Advertisement
ಪೀಪಲ್ಸ್ ರಿಪಬ್ಲಿಕ್ ಚೀನಾದಲ್ಲಿ….: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಪೀಪಲ್ಸ್ ರಿಪಬ್ಲಿಕ್ ಚೀನಾದಲ್ಲಿ….: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಸುತ್ತಲೂ ಆಕಾಶದ ಒಳಗೆ ಮೋಡಗಳ ಜೊತೆಗೆ ಸಾಗರದ ಅಲೆಗಳಂತೆ ಕಣ್ಣು ಹಾಯುವವರೆಗೂ ಬೆರೆತುಹೋಗಿರುವ ಅನಂತ ಗಿರಿ ಶಿಖರ ಶ್ರೇಣಿಗಳು. ತಣ್ಣನೆ ರಾತ್ರಿಯಲ್ಲಿ ಚಳಿಯ ರಗ್ಗನ್ನೊದ್ದು ಕಣ್ಣುಜ್ಜಿಕೊಂಡು ಪೂರ್ವದಲ್ಲಿ ಬೆಟ್ಟಗಳ ಕಡೆಗೆ ಸೂರ್ಯನು ನೋಡುತ್ತಿದ್ದನು. ನಡುವೆ ಬಿಳಿ ಮುಗಿಲು ಮತ್ತು ಮಂಜಿನ ತೆರೆಗಳ ಸರಸ. ಎಲ್ಲವನ್ನು ಸೀಳಿಕೊಂಡು ಆಕಾಶವನ್ನೇ ಮೆಟ್ಟಿಲು ಮಾಡಿಕೊಂಡು ಗಿರಿ ಶಿಖರಗಳ ಮೇಲೆ ಎದ್ದು ಬಿದ್ದು ಚಾಚಿ ಮಲಗಿರುವ ಡ್ರ್ಯಾಗನ್ ಮಹಾಗೋಡೆಗಳು. ಸುತ್ತಲಿದ್ದ ರಮಣೀಯ ದೃಶ್ಯಗಳನ್ನು ನೋಡುತ್ತ ಉತ್ತರ ದಿಕ್ಕಿಗೆ ಬೆಳೆದುನಿಂತಿದ್ದ ಗೋಡೆಗಳ ಮೇಲೆ ನಾವು ಹೆಜ್ಜೆಗಳನ್ನಿಡುತ್ತ ಸಾಗುತ್ತಿದ್ದೆವು.
ಚೀನಾ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

2004ರ ಅಕ್ಟೋಬರ್ 6ರಂದು 10 ಗಂಟೆಗೆ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿರುವ ನಮ್ಮ ಕಚೇರಿಗೆ ಹೋಗಿ ಕುರ್ಚಿಯಲ್ಲಿ ಕುಳಿತುಕೊಂಡಿದ್ದೆ ನಿರ್ದೇಶಕರಾದ ವಿದ್ಯಾಧರನ್ ಇಂಟರ್‌ಕಾಮ್‌ನಲ್ಲಿ `ವೆಂಕಟಸ್ವಾಮಿ ಬೇಗನೆ ಬನ್ನಿ, ಮಿನಿಸ್ಟ್ರಿಯಿಂದ ನಿಮ್ಮ ಚೀನಾ ಟ್ರಿಪ್ ಕ್ಲಿಯರ್ ಆಗಿದೆ’ ಎಂದರು. ಅವರ ಕೋಣೆಗೆ ಓಡಿದೆ. `ದೆಹಲಿಯಿಂದ ಫೋನ್ ಬಂದಿತ್ತು. ನಾಳೆ ಬೆಳಿಗ್ಗೆ ನೀವು ದೆಹಲಿಗೆ ಹೋಗಬೇಕು. ಎಲ್ಲಾ ತಯಾರಿ ಮಾಡಿಕೊಳ್ಳಿ. ದೆಹಲಿಗೆ ಸಾಯಂಕಾಲ ಹೋಗ್ತೀರೊ? ನಾಳೆ ಬೆಳಿಗ್ಗೆ ಹೋಗ್ತೀರೊ?’ ಎಂದರು. `ಬೆಳಿಗ್ಗೆ ಹೋಗ್ತೀನಿ ಸರ್’ ಎಂದೆ. ಅವರು ಏರ್ ಟಿಕೆಟ್ ಬುಕ್ಕಿಂಗ್ ಕಚೇರಿಗೆ ಫೋನ್ ಮಾಡತೊಡಗಿದರು. ತಕ್ಷಣವೇ ಜಯನಗರಕ್ಕೆ ಹೋಗಿ ಪಾಸ್‌ಪೋರ್ಟ್ ಫೋಟೋಗಳನ್ನು ಹಿಡಿಸಿಕೊಂಡುಬಂದು ಚೀನಾ ತರಬೇತಿಗೆ ಬೇಕಾಗಿದ್ದ ಫೈಲ್‌ಗಳನ್ನು/ಸಿಡಿಗಳನ್ನು ಕಛೇರಿಯಲ್ಲಿ ಹುಡುಕಿ ತೆಗೆದಿಟ್ಟುಕೊಂಡೆ. ಚೀನಾದಲ್ಲಿ ಒಂದು ತಿಂಗಳು ಕಾಲ `ನ್ಯಾಷನಲ್ ಜಿಯೋಕೆಮಿಕಲ್ ಮ್ಯಾಪಿಂಗ್’ ತರಬೇತಿ ಇದ್ದು 15 ದಿನಗಳ ಮುಂಚೆಯೆ ನನಗೆ ತಿಳಿಸಲಾಗಿತ್ತು. 5.30ಕ್ಕೆ ಟಿಕೆಟ್‌ಗಳನ್ನು ತಂದುಕೊಟ್ಟರು, 5.42ಕ್ಕೆ ಫ್ಯಾಕ್ಸ್ ಮೂಲಕ ಆರ್ಡರ್ ಬಂದಿತು. ಬೆಳಿಗ್ಗೆಯಿಂದ ಏರುತ್ತಿದ್ದ ಟೆನ್ಷನ್ ತಣ್ಣಗಾದರೂ ಮುಂದಿನ ಕೆಲಸಗಳು! ಎಲ್ಲರೂ ಶುಭಕೋರಿ ಬೀಳ್ಕೊಟ್ಟರು, ಹೊರಗೆ ಜೀಪ್ ಚಾಲಕ ಮಹಾಲಿಂಗ ಕಾಯುತ್ತಿದ್ದನು. ಮುಸುಮುಸು ಕತ್ತಲು ಜೀಪ್ ಹತ್ತಿಕುಳಿತು, `ನಾಳೆ ಬೆಳಿಗ್ಗೆ 6.30ಕ್ಕೆ ವಿಮಾನ ಇದೆ (ಎಚ್.ಎ.ಎಲ್. ಏರ್‌ಪೋರ್ಟ್), ನೀನು ನಾಲ್ಕೂವರೆ ಗಂಟೆಗೆಲ್ಲ ನಮ್ಮ ಮನೆ ಹತ್ತಿರಕ್ಕೆ ಇರಬೇಕು. ಸರಿಯಾಗಿ ರಸ್ತೆ ನೋಡಿಕೊ. ಬೆಳಿಗ್ಗೇನೆ ನನಗೆ ಟೆನ್ಷನ್ ಮಾಡಬೇಡ’ ಎಂದೆ. ನೀವು ಆರಾಮಾಗಿ ಮಲಗಿ ನಿದ್ದೆ ಮಾಡಿ ಸರ್, ನಾನು ಮೂರೂವರೆಗೆಲ್ಲ ಬಂದು ಬಾಗಿಲು ತಟ್ಟತೀನಿ’ ಎಂದ. ಆಗ ರಾಜರಾಜೇಶ್ವರಿ ಲೇಔಹೌಟ್‌ನಲ್ಲಿದ್ದ ನಮ್ಮ ಮನೆಯಿಂದ ಏರ್‌ಪೋರ್ಟ್ಗೆ ಮುಕ್ಕಾಲು ಗಂಟೆ ಪ್ರಯಾಣ. ಒಂದು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿ ಇರಬೇಕಾಗಿತ್ತು.

ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಸುಶೀಲ, ಕ್ರಾಂತಿ ಜೊತೆಗೆ ಮನೆಯಿಂದ ಹೊರಕ್ಕೆ ಬಂದೆ. ಕುಡುಕ ಮಹಾಲಿಂಗ ಕಾಣಿಸಲಿಲ್ಲ. ಐದು ಗಂಟೆಯಾಯಿತು ಮಹಾಲಿಂಗ ಕಾಣಿಸಲಿಲ್ಲ. ಕ್ರಾಂತಿ, `ಏನು ಡ್ಯಾಡಿ ನಿಮ್ಮ ಡ್ರೈವರ್ ಇಷ್ಟೊಂದು ಬೇಜವಾಬ್ದಾರಿ’ ಎಂದ. ಇನ್ನೂ ಕಾದು ಪ್ರಯೋಜನ ಇಲ್ಲ. ಆಗ ನನ್ನ ಬಳಿ ಮೊಬೈಲ್ ಇರಲಿಲ್ಲ. ಎದುರುಮನೆಯಲ್ಲಿದ್ದ ಲೋಕೇಶ್ ಪತ್ನಿ ಮನೆಮುಂದೆ ರಂಗೋಲಿ ಸಾರಿಸುತ್ತಿದ್ದಳು. ಸುಶೀಲ ಅವರಿಗೆ ಹೇಳಿ ಅವರ ಗಂಡ ಲೋಕೇಶರನ್ನು ಏರ್‌ಪೋರ್ಟ್‌ಗೆ ಬಿಡುವಂತೆ ವಿನಂತಿಸಿಕೊಂಡೆ. 5.10ಕ್ಕೆ ಮನೆಬಿಟ್ಟು ಅರ್ಧಗಂಟೆಯಲ್ಲಿ ವಿಮಾನ ನಿಲ್ದಾಣ ತಲುಪಿದೆವು. ಜೊತೆಗೆ ಸುಶೀಲ, ಕ್ರಾಂತಿ ಕೂಡ ಇದ್ದರು, ಇನ್ನೂ 50 ನಿಮಿಷ ಇದ್ದು, ಬರ್ತೀನಿ ಎಂದು ನಿಲ್ದಾಣದ ಒಳಕ್ಕೆ ಸರಸರನೇ ಹೋಗಿಬಿಟ್ಟೆ. ದೆಹಲಿಯಲ್ಲಿ ಇಳಿದು ಹೊರಕ್ಕೆ ಬಂದಾಗ ಹೊರಗೆ ಜಿ.ಎಸ್.ಐ. ಹೆಸರಿನ ಪ್ಲೆಕಾರ್ಡ್ ಇಟ್ಟುಕೊಂಡು ಚಾಲಕ ನಿಂತಿದ್ದ. ಅರ್ಧ ದಾರಿಯಲ್ಲಿ ದೆಹಲಿ ಕಛೇರಿಯ ರಾವತ್ ಜೊತೆಗೆ ಸೇರಿಕೊಂಡ. ಈತ ನಮ್ಮ ವಿಭಾಗದಿಂದ ಹೊರದೇಶಗಳಿಗೆ ಹೋಗುವ ಅಧಿಕಾರಿಗಳಿಗೆ ಪಾಸ್‌ಪೋರ್ಟ್ ಮತ್ತು ವೀಸಾ ಮಾಡಲು ಸಹಾಯ ಮಾಡುವ ಪಿ.ಆರ್.ಒ. ಅಧಿಕಾರಿಯಾಗಿದ್ದ. ನನ್ನ ಜೊತೆಗೆ ಇನ್ನಿಬ್ಬರು ಆಯ್ಕೆಯಾಗಿದ್ದು ಒಬ್ಬರು ಜ್ಯೂನಿಯರ್ ಜಿಯಾಲಜಿಸ್ಟ್, ಜೈಪುರದಿಂದ ಇನ್ನೊಬ್ಬರು ಜಿಯೋಕೆಮಿಸ್ಟ್ ಕೊಲ್ಕತ್ತಾದಿಂದ ಬರಬೇಕಾಗಿತ್ತು. ರಾವತ್, ಅವರಿಬ್ಬರೂ ಬರಬೇಕಾಗಿದೆ ಎಂದ. ನಾನು ಸೀನಿಯರ್ ಜಿಯಾಲಜಿಸ್ಟ್ ಆದ್ದರಿಂದ ವಿಮಾನ ಸೌಕರ್ಯ ನನಗೆ ಮಾತ್ರ ಇದ್ದು ಅವರಿಬ್ಬರು ರೈಲಿನಲ್ಲಿ ಬರಬೇಕಾಗಿತ್ತು. ಅವರಿಬ್ಬರೂ ಎರಡುಮೂರು ದಿನಗಳಾದ ಮೇಲೆ ಬಂದು ಮೂವರಿಗೂ ವೈಟ್ ಡಿಪ್ಲೊಮೇಟ್ ಪಾಸ್‌ಪೋರ್ಟ್‌ಗಳು ಮತ್ತು ವೀಸಾಗಳು ದೊರಕುವುದರೊಳಗೆ ಎಂಟು ದಿನಗಳು ದೆಹಲಿಯಲ್ಲೆ ಕಳೆದುಹೋಗಿದ್ದವು. ನಾನು ತೆಗೆದುಕೊಂಡುಹೋಗಿದ್ದ ಹಣ ದೆಹಲಿಯಲ್ಲೆ ಮುಗಿದುಹೋಗಿತ್ತು. ಮುಂದೆ ಅದೊಂದು ದೊಡ್ಡ ಕತೆ.

