Advertisement
ಗೋಬಿ ಮರುಭೂಮಿ ಡೈನೋಸಾರ್ ತೊಟ್ಟಿಲು: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಗೋಬಿ ಮರುಭೂಮಿ ಡೈನೋಸಾರ್ ತೊಟ್ಟಿಲು: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ದಿಢೀರನೆ ನನ್ನಲ್ಲಿ ಆರನೇ ಪ್ರಜ್ಞೆ ಎಚ್ಚೆತ್ತುಕೊಂಡಿತು, ಬಾಗಿಲು ಮುಚ್ಚಲು ಒಂದೆಜ್ಜೆ ಹಿಂದಕ್ಕೆ ಸರಿದಿದ್ದೆ ಆಕೆ ಒಳಗೆ ಬರಲು ಒಂದೆಜ್ಜೆ ಮುಂದಕ್ಕಿಟ್ಟಳು. ನಾನು ಎಡಗೈಯನ್ನು ಅಡ್ಡವಿಟ್ಟಿದ್ದೆ ಆಕೆ ನ್ನ ಕೈಕೆಳಗೆ ನುಗ್ಗಲು ಬಗ್ಗಿದಳು. ಬಾಗಿಲು ಮುಚ್ಚಿಬಿಟ್ಟೆ. ಅಬ್ಬಾ! ತಪ್ಪಿಸಿಕೊಂಡೆ ಎಂದುಕೊಂಡೆ. ಹೋಗಿ ಹಾಸಿಗೆ ಮೇಲೆ ಬಿದ್ದುಕೊಂಡೆ. ಡೂಪ್ಲಿಕೇಟ್ ಕೀಯಿಂದ ಬಾಗಿಲು ತೆರೆದುಕೊಂಡು ಒಳಕ್ಕೆ ಬಂದರೆ ಏನು ಮಾಡುವುದು? ದೀಪ ಬೆಳಗಿಸಿ ಚಳಿಗೆ ರಜಾಯ್ ಹೊದ್ದುಕೊಂಡು ಮಲಗಿದೆ. ಹೃದಯ ಒಂದೇಸಮನೆ ದಡಬಡನೆ ಹೊಡೆದುಕೊಳ್ಳುತ್ತಿತ್ತು. ನಿದ್ದೆ ಹತ್ತಿರಕ್ಕೆ ಸುಳಿಯಲೇ ಇಲ್ಲ.
ಚೀನಾ ದೇಶದ ಓಡಾಟದ ಕುರಿತು ಡಾ. ವೆಂಕಟಸ್ವಾಮಿ ಬರಹದ ಮುಂದುವರಿದ ಭಾಗ

ಗೋಬಿ ಎಂದರೆ ಮಂಗೋಲ್ ಭಾಷೆಯಲ್ಲಿ ನೀರಿಲ್ಲದ ಅಥವಾ ಒಣಗಿದ ಪ್ರದೇಶ. ಗೋಬಿ ಮರಳುಗಾಡು ಏಷ್ಯಾ ಖಂಡದಲ್ಲಿಯೇ ಅತ್ಯಂತ ವಿಶಾಲ ಮತ್ತು ದೊಡ್ಡದಾದದ್ದು. ಗೋಬಿ ಉತ್ತರ, ವಾಯುವ್ಯ ಚೀನಾ ಮತ್ತು ದಕ್ಷಿಣ ಮಂಗೋಲ್ ದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿದೆ. ಉತ್ತರದಲ್ಲಿ ಆಲ್ತೈ ಪರ್ವತಗಳು ಮತ್ತು ಹುಲ್ಲುಗಾವಲು; ವಾಯುವ್ಯಕ್ಕೆ ಹೆಕ್ಸಿ ಕಾರಿಡಾರ್ ಮತ್ತು ಟಿಬೆಟ್‌ನ ಸಮತಟ್ಟು ಪ್ರದೇಶವಿದೆ. ಗೋಬಿ ಮರಳುಗಾಡು ಮಂಗೋಲ್ ರಾಜರ ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ಆ ಕಾಲದ ರೇಷ್ಮೆ ರಸ್ತೆಯ ದಾರಿಯಲ್ಲಿ ಬರುವ ಹಲವು ಪಟ್ಟಣಗಳು ಗೋಬಿ ಮರಳುಗಾಡಿನಲ್ಲಿವೆ.

ಅತ್ಯಂತ ದುರ್ಗಮ, ವೈವಿಧ್ಯಮಯ ಪರಿಸರ ಮತ್ತು ಭೂಪ್ರದೇಶವನ್ನು ಹೊಂದಿರುವ ಈ ಗೋಬಿ ಮರಳುಗಾಡು ಅನೇಕ ವಿಧಗಳಲ್ಲಿ ವಿಶೇಷವಾದದ್ದು. ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಿಂದ ಎದ್ದು ಬರುವ ಮೋಡಗಳನ್ನು ತಡೆಹಿಡಿದು ನಿಲ್ಲಿಸಿಕೊಳ್ಳುವ ಹಿಮಾಲಯದಿಂದ ಗೋಬಿ ಪ್ರದೇಶದಲ್ಲಿ ಮಳೆ ಬೀಳುವುದು ಅಪರೂಪ, ಹಾಗಾಗಿ ಇದನ್ನು `ರೈನ್‌ಶಾಡೋ’ ಪ್ರದೇಶವೆಂದು ಹೇಳಲಾಗುತ್ತದೆ. ದಕ್ಷಿಣದಿಂದ ಈಶಾನಕ್ಕೆ 1600 ಕಿ.ಮೀ. ಅಗಲ ಉತ್ತರ ದಕ್ಷಿಣಕ್ಕೆ 800 ಕಿ.ಮೀ ವಿಶಾಲವಾಗಿರುವ ಇದರ ಒಟ್ಟು ಭೂವಿಸ್ತೀರ್ಣ 12,95,000 ಚ.ಕಿ.ಮೀ.ಗಳು. ಗೋಬಿ ಮರಳುಗಾಡಿನಲ್ಲಿ ಕಡಿಮೆ ಮರಳಿದ್ದು, ಶಿಲೆಗಳು ಹೆಚ್ಚಾಗಿ ಹರಡಿಕೊಂಡಿವೆ. ಬೋಳುಬೆಟ್ಟಗಳು, ಹಿಮಹೊದ್ದ ಎತ್ತರೆತ್ತರ ಪರ್ವತ ಶ್ರೇಣಿಗಳು, ಹುಲ್ಲುಗಾವಲು ಮತ್ತು ಮರಳು-ಶಿಲೆಗಳನ್ನು ಎದೆ ತುಂಬಾ ಹಾಸಿಕೊಂಡಿದೆ. ಜೊತೆಗೆ ನೀರಿನ ಬುಗ್ಗೆಗಳು ಮತ್ತು ಹಿಮಕರಗಿ ಹರಿಯುವ ನದಿಗಳೂ ಇವೆ.

ಈ ಶೀತಲ ಶಿಲೆಗಳ ಮರಳುಗಾಡಿನ ಉತ್ತರ ಭಾಗ ಸಮತಟ್ಟಾಗಿದ್ದು, 2990 ರಿಂದ 4,990 ಅಡಿಗಳ ಎತ್ತರದಲ್ಲಿದೆ. ವರ್ಷಕ್ಕೆ ಸರಾಸರಿ ಕೇವಲ 200 ಮಿ.ಮೀ. ಮಳೆ ಬೀಳುತ್ತದೆ. ಸೈಬೀರಿಯಾ ಕಡೆಯಿಂದ ಬೀಸುವ ಶೀತಲಗಾಳಿಯಿಂದ ಉಷ್ಣಾಂಶ -40 ಸೆ.ಗ್ರೇಡ್‌ಗೆ ಇಳಿದರೆ, ಅದೇ ಬೇಸಿಗೆಯಲ್ಲಿ +50 ಸೆ.ಗ್ರೇಡ್‌ಗೆ ಏರುತ್ತದೆ. ಹಗಲು-ರಾತ್ರಿಯೆಲ್ಲ ಉಷ್ಣಾಂಶ ಅತಿ ಏರುಪೇರುಗಳಿಂದ ಕೂಡಿರುತ್ತದೆ. ಒಂದ ಕಡೆ ಒಣಗಿದ ಬೆಂಗಾಡಾದರೆ, ಇನ್ನೊಂದು ಕಡೆ ಹಿಮದಿಂದ ಕೂಡಿದ ಶೀತಲಗಾಳಿ ಕೊರೆಯುತ್ತಿರುತ್ತದೆ. ಇದರ ಜೊತೆಗೆ ಬಿರುಗಾಳಿಯಿಂದ ಮರಳು ಗುಡ್ಡೆಗಳು ನೂರಾರು ಕಿ.ಮೀ. ವೇಗದಲ್ಲಿ ಹಾರುತ್ತಿರುತ್ತವೆ.

