Advertisement
‘ಸೀತೆ ಹೂ’ ಅರಳುವ ಸಮಯ…: ಶಾಂತಾ ಜಯಾನಂದ್ ಕವನ ಸಂಕಲನಕ್ಕೆ ಎಚ್.ಆರ್.‌ ಸುಜಾತಾ ಮುನ್ನುಡಿ

‘ಸೀತೆ ಹೂ’ ಅರಳುವ ಸಮಯ…: ಶಾಂತಾ ಜಯಾನಂದ್ ಕವನ ಸಂಕಲನಕ್ಕೆ ಎಚ್.ಆರ್.‌ ಸುಜಾತಾ ಮುನ್ನುಡಿ

ನಿಸರ್ಗ ಪ್ರೇಮ, ಸಂಸಾರ ಹೊಂದಾಣಿಕೆ, ಸಾಮಾಜಿಕ ನಡವಳಿಕೆ, ಸಾಮಾಜಿಕ ನ್ಯಾಯ, ಹೆಣ್ಣಿನ ಶೋಷಣೆ, ಎಲ್ಲವನ್ನೂ ಒರೆಗೆ ಹಚ್ಚುವ ಸಾಮರ್ಥ್ಯ ಶಾಂತಾ ಜಯಾನಂದರ ಕವನಗಳಲ್ಲಿ ಕಾಣಸಿಗುತ್ತವೆ. ರೂಪದರ್ಶಿ, ಕುಂಬಳ ಬಳ್ಳಿಯ ಹೂವು, ಸೀತೆಹೂ, ಸೀರೆ ಮಾರುವ ಹುಡುಗ, ವಿಮಾನ ನಿಲ್ದಾಣ, ಬುದ್ಧ, ನೀಲಿ ಕುರಿಂಜಿ, ಪಯಣ, ಸಾಲು ಮರದ ತಿಮ್ಮಕ್ಕ, ಪಂಚ ಪತಿವ್ರತೆಯರು, ಮುಂತಾದ ಕವನಗಳು ಜಗತ್ತಿನ ಚಲನೆಯನ್ನೂ , ಅದರಲ್ಲಿ ಉಳಿಯುವ ನೆನಪನ್ನು, ತಾತ್ವಿಕ ಧೋರಣೆಯನ್ನು ತೆರೆದು ತೋರುತ್ತವೆ.
ಶಾಂತಾ ಜಯಾನಂದ್ ಕವನ ಸಂಕಲನ “ಸೀತೆ ಹೂ” ಕೃತಿಗೆ ಎಚ್.ಆರ್.‌ ಸುಜಾತಾ ಮುನ್ನುಡಿ

‘ಸೀತೆ ಹೂ ’ ಎನ್ನುವುದು ಮಲೆನಾಡಿನ, ಮಳೆಯನಾಡಿನ ಮುಡಿಗೇರಿದ ಕಿರೀಟ. ಕಟ್ಟಿದ ಮೋಡಕ್ಕೂ, ಮಳೆ

ಸುರಿವಿಗೂ, ಜಾರುಕಲ್ಲಿಗೂ ಸೊಬಗನ್ನೀವ ಈ ಹೂದಂಡೆ ಮರದ ಯಾವುದೋ ಸಂದುಗೊಂದಿನಲ್ಲಿ, ಹಕ್ಕಿಯ ಹಿಕ್ಕೆಯಲಿ ಉದುರಿ, ಪಾಚಿಯ ಕರುಳೊಳಗೆ ಹುದುಗಿ, ಮೊಳೆತು, ಆಶ್ರಯಕ್ಕೆ ಹಕ್ಕಿ ಕೂತ ಮರವನ್ನೇ ನಂಬಿ, ಗಾಳಿ ತೇವಕ್ಕೆ ಬೇರಿಳಿಸಿ, ಮಳೆಗಾಲದ ದಿನಗಳಲ್ಲಿ ಮೋಡಗಟ್ಟುವ ತೇವಾಂಶಕ್ಕೆ ಮನಸೋತು, ಹೂತ ಹೂದಂಡೆಗೆ ನೂರು ಹೆಸರು. ಸೀತೆ ದಂಡೆ, ಹೂದಂಡೆ, ದ್ರೌಪದಿ ದಂಡೆ, ಮತ್ತಿನ್ನೇನೋ.

