಳು. ಈಗ ಅದು ಎಂ.ಜಿ.ಮಾರುಕಟ್ಟೆ. ನಗರದ ಮಧ್ಯದಲ್ಲಿ 1915ರಲ್ಲಿ ಕಿಂಗ್ಜಾರ್ಜ್ ಕೆಜಿಎಫ್ಗೆ ಬಂದ ನೆನಪಿಗಾಗಿ ಕಟ್ಟಿದ್ದ ಕಿಂಗ್ಜಾರ್ಜ್ ಹಾಲ್ ಸ್ಮಾರಕವನ್ನು ನೋಡಿದಳು. ಸಾಯಂಕಾಲ ಸುತ್ತಮುತ್ತಲಿನ ಹಳೆ ಗಣಿ ಶ್ಯಾಫ್ಟ್ಗಳನ್ನು ನೋಡಿಬಂದಳು. ಮರುದಿನ ಕೆಲವು ಉನ್ನತ ಅಧಿಕಾರಿಗಳ ಜೊತೆಗೆ ಪ್ರತ್ಯೇಕವಾಗಿ ಚೆರ್ಚೆ ಮಾಡಿ ಬಂದಳು. ಇದೆಲ್ಲವೂ ಮುಗಿದ ಮೇಲೆ ಕೊನೆಗೆ ಮೈನಿಂಗ್ ಲೈಬ್ರರಿಯಲ್ಲಿ ಬೆಳಿಗ್ಗೆ, ಮಧ್ಯಾಹ್ನ ಕುಳಿತುಕೊಂಡು ಪುಸ್ತಕಗಳು/ ವರದಿಗಳನ್ನೆಲ್ಲ ತೆಗೆದೂತೆಗೆದೂ ಮೇಜಿನ ಮೇಲೆ ಹಾಕಿಕೊಂಡು ಓದುತ್ತಾ ನೋಟ್ಸ್ ಮಾಡಿಕೊಳ್ಳತೊಡಗಿದಳು..
ಕೆಜಿಎಫ್ ಬಿಡುವುದಕ್ಕೆ ಎರಡು ದಿನ ಮುಂಚೆ ಎಂ.ಡಿ. ಕಛೇರಿಗೆ ಬಂದು ಎಂ.ಡಿ.ಯನ್ನು ಸಂದಿಸಿದಳು. ಎಂ.ಡಿ. ಕಾಫಿಗೆ ಆಹ್ವಾನಿಸಿ “ಕೆಜಿಎಫ್ ಗಣಿಗಳನ್ನು ನೋಡಿದ ನಿಮ್ಮ ಅನುಭವ ಹೇಗಿತ್ತು?” ಎಂದು ಕೇಳಿದರು. “it is great indeed’’ ಎಂದಳು. ಮುಂದುವರಿಯುತ್ತ “ನಮ್ಮ ಗ್ರ್ಯಾಂಡ್ ಪೇರೆಂಟ್ಸ್ ಗ್ರೇಟ್ ಗ್ರ್ಯಾಂಡ್ ಪೇರೆಂಟ್ಸ್ ಇಷ್ಟು ದೂರ ಬಂದು ಕೆಲಸ ಮಾಡಿದ್ದು. ದೂರದ ದೇಶಗಳಲ್ಲಿ ಇಂತಹ ವೈಜ್ಞಾನಿಕ ಮಾರ್ವಲೆಸ್ ಸಾಮ್ರಾಜ್ಯಗಳನ್ನು, ನಿರ್ಮಿಸಿ ಇಲ್ಲೇ ಪ್ರಾಣ ಕಳೆದುಕೊಂಡಿದ್ದು ಎಲ್ಲಾ ನೆನೆಸಿಕೊಂಡರೆ ನಮ್ಮ ದೇಶ ನಮ್ಮ ಜನರ ಬಗ್ಗೆ ಗ್ರೇಟ್ ಎನಿಸುತ್ತದೆ. ನಾನು ವಾಪಸ್ ಹೋಗುವುದಕ್ಕೆ ಕೇವಲ ಎರಡು ದಿನಗಳು ಮಾತ್ರ ಉಳಿದಿದೆ” ಎಂದಳು. ಎಂ.ಡಿ, “ನೀವು ಹೋಗುವ ಮುಂಚೆ ನಿಮ್ಮ ವರದಿ ಕಾಪಿ ಕೊಡಬೇಕು” ಎಂದು ಜ್ಞಾಪಿಸಿದರು. ರೋಸೀ, “ಖಂಡಿತ ಕೊಡ್ತೀನಿ. ನೀವು ಸಾಧ್ಯವಾದರೆ ನನಗೊಂದು ಸಹಾಯ ಮಾಡಬೇಕು” ಎಂದಳು. ಎಂ.ಡಿ. “ಓ ಹೇಳಿ ಖಂಡಿತ ಮಾಡೋಣ” ಎಂದರು. ರೋಸೀ “ಕೊನೆ ದಿನ, ನಾನು ಒಂದು ಸಣ್ಣ ಟಾಕ್ ಕೊಡೋಣ ಅಂತಿದ್ದೀನಿ. ನೀವು ಅದನ್ನು ಏರ್ಪಡಿಸಬೇಕು” ಎಂದಳು. ಎಂ.ಡಿ, “ಓ ವಿಥ್ ಮೈ ಪ್ಲೆಝರ್” ಎಂದರು.

