Advertisement
“ಗೇದುಣ್ಣುವವರೇ ಬದುಕದ ಕಾಲದಲ್ಲಿ ಹುಟ್ಟುವ ಕತೆಗಳಾದರೂ ಉಳಿಯುತ್ತವೆ”: ಹೃದಯ ಶಿವ ಕಥಾಸಂಕಲನಕ್ಕೆ ಸ್ವಾಮಿ ಪೊನ್ನಾಚಿ ಬರಹ

“ಗೇದುಣ್ಣುವವರೇ ಬದುಕದ ಕಾಲದಲ್ಲಿ ಹುಟ್ಟುವ ಕತೆಗಳಾದರೂ ಉಳಿಯುತ್ತವೆ”: ಹೃದಯ ಶಿವ ಕಥಾಸಂಕಲನಕ್ಕೆ ಸ್ವಾಮಿ ಪೊನ್ನಾಚಿ ಬರಹ

ಹೃದಯಶಿವ ಅವರ ಕಥೆಗಳನ್ನು ಓದುವ ಕುತೂಹಲದ ಮಜವೇ ಬೇರೆ. ಕನಕಪುರದ ಕೆಬ್ಬರೆ ಗ್ರಾಮದಲ್ಲಿ ಶುರುವಾದ ಕಥೆ ಬೆಂಗಳೂರಿನ ಸಿನಿಮಾರಂಗದಲ್ಲಿ ಬಂದು ನಿಲ್ಲುತ್ತದೆ. ವೈಯಕ್ತಿಕ ದನಿಯ ಆಚೆಗೆ ಕತೆಗಳು ವಿಸ್ತಾರಗೊಳ್ಳುತ್ತಾ ಸಮಷ್ಟಿಯೆಡೆಗೆ ಹೋಗುತ್ತವೆ. ಬದುಕಿನ ಪರಸ್ಪರ ವೈರುಧ್ಯಗಳೇ ಹೆಚ್ಚು ಕಥೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಥೆ ಓದುವಾಗ ಶುರುವಾಗುವ ನೆಗೆಟಿವ್ ಕಾಂಪ್ಲೆಕ್ಸ್ ಕೊನೆಯಲ್ಲಿ ಪಾಸಿಟಿವ್ ಆಗಿರುತ್ತದೆ. ಭರವಸೆ, ಆಶಾಭಾವ ಕಥೆಗಳಲ್ಲಿ ವ್ಯಕ್ತವಾಗುತ್ತವೆ. ಬಹುಶಃ ತನ್ನ ಆಲೋಚನ ಕ್ರಮ ಮತ್ತು ತನ್ನನ್ನು ಪಾಸಿಟಿವ್ ಎನರ್ಜಿಗೆ ಟ್ಯೂನ್ ಮಾಡಿಕೊಳ್ಳಲು ಕತೆಗಾರ ಬಳಸಿದ ತಂತ್ರದಿಂದ ಕವಿತೆಗಳಂತೆ ಕಥೆಗಳು ಕಟ್ಟಿಸಿಕೊಂಡಿವೆ ಎಂದರೆ ತಪ್ಪಾಗಲಾರದು.
ಹೃದಯ ಶಿವ ಹೊಸ ಕಥಾಸಂಕಲನ “ಸೂಪರ್ ಗಾಡ್ ಸಣ್ಣಯ್ಯ” ಕೃತಿಗೆ ಸ್ವಾಮಿ ಪೊನ್ನಾಚಿ ಮುನ್ನುಡಿ

