Advertisement
ಇಷ್ಟುಕಾಲ ಒಟ್ಟಿಗಿದ್ದು….

ಇಷ್ಟುಕಾಲ ಒಟ್ಟಿಗಿದ್ದು….

ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು?
ಎನ್. ಸಂಧ್ಯಾ‌ ರಾಣಿ ಹೊಸ ಕಾದಂಬರಿ “ಇಷ್ಟುಕಾಲ ಒಟ್ಟಿಗಿದ್ದು” ಯಿಂದ ಆಯ್ದ ಭಾಗ ನಿಮ್ಮ ಓದಿಗೆ

ಸರೋಜಿನಿ

(ಎನ್. ಸಂಧ್ಯಾ‌ ರಾಣಿ)

ಯಾವುದೋ ಹಳೆಯ ಕಾಲದ ಮನೆ. ಮನೆಯ ಹೊರತು ಸುತ್ತಮುತ್ತಲಿನ ಮಿಕ್ಕೆಲ್ಲಾ ಅಸ್ಪಷ್ಟ. ದಪ್ಪಮರದ ತಲೆಬಾಗಿಲು, ಕಬ್ಬಿಣದ ಚಿಲಕ. ಇಷ್ಟೆತ್ತರದ ಹೊಸ್ತಿಲು. ಹೊಸ್ತಿಲ ಎರಡೂ ಕಡೆ ಹಚ್ಚಿದ ಅರಸಿನ, ಕುಂಕುಮ, ಇಟ್ಟಿದ್ದ ಕಾಡುಹೂವು, ಕಟ್ಟಿದ್ದ ತೋರಣ. ಮನೆಯ ತಲೆಬಾಗಿಲಿಗೆ ಅಂಟಿಕೊಂಡಂತೆ ಆಕಡೆ, ಈಕಡೆ ಉದ್ದನೆಯ ಜಗಲಿಗಳು. ಜಗಲಿಗಳ ಮೇಲೆ, ಆಚೆಗೊಂದು, ಈಚೆಗೊಂದು ಎರಡು ಪುಟ್ಟಪುಟ್ಟ ಕಿಟಕಿಗಳು. ಜಗಲಿಗಳ ತುದಿಗೆ ಸ್ವಲ್ಪ ಎತ್ತರಿಸಿದ ಭಾಗ ತಲೆದಿಂಬಿನಂತೆ ಕಾಣುತ್ತಿತ್ತು. ಬಾಗಿಲಿನಿಂದ ಕೆಳಕ್ಕಿಳಿವ ಮೂರು-ನಾಲ್ಕು ಎತ್ತರೆತ್ತರದ ಮೆಟ್ಟಿಲುಗಳು. ಅದರ ಎದುರಿನಲ್ಲಿ ಸಗಣಿ ಹಾಕಿ ಸಾರಿಸಿದ ನೆಲ. ದೊಡ್ಡದೊಂದು ರಂಗೋಲಿ. ಅಂಚಿನಲ್ಲಿ ಕೆಮ್ಮಣ್ಣು. ಆ ರಂಗೋಲಿಯ ಆಚೆಗೆ ಹುಡುಗಿಯೊಬ್ಬಳು ನಿಂತಿದ್ದಾಳೆ. 14-15 ವರ್ಷಗಳಿರಬೇಕು. ಕೂದಲನ್ನು ತಿರುಗಿಸಿ, ಕೈಯಿಂದಲೇ ಸಿಂಬೆ ಸುತ್ತಿದ್ದ ಗಂಟು ಕಳಚಿ ಕೂದಲು ಹಾರಾಡುತ್ತಿವೆ. ಹುಡುಗಿ ಸಿಟ್ಟಿನಿಂದ ಬೆನ್ನು ನೇರವಾಗಿಸಿ ನಿಂತ ನಿಲುವಿಗೆ ಅವಳ ಸಹಜ ಎತ್ತರಕ್ಕಿಂತ ಉದ್ದ ಕಾಣುತ್ತಿದ್ದಾಳೆ. ಉಟ್ಟ ಮಾಸಲು ಸೀರೆ. ಎಡಗೈ ಕಂಕುಳಿನಲ್ಲಿ ಒಂದು ಬಟ್ಟೆಯ ಗಂಟು. ಮುಖ ಕಲಸಿದಂತೆ ಅಸ್ಪಷ್ಟ, ಕಣ್ಣುಗಳಿರಬೇಕಾದ ಕಡೆ ಎರಡು ಕೆಂಡದುಂಡೆಗಳು. ಮುಚ್ಚಿದ ಬಾಗಿಲನ್ನೇ ಸುಡುವಂತೆ ನೋಡುತ್ತಿದ್ದಾಳೆ. ನೆಲಕ್ಕೆ ಬಗ್ಗಿದವಳು ಒಂದು ಹಿಡಿ ಮಣ್ಣು ಗೋಚಿಕೊಂಡು, ಕಣ್ಣೀರು ಸುರಿಸುತ್ತಾ, ಬಾಗಿಲ ಕಡೆ ತೂರಿ ಹೇಳುತ್ತಾಳೆ,
‘ಈ ಮನೆ ಹೆಣ್ಣುಮಕ್ಕಳು ಯಾವತ್ತಿಗೂ ಸುಖವಾಗಿರದಿರಲಿ. ಇದು ನನ್ನ ಶಾಪ!’

