Advertisement
ಸಂಬಂಧ ಸೂಕ್ಷ್ಮಗಳ ಗಾಢ ಸ್ಪಂದನೆಯ ‘ನೀಲಿ ನಕ್ಷೆ’: ಸುನಂದಾ ಕಡಮೆ ಬರಹ

ಸಂಬಂಧ ಸೂಕ್ಷ್ಮಗಳ ಗಾಢ ಸ್ಪಂದನೆಯ ‘ನೀಲಿ ನಕ್ಷೆ’: ಸುನಂದಾ ಕಡಮೆ ಬರಹ

ದಿಕ್ಕನ್ನು ನೆನಪಿನಲ್ಲಿಟ್ಟುಕೊಳ್ಳುವಂತಿದ್ದ ಬೋರ್ಗರೆವ ನೀಲಿ ಕಡಲಿನ ಬಾಲ್ಯದ ಸಂಗಾತಿ ಸರಯೂ ನಂತರ ಹೋಗಿ ಸೇರಿದ ಮುಂಬೈ ನಗರದ ಮೂರೂ ಕಡೆಗಳಲ್ಲಿ ಸಮುದ್ರ ಕಂಡು ದಿಕ್ಕು ಗುರುತಿಸಲು ಬಾರದೇ ಗಲಿಬಿಲಿಗೊಂಡವಳು. ಮೊದಲನೇ ತರಗತಿಯಲ್ಲೇ ಮೂರನೇ ರ‍್ಯಾಂಕ್ ಬಂದಾಗ ಊರಿಗೆಲ್ಲ ಪೇಡೆ ಹಂಚಿ ಅಪ್ಪನಿಂದ ಹೊಡೆಸಿಕೊಂಡ ಅಮ್ಮನನ್ನು ಕಾಣುತ್ತ ಬೆಳೆದ ಸರಯೂ ಸದಾ ತನ್ನಪ್ಪ ತನ್ನನ್ನು ಕಡೆಗಣಿಸುತ್ತಿದ್ದಾನೆಯೇ ಎಂದು ವಾರಗಣ್ಣಲ್ಲೇ ಗಮನಿಸುತ್ತ ಬಂದವಳು.
ಅಮಿತಾ ಭಾಗವತ್‌ ಕಾದಂಬರಿ ‘ನೀಲಿ ನಕ್ಷೆ’ಯ ಕುರಿತು ಸುನಂದಾ ಕಡಮೆ ಬರಹ ನಿಮ್ಮ ಓದಿಗೆ

ಭಾರತೀಯ ವ್ಯವಸ್ಥೆಯಲ್ಲಿ ನಮ್ಮ ಹೆಣ್ಣುಮಕ್ಕಳ ದೈನಿಕ ವಿಸ್ತಾರಗಳು ಚಿಕ್ಕಪುಟ್ಟ ಕಥೆಗಳಾಗಲು ಎಂದಿಗೂ ಸಾಧ್ಯವಿಲ್ಲ, ಖಂಡಿತಾ ಒಂದು ಸುದೀರ್ಘ ಕಾದಂಬರಿಯೇ ಆಗಿರುತ್ತದೆ. ಹಾಗಾಗಿಯೇ ನಮ್ಮ ತಾಯಿ-ಅಜ್ಜಿಯರೆಲ್ಲ ತಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳ ಬಗ್ಗೆ ಹೇಳುವಾಗಲೆಲ್ಲ ‘ನನ್ನದು ಬಿಡು, ಬರೆದರೆ ಅದು ದೊಡ್ಡ ಕಾದಂಬರಿಯೇ ಆಗುತ್ತದೆ’ ಅಂತೆನ್ನುತ್ತ ನಿಟ್ಟುಸಿರು ಬಿಡುತ್ತಿದ್ದರು.

