ನಮ್ಮನೆಯ ಬೇಸಿಗೆಯ ಹಿತ್ತಲಲ್ಲಿ ಆಯಿ, ಹೂ ಕೋಸು, ಗಡ್ಡೆ ಕೋಸು ಮೂಲಂಗಿ, ಬೀಟ್ರೂಟ್‌ಗಳನ್ನು ಕೂಡಾ ಸಮೃದ್ಧವಾಗಿ ಬೆಳೆಸುತ್ತಿದ್ದಳು. ಮುಂದಿನ ಮೂರು ತಿಂಗಳು ನಾವೆಲ್ಲ ಯಥೇಚ್ಛವಾಗಿ ತರಕಾರಿಯನ್ನು ಉಪಯೋಗಿಸಬಹುದಾಗಿತ್ತು. ಎಲ್ಲಕ್ಕಿಂತ ವಿಶೇಷವಾಗಿ ಮೊಗೇ ಕಾಯಿ ಬೆಳೆಸುವುದು ಬೇಸಿಗೆಯ ಹಿತ್ತಲಿನ ವಿಶೇಷ. ಈ ಮೊಗೆ ಕಾಯಿ (ಬಣ್ಣದ ಸೌತೆ ಕಾಯಿ) ಯೆಂಬುದು ಮಲೆನಾಡಿಗರ ಆಪದ್ಬಾಂಧವನಿದ್ದಂತೆ. ಜೋರು ಮಳೆಗಾಲದ ಎರಡು ಮೂರು ತಿಂಗಳು ಅಡಿಗೆಗೆ ತರಕಾರಿ ಹೋಗಲಿ, ಸೊಪ್ಪು ಸದೆ ಕೂಡಾ ತತ್ವಾರ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಒಂಭತ್ತನೆಯ ಕಂತು
ಅತಿಯಾದ ಖಾರ, ಮಸಾಲೆ, ಉಪ್ಪು, ಹುಳಿ ವರ್ಜಿತವಾದ ತುಂಬ ಸೌಮ್ಯ ರುಚಿಯ ನಮ್ಮ ಅಡುಗೆಯ ಸ್ವಾದಿಷ್ಟವೇ ಬೇರೆ. ಅದಕ್ಕೇ ಖಡಕ್ ಸ್ವಾದ ಪ್ರಿಯರೆಲ್ಲಾ ಮಲೆನಾಡ ಅಡಿಗೆಯೆಂದರೆ, “ಅಯ್ಯ ಉಪ್ಪಿಲ್ಲಾ, ಖಾರಿಲ್ಲಾ. ಬರೀ ಸಪ್ ಸಿಡಿ.” ಎಂದು ಜೋಲು ಮುಖ ಮಾಡುತ್ತಾರೆ. ಆದರೆ, ಇಲ್ಲಿಯ ಸಮಶೀತೋಷ್ಣ ಹವೆ, ಮೃದು ನೆಲ, ಮೆದು ನೀರು ಇವೆಲ್ಲದರ ನಡುವೆ ಬದುಕಿ ಬಾಳುವ ಮಲೆನಾಡಿಗರಿಗೆ, ಇಂಥ ಸೌಮ್ಯವಾದ ಅಡಿಗೆಯೇ ಹೊಂದುತ್ತದೆ.
ಈಗ ನಾನು ಹೇಳ ಹೊರಟಿರುವುದು, ನಮ್ಮ ಬಾಲ್ಯದ ಊಟ, ತಿಂಡಿಗಳ ಕುರಿತಾದ ವಿಚಾರ. ಈಗಿನ ಮುಂದುವರಿದ ಮಲೆನಾಡಿಗರ ಆಧುನಿಕ ಊಟದ ಮೆನು ಖಂಡಿತಾ ಅಲ್ಲ. ಮಲೆನಾಡಿನ ಬಹುತೇಕ ಆಹಾರಗಳು ಆಯುರ್ವೇದ ಶಾಸ್ತ್ರದ ತಳಹದಿಯಲ್ಲೇ ಜಾರಿಗೆ ಬಂದಿರುವಂಥವು ಎಂದರೆ, ತಪ್ಪಾಗಲಾರದು. ನಮ್ಮಲ್ಲಿ ಬೆಳೆಯುವ ತರಕಾರಿ, ಗೆಡ್ಡೆ, ಗೆಣಸುಗಳ ವಿನಃ ಬೇರೆ ಯಾವುದನ್ನೂ ನಾವು ಅಡಿಗೆಗೆ ಬಳಸುವ ಪದ್ಧತಿ ಇರಲಿಲ್ಲ. ಪೇಟೆಗಳು ದೂರ. ಮತ್ತೆ ಹೊರಗಿನಿಂದ ಕೊಂಡು ತರಲು ಹಣಕಾಸಿನ ಕೊರತೆ. ಮಲೆನಾಡಿನ ಪ್ರತಿ ಮನೆಯ ಸುತ್ತಲೂ ವಿಶಾಲವಾದ ಖಾಲಿ ಜಾಗ. ಮುಂದಿನ ಅಂಗಳ ಹೂ ಗಳಿಗೆ ಮೀಸಲಾದರೆ, ಹಿಂದಿನ ಹಿತ್ತಲು ವಿವಿಧ ತರಕಾರಿಗಳನ್ನು ಬೆಳೆದುಕೊಳ್ಳಲು ಸಹಕಾರಿ. ಪಾತ್ರೆ ತಿಕ್ಕಿದ ನೀರು ಹೋಗುವ ಜಾಗಕ್ಕೆ, ಸ್ನಾನದ ನೀರು ಹೋಗಿ ಕೂಡುವ ಜಾಗಕ್ಕೆ ಹೊಂದಿಕೊಂಡು, ಬಸಳೆ ಬಳ್ಳಿಯ ಚಪ್ಪರ ಹಾಗೂ ತೊಂಡೆ ಬಳ್ಳಿಯ ಚಪ್ಪರಗಳು ಪ್ರತಿ ಮನೆಗಳಲ್ಲೂ ಸಾಮಾನ್ಯವಾಗಿತ್ತು. ಇವು ವರ್ಷವಿಡೀ ಮೇಲೋಗರಕ್ಕೆ ಬಲ ಕೊಡುತ್ತಿದ್ದವು. ಇನ್ನು ಹಿತ್ತಲ ಮೂಲೆಯಲ್ಲಿ ಒಂದಿಷ್ಟು ಕೆಸುವಿನ ಗಿಡಗಳು. ಚೀಪು ಕೆಸುವಿನ ಬುಡದಲ್ಲಿ ಚಿಗುರಿ ಹಬ್ಬುವ ಹಸಿರು ದಪ್ಪ ಬಳ್ಳಿ (ಚೀಪು) ಯನ್ನು ಕತ್ತರಿಸಿ, ಬೇಯಿಸಿ, ಸಿಪ್ಪೆ ಸುಲಿದು, ಒಂಚೂರು ತೆಂಗಿನ ತುರಿಯ ಜೊತೆ, ಜೀರಿಗೆ, ಸಾಸಿವೆ, ಅರಿಶಿನ ಸೇರಿಸಿ ರುಬ್ಬಿ, ಒಣ ಮೆಣಸಿನ ಒಗ್ಗರಣೆ ಹಾಕಿ, ಮೊಸರಿನೊಟ್ಟಿಗೆ ಸೇರಿಸಿ ಬಿಟ್ಟರೆ, ಸ್ವಾದಿಷ್ಟ ಮೊಸರು ಸಾಸಿವೆಯಾಯ್ತು. ಅದು ಅನ್ನಕ್ಕೆ ಕಲಸಿ, ಲೊಟ್ಟೆ ಹೊಡೆಯುತ್ತ ತಿನ್ನುವಷ್ಟು ರುಚಿ. ಮಳೆಗಾಲದ ಆರಂಭಕಾಲದಲ್ಲಿ ಅದರ ಎಳೆಯ ಎಲೆಯಿಂದ ಮಾಡುವ ಪತ್ರೋಡೆ. ಆಹಾ!! ಎರಡು ದಿನಗಳ ಕಾಲ ಇಟ್ಟು, ವಗ್ಗರಣೆ ಹಾಕಿ ತಿನ್ನಬಹುದಾಗಿತ್ತು.

