Advertisement
ಹೊಸ ಹಾದಿಯಲ್ಲಿ ನಡಿಗೆಯ ಸವಾಲುಗಳು..: ಎಸ್ ನಾಗಶ್ರೀ ಅಜಯ್ ಅಂಕಣ

ಹೊಸ ಹಾದಿಯಲ್ಲಿ ನಡಿಗೆಯ ಸವಾಲುಗಳು..: ಎಸ್ ನಾಗಶ್ರೀ ಅಜಯ್ ಅಂಕಣ

ಕೇಳಿದವರಿಗೆ ಏನು ಮಹಾ ಎನ್ನಿಸುವ ಸಣ್ಣಪುಟ್ಟ ವಿಚಾರಗಳು ಹೊಸ ವಾತಾವರಣದಲ್ಲಿ ಚಪ್ಪಲಿಯೊಳಗೆ ಸೇರಿದ ಮರಳಿನ ಕಣದಂತೆ ಒತ್ತುತ್ತಿರುತ್ತವೆ. ಒಂದೇ ಜಾತಿ, ಉಪಜಾತಿ, ಪಂಗಡದಲ್ಲೇ ಮದುವೆಯಾದರೂ ಮನೆಯ ಪದ್ಧತಿ, ಸಂಪ್ರದಾಯ, ಇಷ್ಟಾನಿಷ್ಟಗಳಲ್ಲಿ ಹಲವು ವ್ಯತ್ಯಾಸಗಳು. ಬೆರಳು ಚುರಕ್ಕೆನ್ನುವಷ್ಟು ಸುಡುವ, ಹಬೆಯಾಡುವ ಊಟ ಇಷ್ಟಪಡುವ ಮನೆಯಿಂದ, ತಣ್ಣಗೆ ಆರಿ ಅಕ್ಷತೆಯಾದ ಅನ್ನ, ಉಗುರುಬೆಚ್ಚಗಿನ ಸಾರು ತಿನ್ನುವ ಮನೆಗೆ ಬಂದರೆ ತುತ್ತು ಗಂಟಲಿನಿಂದ ಕೆಳಗಿಳಿಯಲ್ಲ.
ಎಸ್ ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

“ಮದುವೆಯಾಗಿ ಹತ್ತು ವರ್ಷ ಆಗಿಬಿಟ್ಟರೆ ತಾಯಿಮನೆಯೇ ಅಪರಿಚಿತ ಜಾಗ ಅನ್ನಿಸಿಬಿಡತ್ತೆ. ಹೋದ ಮನೆಗೆ ಎಷ್ಟು ಒಗ್ಗಿರುತ್ತೇವಂದ್ರೆ ಅಮ್ಮನ ಮನೆಯಲ್ಲಿ ಹೊತ್ತು ಕಳೆಯೋದೇ ಕಷ್ಟ. ನಾವು ಹುಟ್ಟಿ ಬೆಳೆದ, ಆಡಿ ನಲಿದ ಸ್ಥಳವೇ ಆದರೂ ಒಂದು ಅಂತರ ತಾನೇತಾನಾಗಿ ಸೃಷ್ಟಿಯಾಗಿ, ತವರಿನ ಪ್ರೀತಿ ಹಾಗೂ ಗಂಡನಮನೆಯ ಸೆಳೆತ ನಮ್ಮನ್ನು ಬೇರೆಯೇ ಮನುಷ್ಯರನ್ನಾಗಿಸಿರತ್ತೆ. ಅದು ತಪ್ಪಲ್ಲ. ಮನುಷ್ಯ ಸಹಜ.” ಅಮ್ಮ ಹಾಗಂತ ಅದೆಷ್ಟು ಸಲ ಸಮಾಧಾನ ಹೇಳಿದ್ದಳೋ… ಹೊಸ ವಾತಾವರಣ, ಹೊಸ ರುಚಿ, ಹೊಸ ಸಂಬಂಧಗಳ ಜೊತೆ ಪ್ರಾರಂಭದ ದಿನಗಳನ್ನು ಕಳೆಯುವುದು ಸುಲಭಸಾಧ್ಯವಲ್ಲ. ದಿನಪೂರ್ತಿ ಹೇಗೋ ಕಳೆದರೂ, ಮಧ್ಯರಾತ್ರಿ ಎಚ್ಚರವಾದಾಗಲೋ ನಡುಮಧ್ಯಾಹ್ನದ ಏಕಾಂತದಲ್ಲೋ ಇದೆಲ್ಲಿ ಬಂದೆ ನಾನು ಎನ್ನಿಸಿ ಜೀವ ತಳಮಳಿಸುತ್ತದೆ. ಒಳ್ಳೆಯ ಜನ, ಒಳ್ಳೆಯ ಮಾತು, ಉಪಚಾರಗಳು ಎದೆಯ ಕದದ ಹೊಸ್ತಿಲಲ್ಲಿ ಅನುಮಾನಿಸುತ್ತಲೇ ನಿಂತಂತೆ ಭಾಸ. ನಂಬಿಕೆ, ಪರಸ್ಪರ ಒಗ್ಗುವಿಕೆ, ಅವಲಂಬನೆ ನಿಧಾನಕ್ಕೆ ಅರಳಬೇಕಾದ ಹೂವು. ಈ ಮಧ್ಯೆ ಮೊಗ್ಗು ಹೀಚಾಗಿರುವ ಹೊತ್ತಿನಲ್ಲೇ ಬಂದೆರಗುವ ಸಣ್ಣ ಮಾತು, ಸಿಟ್ಟಿನ ಅರೆಘಳಿಗೆ, ಬಾಯಿ ಜಾರಿದ ಅಣಿಮುತ್ತು ಕೆಂಡದಂತೆ ಸುಡುತ್ತದೆ. ಹತ್ತಿರವಾಗಲು ತೊಡಗಿದ ಮನಸ್ಸುಗಳು ಮೈಲು ದೂರ ಹೊರಟಾಗಿರುತ್ತದೆ. ಮತ್ತೆ ಹೆಜ್ಜೆ ಮೇಲೊಂದರ ಹೆಜ್ಜೆಯಿಟ್ಟು ಹತ್ತಿರಾಗಲು ಸಮಯವಷ್ಟೇ ಅಲ್ಲ. ತಾಳ್ಮೆ, ಅರ್ಥೈಸುವಿಕೆಗಳೂ ಬೇಕು.