(ಅಮಿತಾ ಭಾಗವತ್‌)

ಕಾರವಾರದ ಕಡಲ ತಡಿಯಲ್ಲಿ ಹುಟ್ಟಿ ಬೆಳೆದು ಅಂಥದ್ದೇ ಇನ್ನೊಂದು ಕಡಲ ತಡಿಗೆ ಹೋಗಿ ನೆಲೆಗೊಂಡ ಕಾದಂಬರಿಗಾರ್ತಿ ಅಮಿತಾ ಭಾಗವತ್ ಅವರಿಂದ ಹುಟ್ಟಿಕೊಂಡ ಗಾಢ ಜೀವನ ಪ್ರೀತಿಯನ್ನೇ ತುಂಬಿಕೊAಡ ಈ ‘ನೀಲಿನಕ್ಷೆ’ ಕಾದಂಬರಿಯು ಹೀಗೊಂದು ಸರಯೂ ಎಂಬ ಅಪರೂಪದ ಹೆಣ್ಣುಮಗಳೊಬ್ಬಳ ವ್ಯಕ್ತಿತ್ವದ ಜೀವನ ವಿಸ್ತಾರವನ್ನೇ ಸುದೀರ್ಘವಾಗಿ ಹಿಡಿದಿಟ್ಟಿದೆ.

ನಮ್ಮ ಜಿಲ್ಲೆಯ ಯಶವಂತ ಚಿತ್ತಾಲರ ಕಾದಂಬರಿಗಳನ್ನು, ಜಯಂತ ಕಾಯ್ಕಿಣಿ ಕಥೆಗಳನ್ನು ಓದಿದ ನಮ್ಮ ಸ್ಮರಣೆಗಳು ಇಲ್ಲಿಯೂ ಅಲ್ಲಲ್ಲಿ ಬೇಡಬೇಡವೆಂದರೂ ಹಣಕಿ ಹೋಗುತ್ತವೆ. ಮುಂಬೈ ಜಗತ್ತು ಇನ್ನೊಮ್ಮೆ ನಮ್ಮನ್ನು ಆವರಿಸಿಕೊಂಡು ಮೆಲ್ಲಗೆ ತನ್ನೊಳಗೆ ಬಿಟ್ಟುಕೊಳ್ಳುತ್ತದೆ.

ಇಲ್ಲಿ ಲೇಖಕಿ ಕೂಡ ಕಾರವಾರದಿಂದ ಮುಂಬೈಗೆ ವಲಸೆ ಹೋದ ಕಾರಣಕ್ಕೋ ಏನೋ ಕಾದಂಬರಿಯುದ್ದಕ್ಕೂ ಅನುಭವನಿಷ್ಠ ವಿವರಗಳು ಹುಬೇ ಹೂಬಾಗಿ ಬಿಡಿಸಿಟ್ಟುಕೊಂಡಿವೆ. ಹೀಗೆ ಸಹಜ ಸ್ಪಂದನೆಗಳು ಓದುಗರನ್ನು ಸೆಳೆಯುವಷ್ಟು, ಕೇಳಿದ್ದು ನೋಡಿದ್ದು ಈ ಪರಿಯಲ್ಲಿ ನಮ್ಮನ್ನು ವಿಸ್ಮಿತಗೊಳಿಸಲಾರವು.

ಇಲ್ಲಿ ಕಡಲನ್ನು ನಂಬಿ ಬದುಕುವ ಜೀವಗಳ ನಾಡಿಮಿಡಿತಗಳಿವೆ, ಅವರು ಕಂಡುಂಡ ಬದುಕಿನ ವಾಸ್ತವವಿದೆ, ಪ್ರಾಮಾಣಿಕತೆಯಿದೆ. ಪರಸ್ಪರ ನಂಬಿಕೆಗಳಿವೆ, ವಲಸಿಗರ ಅತಿಸೂಕ್ಷ್ಮ ಸಮಸ್ಯೆಗಳಿವೆ, ಸ್ವ-ಉದ್ಯೋಗದಲ್ಲಿ ತೊಡಗಿಕೊಂಡು ಹೋರಾಡುತ್ತಿರುವವರ ಸವಾಲುಗಳಿವೆ, ಒಟ್ಟಾರೆ ಮಧ್ಯಮ ವರ್ಗದ ಜನರ ಲೋಕಾನುಭವದೊಂದಿಗೆ, ನಮ್ಮೊಳಗೆ ಇನ್ನೂ ಉಳಿದಿರುವ ಮಾನವೀಯತೆಯ ಎಳೆಯನ್ನು ತೆರೆದು ತೋರುವ ಈ ಕಥಾನಕವು ಎಡಬಿಡದೇ ಓದಿಸಿಕೊಳ್ಳುವ ಗುಣವನ್ನು ಹೊಂದಿದೆ.

