ಮಕ್ಕಳಿಗೆ ಯಾವ ಹಂತದಲ್ಲಿ ತಾಯಿ ತಂದೆಯರು ಬೇಕೆನಿಸುವುದಿಲ್ಲ ಅಥವಾ ಸಾಕೆನಿಸುತ್ತಾರೆ? ಎಂಬ ಗೊಂದಲದ ಆದರೆ ಪ್ರಸ್ತುತ ಪ್ರಶ್ನೆಯೂ ಇಲ್ಲಿದೆ! ನಮ್ಮ ತಲೆಮಾರಿನವರು ತಂದೆ ತಾಯಿಯರ ಮಾನಸಿಕ ಜಗತ್ತಿನಿಂದ ಕ್ರಮೇಣ ದೂರವಾದರೆ, ಇಂದಿನವರದು ಧಿಡೀರ್ ದೂರವಾಗುವಿಕೆ! ಭಾವನೆಗಳ ಘರ್ಷಣೆ! ಕೋಚಿಂಗ್ ಸೆಂಟರಿನಲ್ಲಿ ಡೆಪ್ಯೂಟಿ ಕರೆಸ್ಪಾಂಡೆಂಟ್ ಆಗಿದ್ದ ಮೇಲ್ ಮಧ್ಯಮ ವರ್ಗದ ರಂಗನಾಥ್ ಮತ್ತು ಶಿಕ್ಷಕಿ ಸುಧಾ ದಂಪತಿಗಳ ಮಕ್ಕಳು ವಿಕ್ರಮ್ ಹಾಗೂ ಪ್ರಾರ್ಥನಾ.
ಕೆ ಸತ್ಯನಾರಾಯಣ ಕಾದಂಬರಿ “ಕಾಲಜಿಂಕೆ”ಯ ಕುರಿತು ಸಿ ಬಿ ಶೈಲಾ ಜಯಕುಮಾರ್ ಬರಹ
ಕೆ ಸತ್ಯನಾರಾಯಣ ಅವರ ‘ಕಾಲಜಿಂಕೆ’ ಕಾದಂಬರಿ ಓದಿ, ಮನದ ವ್ಯಾಪಾರ, ತಳಮಳ, ತಲ್ಲಣಗಳನ್ನು ಅರಗಿಸಿಕೊಳ್ಳಲಾಗದೆ ಕೊಂಚ ಹೊತ್ತು ನಾನು ಸುಮ್ಮನೆ ಕುಳಿತುಬಿಟ್ಟೆ! ಚಿತ್ತ ಎತ್ತೆತ್ತಲೋ ಹರಿದಾಡಿತು! ಸ್ಮೃತಿ ಭಂಡಾರದ ಎಳೆಗಳು ಬಿಚ್ಚಿಕೊಂಡವು!
ಸೀತೆಯ ಕಣ್ಣಿಗೆ ಬಿದ್ದ ಮಾಯಾ ಮೃಗದ ನೆನಪಾಯ್ತು! ಜೈನರಿಗಿಂತ ಕಟ್ಟಾ ಜೈನರಾದ ಬಿಷ್ಣೊಯ್ ಜನಾಂಗದ ಜಿಂಕೆಯ ಆರಾಧನೆ ಕಣ್ಣಿಗೆ ಕಟ್ಟಿತು! ಮೂಲದ ಹುಡುಕಾಟದಲ್ಲಿ ನಿಮಗ್ನನಾದ ಕಾರಂತರ ‘ಚಿಗುರಿದ ಕನಸು’ ನಾಯಕನೂ ಧುತ್ತೆಂದು ಎದುರಾದ!
ಲೇಖಕರು ಕಾಲವನ್ನು ನಾಗಾಲೋಟದಿಂದ ನೆಗೆಯುವ ಜಿಂಕೆಗೆ ಹೋಲಿಸಿದ್ದು ವಿಶೇಷವೆನಿಸಿತು. ‘ಕಾಲಜಿಂಕೆ’ ಎನ್ನುವ ಶೀರ್ಷಿಕೆ- ರೂಪಕವೇ ಆಸಕ್ತಿ ಹುಟ್ಟಿಸುವಂತಹದು! Time flies!

(ಕೆ. ಸತ್ಯನಾರಾಯಣ)
ಕಾಲದ ಕುರಿತಾಗಿಯಲ್ಲವೇ ವರಕವಿ ದ ರಾ ಬೇಂದ್ರೆ …”ಹಕ್ಕಿಯು ಹಾರುತಿದೆ, ಹಗಲಿರುಳೆಂಬ ರೆಕ್ಕೆಗಳೊಡನೆ ಕಾಲದ ಹಕ್ಕಿಯು ಹಾರುತಿದೆ” ಹಾಡಿದ್ದು!
ಇಪ್ಪತ್ತನೇ ಶತಮಾನದ ಉತ್ತರಾರ್ಧ ಹಾಗೂ ಇಪ್ಪತ್ತೊಂದನೇ ಶತಮಾನದ ಪೂರ್ವಾರ್ಧದ ಜಾಗತೀಕರಣ, ಪಶ್ಚಿಮದ ಆಕರ್ಷಣೆ, ಹಣದ ದಾಹ, ಸುಖದ ಬಯಕೆ… ಇತ್ಯಾದಿಗಳ ಪ್ರಭಾವದಿಂದಾಗಿ ಭಾರತೀಯರ ಸಾಮಾಜಿಕ ಬದುಕಿನಲ್ಲಾದ ಮನ್ವಂತರದ ಕಥನವಿದು! ಹೊಂದಾಣಿಕೆಗಾಗಿ ‘ಕಾಲಾಯಾತಸ್ಮೈ ನಮಃ’ ಎನ್ನುವುದೊಳಿತು!
ಈ ಕಾದಂಬರಿಯಲ್ಲಿ ಕಥಾನಾಯಕ ಅಥವಾ ಕಥಾನಾಯಕಿ ಎಂದು ಯಾರನ್ನಾದರೂ ಹೆಸರಿಸುವುದಕ್ಕಿಂತ ಹನ್ನೊಂದು ಅಧ್ಯಾಯಗಳ ವಿಶಿಷ್ಟ ಕಥನಕ್ರಮವನ್ನೇ ಕಥಾನಾಯಕ ಎನ್ನಬಹುದು. ಸತ್ಯದ ಹುಡುಕಾಟದಲ್ಲಿರುವ ವ್ಯಕ್ತಿ ಚಿತ್ರಣಗಳೇ ಹೆಚ್ಚು!
ದಿನ ನಿತ್ಯದ ವ್ಯವಹಾರಗಳಾದ ಜಾತಿ ರಾಜಕೀಯ ಮತ್ತು ಗುಂಪುಗುಳಿತನಗಳ ಪ್ರಸ್ತಾಪವಿಲ್ಲಿದೆ. ತರುಣ ಜನಾಂಗದ ಸ್ವಮಗ್ನತೆ, ತಿಳವಳಿಕೆಯಿಂದ ಕೂಡಿರುವ ಆತ್ಮವಿಶ್ವಾಸದ ದಾಖಲೆಗಳಿಲ್ಲಿವೆ! ನಗರ ಜೀವನದ ಯಾಂತ್ರಿಕತೆ ಹಾಗೂ ಗ್ರಾಮೀಣ ಬದುಕಿನ ಸಹಜ ಬಾಂಧವ್ಯದ ತೌಲನಿಕ ಅಧ್ಯಯನಕ್ಕೂ ಇಲ್ಲಿ ಅವಕಾಶವಿದೆ.
ಗಂಡು ಹೆಣ್ಣುಗಳ ಸಂಬಂಧದ ಬೇರೆ ಬೇರೆ ಸ್ತರ- ಸ್ವರೂಪಗಳ ಮೂರ್ತತೆಯೂ ಇದೆ!
‘Generation gap’ ಅಥವಾ ಎರಡು ತಲೆಮಾರುಗಳ ನಡುವಿನ ಮೌಲ್ಯಗಳ ಸಂಘರ್ಷವೇ ಢಾಳಾಗಿ ಕಾಣುತ್ತದೆ!
ಪೋಷಕರಿಗೆ ತಿಳವಳಿಕೆ, ಲೋಕ ಜ್ಞಾನ, ವಿವೇಕವೂ ಸಾಲದೆಂಬ ಭಾವನೆ ಮಕ್ಕಳಲ್ಲಿ!