ಕಥೆ ಎನ್ನುವುದೇ ಸೋಜಿಗ. ಎಲ್ಲಿ, ಯಾವಾಗ, ಯಾರಲ್ಲಿ, ಹೇಗೆ ಹುಟ್ಟಿಕೊಳ್ಳುವುದೋ ಕಾಣೆ. ಕನ್ನಡದ ಕಥಾ ಪರಂಪರೆಗೆ ಬಹಳ ವರ್ಷಗಳ ಇತಿಹಾಸವಿದ್ದರೂ ಅಧಿಕೃತವಾಗಿ ಗುರುತಿಸುವುದು ಮಾತ್ರ ಪಂಜೆಯವರಿಂದ. ವಡ್ಡಾರಾಧನೆಯ ಕತೆಗಳು ಇದಕ್ಕೆ ಸೇರಿದರು ಧಾರ್ಮಿಕ ಹಿನ್ನೆಲೆಯಲ್ಲಿ ಅಷ್ಟೂ ಕತೆಗಳು ಬರುವುದರಿಂದ ಸಣ್ಣಕತೆಗಳ ಕಾಲಘಟ್ಟದಲ್ಲಿ ಹೇಳಿ, ಹೇಳಿಯೂ ಇಲ್ಲದಂತಿರಿಸಿದ್ದೇವೆ. ಸಣ್ಣಕತೆಗಳಿಗೆ ನಿರ್ದಿಷ್ಟ ಚೌಕಟ್ಟು ಒದಗಿಸಿ ಹೊಸ ಪರಂಪರೆಗೆ ನಾಂದಿ ಹಾಡಿದವರು ಮಾಸ್ತಿ. ಇದಕ್ಕೂ ಮೊದಲು ಕಥೆಗಾರರು ಇರಲಿಲ್ಲವಾ ಅಂತಲ್ಲ. ಬಾಯಿಂದ ಬಾಯಿಗೆ ಬಂದಂತಹ ಅದ್ಭುತವಾದ ಮೌಖಿಕ ಕಥಾ ಪರಂಪರೆಯೇ ನಮ್ಮಲ್ಲಿದೆ. ಅಜ್ಜಿಯು ಈ ಎಲ್ಲ ಕತೆಗಳ ತಾಯಿ ಎನ್ನಬಹುದು. ಕತೆ ಎಂದಾಕ್ಷಣ ಅಜ್ಜಿಕತೆಗಳು ಎನ್ನಬಹುದೇನೋ!? ಅಷ್ಟರಮಟ್ಟಿಗೆ ಪರಿಚಿತಳು. ಭಟ್ಟಿ ವಿಕ್ರಮನ ಕಥೆ, ರತ್ನಮಂಜರಿಯಂತಹ ಫ್ಯಾಂಟಸಿ ರೂಪದ ಕಥೆಗಳು ನಮ್ಮನ್ನು ರಂಜಿಸಿವೆ. ಹಾಗೆ ನೋಡಿದರೆ ಲೆಕ್ಕವಿಲ್ಲದಷ್ಟು ಕಥೆಗಾರರು ಮತ್ತು ಅವರೊಳಗಿನ ಕಥೆ ಕಾಲಗರ್ಭದಲ್ಲಿ ಲೀನವಾಗಿ ಹೋಗಿವೆ. ಅವರೆಲ್ಲರನ್ನು ಪ್ರತಿನಿಧಿಸುವಂತೆ ಅಕ್ಷರ ಕಲಿತ ನಾವು ನಾಲ್ಕು ಕಥೆ ಬರೆದು ಕಥೆಗಾರರು ಎನಿಸಿಕೊಂಡು ತಲೆಯ ಮೇಲೆ ಒಂದು ಪುಕ್ಕವಿಲ್ಲದ ಕಿರೀಟ ಸಿಕ್ಕಿಸಿಕೊಂಡು ಓಡಾಡುತ್ತಿರುತ್ತೇವೆ. ಅದೇನೆ ಇರಲಿ, ಕನ್ನಡದ ಕಥನದ ದಾರಿ ಕಾಲಪಲ್ಲಟಕ್ಕೆ ಸಿಕ್ಕಿ ಕವಲೊಡೆದು ಅವೇ ಒಂದೊಂದು ಹೆದ್ದಾರಿಗಳಾಗಿ ಹಿಗ್ಗಿ ಕುಗ್ಗಿ ಮತ್ತೆ ಮುಖ್ಯವಾಹಿನಿಗೆ ಸೇರಿಕೊಳ್ಳುವ ಪ್ರಕ್ರಿಯೆ ಇದೆಯಲ್ಲ! ಇದು ಒಮ್ಮೆ ಮಾತ್ರ ಘಟಿಸುವಂತಹುದಲ್ಲ. ಕಾಲಧರ್ಮದ ಆಶಯಕ್ಕೆ ತಕ್ಕಹಾಗೆ ಅದರ ವ್ಯಾಪ್ತಿ ವಿಸ್ತರಿಸುತ್ತಾ ಹೋಗುತ್ತದೆ. ನಾವು, ಒಂದಷ್ಟು ತಂತ್ರ, ಶೈಲಿ, ವಿಧಾನ, ವಸ್ತುಗಳ ಲೆಕ್ಕಹಾಕಿ ಇದು ನವ್ಯದ್ದು, ನವೋದಯದ್ದು, ದಲಿತ -ಬಂಡಾಯ ಪ್ರಗತಿಶೀಲದ್ದು ಎಂದು ವಿಂಗಡಿಸಿ ಅಧ್ಯಯನಕ್ಕೆ ಸುಲಭ ಮಾಡಿಕೊಂಡಿದ್ದೇವೆ. ಅದು ಅನಿವಾರ್ಯ ಕೂಡ.

(ಹೃದಯ ಶಿವ)