ಅಂತೂ 15ನೇ ತಾರೀಖು ಮಧ್ಯರಾತ್ರಿ 0.50 ಗಂಟೆಗೆ ನಾವಿದ್ದ ವಿಮಾನ ದೆಹಲಿ ಬಿಟ್ಟುಹೊರಟಿತು. ಸುಮಾರು 4.30 ಗಂಟೆಗಳ ಕಾಲ ಹಾರಿದ ವಿಮಾನ ಬ್ಯಾಂಕಾಕ್‌ನಲ್ಲಿ ಇಳಿದುಕೊಂಡಿತು. ಅಲ್ಲಿ ಐದು ಗಂಟೆಗಳ ಕಾಲ ಕಾದು ಬೀಜಿಂಗ್‌ಗೆ ಇನ್ನೊಂದು ವಿಮಾನದಲ್ಲಿ ಹೊರಟೆವು. ಅದು 700 ಪ್ರಯಾಣಿಕರು ಹಿಡಿಯುವ ಡಬ್ಬಲ್ ಡೆಕ್ಕರ್ ವಿಮಾನ. ಸಾಯಂಕಾಲ ಬೀಜಿಂಗ್‌ನಲ್ಲಿ ಇಳಿದುಕೊಂಡೆವು. ವಿಮಾನದಲ್ಲಿ ದೊಡ್ಡದೊಡ್ಡ ಟಿವಿ ಪರದೆಗಳಿದ್ದು ತಿನ್ನಲು ಕುಡಿಯಲು ಸಾಕಷ್ಟು ಕೊಟ್ಟರು. ಬೀಜಿಂಗ್ ವಿಮಾನ ನಿಲ್ದಾಣ ನೋಡಿ ದಂಗಾಗಿಹೋದೆ. ಎಲ್ಲಾ ಕಡೆ ಸೆಕ್ಯೂರಿಟಿಯವರು ಗನ್ನುಗಳನ್ನು ಹಿಡಿದುಕೊಂಡು ನಿಂತಿದ್ದರು. ಎಲ್ಲಾ ಫಾರ್ಮಲಿಟೀಸ್ ಮುಗಿಸಿಕೊಂಡು ಬ್ಯಾಗುಗಳನ್ನು ಟ್ರಾಲಿಗಳಲ್ಲಿ ತಳ್ಳಿಕೊಂಡು ಹೊರಕ್ಕೆ ಬರುತ್ತಾ ಐ.ಜಿ.ಜಿ.ಐ. ಎಂದು ಬರೆದಿರುವ ಪ್ಲಕಾರ್ಡ್ಅನ್ನು ಎರಡೂ ಕಡೆ ಹುಡುಕಿಕೊಂಡು ಬರುತ್ತಿದ್ದಂತೆ ಮೂವರು ಯುವಕರು ಪ್ಲಕಾರ್ಡ್ ಇಟ್ಟುಕೊಂಡು ನಿಂತಿದ್ದರು. ಮೂವರೂ ನಮ್ಮ ಕೈಗಳನ್ನು ಕುಲಿಕಿ ಬರಮಾಡಿಕೊಂಡರು. ಎಲ್ಲರೂ ಒಂದು ಟೆಂಪೋದಲ್ಲಿ ಕುಳಿತುಕೊಂಡು ಹೊರಟೆವು. ಅವರ ಭಾಷೆ ನಮಗೆ ನಮ್ಮ ಭಾಷೆ ಅವರಿಗೆ ಅರ್ಥವಾಗಲಿಲ್ಲ. ಅವರು ಇಂಗ್ಲಿಷ್ ಮಾತನಾಡುತ್ತಿದ್ದರೂ ಚೀನಿ ಆಕ್ಸೆಂಟ್‌ನಿಂದ ಅರ್ಥವಾಗುತ್ತಿಲ್ಲ. ನವದೆಹಲಿಗಿಂತ ಬೀಜಿಂಗ್ ಸಮಯ 2.30 ಗಂಟೆ ಮುಂದಿದ್ದು ನಮ್ಮ ಗಡಿಯಾರಗಳ ಸಮಯವನ್ನು ತಿರುಗಿಸಿಕೊಂಡೆವು.

ರಾತ್ರಿ ಜಗಮಗಿಸುವ ಕಟ್ಟಡಗಳ ಸಂಕೀರ್ಣದ ರೆಸ್ಟಾರೆಂಟ್ ಒಂದರ ಒಳಕ್ಕೆ ನಮ್ಮನ್ನ ಕರೆದುಕೊಂಡು ಹೋಗಲಾಯಿತು. ದೊಡ್ಡ ಹಾಲಿನ ತುಂಬಾ ಚೀನಿಯರು ಟೇಬಲುಗಳ ಮುಂದೆ ಕುಳಿತುಕೊಂಡಿದ್ದರು. ವಿವಿಧ ರೀತಿಯ ಭಕ್ಷ್ಯಗಳಿದ್ದು ಕೈಗಳಲ್ಲಿ ಚಾಪ್‌ಸ್ಟಿಕ್ಸ್ ಹಿಡಿದುಕೊಂಡು ತಿನ್ನುತ್ತಿದ್ದರು. ತಟ್ಟೆಗಳ ಮುಂದೆ ಬೀರು, ವೈನು, ಕೋಕಾಕೋಲಾ, ಸ್ಪ್ರೈಟ್, ಬಣ್ಣಬಣ್ಣದ ಬಾಟಲುಗಳು ಕುಳಿತಿದ್ದವು. ನೀರು ಬಾಟಲುಗಳು/ಗ್ಲಾಸುಗಳು ಕಾಣಿಸಲಿಲ್ಲ. ಒಳಗೆ ಇನ್ನೊಂದು ಕೋಣೆಗೆ ನಮ್ಮನ್ನ ಕರೆದುಕೊಂಡು ಹೋಗಲಾಯಿತು. ಅಲ್ಲಿ ಆಗಲೇ ತರಬೇತಿಗೆ ಬಂದಿದ್ದು 14 ಅಭ್ಯರ್ಥಿಗಳು ಕುಳಿತಿದ್ದರು. ನಾವು ಮೂವರು ಸೇರಿ ಒಟ್ಟು 17 ಅಭ್ಯರ್ಥಿಗಳು. ದಕ್ಷಿಣ ಆಫ್ರಿಕಾ, ತಾಂಜೇನಿಯಾ, ಕೆನಡಾ, ಜರ್ಮನಿ, ಬೆನಿನ್ ದೇಶಗಳ ಭೂವಿಜ್ಞಾನಿಗಳು ಮತ್ತು ಭೂರಸಾಯನ ವಿಜ್ಞಾನಿಗಳಿದ್ದರು. ಜೊತೆಗೆ ನಮ್ಮ ತರಬೇತಿಯ ಮುಖ್ಯಸ್ಥ ಡಾ. ವಾಂಗ್ ಮತ್ತು ಅವರ ಪಿಎಚ್‌ಡಿ ಸಂಶೋಧಕರು ಇದ್ದರು. ನಾವು ಎದ್ದುಬಿದ್ದು ಬೀಜಿಂಗ್ ತಲಪುವಷ್ಟರಲ್ಲಿ ಐದು ದಿನಗಳ ತರಬೇತಿ ಮುಗಿದುಹೋಗಿತ್ತು. ಎಲ್ಲವೂ ಬಫೆ ಸಿಸ್ಟಮ್, ಸಂಪೂರ್ಣವಾಗಿ ಕುದಿಸಿದ ಮುದ್ದೆ ಅನ್ನ, ಫ್ರೈಡ್ ಪ್ರಾನ್ಸ್, ಫಿಶ್‌ಫ್ರೈ, ಎಗ್-ಟಮ್ಯಾಟೊ, ಬದನೆಕಾಯಿ ಫ್ರೈ, ಎಣ್ಣೆಯಲ್ಲಿ ಕರಿದ ಎಲೆಕೋಸು, ಕ್ರೀಮ್ ಸವರಿದ ಆಪಲ್-ಕಿತ್ತಲೆ ಹಣ್ಣಿನ ಹೋಳುಗಳು, ಎಗ್‌ಸೂಪ್ ಮತ್ತು ವಿಧವಿಧ ಸಲಾಡ್‌ಗಳು. ತರಬೇತಿ ನಡೆಯುವ ಕಟ್ಟಡಕ್ಕೆ ನಡೆದುಕೊಂಡು ಬರುವ ದಾರಿ ತೋರಿಸಿ ಹತ್ತಿರದ ಒಂದು ಭವ್ಯ ಹೋಟಲಿನಲ್ಲಿ ಬಿಟ್ಟುಹೋದರು.