‘I hate some of your attitudes’ ಎನ್ನುವ ಮಕ್ಕಳು ಬೆಳೆಯುವ, ಬದಲಾಗುವ ಭರದಲ್ಲಿ ಹೆತ್ತವರ ಮನಸ್ಸನ್ನು ನೋಯಿಸುವುದೇ ಹೆಚ್ಚು!
ಮಕ್ಕಳಿಗೆ ಯಾವ ಹಂತದಲ್ಲಿ ತಾಯಿ ತಂದೆಯರು ಬೇಕೆನಿಸುವುದಿಲ್ಲ ಅಥವಾ ಸಾಕೆನಿಸುತ್ತಾರೆ? ಎಂಬ ಗೊಂದಲದ ಆದರೆ ಪ್ರಸ್ತುತ ಪ್ರಶ್ನೆಯೂ ಇಲ್ಲಿದೆ! ನಮ್ಮ ತಲೆಮಾರಿನವರು ತಂದೆ ತಾಯಿಯರ ಮಾನಸಿಕ ಜಗತ್ತಿನಿಂದ ಕ್ರಮೇಣ ದೂರವಾದರೆ, ಇಂದಿನವರದು ಧಿಡೀರ್ ದೂರವಾಗುವಿಕೆ! ಭಾವನೆಗಳ ಘರ್ಷಣೆ!
ಕೋಚಿಂಗ್ ಸೆಂಟರಿನಲ್ಲಿ ಡೆಪ್ಯೂಟಿ ಕರೆಸ್ಪಾಂಡೆಂಟ್ ಆಗಿದ್ದ ಮೇಲ್ ಮಧ್ಯಮ ವರ್ಗದ ರಂಗನಾಥ್ ಮತ್ತು ಶಿಕ್ಷಕಿ ಸುಧಾ ದಂಪತಿಗಳ ಮಕ್ಕಳು ವಿಕ್ರಮ್ ಹಾಗೂ ಪ್ರಾರ್ಥನಾ.
ಮಗ ವಿಕ್ರಮ್ ವಿದ್ಯಾಭ್ಯಾಸಕ್ಕೆಂದು ಅಮೆರಿಕೆಗೆ ಹೋದವನು ಅಲ್ಲಿಯೇ ಭಾರತ ಸಂಜಾತ ಸಾಂಪ್ರದಾಯಿಕ ಮನೆತನದ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿ, ತನ್ನ ತಂದೆ- ತಾಯಿ ತನಗೆ ಧರ್ಮಶ್ರದ್ದೆ, ಆಚಾರಗಳಲ್ಲಿ ಆಸ್ಥೆ- ನಂಬಿಕೆ ಬೆಳೆಸಲಿಲ್ಲ ಎಂದು ಇ- ಮೇಲ್ ಮೂಲಕ ದೂರುತ್ತಾನೆ.
ದೆಹಲಿಯಲ್ಲಿ ಫೈನಲ್ ಡಿಗ್ರಿ ಓದುತ್ತಿರುವ ಮಗಳು ಪ್ರಾರ್ಥನಾಳಿಗೆ ಪರೀಕ್ಷೆ, ಟೆಸ್ಟ್, ಸಂದರ್ಶನ, ಓದು- ಬರಹದ ಒತ್ತಡಗಳಿಂದಾಗಿ ತುಂಬಾ ಸುಸ್ತಾಗಿ, ತನ್ನ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿಯೇ ಇಲ್ಲವೆಂಬ ಅಳಲು!
ಮುಖವಾಡ ಧರಿಸಿದವರೊಂದಿಗೆ ಬೆರೆಯಲಾಗದೆ ಬದುಕುತ್ತಿರುವ ಆಕೆಗೆ, ಸವೆದ ದಾರಿಯಲ್ಲೇ ತಾನೂ ಸಾಗಬೇಕೇ? ಬೇಡವೇ? ಎನ್ನುವ ಗೊಂದಲ!
ಭವಿಷ್ಯದಲ್ಲಿ ನೃತ್ಯ ಅಥವಾ ಬರಹ ಅಥವಾ ಇನ್ನೇನೋ ಎಂದು ತನ್ನನ್ನು ಅರ್ಥೈಸಿಕೊಳ್ಳಲು ಆಕೆಗೆ ಒಂದು ವರ್ಷವಿಡೀ ಸಮಯ ಬೇಕಂತೆ! ಆಕೆಯದೂ ಪತ್ರ ಮುಖೇನ ವಿನಂತಿ!
