ನಾನೇನೋ ಒಂದಷ್ಟು ಹನಿ ಬಿತ್ತು ಅಂದೆ ಸರಿ. ಆದರೆ ಸಣ್ಣ ಮಳೆ ಬಿದ್ದದ್ದು ಬ್ರಿಸ್ಬೇನ್, ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ. ಇದನ್ನು ಅಪಹಾಸ್ಯ ಮಾಡುವಂತೆ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ (ಬ್ರಿಸ್ಬೇನ್ ನಗರದಿಂದ ೧,೪೦೦ ಕಿಮೀ ದೂರ) Townsville ನಗರ ಮತ್ತು ಅದರ ಆಸುಪಾಸಿನಲ್ಲಿ ಭಾರಿ ಮಳೆ ಬಿದ್ದು, ಪ್ರವಾಹ ಸ್ಥಿತಿ ಉದ್ಭವಿಸಿ ಈಗ ಅದನ್ನು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿವೆ. ಸಾವಿರಾರು ಜನರು ಪ್ರವಾಹಪೀಡಿತ ಸಂತ್ರಸ್ತರು ಎಂದು ನೋಂದಾಯಿಸಿಕೊಂಡಿದ್ದಾರೆ. ಅನೇಕ ಕಡೆ ರಸ್ತೆಗಳು ಮುಚ್ಚಿವೆ. ಸರ್ಕಾರದ ಜೊತೆ ಸ್ವಯಂಸೇವಾ ಸಂಸ್ಥೆಗಳು ಕೈಗೂಡಿಸಿ ಜನರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಇನ್ನೇನು ಬೇಸಿಗೆ ಮುಗಿಯಲಿದೆ. ಹೋದವಾರವೆಲ್ಲಾ ಧಗಧಗಿಸಿದ ಬಿಸಿಲಿನ ಝಳ ಸ್ವಲ್ಪ ಶಾಂತವಾಗಿದೆ. ಸೂರ್ಯನ ಆರ್ಭಟಕ್ಕೆ ಬೆದರಿ ಕಂಗೆಟ್ಟ ಜನರು ವರುಣನಿಗೆ ‘ತಂಪು ತಾ ತಂದೆ’ ಎಂದು ಮೊರೆಯಿಟ್ಟರೇನೋ. ಈ ವಾರ ಸ್ವಲ್ಪ ಮಳೆ ಬಿದ್ದು ಹಾಯೆನಿಸಿದೆ. ಒಂದಿಷ್ಟು ಹನಿ ಬಿದ್ದರೂ ಸಾಕು ಆಸ್ಟ್ರೇಲಿಯದಲ್ಲಿ ಅದು ಬೇಕೇಬೇಕು. ಹೇಳಿಕೇಳಿ ಈ ದೇಶದ ಮುಕ್ಕಾಲು ಭಾಗದಲ್ಲಿ ಮರುಭೂಮಿಯಿದೆ. ಸಿಹಿನೀರು/ಫ್ರೆಶ್ ವಾಟರ್ ಬಹಳ ಅಮೂಲ್ಯವಾದದ್ದು.
ನಾನೇನೋ ಒಂದಷ್ಟು ಹನಿ ಬಿತ್ತು ಅಂದೆ ಸರಿ. ಆದರೆ ಸಣ್ಣ ಮಳೆ ಬಿದ್ದದ್ದು ಬ್ರಿಸ್ಬೇನ್, ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ. ಇದನ್ನು ಅಪಹಾಸ್ಯ ಮಾಡುವಂತೆ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ (ಬ್ರಿಸ್ಬೇನ್ ನಗರದಿಂದ ೧,೪೦೦ ಕಿಮೀ ದೂರ) Townsville ನಗರ ಮತ್ತು ಅದರ ಆಸುಪಾಸಿನಲ್ಲಿ ಭಾರಿ ಮಳೆ ಬಿದ್ದು, ಪ್ರವಾಹ ಸ್ಥಿತಿ ಉದ್ಭವಿಸಿ ಈಗ ಅದನ್ನು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿವೆ. ಸಾವಿರಾರು ಜನರು ಪ್ರವಾಹಪೀಡಿತ ಸಂತ್ರಸ್ತರು ಎಂದು ನೋಂದಾಯಿಸಿಕೊಂಡಿದ್ದಾರೆ. ಅನೇಕ ಕಡೆ ರಸ್ತೆಗಳು ಮುಚ್ಚಿವೆ. ಸರ್ಕಾರದ ಜೊತೆ ಸ್ವಯಂಸೇವಾ ಸಂಸ್ಥೆಗಳು ಕೈಗೂಡಿಸಿ ಜನರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿವೆ.