`ಶಾಪ!’ – ಉಸಿರು ಕಟ್ಟಿದಂತಾಗಿ ಸರೋಜಿನಿ ತಟ್ಟನೆ ಎದ್ದು ಕುಳಿತಳು. ಫ್ಯಾನ್ ಕ……ರ್, ಕ……ರ್ ಎಂದು ಸದ್ದು ಮಾಡುತ್ತಾ ತಿರುಗುತ್ತಿತ್ತು. ಆದರೂ ಮುಖವೆಲ್ಲಾ ಬೆವರಿನಿಂದ ತೊಯ್ದು ಹೋಗಿದೆ. ಕಂಕುಳು ಒದ್ದೆಮುದ್ದೆ. ಅದೇ ಕನಸು. ಅವಳು ಸಣ್ಣವಳಾಗಿದ್ದಾಗ ಆ ಕಥೆ ಕೇಳಿದಾಗಿನಿಂದ ಸರಿರಾತ್ರಿಗಳಲ್ಲಿ ಕನಸಾಗಿ, ಎಚ್ಚರವಿದ್ದಾಗ ನೆನಪಾಗಿ ಹೆದರಿಸುವ ಅದೇ ಶಾಪದ ಕನಸು. ಇದನ್ನು ಮೊದಲು ಯಾರು ಹೇಳಿದರು ಎನ್ನುವುದು ಅವಳಿಗೆ ನೆನಪಿಲ್ಲ. ಯಾವಾಗಲೂ ಏನಾದರೊಂದು ಹಳೆಯ ಕಥೆ ಹೇಳುತ್ತಿದ್ದ ದೊಡ್ಡಮ್ಮ ಹೇಳಿದ್ದರೆ, ಅಳುವನ್ನೇ ಕಣ್ಣಕಾಡಿಗೆ ಮಾಡಿಕೊಂಡಿದ್ದ ಸೋದರತ್ತೆ ಹೇಳಿದ್ದರೆ ಅಥವಾ ಯಾವುದೋ ಸಮಾರಂಭದಲ್ಲಿ ರಾತ್ರಿ ಜಮಖಾನ ಹಾಸಿಕೊಂಡು ಹೆಂಗಸರೆಲ್ಲಾ ಉದ್ದಕ್ಕೂ ಮಲಗಿದ್ದಾಗ ಯಾವುದೋ ದನಿ ಹೇಳಿದ್ದ ಕಥೆಯೇ …ನೆನಪಿಗೆ ಬರುತ್ತಿಲ್ಲ. ಆದರೆ ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು? ಹಾಗಾಗಿ ಅಕಸ್ಮಾತ್ ಒಂದು ವೇಳೆ ಯಾವುದೇ ಕಾರಣಕ್ಕೆ ಮದುವೆ ತಡವಾದಾಗ ಕೆಲವರು ಹುಡುಗಿ ನೆರೆದಿದ್ದಾಳೆ ಎನ್ನುವುದನ್ನು ಮುಚ್ಚಿಟ್ಟು, ಮದುವೆ ಮಾಡಿಬಿಟ್ಟು ಮದುವೆಯಾಗಿ ಒಂದು ವರ್ಷವಾದ ನಂತರ ಹುಡುಗಿ ದೊಡ್ಡವಳಾದಳು ಎಂದು ಹೇಳಿಕಳಿಸುತ್ತಿದ್ದರಂತೆ.