ತಂದೆ ತಾಯಿಯರು ಚೂರೂ ಹೊಸತನವಿಲ್ಲದೆ ನೀರಸವಾಗಿ ಬದುಕುವುದೇಕೆ? renewal ಆಗಬಾರದೇ ಎಂಬ ಪ್ರಶ್ನೆ ಆಕೆಯದು! You must give some time to yourselves ಎಂಬ ಸಲಹೆ ಬೇರೆ! ಅಂತರಂಗದ ಪಯಣ ಪ್ರಾರಂಭವಾಗಲಿ ಎಂಬ ಆಶಯ ಅವಳದು!
ಮಗಳ ಉದ್ಯೋಗಾವಕಾಶ, ಮದುವೆಯ ಬಗ್ಗೆ ಸದಾ ಯೋಚಿಸುವ ಮಧ್ಯಮವರ್ಗದ ಪೋಷಕರಿಗೆ ದಿಗಿಲು! ಇಂದಿನ ಬದುಕು ಸರಾಗವಾಗಿಲ್ಲ ಏನೋ ಕೆಲಸ, ಏನೋ ನೆನಗುದಿ, ಏನೋ ತರದೂದು, ಎಲ್ಲೋ ಪ್ರಯಾಣ, ಯಾವುದಕ್ಕೋ ತಹತಹ, ಒಟ್ಟಿನಲ್ಲಿ ನೆಮ್ಮದಿ ಎಂಬುದು ಆಕಾಶಬುಟ್ಟಿ! ಮಕ್ಕಳು ತಂದೆ ತಾಯಿಯರಿಂದ ಮಾನಸಿಕವಾಗಿ ದೂರ!
ರಂಗನಾಥನ ಅಕ್ಕನ ಮಗಳು ಪವಿತ್ರಾ ತಂದೆ- ತಾಯಿಯರ ಇಷ್ಟಕ್ಕೆ ವಿರುದ್ಧವಾಗಿ ಉದ್ಯೋಗದ ಕಾರಣಕ್ಕಾಗಿ ದುಬೈಗೆ ಹೊರಟು ನಿಂತ ಹೊಸ ಕಾಲದ, ಹೊಸ ಜೀವನ ಶೈಲಿಯ software queen!
Indian boys are both rascals and hypocrites ಎಂದು ತನ್ನ ಮದುವೆ ತಪ್ಪಿದ್ದಕ್ಕೆ ಕಾರಣ ಕೊಟ್ಟ ಮಹತ್ವಾಕಾಂಕ್ಷಿ! ತನ್ನ ತಂದೆತಾಯಿಗಳಿಗೆ ಸಮಾಧಾನ ಹೇಳಲು ರಂಗನಾಥನಲ್ಲಿ ಮನವಿ! ನಂತರದಲ್ಲಿ ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡು, ಸ್ವಾಮಿನಾಥನೊಂದಿಗೆ ಕೈ ಜೋಡಿಸಿದವಳು!
ಪವಿತ್ರಾಳ ಆಪ್ತ ಗೆಳತಿ, ಪತ್ರಿಕೋದ್ಯಮಿ ಪರಮೇಶ್ವರಿಯದು ಇನ್ನೊಂದು ಕಥೆ! ಕ್ರಾಂತಿ ಮಾಡಲೆಂದು ಅಂತರ್ಜಾತಿಯ ಮದುವೆಯಾಗಿ, ಎರಡು ಮಕ್ಕಳಿದ್ದ ತಾಯಿ ಪರಮೇಶ್ವರಿಯ ಗಂಡ ಹೃದಯಾಘಾತದಿಂದ ತೀರಿ ಹೋದ ಮೇಲೆ ಗಂಡನ ಗೆಳೆಯನೊಂದಿಗೆ ಲಿವ್ ಇನ್ ರಿಲೇಶನ್ಸ್ ನಲ್ಲಿ ಇದ್ದವಳು! ಸ್ವಜಾತಿಯ ಅನೇಕ ಶಾಲೆಗಳಲ್ಲಿ ಮ್ಯಾನೇಜ್ಮೆಂಟ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದವಳು. ತನ್ನ ಸಂಕಟಗಳನ್ನೇ ದೊಡ್ಡವೆಂದು ಭಾವಿಸದೆ ಬೇರೆಯವರ ಕಷ್ಟಗಳಿಗೂ ಕಿವಿಯಾಗುತ್ತಿದ್ದಳು!