ಹಾಗಾದರೆ ಈ ಕಾಲಮಾನದ ಕಥೆಗಳನ್ನು ಏನೆಂದು ಕರೆಯುವುದು? ಅಥವಾ ಯಾವ ಗುಂಪಿಗೆ ಸೇರಿಸುವುದು? ಇವತ್ತಿನ ಕಥೆಗಾರರ ಹುಡುಕಾಟ ಗಮನಿಸುತ್ತಾ ಹೊರಟರೆ ಅದು ಬೇರೆಯದೇ ಜಗತ್ತು. ಇವತ್ತಿನ ಕಥೆಗಳಲ್ಲಿ ಸಾಮೂಹಿಕ ಧ್ವನಿಯನ್ನು ಹುಡುಕಾಡಬೇಕಿದೆ. ನವ್ಯ, ನವೋದಯ ಕಾಲಘಟ್ಟಗಳಲ್ಲಿ ಯಾವುದೇ ಕಥೆಗಳನ್ನು ಓದಿದಾಗಲೂ ಒಂದು ಸಮಷ್ಟೀ ಪ್ರಜ್ಞೆ ಜಾಗೃತವಾಗಿರುತ್ತಿತ್ತು. ಇವತ್ತಿನ ಕಥೆಗಳನ್ನು ಓದುವಾಗ ‘ಸಮಷ್ಠೀದನಿ’ಗಿಂತ ಹೆಚ್ಚು ‘ವೈಯಕ್ತಿಕ ದನಿ’ಯ ಹುಡುಕಾಟವೇ ಎದ್ದು ಕಾಣುತ್ತದೆ. ಲಂಕೇಶರ ಕಥೆಗಳನ್ನು ಓದಿದಾಗ ನವ್ಯಕಾಲಘಟ್ಟದ ಕಲ್ಪನೆ ಬಂದರೆ, ದೇವನೂರು, ಕುಂವೀಯವರ ಕಥೆಗಳನ್ನು ಓದಿದಾಗ ದಲಿತ ಬಂಡಾಯದ ಕಾಲಘಟ್ಟ ಕಣ್ಮುಂದೆ ಬಂದಂತೆ ಇವತ್ತಿನ ಕಥೆಗಳನ್ನು ಓದುವಾಗ ಒಂದು ಕಾಲಘಟ್ಟ ನೆನಪಿಗೆ ಬರುವುದೇ ಇಲ್ಲ. ಯಾವ ಕಾಲಘಟ್ಟಕ್ಕೆ ಸೇರಿಸಬಹುದೆಂಬುದೇ ತಿಳಿಯುವುದಿಲ್ಲ. ಎಲ್ಲವೂ ಸಣ್ಣ ಸಣ್ಣ ಕನ್ನಡಿಯ ಚೂರುಗಳಂತೆ ಭಾಸವಾಗುತ್ತದೆ. ಬಹುಶಃ ಇವೆಲ್ಲವನ್ನು ನೀಟಾಗಿ ಜೋಡಿಸಿದರೆ ಒಂದು ಹೊಸ ಕನ್ನಡಿಯ ರೂಪ ಸಿಗಬಹುದೇನೊ! ಅದರಲ್ಲಿ ಸಮಷ್ಟಿ ಸಿಗದೆ ಭಿನ್ನವಾಗಿರಲೂಬಹುದು. ಇದು ಒಂದು ರೀತಿಯಲ್ಲಿ ಪಾಸಿಟಿವ್ ಹೌದು ಹಾಗೆ ನೆಗೆಟಿವ್ ಕೂಡ. ವ್ಯಕ್ತಿಭಿನ್ನತೆ, ವೈವಿಧ್ಯತೆ ಎದ್ದು ಕಾಣುತ್ತದೆ. ಈ ವ್ಯಕ್ತಿಭಿನ್ನತೆಗಳ ನಡುವೆ ಇರಬೇಕಾದ, ಇರಲೇಬೇಕಾಗಿದ್ದ ಸಾಮೂಹಿಕ ಧ್ವನಿಯನ್ನು ಮಾತ್ರ ಹುಡುಕಲೇ ಬೇಕಾಗಿದೆ. ಈ ಮಾತನ್ನು ಯಾಕೆ ಹೇಳಬೇಕಾಗಿದೆ ಎಂದರೆ ಇವತ್ತಿನ ಕಥೆಗಳಲ್ಲಿ ‘ನಿರ್ಭಿಡತೆ’ ಕಾಣಸಿಗುವುದಿಲ್ಲ. ಬರಹಗಾರನಿಗೆ ಸಹಜವಾಗಿ ಇರಬೇಕಾದ ಒಂದು ‘ಧಿಮಾಕು’ ಇಲ್ಲ. ಇರುವ ಧಿಮಾಕುಗಳೆ ಬೇರೆ!?. ಇದನ್ನು ಬೇಕಾದರೆ ನೀವು ‘ಐಡೆಂಟಿಟಿ ಕ್ರೈಸಿಸ್’ ಅಥವಾ ‘ಅಸ್ಮಿತೆಯ ರಾಜಕಾರಣ’ ಎಂದು ಬೇಕಾದರೆ ಕರೆಯಬಹುದು. ಓದುಗ ಮತ್ತು ಲೇಖಕ ಇಬ್ಬರೂ ಎಚ್ಚರದ ಸ್ಥಿತಿಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಲೇಖಕ ಓದುಗನನ್ನು ಮನಸ್ಸಲ್ಲಿಟ್ಟುಕೊಂಡು ಕಥೆ ಬರೆದರೆ; ಓದುಗ ಯಾವ ಬರಹಗಾರನ ಜೊತೆ ತಾನು ಗುರುತಿಸಿಕೊಳ್ಳಬೇಕೆಂದು ಪ್ರಜ್ಞಾಪೂರ್ವಕವಾಗಿ ಮೊದಲೇ ನಿರ್ಧರಿಸಿಬಿಟ್ಟಿರುತ್ತಾನೆ. ಹಾಗಾಗಿ ಇಲ್ಲಿ ಮುಕ್ತ ಓದು ಮತ್ತು ಮುಕ್ತಬರಹ ಮೇಲ್ನೋಟಕ್ಕೆ ಕಾಣೆಯಾಗಿ ತೇಪೆಹಾಕಿದಂತೆ ಅಲ್ಲಲ್ಲಿ ಗುಂಪು, ವ್ಯಕ್ತಿಪೂಜೆ, ಪ್ರಶಸ್ತಿ ಅದು- ಇದು ಎಂದೆಲ್ಲ ಲಾಭಿಗಳು ಶುರುವಾಗುವ ಅಪಾಯವಿದೆ. ಇದು ಯಾಕೆ ಈಗಾಯಿತು? ನಿರ್ದಿಷ್ಟವಾಗಿ ಹೇಳಲಿಕ್ಕಾಗುವುದಿಲ್ಲ. ಕಥೆಗಾರ ತಾನು ಏನು ಹೇಳ ಹೊರಟಿದ್ದೇನೆ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸುತ್ತಾನೆ. ಲೇಖಕ ಬರೆಯುವಾಗ ಪೂರ್ವಾಗ್ರಹಪೀಡಿತನಾಗದೆ ಬರೆಯುವ ಛಾತಿ ಇರಬೇಕು. ಒಂದು ಅವ್ಯಕ್ತ ಅಮಲಿನೊಳಗೆ ಬರೆಯಬೇಕು. ಆಗ ಮಾತ್ರ ಸಹಜವಾದದ್ದು ವ್ಯಕ್ತವಾಗುತ್ತದೆ. ಇಲ್ಲಿ ತಾನು ಇರುವುದಕ್ಕಿಂತ, ಜೀವಿಸುವುದಕ್ಕಿಂತ ಹೆಚ್ಚಿನದನ್ನು ಹೇಳುವುದು ಮತ್ತು ಸಂಕೋಚದಿಂದ ಮುಚ್ಚಿ ಬರೆಯುವುದು ಕೂಡ ಅಪ್ರಾಮಾಣಿಕತೆಯೇ ಆಗಿದೆ. ಹೀಗಾದಾಗ ಸಹಜವಾಗಿ ಕಥೆಯಲ್ಲಿ ನಿಜವಾದ ಅಸ್ಮಿತೆ ಇರುವುದಿಲ್ಲ. ಬರಹ ಯಾವಾಗಲೂ ‘ನಾಚಿಕೆ’ ಮತ್ತು ‘ನಿರ್ಲಜ್ಜತನ’ದ ನಡುವಿನ ತೆಳು ಗೆರೆಯಂತೆ ಇದ್ದರೆ ಚೆಂದ. ಅದು ಮೀರಿ ಆ ಕಡೆ ಈ ಕಡೆ ವಾಲಿದರೂ ಕೃತಕವಾಗುವುದರ ಜೊತೆಗೆ ಸತ್ವಹೀನವಾಗಿಬಿಡುವ ಸಂಭವ ಹೆಚ್ಚು.

