ಹೆಚ್ಚಿನವರ ಕೈಯಲ್ಲಿ ಇಂದು ದುಡ್ಡು ಸುಲಭವಾಗಿ ಓಡಾಡುತ್ತಿದೆ. ಅದಕ್ಕೆ ತಕ್ಕನಾಗಿ ಆಸ್ತಿ, ಅಂತಸ್ತುಗಳು, ಬಳಸುವ ವಸ್ತುಗಳು ಇರಬೇಕೆಂದು ಬಯಸುವವರೇ ಹೆಚ್ಚು. ಪಟ್ಟಣಗಳು, ಮಾಲ್ ಸಂಸ್ಕೃತಿಗಳು ಜನರ ಕೊಳ್ಳುಬಾಕತನವನ್ನು ಇನ್ನಷ್ಟು ಉತ್ತೇಜಿಸುತ್ತಿವೆ. ಇತರರಿಂದ ಪ್ರಭಾವಕ್ಕೊಳಗಾಗುವ ಅನೇಕರು ಇತರರಂತೆ ನಾವೂ ಇರಬೇಕೆನ್ನುತ್ತಾ ತಮ್ಮ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಕೊಳ್ಳುತ್ತಾ ಜೀವನ ಸವೆಸುತ್ತಿದ್ದಾರೆ. ಹೊಸವರ್ಷದ ಹೊಸ್ತಿಲಲ್ಲಿ ನಾವೀಗ ಇದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಂಡರೆ, ಒಂದಷ್ಟು ನಮ್ಮ ಅಗತ್ಯತೆ, ಅನಗತ್ಯತೆಗಳನ್ನು ಅರ್ಥ ಮಾಡಿಕೊಂಡರೆ, ಸಹಜ-ಸರಳವಾಗಿ, ಪರಿಸರಕ್ಕೆ ಪೂರಕವಾಗಿ, ಸುಸ್ಥಿರ ಜೀವನ ನಡೆಸಲು ಖಂಡಿತಾ ಸಾಧ್ಯವಿದೆ.
ಪರಿಸರ ಕಾಳಜಿಯ ಕುರಿತು ಬಿ.ಸಂ.ಸುವರ್ಚಲಾ ಬರಹ
ಇತ್ತೀಚೆಗೆ ಪರಿಚಿತರೊಬ್ಬರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮನ್ನು ಸ್ವಾಗತಿಸಿದ್ದು ಚಂದ ಚಂದ ಬಗೆ ಬಗೆ ಹೂಗಳಿಂದ, ಹಸಿರಿನಿಂದ ನಳನಳಿಸುತ್ತಿದ್ದ ಅವರ ಮನೆ ಎದುರಿನ ಕೈದೋಟ. ಅಂಗಳದಲ್ಲಿ, ಮರಗಳಿಗೆ, ಮಾಡಿಗೆ ತೂಗಿ ಹಾಕಿದ್ದ, ಓರಣವಾಗಿ ಜೋಡಿಸಿಟ್ಟಿದ್ದ ಬಣ್ಣ ಬಣ್ಣದ ಕಲಾಕೃತಿಗಳು. ಪ್ರಶಾಂತವಾದ ಹಳ್ಳಿಯ ವಾತಾವರಣದ ಹಳೆ ಮನೆಯ ಪರಿಸರಕ್ಕೆ ಈ ಕಲಾಕೃತಿಗಳು ಶೋಭೆ ತಂದಿದ್ದವು. ಇದನ್ನೆಲ್ಲಾ ನೋಡುತ್ತಾ ಆಶ್ಚರ್ಯದಿಂದ ಇದೆಲ್ಲಾ ಎಲ್ಲಿಂದ ತಂದಿದ್ದು ಅಂತೆಲ್ಲಾ ಯೋಚಿಸುತ್ತಿರಬೇಕಾದರೆ, ಆ ಸ್ನೇಹಿತರು ಒಂದೊಂದೇ ವಸ್ತುಗಳನ್ನು ತೋರಿಸುತ್ತಾ, ಹಳೆಯ ಬಳಸಿ ಬಿಸಾಡುವಂತಹಾ ಹಂತದಲ್ಲಿದ್ದ ಹಲವು ಸಾಮಾಗ್ರಿಗಳನ್ನು ಹೇಗೆ ಅಲಂಕಾರಿಕ ಕಲಾಕೃತಿಯನ್ನಾಗಿ ಮರುಬಳಕೆ ಮಾಡಿದ್ದೇವೆ, ಮನೆಯ ಪರಿಸರದಲ್ಲೇ ಸಿಗುವ ವಸ್ತುಗಳೇ ಹೇಗೆ ಮನಮುದಗೊಳಿಸುವಂತಹ ಆಕೃತಿಗಳಾಗುತ್ತವೆ ಎಂದು ವಿವರಿಸುತ್ತಾ ಹೋದಂತೆ ನಮಗೆ ಆಶ್ಚರ್ಯ, ಖುಷಿಯಾದದ್ದಂತೂ ಹೌದು. ಅವರ ಕಲಾತ್ಮಕತೆಗೆ ತಲೆಬಾಗುತ್ತಾ ಅವರ ಮನೆ ಹೊಕ್ಕರೆ ಅಲ್ಲೂ ಯಾವುದೇ ಆಡಂಬರವಿಲ್ಲದೇ ಸಹಜತೆ, ಸರಳತೆಯೇ ಎದ್ದು ಕಾಣುತ್ತಿತ್ತು. ಹಳೆಯ ಕಾಲದ ಒಂದೆರಡು ಮರದ ಖುರ್ಚಿ, ಬೆಂಚುಗಳನ್ನೇ ಜೋಡಿಸಿ ಕುಳಿತುಕೊಳ್ಳಲು ಇಟ್ಟಿದ್ದರು. ಹಾಗೇ ಇನ್ನೂ ಹಲವು ಸರಳತೆಯ ಪಾಠ ಅಲ್ಲಿತ್ತು.
ಹೆಚ್ಚಿನವರ ಕೈಯಲ್ಲಿ ಇಂದು ದುಡ್ಡು ಸುಲಭವಾಗಿ ಓಡಾಡುತ್ತಿದೆ. ಅದಕ್ಕೆ ತಕ್ಕನಾಗಿ ಆಸ್ತಿ, ಅಂತಸ್ತುಗಳು, ಬಳಸುವ ವಸ್ತುಗಳು ಇರಬೇಕೆಂದು ಬಯಸುವವರೇ ಹೆಚ್ಚು. ಪಟ್ಟಣಗಳು, ಮಾಲ್ ಸಂಸ್ಕೃತಿಗಳು ಜನರ ಕೊಳ್ಳುಬಾಕತನವನ್ನು ಇನ್ನಷ್ಟು ಉತ್ತೇಜಿಸುತ್ತಿವೆ. ಇತರರಿಂದ ಪ್ರಭಾವಕ್ಕೊಳಗಾಗುವ ಅನೇಕರು ಇತರರಂತೆ ನಾವೂ ಇರಬೇಕೆನ್ನುತ್ತಾ ತಮ್ಮ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಕೊಳ್ಳುತ್ತಾ ಜೀವನ ಸವೆಸುತ್ತಿದ್ದಾರೆ. ಹೊಸವರ್ಷದ ಹೊಸ್ತಿಲಲ್ಲಿ ನಾವೀಗ ಇದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಂಡರೆ, ಒಂದಷ್ಟು ನಮ್ಮ ಅಗತ್ಯತೆ, ಅನಗತ್ಯತೆಗಳನ್ನು ಅರ್ಥ ಮಾಡಿಕೊಂಡರೆ, ಸಹಜ-ಸರಳವಾಗಿ, ಪರಿಸರಕ್ಕೆ ಪೂರಕವಾಗಿ, ಸುಸ್ಥಿರ ಜೀವನ ನಡೆಸಲು ಖಂಡಿತಾ ಸಾಧ್ಯವಿದೆ.