ರಿಯಲ್ ಎಸ್ಟೇಟ್ ಏಜೆಂಟ್ ದಾಷ್ಟೀಕ ಸ್ವಾಮಿನಾಥನ್, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಸಮಾಜವಾದಿ, ಆಸ್ತಿವಂತ ನಾರಾಯಣ ಮೂರ್ತಿಗಳ ಏಕೈಕ ಪುತ್ರನಾಗಿದ್ದರೂ ದುಡ್ಡಿಗಾಗಿ ಅಪ್ಪನೊಂದಿಗೆ ಕಿತ್ತಾಡುತ್ತಿದ್ದವ. ರಾಜಕೀಯದ ಹುಚ್ಚು, ನಾಯಕತ್ವದ ಆಸೆ, ಸದಾ ದುಡ್ಡು ಮಾಡುವ ಧಾವಂತದ ಪ್ರಭಾವೀ ಮನುಷ್ಯ! ಸತ್ತು ಹೋಗಿದ್ದ ಅಪ್ಪನ ದಿನಚರಿ, ಜೀವನ ಚರಿತ್ರೆಯನ್ನು ಪ್ರಕಟಿಸುವ ಆಸೆ ಅವನದು! ಸಲಹೆಗಾಗಿ ರಂಗನಾಥನ್ ಬಳಿ ಓಡಾಟ!
ರಜನಿ ಬ್ಯಾಂಕೊಂದರಲ್ಲಿ ನಿಷ್ಟಾವಂತ ಸೀನಿಯರ್ ಎಕ್ಸಿಕ್ಯೂಟಿವ್! Right Livelihood ಪ್ರಶಸ್ತಿ ವಿಜೇತೆ! ರಜನಿಯ ಗಂಡ ವಿನೋದ್ ರಾಯ್. ಆತ ಸಿವಿಲ್ ಸರ್ವೀಸ್ ವೃತ್ತಿಗೆ ರಾಜಿನಾಮೆ ಕೊಟ್ಟು, ಗಿರಿಜನರ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ನಿಸ್ವಾರ್ಥಿ!
ಸರ್ಕಾರಿ ಯೋಜನೆಗಳು ಸೋರಿ ಹೋಗುತ್ತಿರುವ ಬಗ್ಗೆ ಇಬ್ಬರದೂ ಅಸಹಾಯಕತೆ! ಜನ ಜಾಗೃತಿ, ಸಂಘಟನೆಯ ಬಗ್ಗೆ ಅವರ ಚಿಂತನೆ! ಜನಾಂದೋಲನದ ಮುಂಚೂಣಿಯಲ್ಲಿ ನಿಂತವರು! ವಿದ್ಯಾರ್ಥಿಗಳೊಂದಿಗೆ ಮೇಸನಾಕ್ಕೆ ಪ್ರವಾಸ ಹೋಗಿದ್ದಾಗ ರಂಗನಾಥನಿಗೆ ರಾಜಾಸ್ಥಾನದ ಮರುಭೂಮಿಯಲ್ಲಿ ಪರಸ್ಪರ ಪರಿಚಿತರಾದವರು!
ಕೊಳೆತು ಹೋಗುವಷ್ಟು ಹಣವಿದ್ದ ಸಿರಿವಂತೆ ಪ್ರಭಾವತಿ ದೇವಿ ರೆಡ್ಡಿ ಮದುವೆಯಾಗದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ನಿಸ್ವಾರ್ಥಿ! ಗ್ರಾಮೀಣ ಪ್ರದೇಶಗಳಲ್ಲಿ, ಮಹಿಳಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆಗೈದ ಮ್ಯಾಗ್ಸೇಸೆ ಪ್ರಶಸ್ತಿ ಪಡೆದಾಕೆ! ರಂಗನಾಥ ಆಕೆಯ ಕುರಿತು ಡಾಕ್ಯುಮೆಂಟರಿ ಮಾಡುತ್ತಾರೆ!