(ಗೋಬಿ ಮರಳುಗಾಡಿನಲ್ಲಿ ಹುಲ್ಲು ಮೇಯುತ್ತಿರುವ ಒಂಟೆಗಳು)

ಇಂತಹ ಗೋಬಿಯಲ್ಲಿ ಜನರು ನಿರಂತರವಾಗಿ ಬದುಕನ್ನು ನಡೆಸುತ್ತಾ ಬಂದಿದ್ದಾರೆ. 20ನೇ ಶತಮಾನದ ಮೊದಲಿನಲ್ಲಿ ಈ ಪ್ರದೇಶದಲ್ಲಿ ಮಂಗೋಲ್ಸ್, ಯುವಿಗುರ್ಸ್ ಮತ್ತು ಖಝಾಕ್ಸ್ ಜನಾಂಗಗಳಿದ್ದವು. ಜೊತೆಗೆ ಅಲೆದಾಡುವ ಜನಾಂಗಗಳು, ಸೈನ್ಯದಿಂದ ಹೊರಗಟ್ಟಿದವರು, ಋಷಿಗಳು ಮತ್ತು ಕುರಿ-ಮೇಕೆ ಮೇಯಿಸುವವರು ಇದ್ದರು. ಗೋಬಿಯಲ್ಲಿ ಸರಾಸರಿ 1 ಚ.ಕಿ.ಮೀಗೆ ಕೇವಲ ಒಬ್ಬ ಮನುಷ್ಯ ಮಾತ್ರ ಸಿಕ್ಕುತ್ತಾನೆ. ಇವರ ಮುಖ್ಯ ಕಸುಬು ಆಡು ಮತ್ತು ಕುರಿಗಳನ್ನು ಸಾಕುವುದು ಮತ್ತು ಅಲ್ಪಸ್ವಲ್ಪ ನೀರಿರುವ ಕಡೆ ಕೃಷಿ ಮಾಡುವುದು.

ಈ ಮರಳುಗಾಡನ್ನು ನೋಡುವ ಅವಕಾಶ ನನಗೆ ಸಿಕ್ಕಿತ್ತು. ಗೋಬಿ ಮರಳುಗಾಡಿನಲ್ಲಿ ಹೋಗುತ್ತಿದ್ದಂತೆ ನೀರು ನೋಡಿ ಅದೆಷ್ಟೋ ವರ್ಷಗಳಾಗಿರುವ ನದಿ ಕಣಿವೆಗಳು, ನಡುನಡುವೆ ನದಿಯ ತೊರೆಗಳ ಪಕ್ಕದಲ್ಲಿ ಇಟ್ಟಿಗೆ ಗೋಡೆಗಳ ಒಂಟಿ ಹೆಂಚಿನ ಮನೆಗಳು ಕಾಣಿಸಿಕೊಂಡವು. ಮನೆಗಳ ಮುಂದೆ ಮೆಕ್ಕೆ ಜೋಳದ ಕಡ್ಡಿಗಳ ರಾಶಿ ಮತ್ತು ಹೆಂಚುಮನೆಗಳ ಮೇಲೆ ತೆನೆಗಳ ರಾಶಿ. ಅಲ್ಲಲ್ಲಿ ಮೇಕೆ ಮತ್ತು ಕುರಿಹಿಂಡುಗಳು ಕಾಣಿಸುತ್ತಿದ್ದವು. ಕಾಶ್ಮೀರ ಉಣ್ಣೆ ನೀಡುವ ಮಂಗೋಲ್ ಮೇಕೆಗಳು ಮತ್ತು ಅರ‍್ಗಲಿ ಎನ್ನುವ ಬೆಟ್ಟದ ಕುರಿಗಳು ಇಲ್ಲಿ ಬಹಳ ವಿಶೇಷ. ಈ ಪ್ರದೇಶಗಳಲ್ಲಿ ಮನುಷ್ಯರು ಹೇಗೆ ಬದುಕುವರು ಎನ್ನುವ ಯೋಚನೆ ನನ್ನನ್ನು ಆವರಿಸಿಕೊಂಡಿತು. ಅಲ್ಲಲ್ಲಿ ಕೆಲಸ ಮಾಡುತ್ತಿದ್ದ ಜನರು ಮೈಮೇಲೆ ಎರಡೆರಡು ಬಟ್ಟೆಗಳನ್ನು ಹೊದ್ದು, ತಲೆಗಳನ್ನು ಮಂಕಿ ಕ್ಯಾಪಿನಿಂದ ಮುಚ್ಚುಕೊಂಡಿದ್ದರು. ಬೀಸುತ್ತಿದ್ದ ಶೀತಲಗಾಳಿಯಿಂದ ಎಲ್ಲರ ಮುಖಗಳು ರಕ್ತ ಹೆಪ್ಪುಗಟ್ಟಿದಂತೆ ಕೆಂಪಗಾಗಿಬಿಟ್ಟಿತ್ತು.

ಗೋಬಿ ಮರಳುಗಾಡು ದಕ್ಷಿಣದ ಕಡೆಗೆ ಅಂದರೆ ಚೀನಾದ ಉತ್ತರದಲ್ಲಿ ತನ್ನ ಬಾಹುಗಳನ್ನು ಚಾಚುತ್ತ ವರ್ಷಕ್ಕೆ ಸರಾಸರಿ 3,600 ಚ.ಕಿ.ಮೀ.ಗಳ ಹುಲ್ಲುಗಾವಲನ್ನು ನುಂಗಿ ಹಾಕುತ್ತಿದ್ದು, ಚೀನಾದ ಕೃಷಿಭೂಮಿ ತೊಂದರೆಗೆ ಸಿಲುಕಿಕೊಂಡಿತ್ತು. ಇದಕ್ಕೆ ಮನುಷ್ಯರ ಕೊಡುಗೆಯೂ ಇದೆ, ಅದು ಕಾಡುನಾಶ. ಮರಳುಗಾಡು ಆವರಿಸಿಕೊಳ್ಳುತ್ತಿರುವುದನ್ನು ತಡೆಗಟ್ಟಲು ಚೀನಾ ಹರಸಾಹಸ ಮಾಡುತ್ತಿತ್ತು. ಪ್ರಸ್ತುತ ಗೋಬಿಗೆ ಅಡ್ಡವಾಗಿ ಹಸಿರುಪಟ್ಟಿಯನ್ನು ಬೆಳೆಸುತ್ತಿದ್ದು ಅದರ ಹೆಸರು `ಗ್ರೀನ್ ವಾಲ್ ಆಫ್ ಚೀನಾ.’