೨೦೧೯ ರಲ್ಲಿ ಹೀಗಾಗಿದ್ದಾಗ ನಾನು ಆಸ್ಟ್ರೇಲಿಯನ್ ರೆಡ್ ಕ್ರಾಸ್ ಸಂಸ್ಥೆಯ ‘disaster preparedness and response’ ವಿಭಾಗದಲ್ಲಿ ಸೂಕ್ತ ತರಬೇತಿ ಪಡೆದು ಸ್ವಯಂಸೇವಕಿಯಾಗಿದ್ದೆ. ಇದಲ್ಲದೆ, ಇದೇ ವಿಷಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕೈಗೊಂಡಿದ್ದ ಒಂದು ಅಧ್ಯಯನಕ್ಕೆ ಸಹಾಯ ಮಾಡಿದ್ದೆ. ಪ್ರಕೃತಿ-ಸಹಜ ಪ್ರಕೋಪಗಳಿಗೆ ಗುರಿಯಾಗಿ ಸಂತ್ರಸ್ತರಾಗಿದ್ದ ಅನೇಕರನ್ನು ಮಾತನಾಡಿಸಿ, ಸಂದರ್ಶಿಸಿ, ಸಾಂತ್ವನ ಹೇಳಿ, ಸರ್ಕಾರದಿಂದ ಲಭ್ಯವಿದ್ದ ಪ್ರಯೋಜನಗಳನ್ನು ಪಡೆಯುವಂತೆ ಹುರಿದುಂಬಿಸುತ್ತಿದ್ದೆ. ಮನೆಮಠ ಕಳೆದುಕೊಂಡು ನೋವಿನಲ್ಲಿದ್ದ ಕೆಲವರು ರೇಗಾಡುತ್ತಿದ್ದರು. ಹತಾಶೆಯಷ್ಟೇ ನಮಗೆ ಉಳಿದಿರುವುದು, ಅನ್ನುತ್ತಿದ್ದರು. ಅವರ ಅಗತ್ಯಗಳನ್ನು ಗುರುತಿಸಿ, ಸಹಾಯ ಪಡೆಯಲು ಬೇರೆಬೇರೆ ವಿಭಾಗಗಳಿಗೆ, ಸಂಸ್ಥೆಗಳಿಗೆ ಸೂಚನೆ ಕಳಿಸುತ್ತಿದ್ದೆ. ಈ ಕೆಲಸಗಳಿಂದ ಮತ್ತು ರೆಡ್ ಕ್ರಾಸ್ ಸಂಸ್ಥೆಯ ತರಬೇತಿಗಳಿಂದ ನಾನು ಕಲಿತಿದ್ದು ಅಪಾರ. ಗಳಿಸಿದ ಅನುಭವ ಅನನ್ಯವಾದದ್ದು. ಈಗಲೂ ಕೂಡ ನೈಸರ್ಗಿಕ ಪ್ರಕೋಪ ಪರಿಸ್ಥಿತಿಯುಂಟಾಗಿದೆ ಎಂದರೆ ಅದೆಲ್ಲಾ ನೆನಪಾಗುತ್ತದೆ. ಸ್ವಯಂಸೇವಕಳಾಗಿ ಜನರೊಟ್ಟಿಗೆ ಕೆಲಸ ಮಾಡಲು ಮನಸ್ಸು ತವಕಿಸುತ್ತದೆ.