ಇನ್ನು ಹಾಲು ಕೆಸದ ದಂಟು ಕೂಡಾ ಮೊಸರು ಬಜ್ಜಿಗೆ ಹೇಳಿ ಮಾಡಿಸಿದ್ದು. ಗಂಗಾಷ್ಟಮಿಯ ದಿನ ಇದರ ದಂಟನ್ನು ಬೆಲ್ಲ ಹಾಕಿ ಬೇಯಿಸಿ, ಅಕ್ಕಿ ಜೊತೆ ರುಬ್ಬಿ ಸಿಹಿದೋಸೆ (ದಡ್ಣ) ಮಾಡುವ ಪದ್ಧತಿ ಇತ್ತು. ಹಾಗೇ ಈ ಹಾಲು ಕೆಸುವಿನ ಗಡ್ಡೆ ತುಂಬಾ ಸ್ವಾದಿಷ್ಟ ರುಚಿಯ ಜೊತೆ, ಸಾಕಷ್ಟು ಪೌಷ್ಟಿಕತೆ ಉಳ್ಳದ್ದು. ಇದರ ಪಳದ್ಯ (ಮಜ್ಜಿಗೆ ಹುಳಿ) ಬಲು ರುಚಿ. ಆದರೆ ಜೋಕೆ… ಇದನ್ನು ಬೇಯಿಸುವಾಗ ಸಾಕಷ್ಟು ಹುಳಿ ಬೆರೆಸಬೇಕು. ಹುಣಿಸೆ ಹಣ್ಣಿನ ರಸವಾದರೂ ಆಯ್ತು. ಆದರೆ ಆಗ, ನಮ್ಮಲ್ಲಿ ನೈಸರ್ಗಿಕವಾಗಿ ದೊರೆಯುವ “ವಾಟೆ ಹುಳಿ” ಯನ್ನೇ ನಾವು ಬಳಸುತ್ತಿದ್ದುದು. ವಾಟೆ ಮರ ನೆಟ್ಟು ಬೆಳಸಬೇಕು ಅಂತಲೂ ಇಲ್ಲ. ತಾನಾಗೇ ಬೆಳೆದು ಬಿಡುವಂಥದ್ದು. ಅದರ ತುಂಬ ಹಸಿರಾದ ಕಾಯಿಗಳು ಗೊಂಚಲು ಗೊಂಚಲಾಗಿ ಬಿಡುತ್ತವೆ. ಕಾಯಿ ಬಲಿತ ಮೇಲೆ, ಗಂಡಸರು ಮರ ಹತ್ತಿ ಕೊಯ್ದು ತರುತ್ತಿದ್ದಂತೇ, ಮನೆಯ ಹೆಣ್ಣುಮಕ್ಕಳು ಮೆಟ್ಟುಗತ್ತಿ (ಈಳಿಗೆ) ಯ ಸಹಾಯದಿಂದ ತೆಳ್ಳಗೆ ಗಾಲಿಯಾಕಾರದಲ್ಲಿ ಅದನ್ನು ಕತ್ತರಿಸಿ, ಬಿಸಿಲಲ್ಲಿ ಬಟ್ಟೆಯ ಮೇಲೆ ಹರವುತ್ತಿದ್ದರು. ಅದು ಸರಿಯಾಗಿ ಗರಿ ಗರಿಯಾಗಿ ಒಣಗಿತೆಂದರೆ, ಉಪ್ಪು ಸೇರಿಸಿ, ಒರಳಲ್ಲಿ ಒನಕೆಯಿಂದ ಕುಟ್ಟಿ ಪುಡಿಮಾಡಿ ಗಡಿಗೆ ತುಂಬಿಸಿ, ಬಾಯಿಕಟ್ಟಿ, ಅಡಿಗೆ ಒಲೆಯ ಮೇಲ್ಗಡೆ ಇಟ್ಟು ಬಿಟ್ಟರೆ, ವರ್ಷದ ತನಕವೂ ಕೆಡುತ್ತಿರಲಿಲ್ಲ. ಓ.. ಎಲ್ಲಿಂದ ಎಲ್ಲಿ ಓಡ್ತಾ ಇದ್ದೀರಿ!! ಅಂದ್ರೇನು?? ಮತ್ತೆ ವಿಷಯಕ್ಕೆ ಬರೋಣ. ಅದೇ ಹಾಲು ಕೆಸುವಿನ ಗೆಡ್ಡೆ ಬಗ್ಗೆ ಹೇಳ್ತಿದ್ದೆ ಅಲ್ಲವೇ. ಹಾಂ ಆ ಗಡ್ಡೆಯನ್ನು ಬೇಯಿಸಿ, ಸಿಪ್ಪೆ ಸುಲಿದು ಸಾಂಬಾರಿನಲ್ಲೂ ಹಾಕಬಹುದು. ಆದರೆ, ಸಾಕಷ್ಟು ಹುಳಿ ತಕ್ಕಷ್ಟು ಉಪ್ಪು ಹಾಕಿ ಬೇಯಿಸಲಿಲ್ಲವೆಂದರೆ, ನಾಲಿಗೆ, ಬಾಯಿ ತುರಿಸಲು ಶುರುವಾಗುತ್ತದೆ ನೆನಪಿರಲಿ.
