Advertisement
ಮೌಲ್ಯಗಳಿರುವುದು ಪಾಲಿಸಲೇ ಹೊರತು, ಬರೀ ಬೋಧಿಸಲಿಕ್ಕಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮೌಲ್ಯಗಳಿರುವುದು ಪಾಲಿಸಲೇ ಹೊರತು, ಬರೀ ಬೋಧಿಸಲಿಕ್ಕಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಬಹುತೇಕರು ಮಕ್ಕಳಿಗೆ ತಮ್ಮ ಮಗುವಿನ ಆಸಕ್ತಿಯ ಕ್ಷೇತ್ರ ಯಾವುದು? ಎಂಬುದನ್ನೇ ಗುರುತಿಸಿಯೇ ಇರುವುದಿಲ್ಲ. ತಾವು ಏನನ್ನು ಅಂದುಕೊಂಡಿರುತ್ತಾರೋ ಅದನ್ನು ಸಾಧಿಸಲು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಟಿವಿ ಮಾಧ್ಯಮಗಳಲ್ಲಿ ಬರುವ ಸ್ಪರ್ಧೆಗಳಲ್ಲಿ ತಮ್ಮ ಮಗುವೂ ಭಾಗವಹಿಸಬೇಕು, ಬೇಗ ಫೇಮಸ್ ಆಗಬೇಕು ಎಂದು ಕೆಲವರು ತಮ್ಮ ಮಗುವಿಗೆ ಇಷ್ಟವಿದೆಯೋ ಇಲ್ಲವೋ ಎಂದು ಕೇಳದೇ ಸಿಕ್ಕ ಸಿಕ್ಕ ಕ್ಲಾಸ್‌ಗಳಿಗೆಲ್ಲಾ ಸೇರಿಸುತ್ತಾರೆ. ಜೊತೆಗೆ ಮಣಭಾರದ ಪುಸ್ತಕ, ಟ್ಯೂಷನ್! ಆ ಕೋಚಿಂಗ್, ಈ ಕೋಚಿಂಗ್ ಅಂತಾ ಮಕ್ಕಳ ಬಾಲ್ಯ ಇದರಲ್ಲೇ ಕಳೆದುಹೋಗುತ್ತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ಮೂರನೆಯ ಕಂತು ನಿಮ್ಮ ಓದಿಗೆ

ಡಿಗ್ರಿ ಓದಬೇಕೋ? ಬೇಡವೋ? ಎಂಬ ದ್ವಂದ್ವ ನನ್ನಲ್ಲೇ ಶುರುವಾಯಿತು. ಡಿಗ್ರಿ ಓದಿ ಕೆಲಸ ಸಿಗದಿದ್ದರೆ ಮುಂದಿನ ಜೀವನ ಹೇಗೆ? ಒಂದೊಮ್ಮೆ ಡಿಗ್ರಿ ಬಿಟ್ಟು ಟಿಸಿಹೆಚ್ ಗೆ ಅರ್ಜಿ ಹಾಕಿ ಆ ಸೀಟೂ ಸಿಗದಿದ್ದರೆ ಏನು ಮಾಡೋದು? ಹೀಗೆ ನನಗೆ ಏನು ಮಾಡಬೇಕು ಅಂತಾನೇ ಗೊತ್ತಾಗ್ಲಿಲ್ಲ. ಕೆಲವು ಸಲ ನಮ್ಮ ಲೈಫಿನಲ್ಲಿ ಹೀಗೆ ಆಗುತ್ತೆ. ಏನು ತೀರ್ಮಾನ ಮಾಡಬೇಕು ಅಂತಾನೇ ಗೊತ್ತಾಗಲ್ಲ. ಈ ಸಮಯದಲ್ಲಿ ನಾವು ಇದರ ಬಗ್ಗೆ ತಿಳಿದವರ ಬಳಿ ಮಾಹಿತಿ ಕೇಳಬೇಕು. ಅಥವಾ ಒಂದು ನಿರ್ದಿಷ್ಟ ಗುರಿ ಇಟ್ಕೊಂಡು ನಾವೇ ಮುಂದುವರೆಯಬೇಕು. ಎರಡರಲ್ಲಿ ಒಂದು ಇಲ್ಲ ಅಂದ್ರೂ ಕಷ್ಟ ಆಗುತ್ತೆ. ಇತ್ತ ಪರೀಕ್ಷೆ ಸಮೀಪಿಸುತ್ತಾ ಬರ್ತಾ ಇದೆ. ನಮಗೆ ಗಣಿತ ವಿಷಯದಷ್ಟು ಬೇರೆ ವಿಷಯಗಳ ಅಂಕಗಳು ಅಷ್ಟಾಗಿ ಬರುವುದಿಲ್ಲ ಎಂಬುದು ಗೊತ್ತಿತ್ತು. ನಾನೂ ಸಹ ಹಾಗೇನೇ ಓದಿದ್ದೆ. ಆದರೆ ಕೆಲ ಸೀನಿಯರ್‌ಗಳು ಹೇಗಿದ್ರೂ ಕ್ಯಾರೀ ಓವರ್ ಸಿಸ್ಟಮ್ ಇದೆ. ನೀನು ಚೆನ್ನಾಗಿ ಓದಿರುವ ವಿಷಯಗಳನ್ನಷ್ಟೇ ಬರೆ. ಆದರೆ ಅಷ್ಟಾಗಿ ಓದದೇ ಇರುವ ವಿಷಯಗಳ ಪರೀಕ್ಷೆ ಬರೆಯಬೇಡ ಎಂಬ ಐಡಿಯಾ ಕೊಟ್ಟರು. ನಾನು ಅದೇ ರೀತಿ ಮಾಡಿದೆ!!

