Advertisement
ಹುಬ್ಬಳ್ಳಿಗರ ಇಂಗ್ಲೀಷ್ ವ್ಯಾಮೋಹ: ರೂಪಾ ಜೋಶಿ ಬರೆದ ಲಲಿತ ಪ್ರಬಂಧ

ಹುಬ್ಬಳ್ಳಿಗರ ಇಂಗ್ಲೀಷ್ ವ್ಯಾಮೋಹ: ರೂಪಾ ಜೋಶಿ ಬರೆದ ಲಲಿತ ಪ್ರಬಂಧ

ಇಲ್ಲಿಯ ಭಾಷೆಯಲ್ಲಿ ಎಲ್ಲರಿಗೂ “ರೀ”…. ಎಂಬ ಅಕ್ಷರ ಹಚ್ಚಿಯೇ ಮಾತಾಡುವ ರೂಢಿಯಿದೆ. ಅಪ್ಪಾರು, ಅವ್ವಾರು, ಅಕ್ಕಾರು, ಮಾಮಾರು, ಅಣ್ಣಾರು, ಅಜ್ಜಾರು ಹೀಗೇ. ಎಲ್ಲರನ್ನೂ ಬಹುವಚನದಲ್ಲೇ ಹೆಸರಿಸುವ ಈ ಪದ್ಧತಿ ನಿಜಕ್ಕೂ ಒಳ್ಳೆಯದೇ. ಅದೇ ಕಾರಣಕ್ಕೆ ಆಂಗ್ಲ ಪದ ಬಳಕೆ ಮಾಡಿದಾಗಲೂ ಅವರು ಅದಕ್ಕೆ ಕನ್ನಡದ ‘ರೀ’ ಮತ್ತೂ ‘ರು’ ಪದ ಹಚ್ಚಿ, ” ಮೇಡಮ್ರಿ, ಸರ್ರೀ, ಮಮ್ಮೀರೀ…. ಡ್ಯಾಡಿರೀ, ಅಜ್ಜಾರ್ರೀ, ಅಂಕಲ್ರೀ ಅಂತ ರೂಪಾಂತರಿಸಿ, ಅದು ನಮ್ಮ ಕನ್ನಡದ್ದೇ ಅನ್ನುವಷ್ಟು ಸಲೀಸಾಗಿ ಬಳಸುವುದನ್ನು ನೋಡಿ, ನನಗೆ ಮೊದ ಮೊದಲು ತುಂಬಾ ವಿಸ್ಮಯವೆನ್ನಿಸುತ್ತಿತ್ತು. ಆಮೇಲೆ ಅವೆಲ್ಲ ಅಭ್ಯಾಸವಾಗಿ ಬಿಟ್ಟಿತ್ತು.
ರೂಪಾ ರವೀಂದ್ರ ಜೋಷಿ ಬರೆದ ಪ್ರಬಂಧ ನಿಮ್ಮ ಓದಿಗೆ