ಈ ಹೂದಂಡೆಯ ನವಿರು ಪರಿಮಳಕ್ಕೆ ಮನಸೋತು, ಜಡೆ ಹೆಣಿಕೆಯ ಚೆಲುವಿಗೆ ಪೋಣಿಸಿದ ಹಾಗೆ ಅರಳುವ ಹೂವಿಗೆ ಮುತ್ತುವ ಜೇನ್ನೋಣದಂತೆ, ಈ ಕಾಡು ಹೂವಿನ ಚೆಲುವಿಗೆ ಮುಗಿಬೀಳದವರಿಲ್ಲ. ಚೆಲುವಿರುವೆಡೆ ಒಲವು ಅರಳದೇ ಇರುವುದೇ? ಒಲವು ಅರಳಿದೆಡೆ ಸಾಮಾಜಿಕ ನ್ಯಾಯ ಎಂಬುದು ಒಲಿದವರನ್ನು ನೋಯಿಸದೇ ಬಿಡುವುದುಂಟೆ? ಸೀತೆ ದ್ರೌಪದಿಯರು ಅದರಲ್ಲೂ ನೊಂದ ಹೆಣ್ಣುಗಳಿಗೆ ಪ್ರತಿನಿಧಿಗಳಾಗದೇ ಇರಲು ಸಾಧ್ಯವೇ?

(ಶಾಂತಾ ಜಯಾನಂದ)

​ಶಾಂತಾ ಜಯಾನಂದ ಅವರ ‘ಸೀತೆ ಹೂ’ ಕವನದ ಸಾಲುಗಳು ಮುಗಿಯದ ಹೆಣ್ಣಿನ ಸಂಕಟವನ್ನು ಕನ್ನಡಿ ಹಿಡಿದು ತೋರುತ್ತ, ತನ್ನನ್ನೂ ತಿದ್ದಿಕೊಳ್ಳುತ್ತ, ಓದುಗರನ್ನು ಹೀಗೆ ಚಿಂತನೆಗೆ ಹಚ್ಚುತ್ತವೆ.

‘ಕಾಡಲೆವ  ಸೀತೆ, ಕಾಡುವ ಕಣ್ಣು
ಸೀತೆ ದ್ರೌಪದಿ ಬೇರೆ ಏನು?
ದಂಡೆಯ ಉಳಿವಲ್ಲಿ ಎಲ್ಲರೂ ಒಂದೇ!

ಹೆಣ್ಣಿನ ಹೋರಾಟದ ಜೊತೆಗೆ ಮನುಷ್ಯ ಜಾತಿ ಒಂದೇ ವಲಂ ಎನ್ನುವ ಮಾತನ್ನು ಹೊಸದಾಗಿಸುತ್ತ ನಾವೆಲ್ಲರೂ
ಒಂದೇ ಎಂದು ನಿವೇದಿಸುತ್ತ, ಇಂದಿಗೆ  ‘ಲವ್ ಜಿಹಾದ್’ ಎಂಬ ಹೊಸ ಹೆಸರಿನಲ್ಲಿ ಹುಟ್ಟಿರುವ ಇಬ್ಬಗೆಯ ಕೊಳಕನ್ನು
ನಿವಾರಿಸಿಕೊಳ್ಳುವ ಹಾದಿಯನ್ನು ತಮ್ಮ ಸಾಲುಗಳಲ್ಲಿ ಹರವುತ್ತಾರೆ.

ಹಸಿರ ಮಡಿಲಲ್ಲಿ ಮೆರೆವ ಕನಕಾಂಬರ ಮುದ್ದಾಗಿ
ಕುಳಿತಿದಿಯಲ್ಲೇ, ಜೀವ ಝಲ್ಲೆನ್ನುವಂತೆ ನಿನ್ನ ಮುಡಿಯಲ್ಲಿ