ಗೋಬಿಯನ್ನು ಮುಖ್ಯವಾಗಿ ಜಿಂಗ್‌ಜಿಯಾಂಗ್ ರಾಜ್ಯದ ಟೆರೀಮ್ ಬೋಗುಣಿ, ಲೋಪ್‌ನಾರ್ ಮರಳು ಪ್ರದೇಶ ಮತ್ತು ಟಕಲಮಕನ್ (ಪ್ರತ್ಯೇಕ ಮರಳುಗಾಡು) ಎಂದು ವಿಭಾಗಿಸಲಾಗಿದೆ. 1990ರ ನಂತರ ಪುರಾತತ್ವ ಶಾಸ್ತ್ರಜ್ಞರು ಮತ್ತು ಪ್ರಾಗ್ಜೀವಿ ತಜ್ಞರು ಗೋಬಿಯಲ್ಲಿ ನಡೆಸಿದ ಸಂಶೋಧನೆಗಳಿಂದ ಡೈನಾಸರ್‌ಗಳ ಹಲವು ಖಜಾನೆಗಳನ್ನು ಇಲ್ಲಿ ಕಂಡುಹಿಡಿದರು. ಪ್ರಾರಂಭ ಹಂತದ ಸ್ತನಿಗಳು, ಡೈನಾಸರ್‌ಗಳ ಮೊಟ್ಟೆಗಳು ಮತ್ತು ಪುರಾಣ ಶಿಲಾಯುಗದ ಆಯುಧಗಳು ದೊರಕಿ ಅವು ಒಂದು ಲಕ್ಷ ವರ್ಷಗಳ ಪುರಾತನವಾಗಿದ್ದವು.

ಮಂಗೋಲಿನ ಪಶ್ಚಿಮದ ಗೋಬಿ ಮರಳುಗಾಡಿನಲ್ಲಿ ಹೂಳು ತುಂಬಿದ ಸರೋವರಗಳಲ್ಲಿ ಸರಿಸುಮಾರು 90 ಮಿಲಿಯ ವರ್ಷಗಳ ಆಸುಪಾಸು ಪಕ್ಷಿಗಳನ್ನು ಹೋಲುವ ಸಾವಿರಾರು ಡೈನಾಸರ್‌ಗಳು ಹೂತುಹೋಗಿ ಸಾವು ಕಂಡಿರುವುದನ್ನು ಭೂವಿಜ್ಞಾನಿಗಳು ಗುರುತಿಸಿದ್ದಾರೆ. ಇವುಗಳಲ್ಲಿ ಹೆಚ್ಚಾಗಿ ಎಳೆಮರಿಗಳು ಸೇರಿದ್ದು ಮೊಟ್ಟೆಗಳೂ ಸಿಕ್ಕಿವೆ. ಬಹುಶಃ ದೊಡ್ಡವು ಮರಿಗಳನ್ನು ಮಾಡಲು ಗಟ್ಟಿಯಾದ ನೆಲವನ್ನು ಹುಡುಕಿಕೊಂಡು ಹೋಗಿರಬೇಕು? ಸತ್ತ ಮರಿಗಳು ತಮಗೆ ಇಷ್ಟವಾದ ರೀತಿಯಲ್ಲಿ ಓಡಾಡುವಾಗ ಕೆಸರಿನಲ್ಲಿ ಹೂತುಹೋಗಿರಬೇಕು. ಇಲ್ಲ ಧಾರಾಕಾರವಾಗಿ ಮಳೆ ಸುರಿದು ಸುತ್ತಲಿನ ಮರಳು ದಿಬ್ಬಗಳು ಕುಸಿದು ಸರೋವರಗಳ ಮಧ್ಯೆ ಸಿಲುಕಿಕೊಂಡಿರಬೇಕು. ಕೆಲವು ಪ್ರಾಣಿಗಳು ಪ್ರವಾಹದಿಂದ ಮತ್ತು ಕೆಲವು ಜ್ವಾಲಾಮುಖಿಗಳ ಸ್ಫೋಟಗಳಿಂದಲೂ ಪಳೆಯುಳಿಕೆಗಳಾಗಿ ಮಾರ್ಪಟ್ಟಿವೆ. ಅತಿವೇಗದಿಂದ ಬೀಸಿದ ಬಿರುಗಾಳಿಯಿಂದ ಹಾರುವ ಮರಳುಗುಡ್ಡೆಗಳು ಸರೋವರಗಳ ಮೇಲೆ ಬಿದ್ದಿರಬೇಕು.

ಅಮೆರಿಕಾದ ರಾಷ್ಟ್ರೀಯ ಮ್ಯೂಸಿಯಂ ವಿಜ್ಞಾನಿಗಳು ಮೊದಲಿಗೆ ಉಲಾನ್ ಬಾಟರ್ ಪ್ರದೇಶದಲ್ಲಿ ಡೈನಾಸರ್‌ಗಳ ಪಳೆಯುಳಿಕೆಗಳು, ಅವುಗಳ ರಾಶಿರಾಶಿ ಮೊಟ್ಟೆಗಳನ್ನು ಕಂಡುಹಿಡಿದರು. ತೀರೋಪಾಡ್ ಡೈನಾಸರ್‌ಗಳು, ಟೈರನೋಸರಸ್‌ಗಳು, ಅಲ್ಲೋಸರಸ್ ಡ್ರೊಮಿಯೊಸರಸ್ ಪ್ರಭೇದಗಳು 60 ಮಿಲಿಯ ವರ್ಷಗಳ ಹಿಂದೆ ಇಲ್ಲಿ ಓಡಾಡುತ್ತಿದ್ದವು. ಎಷ್ಟೇಷಿಯಾ ಎನ್ನುವ ದೈತ್ಯ ಡೈನಾಸರ್‌ಗಳು ಸಣ್ಣ ಸಣ್ಣ ಡೈನಾಸರ್‌ಗಳ ನುಂಗಿರುವುದು ಅವುಗಳ ಹೊಟ್ಟೆಯೊಳಗೆ ಸಿಕ್ಕಿವೆ. ಡೈನಾಸರ್‌ಗಳ ಹಲವು ಪ್ರಕಾರಗಳಿಗೆ ಸೇರಿದ್ದು ಕೆಲವು ಹಕ್ಕಿಗಳಿಗೆ, ಕೆಲವು ಉರಗಗಳಿಗೆ ಮತ್ತು ಸಸ್ತನಿಗಳ ಹೋಲಿಕೆಗಳನ್ನು ಹೊಂದಿವೆ. ಗೋಬಿ ಮರಳುಗಾಡು ಡೈನಾಸರ್‌ಗಳ ಒಂದು ಸಮೃದ್ಧ ತೊಟ್ಟಿಲಾಗಿದೆ. ಕ್ರಿಟೇಶಿಯಸ್ ಯುಗದಲ್ಲಿ (145 ದಶಲಕ್ಷ ವರ್ಷಗಳ ಹಿಂದೆ) ನೀರಿನ ಅಭಾವದಿಂದ ಇವು ಅಂತ್ಯವನ್ನು ಕಂಡಿರಬೇಕು. ಗೋಬಿ ಮರಳುಗಾಡಿನ ಉಲಾನ್ ಬಾಟರ್ ಎನ್ನುವ ಪ್ರದೇಶವನ್ನು ನೈಸರ್ಗಿಕ ಪ್ರಾಣಿ ಸಂಗ್ರಹಾಲಯ ಎಂದು ಕರೆಯಲಾಗುತ್ತದೆ.

(ಗೋಬಿ ಮರಳುಗಾಡಿನ ಬಹು ಖನಿಜಗಳ ವಲಯದಲ್ಲಿ ಹ್ಯಾಂಡ್ ಜಿ.ಪಿ.ಎಸ್. ಜೊತೆಗೆ 2008ರಲ್ಲಿ.)

ಮಧ್ಯ ಏಷ್ಯಾದ ಮಾನವ ವಿಕಾಸದ ತೊಟ್ಟಿಲನ್ನು ಹುಡುಕಾಡುತ್ತಿದ್ದಾಗ ಇಲ್ಲಿನ ಸಂಶೋಧನೆಗಳಿಂದ ಭೂಮಿಯ ಮೇಲೆ ಬದುಕಿದ್ದ ಡೈನಾಸರ್‌ಗಳು ದೊರಕಿದವು. ಡೈನಾಸರ್‌ಗಳ ಉಗಮ ಮತ್ತು ಅವುಗಳ ವಿಕಾಸವನ್ನು ಸಂಶೋಧನೆಗಳಿಂದ ಪೋಣಿಸಲಾಯಿತು. 80 ದಶಲಕ್ಷ ವರ್ಷಗಳ ಹಿಂದೆ ಹಲ್ಲಿ, ಮೊಸಳೆ ಮತ್ತು ಸಸ್ತನಿ ಪ್ರಭೇದಗಳಿಗೆ ಸೇರಿದ ದೈತ್ಯ ಪ್ರಾಣಿಗಳು ಇಲ್ಲಿ ನೆಲೆಯೂರಿದ್ದವು. ಇದರ ಜೊತೆಗೆ 30 ಪ್ರಕಾರಗಳ ಹಲ್ಲಿಗಳ ಪಳೆಯುಳಿಕೆಗಳು ದೊರಕಿದವು. ಭೂಮಿಯ ಮೇಲೆ ಬದುಕುಳಿದಿರುವ ಏಕೈಕ ಕೊಮೊಡೊ ಹಲ್ಲಿಯ ಕುಟುಂಬಕ್ಕೆ ಸೇರಿದ ಕೊಮೊಡೊ ಡ್ರ್ಯಾಗನ್ ರೆಕ್ಕೆಗಳೂ ಇಲ್ಲಿ ದೊರಕಿವೆ. ಇವೆಲ್ಲ ಕ್ರಿಟೇಶಿಯಸ್ ಯುಗಕ್ಕೆ ಸೇರಿವೆ.