ಕಡೇ ಪಕ್ಷ ಗಣಿತ ಪರೀಕ್ಷೆಯನ್ನಾದ್ರೂ ಬರೆದೆನಾ? ಅದೂ ಇಲ್ಲ. ಆ ಪರೀಕ್ಷೆಯನ್ನು ಬರೆದು ಅದರ ಮೇಲೆ ಗೀಟನ್ನು ಎಳೆದು ಬಂದೆ. ಇದನ್ನು ನೋಡಿದ ಗಣಿತ ಲೆಕ್ಚರ್ ಆಗಿದ್ದ ಮಂಜುನಾಥ್ ಸರ್ ನನಗೆ ಹೇಳಿ ಕಳಿಸಿದರಂತೆ. ಆದರೆ ಅವರು ನನಗೆ ಬಯ್ಯುತ್ತಾರೆ ಎಂದುಕೊಂಡು ಅವರ ಬಳಿ ಹೋಗಲಿಲ್ಲ. ಹಾಗೂ ಹೀಗೂ ಹೇಗೋ ಮಾಡಿ ಮೊದಲನೇ ವರ್ಷದ ಡಿಗ್ರೀ ಮುಗಿಸಿದೆ. ಅದರಲ್ಲಿ ಒಂದೆರಡು ಪರೀಕ್ಷೆ ಬರೆಯದೇ!!

ನನ್ನ ಜೊತೆಗೆ ನನ್ನ ಹೈಸ್ಕೂಲ್ ಗೆಳೆಯನಾಗಿದ್ದ ರಘುನಂದನ್ ಇವನೂ ಸಹ ಡಿಗ್ರಿ ಓದುತ್ತಿದ್ದ. ಇವನ ತಂದೆಯವರ ಬಗ್ಗೆ ಬರೆಯಲೇಬೇಕು. ಇವರ ಹೆಸರು ‘ಎನ್. ಕೆ ಸುಬ್ರಹ್ಮಣ್ಯ’(ಎನ್ಕೆ ಎಸ್ ಸರ್) ಎಂದು. ಇವರು ನಾನು ಹೈಸ್ಕೂಲ್ ಓದುತ್ತಿದ್ದ ಸಂಸ್ಥೆಯ ಕಾಲೇಜಿನಲ್ಲಿ ಇಂಗ್ಲೀಷ್ ಲೆಕ್ಚರ್ ಆಗಿದ್ರು. ಇವರ ಭಾಷೆ ಕೇಳೋಕೆ ಚೆಂದ ಎನಿಸೋದು. ಇವರು ಸುಧಾ ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದರು ಎಂಬ ನೆನಪು. ಇವರು ಆಗ ಹತ್ತನೇ ತರಗತಿಯ ದ್ವಿತೀಯ ಭಾಷೆಯ ಇಂಗ್ಲೀಷಿನಲ್ಲಿದ್ದ ಒಂದು ಪಾಠವನ್ನು ಬರೆದಿದ್ದರು. ‘ಮದರ್ ಲ್ಯಾಂಡ್’ ಎಂಬ ಪಾಠವಿರಬಹುದು. ಇವರು ಈ ಪಾಠದಲ್ಲಿ ತಮ್ಮಿಬ್ಬರ ಮಕ್ಕಳ ಹೆಸರನ್ನು ಆ ಪಾಠದಲ್ಲಿ ಬರುವಂತೆ ಮಾಡಿದ್ದರು. ಇದನ್ನು ನೋಡಿದ ನಾನೂ ಅವರಿಗೆ ‘ಸರ್ ಮುಂದೆ ಮತ್ತಿನ್ಯಾವದಾದರೂ ಪಾಠವನ್ನು ಬರೆದರೆ ನನ್ನ ಹೆಸರನ್ನೂ ಆ ಪಾಠದಲ್ಲಿ ಸೇರಿಸಿ’ ಎಂದು ಕೇಳಿಕೊಂಡಿದ್ದೆ. ಅವರು ‘ಮುಂದೆ ನೋಡೋಣ’ ಎಂದಿದ್ದರು.