ನನಗೆ ಪ್ರೇಮದ ಉಸಿರು ಗೊತ್ತು
‘ಲವ್ ಜಿಹಾದ್’ ಅರ್ಥ ತಿಳಿಯುತ್ತಿಲ್ಲ

ಇರಲಿ ಬಿಡು ಇಂದು ಯುಗಾದಿ, ಹಸಿರನುಂಡು ಹಾಡುವ
ಮರಗಳ ನಡುವೆ ಕುಳಿತಿರುವೆ. ರಂಜಾನ್ ಹಬ್ಬದ ಚಂದ್ರಮನ
ಕಾಣಲು, ನೀ ಬರುವ ಹೊತ್ತ ಕಾಯುವೆ

ಯುಗಾದಿ ರಂಜಾನಿನ ಕಿರುನಗೆಯ  ಚಂದಿರ ಒಬ್ಬನೇ! ಎಂದು
ನಿನ್ನೊಂದಿಗೆ ಅವನನ್ನೂ ನನ್ನೊಡನೆ ಕರೆ ತರುವೆ

​ಶಾಂತಾ ಅವರು ‘ಗಾಂಧೀ ಜನಿಸದ ನಾಡಿನಲ್ಲಿ’ ಕವನದಲ್ಲಿ ಪರದೇಸಿಗರ ಗಾಂಧಿ ಮೋಹವನ್ನು ಕಾಣುತ್ತ ತಮ್ಮ ನೆಲದ ಗಾಂಧಿಯನ್ನು ನೆನೆಯುತ್ತ ‘ಧೂಳು ಹಿಡಿದ ಪ್ರತಿಮೆಯ ಮೇಲೆ ಪಟ್ಟನೆ ರೆಕ್ಕೆಯೊಡೆದು ಆಕಾಶಕ್ಕೆ ಹಾರುವ ಪಾರಿವಾಳದ ರೆಕ್ಕೆಯ ರೂಪಕವೊಂದನ್ನು ತಂದು ಗಾಂಧಿಯ ಹರವನ್ನು ಕಟ್ಟಿಕೊಡುತ್ತಾರೆ. ಇಲ್ಲಿ ವಿಷಾದ ಇಣುಕಿದರೂ, ಅದು ಹೆಮ್ಮೆಯ ರೂಪ ಪಡೆದು, ಆಗಸದ ಹರವಿಗೆ ಜಿಗಿಯುವ ತಂತ್ರ ಇಲ್ಲಿ ಎದ್ದು ಕಾಣುತ್ತದೆ.

ಒಣಕಲು  ಮೈಯಿಗೆ  ಫಳಫಳ ಹೊಳಪು
ಫೋಟೋ  ಕ್ಲಿಕ್ಕಿಸುವ  ಬೆಳಕು
ಪ್ರೀತಿಯ  ಹನಿ  ಸಿಂಚನವಾದದ್ದ  ಕಂಡು
ಬೀಗಿದೆ,  ಗಾಂಧಿ  ನಾಡಿನವಳು  ನಾನು

‘ಧೂಳು ಹಿಡಿದ ಪ್ರತಿಮೆಯ ಮೇಲೆ
ಪಟ್ಟನೆ ರೆಕ್ಕೆಯೊಡೆದು ಆಕಾಶಕ್ಕೆ ಹಾರುವ
ಪಾರಿವಾಳದ ರೆಕ್ಕೆʼ

‘ದೇವರು ಪಟ್ಟಕ್ಕೇರಿದೆ’ ಎಂಬ ಕವನ ಮಾರ್ಮಿಕವಾಗಿ ಮನುಷ್ಯನ ನಡವಳಿಕೆಯನ್ನು, ದೇವರ ಮರೆಯಲ್ಲಿ ಮರೆಮಾಚುವ ವಿವೇಕವನ್ನು ಲೇವಡಿ ಮಾಡುತ್ತ ಕೊನೆಗೆ ಮನುಷ್ಯನ ಅಹಂ ದೇವರನ್ನು ಕೆಡುವುದರ ಮೂಲಕ ಮನುಷ್ಯರ ಸಾಧ್ಯಾಸಾಧ್ಯತೆಯನ್ನು ತೋರುವುದಲ್ಲದೆ ದೇವರು ಎಂದರೇನು? ದೇವರು ಯಾರ ಸೃಷ್ಠಿ? ಎಂದು ನಿಚ್ಚಳವಾಗಿ ತೋರುತ್ತದೆ.