ರಂಗನಾಥನ ತಮ್ಮ ಶಂಕರ ಮತ್ತವನ ಹೆಂಡತಿ ಭಾರತಿ ಅವರ ವಿಷಮ ದಾಂಪತ್ಯಕ್ಕೆ ಕಾರಣಳಾದ ಹೆಣ್ಣು ಮಂಜರಿಯ ಬಗ್ಗೆ ವಿಶ್ಲೇಷಣೆ, ಗಂಡಸಿನ ಲೈಂಗಿಕ ವಿಜೃಂಭಣೆ ಇಲ್ಲಿ ಓದಲು ಸಿಗುತ್ತದೆ.
ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶಂಕರ, ಷೇರು ದಂಧೆಗೆ ಇಳಿದ ಮೇಲೆ, ಕೋಟಿಗಟ್ಟಲೆ ಹಣ ಜಮೆಯಾಗತೊಡಗಿದ ಮೇಲೆ, ಇಷ್ಟಪಟ್ಟು ಮದುವೆಯಾಗಿದ್ದ ಹೆಂಡತಿ ಅವನಿಗೆ ಬೇಸರವೆನಿಸುತ್ತಾಳೆ!
ನಂತರದಲ್ಲಿ ಜ್ಞಾನೋದಯವಾದಂತೆ ಅಣ್ಣ- ಅತ್ತಿಗೆಯರೊಂದಿಗಿನ ಆಪ್ತ ಸಮಾಲೋಚನೆಯಿಂದ, ಷೇರು ವ್ಯವಹಾರದಿಂದ ಕೊಂಚ ಕೊಂಚವೇ ಹಿಂದಕ್ಕೆ ಸರಿದು, ಹೆಂಡತಿಗೂ ಸಮಯ ಮೀಸಲಾಗಿಟ್ಟು ಬದುಕಿನ ಹಳಿ ತಪ್ಪದಂತೆ ನೋಡಿಕೊಳ್ಳುತ್ತಾನೆ! ದುಡ್ಡಿನ ಹಿಂದೆ ಬಿದ್ದು ಓದುವ ಆಸಕ್ತಿ, ಹವ್ಯಾಸಗಳೆಲ್ಲವನ್ನು ಕಳೆದುಕೊಂಡಿದ್ದ ಶಂಕರನಿಗೀಗ I want to revive every thing… ಎಂಬ ಮನಸ್ಥಿತಿ ಹೊಂದುತ್ತಾನೆ!
ರಂಗನಾಥ ತನ್ನ ಹುಟ್ಟೂರನ್ನು ನೆನಪಿಸಿಕೊಳ್ಳುವ ಪ್ರಸಂಗವಂತೂ ತೀರಾ ಭಾವನಾತ್ಮಕ! ದಶಕಗಳ ನಂತರದಲ್ಲಿ ತನ್ನ ಹುಟ್ಟೂರಿಗೆ ಹೋದ ರಂಗನಾಥ ಮತ್ತೆ ಹೊಸ ಮನುಷ್ಯನಾದ ಬಗೆ ಆಪ್ಯಾಯಮಾನವೆನಿಸುತ್ತದೆ!
ನಮ್ಮದೇ ಕಾಲದ ಕಥೆ ಎನಿಸಿ ಓದು ಮುಗಿದರೂ ಮತ್ತೇನನ್ನೋ ಚಿಂತನಗೈಯುತ್ತದೆ! ನಿಜಕ್ಕೂ ಆಧುನಿಕ ಕಾಲದ ಬಗ್ಗೆ ಒಂದು ಮಹತ್ವದ ಕಾದಂಬರಿ ಎನಿಸುತ್ತದೆ. ರಂಜಿಸುವ ವಸ್ತು ಇಲ್ಲವಾದರೂ ವಾಸ್ತವಕ್ಕೆ ಕನ್ನಡಿ ಹಿಡಿಯುವುದರಿಂದ ಗಂಭೀರ ಎನಿಸಿದರೂ ಸಂಬಂಧಗಳ ಆಳಕ್ಕಿಳಿಯುವುದರಿಂದ ಮನಸ್ಸು ತುಂಬಿ ಬರುತ್ತದೆ!