ನಮ್ಮ ಆಶ್ರಮದಲ್ಲಿಯೇ ಇದ್ದ ಅವರ ಮನೆಗೆ ನಾನು ವಾರಕ್ಕೊಮ್ಮೆ ಹೋಗುತ್ತಿದ್ದೆ. ‘ಎನ್ಕೆ ಎಸ್’ ಸರ್ ನನಗೆ ಅವರ ಮಗನಿಂದ ಪರಿಚಯವಾಗಿದ್ದರು. ಅವರ ಮನೆಗೆ ಹೋದ ತಕ್ಷಣ ಅವರು ಅವರ ಮನೆಯವರಿಗೆ ‘ಮನೆಗೆ ಬಸವ ಬಂದಿದೆ. ತಿನ್ನೋಕೆ ಏನಾದ್ರೂ ಮೇವು ಇದ್ರೆ ಕೊಡೆ’ ಎಂದು ಹೇಳುತ್ತಿದ್ದರು. ನಾನು ‘ಏನೂ ಬೇಡ’ ಎಂದರೂ ‘ನಿನ್ನ ಒಳ ಮನಸ್ಸು ಬೇಕು ಬೇಕು ಎನ್ನುತ್ತಿದೆ. ಆದರೆ ಮೇಲ್ನೋಟಕ್ಕೆ ಮಾತ್ರ ನೀನು ಬೇಡ ಎನ್ನುತ್ತಿದ್ದೀಯ?!’ ಎನ್ನುತ್ತಿದ್ದರು. ನಾನು ತಕ್ಷಣ ಸುಮ್ಮನಾಗಿಬಿಡುತ್ತಿದ್ದೆ. ಅವರು ತಿಂಡಿ ಕಾಫಿ ಕೊಟ್ಟು ಸತ್ಕರಿಸುತ್ತಿದ್ದರು. ಅವರ ಜೊತೆಯಲ್ಲಿ ಮಾತನಾಡುವುದೆಂದರೆ ಅದೊಂಥರ ಅದ್ಭುತ ಅನುಭವ ಎಂಬಂತಾಗುತ್ತಿತ್ತು. ತಾವು ಇಂಗ್ಲೀಷ್ ಲೆಕ್ಚರ್ ಆಗಿದ್ರೂ ವಿಜ್ಞಾನ ವಿಷಯದಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದರು. ಇವರು ಒಮ್ಮೆ ನಮಗೆ ರಸಪ್ರಶ್ನೆ ಕಾರ್ಯಕ್ರಮಕ್ಕೆಂದು ಚಿತ್ರದುರ್ಗ ರೇಡಿಯೋ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಅವರ ಮಗ ರಘುನಂದನ್ ಚೆನ್ನಾಗಿ ಓದುತ್ತಿದ್ದ. ಒಳ್ಳೆಯ ಬ್ಯಾಟ್ಸ್ ಮ್ಯಾನ್ ಕೂಡ ಆಗಿದ್ದ. ಹೈಸ್ಕೂಲಿನಲ್ಲಿ ಇವನೂ ರ್ಯಾಂಕ್ ಬರುತ್ತಿದ್ದ. ಆದರೆ ಅದ್ಯಾಕೋ ಏನೋ ಪಿಯುಸಿಯಲ್ಲಿ ಒಳ್ಳೇ ಅಂಕ ಪಡೀಲಿಲ್ಲ.