ಸುಮಾರು ೩೦-೩೫ ವರ್ಷಗಳ ಹಿಂದಿನ ಮಾತು. ನಾನು ಆಗಷ್ಟೇ ಡಿಗ್ರಿ ಮುಗಿಸಿ, ಹುಬ್ಬಳ್ಳಿಯ ಫ್ಯಾಕ್ಟರಿಯೊಂದರಲ್ಲಿ ಕ್ಲರ್ಕ್ ಕೆಲಸಕ್ಕೆ ಸೇರಿದ್ದೆ. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ, ಈ ಉತ್ತರ ಕರ್ನಾಟಕದ ಭಾಷೆ ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿತ್ತು. ಆದರೆ, ಹೊಸ ಭಾಷೆ ಕಲಿಯುವ ಹುರುಪೂ ಇತ್ತು ಅನ್ನಿ. ಅದು ದ್ವಿಚಕ್ರ ವಾಹನದ ಬಿಡಿ ಭಾಗವನ್ನು ತಯಾರಿಸುವ ಫ್ಯಾಕ್ಟರಿ. ಅಲ್ಲಿಯ ಕೆಲಸಗಾರರ ಹಾಜರಾತಿ, ಬರುವ ಹೋಗುವ ವೇಳೆ ಎಲ್ಲವನ್ನೂ ನಾನೇ ಲೆಕ್ಕ ಇಡಬೇಕಿತ್ತು. ಒಂದು ದಿನ ಒಬ್ಬ ನೌಕರ “ಮೇಡಮ್ ರೀ ಇವತ್ತು ಜಲ್ದೀ ಹೋಕ್ಕೇನ್ರೀ” ಅಂದ. “ಯಾಕೆ?” ಅಂತ ಕೇಳಿದ್ದಕ್ಕೆ, “ಇವತ್ತು ಚಂಜೀ ಮುಂದ ನಮ್ಮನೀಗ “ಫಾದರ್” ಬರೋವ್ರದಾರ್ರೀ ಅಂದ. ‘ಅರೆ!! ಹಾಜರಿ ಪುಸ್ತಕದಲ್ಲಿ ಅವನ ಹೆಸರು ನಾಗಪ್ಪ ಅಂತಿದೆ… ಮತ್ತೆ ಇವ ಕ್ರಿಶ್ಚನ್ ಹೇಗಾದ?’ ನನ್ನ ತಲೆಯಲ್ಲಿ ಛಕ್ಕನೆ ಬಂದ ವಿಚಾರದಿಂದಾಗಿ, ಸ್ವಲ್ಪ ಗಲಿಬಿಲಿಯಲ್ಲೇ ಸಮ್ಮತಿಸಿದ್ದೆ. ಸಂಜೆ ಕೆಲಸ ಮುಗಿಸಿ ಹೊರಡುವ ಹೊತ್ತಿಗೆ, ನಾಗಪ್ಪನ ಗೆಳೆಯ ಎದುರಾದ. ಕುತೂಹಲ ತಡೆಯಲಾರದೇ “ನಾಗಪ್ಪ ಕ್ರಿಶ್ಚನ್ನೋ ಅಥವಾ ಹಿಂದೂನೊ?” ಎಂದು ವಿಚಾರಿಸಿಯೇ ಬಿಟ್ಟೆ. “ಏ ಅಂವಾ ನಮ್ಮಂವಾರೀ. ಅಂವಾ ಯಾಕ ಕಿಶ್ಚನ್ ಆಕಾನ?” ಅವ ನಗುತ್ತಲೇ ಮರು ಪ್ರಶ್ನೆ ಎಸೆದು ನನ್ನ ಪೆಚ್ಚಾಗಿಸಿದ್ದ. ಆದರೇ ನಾನೂ ಛಲಬಿಡದೇ ಮುಂದುವರೆಸಿದ್ದೆ… “ಅಲ್ಲಾ.. ಇವತ್ತು ಅವರ ಮನೆಗೆ ‘ಫಾದರ್’ ಬರ್ತಾರೆ ಅಂತ ಬೇಗ ಮನೆಗೆ ಹೋದನಲ್ಲಾ.. ಅದಕ್ಕೇ ಕೇಳಿದ್ದು.” ಈಗ ಆತ ಅಷ್ಟೇ ಸಹಜವಾಗಿ ಹೇಳಿದ. “ಹೂಂನ್ರೀ.. ಮೇಡಮ್ ರೀ ಅಂವನ ಫಾದರ್ ಊರಾಗ ಹೊಲಾ ಮನೀ ನೋಡ್ಕೊಂಡು ಇರ್ತಾರ್ರಿ. ಎಂದಾರಾ ವಮ್ಮೆ ಇವನ ಹಂತೇಕ ಬರ್ತಾ ಇರ್ತಾರ. ಇವತ್ತು ಅವರ ಸಂಬಂಧ ದೌಡ್ ಹೋಗ್ಯಾನ್ರಿ. ಮತ್ತ….. ನಿಮಗ್ಯಾಕ ಹಾಂಗ ಅನಸ್ತ್ರಿ? ಅದೇ… ಅಂವಾ ಕಿಶ್ಚನ್ ಅಂತಾ…” ಆತ ನನಗೆ ಮರು ಸವಾಲೆಸೆದು ನನ್ನ ಹೆಡ್ಡಿಯನ್ನಾಗಿಸಿದ್ದ. ಅಲ್ಲಿಂದಲೇ ಶುರುವಾಯ್ತು ಇವರ ಇಂಗ್ಲೀಷ್ ಮೋಹದ ಕುರಿತಾದ ನನ್ನ ಅಧ್ಯಯನ ಮತ್ತೂ ಅನ್ವೇಷಣೆ.