ಪ್ರಸ್ತುತ ಗೋಬಿ ಮರಳುಗಾಡಿನಲ್ಲಿ 45 ರೀತಿಯ ಪ್ರಾಣಿ ಪಕ್ಷಿಗಳು ವಾಸಿಸುತ್ತಿವೆ. ಮುಖ್ಯವಾಗಿ ಕಪ್ಪುಬಾಲದ ಗೇಜಿಲ್ಲಾಗಳು, ಗೋಲ್ಡನ್ ಈಗಲ್‌ಗಳು, ಹಿಮಚಿರತೆಗಳು, ಕರಡಿಗಳು, ಮಾಬಲ್ಡ್ ಪೊಲಾರ್‌ಬೆಕ್ಕುಗಳು, ಬ್ಯಾಕ್ಟ್ರಿಯನ್ ಒಂಟೆಗಳು, ಮಂಗೋಲಿಯನ್ ಕಾಡುಕತ್ತೆಗಳು, ಕತ್ತೆಕಿರುಬ, ಕಂದು ಕರಡಿಗಳು, ಗೋಬಿನರಿ-ತೋಳಗಳು, ಬೂದು ಗುಬ್ಬಚ್ಚಿಗಳು, ಸಾಲ್ಟ್ವೊರ್ಟ್, ಸೇಗ್‌ಬ್ರುಷ್ ಇತ್ಯಾದಿ. ಇವುಗಳ ಜೊತೆಗೆ ಸುಮಾರು 400 ರೀತಿಯ ಸಸ್ಯ ಪ್ರಭೇದಗಳು ಇಲ್ಲಿವೆ.

ಗೋಬಿ ಮರಳುಗಾಡಿನಲ್ಲಿ ಬಹುಖನಿಜಗಳ ಗಣಿಗಳನ್ನು ನೋಡಿದ ಮೇಲೆ ಉಲಾನ್ ಬಟರ್‌ನ ಹೋಟಲ್ ಒಂದರಲ್ಲಿ ಎಲ್ಲರೂ ಉಳಿದುಕೊಂಡಿದ್ದೆವು, ಮೈಕೊರೆಯುವ ಚಳಿ. ಒಂದಷ್ಟು ನೋಟ್ಸ್ ಮಾಡಿಕೊಂಡು ಬೇಗನೆ ಮಲಗಿಕೊಂಡುಬಿಟ್ಟೆ. ಒಳ್ಳೆ ನಿದ್ದೆ. ಇಂಟರ್‌ಕಾಮ್ ಹೊಡೆದುಕೊಂಡು ನಿದ್ದೆಯಿಂದ ಎದ್ದು `ಹಲೋ?’ ಎಂದೆ. `ಮೈ ನೇಮ್ ಈಸ್ ನೇಹಾ’ ಹೆಣ್ಣು ಧ್ವನಿ, ಚೀನಿ ಭಾಷೆಯೋ ಮಂಗೋಲ್ ಭಾಷೆಯೋ ಅರ್ಥವಾಗಲಿಲ್ಲ. ಮಧ್ಯಮಧ್ಯ ಒಂದೆರಡು ಇಂಗ್ಲಿಷ್ ಪದಗಳು ಕೇಳತೊಡಗಿದವು. `ವಾಟ್ ಡು ಯು ವಾಂಟ್?’ ಎಂದೆ. ದೊಡ್ಡ ಹೋಟಲು, ಮಲಗುವ ಮೊದಲು ವಿಷ್ ಮಾಡಿರಬೇಕು ಎಂದುಕೊಂಡು `ಓಕೆ, ಓಕೆ’ ಎಂದು ಫೋನ್ ಇಟ್ಟುಬಿಟ್ಟೆ. ಗಡಿಯಾರ ನೋಡಿದರೆ 11 ಗಂಟೆ. ಕೇವಲ ಎರಡು ನಿಮಿಷಗಳು ಆಗಿರಬೇಕು? ಬಾಗಿಲನ್ನು ಯಾರೋ ನಿಧಾನವಾಗಿ ಕುಟ್ಟಿದರು. ಎದ್ದುಹೋಗಿ ಬಾಗಿಲನ್ನು ತೆರೆದೆ. ಬಾಗಿಲು ಮೇಲಿದ್ದ ಮಂದ ಬೆಳಕಿನ ಕೆಳಗೆ ಯುವತಿಯೊಬ್ಬಳು ನಿಂತಿದ್ದಳು. ಬಿಳಿ ಬಣ್ಣ, ಒಳ್ಳೆ ಎತ್ತರ, ಬಾಬ್ ಕಟ್ಟಿಂಗ್, ಪಾಚಿ ಬಣ್ಣದ ಫುಲ್ ಸ್ವೆಟರ್ ಧರಿಸಿದ್ದಾಳೆ. ಎದೆಯ ಮೇಲೆ ವಿ ಆಕಾರದ ಸ್ವೆಟರ್ ಒಳಗೆ ಅರ್ಧ ಎದೆಗಳು ಕಾಣಿಸುತ್ತಿವೆ.

ಮೆಲುಧ್ವನಿಯಲ್ಲಿ `ವಾಟ್?’ ಎಂದೆ. ಬಲಕೈಯಿನ ಮೊದಲ ಮತ್ತು ಕೊನೆ ಬೆರಳನ್ನು ಕಿವಿ ಮತ್ತು ಬಾಯಿಯ ಮಧ್ಯೆ ಇಟ್ಟುಕೊಂಡು ಫೋನ್ ಮಾಡಿದೆನಲ್ಲ ಎನ್ನುವಂತೆ ಸನ್ನೆ ಮಾಡಿದಳು, `ನೋ’ ಎಂದೆ. ಮತ್ತೆ ಅದೇ ರೀತಿ ಸನ್ನೆ ಮಾಡಿ ಬಾಗಿಲು ಮೇಲಿನ ಸಂಖ್ಯೆಯನ್ನು ನೋಡಿದಳು. ದಿಢೀರನೆ ನನ್ನಲ್ಲಿ ಆರನೇ ಪ್ರಜ್ಞೆ ಎಚ್ಚೆತ್ತುಕೊಂಡಿತು, ಬಾಗಿಲು ಮುಚ್ಚಲು ಒಂದೆಜ್ಜೆ ಹಿಂದಕ್ಕೆ ಸರಿದಿದ್ದೆ ಆಕೆ ಒಳಗೆ ಬರಲು ಒಂದೆಜ್ಜೆ ಮುಂದಕ್ಕಿಟ್ಟಳು. ನಾನು ಎಡಗೈಯನ್ನು ಅಡ್ಡವಿಟ್ಟಿದ್ದೆ ಆಕೆ ನ್ನ ಕೈಕೆಳಗೆ ನುಗ್ಗಲು ಬಗ್ಗಿದಳು. ಬಾಗಿಲು ಮುಚ್ಚಿಬಿಟ್ಟೆ. ಅಬ್ಬಾ! ತಪ್ಪಿಸಿಕೊಂಡೆ ಎಂದುಕೊಂಡೆ. ಹೋಗಿ ಹಾಸಿಗೆ ಮೇಲೆ ಬಿದ್ದುಕೊಂಡೆ. ಡೂಪ್ಲಿಕೇಟ್ ಕೀಯಿಂದ ಬಾಗಿಲು ತೆರೆದುಕೊಂಡು ಒಳಕ್ಕೆ ಬಂದರೆ ಏನು ಮಾಡುವುದು? ದೀಪ ಬೆಳಗಿಸಿ ಚಳಿಗೆ ರಜಾಯ್ ಹೊದ್ದುಕೊಂಡು ಮಲಗಿದೆ. ಹೃದಯ ಒಂದೇಸಮನೆ ದಡಬಡನೆ ಹೊಡೆದುಕೊಳ್ಳುತ್ತಿತ್ತು. ನಿದ್ದೆ ಹತ್ತಿರಕ್ಕೆ ಸುಳಿಯಲೇ ಇಲ್ಲ….