ಹೈಸ್ಕೂಲಿನಲ್ಲಿ ಚೆನ್ನಾಗಿ ಓದೋವ್ರು, ಪಿಯುಸಿಯಲ್ಲೂ ಚೆನ್ನಾಗಿ ಓದ್ತಾರೆ ಅಂತಾ ಬಹುತೇಕ ನಮ್ಮ ಮೇಷ್ಟ್ರುಗಳು ಅಂದ್ಕೊಂಡಿರ್ತಾರೆ. ಆದರೆ ಇದು ಉಲ್ಟಾ ಆಗಿ ಫಲಿತಾಂಶ ಪಿಯುಸಿಯಲ್ಲಿ ಬೇರೇನೇ ಆಗಿತ್ತು. ಹೈಸ್ಕೂಲಿನಲ್ಲಿ ಚೆನ್ನಾಗಿ ಓದದ ಕೆಲವರು ಪಿಯುಸಿಯಲ್ಲಿ ಒಳ್ಳೇ ಅಂಕ ಪಡೆದಿದ್ದರು!! ಚೆನ್ನಾಗಿ ಓದುತ್ತಿದ್ದವರು ಜಸ್ಟ್ ಪಾಸ್ ಆಗಿದ್ದರು, ಕೆಲವರು ಪರೀಕ್ಷೆಗೇ ಚಕ್ಕರ್ ಹಾಕಿದ್ದರು!! ಇದಕ್ಕೇ ಹೇಳೋದು. ಯಾರನ್ನೂ ನಾವು ಮೊದಲೇ ಜಡ್ಜ್ ಮಾಡಬಾರದು. ಯಾರ್ಯಾರ ಲೈಫು ಯಾವಾಗ ಚೇಂಜ್ ಆಗುತ್ತೆ ಅಂತಾ ಗೊತ್ತೇ ಇರೋಲ್ಲ. ನಾವು ಯಾವುದೇ ವ್ಯಕ್ತಿಗಳ ಬಗ್ಗೆ ಪೂರ್ವಾಗ್ರಹಪೀಡಿತರಾಗಿ ಇರಬಾರದು.

ರಘುನಂದನ ಡಿಗ್ರಿಯಲ್ಲಿಯೂ ಸಾಮಾನ್ಯವಾಗಿ ಓದುತ್ತಿದ್ದುದು ಅವರ ತಂದೆಗೆ ಬೇಸರ ತರಿಸಿತ್ತೋ ಏನೋ? ಅದಕ್ಕೇ ಅವರು ನನಗೆ ಕರೆಸಿ ಡಿಗ್ರಿಯನ್ನು ಓದುವುದರಿಂದ ಸಿಗುವ ಅವಕಾಶಗಳ ಬಗ್ಗೆ ಹೇಳುತ್ತಿದ್ದರು. ಆದರೆ ಅವರು ಹೇಳಿದ ಮಾತಿಗೆ ನಾನು ಬೆಲೆ ಕೊಡಲಿಲ್ಲ. ಮೊದಲನೇ ವರ್ಷದ ಡಿಗ್ರಿಯ ಪರೀಕ್ಷೆಯು ಮುಗಿದು ರಜೆಯು ಬಂದಾಗ ನಾನು ನನ್ನ ಮನೆಯಲ್ಲಿ ಟಿಸಿಹೆಚ್ ಹೋಗುವ ಆಸೆಯನ್ನು ವ್ಯಕ್ತಪಡಿಸಿದೆ. ಆಗ ಮನೆಯಲ್ಲಿ ಒಪ್ಪಿದರು. ಮೊದಮೊದಲು ಅವರೂ ಒಪ್ಪಿರಲಿಲ್ಲ. ಆದರೆ ನಾನು ಪ್ರಥಮ ಡಿಗ್ರಿಯಲ್ಲಿ ನಾನು ಫೇಲ್ ಆಗಿದ್ದೇನೆ. ಮುಂದೆ ಕಾಲೇಜಿಗೆ ಹೋಗೋಕೆ ಆಗೋಲ್ಲ ಎಂದು ಸುಳ್ಳು ಹೇಳಿದ್ದೆ! ಫೇಲಾದರೂ ಮುಂದೆ ಹೋಗಬಹುದೆಂಬ ನಮ್ಮ ಮನೆಯವರಿಗೆ ತಿಳಿಯದೇ ಇದ್ದುದು ನನಗೆ ಖುಷಿ ತರಿಸಿತ್ತು.