ಇದೆಲ್ಲದರ ಆಚೆಗೂ ಕನ್ನಡದಲ್ಲಿ ಹೊಸಬರು ತುಂಬಾ ಅದ್ಭುತವಾಗಿ ಕಥೆಗಳನ್ನು ಬರೆಯುತ್ತಿದ್ದಾರೆ. ನವ್ಯ, ನವೋದಯ, ದಲಿತ- ಬಂಡಾಯ, ಪ್ರಗತಿಶೀಲತೆ… ಎಲ್ಲ ಲಕ್ಷಣಗಳೂ ಹೊಸಬರ ಕಥೆಗಳಲ್ಲಿವೆ. ಈಗಿನ ಬಹುತೇಕ ಕತೆಗಳ ಸ್ವರೂಪ ಹಳ್ಳಿಯಿಂದ ಶುರುವಾಗಿ ಬೆಂಗಳೂರಿಗೆ ಬಂದು ನಿಲ್ಲುವುದು. ಎರಡು ದಶಕದ ಹಿಂದೆ ಬೆಂಗಳೂರಿನ ಐಟಿ-ಬಿಟಿಯ ಪ್ರಖರತೆ ಈಗ ಇಲ್ಲ. ಸಾಫ್ಟ್ ವೇರ್ ಜಗತ್ತು ತೋರಿಸಿದ ಬೆಂಗಳೂರು ಬೇರೆ. ತುತ್ತು ಕೂಳಿಗಾಗಿ ಬೆಂಗಳೂರನ್ನ ಅರಸಿ ಬಂದವರಿಗೆ ಇದಿರಾದ ಬೆಂಗಳೂರು ಬೇರೆ. ಮಧ್ಯಮ ವರ್ಗದವರ, ಹೆಣ್ಣುಮಕ್ಕಳ, ಉದ್ಯೋಗ ಅರಸಿ ಬಂದವರ, ಜ್ಞಾನಾರ್ಜನೆಗಾಗಿ ಬಂದವರ ಪಾಲಿಗೆ ಬೆಂಗಳೂರು ವಿಶಿಷ್ಠವಾದ ರೀತಿಯಲ್ಲಿ ನಿಲ್ಲುವುದು. ಅಷ್ಟು ಬಗೆಯ ಕಥೆಗಳು ಕನ್ನಡದಲ್ಲಿ ಇನ್ನು ಬರೆಸಿಕೊಳ್ಳುತ್ತಿವೆ. ಇದೆಲ್ಲದರ ಬೇರು ಕರ್ನಾಟಕದ ಯಾವುದೋ ಮೂಲೆಯ ಒಂದು ಹಳ್ಳಿಯಲ್ಲಿ ಭದ್ರವಾಗಿ ನಿಂತಿರುತ್ತದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಹೃದಯಶಿವ ಅವರ ಕಥೆಗಳನ್ನು ಓದುವ ಕುತೂಹಲದ ಮಜವೇ ಬೇರೆ. ಕನಕಪುರದ ಕೆಬ್ಬರೆ ಗ್ರಾಮದಲ್ಲಿ ಶುರುವಾದ ಕಥೆ ಬೆಂಗಳೂರಿನ ಸಿನಿಮಾರಂಗದಲ್ಲಿ ಬಂದು ನಿಲ್ಲುತ್ತದೆ. ವೈಯಕ್ತಿಕ ದನಿಯ ಆಚೆಗೆ ಕತೆಗಳು ವಿಸ್ತಾರಗೊಳ್ಳುತ್ತಾ ಸಮಷ್ಟಿಯೆಡೆಗೆ ಹೋಗುತ್ತವೆ. ಬದುಕಿನ ಪರಸ್ಪರ ವೈರುಧ್ಯಗಳೇ ಹೆಚ್ಚು ಕಥೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಥೆ ಓದುವಾಗ ಶುರುವಾಗುವ ನೆಗೆಟಿವ್ ಕಾಂಪ್ಲೆಕ್ಸ್ ಕೊನೆಯಲ್ಲಿ ಪಾಸಿಟಿವ್ ಆಗಿರುತ್ತದೆ. ಭರವಸೆ, ಆಶಾಭಾವ ಕಥೆಗಳಲ್ಲಿ ವ್ಯಕ್ತವಾಗುತ್ತವೆ. ಬಹುಶಃ ತನ್ನ ಆಲೋಚನ ಕ್ರಮ ಮತ್ತು ತನ್ನನ್ನು ಪಾಸಿಟಿವ್ ಎನರ್ಜಿಗೆ ಟ್ಯೂನ್ ಮಾಡಿಕೊಳ್ಳಲು ಕತೆಗಾರ ಬಳಸಿದ ತಂತ್ರದಿಂದ ಕವಿತೆಗಳಂತೆ ಕಥೆಗಳು ಕಟ್ಟಿಸಿಕೊಂಡಿವೆ ಎಂದರೆ ತಪ್ಪಾಗಲಾರದು. ‘ಒಂದು ಫ್ರೆಂಡ್ ರಿಕ್ವೆಸ್ಟ್’, ‘ಮೊರೆವ ಕಡಲ ಧ್ಯಾನ’, ‘ಬುಂಡೆದಾಸನೆಂಬ ಹುಚ್ಚಯ್ಯ’, ‘ವೈಷ್ಣವಿ ಎಂಬ ಸುಂದರಿ’, ‘ಪ್ರಾಯಶ್ಚಿತ್ತ’, ‘ಕಲ್ಗುಡಿ ಮಠ’ – ಎಲ್ಲವೂ ಸುಖಾಂತಗೊಳ್ಳುತ್ತವೆ. ಕೇಡಿತನಕ್ಕೆಂದೂ ಒಳ್ಳೆಯದಾಗುವುದಿಲ್ಲ ಎನ್ನುವ ಒಟ್ಟಾರೆ ತತ್ವವೇ ಈ ಕಥೆಗಳಲ್ಲಿ ಅಡಗಿವೆ. ಎಲ್ಲಿಯೂ ಬೋರ್ ಹೊಡೆಸದ ಈ ಕಥೆಗಳು ಸರಳ ನಿರೂಪಣೆ ಮತ್ತು ಸಹಜಭಾಷೆಯಿಂದ ನಮ್ಮನ್ನು ಸೆಳೆಯುತ್ತವೆ. ನಗರ ಮತ್ತು ಗ್ರಾಮೀಣ ಬದುಕನ್ನ ಮುಖಾಮುಖಿಯಾಗಿಸಿ ಸೂಕ್ಷ್ಮವಾಗಿ ಗಮನಿಸಿ ಕಥೆಗಳಿಗೆ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆಯ್ಕೆ ಅನ್ನುವುದಕ್ಕಿಂತ ಅವೆಲ್ಲವೂ ಅವರ ಅನುಭವಗಳೇ ಕ್ರಮವಾಗಿ ಕಥೆಗಳಾಗಿ ರೂಪಾಂತಗೊಂಡಂತಿವೆ. ಕನ್ನಡ ಚಲನಚಿತ್ರರಂಗಕ್ಕೆ ಪ್ರಸಿದ್ಧ ಗೀತೆಗಳನ್ನು ಕೊಟ್ಟ ಹೃದಯಶಿವ ಅವರು ಗೀತರಚನೆಕಾರರಾಗಿ ಎಲ್ಲರಿಗೂ ಪರಿಚಿತ. ಅವರ ಕಥನಗಳು ಕೂಡ ಅವರ ಹಾಡುಗಳಂತೆ ಓದುಗರ ಎದೆ ತಟ್ಟಬಲ್ಲವು ಎಂಬ ವಿಶ್ವಾಸವಿದೆ.. ಸಾಮಾಜಿಕ ಜಾಲತಾಣದ ಅವಾಂತರಗಳು ನಮ್ಮೆಲ್ಲರಿಗೂ ಗೊತ್ತೇ ಇದೆ. ‘ಅತಿ ಬೇಗನೆ ಹುಟ್ಟಿಕೊಳ್ಳುವ ಸಂಬಂಧ ಬಹುಬೇಗನೆ ಹಾಳಾಗಿಬಿಡುತ್ತದೆ. ಆದರೆ ಇಲ್ಲಿ ಭೌತಿಕವಾಗಿ ದೇಹಗಳು ದೂರವಾದರು ಸ್ಮಶಾನದಲ್ಲಿ ಒಂದಾಗುವ ಪ್ರೀತಿಗೆ ವರ್ಷಧಾರೆಯನ್ನೇ ಕರೆತರಿಸಿ ಅದಕ್ಕೊಂದು ಅಲೌಕಿಕ ಅಂಶದ ಎಳೆಯನ್ನ ಎಳೆದು ತಂದಿದ್ದಾರೆ. ಸ್ಮಶಾನವೆಂಬುದು ಲೌಕಿಕ ಜಗತ್ತಿಗೆ ಮೈಲಿಗೆಯಾದರೆ ನಿಜವಾದ ಆತ್ಮಜ್ಞಾನ ಪ್ರೇಮಿಗಳಿಗೆ ಆವಿರ್ಭವಿಸಿರುವುದು ಅಲ್ಲಿಯೇ…!