ಆಸ್ಟ್ರೇಲಿಯಾದಲ್ಲಿ ಹೊಸ ಶೈಕ್ಷಣಿಕ ವರ್ಷ ಶುರುವಾಗಿದೆ. ಬೇಸಿಗೆ ರಜೆ ಮುಗಿದು ಶಾಲೆಗಳು ಕಣ್ತೆರೆದು ಈಗಾಗಲೇ ಎರಡು ವಾರಗಳಾಯ್ತು. ಇನ್ನೇನು ಯೂನಿವರ್ಸಿಟಿಗಳ ಬಾಗಿಲು ತೆರೆಯಲಿವೆ. ಆಸ್ಟ್ರೇಲಿಯಾ ಪೂರ್ತಿ ಅನೇಕ ಯೂನಿವರ್ಸಿಟಿಗಳಲ್ಲಿ ಮುಂದಿನ ವಾರ Orientation Week. ಇದಕ್ಕೆಂದೆ ಈ ವಾರ ಪೂರ್ತಿ ಭರಪೂರ ಸಿದ್ಧತೆಗಳು ನಡೆಯುತ್ತಿವೆ.

ಹೊಸ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಸ್ವಾಗತ ಕೋರಿ ಅವರನ್ನು ಕ್ಯಾಂಪಸ್ ಪೂರ್ತಿ ಸುತ್ತಾಡಿಸಿ, ಯೂನಿವರ್ಸಿಟಿ ಜೀವನದ ಕಿರು ಪರಿಚಯ ಮಾಡಿಕೊಡುತ್ತಾರೆ. ಅವರಿಗೆ ತಾವು ಓದಲಿರುವ ಡಿಗ್ರಿ, ಡಿಪ್ಲೊಮಾ ಪ್ರೋಗ್ರಾಮ್ ಮತ್ತು ಕೋರ್ಸ್‌ಗಳ ಪರಿಚಯ ಸಿಗುತ್ತದೆ. ಯೂನಿವರ್ಸಿಟಿಯಲ್ಲಿರುವ ವಿದ್ಯಾರ್ಥಿ ಸಂಘಗಳು, ಕ್ಲಬ್, ಮೂವಿ ನೈಟ್, ಕೆಫೆಗಳು, ಸ್ಪೋರ್ಟ್ಸ್ ಮುಂತಾದವುಗಳ ಪರಿಚಯವೂ ಆಗಿ ಸ್ನೇಹಿತರ ಗುಂಪುಗಳು ಶುರುವಾಗುತ್ತದೆ. ಸದ್ಯಕ್ಕೆ ಬಿಕೋ ಅನ್ನುತ್ತಿರುವ ಕ್ಯಾಂಪಸ್ ವಿದ್ಯಾರ್ಥಿಗಳು ಬಂದಾಗ ನಕ್ಕುನಲಿದಾಡುತ್ತದೆ.
ಆಸ್ಟ್ರೇಲಿಯಾದ ಶಾಲಾ ಶೈಕ್ಷಣಿಕ ವರ್ಷದಲ್ಲಿ ನಾಲ್ಕು ಟರ್ಮ್‌ಗಳಿವೆ. ಈಗ ಸದ್ಯಕ್ಕೆ Term ೧ ಶುರುವಾಗಿದೆ. ಪ್ರತಿ ಟರ್ಮ್‌ನಲ್ಲೂ ಹತ್ತು ಅಥವಾ ಹನ್ನೊಂದು ವಾರಗಳ ಕಾಲ ಪಾಠಗಳು ನಡೆಯುತ್ತವೆ. ಮಧ್ಯೆ ಒಂದು ಸಣ್ಣ ಎರಡು ವಾರಗಳ ರಜೆ. ಡಿಸೆಂಬರ್‌ನಲ್ಲಿ ಶಾಲೆ ಮುಗಿದು