ಕೆರೆಯ  ಬದಿಯಲ್ಲಿ  ಬಿದ್ದುಹೋಯಿತು ದೈವ
ತಟ್ಟನೆ ಮಗು ಅಮ್ಮನ ಕೇಳಿತು:
“ಅಮ್ಮ, ತಕಧಿಮಿ ತಕಧಿಮಿ ಕುಣಿದ ದೈವ,
ಈಗೇಕೆ  ತಣ್ಣಗೆ  ಬಿದ್ದಿದೆ?”
“ಅಹಂ  ಬಿದ್ದುಹೋಗಿದೆ
ಅದಕ್ಕೆ  ಹಾಗೆ  ಬಿದ್ದಿದೆ  ಕಂದಾ”

​’ಕಾಫಿ-ಕಪ್ -ಲೈಫ್ ’ ನ ಸಾಲುಗಳು ಕಾಫಿ ಕಪ್ಪಿನ ಆಕರ್ಶಕ ಹಿಡಿಯಲ್ಲಿ ಮೊದಲಾಗಿ ಕಾಫಿ ನಾಡಿನ ಶ್ರಮಿಕರ ದುಡಿಮೆಯನ್ನು ಸಾರಿ ಹೇಳುತ್ತ, ಕಾಫಿ ಹೂನಿಂದ ಕಾಫಿ ಪೇಯ ಬಟ್ಟಲಿಗೆ ಬಂದು ಬೀಳುವವರೆಗೂ ಮಾರ್ಪಾಟಾಗುವ ಅದರ ಹಂತಗಳನ್ನು ತಿಳಿಸುವುದಲ್ಲದೆ ಮತ್ತೊಂದರ ಒಳಗೊಳ್ಳುವಿಕೆಯನ್ನು ಲಿಂಗ ತತ್ವಕ್ಕೆ ಹೋಲಿಸುವ ಕವಿ ಕೊನೆಯಲ್ಲಿ  ‘ನಿಜ! ಕಾಫಿ ಶರಣನಂತೆ’ ಎಂದು ಕೊಡುವ ಹೋಲಿಕೆ ಸತ್ವಯುತವಾಗಿದೆ.

ಪ್ರಕೃತಿಯ ಅಂಟಿಗೆ ನಂಟಿಗೆ
ಹಸಿರು ಕಾಯಾಗಿ, ಕೆಂಪು ಹಣ್ಣು,
ಬಿಡಿಸುವ ಕಲೆ ಕಾಫಿ ನಾಡಿನ
ಶ್ರಮಿಕರಿಗಷ್ಟೇ ಗೊತ್ತು.

ಬಿಡಿಸಿ, ನೆನೆಸಿ, ಬೀಜವಾಗಿಸಿ, ಒಣಗಿಸಿ
ಹುರಿದು, ಲಿಂಗ ತತ್ವದಲ್ಲಿ ಮುಳುಗಿ
ಕಪ್ಪಾಗಿ ಕಡೆಗೆ ಪುಡಿಯಾಗಿ,
ಕಾಫಿಯ ತತ್ವ ಒಂದು ಅನುಭೂತಿ.

ಹಾಲುಸಕ್ಕರೆ ಬೆರೆತು, ಬಣ್ಣವರಿತು
ಹದಗೊಂಡ ಮೇಲೆ ನಿಜ!
ಕಾಫಿ ಶರಣನಂತೆ

ನಿಸರ್ಗ ಪ್ರೇಮ, ಸಂಸಾರ ಹೊಂದಾಣಿಕೆ, ಸಾಮಾಜಿಕ ನಡವಳಿಕೆ, ಸಾಮಾಜಿಕ ನ್ಯಾಯ, ಹೆಣ್ಣಿನ ಶೋಷಣೆ, ಎಲ್ಲವನ್ನೂ ಒರೆಗೆ ಹಚ್ಚುವ ಸಾಮರ್ಥ್ಯ ಶಾಂತಾ ಜಯಾನಂದರ ಕವನಗಳಲ್ಲಿ ಕಾಣಸಿಗುತ್ತವೆ. ರೂಪದರ್ಶಿ, ಕುಂಬಳ ಬಳ್ಳಿಯ ಹೂವು, ಸೀತೆಹೂ, ಸೀರೆ ಮಾರುವ ಹುಡುಗ, ವಿಮಾನ ನಿಲ್ದಾಣ, ಬುದ್ಧ, ನೀಲಿ ಕುರಿಂಜಿ, ಪಯಣ, ಸಾಲು ಮರದ ತಿಮ್ಮಕ್ಕ, ಪಂಚ ಪತಿವ್ರತೆಯರು, ಮುಂತಾದ ಕವನಗಳು ಜಗತ್ತಿನ ಚಲನೆಯನ್ನೂ , ಅದರಲ್ಲಿ ಉಳಿಯುವ ನೆನಪನ್ನು, ತಾತ್ವಿಕ ಧೋರಣೆಯನ್ನು ತೆರೆದು ತೋರುತ್ತವೆ.