ನಮ್ಮಲ್ಲಿ ಬಹುತೇಕರಂತೆ ಆಸ್ಪತ್ರೆಯ ಫಿನೈಲ್ ವಾಸನೆಗೆ ವಾಕರಿಸುವ ಸರಯೂ ಈ ಕಾದಂಬರಿಯ ನಾಯಕಿ. ಬಿಳಿಯ ಪೆಟಿಕೋಟಿನಲ್ಲೇ ದಂಡೆಗೆ ಓಡುವ ಸರಯೂ ಶಾಲೆಯಲ್ಲಿ ಕ್ಲಾರಾ ಮಿಸ್ ಕೊಟ್ಟ ಚಾಕಲೇಟನ್ನು ಹಂಚಿ ತಿನ್ನುವವಳು, ತನ್ನ ಮೈಬಣ್ಣ, ಮುಖದ ಅಂದ ತನ್ನ ತಂದೆ-ತಾಯಿಯಂತಿರದೇ ಇದ್ದ ಕಾರಣಕ್ಕೆ ತನ್ನಪ್ಪನಿಂದ ಎಂಥದೋ ಸಂಶಯದ ಹುತ್ತದಡಿಯಲ್ಲೇ ನಿಂತು ಬೆದರುತ್ತಿದ್ದವಳು, ಅಪ್ಪನ ಸೇವಕ ಶಂಕರನ ಸೈಕಲ್ಲಿನಲ್ಲಿ ಶಾಲೆಗೆ ಲೋಕ ಗಮನಿಸುತ್ತ ತೆರಳುವ ಸರಯೂ ನಂತರ ಸಮುದ್ರದಲ್ಲಿ ಕೊಚ್ಚಿ ಹೋದ ಶಂಕರನ ದೇಹವನ್ನು ಮೀನುಗಳು ತಿಂದು ಹಾಕಿವೆ ಎಂದು ತಿಳಿದಾಗಿನಿಂದ ಮೀನು ತಿನ್ನುವುದನ್ನೇ ಬಿಟ್ಟವಳು.

ದಿಕ್ಕನ್ನು ನೆನಪಿನಲ್ಲಿಟ್ಟುಕೊಳ್ಳುವಂತಿದ್ದ ಬೋರ್ಗರೆವ ನೀಲಿ ಕಡಲಿನ ಬಾಲ್ಯದ ಸಂಗಾತಿ ಸರಯೂ ನಂತರ ಹೋಗಿ ಸೇರಿದ ಮುಂಬೈ ನಗರದ ಮೂರೂ ಕಡೆಗಳಲ್ಲಿ ಸಮುದ್ರ ಕಂಡು ದಿಕ್ಕು ಗುರುತಿಸಲು ಬಾರದೇ ಗಲಿಬಿಲಿಗೊಂಡವಳು. ಮೊದಲನೇ ತರಗತಿಯಲ್ಲೇ ಮೂರನೇ ರ‍್ಯಾಂಕ್ ಬಂದಾಗ ಊರಿಗೆಲ್ಲ ಪೇಡೆ ಹಂಚಿ ಅಪ್ಪನಿಂದ ಹೊಡೆಸಿಕೊಂಡ ಅಮ್ಮನನ್ನು ಕಾಣುತ್ತ ಬೆಳೆದ ಸರಯೂ ಸದಾ ತನ್ನಪ್ಪ ತನ್ನನ್ನು ಕಡೆಗಣಿಸುತ್ತಿದ್ದಾನೆಯೇ ಎಂದು ವಾರಗಣ್ಣಲ್ಲೇ ಗಮನಿಸುತ್ತ ಬಂದವಳು.