ಕೆ ಸತ್ಯನಾರಾಯಣ ರೂಪಕಗಳನ್ನು ಯಥೇಚ್ಛವಾಗಿ ಬಳಸಿದ್ದಾರೆ. ಹಲ್ಲು ಸಂದಿಗೆ ಸಿಕ್ಕ ನುಗ್ಗೇಕಾಯಿ ನಾರು, ಮರಳುಗಾಡಿನಲ್ಲಿ ಒಂಟಿ ಒಂಟೆ, ಕೆನೆಯುವ ಕುದುರೆಯ ಚಿತ್ರ… ಇತ್ಯಾದಿ.
ಮೇಸನಾದಲ್ಲಿ ರಜನಿಯ ನೇತೃತ್ವದಲ್ಲಿ, ಹಳ್ಳಿಗರ ಸಹಕಾರದಿಂದ ಪ್ರಾರ್ಥನಾಳ ಮಹಾ ಮಜ್ಜನ , ಕುವೆಂಪುರವರ ‘ಅಜ್ಜಯ್ಯನ ಅಭ್ಯಂಜನ’ ವನ್ನು ಸ್ಮರಣೆಗೆ ತರುತ್ತದೆ.
“All of us are obsessed with money and money making. Because it is a sort of religion in our times… So much is still left in our body, mind and soul…” ಶಂಕರನ ಈ ಮಾತು ಮತ್ತೆ ಮತ್ತೆ ರಿಂಗಣಿಸುತ್ತದೆ.

ಪ್ರಾರ್ಥನಾಳ ಮಾತುಗಳು ಸ್ಮೃತಿ ಭಿತ್ತಿಯಲ್ಲಿ ಮುದ್ರಿತವಾಗುತ್ತವೆ.
ತತ್ವಜ್ಞಾನಿ ಕವಿ Kahlil Gibran ನ ‘On Children’ ಪದ್ಯ ನೆನಪಾಯ್ತು!
“your children are not your children…
They come through you but not from you
And though they are with you, yet they belong not to you
You may give them your love but not your thoughts
For they have their own thoughts
You may house their bodies not their souls
For their souls dwell in the house of tomorrow
Which you cannot visit not even in your dreams
You may strive to be like them, but seek not to make them like you”
‘ಕಾಲಜಿಂಕೆ’ ಕಾದಂಬರಿಗೆ ಡಾ. ಯು. ಆರ್. ಅನಂತಮೂರ್ತಿ ಮುನ್ನುಡಿ ಬರೆದಿದ್ದಾರೆ. ನಮ್ಮೊಂದಿಗೆ ನಾವೇ ಮುಖಾಮುಖಿಯಾಗುತ್ತ ನಿರಾಳವಾಗಿ ಓದಬೇಕಾದ ಕಾದಂಬರಿ!
(ಕೃತಿ: ಕಾಲಜಿಂಕೆ (ಕಾದಂಬರಿ), ಲೇಖಕರು: ಕೆ ಸತ್ಯನಾರಾಯಣ, ಪ್ರಕಾಶಕರು: ಅನಂತ ಪ್ರಕಾಶನ, ಬೆಂಗಳೂರು. ಮೊ- ೯೩೪೨೧೯೬೨೫೫, ಪುಟಗಳು- ೨೭೨, ಬೆಲೆ-೨೫೦/-)

ಬಿ.ಸಿ. ಶೈಲಾ ಜಯಕುಮಾರ್ ಮೂಲತಃ ಚಿತ್ರದುರ್ಗದವರು. ಹಲವೆಡೆ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ನುಡಿಗನ್ನಡ, ಅಹಲ್ಯಾಂತರಂಗ, ಏಕಸೂತ್ರದಲ್ಲಿ ಅನೇಕ, ಉತ್ತರೆಯ ಸ್ವಗತ, ಇವರು ಚಿರಂಜೀವಿಗಳು, ಸಭಾ ಮರ್ಯಾದೆ ಮತ್ತು ಇತರ ಪ್ರಬಂಧಗಳು, ಪುರಾಣ ಪ್ರಮಾಣಗಳು, ಮೊದಲ ಹೆಜ್ಜೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