(ಎಚ್.ಆರ್.‌ ಸುಜಾತಾ)

ಕಣ್ಣು ಕಂಡ ಚೆಲುವನ್ನು ಅವರು ಬೀಗಿ ದಾಖಲಿಸುವುದಲ್ಲದೆ ಒಳ ಹೊರಗಿನ ತಲ್ಲಣವನ್ನೂ ಹೇಳುವ ಅವರ ಅನುಭವಕ್ಕೆ ನನ್ನದೊಂದು ಮೆಚ್ಚುಗೆ. ಕೆಳಗಿನ ಸಾಲುಗಳಲ್ಲಿ ಸೌಂದರ್ಯದ ಜೊತೆಗೆ ಹಾಸುಹೊಕ್ಕಾಗಿರುವ ನಿಟ್ಟುಸಿರನ್ನು ಗುರುತಿಸುವ ಕವಿಯ ಮನಸ್ಸು ಮೆಚ್ಚುವಂತಿವೆ. ನಿಟ್ಟುಸಿರು ಸೌಂದರ್ಯದ ಬೆನ್ನು ಎಂಬುದನ್ನು ಕೊರೆದು ತೋರುತ್ತವೆ.

ಕವಿತೆಗಳು  ಚಲಿಸುತ್ತಿವೆ  ವಿಯೆನ್ನಾದ  ರಸ್ತೆಗಳಲ್ಲಿ,
ವಿಯೆನ್ನಾದ ಬೀದಿಗಳಲ್ಲಿ ಕವಿತೆಗಳು ಜೀವ ತಳೆಯುತ್ತವೆ.

ಕತ್ತಲು  ತುಂಬಿದ  ನಡುರಾತ್ರಿಯಲ್ಲಿ
ಮೀಯುವ  ನಕ್ಷತ್ರ ಕಿರಣಗಳು  ಚಿಮ್ಮುತ್ತವೆ
ಕವಿತೆಗಳ ಸುತ್ತ  ಧ್ಯಾನಿಸುವಂತೆ.

ರಸ್ತೆಗಳಲ್ಲಿನ  ಸಂಗೀತಕ್ಕೆ  ಲಯಬದ್ಧ
ನೃತ್ಯ ಮಾಡುವಂತೆ, ಸಾಲ್ಸ್‌  ಬರ್ಗನ
ಬೀದಿಬೀದಿಗಳು ತಲೆಬಾಗಿ ಬೀಗುತ್ತವೆ.

ಕವಿತೆ  ಭೂಮಂಡಲವನ್ನೆ
ಸುತ್ತುತ್ತ  ಸಾಗುತ್ತದೆ,
ನಡುನಡುವೆ  ನಿಟ್ಟುಸಿರಿನೊಂದಿಗೆ.