‘ಸುಶೀಲಾ’ ಕಥೆಯಲ್ಲಿ ಬರುವ ಸುಶೀಲಾ ತನ್ನ ಗತಕಾಲದ ಪ್ರೇಮಿಯ ನೆನೆದು ತನ್ನ ಸುಶೀಲವನ್ನ ಕಳೆದುಕೊಂಡು ನಂತರ ದುಃಖಿಸುವುದು.. ಇಂದಿನ ಮಾಧ್ಯಮಗಳ ಹಾವಳಿಗೆ ಸಿಕ್ಕಿ ಬಳಲುವ ಅದೆಷ್ಟೋ ಹೆಣ್ಣುಮಕ್ಕಳ ಮನಸ್ಥಿತಿಯನ್ನ ಸುಶೀಲ ಮೂಲಕ ಸಾಂಕೇತಿಕವಾಗಿ‌ ಹೇಳಲು ಹೊರಟಿದ್ದಾರೆ. ತನ್ನ ಬಳಿಯಿರುವ ವಜ್ರವು ಕಲ್ಲೆಂದು.. ಹೊಳೆಯುವ ಕಾಗೆಬಂಗಾರವನ್ನು ವಜ್ರವೆಂದು ನಂಬಿ ಮಂಕುಬುದ್ದಿಯಿಂದ ಹೊರಟ ಸುಶೀಲೆಯ ಕತೆ ಇಂದಿನ ಕಾಲಘಟ್ಟಕ್ಕೆ ಹೆಣ್ಣುಮಕ್ಕಳು ಓದಲೇಬೇಕಾದ ಕತೆಯಾಗಿದೆ. ‘ಮೊರೆವ ಕಡಲ ಧ್ಯಾನ’ ಒಬ್ಬ ವ್ಯಕ್ತಿಯ ಎರಡು ಮುಖಗಳ ಅನಾವರಣದ ಕಥೆ. ಒಂದೇ ತಂದೆಯ ಮಕ್ಕಳು ತಮ್ಮ ಅಮ್ಮ – ಅಪ್ಪನ ನಡುವೆ ನಡೆದ ಎಲ್ಲಾ ಘಟನೆಗಳಿಗೂ ಸಾಕ್ಷಿಯಾಗುತ್ತಾ ತಮ್ಮನ್ನು ಸರಿ ತಪ್ಪುಗಳ ನಡುವೆ ತಂದಿರಿಸಿ ಅಪ್ಪನ ಹೆಚ್ಚುಗಾರಿಕೆಯ ನಡುವೆ ತಾನು ಏನೆಂದು ನಿರೂಪಿಸುವ ಸೋಜಿಗದ ತಿರುವು ಈ ಕತೆಯಲ್ಲಿದೆ. ಇನ್ನು ‘ಗೇದುಣ್ಣೋರಿಗೆ ಉಳಿಗಾಲವಿಲ್ಲ…’ ಗಾದೆಯಂತೆ ಬುಂಡೇದಾಸನ ವ್ಯಕ್ತಿತ್ವವನ್ನು ತತ್ವಜ್ಞಾನಿಯಂತೆ ಕಟ್ಟಿಕೊಡುತ್ತಾರೆ. ಇವನ ವ್ಯಕ್ತಿತ್ವವನ್ನು ಗಮನಿಸುತ್ತಾ ಕಥೆಗಾರ ದಾರ್ಶನಿಕನಾಗಿಬಿಟ್ಟನೇ! ಎನಿಸದಿರದು. ಎಲ್ಲಾ ಗೊತ್ತಿದ್ದರೂ ಈ ಬರಗೆಟ್ಟ ಜಗತ್ತಿನಿಂದ ದೂರವಿರಬೇಕೆಂದುಕೊಂಡು ಸುಮ್ಮನಿರುವ ಬುಂಡೆದಾಸನನ್ನು ಈ ಜಗತ್ತು ದಡ್ಡ, ಅಜ್ಞಾನಿ ಎಂದುಕೊಳ್ಳುತ್ತದೆ. ಆದರೆ ವಾಸ್ತವವಾಗಿ ತಾವೇ ಅಜ್ಞಾನಿಗಳಾಗಿರುತ್ತಾರೆ ಎಂಬುದು ಕತೆಯ ಕೊನೆಯಲ್ಲಿ ಪಡೆದುಕೊಳ್ಳುವ ತಿರುವುಗಳಿಂದ ಗೊತ್ತಾಗುತ್ತದೆ. ಮೂಢನಂಬಿಕೆಯನ್ನು ಕಟ್ಟುಕಥೆ ಎಂದು ಸಾರುವ ಬುಂಡೇದಾಸನಿಗೆ ಕೇಡುಗಾಲ ಸಮೀಪಿಸಿದೆ ಎಂದು ಅಂದುಕೊಂಡವರೇ ಹೆಚ್ಚು. ಕೊನೆಗೆ ಅವನ ಬಳಿ ಕೂತು ತಮ್ಮ ಬದುಕು ಬವಣೆ ಎಲ್ಲವನ್ನು ಹೇಳಿಕೊಂಡು ಸಾಂತ್ವನಗೊಳಿಸಿಕೊಳ್ಳುತ್ತಾರೆ. ಬುಂಡೆದಾಸ ರಮಣ ಮಹರ್ಷಿಗಳ ‘ಚುಮ್ಮಾಯಿರು’ ಎನ್ನುವ ತಂತ್ರ ಒಂದನ್ನು ಪಾಲಿಸಿ ದೊಡ್ಡ ವ್ಯಕ್ತಿಯಾಗುತ್ತಾನೆ. ಖಾಲಿಡಬ್ಬಗಳಂತೆ ಸದ್ದು ಮಾಡುವ ನಮ್ಮ ಹುಂಬತನವನ್ನು ಕಥೆ ಬಯಲು ಮಾಡುತ್ತದೆ.