ಕೇಳಿದವರಿಗೆ ಏನು ಮಹಾ ಎನ್ನಿಸುವ ಸಣ್ಣಪುಟ್ಟ ವಿಚಾರಗಳು ಹೊಸ ವಾತಾವರಣದಲ್ಲಿ ಚಪ್ಪಲಿಯೊಳಗೆ ಸೇರಿದ ಮರಳಿನ ಕಣದಂತೆ ಒತ್ತುತ್ತಿರುತ್ತವೆ. ಒಂದೇ ಜಾತಿ, ಉಪಜಾತಿ, ಪಂಗಡದಲ್ಲೇ ಮದುವೆಯಾದರೂ ಮನೆಯ ಪದ್ಧತಿ, ಸಂಪ್ರದಾಯ, ಇಷ್ಟಾನಿಷ್ಟಗಳಲ್ಲಿ ಹಲವು ವ್ಯತ್ಯಾಸಗಳು. ಬೆರಳು ಚುರಕ್ಕೆನ್ನುವಷ್ಟು ಸುಡುವ, ಹಬೆಯಾಡುವ ಊಟ ಇಷ್ಟಪಡುವ ಮನೆಯಿಂದ, ತಣ್ಣಗೆ ಆರಿ ಅಕ್ಷತೆಯಾದ ಅನ್ನ, ಉಗುರುಬೆಚ್ಚಗಿನ ಸಾರು ತಿನ್ನುವ ಮನೆಗೆ ಬಂದರೆ ತುತ್ತು ಗಂಟಲಿನಿಂದ ಕೆಳಗಿಳಿಯಲ್ಲ. ಉಪ್ಪು, ಹುಳಿ, ಖಾರ ಮುಂದಾಗಿ ಅಡುಗೆ ಮಾಡುವ, ಸಿಹಿಯ ಹೆಸರೆತ್ತಿದರೇ ಮಾರು ದೂರ ಸರಿಯುವ ಹುಡುಗಿಗೆ ಸಂಕ್ರಾತಿಯ ದಿನ ಎರಡು ಸೌಟು ಸಿಹಿ, ಮೂರು ಚಮಚ ಖಾರ ಬಡಿಸಿದವರ ಮೇಲೆ ಬೇಸರವೂ ಅಲ್ಲದ, ಹಿತವೂ ಅಲ್ಲದ ವಿಚಿತ್ರ ಭಾವನೆ.