ಮರುದಿನ ನಾವಿದ್ದ ಹೋಟಲಿನ ರೆಸ್ಟಾರೆಂಟ್‌ನಲ್ಲಿ ತಿಂಡಿ ಮುಗಿಸಿ ತರಬೇತಿ ನಡೆಯುವ ಐ.ಜಿ.ಜಿ.ಐ. ಇನ್‌ಸ್ಟಿಟ್ಯೂಟ್‌ಗೆ ನಡೆದುಕೊಂಡೆ ಹೋದೆವು. ಬೆಳಗಿನ ಉಪಾಹಾರದ ಭಕ್ಷ್ಯಗಳನ್ನು ನೋಡಿದ ನಾವು ದಂಗಾಗಿಹೋದೆವು. ಎಷ್ಟೊಂದು ರೀತಿಯ ಭಕ್ಷ್ಯಗಳು? ಹತ್ತಾರು ಹಣ್ಣು-ತರಕಾರಿಗಳು, ಜ್ಯೂಸುಗಳು, ಕರಿದ ಮಾಂಸ, ಮೊಟ್ಟೆ ಬ್ರೆಡ್ಡು-ಬನ್ನು-ಬೇಕರಿ ಐಟಂಗಳು, ಅನ್ನ-ನೂಡಲ್ಸ್ ಹಸಿಕಾಳುಗಳು, ಕಾಫಿ ಹಾಲು ಟೀ ಕೊನೆಗೆ ಗರಿಕೆ ಹುಲ್ಲನ್ನೂ ಸಹ ತೊಳೆದು ಇಟ್ಟಿದ್ದರು. ಮನಸ್ಸಿಗೆ ಬಂದಿದ್ದನ್ನು ತಿಂದೆವು. ನಾವಿರುವಷ್ಟು ದಿನ ಮೂರ‍್ಹೊತ್ತು ತಿಂಡಿ ಊಟ ಎಲ್ಲವೂ ಉಚಿತವಾಗಿತ್ತು. ಜೊತೆಗೆ ಪ್ರತಿಯೊಬ್ಬರಿಗೂ 800 ಯುವಾನ್ (ಆಗ ನಮ್ಮ ಎಂಟು ರೂಪಾಯಿಗಳಿಗೆ ಒಂದು ಯುವಾನ್ ಸಮ) ಪಾಕೆಟ್ ಮನಿ ಬೇರೆ ನೀಡಿದ್ದರು. ಇನ್ನು ಇನ್‌ಸ್ಟಿಟ್ಯೂಟ್ ಈಗಿನ ಮಾಡರ್ನ್ ಕಾರ್ಪೋರೇಟ್ ಕಛೇರಿಯಂತಿತ್ತು. ಒಂದೇ ಸಮಸ್ಯೆ ಎಂದರೆ ಡಾ. ವಾಂಗ್ ಬಿಟ್ಟರೆ ಬೇರೆ ಯಾರಿಗೂ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಚೈನೀಸ್ ಭಾಷೆಯಲ್ಲಿ ಯಾರೇ ಲೆಕ್ಚರ್ ಕೊಟ್ಟರೂ ವಾಂಗ್ ನಮಗೆ ಇಂಗ್ಲಿಷ್‌ನಲ್ಲಿ ಭಾಷಾಂತರಿಸಬೇಕಾಗಿತ್ತು. ನಾವು ಇಂಗ್ಲಿಷ್‌ನಲ್ಲಿ ಹೇಳಿದ್ದನ್ನೂ ಅವರು ಚೀನಾ ಭಾಷೆಯಲ್ಲಿ ಹೇಳಬೇಕಾಗಿತ್ತು.

ಚೀನಿಯರು ಎಷ್ಟು ಶಿಸ್ತಿನಿಂದ ಇದ್ದರು ಎನ್ನುವುದಕ್ಕೆ ಎರಡು ಘಟನೆಗಳನ್ನು ಹೇಳಬಹುದು: ಮೊದಲ ದಿನ ವಾಂಗ್ `ತಾವು ಯಾರಾದರೂ ಮೊದಲಿಗೆ ಬಂದರೆ ಕೋಣೆಬಾಗಿಲು ತೆರೆದುಕೊಂಡು ಒಳಕ್ಕೆ ಹೋಗಬಹುದು. ನೀವು ಕುಳಿತುಕೊಳ್ಳುವ ಸ್ಥಳಕ್ಕೆ ಬೇಕಾದಷ್ಟು ದೀಪಗಳನ್ನು ಬೆಳಗಿಸಿ ನಿಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಬಹುದು. ಕೊನೆಗೆ ಬರುವವರು ಎಲ್ಲಾ ದೀಪಗಳನ್ನು ಸ್ವಿಚ್ ಆಫ್ ಮಾಡಿ ಬಾಗಿಲು ಮುಚ್ಚಿಕೊಂಡು ಬರಬೇಕು’ ಎಂದರು. ಇದನ್ನು ಎಷ್ಟು ಕರಾರುವಾಕ್ಕಾಗಿ ಅವರು ಪಾಲಿಸುತ್ತಿದ್ದರೆಂದರೆ ನಮಗೆಲ್ಲ ನಾಚಿಕೆಯಾಗುವಂತಿತ್ತು. ನಮ್ಮ ಸರ್ಕಾರಿ/ಖಾಸಗಿ ಕಚೇರಿಗಳು, ಅಷ್ಟೇಕೆ ಮನೆ/ಬೀದಿಗಳಲ್ಲಿ ಎಷ್ಟು ದೀಪಗಳು ಅನಗತ್ಯವಾಗಿ ಬೆಳಗುತ್ತವೆ ಎನ್ನುವುದು ನಮಗೆಲ್ಲ ಗೊತ್ತು. ಇದರಿಂದಲೇ ಇವರು ತಮ್ಮ ದೇಶಕ್ಕೆ ಎಷ್ಟು ಹಣವನ್ನು ಉಳಿಸಬಹುದು ಎಂದುಕೊಂಡೆ. ಈ ನಡುವೆ ಡಾ. ವಾಂಗ್ ನನಗೆ ತುಂಬಾ ಆಪ್ತರಾಗಿಬಿಟ್ಟಿದ್ದರು ಮತ್ತು ಇಬ್ಬರೂ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೆವು. ಆತ ತೈವಾನ್ ಯುವತಿಯನ್ನು ಮದುವೆ ಮಾಡಿಕೊಂಡಿದ್ದು, ಚೀನಿ ಹುಡುಗಿಯರಿಗಿಂತ ತೈವಾನ್ ಹುಡುಗಿಯರು ಬೆಸ್ಟ್ ಎಂದಿದ್ದ. ಒಂದು ದಿನ ವಾಂಗ್ ಕಚೇರಿಯಲ್ಲಿ ಸಾಯಂಕಾಲ ಅವರ ಪತ್ನಿಯನ್ನು ನನಗೆ ಪರಿಚಯಿಸಿದ. ಯಾಕೋ ಇಬ್ಬರೂ ನನ್ನ ಎದುರಿಗೆ ಸಣ್ಣದಾಗಿ ಬೈದಾಡಿಕೊಂಡರು, ವಾಂಗ್ ನಗುತ್ತಲೇ ಇದ್ದರು.