‘ವೈಷ್ಣವಿ ಎಂಬ ಸುಂದರಿ’ ಸಿನಿಮಾ ರಂಗವನ್ನು ಪ್ರತಿನಿಧಿಸುವ ಕಥೆ. ಚೈತ್ರಾ ಬಗೆಯ ಗೆಳತಿಯರು ಅಧ್ವಾನಕ್ಕೂ ಮತ್ತು ಉದ್ದಾರಕ್ಕೂ ಇರುವ ಮಧ್ಯವರ್ತಿಗಳಂತೆ ಕಾಣುತ್ತಾರೆ. ಆಮಿಷಕ್ಕೆ ಬಲಿಯಾಗದ ಆದರ್ಶವಿದ್ದ ಅಚಲ ನಿರ್ಧಾರದ ಹೆಣ್ಣು ಮಗಳ ಪ್ರತಿಭೆಗೆ ಕೊನೆಗೂ ನಟನೆಗೆ ಅವಕಾಶ ಸಿಗುತ್ತದೆ. ಮೈಮಾಟವನ್ನೇ ಅಥವಾ ಹಾಸಿಗೆ ಹಂಚಿಕೊಳ್ಳುವುದನ್ನೇ ಪ್ರತಿಭೆ ಎಂದುಕೊಂಡು ಬೇಗ ಯಶಸ್ಸು ಕಾಣಲು ತವಕಿಸುವ ಹೆಣ್ಣುಮಕ್ಕಳು ಈ ಕಥೆಯನ್ನು ಖಂಡಿತ ಓದಲೇಬೇಕು.

ಅಕ್ರಮ ಸಂಬಂಧ ಇಟ್ಟುಕೊಂಡ ಹೆಣ್ಣುಮಗಳು ನ್ಯಾಯಬೇಕೆಂದು ಲಾಯರ್ ಆದ ಗಂಡನನ್ನೇ ಹುಡುಕಿ ಹೋಗುವ ಕಥೆ ಮಾತ್ರ ಹೆಸರೇ ಹೇಳುವಂತೆ ‘ಪ್ರಾಯಶ್ಚಿತ್ತ’ ಮಾಡಿಕೊಳ್ಳಲು ಸುಲಭವಾಗಿ ಹುಡುಕಿಕೊಳ್ಳುವ ಮಾರ್ಗ.