ಅಪ್ಪ ಆನಂದ ತಾಂಡೇಲ ಖರೀದಿಸಿದ ಹೊಸ ಫರ‍್ರಿ ಬೋಟಿಗೆ ಇದ್ದ ತನ್ನ ಹೆಸರನ್ನು ಕಂಡಾಗಲೂ ಬೆರಗುಗೊಳ್ಳದ ಸರಯೂ, ಹೈಸ್ಕೂಲಿನಲ್ಲೇ ಶರದ್ ಎಂಬ ಹುಡುಗನಿಂದ ವಿನಾಕಾರಣ ಕಿರುಕುಳ ಅನುಭವಿಸಿ, ಇದ್ದಲ್ಲೇ ಎಲ್ಲ ಸ್ವಾತಂತ್ರ್ಯವನ್ನೂ ಕಳೆದುಕೊಂಡು ವಿಚಿತ್ರ ಬಂಧನ ಅನುಭವಿಸುತ್ತಾಳೆ.

ಕಾರವಾರದ ಸೇಂಟ್ ಮರಿಯಾ ಶಾಲೆಯಲ್ಲಿ ಕಲಿತ ಸರಯೂ ಕಾಲೇಜಿಗೆಂದು ಸಿನೆಮಾದಲ್ಲಿ ಮಾತ್ರ ನೋಡಿದ ಮುಂಬೈಗೆ ಪ್ರಯಾಣ ಬೆಳೆಸುತ್ತಾಳೆ. ನೀನು ಸುರಸುಂದರಿ, ನೀವು ಮೀನುಗಾರರು ಅಂತೆಲ್ಲ ಯಾವುದೇ ಗುರುತನ್ನು ಹೊರತುಪಡಿಸಿ ಮುಂಬೈಯಿಗಳಾದ ಸರಯೂ ಮುಂದೆ ‘ನನ್ನ ಮುಂಬೈ’ ಎಂದು ತನಗರಿವಿಲ್ಲದೇ ಆ ನಗರದ ವೇಗದಲ್ಲಿ ಒಂದಾಗಿ ಹೋಗುತ್ತಾಳೆ. ನಂತರದ್ದು ಬೇರೆಯದೆ ಕಥೆ.

ಸಂಬಂಧಿಗಳ ಮನೆಯಲ್ಲಿ ಅಡುಗೆ ಮಾಡುವಂಥ ಕೆಲಸಗಳನ್ನು ನಿಭಾಯಿಸಿಕೊಂಡು ಕಾಲೇಜಿಗೆ ತೆರಳುತ್ತ, ಕಾರವಾರದಂತೆ ಚಪಾತಿಯನ್ನು ತ್ರಿಕೋನಾಕಾರದಲ್ಲಿ ಲಟ್ಟಿಸುವುದನ್ನು ಬಿಟ್ಟು ಮುಂಬೈನಂತೆಯೇ ಗೋಲಾಕಾರದಲ್ಲೇ ಲಟ್ಟಿಸುತ್ತ ಅಲ್ಲಿಯ ಎಲ್ಲ ಅನುಭವಗಳಿಗೂ ಹೊಂದಿಕೊಳ್ಳುತ್ತ ಎಲ್ಲ ಹೊಸ ಬದುಕಿಗೆ ಪಕ್ಕಾಗುತ್ತ ಸಾಗಿದವಳು.

ಅಷ್ಟಾದರೂ ಯಾರಾದರೂ ಮುಂಬೈ ಮೂಲನಿವಾಸಿಗಳು ಮೀನುಗಾರರು ಎಂಬ ಮಾತು ಬಂದಾಗಲೆಲ್ಲ ತನ್ನೊಳಗೇ ತಾನು ಕಸಿವಿಸಿಗೊಳಪಡುತ್ತಲೇ ಒಂಟಿಯಾಗೇ ತನ್ನ ಆತ್ಮವಿಸ್ವಾಸವನ್ನು ಹೆಚ್ಚಿಸಿಕೊಳ್ಳುತ್ತ ಗಟ್ಟಿಯಾದವಳು ಇಲ್ಲಿಯ ಕಥಾ ನಾಯಕಿ ಸರಯೂ. ಉತ್ತಮ ಭವಿಷ್ಯದ ಭರವಸೆಯನ್ನು ಹೆಚ್ಚಿಸಿದ ಸರಯೂಳ ಮುಂಬೈ ವಾಸ್ತವ್ಯ ಮತ್ತು ಅವಳ ಮುಂದಿನ ಪ್ರೀತಿ ಪ್ರೇಮದ ಪ್ರಕರಣಗಳು ಹಾಗೂ ಅವಳ ಕೊನೆಯ ಆಯ್ಕೆ ಇವೆಲ್ಲವೂ ಜೀವಂತಿಕೆಯಿಂದ ಕೂಡಿವೆ, ಇಂತೆಲ್ಲ ಹದದಲ್ಲಿ ಮೂಡಿದ ಮಧ್ಯಮವರ್ಗದ ಜೀವನ ಶೋಧವು ಅತ್ಯಂತ ಮಾರ್ಮಿಕವಾಗಿದೆ.