ಈ ಗಡ್ಡೆ ಕಿತ್ತು ಒಂದು ಬೆತ್ತದ ಬುಟ್ಟಿಯಲ್ಲಿ ತುಂಬಿ, ಬಚ್ಚಲ ಮನೆಯ ಒಂದು ಮೂಲೆಯಲ್ಲಿ ಇಟ್ಟು ಬಿಟ್ಟರೆ ವರ್ಷವಿಡೀ ಅಡಿಗೆ ಮನೆಯ ಆಪದ್ಬಾಂಧವನಂತೆ ಒದಗಿ ಬರುತ್ತಿತ್ತು. ಅಂದ ಹಾಗೇ ಈ ಕೆಸುವಿನಲ್ಲಿ ಇನ್ನೂ ಎರಡು ಬಗೆ ಇದೆ. ಒಂದು ಕಾಡು ಕೆಸು. ಅದು ಮಳೆಗಾಲದ ಆರಂಭದಲ್ಲಿ ಅಂಗಳ, ಹಿತ್ತಲು,ತೋಟ, ಬೆಟ್ಟ, ಬೇಣ ಎಲ್ಲೆಂದರಲ್ಲಿ ಹಸಿರು ಕೊಡೆ ಬಿಚ್ಚಿಕೊಂಡಂತೆ ಚಿಗಿತು ಬಿಡೋದು. ಇದರ ಎಳೆಯ ಎಲೆಗಳು ಅಡಿಗೆಗೆ ಉಳಿದ ಕೆಸುವಿಗಿಂತಲೂ ರುಚಿ. ಇದರ ಪತ್ರೋಡೆಯ ಜೊತೆ, “ಕರಗಲಿ” ಕೂಡಾ ಮಾಡಬಹುದು. ಸುರಿವ ಮಳೆಗಾಲದಲ್ಲಿ ಬೆಳ್ಳುಳ್ಳಿಯ ವಗ್ಗರಣೆ ಹಾಕಿದ ಕರಗಲಿ (ಹಸಿರು ಪೇಸ್ಟ್ ಥರ ಕಾಣುವ) ಒಂದು ಇದ್ದರೆ ಸಾಕು. ಶೇರಕ್ಕಿ ಅನ್ನ ಸದ್ದಿಲ್ಲದೇ ಹೊಟ್ಟೆಗೀಳೀತದೆ. ಇನ್ನೊಂದು ಪ್ರಕಾರದ ಕೆಸು ಅಂದರೆ, ಮರ ಕೆಸು. ಇದು ಮರದ ದಪ್ಪ ಬೊಡ್ಡೆಗೆ ಅಂಟಿಕೊಂಡು ಪರಾವಲಂಬಿ ಸಸ್ಯದಂತೇ ಬೆಳೆಯುತ್ತದೆ. ಇದರ ಎಲೆ ಸ್ವಲ್ಪ ಜಾಸ್ತಿ ದಪ್ಪ. ಬೂದು ಬಣ್ಣದ ಗೀರುಗಳನ್ನು ಹೊಂದಿ, ಪಳ ಪಳ ಹೊಳೆಯುತ್ತ, ಈ ಎಲೆ ಪ್ಲಾಸ್ಟಿಕಿನದಾ! ಅನಿಸಿಬಿಡುತ್ತದೆ. ಆದರೆ, ಗುಣ, ರುಚಿ ಎಲ್ಲವೂ ಇತರ ಕೆಸುವಿನಂತೇ. ಕರ್ಕಾಟಕ ಮಾಸದಲ್ಲಿ ಹೆಚ್ಚಾಗಿ ಕೆಸುವನ್ನು ಬಳಸುತ್ತಾರೆ. ಕೆಸುವು ಹೊಟ್ಟೆಯೊಳಗಿರುವ ಕಸವನ್ನು ತೆಗೆದು ಬಿಡುತ್ತದೆ ಅನ್ನುತ್ತಿದ್ದರು ಹಿರಿಯರು. ಮನೆಯ ಹಿತ್ತಲಿನಲ್ಲಿ ಸದಾಕಾಲ ದೊರೆವ ಇನ್ನೊಂದು ಗಡ್ಡೆಯೆಂದರೆ, ಪಂಜರ ಗೆಡ್ಡೆ (ಸುವರ್ಣ ಗಡ್ಡೆ) ಇದರ ಒಂದೊಂದು ಗಡ್ಡೆಯೇ ಅಗಲವಾದ ಬೆತ್ತದ ಬುಟ್ಟಿಯ ಗಾತ್ರದ್ದು. ಇದೂ ಅಷ್ಟೆ ವರ್ಷಾವಧಿ ಕೆಡದೇ ಉಳಿಯುವಂಥದ್ದು. ಇದಕ್ಕೂ ಸ್ವಲ್ಪ ತುರಿಕೆಯ ಗುಣ ಇದೆ. ಹುಳಿ, ಪಲ್ಲೆ ಎಲ್ಲದಕ್ಕೂ ಸಲ್ಲುವ ಬಹುಪಯೋಗಿ, ಪೌಷ್ಟಿಕವಾದ ಗಡ್ಡೆ ಇದು.