ಬೆಳಿಗ್ಗೆ ನಮ್ಮ ಜಗಬಂಧು ಮತ್ತು ದಾಸ್‌ಗೆ ವಿಷಯ ತಿಳಿಸಿದಾಗ ಜಗಬಂಧುವಿಗೆ ಅದೇ ರೀತಿ ಫೋನ್ ಬಂದು ರಾಂಗ್‌ನಂಬರ್ ಎಂದು ಫೋನ್ ಇಟ್ಟನಂತೆ. ದಾಸ್ ನೆನ್ನೆಯೇ ಇದೇ ವಿಷಯವನ್ನು ಕೇಳಿದ್ದೆ, ಈ ಪ್ರದೇಶದಲ್ಲಿ ಇದು ಸಾಮಾನ್ಯವಂತೆ ಎಂದು ಹೇಳಿದ. ನಮ್ಮ ಜೊತೆಗಿದ್ದ ಇತರರು ಮುಸಿಮುಸಿ ನಗುತ್ತಿದ್ದರು. ನನ್ನ ಬಾಗಿಲಿಗೆ ಬಂದಿದ್ದ ಯುವತಿ ಮಾತ್ರ ಸೂಪರ್ ಹೀರೋಯಿನ್‌ನಂತೆ ಇದ್ದಳು. ಎಲ್ಲದಕ್ಕೂ ಅದೃಷ್ಟ ಇರಬೇಕಲ್ಲವೆ? ಆಕೆ ಫೋನ್‌ನಲ್ಲಿ ಮಾತನಾಡಿದಾಗ ಫೋರ್ ಹಂಡ್ರೆಡ್ ಯುವಾನ್ ಎಂಬ ಪದಗಳು ಜ್ಞಾಪಕಕ್ಕೆ ಬಂದವು. ಚೀನಾದವರು ಕೊಟ್ಟಿದ್ದ ಎಂಟುನೂರು ಯುವಾನ್‌ಗಳಲ್ಲಿ 400 ಯುವಾನ್ ಖರ್ಚಾಗಿ 400 ಯುವಾನ್‌ಗಳು ಮಾತ್ರ ಉಳಿದುಕೊಂಡಿದ್ದವು. ಅದೂ ಹೋಗಿದ್ದರೆ ಬೇರೆಯವರ ಹತ್ತಿರ ಸಾಲ ತೆಗೆದುಕೊಳ್ಳಬೇಕಾಗಿತ್ತು. ಅದರಲ್ಲಿ ನನಗೊಂದು ಕೋಟು ಮತ್ತು ಸುಶೀಲಳಿಗೆ ಒಂದು ಸ್ವೆಟರ್ ತಂದಿದ್ದೆ.

ಅದೇ ಹೋಟಲ್‌ನಲ್ಲಿ ಅದೇ ರಾತ್ರಿ ಡಿನ್ನರ್ ಮಾಡುವಾಗ ಇನ್ನೊಂದು ಘಟನೆ ನಡೆದುಹೋಗಿತ್ತು. ಎಲ್ಲಾ ಸ್ಟಾರ್ ಹೋಟಲುಗಳಲ್ಲಿ ಭಕ್ಷ್ಯಗಳ ಮುಂದೆ ಅದರ ವಿವರಣೆ ಇರುತ್ತಿತ್ತು. ಡಾ. ವಾಂಗ್ ಮಧ್ಯಾಹ್ನ `ಈ ರಾತ್ರಿ ಸ್ಪೆಷಲ್ ಮಂಗೋಲಿಯನ್ ಡಿನ್ನರ್ ಅರೇಂಜ್ ಮಾಡುವುದಾಗಿ ಹೇಳಿದ್ದರು. ರಾತ್ರಿ ಊಟಕ್ಕೆ ಹೋದಾಗ ನೆಲದಲ್ಲಿ ಕುಸರಿ ಕೆಲಸದ ಹಾಸಿಗೆ ಹಾಕಲಾಗಿತ್ತು. ಎಲ್ಲರೂ ವೃತ್ತಾಕಾರದಲ್ಲಿ ಕುಳಿತುಕೊಂಡೆವು. ಒಂದೊಂದೆ ಐಟಮ್‌ಗಳನ್ನು ಹುಡುಗರು ತಂದೂತಂದೂ ಇಡುತ್ತಿದ್ದರು. ಇಬ್ಬರು ಯುವಕರು ಒಂದು ದೊಡ್ಡ ತಟ್ಟೆಯನ್ನು ಹೊತ್ತುಕೊಂಡು ಬಂದು ನಮ್ಮ ನಡುವೆ ಇಟ್ಟುಬಿಟ್ಟರು. ಅದೊಂದು ಫ್ರೈಮಾಡಿದ ಮಸಾಲೆ ಹಾಕಿ ಅಲಂಕರಿಸಿದ ದೊಡ್ಡ ತೊಡೆ! ಬಹುಶಃ ಭೀಪ್ ಇರಬೇಕು? ನಾವು ಮೂವರೂ ಒಂದೆರಡು ಕ್ಷಣ ಅವಕ್ಕಾದೆವು. ಸುತ್ತಲಿದ್ದವರು ವಾವ್..ವಾವ್.. ಎಂದು ಸಂತೋಷ ವ್ಯಕ್ತಪಡಿಸಿದರು. ನಾವು ತಿನ್ನುವುದಿಲ್ಲ ದಾಸ್ ಹೇಳಿದ್ದೆ, ಜಗಬಂಧು ಕೂಡ ಹೇಳಿದ. ನಾನು ಏನೂ ಹೇಳಲಿಲ್ಲ. ಅದನ್ನು ಬಿಟ್ಟು ಇನ್ನಿತರ ಭಕ್ಷ್ಯಗಳನ್ನು ತಿಂದೆವು. ಮೆಕ್ಕೆಜೋಳದಲ್ಲಿ ಮಾಡಿದ್ದ ಐಟಮ್ ಅಪರೂಪವಾಗಿತ್ತು.