ಅಂದಿನ ತರಕಾರಿ ಅಂದೇ ತರುವ, ಹಬ್ಬಹರಿದಿನದಂದು ಹಂಚಿ ಕೆಲಸ ಮಾಡುವ ಪದ್ಧತಿಯ ಮನೆಯ ಹುಡುಗಿಗೆ, ಟಿವಿ ರಿಮೋಟನ್ನೂ ಅವರ ಕೈಯಿಂದ ತೆಗೆದುಕೊಂಡು ಪಕ್ಕವಿಡಲಿ ಎಂದು ಬಯಸುವ, ಮೂಟೆಗಟ್ಟಲೆ ತರಕಾರಿ ತಂದು ಸುರಿದು, ಹೋಗುತ್ತಿರುವ ತರಕಾರಿಯನ್ನು ಮೊದಲು ಬಳಸುತ್ತಾ, ಒಟ್ಟಿನಲ್ಲಿ ದಿನಾ ಹಾಳಾಗಲು ಸಿದ್ಧವಿರುವ ತರಕಾರಿಯ ಕೊನೆ ಕತ್ತರಿಸಿ, ಮೂಸಿ ನೋಡಿ ಅಡುಗೆಗಿಕ್ಕುವುದು ಎಂತಹ ಕರ್ಮ ಎನಿಸದಿರಲಾರದು. ಇದು ಹೆಣ್ಣಿನ ದೃಷ್ಟಿಯಿಂದ ಮಾತ್ರ ಬರೆದ ಮಾತಲ್ಲ. ಗಂಡಿಗೂ, ಆತನ ಮನೆಯವರಿಗೂ ಇದು ಸಂಧಿಕಾಲ. ತನ್ನ ಮೇಲೆ ವಿಶ್ವಾಸವಿರಿಸಿ ಬಂದ ಹುಡುಗಿ, ಅದುವರೆಗೂ ಪಾಲಿಸಿ, ಪೋಷಿಸಿದ ಹೆತ್ತವರ ನಡುವೆ ಸಾಮರಸ್ಯ ಸಾಧಿಸಿ, ಎರಡೂ ಕಡೆಯ ದೋಷಾರೋಪಣೆ, ದುಸುಮುಸುಗಳಿಗೆ ಕಿವಿಯಾಗುತ್ತಲೇ ಸಮಚಿತ್ತವನ್ನು ಕಾಯ್ದುಕೊಳ್ಳುವ ಸವಾಲು ಆತನಿಗಿದ್ದೇ ಇದೆ.

ಕಾಲ ಯಾರನ್ನೂ ಕಾಯುವುದಿಲ್ಲ. ಕಾಲದೆದುರಿಗೆ ನಮ್ಮ ಮೊಂಡುತನ, ಹಠಮಾರಿತನ, ಆಸೆ, ಆಕಾಂಕ್ಷೆಗಳು ದಿಕ್ಕು ಬದಲಿಸಿ ವರ್ಷಗಳಂತರದಲ್ಲಿ ಹೊಸದನ್ನು ಹುಟ್ಟಿಸಿರುತ್ತದೆ. ತವರಿನ ಹಾಗೂ ಗಂಡನ ಮನೆಯ ಎರಡೂ ವಿಚಾರಗಳೊಂದಿಗೆ, ನಮ್ಮತನವೂ ಸೇರಿ ಹೊಸ ದಾರಿಯೊಂದು, ಹೊಸ ದಿನಚರಿಯೊಂದು ರೂಢಿಯಾಗಿರುತ್ತದೆ. ಹಿರಿಯರ ಹಲ್ಲಿಗೆ ಆಗುವುದಿಲ್ಲವೆಂದು ಕಡಲೇಬೇಳೆ, ಉದ್ದಿನಬೇಳೆ ಒಗ್ಗರಣೆ ಹಾಕದ, ಸಿಹಿ ಇಷ್ಟಪಡುತ್ತಾರೆಂದು ಪಾತ್ರೆ ಭರ್ತಿ ಪಾಯಸ ಮಾಡಿಡುವ, ತರಕಾರಿ ಸಣ್ಣಗೆ ಹೆಚ್ಚಿದರೆ ಮೆಚ್ಚುವ, ದೋಸೆಗೆ ಮೆಂತ್ಯೆ ಮುಂದಾಗಿ ಹಾಕುವ, ಹುಣಸೆಹಣ್ಣಿಗಿಂತ ಸಾರಿಗೆ ನಿಂಬೆರಸ ರುಚಿಯೆನ್ನುವ ಇಷ್ಟಾನಿಷ್ಟಗಳು ಪರಸ್ಪರ ವಿನಿಮಯವಾಗಿ ಮನೆ ಬದಲಾಗುವುದು.