ನಮಗೆ ಬೆಳಿಗ್ಗೆ 9.30 ತರಬೇತಿ ಪ್ರಾರಂಭವಾಗುತ್ತಿದ್ದು ಎಲ್ಲರೂ ಐದು ನಿಮಿಷಗಳ ಮೊದಲೇ ಬಂದುಬಿಡುತ್ತಿದ್ದರು. ಪ್ರತಿಯೊಬ್ಬರ ಡೆಸ್ಕ್‌ನಲ್ಲಿ ಕಂಪ್ಯೂಟರ್ ಇದ್ದು ತರಬೇತಿಯ ಎಲ್ಲಾ ನೋಟ್ಸ್ಅನ್ನು ಸಂಚಿಕೆ ಮಾಡಿ ಮೊದಲ ದಿನವೇ ಎಲ್ಲರಿಗೂ ಹಂಚಿದ್ದರು. ನಾವು ಯಾವಾಗಲೂ ಹತ್ತುಹದಿನೈದು ನಿಮಿಷಗಳ ಮುಂಚೆಯೇ ಬಂದುಬಿಡುತ್ತಿದ್ದೆವು. ಒಂದು ದಿನ ಬೆಳಿಗ್ಗೆ ನಾನು ಟಾಯ್ಲೆಟ್ ಒಳಕ್ಕೆ ಹೋದೆ. ವಾಂಗ್ ಮಾಪ್ ತೆಗೆದುಕೊಂಡು ಫ್ಲೋರ್ ಸ್ವಚ್ಚ ಮಾಡುತ್ತಿದ್ದರು. ಆಶ್ಚರ್ಯದಿಂದ `ಹಲೋ, ವಾಂಗ್ ಗುಡ್ ಮಾರ್ನಿಂಗ್’ ಎಂದೆ. ವಾಂಗ್ ನಗುತ್ತಾ `ಗುಡ್ ಮಾರ್ನಿಂಗ್ ಸ್ವಾಮಿ’ ಎಂದು ತನ್ನ ಕೆಲಸವನ್ನು ಮುಂದುವರಿಸಿದರು. ಅಷ್ಟರಲ್ಲಿ ಓಡೋಡಿ ಬಂದ ಯುವತಿ ವಾಂಗ್ ಮುಂದೆ ತಲೆಬಾಗಿ ಮಾಪ್‌ ತೆಗೆದುಕೊಂಡಳು. ನನಗೆ ಏನು ಹೇಳಬೇಕೊ ಅರ್ಥವಾಗಲಿಲ್ಲ. ಇದು ನಮ್ಮ ದೇಶದಲ್ಲಿ ಸಾಧ್ಯವೆ? ಈ ಘಟನೆ ನಡೆದು 20 ವರ್ಷಗಳಾದರೂ ನನ್ನ ತಲೆಯಿಂದ ಆ ಘಟನೆ ಹೋಗಲೆ ಇಲ್ಲ. ನಮ್ಮ ತರಬೇತಿಯ ನಡುವೆ ನಮಗೆಲ್ಲ ಬೀಜಿಂಗ್‌ನ ಸ್ವರ್ಗ ದೇವಾಲಯ, ಚೀನಾ ಮಹಾಗೋಡೆಗಳು, ಫಾರ್‌ಬಿಡನ್ ಸಿಟಿ (ಕ್ವಿಂಗ್ ಮತ್ತು ಮಿಂಗ್ ರಾಜರ ಅರಮನೆಗಳು), 1989ರಲ್ಲಿ 10,000? ವಿದ್ಯಾರ್ಥಿಗಳನ್ನು ಬುಲ್ಡೋಜರ್‌ನಲ್ಲಿ ಗುಡಿಸಿ ಹಾಕಿದ ಟಿಯನ್‌ಮಿನ್ ಚೌಕ, ಪೀಪಲ್ಸ್ ಪಾರ್ಲಿಮೆಂಟ್, ಪೆಕ್ಕಿಂಗ್‌ಮ್ಯಾನ್ ಗುಹೆಗಳು, ಗೋಬಿ ಮರಳುಗಾಡು ಮತ್ತು ಚೆಂಘಿಸ್ ಖಾನ್‌ನ ಮಂಗೋಲಿ ದೇಶ-ಅದರ ರಾಜಧಾನಿ ಉಲಾನ್ ಬಟರ್ ಮತ್ತು ಬಹುಖನಿಜಗಳ ಗಣಿಗಳನ್ನು ತೋರಿಸಿದರು. ಎಕ್ಸ್ಪ್ರೆಸ್ ರಸ್ತೆಗಳಲ್ಲಿ ವಾಹನಗಳು 120-150 ಕಿ.ಮೀ.ಗಳ ವೇಗದಲ್ಲಿ ಚಲಿಸುತ್ತಿದ್ದವು.