ರೋಸೀ, “ಇನ್ನೊಂದು ವಿಷಯ. ಈಹೊತ್ತೆ ನಮ್ಮ ಪೂರ್ವಜರ ಸಮಾಧಿಗಳನ್ನು ನೋಡಿಕೊಂಡು ಬರುತ್ತೇನೆ” ಎಂದಳು. ಎಂ.ಡಿ. “ಎಸ್, ನನಗೆ ಗೊತ್ತಿದೆ” ಎಂದರು. ಮತ್ತೇ ರೋಸೀ, “ಕಡಿಮೆ ಸಮಯ ಉಳಿದುಕೊಂಡಿದೆ. ಎರಡು ದಿನಗಳಲ್ಲಿ ವರದಿ ತಯಾರು ಮಾಡಬೇಕು. ನಮ್ಮ ಯೂನಿವರ್ಸಿಟಿಗೂ ಡೀಟೇಲ್ ವರದಿ ಕೊಡಬೇಕು. ನಾನು ಮತ್ತೆ ನಿಮ್ಮನ್ನು ಭೇಟಿಯಾಗ್ತೀನಿ” ಎಂದು ಎದ್ದು ನಿಂತು ಕೈಕುಲುಕಿದಳು. ಎಂ.ಡಿ. ನಗುತ್ತಾ ರೋಸೀಗೆ ವಿಶ್ ಮಾಡಿದರು. ಮತ್ತೆ ರೋಸೀ, “ಕೊನೆ ದಿನ ಸಾಯಂಕಾಲ ಉಪನ್ಯಾಸ ವ್ಯವಸ್ಥೆ ಮಾಡುವುದನ್ನು ಮರೆಯಬೇಡಿ” ಎಂದು ಜ್ಞಾಪಿಸಿದಳು. ಎಂ.ಡಿ. “ಡೋಂಟ್ ವರಿ. ಕೆಜಿಎಫ್ ಕ್ಲಬ್ನಲ್ಲಿ ಕೊನೆ ದಿನ ಸಾಯಂಕಾಲ ವ್ಯವಸ್ಥೆ ಮಾಡಿಸ್ತೀನಿ” ಎಂದರು. ರೋಸಿ ಬ್ಯಾಗ್ ಭುಜಕ್ಕೆ ನೇತು ಹಾಕಿಕೊಂಡು ಹೊರಟುಹೋದಳು.
ರೋಸೀ ಇದ್ದ ವಾಹನ ನೇರವಾಗಿ ಮಾರಿಕುಪ್ಪಮ್ ದಾಟಿ ಅರ್ಧ ಕಿಲೋಮೀಟರ್ ದೂರ ದಕ್ಷಿಣಕ್ಕೆ ಸಾಗಿ ದೊಡ್ಡದಾದ ಮತ್ತು ಎತ್ತರವಾದ ಗಣಿ ತ್ಯಾಜ್ಯದ ಗುಡ್ಡವನ್ನು ಸುತ್ತಾಕಿಕೊಂಡು ಪೂರ್ವಕ್ಕೆ ತಿರುಗಿ ಲಕ್ಷ್ಮೀಸಾಗರ ರಸ್ತೆಯಲ್ಲಿ ಒಂದು ಕಿ.ಮೀಟರ್ ದೂರ ಸಾಗಿ ರಸ್ತೆಯಲ್ಲಿ ನಿಂತುಕೊಂಡಿತು. ರೋಸೀ ಜೊತೆಗಿದ್ದ ಮಣಿ ವಾಹನದಿಂದ ಕೆಳಕ್ಕಿಳಿದು ವಾಹನದ ಬಾಗಿಲು ತೆರೆದು ರೋಸೀಯನ್ನು ಕೆಳಕ್ಕೆ ಇಳಿಯಲು ಸಹಾಯ ಮಾಡಿದ. ರೋಸೀ ಕೆಳಕ್ಕೆ ಇಳಿದು ಒಂದು ಸಲ ಸುತ್ತಲೂ ನೋಡಿ ಮಣಿ ಹಿಂದೆ ನಡೆದಳು. ಸ್ವಲ್ಪ ದೂರ ನಡೆದ ಮೇಲೆ ಮಣಿ ಹಿಂದೆ ಬರುತ್ತಿರುವ ರೋಸೀಯ ಕಡೆಗೆ ನೋಡಿ ಮತ್ತೆ ಹೆಜ್ಜೆಯಾಕಿದ.