ಬೀಜಿಂಗ್-ಬೆಂಗಳೂರು ವಿಮಾನಗಳ ಪಡಿಪಾಟಲು

ಇಪ್ಪತ್ತೈದು ದಿನಗಳು ಮುಗಿದು ಇನ್ಸ್ಟಿಟ್ಯೂಟ್‌ನಲ್ಲಿ ಒಂದು ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿ ನಮಗೆಲ್ಲ ಒಂದೊಂದು ಉಡುಗೊರೆ ನೀಡಿದರು. ನಾನು ಮಾಡಿದ ಪುಟ್ಟ ಭಾಷಣವನ್ನು ಡಾ. ವಾಂಗ್ ಚೀನಾ ಭಾಷೆಯಲ್ಲಿ ಹೇಳಿದರು. ಡಾ. ವಾಂಗ್ ಆ ರಾತ್ರಿ ಇನ್ನೊಂದು ಹೋಟಲ್‌ಗೆ ಕರೆದುಕೊಂಡು ಹೋಗಿ ಒಳ್ಳೆ ಡಿನ್ನರ್ ಕೊಡಿಸಿದರು. ಊಟ ಮಾಡುತ್ತಿದ್ದಾಗ ಗಲ್ಲಾಪೆಟ್ಟಿಗೆಯ ಮೇಲಿದ್ದಾತ ನಮ್ಮಲ್ಲಿಗೆ ಎದ್ದು ಬಂದು ವಿಚಾರಿಸಿದ. ವಾಂಗ್ ವಿಶೇಷವಾಗಿ ನಮ್ಮನ್ನು ಇಂಡಿಯಾ… ಇಂಡಿಯನ್ಸ್.. ಎಂದು ಪರಿಚಯಿಸಿದರು. ಆತ ನಮಗೆಲ್ಲ ತಲೆಬಾಗಿ ಚೀನಾ ರೀತಿಯ ವಂದನೆಗಳನ್ನು ಸಲ್ಲಿಸಿದ. ಊಟ ಮುಗಿಸಿ ಹೊರಕ್ಕೆ ಬಂದಿದ್ದೆ ನನ್ನ ಕೈಗಳನ್ನು ಹಿಡಿದುಕೊಂಡು ಸನ್ನೆಗಳಲ್ಲಿ ನೀವು ನಮ್ಮ ಪಕ್ಕದ ದೇಶದವರು, ನಾವು ಒಳ್ಳೆಯ ಮಿತ್ರರು, ನಮ್ಮ ಗೆಳೆತನ ಚಿರಾಯುವಾಗಿರಲಿ… ಹೀಗೆ ಏನೋನೋ ಹೇಳಿದ. ನಾವು ಸುಮಾರು ದೂರ ನಡೆದುಹೋದರೂ ನಮ್ಮನ್ನು ನೋಡುತ್ತಲೇ ರಸ್ತೆಯಲ್ಲಿ ನಿಂತುಕೊಂಡು ನಮ್ಮ ಕಡೆಗೆ ಕೈಬೀಸುತ್ತಿದ್ದನು.

ಕೊನೆಯ ಮೂರು ದಿನಗಳು ಲಾಂಗ್‌ಫಾಂಗ್ ನಗರದಲ್ಲಿ ಜಿಯೋಕೆಮಿಕಲ್ ಲ್ಯಾಬ್ ನೋಡಿಕೊಂಡು ಅಲ್ಲೆ ಹೋಟಲ್‌ನಲ್ಲಿ ಉಳಿದುಕೊಂಡಿದ್ದೆವು. ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಅದರಲ್ಲಿ 76 ಧಾತುಗಳನ್ನು ಸಂಶೋಧನೆ ಮಾಡುವುದರ ಬಗ್ಗೆ ನಾವು ಚೀನಾದಲ್ಲಿ ತರಬೇತಿಗೆ ಬಂದಿದ್ದೆವು. ನಾನು ಚೀನಾದಿಂದ ಬಂದ ಮೇಲೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದು ಚದರ ಕಿಲೋಮೀಟರಿಗೆ ಒಂದು ಮಣ್ಣು ಸ್ಯಾಂಪಲ್ ತೆಗೆದುಕೊಂಡು ಅವುಗಳನ್ನು ಸಂಸ್ಕರಿಸಿ 76 ಧಾತುಗಳನ್ನು ವಿಶ್ಲೇಷಿಸಿ ಕೊನೆಗೆ ಅಷ್ಟೂ ಧಾತುಗಳ ನಕ್ಷೆಗಳನ್ನು ತಯಾರಿಸುವ ಯೋಜನೆಯನ್ನು ನಮ್ಮ ಇಲಾಖೆ ಹಮ್ಮಿಕೊಂಡಿತ್ತು. ಅನಂತರ ಅದನ್ನು ದೇಶದಾದ್ಯಂತ ಪರಿಚಯಿಸಲಾಯಿತು. ಬೆಳಿಗ್ಗೆ ನಾವು ಮೂವರು ಎದ್ದು ತಯಾರಾಗಿ ಪಕ್ಕದಲ್ಲಿಯೇ ಇದ್ದ ರೆಸ್ಟಾರೆಂಟ್‌ಗೆ ಹೋಗಿ ತಿಂಡಿ ತಿಂದುಕೊಂಡು ಬಂದೆವು. ಅಷ್ಟರಲ್ಲಿ ಡಾ. ವಾಂಗ್ ಇಬ್ಬರು ವಿದ್ಯಾರ್ಥಿಗಳೊಂದಿಗೆ ವಾಹನದಲ್ಲಿ ಬಂದು ಇಳಿದರು. ಹತ್ತು ನಿಮಿಷಗಳ ಕಾಲ ವಾಂಗ್ ಜೊತೆಗೆ ಮಾತನಾಡಿ ವಂದನೆಗಳನ್ನು ಸಲ್ಲಿಸಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ವಿದಾಯ ಹೇಳಿ ವಾಹನದಲ್ಲಿ ಕುಳಿತುಕೊಂಡೆವು. ಹವಾಮಾನ -5 ಡಿಗ್ರಿ ಸೆಲ್ಸಿಯಸ್ ಇದ್ದು ಶೀತಗಾಳಿ ಬೀಸುತ್ತಿದ್ದು ಹಿಮ ಬೀಳುತ್ತಿತ್ತು. ಗಿಡಮರಗಳು, ಕಟ್ಟಡಗಳು, ರಸ್ತೆಗಳು ಎಲ್ಲವೂ ಬಿಳಿಮಯವಾಗಿದ್ದವು. ವಾಹನ ಎಕ್ಸ್ಪ್ರೆಸ್ ರಸ್ತೆಯಲ್ಲಿ 120 ಕಿ.ಮೀ.ಗಳ ವೇಗದಲ್ಲಿ ಬೀಜಿಂಗ್ ಕಡೆಗೆ ಧಾವಿಸುತ್ತಿತ್ತು. 10.30ಕ್ಕೆ ಎಲ್ಲಾ ಫಾರ್ಮಾಲಿಟೀಸ್ ಮುಗಿಸಿ ಹಾಂಗ್‌ಕಾಂಗ್‌ನ ಡ್ರ್ಯಾಗನ್ ಏರ್ ವಿಮಾನಕ್ಕಾಗಿ ಕಾಯತೊಡಗಿದೆವು. 12.15ಕ್ಕೆ ಬೀಜಿಂಗ್ ಬಿಟ್ಟು ಸಾಯಂಕಾಲ ನಾಲ್ಕು ಗಂಟೆಗೆ ಹಾಂಗ್‌ಕಾಂಗ್ ತಲುಪಿ ಅಲ್ಲಿಂದ 5.30ಕ್ಕೆ ಏರ್ ಇಂಡಿಯಾ ವಿಮಾನ ಹಿಡಿಯಬೇಕಾಗಿತ್ತು.