ಚೀನಾ ಮಹಾಗೋಡೆಯ ಮೇಲೆ

ಅದು 2004ರ ಅಕ್ಟೋಬರ್ ತಿಂಗಳ ಒಂದು ದಿನ ನಾವಿದ್ದ ಟೆಂಪೋ ಚೀನಾ ಮಹಾಗೋಡೆಯನ್ನು ನೋಡುವ ಆತುರದಲ್ಲಿ ಸೆಂಟ್ರಲ್ ಬೀಜಿಂಗ್‌ನಿಂದ ಬದಲಾಂಗ್ (ಬೀಜಿಂಗ್‌ನ ಅಂಚು) ಕಡೆಗೆ ಧಾವಿಸುತ್ತಾ ಹೋಗಿ ಚಳಿಯಲ್ಲಿ ಮಹಾಗೋಡೆಯ ಹತ್ತಿರ ನಿಂತುಕೊಂಡಿತು. ಅದೊಂದು ಚೀನಿ ಶೈಲಿಯ ದ್ವಾರ. ದ್ವಾರದ ಎದುರಿಗಿದ್ದ ಅಂಗಡಿಗಳಲ್ಲಿ ಹಲವಾರು ರೀತಿಯ ಚೀನಿ ವಸ್ತುಗಳನ್ನು ಚೀನಿ ಮಹಿಳೆಯರು ಕೈಗಳಲ್ಲಿ ಎತ್ತಿ ತೋರಿಸುತ್ತ 20, 50, 100 ಯುವಾನ್ ಎಂದು ಕರೆಯತೊಡಗಿದರು. ನಮ್ಮ ಜೊತೆಗೆ ಬಂದಿದ್ದ ಚೀನಿ ಯುವಕ ನಮಗೆಲ್ಲ ಪ್ರವೇಶ ಟಿಕೇಟ್‌ಗಳನ್ನು ಕೊಂಡುತಂದಿದ್ದನು. ನಾವು ನಿಂತಿದ್ದ ಕಣಿವೆಯ ಎರಡೂ ಕಡೆ ಶಿಖರಗಳ ಮೇಲೆ ಹಾದುಹೋಗಿದ್ದ ಚೀನಾ ಮಹಾಗೋಡೆಗಳ ಕಡೆಗೆ ನೋಡುತ್ತಲೇ ಪ್ರವೇಶ ದ್ವಾರ ತಲುಪಿದ ಕೆಲವೇ ಕ್ಷಣಗಳಲ್ಲಿ ಪ್ರಪಂಚ ಪ್ರಖ್ಯಾತ ಚೀನಾ ಮಹಾಗೋಡೆಯ ಮೇಲಿದ್ದೆವು. ಆಗಲೇ ಆ ಗೋಡೆಗಳ ಮೇಲೆ ನೂರಾರು ಜನರು ಹೆಜ್ಜೆಗಳನ್ನು ಹಾಕುತ್ತಾ ಹೆಮ್ಮೆಯಿಂದ ನಡೆಯುತ್ತಿದ್ದರು.

ಸುತ್ತಲೂ ಆಕಾಶದ ಒಳಗೆ ಮೋಡಗಳ ಜೊತೆಗೆ ಸಾಗರದ ಅಲೆಗಳಂತೆ ಕಣ್ಣು ಹಾಯುವವರೆಗೂ ಬೆರೆತುಹೋಗಿರುವ ಅನಂತ ಗಿರಿ ಶಿಖರ ಶ್ರೇಣಿಗಳು. ತಣ್ಣನೆ ರಾತ್ರಿಯಲ್ಲಿ ಚಳಿಯ ರಗ್ಗನ್ನೊದ್ದು ಕಣ್ಣುಜ್ಜಿಕೊಂಡು ಪೂರ್ವದಲ್ಲಿ ಬೆಟ್ಟಗಳ ಕಡೆಗೆ ಸೂರ್ಯನು ನೋಡುತ್ತಿದ್ದನು. ನಡುವೆ ಬಿಳಿ ಮುಗಿಲು ಮತ್ತು ಮಂಜಿನ ತೆರೆಗಳ ಸರಸ. ಎಲ್ಲವನ್ನು ಸೀಳಿಕೊಂಡು ಆಕಾಶವನ್ನೇ ಮೆಟ್ಟಿಲು ಮಾಡಿಕೊಂಡು ಗಿರಿ ಶಿಖರಗಳ ಮೇಲೆ ಎದ್ದು ಬಿದ್ದು ಚಾಚಿ ಮಲಗಿರುವ ಡ್ರ್ಯಾಗನ್ ಮಹಾಗೋಡೆಗಳು. ಸುತ್ತಲಿದ್ದ ರಮಣೀಯ ದೃಶ್ಯಗಳನ್ನು ನೋಡುತ್ತ ಉತ್ತರ ದಿಕ್ಕಿಗೆ ಬೆಳೆದುನಿಂತಿದ್ದ ಗೋಡೆಗಳ ಮೇಲೆ ನಾವು ಹೆಜ್ಜೆಗಳನ್ನಿಡುತ್ತ ಸಾಗುತ್ತಿದ್ದೆವು. ಒಂದು ಶಿಖರದ ತುತ್ತತುದಿಯನ್ನು ಹತ್ತಿದ್ದೆ ಅದರ ಬೆನ್ನಲ್ಲೆ ಇನ್ನೊಂದು ಎತ್ತರದ ಶಿಖರ ಕಾಣಿಸಿಕೊಳ್ಳುತ್ತಿತ್ತು. ಇಷ್ಟಕ್ಕೂ ಈ ಶಿಖರಗಳು ಮತ್ತು ಗೋಡೆಗಳು ಎಲ್ಲಿಂದ ಎಲ್ಲಿಯ ತನಕ ಒಂದನ್ನೊಂದು ತಬ್ಬಿಕೊಂಡಿವೆ ಎನ್ನುವುದೇ ಗೊತ್ತಾಗಲಿಲ್ಲ. ಒಂದರ ಹಿಂದೆ ಒಂದು, ಎಲ್ಲವೂ ಸಮುದ್ರ ಅಲೆಗಳಂತೆ ಕಾಣಿಸುತ್ತಿದ್ದವು.

(ಚೀನಾ ಮಹಾಗೋಡೆಯ ಮೇಲೆ 2008ರಲ್ಲಿ)

ಹಾವುಗಳಂತೆ ಹಾದುಹೋಗಿದ್ದ ಗೋಡೆಗಳ ಮೇಲೆ ನೂರಾರು ಮೆಟ್ಟಿಲು ಹತ್ತಿ ಇಳಿದು ಕೆಲವು ಕಿ.ಮೀ.ಗಳ ದೂರ ಸಾಗಿದ್ದೆವು. ಕೆಲವು ಕಡೆಗಳಲ್ಲಂತೂ ಗೋಡೆಯ ಪಕ್ಕದಲ್ಲಿದ್ದ ಉಕ್ಕಿನ ರೈಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಹತ್ತಿ ಇಳಿಯಬೇಕಾಯಿತು ಏರುಮೆಟ್ಟಿಲು.. ಹಾಗೇ ತೀರಾ ಇಳಿಜಾರು. 11 ಗಂಟೆಗೆ ಗೋಡೆಗಳ ಮೇಲೆಲ್ಲಾ ಜನ ತುಂಬಿಹೋಗಿದ್ದರು. ಮಕ್ಕಳು, ಮುದುಕರು, ಯುವಕರು ಯುವತಿಯರು, ಎಲ್ಲರೂ ಗೋಡೆಗಳನ್ನು ಹತ್ತಿದ ಸಂಭ್ರಮದಲ್ಲಿ ಉಬ್ಬಿಹೋಗಿದ್ದರು. ಚೀನಾದ ಜನರೆಲ್ಲ ಈ ಗೋಡೆಗಳ ಮೇಲೆಯೇ ಇರುವಂತೆ ತೋರುತ್ತಿತ್ತು. ಅನೇಕ ಯುರೋಪಿಯನ್ನರು ಬೆರಗು ಕಣ್ಣುಗಳಿಂದ ಗೋಡೆಗಳ ಮೇಲೆ ಓಡಾಡುತ್ತಿದ್ದರು. ಪ್ರತಿಯೊಬ್ಬರ ಕೈಯಲ್ಲೂ ಕ್ಯಾಮೆರಾಗಳಿದ್ದು ಇಡೀ ಭೂಮಿ ಆಕಾಶವನ್ನು ಚಿತ್ರಿಸುವಂತೆ ಎಲ್ಲರೂ ಫೋಟೋಗಳನ್ನು ತೆಗೆಯುತ್ತಿದ್ದರು.