ಮಳೆಗಾಲದಲ್ಲಿ ದೊರೆಯುವ ಅಪರೂಪದ ಪದಾರ್ಥವೆಂದರೆ, ‘ಕಳಲೆ’. ಕಾಡಿನಲ್ಲಿ ಬೆಳೆಯುವ ಎಳೆಯ ಬಿದಿರನ್ನೇ ಕಳಲೆ ಎನ್ನುತ್ತಾರೆ. ಶ್ರಾವಣವೆಂದರೆ, ಪುಷ್ಕಳವಾಗಿ ಕಳಲೆ ದೊರೆಯುವ ಕಾಲ. ಇದರ ಸಂಸ್ಕರಣೆಯೇ ಸ್ವಲ್ಪ ಪಿರಿ ಪಿರಿ. ಈ ಕಳಲೆಯ ಮೇಲ್ಪದರ ಸುಲಿದು ತೆಳ್ಳಗೆ ಹೆಚ್ಚಿ, ಮೂರು ದಿನ ನೀರಲ್ಲಿ ನೆನೆಸಿ ಇಡಬೇಕು. ದಿನಾ ನೀರು ಬದಲಿಸಿ, ಹೊಸ ನೀರು ಹಾಕಬೇಕು. ನಾಲ್ಕನೆಯ ದಿನದಿಂದ ಇದನ್ನು ಹಿಂಡಿ ತೆಗೆದು, ಅಡಿಗೆಗೆ ಉಪಯೋಗಿಸಬಹುದು. ಇದರ ಪಲ್ಲೆ, ಪಳದ್ಯ ಎಲ್ಲವೂ ಬಲು ರುಚಿ. ಉಪ್ಪಿನಲ್ಲಿ ಹಾಕಿಟ್ಟಿದ್ದ ಹಲಸಿನ ತೊಳೆ ಜೊತೆ ಕಳಲೆ ಸೇರಿಸಿ ಪಲ್ಲೆ ಮಾಡುತ್ತಿದ್ದರು. ಇದು ಕೂಡಾ ತುಂಬ ಔಷಧಿಯ ಗುಣವುಳ್ಳದ್ದು. ಹಳೆಯ ಜನ “ಇದನ್ನು ವರ್ಷಕ್ಕೆ ಒಮ್ಮೆ ತಿನ್ನಲೇ ಬೇಕು” ಅಂತಿದ್ದರು.
ನಮ್ಮ ಮಲೆನಾಡ ಊಟದಲ್ಲಿ, ತಂಬುಳಿಗೆ ಮೊದಲ ಸ್ಥಾನ. ಬೇಸಿಗೆ ಕಾಲ ಮತ್ತೂ ಚಳಿಗಾಲದಲ್ಲಿ ದಿನಾ ಮಧ್ಯಾಹ್ನದ ಊಟಕ್ಕೆ ತಂಬುಳಿ ಬೇಕೇ ಬೇಕು. ಅದೂ ಊಟ ಶುರುವಾಗುವುದೇ ತಂಬುಳಿ, ಅನ್ನದಿಂದ. ಉತ್ತಮ ಔಷಧೀಯ ಗುಣಗಳುಳ್ಳ ಕೆಲವು ಸಸ್ಯಗಳ ಚಿಗುರು, ಕುಡಿ, ದಂಟು (ಬೇರು ಸಮೇತ) ಗಳಿಂದ ತಯಾರಿಸುವ ಈ ತಂಬುಳಿ ನಮ್ಮ ಶರೀರದ ಮೂರು ವಿಕಾರಗಳನ್ನೂ (ಕಫ, ಪಿತ್ತ, ವಾತ) ಸಮಸ್ಥಿತಿಯಲ್ಲಿಡುವ ದಿವ್ಯ ಮೇಲೋಗರವಾಗಿದೆ. ನಮ್ಮಲ್ಲಿ ಸುಮಾರು ನೂರಾರು ವಿಧದ ಕುಡಿಗಳನ್ನು ತಂಬುಳಿಗೆ ಬಳಕೆ ಮಾಡಲಾಗುತ್ತದೆ. ಉದಾ:- ಮನೆಯ ಅಂಗಳದ ಸುತ್ತ ಹಾಕಿರುವ ಚಿಗುರು ಬೇಲಿಯ “ಭೂತ ನಾಯಕ” ನ ಕುಡಿ, ಬೆಟ್ಟ, ಬೇಣಗಳಲ್ಲಿ ತಾನಾಗೆ ಬೆಳೆವ “ಎಲವರಿಗೆ”, ಗದ್ದೆಯ ಬದುವಿಗೆ ಬೇರೂರಿ ಬೆಳೆವ ಒಂದೆಲಗ( ಬ್ರಾಹ್ಮಿ), ಕಾಡು ಹೊಳೆ, ಕೆರೆಯಂಚಿನ ತಂಪಾದ ದಿಬ್ಬಕ್ಕೆ ಅಂಟಿ ಬೆಳೆವ “ವಾಚಂಗಿ ಕುಡಿ”. ಹಾಗೇ ನೆಟ್ಟು ಬೆಳೆಸುವ ಕನ್ನೇ ಕುಡಿ, ದಾಳಿಂಬೆ ಕುಡಿ, ಪೇರಲ ಕುಡಿ, ಸಣ್ಣ ಮೆಣಸಿನ ಕುಡಿ, ಬಿಲ್ವ ಪತ್ರೆ ಕುಡಿ, ಕರಿ ಬೇವಿನ ಕುಡಿ ಇತ್ಯಾದಿ… ಇತ್ಯಾದಿ. ಕುಡಿ ಯಾವುದಾದರೂ ಮಾಡುವ ವಿಧಾನ ಹೆಚ್ಚೂ ಕಮ್ಮಿ ಒಂದೇ. ಎಳೆ ಕುಡಿಗಳನ್ನು ಸ್ವಚ್ಛ ತೊಳೆದು, ದಪ್ಪ ತಳದ ಚಿಕ್ಕ ಬಾಣಲಿಯಲ್ಲಿ ಬಾಡಿಸಿ, ಚೂರು ತುಪ್ಪ, ಚಿಟಿಕೆ ಜೀರಿಗೆಯ ಜೊತೆ ಸಣ್ಣ ಉರಿಯಲ್ಲಿ ಹುರಿದು,( ಕೆಲವು ತಂಬುಳಿಗೆ ಕಾಳು ಮೆಣಸು ಬೇಕು) ಹಸಿ ತೆಂಗಿನ ತುರಿಯ ಜೊತೆ ನುಣ್ಣಗೆ ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕಡೆದ ಮಜ್ಜಿಗೆ ಬೆರೆಸಿ ಬಿಟ್ಟರೆ ತಂಬುಳಿ ರೆಡಿ. ಇದು ಅನ್ನದ ಜೊತೆ ಕಲಸಿ ಉಣ್ಣಬಹುದು. ಹಾಗೇ ಮಜ್ಜಿಗೆಯಂತೇ ಕುಡಿಯಲೂ ಬಹುದು. ಇದೇ ಕುಡಿಗಳನ್ನು ಮಳೆಗಾಲದಲ್ಲಿ ಬಿಸಿ ಮೇಲೋಗರಕ್ಕೆ ಬಳಕೆ ಮಾಡುತ್ತಾರೆ. ಅದನ್ನು “ಕಟ್ಣೆ” ಎನ್ನುತ್ತಾರೆ.