ಪ್ರತಿವರ್ಷವೂ ಹೊಸವರ್ಷಕ್ಕೆ ಒಂದಷ್ಟು ಸಂಕಲ್ಪಗಳನ್ನು ಕೈಗೊಳ್ಳುತ್ತೇವೆ. ನಮ್ಮ ಈ ವರ್ಷದ ಸಂಕಲ್ಪಗಳು ಸರಳ, ಸುಸ್ಥಿರ ಜೀವನದೆಡೆ ನಮ್ಮನ್ನು ಕೊಂಡೊಯ್ಯುವಂತಿರಲಿ. ಮನಸ್ಸಿದ್ದರೆ ಮಾರ್ಗ ಎಂಬಂತೆ ನಮ್ಮ ಜೀವನ ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ಇತರರಿಂದ ಪ್ರಭಾವಕ್ಕೊಳಗಾಗದೇ ನಮಗೇನು ಬೇಕೆಂಬುದನ್ನು ನಾವೇ ಕಂಡುಕೊಳ್ಳೋಣ.

ಪ್ಲಾಸ್ಟಿಕ್ ಮಿತಬಳಕೆ
ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಹೋಗಿರುವ ಪ್ಲಾಸ್ಟಿಕ್ ಇಲ್ಲದೇ ನಮ್ಮ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಆದರೆ ನಾವು ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಮಟ್ಟಿಗೆ ಮಿತಗೊಳಿಸಲು ಸಾಧ್ಯವಿದೆ. ಪ್ಲಾಸ್ಟಿಕ್ ತೆಗೆದುಕೊಳ್ಳದೇ ಇರುವುದು ಮೊದಲ ಸೂತ್ರ, ಅನಿವಾರ್ಯವಾದಲ್ಲಿ ಬಳಸಿದ ಪ್ಲಾಸ್ಟಿಕ್ ಅನ್ನು ಮತ್ತೆ ಮರುಬಳಕೆ ಮಾಡುವುದು ಸೂಕ್ತ. ಹೊರಗೆ ಹೋಗುವಾಗ ಸದಾ ನಮ್ಮೊಂದಿಗೆ ಸ್ಟೀಲ್ ನೀರಿನ ಬಾಟಲಿಗಳನ್ನೇ ತೆಗೆದುಕೊಂಡು ಹೋಗುವುದು. ಸಣ್ಣ ಸ್ಟೀಲ್ ಲೋಟವನ್ನು ನಮ್ಮ ಚೀಲದಲ್ಲಿಟ್ಟುಕೊಂಡು, ಪ್ಲಾಸ್ಟಿಕ್ ಅಥವಾ ಪೇಪರ್ ಲೋಟಗಳ ಬದಲಿಗೆ ನಮ್ಮ ಲೋಟವನ್ನು ಬಳಸುವುದು. ಸಾಮಾನು ತರಲು ನಮ್ಮದೇ ಬಟ್ಟೆ ಕೈಚೀಲ ತೆಗೆದುಕೊಂಡು ಹೋಗುವುದು. ಮನೆಗಳಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್, ಡಬ್ಬಿ, ಬಕೆಟ್, ಟೇಬಲ್, ಕುರ್ಚಿಗಳನ್ನು ಬಳಸದೇ ಇರುವುದು. ಕೆಲವು ಸಣ್ಣ ಬದಲಾವಣೆಗಳು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬಹುದು.