*****

ಈ ಸಂಕಲನದ ಕೆಲವು ಕವಿತೆಗಳು ನಿಮ್ಮ ಓದಿಗೆ

I am Mirror

ಸುಂದರ ಫ್ರೇಮಿನ ಕನ್ನಡಿ,
ನೋಡುತ್ತಲೇ ಇದ್ದೇನೆ,
ಕಾಡಿಗೆ ಹಚ್ಚಿದ ಕಣ್ಣುಗಳ ಅಗಲಿಸಿ,

ಹೇ ಇವು ನನ್ನ ಕಣ್ಣುಗಳಲ್ಲ
ಅಮ್ಮನದೇ ಇರಬೇಕು,
ಅವಳ ಕಣ್ಣಲ್ಲಿ ಮತ್ತಷ್ಟು ಮಮತೆ, ವಾತ್ಸಲ್ಯವಿತ್ತು..
ಇನ್ನೂ ಈ ಕಣ್ಣಿಗೆ  ತುಂಬಿಕೊಳ್ಳುವುದಿದೆ..
ನಗುಮುಖದಲ್ಲೇ
ಗಾಂಭಿರ್ಯ ತುಂಬಿದ
ಮುಖ ಅಪ್ಪನದೇ ಇರಬೇಕು,
ಆ ಮೊಗದಲ್ಲಿದ್ದ ಘನತೆಯೂ ಇತ್ತು.. ಈ ಮುಖಕ್ಕಷ್ಟು ಆವಾಹಿಸಿಕೊಳ್ಳಬೇಕು.

ಮತ್ತೆ ಕಣ್ಣುಗಳ ಉಜ್ಜುಜ್ಜಿ
ಸರಿಯಾಗಿ ನೋಡಿಕೊಳ್ಳುತ್ತಿದ್ದೇನೆ..
ಮೂಡುವ ಭಾವ ಅಜ್ಜಿಯದಾ, ಪ್ರಾರ್ಥನೆ ಅಜ್ಜನದೇ ಇರಬೇಕು,
ಹಾಡು ಚಿಕ್ಕಮ್ಮನದು,

ಬೆಳಗಿನ ಬೆರಗು ದೊಡ್ಡಪ್ಪ? ಈ ನಗು ನಾನೆಂದೂ ನೋಡಿರದ ಮುತ್ತಜ್ಜ? ಅವರಜ್ಜ?… ಅಥವಾ ಕವಲೊಡೆದು ಈಗ ಸಂಪರ್ಕಕ್ಕೂ ಸಿಕ್ಕದ, ಹಿಂದೆ ಮನೆಯದೇ ಆಗಿದ್ದ  ಮತ್ತಾವುದೋ ಆರ್ದ್ರ ಜೀವ???

ಕನ್ನಡಿಯೊಳಗೆ ಕೇವಲ ನನ್ನನ್ನು ಹುಡುಕುವುದು ಹೇಗೆ??
ಆ ಮುಖ ದಕ್ಕುವುದು ಹೇಗೆ?

ಹಾಡುವ ಹೃದಯ,
ಹಾರುವ ಹಕ್ಕಿ,
ಉಕ್ಕುವ ಶರಧಿ
ಆಗಸ
ನಕ್ಷತ್ರ
ನಗುವ ಹೂವುಗಳ
ಪ್ರತಿಬಿಂಬಗಳ ಹೊತ್ತ ಕನ್ನಡಿಯಲ್ಲಿ
‘ನನ್ನ ತನ’ ವೆಂಬ
ಹುಂಬತನವನ್ನು
ಹುಡುಕುತ್ತಲೇ….
ಇದ್ದೇನೆ…

ಗಾಸಿಪ್

ಹೊರ ಒಳ ಹರಿವುಗಳ
ಅರಿವಿಲ್ಲದ ನಾನು
ಒಳಸುಳಿಗಳ ಕಂಡು ಮೌನವಾಗುತ್ತಲೇ
ಹೋಗುತ್ತೇನೆ
ಎಲ್ಲ ಮರೆತು
ಧ್ಯಾನ ವಾಗುತ್ತೇನೆ

ಮಾತಿಗೆ ಕಾದು ಕೂತವರು  ಈ ಮೌನಕ್ಕೇ
ಬಣ್ಣಕಟ್ಟಿ ರೆಕ್ಕೆ ಪುಕ್ಕಗಳ ಚುಚ್ಚಿ
ಆನಂದಿಸಿ ಹಾರಲು ಬಿಡುತ್ತಾರೆ