ಭಾದ್ರಪದ ಮುಗಿಯುತ್ತಿದ್ದಂತೆಯೇ ಮಳೆಯ ತೀವ್ರತೆ ಕಡಿಮೆಯಾಗುತ್ತದೆ. ಆಗ ಹಳ್ಳಿಯ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ತರಕಾರಿ ಬೆಳೆಯುವ ತಯಾರಿ ಶುರುವಾಗುತ್ತಿತ್ತು. ಇದನ್ನು “ಮಳೆಗಾಲದ ಹಿತ್ತಲು” ಎನ್ನುತ್ತಿದ್ದರು. ಕಳೆದ ವರ್ಷ ಜತನವಾಗಿ ಸಂಗ್ರಹಿಸಿ ಬೂದಿಯಲ್ಲಿ ಕಲೆಸಿಟ್ಟ ಬೆಂಡೆ, ಬದನೆ, ಹೀರೆ, ಹಾಗಲ, ತಿಂಗಳವರೆ ಹೀಗೆ ವಿವಿಧ ತರಕಾರಿಗಳ ಬೀಜವನ್ನು ಹೊರತೆಗೆದು ಮೊಳಕೆ ಕಟ್ಟಿ, ಹಸನಾಗಿಸಿದ ಮಡಿಯಲ್ಲಿ ಹರವಿ, ಸಸಿಗಳನ್ನು ತಯಾರಿಸುತ್ತಿದ್ದರು. ಊರ ಹೆಣ್ಣುಮಕ್ಕಳೆಲ್ಲ ಪರಸ್ಪರ ಭೇಟಿಯಾಗಿ, ಈ ಬೀಜಗಳನ್ನೋ, ಸಸಿಗಳನ್ನೋ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅದಕ್ಕೆಲ್ಲಾ ಪೇಟೆಗೆ ಅಲೆವ, ಖರೀದಿಸುವ ಅಗತ್ಯವೇ ಇಲ್ಲದಷ್ಟು ಸ್ವಾವಲಂಬಿಗಳಾಗಿದ್ದರು.
ಮುಂದಿನ ಎರಡು ತಿಂಗಳಿಗೆ ಹೂ ಮಿಡಿ ಬಿಡಲಾರಂಭಿಸಿ, ದಟ್ಟ ಬೇಸಿಗೆ ಬೀಳುವ ತನಕವೂ ಫಲ ನೀಡುತ್ತಿದ್ದವು. ಅದು ಮುಗಿವ ಹೊತ್ತಿಗೆ, ಇದೇ ತರಕಾರಿಗಳ ಹೊಸ ಗಿಡಗಳು ಭತ್ತದ ಪೈರು ತೆಗೆದು ಖಾಲಿಯಾದ ಗದ್ದೆಗೆ ವರ್ಗಾವಣೆ ಆಗುತ್ತಿತ್ತು. ಇಲ್ಲಿ “ಬೇಸಿಗೆಯ ಹಿತ್ತಲಿನ” ಹೆಸರಲ್ಲಿ ತರಕಾರಿಗಳ ಬೆಳೆಸುವಿಕೆ ಆರಂಭವಾಗುತ್ತಿತ್ತು. ನಮ್ಮನೆಯ ಬೇಸಿಗೆಯ ಹಿತ್ತಲಲ್ಲಿ ಆಯಿ, ಹೂ ಕೋಸು, ಗಡ್ಡೆ ಕೋಸು ಮೂಲಂಗಿ, ಬೀಟ್ರೂಟ್‌ಗಳನ್ನು ಕೂಡಾ ಸಮೃದ್ಧವಾಗಿ ಬೆಳೆಸುತ್ತಿದ್ದಳು. ಮುಂದಿನ ಮೂರು ತಿಂಗಳು ನಾವೆಲ್ಲ ಯಥೇಚ್ಛವಾಗಿ ತರಕಾರಿಯನ್ನು