ಮರುಬಳಕೆಯ ಮಂತ್ರ ನಮ್ಮಲ್ಲಿರಲಿ
ನಮ್ಮಲಿರುವ ಯಾವುದೇ ವಸ್ತು ಹಾಳಾಯಿತೆಂದರೆ, ಅದನ್ನು ಬಿಸಾಡುವ ಮೊದಲು ಇದನ್ನು ಬೇರೆ ಯಾವುದಾದರೂ ರೀತಿಯಲ್ಲಿ ಮರುಬಳಕೆ ಸಾಧ್ಯವೇ ಎಂಬುದನ್ನು ಯೋಚಿಸೋಣ. ಉದಾಹರಣೆಗೆ ನಾವು ಉಪಯೋಗಿಸುವ ಬಟ್ಟೆ ಹಾಳಾದರೆ, ಅದನ್ನು ಕಾಲೊರೆಸಲು ಗೋಣಿಯಾಗಿಯೋ, ದಿಂಬಿನ ಕವರ್ ಆಗಿಯೋ, ನೆಲ ಒರೆಸುವ ಬಟ್ಟೆಯಾಗಿಯೋ, ಕರ್ಚಿಪ್ ಆಗಿಯೋ ಪರಿವರ್ತನೆ ಮಾಡಿಕೊಳ್ಳಬಹುದು. ಪಾತ್ರೆ, ಡಬ್ಬಿಗಳು ಹಾಳಾದರೆ ಗಿಡ ನೆಡಲು ಪಾಟ್ ರೀತಿಯಲ್ಲಿ ಬಳಸಬಹುದು. ಹೀಗೆ ನಮ್ಮ ನಮ್ಮ ಆಲೋಚನೆಗಳನ್ನು ಬಳಸಿಕೊಂಡು ಹಲವು ವಸ್ತುಗಳನ್ನು ಮರುಬಳಕೆ ಮಾಡಲು ಖಂಡಿತಾ ಸಾಧ್ಯವಿದೆ. ಈಗ ಯೂಟ್ಯೂಬ್‌ನಲ್ಲಂತೂ ಹಲವು ಐಡಿಯಾಗಳು ಸಿಗುತ್ತವೆ.
ಕೊಳ್ಳುಬಾಕತನಕ್ಕೆ ಮಿತಿ ಹಾಕೋಣ
ಸರಳವಾಗಿ ಜೀವನ ಮಾಡಬೇಕೆಂಬ ಮನಸ್ಸು ನಮಗಿದ್ದರೆ, ನಾವು ಮಾಡಬೇಕಾದ ಮೊದಲನೆಯ ಕೆಲಸವೆಂದರೆ, ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಕೊಳ್ಳುವುದು, ನಮ್ಮ ಬಳಿ ಇಟ್ಟುಕೊಳ್ಳುವುದಕ್ಕೆ ಕಡಿವಾಣ ಹಾಕುವುದು. ಒಂದು ಚಪ್ಪಲಿ ಸವೆದು ಹೋಗುವ ಮೊದಲು ಇನ್ನೊಂದನ್ನು ತೆಗೆದುಕೊಳ್ಳದೇ ಇರುವುದು. ಚಂದ ಕಂಡಾಕ್ಷಣ ನಮಗೆ ಅಗತ್ಯವಿಲ್ಲದಿದ್ದರೂ ಬಟ್ಟೆ, ಮನೆ ಬಳಕೆಯ ಸಾಮಾನು, ಅಲಂಕಾರಿಕ ವಸ್ತುಗಳನ್ನು ತೆಗೆದುಕೊಳ್ಳುವುದು. ಇವೆಲ್ಲದಕ್ಕೂ ಕಡಿವಾಣ ಹಾಕಿಕೊಂಡು, ಐದು ಬಟ್ಟೆ/ ವಸ್ತು ತೆಗೆದುಕೊಳ್ಳುವ ಬದಲು ಒಂದು ಒಳ್ಳೆಯ ಗುಣಮಟ್ಟದ ಬಟ್ಟೆ/ವಸ್ತು ತೆಗೆದುಕೊಂಡು ಪೂರ್ಣವಾಗಿ ಅದು ಹಾಳಾಗುವವರೆಗೂ ಬಳಸುವುದು ನಮ್ಮ ಸರಳ ಬದುಕಿಗೆ ಕೈಗನ್ನಡಿ ಹಿಡಿಯುತ್ತದೆ.