ಗಾಳಿಗೆ ಎದ್ದುಬಂದಿರುವ ಬಿಳಿ ಸೈನಾಟ್ ಮಣ್ಣು. ಅಲ್ಲಲ್ಲಿ ನೆಲದ ಮೇಲೆ ಕಾಣಿಸುವ ಕೊರಕಲು ಕಲ್ಲುಗಳು. ರೋಸೀ ನಿರೀಕ್ಷಿಸಿದಂತಹ ಯಾವ ಸಮಾಧಿಯೂ ಅವಳಿಗೆ ಕಾಣಿಸಲಿಲ್ಲ. ಕಣ್ಣುಗಳನ್ನು ಸಣ್ಣದಾಗಿ ಮಾಡಿಕೊಂಡು ಮಣಿ ಹಿಂದೆಯೇ ತುಸು ಹೈಹೀಲ್ಡ್ ಚಪ್ಪಲಿಗಳಲ್ಲಿ ಅನಾಯಾಸವಾಗಿಯೇ ನಡೆಯುತ್ತಿದ್ದಳು. ಮಣಿ ನಿಂತುಕೊಂಡು “ಇದೇ ಮೇಡಮ್” ಎಂದ. ಬೆರಗಾದ ರೋಸೀ, “ವಾಟ್! ವಾಟ್ ಇಸ್ ದಿಸ್?” ಎಂದಳು. “ಹೌದು ಮೇಡಮ್, ಇದೇ ಯುರೋಪಿಯನ್ ಸ್ಮಶಾನ” ಎಂದ. ಸುತ್ತಲೂ ನೋಡಿದ ರೋಸೀಗೆ ಏನು ಹೇಳಬೇಕೊ ಅರ್ಥವಾಗಲಿಲ್ಲ. ಅಳುವುದೊಂದೆ ಬಾಕಿ. ದೂರದ ಇಂಗ್ಲೆಂಡ್ನಿಂದ ಬಂದು ಇಂಡಿಯಾದಲ್ಲಿ ಒಂಟಿಯಾಗಿ ನಿಂತುಕೊಂಡು ಅತ್ತರೆ ಏನು ಪ್ರಯೋಜನ? ಆದರೂ ತಡೆಯಲಾರದೆ ರೋಸೀ ಅತ್ತುಕೊಂಡುಬಿಟ್ಟಳು. ಮಣಿಗೆ ಏನು ಮಾಡಬೇಕೊ ಒಂದೂ ಅರ್ಥವಾಗಲಿಲ್ಲ.
ಅದೊಂದು ಸಣ್ಣಸಣ್ಣ ಗುಂಡಿಗಳು ಬಿದ್ದಿರುವ ಸ್ಮಶಾನ. ಒಂದು ಸಮಾಧಿ ಕಲ್ಲೂ ಕೂಡ ಸರಿಯಾಗಿ ನಿಂತುಕೊಂಡಿರಲಿಲ್ಲ. ಸತ್ತ ಯಾರ ಹೆಸರುಗಳೂ ಆ ಸಮಾಧಿ ಕಲ್ಲುಗಳ ಮೇಲೆ ಇರಲಿಲ್ಲ. ಸ್ವಲ್ಪ ಹೊತ್ತು ಹಾಗೇ ನಿಂತುಕೊಂಡಿದ್ದ ರೋಸೀ ಮಣಿ ಕಡೆಗೆ ನೋಡಿ, “ನೀವು, ನಮ್ಮ ಜನರನ್ನು ನೋಡಿಕೊಂಡಿರುವ ರೀತಿಯೇ ಇದು? ಅವರಿಗೆ ಸಲ್ಲಿಸುತ್ತಿರುವ ಗೌರವ ಇದೇನಾ?” ಎಂದಳು. ಮಣಿ ಏನೂ ಮಾತನಾಡದೆ ತಲೆ ತಗ್ಗಿಸಿಕೊಂಡ. ರೋಸೀ ತನ್ನ ಕೈಯಲ್ಲಿದ್ದ ಹೂಗುಚ್ಚವನ್ನು ಮಣಿ ಕೈಗೆ ಕೊಟ್ಟು ತಾನು ತಂದಿದ್ದ ಎಲ್ಲಾ ಮೋಂಬತ್ತಿಗಳನ್ನು ಹೊತ್ತಿಸಿ ಒಂದೊಂದು ಕಲ್ಲಿನ ಹತ್ತಿರವೂ ಇಡುತ್ತಾ ದುಃಖಿಸುತ್ತಾ ಕಣ್ಣೀರ ಹನಿಗಳನ್ನು ಇಟ್ಟಳು. ಮಣಿ ಆಕೆಗೆ ಸಹಾಯ ಮಾಡುತ್ತಿದ್ದನು. ರೋಸೀ ಕೊನೆಗೆ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡು ಅಲ್ಲೇ ಕುಳಿತುಕೊಂಡಳು. ಸ್ವಲ್ಪ ಹೊತ್ತಾದ ಮೇಲೆ ಎದ್ದು ನಿಂತು “it’s alright lets go’s ನನಗೆ ತುಂಬಾ ದುಃಖ ಆಗ್ತಾ ಇದೆ. ನಾನು ಇಲ್ಲಿಗೆ ಬರಬಾರದಿತ್ತು” ಎಂದು ವಾಹನದ ಕಡೆಗೆ ಹೊರಟಳು.