ಉಪಯೋಗಿಸಬಹುದಾಗಿತ್ತು. ಎಲ್ಲಕ್ಕಿಂತ ವಿಶೇಷವಾಗಿ ಮೊಗೇ ಕಾಯಿ ಬೆಳೆಸುವುದು ಬೇಸಿಗೆಯ ಹಿತ್ತಲಿನ ವಿಶೇಷ. ಈ ಮೊಗೆ ಕಾಯಿ (ಬಣ್ಣದ ಸೌತೆ ಕಾಯಿ) ಯೆಂಬುದು ಮಲೆನಾಡಿಗರ ಆಪದ್ಬಾಂಧವನಿದ್ದಂತೆ. ಜೋರು ಮಳೆಗಾಲದ ಎರಡು ಮೂರು ತಿಂಗಳು ಅಡಿಗೆಗೆ ತರಕಾರಿ ಹೋಗಲಿ, ಸೊಪ್ಪು ಸದೆ ಕೂಡಾ ತತ್ವಾರ. ಅಂಥ ಜೊರ ಜೊರ ಮಳೆಯ ಥಂಡಿಯಲ್ಲಿ ಬಿಸಿ ಬಿಸಿ ಹುಳಿ, ಪಲ್ಲೆ ಎಲ್ಲವಕ್ಕೂ ಈ ಮೊಗೇಕಾಯಿಯೇ ಆಧಾರ. ಅಷ್ಟೇ ಅಲ್ಲ ದೋಸೆ ಇಡ್ಲಿಗಳಿಗೆ ಬೇಳೆಯ ಬದಲು ಮೊಗೇ ಕಾಯಿಯನ್ನೇ ಬಳಸುವುದು ಮಲೆನಾಡಿಗರ ಪದ್ಧತಿಯಾಗಿತ್ತು.
ಇನ್ನು ಇದರ ಹೊರತಾಗಿ ತೋಟದಲ್ಲಿ ಬಿಡುವ ವಿವಿಧ ಜಾತಿಯ ಬಾಳೇಕಾಯಿ ಕೂಡಾ ಅಡಿಗೆಗೆ ಒದಗಿ ಬರುತ್ತಿತ್ತು. ಬಹಳ ಹಿಂದೆ ಅಂದರೆ, ನನ್ನ ಅಪ್ಪಯ್ಯ ಆಯಿ ಎಲ್ಲ ಚಿಕ್ಕವರಿರುವ ಕಾಲದಲ್ಲಿ ಹಳ್ಳಿಯ ಬಡ ಕುಟುಂಬಗಳು ಬಹುತೇಕ ದಿನಗಳಲ್ಲಿ ಅನ್ನದ ಬದಲು ಬೇಯಿಸಿದ ಬಾಳೇ ಕಾಯಿ ತಿಂದೇ ಬದುಕು ಸಾಗಿಸುತ್ತಿದ್ದರಂತೆ. ಹಬ್ಬ ಹರಿದಿನಗಳಲ್ಲೋ ಅಥವಾ ಮನೆಗೆ ನೆಂಟರು ಬಂದಾಗಲೋ ಮಾತ್ರ ಅನ್ನ ಮಾಡುವ ಪದ್ಧತಿ ಇತ್ತಂತೆ. ಆ ಕಾಲದಲ್ಲಿ ಅಕ್ಕಿ ಕೂಡಾ ಬಡವರಿಗೆ ಎಟುಕದ ಧಾನ್ಯವಾಗಿತ್ತಂತೆ. ಆದರೆ ನಮ್ಮ ಕಾಲದಲ್ಲಿ ಇದು ಮೇಲೋಗರಕ್ಕೆ, ಹಣ್ಣು ಮಾಡಿ ತಿನ್ನಲು ಮಾತ್ರ ಉಪಯೋಗವಾಗುತ್ತಿತ್ತು. ಕೇವಲ ಬಾಳೆ ಕಾಯಿ ಮಾತ್ರವಲ್ಲದೇ, ಬಾಳೇ ಹೂವು, ಬಾಳೆ ಕುಂಡಿಗೆ, ಬಾಳೆ ದಿಂಡು ಎಲ್ಲವನ್ನೂ ಅಡಿಗೆಗೆ ಉಪಯೋಗಿಸುತ್ತಿದ್ದರು. ಇವು ಮೂತ್ರಕೋಶದ ಕಲ್ಲುಗಳನ್ನು ಕೂಡಾ ಕರಗಿಸುವ ಶಕ್ತಿ ಹೊಂದಿದೆ.