ಇಲ್ಲಿಯ ಸ್ಪಂದನೆಗಳು ಸೂಕ್ಷ್ಮವಾಗಿವೆ ಮತ್ತು ಅಷ್ಟೆ ಭಿನ್ನವಾಗಿವೆ, ಮುಂಬೈ ನಗರಿಯಲ್ಲಿ ಸರಯೂ ಪಡೆದುಕೊಳ್ಳುವ ನೈತಿಕ ಬದ್ಧತೆ ಹಾಗೂ ಒಳಿತುಗಳ ಹುಡುಕಾಟಗಳೇ ಇಲ್ಲಿ ಮುಖ್ಯವಾದವುಗಳು. ವ್ಯವಸ್ಥೆಯೊಳಗಿನ ಕೇಡುಗಳು ತನಗೆ ಬಾಧಿಸದಂತೆ ನೋಡಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ಸರಯೂ ತನ್ನ ತರುಣ್ಯಾವಸ್ಥೆಯಲ್ಲಿ ಅವ್ಯಕ್ತವಾಗಿಯೇ ಅನುಭವಿಸಿ, ಅದನ್ನೇ ಒಂದು ಒಳ್ಳೆಯ ಪಾಠದ ಮಾದರಿಯಲ್ಲಿ ಜೀವಿಸುವುದನ್ನು ಕಲಿಯುತ್ತ ಸಾಗುತ್ತಾಳೆ.

ಇಡೀ ಕಥಾನಕವು ಅದು ಪಡೆದುಕೊಳ್ಳುವ ತಿರುವುಗಳಿಂದ ಕುತೂಹಲ ಮೂಡಿಸುತ್ತದೆ. ಸರಯೂಳ ಮುಗ್ಧ ಲೋಕವೊಂದು ಇದ್ದಲ್ಲೇ ಕಂಪಿಸುತ್ತ, ತತ್ತರಿಸುತ್ತ ಎದುರುಗೊಳ್ಳುವ ಅನೇಕ ಮಾನಸಿಕ ಹಿಂಸೆಗಳ ನಡುವೆಯೂ ಅವಳ ತಾಯಿ ಹಾಕಿಕೊಟ್ಟ ಬಾಲ್ಯದ ಒಂದು ರೀತಿಯ ಆತ್ಮಬಲದ ಶಕ್ತಿಯಿಂದ ಒಂದು ಹಂತಕ್ಕೆ ಎದ್ದು ನಿಲ್ಲುವ ಚಿತ್ರಣವು, ಮಹಿಳಾ ಸಬಲೀಕರಣದ ಅಂಶಗಳನ್ನು ಕೂಡ ಯಥೇಚ್ಛವಾಗಿ ನೆನಪಿಸುತ್ತದೆ.