ವಿಮಾನ ಅರ್ಧ ಗಂಟೆ ತಡವಾಗಿ 12.40ಕ್ಕೆ ಎಲ್ಲರನ್ನು ಸಾಲಾಗಿ ಬರುವಂತೆ ಹೇಳಲಾಯಿತು. ಕೇವಲ 20 ನಿಮಿಷಗಳಲ್ಲಿ ವಿಮಾನ ತುಂಬಿಹೋಯಿತು. ಆದರೆ ವಿಮಾನ ನಮ್ಮ ಹಳ್ಳಿಯ ಬಸ್ಸಿನಂತೆ ಸದ್ದು ಮಾಡುತ್ತಾ ನಿಂತಲ್ಲೇ ನಿಂತುಕೊಂಡಿತ್ತು. ಬರುವಾಗ ಬೆಂಗಳೂರಿನಿಂದ ಬೀಜಿಂಗ್‌ವರೆಗೂ ಟೆನ್ಷನ್ ಈಗ ಬೀಜಿಂಗ್‌ನಿಂದ ಎಲ್ಲಿಯವರೆಗೆ ಈ ಟೆನ್ಷನ್ ಎಂದುಕೊಂಡೆ. ಬೆಂಗಳೂರು ಬಿಟ್ಟಾಗ ನಮಗೆ ಟೆಕೆಟ್‌ಗಳು ಸಿಕ್ಕದೆ ಕೊನೆಗೆ ಏನೋನೋ ಮಾಡಿ ವಿಮಾನದ ಕೊನೆಯ ಸೀಟುಗಳನ್ನು ಕೊಟ್ಟಿದ್ದರು. ಸಾಮಾನ್ಯವಾಗಿ ವಿಮಾನಗಳಲ್ಲಿ ತಿಂಗಳುಗಳ ಮೊದಲೇ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಾರೆ. ಆದರೆ ನಾವು ದೆಹಲಿಗೆ ಹೋದ ಮೇಲೆ ದೆಹಲಿ ಕಛೇರಿಯಿಂದ ಟಿಕೆಟ್‌ಗಳನ್ನು ಖರೀದಿಸಲು ಪ್ರಯತ್ನ ಮಾಡಲಾಗಿತ್ತು. ಬೀಜಿಂಗ್‌ನಲ್ಲಿ ಲೇಟಾಗಿ ಹಾಂಗ್‌ಕಾಂಗ್‌ನಲ್ಲಿ ಏರ್ ಇಂಡಿಯಾ ಮಿಸ್ ಆದರೆ ಏನು ಮಾಡುವುದು? ಅಂತೂ 1.40ಕ್ಕೆ ಒಂದು ಗಂಟೆ ತಡವಾಗಿ ವಿಮಾನ ಆಕಾಶಕ್ಕೆ ಹಾರಿತು. ಬೀಜಿಂಗ್ ಹಾಂಗ್‌ಕಾಂಗ್ ನಡುವೆ 3.40 ಗಂಟೆಗಳ ಪ್ರಯಾಣ ಇದ್ದು, ಹಾಂಗ್‌ಕಾಂಗ್‌ನಲ್ಲಿ ಕನಿಷ್ಠ ಒಂದು ಗಂಟೆಯಾದರೂ ಮುಂಚೆ ಇರಬೇಕು! ಈಗಿನ ಸಮಯದಂತೆ ವಿಮಾನ ಸಾಯಂಕಾಲ 5.10ಕ್ಕೆ ಹಾಂಗ್‌ಕಾಂಗ್ ತಲುಪಿದರೆ, ಅಲ್ಲಿ ಡೆಸ್ಕ್ ಟ್ರಾನ್ಸ್ಫರ್, ಲಗೇಜ್ ಚೆಕ್ಕಿಂಗ್, ಸೆಕ್ಯೂರಿಟಿ ಮುಗಿಸುವುದು ಯಾವಾಗ? ಏನಾದರು ಆಗಲಿ ಎಂದು ಸುಮ್ಮನೆ ಕುಳಿತುಕೊಂಡೆ. ಒಂದು ಟಿನ್ ಬೀರು ತೆಗೆದುಕೊಂಡು ಕುಡಿದು ತಿಂಡಿತಿಂದು ಸಮಾಧಾನವಾಗಿರಲು ಪ್ರಯತ್ನಿಸಿದೆ.

ಪರದೆಯ ಮೇಲೆ `ಚಿಕಾಗೋ-2035′ ಎಂಬ ಸಿನಿಮಾ ಬರುತ್ತಿದ್ದು, ಮಧ್ಯೆಮಧ್ಯೆ ವಿಮಾನ ಗಂಟೆಗೆ 900 ಕಿ.ಮೀ.ಗಳ ವೇಗದಲ್ಲಿ 39000 ಅಡಿಗಳ ಎತ್ತರದಲ್ಲಿ ಹಾರುತ್ತಿದೆ, ಹೊರಗಿನ ತಾಪಮಾನ -25 ಡಿಗ್ರಿ ಸೆಲ್ಸಿಯಸ್… ನಂತರ 42 ನಿಮಿಷಗಳಲ್ಲಿ ವಿಮಾನ ಹಾಂಗ್‌ಕಾಂಗ್ ತಲಪುವುದಾಗಿ ಪರದೆಯ ಮೇಲೆ ಕಾಣಿಸಿಕೊಂಡಿತು. ವಿಮಾನ ವೇಗವಾಗಿ ಹಾರುತ್ತಿದ್ದು ಅರ್ಧಗಂಟೆ ಕಾಲವನ್ನು ಮೇಕ್‌ಆಪ್ ಮಾಡಿತ್ತು. ಏರ್ ಇಂಡಿಯಾ ಹಿಡಿಯಲು ತೊಂದರೆ ಇಲ್ಲ ಎಂದುಕೊಂಡೆ. ನಾವು ಮೂವರೂ ಮೂರು ಕಡೆ ಕುಳಿತಿದ್ದೆವು. ಇದ್ದಕ್ಕಿದ್ದ ಹಾಗೆ ವಿಮಾನ ದಾರಿ ತಪ್ಪಿದಂತೆ ಹಾಂಗ್‌ಕಾಂಗ್ ನಗರದ ಕಡೆಗೆ ಕುಂಡಿ ತೋರಿಸುತ್ತಾ ಸಮುದ್ರದ ಕಡೆಗೆ ಹೊರಟುಬಿಟ್ಟಿತು. ಸುಮ್ಮನೆ ಸಮುದ್ರದ ಕಡೆಗೆ ನೋಡತೊಡಗಿದೆ. ಹನುಮಂತನ ಬಾಲದಂತೆ ಸಮುದ್ರದ ಮೇಲೆ ಒಂದೆರಡು ಸುತ್ತಾಕಿದ ವಿಮಾನ ಕೊನೆಗೂ ಕೆಳಕ್ಕೆ ಮುಖಮಾಡಿತು. ಇದೇನು ಸಮುದ್ರದಲ್ಲಿ ಬೀಳಲು ಹೋಗುತ್ತಿದೆಯಾ? ಎನ್ನುವ ಅನುಮಾನ ಬಂದರೂ ಸುಮ್ಮನೆ ಕುಳಿತಿದ್ದೆ.