(ಸ್ವಾಮಿ ಪೊನ್ನಾಚಿ)

‘ಅವಳು ಒಳ್ಳೆ ತಾಯಿಯಾದಳು, ನಾನು ಒಳ್ಳೆ ಮಗನಾಗಲಿಲ್ಲ’ ಎಂದು ಬೀರಯ್ಯನಿಂದ ತಾಯಿಯ ಕುರಿತು ಕಥೆಗಾರರು ಹೇಳಿಸಿದ ಮಾತು ನಾವು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ. ಹೊನ್ನಮ್ಮನಂತೆ ಎಲ್ಲರ ಬದುಕಿನಲ್ಲಿ ಒಬ್ಬ ಮಹಾತಾಯಿ ಇದ್ದೇ ಇರುತ್ತಾಳೆ. ಪರಿಸ್ಥಿತಿಯ ಒತ್ತಡ ನಮ್ಮ ಜೀವನದಲ್ಲಿಯೂ ಬೀರಯ್ಯನ ಹೆಂಡತಿಯ ತರಹದ ಒಂದೊಂದು ವ್ಯಕ್ತಿತ್ವ ಜೊತೆಯಲ್ಲಿ ತಳಕು ಹಾಕಿಕೊಂಡು ಬೀರಯ್ಯನಂತೆ ಹಲುಬುವ ಹಾಗೆ ಮಾಡಬಲ್ಲದು ಅಥವಾ ಮಾಡದೆಯೂ ಇರಬಹುದು. ಶೀಲ ಶಂಕಿಸಿ ಮೊದಲನೇ ಹೆಂಡತಿಯನ್ನ ಬಿಟ್ಟ ವ್ಯಕ್ತಿ, ಎರಡನೇ ಹೆಂಡತಿಯ ಕಾಟದಿಂದ ವಿಮೋಚಿತನಾಗಿ ಒಮ್ಮೆಯಾದರೂ ಮೊದಲ ಹೆಂಡತಿಯನ್ನು ಮಾತನಾಡಿಸಿ ಕ್ಷಮೆ ಕೇಳಬೇಕೆಂದು ಕಾಯುತ್ತಲೇ ಇರುತ್ತಾನೆ. ಕೊನೆಗೆ ಅವಳ ಸಾವಿನಿಂದ ಕತೆ ಅಂತ್ಯವಾಗುತ್ತದೆ. ಬೇರೊಬ್ಬಳೊಂದಿಗೆ ಮದುವೆ ನಿಶ್ಚಯವಾಗಿರುವ ವಿಷಯ ಗೊತ್ತಾಗಿಯೂ ತನ್ನನ್ನು ತನ್ನ ಪ್ರಿಯಕರನಿಗೆ ಅರ್ಪಿಸಿಕೊಳ್ಳುವ ಲೀಸಾಳ ರಾತ್ರಿ ಕತೆ, ಮನುಷ್ಯ ಸ್ವಾಭಿಮಾನಿಯಾದಷ್ಟೂ ಜೀವನ ದುಸ್ತರ ಅನಿಸುತ್ತದೆಂದು ಸಿಂಪಲ್ಲಾಗಿ ಜೀವನದರ್ಶನ ಮಾಡಿಸುವ ‘ಕಲ್ಗುಡಿ ಮಠ’ – ಇವೆಲ್ಲ ಕಥೆಗಳೂ ನಮ್ಮನ್ನು ಕಾಡುತ್ತವೆ.

ಕಥಾಸಂಕಲನದ ಶೀರ್ಷಿಕೆಯ ಕಥೆ ‘ಸೂಪರ್ ಗಾಡ್ ಸಣ್ಣಯ್ಯ’ ಒಂದು ಕಾದಂಬರಿಗೆ ಸಾಕಾಗುವಷ್ಟು ಸರಕನ್ನ ಒಳಗೊಂಡಿರುವ ಕತೆ. ಅಷ್ಟು ಸಂಗತಿಗಳನ್ನು ಒಂದೇ ಕಥೆಯಲ್ಲಿ ಹೇಳಿದ್ದು ಕಥೆಗಾರನ ಪ್ರತಿಭೆ. ಘಟನೆಗಳು ಒಂದಕ್ಕೊಂದು ಜೋಡಿಸಿಕೊಂಡು ಕಾರ್ಯಕಾರಣ ಸಂಬಂಧವೊಂದೇ ಇಡೀ ಕತೆಯನ್ನು ಗಟ್ಟಿ ಮಾಡುತ್ತದೆ. ಪ್ರಭುತ್ವ ಮತ್ತು ಧರ್ಮಗುರು ಸೇರಿಕೊಂಡು ಸಾಮಾನ್ಯರನ್ನು ಕಾಲದಿಂದಲೂ ಯಾಮಾರಿಸುತ್ತಲೇ ಬಂದಿದ್ದಾರೆ. ಚಿಕ್ಕಮಲ್ಲೇಗೌಡರಂತಹ ರಾಜಕೀಯ ಪುಡಾರಿಗಳು ಎಲ್ಲಾ ಕಾಲಕ್ಕೂ ಇದ್ದವರೇ! ಸದ್ದಿಲ್ಲದೆ ಸೇಡು ತೀರಿಸಿಕೊಳ್ಳಲು ಹೋಗಿ ಇಲ್ಲದ ಅವಾಂತರ ಮಾಡಿಕೊಳ್ಳುವ ಸಿಂಗ್ರಯ್ಯ ನಾವೂ ಆಗಿರುತ್ತೇವೆ. ‘ಪೂರ್ಣಿಮಾಳ ಭರವಸೆ’ ಕತೆ ಕೂಡ ಬದುಕಿನಲ್ಲಿನ ಆಶಾವಾದ ಭಾವನೆಯನ್ನು ಧೃಡೀಕರಿಸುತ್ತದೆ.‌