ನಮ್ಮ ಮಲೆನಾಡಿಗರ ಭಾಷೆಗೂ ಇವರದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಮೆಲ್ಲಗೆ ಅರ್ಥವಾಗತೊಡಗಿತ್ತು. ಬೇರೆಯವರ ಮುಂದೆ ಅಪ್ಪ, ಅಮ್ಮನನ್ನು ಉಲ್ಲೇಖಿಸುವಾಗ, “ನಮ್ಮ ತಂದೆಯವರು, ನಮ್ಮ ತಾಯಿಯವರು” ಎಂಬ ನುಡಿಯೇ ಬಳಕೆಯಿದ್ದ ನಮ್ಮ ಮಲೆನಾಡಿಗರಿಗೆ ಈ “ಫಾದರ್ರು” “ಮದರ್ರು” ಎಂಬ ಶಬ್ಧಗಳು ಚರ್ಚ್‌ಗಳಿಗಷ್ಟೇ ಸೀಮಿತವೆನ್ನಿಸಿಬಿಡುತ್ತವೆ. ಅದಕ್ಕೇ ಅವನ ಮಾತು ಜೀರ್ಣಿಸಿಕೊಳ್ಳುವುದು ನನಗೆ ಸುಲಭ ಸಾಧ್ಯವಾಗಿರಲಿಲ್ಲ. ಆದರೆ, ಅವತ್ತು ಆ ಮನುಷ್ಯನಿಂದ ನನ್ನ ಅರಿವಿನ ದಾರಿ ವಿಸ್ತಾರವಾಗಿದ್ದು ಸುಳ್ಳಲ್ಲ.

ಉತ್ತರ ಕನ್ನಡಕ್ಕೆ ಹೋಲಿಸಿದರೆ, ಉತ್ತರ ಕರ್ನಾಟಕ ಅಕ್ಷರತೆಯಲ್ಲಿ ಬಹಳ ಹಿಂದೆ. ಆದರೂ ಇಲ್ಲಿಯ ಜನ ಬಳಸಿದಷ್ಟು ಆಂಗ್ಲ ಪದವನ್ನು ಮಲೆನಾಡಿಗರು ಬಳಸುವುದೇ ಇಲ್ಲ ಅಂತ ಅರ್ಥವಾಗಿದ್ದೂ ಈ ಊರಲ್ಲಿ ನಾನು ತಳವೂರಿದ ಮೇಲೆಯೇ. ಅಷ್ಟೇ ಅಲ್ಲ ಕೆಲವು ಆಂಗ್ಲ ಪದವನ್ನು ತಮ್ಮ ಆಡುಭಾಷೆಗೆ ಅನುಕೂಲವಾಗುವಂತೆ ಹಿಗ್ಗಿಸಿ, ಕುಗ್ಗಿಸಿ, ಕೊಂಕಿಸಿ ಬಳಸುವುದು ಕೂಡಾ ಇಲ್ಲಿಯವರ ವಿಶೇಷತೆ. ನಮಗಿದು ಒಂದು ಮೋಜಿನ ಸಂಗತಿಯೇ. ಉದಾ:- ಬುಕ್ಕಾ, ಪೆನ್ನಾ (book, pen) ಗುಡಾನ್, (godown) ಪೆನ್ ಶನ್ನಾ (pension) ಟೊಂಟಿ ( Twenty) ಟೊಲು (Tweleve) ಹೀಗೇ ಬರೆಯುತ್ತ ಹೋದರೆ, ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಷ್ಟೇ ಅಲ್ಲ, ಕೆಲವೊಂದು ಶಬ್ದಗಳಿಗೆ ಕನ್ನಡ ಪದವನ್ನೂ ಸೇರಿಸಿ, ಪಳಗಿಸಿ, ಸಲೀಸು ಮಾಡಿಕೊಳ್ಳುವ ಇಲ್ಲಿಯವರ ಶ್ಯಾಣೇತನಕ್ಕೆ ಮೆಚ್ಚಲೇ ಬೇಕು.