*****

ನಂತರ ತಿಳಿದ ವಿಷಯವೆಂದರೆ ಹಾಂಗ್‌ಕಾಂಗ್‌ನ ಈ ವಿಮಾನ ನಿಲ್ದಾಣವನ್ನು ನಿರ್ಮಿಸುವಾಗ ಸ್ಥಳವಿಲ್ಲದೆ ಸಮುದ್ರವನ್ನೆ ಹಿಂದಕ್ಕೆ ತಳ್ಳಿ ನಿಲ್ದಾಣ ಮಾಡಲಾಗಿತ್ತು. ಹಾಗಾಗಿ ವಿಮಾನ ಇಳಿಯುವಾಗ ಹೆಚ್ಚುಕಡಿಮೆ ಸಮುದ್ರಕ್ಕೆ ಬಿದ್ದಂತೆ ಕಾಣಿಸುತ್ತಿತ್ತು. ಸಾಯಂಕಾಲ 5.05ಕ್ಕೆ ಅಂತೂ ವಿಮಾನ ನಿಲ್ದಾಣದಲ್ಲಿ ಇಳಿದುಕೊಂಡಿತು. ವಿಮಾನ ಇಳಿಯುತ್ತಿದ್ದಂತೆ ನಾವು ಮೂವರು ಕೈಬ್ಯಾಗುಗಳನ್ನು ಹಿಡಿದುಕೊಂಡು ಎಲ್ಲರನ್ನೂ ತಳ್ಳಿಕೊಂಡು ಇಳಿಯತೊಡಗಿದೆವು. ಹೊರಗೆ ಬಾಗಿಲಲ್ಲಿ ನಾಲ್ಕಾರು ಏರ್‌ಹೋಸ್ಟೆಸ್ ಫಲಕಗಳನ್ನು ಹಿಡಿದುಕೊಂಡು ನಿಂತಿದ್ದರು. ನಾವು ಯಾವುದನ್ನೂ ಗಮನಿಸದೇ ಒಂದೇ ಓಟ ಕಿತ್ತೆವು. ಗಗನಸಖಿಯೊಬ್ಬಳು ನಮ್ಮನ್ನ ನೋಡಿ, `ಇಂದಿಯಾ… ಇಂದಿಯಾ…’ ಎಂದು ಕೂಗಿಕೊಂಡು ಹಿಂದೆಯೇ ಓಡಿಬಂದಳು. ನಾನು ನಿಂತುಕೊಂಡಿದ್ದೆ, `ನೀವು ಬ್ಯಾಗೇಜ್ ಇಲ್ಲದೆ ಹೋಗ್ತೀರಾ?’ ಕೇಳಿದಳು. ನಾನು `ಎಸ್’ ಎಂದುಬಿಟ್ಟೆ. ಆಗಲೇ ನೂರು ಅಡಿಗಳು ಮುಂದೆಹೋಗಿದ್ದ ದಾಸ್‌ನನ್ನು ಹಿಂದಕ್ಕೆ ಕರೆದೆ. ಜಗಬಂಧು ನನ್ನ ಹಿಂದೆ ಉಸಿರುಬಿಡುತ್ತಾ ನಿಂತಿದ್ದನು. ಗಗನಸಖಿ ಮುಂದೆ, ನಾವು ಹಿಂದೆ… ಅಲ್ಲಿಇಲ್ಲಿ ಸುತ್ತಿಬಳಸಿ ಹತ್ತಿಇಳಿದು ಡೆಸ್ಕ್ ಫಾರ್ಮಲಿಟೀಸ್ ಮುಗಿಸಿ ವಿಮಾನದಲ್ಲಿ ಕುಳಿತುಕೊಂಡಾಗ 5.20 ಗಂಟೆ. ಇನ್ನೇನಾದರೂ ಆಗಲಿ ದೆಹಲಿ ತಲುಪಿಬಿಟ್ಟೆವು ಎಂದು ನಿಟ್ಟುಸಿರಿಟ್ಟು ಕುಳಿತುಕೊಂಡೆ. ವಿಮಾನ ಸರಿಯಾದ ಸಮಯಕ್ಕೆ ಅಂದರೆ 5.30ಕ್ಕೆ ಆಕಾಶದ ಕಡೆಗೆ ಹಾರಿ ನನ್ನ ಎಲ್ಲಾ ಉದ್ವೇಗವೂ ಶಮನಗೊಂಡಿತ್ತು. ಆದರೆ ಬ್ಯಾಗೇಜ್ ಕತೆ! ವಿಮಾನದಲ್ಲಿ ಕೊಟ್ಟ ನೀರು ಮತ್ತು ಜ್ಯೂಸ್ ಕುಡಿದೆ. 25 ದಿನಗಳ ನಂತರ ಭಾರತೀಯ ಆಹಾರ ದೊರಕಿತ್ತು. ಹಿಂದಿ ಸಿನಿಮಾ ಹಾಡುಗಳು ಮತ್ತು ಹಿಂದಿ ಸೀರಿಯಲ್ ತುಣುಕುಗಳು ಆಸನದ ಮುಂದಿನ ಪರದೆ ಮೇಲೆ ಕಾಣಿಸುತ್ತಿದ್ದವು.

ರಾತ್ರಿ 9 ಗಂಟೆಗೆ ನಾವು ದೆಹಲಿಯಲ್ಲಿ ಇಳಿದುಕೊಂಡೆವು. ನನ್ನ ಕೈಗಡಿಯಾರದಲ್ಲಿ 11.30 ಗಂಟೆ ತೋರಿಸುತ್ತಿದ್ದು ಅದನ್ನು 2.30 ಗಂಟೆ ಹಿಂದಕ್ಕೆ ಸರಿಸಿದೆ. ನಮ್ಮ ಲಗೇಜ್ ಬಂದರೂ ಬರಬಹುದು ಎಂದು ಲಗೇಜ್ ಬೆಲ್ಟ್ ಹತ್ತಿರಕ್ಕೆ ಹೋಗಿ ನಿಂತುಕೊಂಡು ಕೊನೆಯವರೆಗೂ ನೋಡಿದೆವು, ಬರಲಿಲ್ಲ. ಡೆಸ್ಕ್‌ನಲ್ಲಿ ನಮ್ಮ ಲಗೇಜ್ ಬಗ್ಗೆ ದೂರು ನೀಡಿದೆವು. ಹಾಂಗ್‌ನಿಂದ ಕ್ಯಾತೆ ಏರ್‌ವೇ-753 ಬೆಳಗಿನ ಜಾವ 1.30ಕ್ಕೆ ಬರುವುದಾಗಿ ತಿಳಿದು ವಿಮಾನ ನಿಲ್ದಾಣದಲ್ಲಿಯೇ ಮೂವರೂ ಕಾಯತೊಡಗಿದೆವು. ನಾವು ಬೀಜಿಂಗ್‌ನಿಂದ ಟೆಲಿಗ್ರಾಮ್ ಕಳುಹಿಸಿದ್ದ ಕಾರಣ ದಾಸ್‌ನನ್ನು ಹೊರಕ್ಕೆ ಹೋಗಿ ನಮ್ಮ ದೆಹಲಿ ಕಛೇರಿಯಿಂದ ಕಾರ್ ಚಾಲಕ ಬಂದಿದ್ದಾನೇನೊ ನೋಡಿ ಬಾ ಎಂದೆ. ದಾಸ್ ನೋಡಿ ಬಂದು, ಯಾರೂ ಬಂದಿಲ್ಲ ಸರ್ ಎಂದ. ಅಂತೂ ಬೆಳಗಿನ ಜಾವ 2.15ಕ್ಕೆ ನಮ್ಮ ಲಗೇಜ್‌ಸ್ ಬಂದು ನಮ್ಮ ಬ್ಯಾಗೇಜ್‌ಗಳನ್ನು ಸಂಗ್ರಹಿಸಿಕೊಂಡು ನಾವು ಕೊಟ್ಟಿದ್ದ ದೂರನ್ನು ಹಿಂದಕ್ಕೆ ತೆಗೆದುಕೊಂಡೆವು. ಆ ದಿನ ದೆಹಲಿಯ ಕಛೇರಿಗೆ ಹೋಗಿ ರಾವತ್‌ಗೆ ಒಂದು ಜರ್ಕಿನ್ ಕೊಟ್ಟು ಅಲ್ಲಿನ ನಿರ್ದೇಶಕ ಬಳ್ಳಾ ಅವರ ಜೊತೆಗೆ ಊಟ ಮಾಡಿ ಅವರಿಗೆ ವಂದನೆಗಳನ್ನು ಸಲ್ಲಿಸಿದೆ. ಬಳ್ಳಾ ಅವರು ಏರ್‌ಪೋರ್ಟ್ಗೆ ಕಾರು ಕಳುಹಿಸಿದರು. ಸಾಯಂಕಾಲ 5.30ಕ್ಕೆ ದೆಹಲಿಯಿಂದ ಬೆಂಗಳೂರು ಕಡೆಗೆ ಐಸಿ-403 ವಿಮಾನ ಹಾರಿತು. ಅಂದು (12.11.2004) ದೀಪಾವಳಿಯ ಹಬ್ಬವಾದ್ದರಿಂದ ಬೆಂಗಳೂರು ನಗರದಲ್ಲಿ ಆಕಾಶದ ಕೆಳಗೆ ವಿದ್ಯುತ್ ದೀಪಗಳು ಮತ್ತು ಬಣ್ಣಬಣ್ಣದ ಪಠಾಕಿಗಳು ಸಿಡಿಯುತ್ತಿದ್ದವು. ವಿಮಾನದಲ್ಲಿ ಆಲ್ಕೋಹಾಲ್ ನಿಷೇಧಿಸಲಾಗಿದೆ ಎಂದು ವಿಮಾನ ಹತ್ತಿದಾಗಲೇ ಗಗನಸಖಿ ಹೇಳಿದ್ದಳು.

(ಇಲ್ಲಿನ ಕೆಲವು ಘಟನೆಗಳನ್ನು `ಡ್ರ್ಯಾಗನ್ಸ್ ಮಹಾಗೋಡೆಯೊಳಗೆ’-2007, ಜಾಗೃತಿ ಪ್ರಿಂಟರ್ಸ್‌ ಪ್ರಕಟಿಸಿದ ಪ್ರವಾಸ ಕಥೆಯಿಂದ ತೆಗೆದುಕೊಳ್ಳಲಾಗಿದೆ).

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