ಮೇಲ್ನೋಟಕ್ಕೆ ಹೃದಯಶಿವ ಅವರ ಈ ಕಥಾ ಸಂಕಲನದಲ್ಲಿನ ಕತೆಗಳ ಪರಿಚಯವನ್ನು ಹೀಗೆ ಮಾಡಿಕೊಟ್ಟರೂ ಇಲ್ಲಿನ ಕಥೆಗಳು ಸೂಕ್ಷ್ಮವಾಗಿ ನಮ್ಮ ಅಂತರಾಳವನ್ನು ಕೆದಕುತ್ತವೆ. ಒಂದು ಕಾಲನ್ನು ಬೆಡಗಿನಲೋಕ ಸಿನಿಮಾ ರಂಗದಲ್ಲಿಯೂ ಮತ್ತೊಂದು ಕಾಲನ್ನು ತನ್ನ ಪ್ರೀತಿ ಪಾತ್ರ ಹಳ್ಳಿಯಲ್ಲೂ ಇಟ್ಟುಕೊಂಡು ಎರಡನ್ನು ಸಮೀಕರಿಸಿ ನೋಡುವ ಜಿಜ್ಞಾಸೆಯಲ್ಲಿ ಈ ಕಥೆಗಳು ಹುಟ್ಟಿಕೊಂಡಿವೆ ಅನಿಸುತ್ತದೆ. ನಮ್ಮಲ್ಲಿ ಎಷ್ಟೋ ಸಲ ಹುಟ್ಟುವ ಜಿಜ್ಞಾಸೆಯುಕ್ತ ಪ್ರಶ್ನೆಗಳಿಗೆ ಇವರ ಕಥೆಗಳಲ್ಲಿ ನಿಜಕ್ಕೂ ಉತ್ತರವಿದೆ. ಮೇಲ್ನೋಟಕ್ಕೆ ಸಿನಿಮೀಯ ಧಾಟಿಯಲ್ಲಿ ಸರಳವಿದ್ದಂತೆ ಕಂಡರೂ ಕಥೆಗಳು ಹೊಮ್ಮಿಸುವ ಧ್ವನಿ ಯಾವ ತತ್ವ-ಸಿದ್ಧಾಂತಗಳಿಗೂ ಕಡಿಮೆ ಇಲ್ಲ. ಮೊದಲೇ ಹೇಳಿದಂತೆ ಹೃದಯಶಿವ ಅವರು ನಿರ್ಭಿಡೆಯಿಂದ ನಿರ್ಲಿಪ್ತವಾಗಿ ಬರೆಯುವ ಕಥೆಗಾರ. ಇಲ್ಲಿ ಯಾರನ್ನೂ ಮೆಚ್ಚಿಸುವ ಅಥವಾ ಟೀಕಿಸುವ ಇರಾದೆಯಿಲ್ಲ. ಇಲ್ಲಿ ಮುಚ್ಚಿಡುವ ಸಂಗತಿಗಳು ಯಾವುದೂ ಇಲ್ಲ, ಮುಚ್ಚಿಟ್ಟು ಬರೆಯಲೂ ಇಲ್ಲ. ತಮ್ಮ ಗ್ರಹಿಕೆಗೆ ಸಿಕ್ಕ ಮತ್ತು ಗ್ರಹಿಕೆಗೆ ನಿಲುಕದ ಎಷ್ಟೋ ಸಂಗತಿಗಳನ್ನು ಕತೆಯಾಗಿಸುತ್ತಾ ಹೋಗಿದ್ದಾರೆ. ನಗರ ಮತ್ತು ಗ್ರಾಮೀಣ ಬದುಕಿನ ವಿವಿಧ ಮುಖಗಳನ್ನು ಇದುವರೆವಿಗೂ ಬೇಕಾದಷ್ಟು ಮಂದಿ ಅನಾವರಣಗೊಳಿಸಿದ್ದಾರೆ. ಆದರೆ ಹೃದಯಶಿವ ಅವರು ನೋಡುವ ದೃಷ್ಟಿಯೇ ಬೇರೆ. ಎಲ್ಲಿಯೂ ಹುಳುಕುಗಳನ್ನು ಹುಡುಕದ ಇವರು ಕತೆಯನ್ನು ಸಂಭ್ರಮಗೊಳಿಸಿ… ಅದೇ ಖುಷಿಯನ್ನು ಓದುಗರಿಗೆ ಮುಟ್ಟುವಂತೆ ಬರೆದಿದ್ದಾರೆ. ಇವರ ಹಾಡುಗಳಂತೆ ಇವರ ಕಥೆಗಳು ಕೂಡ ಜನರ ಮನಸ್ಸನ್ನು ಗೆಲ್ಲಲಿ ಎಂದು ಶುಭ ಹಾರೈಸುತ್ತೇನೆ.

(ಕೃತಿ: ಸೂಪರ್‌ ಗಾಡ್‌ ಸಣ್ಣಯ್ಯ (ಕಥಾಸಂಕಲನ), ಲೇಖಕರು: ಹೃದಯ ಶಿವ, ಪ್ರಕಾಶಕರು: ಹರಿವು ಬುಕ್ಸ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Vasantha kumar

    ಅಪರೂಪಕ್ಕೊಂದು ಅರ್ಥಪೂರ್ಣ ವಿಮರ್ಶೆ ಓದಿದ ಹಾಗಾಯಿತು. ಯಾವುದೇ ‘ಇಸಂ’ ಗಳ ಪ್ರಭಾವವಿಲ್ಲದೆ ನೇರವಾಗಿ ಕಥೆಗಳ ಬಗ್ಗೆ ಹೇಳಿರುವ ರೀತಿ ಇಷ್ಟವಾಯಿತು. ಕಥೆಗಾರರಾಗಿ ಗುರುತಿಸಿಕೊಂಡಿರುವ ಸ್ವಾಮಿ ಪೊನ್ನಾಚಿ ವಿಮರ್ಶಕ ರಾಗಿಯೂ ಯಶಸ್ವಿಯಾಗಿದ್ದಾರೆ. ಒಳ್ಳೆಯ ಪದ್ಯಗಳನ್ನು ಸಿನಿಮಾಗಳಿಗೆ ಬರೆದಿರುವ ಹೃದಯ ಶಿವ ಬರೆದಿರುವ ಕಥೆಗಳನ್ನು ಓದುವ ಕುತೂಹಲ ಮೂಡಿಸಿದೆ ಈ ವಿಮರ್ಶೆ.

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