ಬೇಸಿಗೆಯ ದೀರ್ಘ ಆರು-ಏಳು ವಾರಗಳ ರಜೆ ಇರುತ್ತದೆ. ಹೀಗೆ ಸುಮಾರು ಹದಿಮೂರು ವಾರಗಳಷ್ಟು ಕಾಲ ರಜೆ, ನಲವತ್ತು ವಾರಗಳು ಶಾಲೆ. ಕ್ರಿಸ್ಮಸ್ ಮತ್ತು ಜನವರಿ ಮೊದಲ ವಾರದ ರಜೆ ಕಳೆದ ನಂತರ ತಮ್ಮ ಕೆಲಸಕ್ಕೆ ವಾಪಸ್ ಆಗುವ ಪೋಷಕರಿಗೆ ಪೀಕಲಾಟ. ಜನವರಿಯಲ್ಲಿ ಮಿಕ್ಕ ಮೂರು ವಾರಗಳಿಗೆ ತಮ್ಮ ಮಕ್ಕಳಿಗೆ vacation care ಮಾಡಬೇಕು ಇಲ್ಲಾ ತಾವುಗಳೆ ರಜೆ ಹಾಕಬೇಕು, ಒಬ್ಬರು ಕೆಲಸಕ್ಕೆ ಹಿಂದುರುಗಿ ಮತ್ತೊಬ್ಬರು ಶಾಲೆ ಆರಂಭವಾಗುವ ತನಕ ಮಕ್ಕಳ ಜೊತೆ ಉಳಿಯುವುದೂ ಉಂಟು. ಹೈಸ್ಕೂಲ್ ಮಕ್ಕಳಾದರೆ ಅವರಷ್ಟಕ್ಕೆ ಅವರು ಮನೆಯಲ್ಲಿರುತ್ತಾರೆ. ಶಾಲಾವಯಸ್ಸಿನ ಚಿಕ್ಕಮಕ್ಕಳಾದರೆ ಅನೇಕ ಪೋಷಕರ ವೃತ್ತಿಜೀವನ ಮಕ್ಕಳ ಶಾಲೆ, ರಜೆಯೊಂದಿಗೆ ಬೆಸುಗೆ ಹಾಕಿಕೊಂಡಿರುತ್ತದೆ. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡುವುದು, ಅವರ ಲಂಚ್ ಬಾಕ್ಸ್ ಏರ್ಪಾಡು, ಶಾಲೆ ಮುಗಿದ ನಂತರ ಪಿಕ್ ಅಪ್, after-ಸ್ಕೂಲ್ activity, ಸಮ್ಮರ್ vacation activities… ಹೀಗಾಗಿ ತಮ್ಮ ಎಲ್ಲಾ ಮಕ್ಕಳು Year ೧೨ ಮುಗಿಸಿದರು ಅಂದರೆ ಪೋಷಕರು ‘ನೋ ಮೋರ್ ಸ್ಕೂಲ್ ಇನ್ ಅವರ್ ಫ್ಯಾಮಿಲಿ’ ಎಂದು ಹರ್ಷಿಸುತ್ತಾರೆ. ಮಕ್ಕಳ ಶಿಕ್ಷಣಕ್ಕೆಂದು ತಾವು ಮಾಡುವ ಖರ್ಚು ತಪ್ಪಿತು ಎಂದು ಹೇಳುತ್ತಾರೆ. ಶಾಲೆ ಮುಗಿದ ನಂತರ ತಮ್ಮ ಮಕ್ಕಳು ಸಂಪೂರ್ಣ ಸ್ವತಂತ್ರ ಜೀವನ ನಡೆಸುವುದನ್ನು ಅಪೇಕ್ಷಿಸುತ್ತಾರೆ.