ಎಲ್ಲೆಲ್ಲಿಯೋ ಹಾರಾಡಿ
ಯಾರ್ಯಾರದೋ ಕೈಸೇರಿ
ಮತ್ತಷ್ಟು ದಷ್ಟ ಪುಷ್ಟವಾಗಿ
ಬಣ್ಣ ಪೂಸಿ ಕೊಳ್ಳುತ್ತಲೇ
ಸಾಗುತ್ತದೆ
ನಲಿಯುತ್ತದೆ ಕೊಬ್ಬುತ್ತದೆ
ಹಲವು ಬಣ್ಣಗಳಿಂದ
ವಿಕಾರ ಗೊಳ್ಳುತ್ತದೆ
ಮತ್ತೆ ನನ್ನಕಾಲಿಗೆ
ತೊಡರುತ್ತದೆ…
ನನ್ನದೇ ಮೌನದ ಧ್ಯಾನದ
ಸುದ್ದಿ !!!
ಅದರ ಬಣ್ಣ ಹಾಡು ಕುಣಿತ
ರೆಕ್ಕೆ ಪುಕ್ಕ …
ಅದರ ಗಾತ್ರ..
ಅದರಲ್ಲಿ ನಾನೆಲ್ಲಿದ್ದೇನೆ…
ಹುಡುಕುತ್ತೇನೆ..
ಗಾಬರಿಯಾಗುತ್ತೇನೆ
ಕಂಗಾಲಾಗುತ್ತೇನೆ..
ಎಂದೋ ಕೇಳಿದ ವಚನ ಮತ್ತೆ ಮತ್ತೆ ಮಾರ್ದನಿಸುತ್ತದೆ…
“……
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ”
ನಿಟ್ಟುಸಿರಾದವಳು ಈಗ
ಮತ್ತಷ್ಟು ಮೌನಿ..
ಕಡು ದೀರ್ಘ ಧ್ಯಾನಿ…

ಅಹಂ

ದೇವರು ಪಟ್ಚಕ್ಕೇರಿದೆ
ತಾಳ ಮದ್ದಳೆ ಗಳ ಹಂಗಿಲ್ಲದೆ ಕುಣಿಯುತ್ತಲೇ ಇದೆ
ಹೂಂ ಕರಿಸಿ ಝೇಂಕರಿಸಿ
ತಾಥೈ ತದಿಮಿ ತದಿಮಿ ತದಿಮಿ

ತಾಳದ ಹೆಜ್ಜೆಯ ಲಯ ತಪ್ಪಿ
ವಂದಿ ಮಾದಿಗರ ಜೈಕಾರಕ್ಕೆ
ಎತ್ತೆತ್ತಲೋ ಹೆಜ್ಜೆಯಿಡುತ್ತ
ಕುಣಿವವರ ಮಧ್ಯೆ
ದೇವರು ಪಟ್ಟಕ್ಕೇರಿದೆ
ದೇವರು ಪಟ್ಚಕ್ಕೇರಿಯೇ ಬಿಟ್ಟಿದೆ

ಸುತ್ತ ನೆರೆದವರ ಎದೆ ನಡುಗಿಸಿ ಮತ್ತೆ ಹೃದಯವ
ನಲು ನಲುಗಿಸಿ
ಕಾಲಿಗೆ ಬೀಳಿಸಿ ಕರ್ಪೊರದಾರತಿ
ಎತ್ತಿಸಿ  ತಲೆ ಎತ್ತಿ
ಥಾ ತೈ ತೈ ತಧಿಮಿ ತಧಿಮಿ
ದೇವರು ಪಟ್ಟಕ್ಕೆರಿದೆ

ಕಾಲದ ಕಣ್ಕಟ್ಟಿಗೆ
ಇಲ್ಲೆ ಕೆರೆಯ ಬದಿಯಲ್ಲಿ ಬಿದ್ದ
ದೈವವ ಕಂಡ ಮಗು ಅಮ್ಮನ ಕೈಹಿಡಿದು ಕೇಳಿದೆ
ಅಮ್ಮ ಇದೇನು ಅಮ್ಮ ತಕಧಿಮಿ ತಕಧಿಮಿ  ಕುಣಿದ ದೈವ ಇಲ್ಲೇಕೆ ತಣ್ಣಗೆ ಬಿದ್ದಿದೆ
ಅಮ್ಮ ಹೇಳುತ್ತಾಳೆ
ಅದು ದೈವವಲ್ಲ ಕಂದಾ
ದೇವರ ವೇಷ ತೊಟ್ಟು ಪಟ್ಟಕ್ಕೆ ಕುಳಿತಿತ್ತು
ದೇವರು ಅದನ್ನೀಗ  ತಣ್ಣಗೆ ಮಲಗಿಸಿದ್ದಾನೆ.

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