ಮಾರ್ಚ್, ಏಪ್ರಿಲ್ ಸುಮಾರಿಗೆ ಹಲಸು ಮಾವುಗಳ ಬೆಳೆ ಆರಂಭ. ಆಗಂತೂ ಮದುವೆ ಊಟಕ್ಕೆ ಕೂಡಾ ಮಾವಿನ ಕಾಯಿ ಅಪ್ಪೇಹುಳಿ, ಮಾವಿನ ಹಣ್ಣಿನ ಸಾಸಿವೆ, ಎಳೆಯ ಹಲಸಿನ ಗುಜ್ಜೆ ಪಲ್ಲೆ ಇರಲೇ ಬೇಕಿತ್ತು. ಹಲಸಿನ ಕಾಯಿ ಬಲಿಯುತ್ತಿದ್ದಂತೆಯೇ ಅದರ ಪಳದ್ಯಕ್ಕೆ ಡಿಮ್ಯಾಂಡ್ ಬರುತ್ತಿತ್ತು. ಹೆಣ್ಣು ಮಕ್ಕಳಿಗಂತೂ ಬೇಸಿಗೆಯಿಡೀ ಹಲಸಿನ ಹಪ್ಪಳ ಮಾಡುವ ತರಾತುರಿ. ಹಾಗೆ ಬಲಿತ ಹಲಸಿನ ತೊಳೆಗಳನ್ನು, ಹುಳಿ ಮಾವಿನ ಕಾಯಿಗಳನ್ನು ಉಪ್ಪು ನೀರು ತುಂಬಿದ ಗಡಿಗೆಯಲ್ಲಿ ಮುಳುಗಿಸಿ ಬಾಯಿಕಟ್ಟಿಟ್ಟು ವರ್ಷವಿಡೀ ಬಳಕೆ ಮಾಡುತ್ತಿದ್ದರು.

ಈ ರೀತಿ ಮಲೆನಾಡಿಗರು ತಮ್ಮ ಅಗತ್ಯದ ತರಕಾರಿ, ಸೊಪ್ಪು, ನಾರು, ಬೇರು ಎಲ್ಲವನ್ನೂ ತಾವೇ ಬೆಳೆದುಕೊಳ್ಳುವಷ್ಟು ಸ್ವಾವಲಂಬಿಗಳಾಗಿದ್ದರು. ಈಗಿನಂತೆ ಬೇಳೆಗಳನ್ನು ಕೂಡಾ ತರುತ್ತಿರಲಿಲ್ಲ. ಭತ್ತದ ಕೊಯಿಲಿನ ನಂತರ, ಗದ್ದೆ ಊಳಿ, ಅಳಸಂದೆ, ಹೆಸರು, ಬವಡೆ, ಮಡಿಕೆ, ಎಳ್ಳು, ಕಡಲೆ ಎಲ್ಲವನ್ನೂ ಬಿತ್ತಿ ಬೆಳೆದುಕೊಳ್ಳುತ್ತಿದ್ದರು.

ಇಂದು ನನ್ನ ಮಲೆನಾಡು ಸಂಪೂರ್ಣ ಬದಲಾಗಿದೆ. ಅಂಗಳಕ್ಕಿಳಿದರೆ ಕಾಲು ಮಣ್ಣಾಗುತ್ತದೆಯೆಂಬ ಹೆಣ್ಣು ಮಕ್ಕಳು ಮಣ್ಣಲ್ಲಿ ಕೈ ಊರಿ ತರಕಾರಿ ಬೆಳೆದಾರೆ? ಅಡಿಕೆಗೆ ಸಾಕಷ್ಟು ದುಡ್ಡು ಬಂದು, ಗದ್ದೆ ಕೂಡಾ ತೋಟವಾಗಿ ಮಾರ್ಪಟ್ಟಿದೆ. ವಾರಕ್ಕೊಮ್ಮೆ ಶಿರಸಿಯ ಸಂತೆಗೆ ಹೋಗಿ, ಅದೇ ವಿಷ ಮಿಶ್ರಿತ ತರಕಾರಿ ತಂದು ಬೇಯಿಸಿ ತಿನ್ನುತ್ತಾರೆ. ಪಟ್ಟಣಿಗರಂತೇ ಪಾಲೀಶ್ ಅಕ್ಕಿ ತಂದು ಉಣ್ಣುತ್ತಾರೆ. ಮನೆಯಲ್ಲಿ ಕುಳಿತ ಬಣ್ಣದ ಟಿ. ವಿ ಯ ಮುಂದೆ ಹೊತ್ತು ಕಳೆಯುತ್ತ ಪಟ್ಟಣದ ಕನಸು ಕಾಣುತ್ತ, ಮೈ ತುಂಬ, ಮನಸಿನ ತುಂಬ ರೋಗ ಅಂಟಿಸಿಕೊಂಡು ನರಳುತ್ತಿರುವ ನನ್ನ ಮಲೆನಾಡಿಗರನ್ನು ನೋಡಿದರೆ, ಒಂಥರಾ ಅನಾಥ ಭಾವ ಆವರಿಸುತ್ತದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