ಅದೇ ರೀತಿ ಮಕ್ಕಳೂ ಕೂಡ ‘ನೋ ಮೋರ್ ಸ್ಕೂಲ್ ಫಾರ್ ಮೀ’ ಎಂದು ಖುಷಿ ಪಡುತ್ತಾರೆ. ಶಾಲಾ ಜೀವನ ಮುಗಿಸಿ ಯೂನಿವರ್ಸಿಟಿ ಓದು ಇಲ್ಲಾ ವೃತ್ತಿ-ತರಬೇತಿ-ಓದು ಕೈಗೊಳ್ಳುವವರು ತಮ್ಮ ಹೊಸ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅಪ್ಪಿಕೊಳ್ಳುತ್ತಾರೆ. ಶಾಲೆಯ ಯೂನಿಫಾರಂ ಇಲ್ಲ. ತಮಗಿಷ್ಟ ಬಂದಾಗ ಆಹಾರ ಸವಿಯಬಹುದು. ಕಟ್ಟುನಿಟ್ಟಿನ ಶಾಲಾ ಸಂಸ್ಕೃತಿಗೆ ತದ್ವಿರುದ್ಧವಾದ ಕಾಲೇಜ್, ಯೂನಿವರ್ಸಿಟಿಯ ಸಂಸ್ಕೃತಿ ಹದಿನೇಳು, ಹದಿನೆಂಟು ವಯಸ್ಸಿನ ಕಿರಿಯರಿಗೆ ಮಹದಾನಂದ ಕೊಡುತ್ತದೆ. ಒಂದು ಜೊತೆ ಟಿ ಶರ್ಟ್, ಶಾರ್ಟ್ಸ್ ಧರಿಸಿ ಹೋಗಬಹುದು. ಲೆಕ್ಚರರ್ ಮತ್ತು tutor ಗಳನ್ನ ಹೆಸರಿಟ್ಟು ಕರೆಯಬಹುದು. ಲೆಕ್ಚರ್‌ಗೆ ಹೋಗಲೇಬೇಕು ಎನ್ನುವ ಬಂಧನವಿಲ್ಲ. ತಮ್ಮ ಸಮಯಕ್ಕೆ ಹೊಂದುವ tutorial ಆರಿಸಿಕೊಳ್ಳಬಹುದು. ಕೆಲವು ಕೋರ್ಸ್‌ಗಳಿಗೆ ಅಟೆಂಡೆನ್ಸ್ ಕೂಡ ಇರುವುದಿಲ್ಲ. On campus ಮತ್ತು Online tutorial ವ್ಯವಸ್ಥೆ ಇರುವುದರಿಂದ ಕೆಲ ವಿದ್ಯಾರ್ಥಿಗಳು ಯೂನಿವರ್ಸಿಟಿ ಕ್ಯಾಂಪಸ್‌ನ ಮುಖದರ್ಶನ ಮಾಡುವುದೇ ಇಲ್ಲ. ಬೇಕಾದರೆ ರೆಕಾರ್ಡ್ ಮಾಡುವ ಲೆಕ್ಚರ್ ಕೇಳುತ್ತಾರೆ, online tutorial ಗೆ ಹಾಜರಾಗುತ್ತಾರೆ. ಪಾರ್ಟ್ ಟೈಮ್ ಕೆಲಸ, ಶಿಫ್ಟ್ ವರ್ಕ್ ಮಾಡಲು ಇದು ಬಹಳ ಅನುಕೂಲವಾಗುತ್ತದೆ. ಇದರಿಂದ ಅನೇಕರು ಎರಡು ಪಾರ್ಟ್ ಟೈಮ್ ಜಾಬ್ಸ್ ಅಥವಾ ಫುಲ್ ಟೈಮ್ ವೃತ್ತಿ ಮಾಡಲಾರಂಭಿಸುತ್ತಾರೆ. ಕೆಲವರಿಗೆ ಒಂದಷ್ಟು ಹಣ ಉಳಿತಾಯ ಮಾಡಿ ತಮ್ಮದೇ ಒಂದು ಕಾರ್ ಕೊಳ್ಳಲು ಸಹಾಯವಾಗುತ್ತದೆ. ಹಲವರು ಪೋಷಕರ ಮನೆ ಬಿಟ್ಟು, ತಮ್ಮದೇ ಬಾಡಿಗೆ ನಿವಾಸವನ್ನು ಹೊಂದಿಸಿಕೊಳ್ಳುತ್ತಾರೆ. ಒಂದರ್ಥದಲ್ಲಿ, ಶಾಲೆ ಮುಗಿಸಿದ ಆಸ್ಟ್ರೇಲಿಯನ್ teenagers ಅಕ್ಷರಶಃ ಹೊಸ ಜೀವನವನ್ನು ಆರಂಭಿಸುತ್ತಾರೆ. ವೈಯಕ್ತಿಕ ಸ್ವಾತಂತ್ರ್ಯದ ಜೊತೆ ಜೀವನ-ನಿರ್ವಹಣೆ ಕೌಶಲ್ಯಗಳು, ಹೊಣೆಗಾರಿಕೆ, ಜವಾಬ್ದಾರಿಗಳನ್ನೂ ಕಲಿಯುತ್ತಾ ಆತ್ಮವಿಶ್ವಾಸ, ಸಾಮರ್ಥ್ಯವಿರುವ ವಯಸ್ಕರಾಗುತ್ತಾರೆ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