ಕಾದಂಬರಿಯ ಕೊನೆಯಲ್ಲಿ ಸರಯೂ ತನ್ನ ಪತಿ ಅಂಕಿತನಿಗೆ ಹೇಳುವಂತೆ ‘ಅರಳುವ ಮನಸ್ಸಿದ್ದರೆ, ಒಂದು ಹೂ ಕ್ಯಾಕ್ಟಸ್ಸಿನಂಥ ಗಿಡದಲ್ಲೂ ಅರಳುತ್ತದೆ, ಅದೂ ಎಂಥದೇ ಸಂದರ್ಭದಲ್ಲೂ ಕೂಡ’ ಎಂಬ ಮಾತು ಸರಯೂಳ ಇಡೀ ಪಯಣಕ್ಕೆ ಕನ್ನಡಿ ಹಿಡಿದಂತಿದೆ. ಸಮುದ್ರದ ಅಲೆಗಳು ಹೊಡೆದುಕೊಳ್ಳುವ ಸಪ್ಪಳ ಕೇಳಿದರೆ, ಸರಯೂ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತದೆ, ಆದರೆ ಅಂಕಿತನಿಗೆ ಅದೆಷ್ಟು ರೂಢಿಯಾಗಿ ಹೋಗಿದೆಯೆಂದರೆ ಅವುಗಳ ಸಪ್ಪಳ ಅವನಿಗೆ ಕೇಳುವುದೇ ಇಲ್ಲ. ಇದು ಅವರಿಬ್ಬರ ದಾಂಪತ್ಯದ ಹಲವು ಮಜಲುಗಳನ್ನು ಅತ್ಯಂತ ರೂಪಕಾತ್ಮಕವಾಗಿ ತೆರೆದಿಡುವಂತಿದೆ.

ಕಾದಂಬರಿಯ ಒಟ್ಟಾರೆ ನಿರೂಪಣಾ ಶೈಲಿಯ ಕುರಿತಂತೂ ‘ಬಿಡಿ ಮತ್ತು ಇಡಿಗಳ ನಡುವೆ ಲೇಖಕಿ ಸಾಧಿಸಿರುವ ಹದ ಅಪರೂಪದ್ದಾಗಿದೆ’ ಎಂಬ ಮಾತನ್ನು ತಮ್ಮ ಬೆನ್ನುಡಿಯಲ್ಲಿ ಹಿರಿಯರಾದ ಬರಹಗಾರರಾದ ಜಯಂತ ಕಾಯ್ಕಿಣಿಯವರು ಹೇಳಿದ್ದು, ಇದಕ್ಕಿಂತ ಬೇರೆ ಸೂಕ್ತ ಪದಬಳಕೆ ಸಾಧ್ಯವಿಲ್ಲ.

ಬಳಸುವ ಭಾಷೆ ಮತ್ತು ವಸ್ತುವಿನ ನಿರ್ವಹಣೆಯಲ್ಲಿ ‘ನೀಲಿ ನಕ್ಷೆ’ ಯ ಕಥೆ ಪಡೆದುಕೊಳ್ಳುವ ಓಘ ನಿರರ್ಗಳವಾಗಿದೆ. ಇಲ್ಲಿ ಸ್ಪುರಿಸುವ ಮನುಷ್ಯ ಸಂವೇದನೆ ಕಾದಂಬರಿಯನ್ನು ಇಷ್ಟವಾಗುವಂತೆ ಮಾಡಿದೆ. ಇಂಥ ‘ನೀಲಿ ನಕ್ಷೆ’ ಯನ್ನು ಪ್ರೀತಿಯಿಂದ ಕಳುಹಿಸಿ ಓದಿಸಿದ ಕಾದಂಬರಿಗಾರ್ತಿ ಅಮಿತಾ ಭಾಗವತ್‌ರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾದಂಬರಿ ಕೃಷಿಯಲ್ಲಿ ತೊಡಗಲಿ ಎಂದು ಬಹುಪ್ರೀತಿಯಿಂದ ಹಾರೈಸುವೆ.

(ಕೃತಿ: ನೀಲಿ ನಕ್ಷೆ (ಕಾದಂಬರಿ) ಲೇಖಕರು: ಅಮಿತಾ ಭಾಗವತ್, ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು, ಬೆಲೆ: 350/-)

About The Author

ಸುನಂದಾ ಪ್ರಕಾಶ ಕಡಮೆ

ಕಥೆಗಾರ್ತಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸದ್ಯ ಹುಬ್ಬಳ್ಳಿ ನಿವಾಸಿ. ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವರ ಪ್ರಕಟಿ ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು (ಕಾದಂಬರಿಗಳು). ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳೂ ಪ್ರಕಟವಾಗಿವೆ.

1 Comment

  1. Sunanda kadame

    ಥ್ಯಾಂಕ್ಯೂ ರೂಪಾ, ಥ್ಯಾಂಕ್ಯೂ ಕೆಂಡಸಂಪಿಗೆ👍

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