ಅಪರೂಪಕ್ಕೆ ಸಿಗುವ ಏಕಾಂತದಲ್ಲಿ, ಇವತ್ತು ನನ್ನ ಇಷ್ಟದಂತೆ ಕಟುಂಕುಟಂ ಕಡಲೆಬೇಳೆ, ಇಡಿಯ ಕರಿಬೇವು, ಸ್ವಲ್ಪ ಉಪ್ಪು ಹುಳಿ ಖಾರ ಮುಂದಾಗಿ ಹಾಕಿ ಅಮ್ಮನ ಮನೆಯ ಚಿತ್ರಾನ್ನ ಮಾಡಿಟ್ಟುಕೊಂಡರೆ, ನಾಲಿಗೆಯೇ ಬದಲಾಗಿಬಿಟ್ಟಿರುತ್ತದೆ. ಇವತ್ತೇನೋ ಬದಲಾಗಿ ಹೋಯ್ತಲ್ಲ. ಮಾಮೂಲು ರುಚಿಯ ಹಿತ, ತೃಪ್ತಿಯೇ ಸಿಗುತ್ತಿಲ್ಲವಲ್ಲ ಎನಿಸಿ ನಗು. ಅಮ್ಮನ ಮನೆಯಲ್ಲಿ ಬಾಚಣಿಗೆ, ಕುಂಕುಮ, ಹೋದ ಸಲ ಬಿಟ್ಟು ಬಂದ ಸೀರೆ, ಫೋಟೋ ಆಲ್ಬಂ ಎಲ್ಲಿದೆಯೆಂದು ತಡಕಾಡುವಾಗ, ಓಹ್ ಮುಂಚಿನ ಜಾಗವಲ್ಲ ಇದುವೆನಿಸುವಾಗ, ಸ್ವಿಚ್ಚುಗಳು ಬೆರಳ ನೆನಪಿನಲ್ಲಿ ಭದ್ರವುಳಿದಾಗ ಮತ್ತೆ ಹಿತವಾದ ನಗು. ಹೌದು. ನಾವು ಬದಲಾಗುತ್ತೇವೆ. ನಾವೆಲ್ಲರೂ ಬದಲಾಗುತ್ತೇವೆ. ಆದರೆ ಈ ಹಿತವಾದ ಅಧ್ಯಾಯಕ್ಕೆ ಬರುವ ಮುನ್ನ, ಪರಸ್ಪರ ಸಹಕಾರ, ಪ್ರಯತ್ನವಿದ್ದರಷ್ಟೇ ಈ ಪುಟ ತೆರೆಯಲು ಸಾಧ್ಯ.

About The Author

ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

3 Comments

  1. ಚಂದ್ರಮತಿ ಸೋಂದಾ

    ಬಹಳ ನವಿರಾದ ಬರೆಹ

    Reply
  2. Jyoti hegde

    ಆಪ್ತವೆನಿಸಿದ ಬರಹ

    Reply
  3. S Amulya

    Change is the only constant ಅಂತ ಆಧುನಿಕ ಜಗತ್ತು ಅದೇನೋ ದೊಡ್ಡ ಫಿಲಾಸಫಿ ಎಂಬಂತೆ ಹೇಳುತ್ತಿರುವ ಹೊತ್ತಲ್ಲಿ, ನಮ್ಮ ನೆಲದ್ದೇ ಉದಾಹರಣೆಗಳನ್ನ ಕೊಟ್ಟು, ಲಿಂಗ ಬೇಧವಿಲ್ಲದೆ ಎಲ್ಲರ ಬಾಳಲ್ಲೂ ಈ ಘಟ್ಟದ ಬದಲಾವಣೆ ಎಷ್ಟು ನಾಜೂಕಾದದ್ದು ಜೊತೆಗೆ ನವಿರಾದದ್ದು ಎಂದು ಮನಮುಟ್ಟುವಂತೆ ಬರೆದಿದ್ದೀರ ನಾಗಶ್ರೀ. ಬಹಳ ಇಷ್ಟ ಆಯ್ತು ಲೇಖನ.

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