ಅದು ಸ್ವಂತ ಮಕ್ಕಳ ವಿಷಯಕ್ಕಾಯಿತು. ಆದರೆ ಮನೆಯಲ್ಲಿ ಎಲ್ಲ ಕೆಲಸಕ್ಕೂ ಒದಗುತ್ತಿದ್ದ ಈ ಹುಡುಗಿಗೆ ಬೇಗನೆ ಮದುವೆ ಮಾಡುವ ಆತುರ ಯಾರಿಗಿದ್ದೀತು? ಒಂದಾದ ಮೇಲೆ ಒಂದರಂತೆ ಮನೆ ಹೆಣ್ಣುಮಕ್ಕಳ ಮದುವೆಗಳಾಗುತ್ತಿವೆ. ಈ ಹುಡುಗಿ ಎಲ್ಲಾ ಮದುವೆಗಳಲ್ಲೂ ನೀರು ಸೇದುವ, ಹೂ ಕಟ್ಟುವ, ಕಸಮುಸುರೆ ಬಳಿಯುವ, ಒಲೆ ಎದುರಲ್ಲಿ ಬೇಯುವವಳಾದಳೇ ಹೊರತು ಮದುಮಗಳಾಗಲೇ ಇಲ್ಲ. ಕಡೆಗೊಮ್ಮೆ ಅವಳೂ ನೆರೆದಿದ್ದಾಳೆ. ಮನೆಯವರು ಅದನ್ನು ಮುಚ್ಚಿಡುವ ಯಾವುದೇ ಪ್ರಯತ್ನ ಮಾಡದೆ, ಸಂಪ್ರದಾಯದ ಹೆಸರು ಹೇಳಿ, ಅವಳ ಬಟ್ಟೆ ಗಂಟು ಕಟ್ಟಿ, ಬುತ್ತಿ ಕೊಟ್ಟು ಅವಳನ್ನು ಮನೆಯಿಂದ ಕಳಿಸಿಬಿಟ್ಟರಂತೆ. ಅಷ್ಟು ವರ್ಷಗಳು, ಅಷ್ಟು ಕೆಲಸ ಮಾಡುತ್ತಿದ್ದ ಇವಳನ್ನು ಹೊರಕ್ಕೆ ದಬ್ಬುವಾಗ ಮನೆಯ ಹೆಣ್ಣುಮಕ್ಕಳಲ್ಲಿ ಯಾರೂ ಪಿಟ್ ಎನ್ನಲಿಲ್ಲ, ಒಬ್ಬೊಬ್ಬರ ಕಾಲಿನ ಬಳಿ ಬಿದ್ದು ಬೇಡಿಕೊಂಡರೂ ಕರಗಲಿಲ್ಲ. ಕಣ್ಣೀರು ಹಾಕುತ್ತಾ ಹೋದ ಹುಡುಗಿ,
‘ಈ ಮನೆಯ ಹೆಣ್ಣುಮಕ್ಕಳು ಎಂದಿಗೂ ಸುಖವಾಗಿರದಿರಲಿ’
ಎಂದು ಶಾಪ ಕೊಟ್ಟು ಹೋದಳಂತೆ.

(ಕೃತಿ: ಇಷ್ಟುಕಾಲ ಒಟ್ಟಿಗಿದ್ದು (ಕಾದಂಬರಿ), ಲೇಖಕರು: ಎನ್.ಸಂಧ್ಯಾರಾಣಿ, ಪ್ರಕಾಶಕರು: ಸಾವಣ್ಣ ಪ್ರಕಾಶನ, ಬೆಲೆ: 250/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