ಚಿತ್ರಕಾರರು ಅಲ್ಲಲ್ಲಿ ಕುಳಿತು ನಿಂತು ಸುತ್ತಲಿನ ದೃಶ್ಯಗಳನ್ನು ಚಿತ್ರಿಸುತ್ತಿದ್ದರು. ಒಂದು ಶಿಖರದಿಂದ ಇನ್ನೊಂದು ಶಿಖರಕ್ಕೆ ಹಾದುಹೋಗಿರುವ ರೋಪ್‌ವೇಗಳು, ಕೆಳಗಿಂದ ಮೇಲಕ್ಕೆ ಮೇಲಿಂದ ಕೆಳಕ್ಕೆ ಸರ‍್ರನೆ ಇಳಿದು ಹತ್ತುತ್ತಿರುವ ಟಾಯ್ ಟ್ರೇನ್‌ಗಳು. ಐವತ್ತು ಯುವಾನ್ ಕೊಟ್ಟರೆ ತಾಮ್ರ ಫಲಕದ ಮೇಲೆ ಮಹಾಗೋಡೆಯ ಜೊತೆಗೆ ನಮ್ಮ ಹೆಸರನ್ನು ಕೆತ್ತಿಕೊಡುವುದಾಗಿ ಚಿತ್ರಕಾರರು ಹೇಳುತ್ತಿದ್ದರು. `ಐ ಕ್ಲೈಂಬ್ಡ್‌ ದಿ ಗ್ರೇಟ್‌ವಾಲ್ ಆಫ್ ಚೀನಾ’ ಎನ್ನುವ ಅಕ್ಷರಗಳಿರುವ ಟೀ ಷರ್ಟ್‌ಗಳು ಬಿಸಿಬಿಸಿಯಾಗಿ ಮಾರಾಟವಾಗುತ್ತಿದ್ದವು. ನಾವು 17 ಜನರು ಗೋಡೆಗಳ ಮೇಲೆ ಸಂಭ್ರಮವಾಗಿ ಓಡಾಡಿ ಕಾಲುಗಳನ್ನು ನೋಯಿಸಿಕೊಳ್ಳುವಷ್ಟರಲ್ಲಿ ಚೀನಿಯರು ನಮ್ಮನ್ನು ಬೇರೆ ಕಡೆಗೆ ಹೋಗಬೇಕಾಗಿದೆ ಬೇಗನೇ ಇಳಿಯಿರಿ ಎಂದು ವಿನಂತಿಸಿಕೊಂಡರು. ಆ ಅದ್ಭುತ ಗೋಡೆಗಳನ್ನು ಕಣ್ಣುಗಳ ತುಂಬಾ ತುಂಬಿಕೊಳ್ಳುತ್ತಲೇ ಇಳಿದುಬಂದೆವು.

ಚೀನಾ ಮಹಾಗೋಡೆ ಅಥವಾ `ಗ್ರೇಟ್ ವಾಲ್ ಆಫ್ ಚೈನಾ’ ಎನ್ನುವುದಕ್ಕಿಂತ ಚೀನಾ ಮಹಾಗೋಡೆಗಳು ಎಂದು ಕರೆಯುವುದೇ ಸರಿ. ಕ್ರಿ.ಪೂ. 221-226ರ ನಡುವೆ ಕ್ವಿನ್ ಷಿ ಹೂವಾಂಗ್ ಎಂಬ ರಾಜನು ಎಲ್ಲಾ ಸಣ್ಣ ಪುಟ್ಟ ಪಾಳೆಗಾರರು ತಮ್ಮ ಪ್ರದೇಶಗಳ ಸುತ್ತಲೂ ಕಟ್ಟಿಕೊಂಡಿದ್ದ ಗೋಡೆಗಳನ್ನು ಕೆಡವಿ ಒಂದೇ ಗೋಡೆಯನ್ನಾಗಿಸಲು ನಾಂದಿ ಹಾಡಿದನು. ಮೊದಲಿಗೆ ಕಲ್ಲು ಮಣ್ಣು, ಇಟ್ಟಿಗೆ ಮರ ಇತರೆ ವಸ್ತುಗಳಲ್ಲಿ ಕಟ್ಟಿಕೊಳ್ಳುತ್ತಿದ್ದರು. ಅನಂತರ ಮರಳು, ಗರಜು, ಸುಣ್ಣ, ಗ್ರಾನೈಟ್ ಶಿಲೆಗಳನ್ನು ಉಪಯೋಗಿಸಲಾಯಿತು. ಮಿಂಗ್ ರಾಜರ ಕಾಲದಲ್ಲಿ ಗೋಡೆಗಳನ್ನು ಇನ್ನಷ್ಟು ದೃಢವಾಗಿ ನಿರ್ಮಿಸಲಾಯಿತು. 7ನೇ ಶತಮಾನದಲ್ಲಿ ಬಹಳಷ್ಟು ಗೋಡೆಗಳನ್ನು ಕಟ್ಟಲಾಯಿತು. ಗೋಡೆಗಳು ಕಾಲಕಾಲಕ್ಕೆ ಭೂಕಂಪ, ಪ್ರವಾಹ, ಚಂಡಮಾರುತಗಳು ಮತ್ತು ಶತ್ರುಗಳ ಹಾವಳಿಗೆ ತುತ್ತಾಗುತ್ತಿದ್ದವು. ಆದರೆ ಚೀನಿಯರು ಗೋಡೆಗಳ ದುರಸ್ತಿಯನ್ನು ಮಾಡುತ್ತಲೇ ಬಂದರು.

(ಚೀನಾ ಮಹಾಗೋಡೆಗಳ ಒಂದು ಸುಂದರ ನೋಟ)

ಚೀನಾ ಮಹಾಗೋಡೆ ಪೂರ್ವದ ಶಾಂಘಾಯ್ ಅಥವಾ ಗನ್ಸು ಪ್ರದೇಶದಿಂದ ಪ್ರಾರಂಭವಾಗಿ ಪಶ್ಚಿಮದಲ್ಲಿ ಷಾನ್‌ಹೈಗುಹಾನ್‌ನ ಬೋಹೈಕ್ಯಾಸ್ಪಿಯನ್ ಸಮುದ್ರದವರೆಗೂ ಚಾಚಿಕೊಂಡಿದೆ. ಪ್ರಸ್ತುತ ಉಳಿದಿರುವ ಗೋಡೆಗಳ ಒಟ್ಟು ಉದ್ದ ಸುಮಾರು 8,850 ಕಿ.ಮೀ. ಇದರಲ್ಲಿ 6,259 ಕಿ.ಮೀ ನಿಜವಾದ ಗೋಡೆಯಾದರೆ, 359 ಕಿ.ಮೀ. ಆಳವಾದ ಗುಂಡಿಗಳು. ಉಳಿದ 2,232 ಕಿ.ಮೀ ನಿಸರ್ಗವೇ ಅಗಾಧ ಗೋಡೆಯಾಗಿ ನಿಂತಿದೆ. ಉತ್ಖನನ ಇಲಾಖೆಯ ಸಂಶೋಧನೆಗಳ ಪ್ರಕಾರ ಕಿ.ಪೂ. 221 ರಿಂದ ಕ್ರಿ.ಶ.1650 ರವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಚೀನಿಯರು ಈ ಗೋಡೆಗಳನ್ನು ಕಟ್ಟುತ್ತಲೇ ಇದ್ದರು. ಎಲ್ಲಾ ಗೋಡೆಗಳ ಒಟ್ಟು ಉದ್ದ 21,196 ಕಿ.ಮೀ. ಎನ್ನಲಾಗಿದೆ.