ಇತ್ತೀಚೆಗೆ ನಮ್ಮ ಕ್ಲೈಂಟ್ ಒಬ್ಬರ ಜೊತೆ ನಡೆದ ಪ್ರಸಂಗವನ್ನು ಇಲ್ಲಿ ಉದಾಹರಿಸಲೇಬೇಕು. ಅವರು ಮೂವರು ಅಣ್ಣ- ತಮ್ಮಂದಿರೂ ಹೆಚ್ಚೂ ಕಮ್ಮಿ ನೋಡೋಕೆ ಒಂದೇ ಥರ ಇದ್ದರು. ನನಗೆ ಯಾವಾಗಲೂ ಗೊಂದಲವಾಗುತ್ತಿತ್ತು. ಒಂದಿನ ಅವರಿಗೆ “ನೀವೆಲ್ಲ ಒಂದೇ ಥರಾ ಕಾಣ್ತೀರಿ. ಗೊತ್ತೇ ಆಗೋದಿಲ್ಲ” ಎಂದೆ. ಅದಕ್ಕೆ ಅವರು “ನೋಡ್ರೀ ನಿನ್ನೆ ಬಂದಾಂವಾ ನನ್ ದೋಡ್ ಬ್ರದರ್ರಿ. ಮತ್ತ ಅವತ್ತು ನನ್ ಕೂಟ ಬಂದಾಂವಾ ಸಣ್ ಬ್ರದರ್ರಿ” ಎಂದ. ನಂಗೆ ಏನೇನೂ ಅರ್ಥವಾಗದೇ “ನೀವೇ ದೊಡ್ಡವರಾ?” ಎಂದೆ. “ಅಲ್ರೀ… ನಾ ನಡಕನಂವಾ” ಅನ್ನಬೇಕೆ? ಅಬ್ಬಾ!!! ಆಗ ನನಗೆ ಅರ್ಥ ಹೊಳೆದೇ ಬಿಡ್ತು. ದೊಡ್ಡ ಬ್ರದರ್ರು ಅಂದರೆ ಅಣ್ಣ. ಸಣ್ಣ ಬ್ರದರ್ರು ಅಂದರೆ ತಮ್ಮ!!! ಸಧ್ಯ ಆರ್ಕಿಮಿಡೀಸ್‌ನಂತೇ ನಾನೂ “ಯುರೇಕಾ” ಅಂತ ಕೂಗದೇ, ಎಲ್ಲ ಗ್ರಹಿಸಿಯೂ ತೆಪ್ಪಗೆ ಕೂತದ್ದು ನನ್ನ ಪುಣ್ಯ. ಅಷ್ಟೇ ಅಲ್ಲ, ಅಕ್ಕ-ತಂಗಿಯರನ್ನೂ ಅವರು ದೊಡ್ ಸಿಸ್ಟರ್, ಸಣ್ ಸಿಸ್ಟರ್ ಅಂತಲೇ ವರ್ಗೀಕರಿಸಿಕೊಳ್ಳುವುದು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿದುಕೊಂಡೆ.

ಒಮ್ಮೆ ನಮ್ಮ ಕಛೇರಿಯಲ್ಲಿ ಕೆಲಸ ಮಾಡುವ ಹುಡುಗ, ಹೇಳದೇ ಕೇಳದೇ ಗೈರು ಹಾಜರಾಗಿದ್ದ. ಮರುದಿನ ಆತ ಕೆಲಸಕ್ಕೆ ಬಂದಾಗ, “ಯಾಕಪಾ ನಿನ್ನೆ ಬಂದೇ ಇಲ್ಲಾ…” ಎಂದು ಅಸಹನೆಯಿಂದ ಕೇಳಿದೆ. ಅದಕ್ಕೆ ಆತ “ಮೇಡಮ್ರೀ… ನಿನ್ನೆ ಊರಿಗೆ ಹೋಗೂದು ಬಂತ್ರಿ. ನಮ್ ಮಮ್ಮಿಯಾರ್ (ಯವರ) ‘ಮದರ್ ಡೆತ್’ ಆಗಿತ್ರಿ. ಅದಕ್ಕ ಹೇಳಾಕ ಆಗಿಲ್ರಿ” ಅಂದ. ನಂಗೆ ಮನಸಲ್ಲೇ ನಗು ಉಕ್ಕಿ ಬರುತ್ತಿತ್ತು. ‘ಅಲ್ಲಾ.. ನಮ್ ಅಜ್ಜಿ ತೀರ್ಕೊಂಡಿದ್ರು’ ಅಂದರೆ ಸಾಕಾಗುತ್ತಿರಲಿಲ್ಲವೇ. ಅದು ಯಾಕೆ ಆ ಆಂಗ್ಲ ಪದಗಳನ್ನು ಜೋಡಿಸಿಕೊಂಡು ಗುದ್ದಾಡುತ್ತಾರೆ!!’ ಪ್ರಶ್ನೆ ಬೇಡವೆಂದರೂ ಉದ್ಭವಿಸಿ ಕಾಟ ಕೊಡತೊಡಗಿತ್ತು.