ನಮ್ಮ ದೇಶ ಇರುವುದೇ ಹೀಗೆ ಅನ್ನುವುದಕ್ಕಿಂತ ನಮ್ಮ ಜನರೇ ಹೀಗೆ ಅಲ್ಲವೇ? ಈ ಸಮಾಧಿ ಹೀಗಾಗಿದ್ದಕ್ಕೆ ಒಂದು ಕಾರಣ ಇದೆ. ಕೆಜಿಎಫ್ನಲ್ಲಿ ಈ ಯುರೋಪಿಯನ್ನರು ಮತ್ತು ಬ್ರಟಿಷರು ಸತ್ತಾಗ ಅವರು ತೊಡುತ್ತಿದ್ದ ಒಡವೆಗಳ ಸಮೇತ ಅವರನ್ನು ಹಾಗೇ ಹೂಳಲಾಗುತ್ತದೆ ಎಂಬ ಊಹೆಯನ್ನು ಒಂದು ಸಲ ಯಾರೋ ಹರಡಿಬಿಟ್ಟಿದ್ದರು. ಇದರ ಪರಿಣಾಮ ಕೆಲವು ಕಳ್ಳರು ರಾತ್ರೋರಾತ್ರಿ ಹೋಗಿ ಕೆಜಿಎಫ್ ಪಟ್ಟಣದ ಹೊರಗಿದ್ದ ಸ್ಮಶಾನಗಳನ್ನೆಲ್ಲ ತೋಡಿ ಬಂಗಾರದ ಹಲ್ಲುಗಳು, ಉಂಗುರಗಳು, ಕನ್ನಡಕ ಪ್ರೇಮ್ಗಳನ್ನು ಹುಡುಕಾಡುತ್ತಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು. ನಿಜವಾಗಿ ಯಾರಿಗೆ ಏನು ಸಿಕ್ಕಿತು ಎನ್ನುವುದು ಯಾರಿಗೂ ತಿಳಿಯಲಿಲ್ಲ. ಆದರೆ ಸಮಾಧಿಗಳಲ್ಲಿ ಸತ್ತ ಯುರೋಪಿಯನ್ನರ ತಲೆಗಳ ಹತ್ತಿರ ನಿಲ್ಲಿಸಿದ್ದ ಸಮಾಧಿ ಕಲ್ಲುಗಳು ಹೇಗೆಂದರೆ ಹಾಗೆ ಉರುಳಿ ಬಿದ್ದುಕೊಂಡಿದ್ದವು. ಜಾನ್ ಟೇಲರ್ ಕಂಪನಿ ಗಣಿ ಆಡಳಿತವನ್ನು ಸಂಪೂರ್ಣವಾಗಿ ತೊರೆದು ಭಾರತವನ್ನು 1956ರಲ್ಲಿ ಬಿಟ್ಟುಹೋದ ಮೇಲೆ ಬ್ರಿಟಷರಿಗೆ ಸೇರಿದ ಎಲ್ಲವೂ ಅಸಡ್ಡೆಗೆ ಒಳಗಾದವು. ಆದರೆ ಅವರು ಕಟ್ಟಿದ ಬಂಗಲೆಗಳನ್ನು ಮಾತ್ರ ಸ್ಥಳೀಯ ಅಧಿಕಾರಿಗಳು ಹಿಡಿದುಕೊಂಡು ಕುಳಿತಿದ್ದರು. ಅವುಗಳನ್ನೂ ಸರಿಯಾಗಿ ಕಾಪಾಡಿಕೊಳ್ಳಲಿಲ್ಲ.
(ಹಿಂದಿನ ಕಂತು: ರೋಸಿ ಮೇಡಂ ಕಂಡ ಕತ್ತಲ ಸಾಮ್ರಾಜ್ಯ)

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