ಈ ಮಹಾಗೋಡೆಗಳು ಭೂಮಿಯ ಮೇಲೆ ನೂರಾರು ತಲೆಗಳ ಡ್ರ್ಯಾಗನ್‌ಗಳಂತೆ ಪರ್ವತ, ಕಣಿವೆ, ನದಿ, ಮರಳುಗಾಡು, ಹುಲ್ಲುಗಾವಲೆನ್ನದೆ ಎಲ್ಲಾ ಕಡೆಯೂ ಹಾಸಿಕೊಂಡಿವೆ. ಈ ಗೋಡೆಗಳನ್ನು ಕಟ್ಟುವಾಗ ಮತ್ತು ದುರಸ್ತಿ ಮಾಡುವಾಗ ಎಷ್ಟು ಜನರು ಸತ್ತರು. ಎಷ್ಟು ಜನರು ಕೈಕಾಲುಗಳನ್ನು ಮುರಿದುಕೊಂಡರು ಎನ್ನುವ ಉಲ್ಲೇಖಗಳು ಎಲ್ಲೂ ದೊರಕುವುದಿಲ್ಲ. ಸತ್ತವರನ್ನೆಲ್ಲ ಅದೇ ಗೋಡೆಗಳಲ್ಲಿ ಹಾಕಿ ಮುಚ್ಚಲಾಯಿತು ಎಂಬುದಾಗಿ ಹೇಳಲಾಗುತ್ತದೆ. ಈ ಗೋಡೆಗಳನ್ನು ಸೈನಿಕರು, ಕೈದಿಗಳು, ಕಳ್ಳರು, ಯುದ್ಧಗಳಲ್ಲಿ ಸೋತು ರಾಜರಿಗೆ ಸೆರೆ ಸಿಕ್ಕಿದ ಗುಲಾಮರು, ಸ್ಥಳೀಯ ಜನರು ಒಟ್ಟುಗೂಡಿ ನಿರ್ಮಿಸಿದ್ದಾರೆ. ಈ ಗೋಡೆಗಳನ್ನು ಕಟ್ಟುವ ಸಮಯದಲ್ಲಿ ಸತ್ತ ಒಟ್ಟು ಜನರ ಸಂಖ್ಯೆ ಸುಮಾರು 50 ಲಕ್ಷ ಎನ್ನಲಾಗಿದೆ. ಇದರ ಬಗ್ಗೆ ಎಲ್ಲಿಯೂ ಯಾವುದೇ ಲಿಖಿತ ಮಾಹಿತಿ ದೊರಕುವುದಿಲ್ಲ.

ಗೋಡೆಯ ಎತ್ತರ ಸರಾಸರಿ 20 ರಿಂದ 40 ಅಡಿಗಳಿದ್ದು ಕೆಳಗಿನ ತಳಪಾಯದ ಅಗಲ 25 ಅಡಿಗಳಿದ್ದರೆ ಮೇಲೆ 15 ಅಡಿಗಳಿವೆ. ಮುಖ್ಯ ಗೋಡೆಗಳ ಎರಡೂ ಕಡೆ 5 ರಿಂದ 10 ಅಡಿಗಳ ಎತ್ತರದ ಮಣ್ಣಿನಲ್ಲಿ ನಿರ್ಮಿಸಿದ ತಡೆ ಗೋಡೆಗಳಿವೆ. ಈ ಗೋಡೆಗಳ ನಡುವೆ ಗೋಡೆಗಳ ಮಧ್ಯೆ ಒಮ್ಮೆಲೆ 5 ಕುದುರೆಗಳು ನಡೆಯಬಹುದು. ತಡೆಗೋಡೆಗಳ ಮಧ್ಯೆ ಕಿಟಿಕಿಗಳಂತೆ ಖಾಲಿ ಸ್ಥಳಗಳನ್ನು ಬಿಡಲಾಗಿದೆ. ಪ್ರತಿ 100 ಅಡಿಗಳ ಅಂತರದಲ್ಲಿ ವೀಕ್ಷಣಾ ಗೋಪುರಗಳು. ಮಿಂಗ್ ಮತ್ತು ಕ್ವಿಂಗ್ ರಾಜರ ಕಾಲದಲ್ಲಿ ಸೈನಿಕರು ಈ ಗೋಪುರಗಳ ಮೇಲೆ ನಿಂತುಕೊಂಡು ಶತ್ರುಗಳನ್ನು ಕಾಯುತ್ತಿದ್ದರು. ಈ ಗೋಡೆಗಳನ್ನು ಕಟ್ಟಲು ಮುಖ್ಯ ಕಾರಣ ಅಕ್ಕಪಕ್ಕದ ಶತ್ರುಗಳನ್ನು ತಡೆಯುವುದು. ಚೀನಾದ ಉತ್ತರ ಭಾಗದಲ್ಲಿದ್ದ ಕಳ್ಳಕಾಕರು, ಅಲೆಮಾರಿ ಜನಾಂಗಗಳು ಮತ್ತು ಮುಖ್ಯವಾಗಿ ಊಣರು ಪದೇ ಪದೇ ಚೀನಾ ರಾಜರ ಮೇಲೆ ಆಕ್ರಮಣ ನಡೆಸುತ್ತಿದ್ದರು. ಹೊರಗಿನವರನ್ನು ತಡೆಯುವುದು, ಒಳಗಿನವರು ಹೊರಗೆ ಹೋಗದಂತೆ ನೋಡಿಕೊಳ್ಳುವುದು ಮತ್ತು ಯಾವುದೇ ದವಸ ಧಾನ್ಯ ವಸ್ತುಗಳನ್ನು ನಿಯಂತ್ರಿಸಲು ಶುಲ್ಕ ಹೇರುವ ದಾರಿಯಾಗಿತ್ತು. ಸಿಲ್ಕ್ ರೋಡ್ ಕೂಡ ಈ ಗೋಡೆಯನ್ನು ದಾಟಿ ಹೋಗಬೇಕಾಗಿತ್ತು. ಒಟ್ಟಿನಲ್ಲಿ ಈ ಗೋಡೆಯನ್ನು ನೋಡುವುದೆಂದರೆ ಚರಿತ್ರೆಯ ಜೊತೆಗೆ ಹೆಜ್ಜೆಹಾಕಿ ನಡೆದಂತೆ.

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