ಗೃಹಬಳಕೆಯ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಳ್ಳುವಾಗಲೂ ಕೂಡಾ ತುಂಬಾ ಅಗತ್ಯತೆ ಇರುವ ವಸ್ತುಗಳನ್ನು ಮಾತ್ರ ಕೊಂಡು ಬಳಸುವುದರಿಂದ ಇಂಧನಗಳನ್ನು ಉಳಿತಾಯ ಮಾಡಬಹುದು ಹಾಗೂ ಅವುಗಳಿಂದ ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಡೆಗಟ್ಟಬಹುದು.

ನಮ್ಮ ಮನೆಯ ಸುತ್ತಲೂ ಒಂದಷ್ಟು ಜಾಗವಿದ್ದರೆ, ಆ ಜಾಗಕ್ಕೆ ಕಾಂಕ್ರಿಟ್, ಇಂಟರ್ ಲಾಕ್ ಹಾಕುವ ಬದಲು ಮಣ್ಣಿನ ಅಂಗಳವನ್ನು ಹಾಗೇ ಬಿಡೋಣ ಅಥವಾ ಹುಲ್ಲು ಬೆಳೆಸೋಣ. ಮಣ್ಣಿನ ಕಣ ಕಣದಲ್ಲೂ ಮನುಷ್ಯನಿಗೆ, ಗಿಡಗಳಿಗೆ ಒಳ್ಳೆಯದನ್ನುಂಟು ಮಾಡುವ ಜೀವಿಗಳಿವೆ. ಮನೆಯ ಪರಿಸರದಲ್ಲಿ ಒಂದಷ್ಟು ಹಸಿರಿದ್ದರೆ ಮನಸ್ಸಿಗೆ, ದೇಹಕ್ಕೆ ತಂಪು. ಆರೋಗ್ಯಕ್ಕೂ ಒಳ್ಳೆಯದು. ಪರಿಸರವನ್ನೂ ಸುಸ್ಥಿರವಾಗಿಡಬೇಕಾದುದು ನಮ್ಮ ಮೊದಲ ಆದ್ಯತೆಯಾಗಲೇಬೇಕಿದೆ. ಪರಿಸರವನ್ನು ಸುಸ್ಥಿರವಾಗಿಡುತ್ತಲೇ ನಾವೂ ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಂಡು ಸಾಗಬೇಕಿದೆ. ಇದೇ ನಾವು ನಮ್ಮ ಭೂಮಿಗೆ ಸಲ್ಲಿಸುವ ಪುಟ್ಟ ಕಾಣಿಕೆ ಅಷ್ಟೇ. ಇದೇ ನಮ್ಮ ಹೊಸ ವರ್ಷದ ಧ್ಯೇಯವಾಗಲಿ.

ಮೂಲತಃ ಮಲೆನಾಡು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಬಿ.ಸಂ.ಸುವರ್ಚಲಾ ಪ್ರಸ್ತುಕ ಕಾರ್ಕಳ ವಾಸಿ. ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ಪ್ರಸ್ತುತ ಶಾಖಾ ಅಂಚೆಪಾಲಕಿಯಾಗಿ ಗ್ರಾಮೀಣ ಭಾಗದಲ್ಲಿ ಉದ್ಯೋಗ. ಸಾಹಿತ್ಯ, ಕಲೆ, ತಿರುಗಾಟ ಮುಂತಾದ ಹವ್ಯಾಸಗಳು ಜೀವನ ಪ್ರೀತಿಗೆ ಸ್ಫೂರ್ತಿ.