ಇಲ್ಲಿಯ ಭಾಷೆಯಲ್ಲಿ ಎಲ್ಲರಿಗೂ “ರೀ”…. ಎಂಬ ಅಕ್ಷರ ಹಚ್ಚಿಯೇ ಮಾತಾಡುವ ರೂಢಿಯಿದೆ. ಅಪ್ಪಾರು, ಅವ್ವಾರು, ಅಕ್ಕಾರು, ಮಾಮಾರು, ಅಣ್ಣಾರು, ಅಜ್ಜಾರು ಹೀಗೇ. ಎಲ್ಲರನ್ನೂ ಬಹುವಚನದಲ್ಲೇ ಹೆಸರಿಸುವ ಈ ಪದ್ಧತಿ ನಿಜಕ್ಕೂ ಒಳ್ಳೆಯದೇ. ಅದೇ ಕಾರಣಕ್ಕೆ ಆಂಗ್ಲ ಪದ ಬಳಕೆ ಮಾಡಿದಾಗಲೂ ಅವರು ಅದಕ್ಕೆ ಕನ್ನಡದ ‘ರೀ’ ಮತ್ತೂ ‘ರು’ ಪದ ಹಚ್ಚಿ, ” ಮೇಡಮ್ರಿ, ಸರ್ರೀ, ಮಮ್ಮೀರೀ…. ಡ್ಯಾಡಿರೀ, ಅಜ್ಜಾರ್ರೀ, ಅಂಕಲ್ರೀ ಅಂತ ರೂಪಾಂತರಿಸಿ, ಅದು ನಮ್ಮ ಕನ್ನಡದ್ದೇ ಅನ್ನುವಷ್ಟು ಸಲೀಸಾಗಿ ಬಳಸುವುದನ್ನು ನೋಡಿ, ನನಗೆ ಮೊದ ಮೊದಲು ತುಂಬಾ ವಿಸ್ಮಯವೆನ್ನಿಸುತ್ತಿತ್ತು. ಆಮೇಲೆ ಅವೆಲ್ಲ ಅಭ್ಯಾಸವಾಗಿ ಬಿಟ್ಟಿತ್ತು.

ಇಲ್ಲಿಯ ಬಹುತೇಕ (ಅರ್ಧಂಬರ್ಧ ಅಕ್ಷರಸ್ತರಿಗೆ) ಜನರಿಗೆ, ತಮ್ಮ ಆಡು ನುಡಿಯ ಕುರಿತು, ಒಂಥರಾ ಕೀಳರಿಮೆಯಿದೆ. ಹಾಗಂತ ಪೂರ್ಣ ಆಂಗ್ಲ ಭಾಷೆ ಕಲಿತು ಮಾತಾಡುವುದೂ ಅಷ್ಟು ಸುಲಭವಲ್ಲ. ಅದಕ್ಕೇ ಇವರು ಕಂಡುಕೊಂಡ ಹಾದಿಯೆಂದರೆ, ಎಷ್ಟಾಗುತ್ತದೋ ಅಷ್ಟು ಆಂಗ್ಲ ಪದ ಬಳಸಿ, ತಾವೂ ಇಂಗ್ಲೀಷ್ ಬಲ್ಲವರು ಎಂದು ತೋರಿಸಿಕೊಳ್ಳುವುದು.

ಆದರೆ, ನನಗೆ ಈ ಕನ್ನಡದಲ್ಲಿ ತುಂಬ ಪ್ರೀತಿ ಮೂಡಿಬಿಟ್ಟಿದೆ. ಇದರ ಸೊಗಡು, ಸರಳತೆ, ಆಂತರ್ಯದ ನುಡಿಗೆ ದನಿಯಾಗುವ ಇದರ ಸಶಕ್ತತೆ ನನ್ನನ್ನು ಬಹಳ ಸೆಳೆದಿದೆ. ನಾನೀಗ ಇಲ್ಲಿಯವಳೇ ಆಗಿ, ಈ ಭಾಷೆಯನ್ನು ಒಪ್ಪಿ, ಅಪ್ಪಿಕೊಂಡು ಬಿಟ್ಟಿರುವೆ. ಅದಕ್ಕೇ ಯಾರಾದರೂ ಈ ಬೆರಿಕೆ ಭಾಷೆ ಮಾತಾಡಿದರೆ ಸ್ವಲ್ಪ ಬೇಸರವೆನ್ನಿಸುತ್ತದೆ. ಆದರೆ, ಹೊಸತರತ್ತ ವಾಲುವುದು, ಅದನ್ನು ದಕ್ಕಿಸಿಕೊಳ್ಳಲು ಹಂಬಲಿಸುವುದು, ಮಾನವ ಸಹಜ ಗುಣ. ಕವಿ ವಾಣಿ ಇದನ್ನೇ ಹೇಳುತ್ತದೆ. “ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದು ಜೀವನ”….

About The Author

ರೂಪಾ ರವೀಂದ್ರ ಜೋಶಿ

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು  (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