ಎರಡನೇ ವರ್ಷದ ಡಿಗ್ರಿಯ ದಾಖಲಾತಿಗೆ ನಾನು ಹೋಗದೇ ಟಿಸಿಹೆಚ್ ಗೆ ಅರ್ಜಿ ಹಾಕಿ ಅದರ ಆಯ್ಕೆ ಪಟ್ಟಿಯನ್ನು ಕಾಯುತ್ತಾ ಕುಳಿತೆ. ಆದರೆ ನಾನೆಣಿಸಿಕೊಂಡಂತೆ ಮಲ್ಲಾಡಿಹಳ್ಳಿಯ ಕಾಲೇಜಲ್ಲಿ ನನಗೆ ಸೀಟು ಸಿಕ್ಕಿರಲಿಲ್ಲ. ಹಾಸನ ಜಿಲ್ಲೆಯ ಕಾಲೇಜೊಂದರಲ್ಲಿ ಸಿಕ್ಕಿತ್ತು. ಬೇಸರವಾದ್ರೂ ಸಧ್ಯ ಅಲ್ಲಾದರೂ ಸೀಟು ಸಿಕ್ಕಿದೆಯಲ್ಲ ಎಂದುಕೊಂಡು ನಾನು ಮನೆಗೆ ಹೋಗಿ ಹೇಳಿದೆ. ಅಲ್ಲಿಗೆ ಹೋಗಿ ಸೇರೋಕೆ ಮಾನಸಿಕವಾಗಿ ಸಿದ್ಧನಾಗಿದ್ರೂ ನನ್ನ ಅದೃಷ್ಟಕ್ಕೆ ಎರಡನೇ ಪಟ್ಟಿಯಲ್ಲಿ ಮಲ್ಲಾಡಿಹಳ್ಳಿಯ ಕಾಲೇಜಿಗೆ ಸಿಕ್ಕಿದ್ದು ನನ್ನ ಖುಷಿಯನ್ನು ಇಮ್ಮಡಿಗೊಳಿಸಿತ್ತು.

ಹುತೇಕರು ಮಲ್ಲಾಡಿಹಳ್ಳಿಯ ಕಾಲೇಜಿಗೆ ಸೇರಲು ಹಿಂದೇಟು ಹಾಕಲು ಕಾರಣ ಅಲ್ಲಿನ ಬಿಗಿಯಾದ ವಾತಾವರಣ ಹಾಗೂ ಅಲ್ಲಿನ ಸಮವಸ್ತ್ರ. ನಮ್ಮ ಸಮವಸ್ತ್ರವಾಗಿ ಬಿಳಿ ಜುಬ್ಬಾ, ಗಾಂಧೀ ಟೋಪಿ, ಕಚ್ಚೆ ಪಂಜೆ!! ಇದನ್ನು ಶನಿವಾರ ಹೊರತುಪಡಿಸಿ ವಾರವಿಡೀ ಹಾಕಿಕೊಂಡು ಹೋಗಬೇಕಾಗಿತ್ತು. ಶನಿವಾರ ಮಾತ್ರ ಕಲರ್ ಡ್ರೆಸ್. ಇಲ್ಲಿ ಓದಿದವರಿಗೆ ಪಕ್ಕಾ ಸರ್ಕಾರಿ ಕೆಲಸ ಎಂಬ ನಂಬಿಕೆಯೂ ಅನೇಕ ಪೋಷಕರು ಇದೇ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಾಗಿತ್ತು. ಹೆಣ್ಮಕ್ಕಳಿಗಾದರೆ ಬಿಳಿ ಸೀರೆ, ಬಿಳಿ ಕುಪ್ಪಸ. ನಾವು ಕಚ್ಚೆ ಪಂಜೆ ಹಾಕೋದು ಕಲಿತಿದ್ದೇ ಇಲ್ಲಿನ ಕಾಲೇಜಿಗೆ ಸೇರಿದಾಗ. ಹಲವರಿಗಂತೂ ಅದನ್ನು ಉಡೋಕೆ ಬರ್ತಾ ಇರಲಿಲ್ಲ. ವೇದಿಕೆ ಮೇಲೆ ಹೋಗುವಾಗ ಕೆಲವರು ತೊಡರಿಸಿಕೊಂಡು ಬಿದ್ದ ಪ್ರಸಂಗಗಳೂ ಕೆಲವು ಇವೆ. ಇಲ್ಲಿ ಓದಿದ ಅನೇಕರು ರಾಜ್ಯದ ಮೂಲೆ ಮೂಲೆಯಲ್ಲಿ ಶಿಕ್ಷಕರಾಗಿ ಹೆಸರು ಮಾಡಿದ್ದಾರೆ. ಅಂತಹ ಒಳ್ಳೇ ಮೌಲ್ಯಯುತ ಶಿಕ್ಷಣವು ಇಲ್ಲಿ ಸಿಗುತ್ತಿತ್ತು.

ನಾನು ಕಾಲೇಜಿಗೆ ಹೋದ ಮೊದಲನೇ ದಿನವೇ ಮಾರ್ಗ ಮಧ್ಯದಲ್ಲಿ ‘ಶಶಿಕುಮಾರ್’ ಎಂಬುವವರು ಸಿಕ್ಕರು. ಅವರೂ ಸಹ ನಮ್ಮ ಕಾಲೇಜಿಗೆ ಸೇರಿದ ವಿಷಯವು ಅವರಿಂದ ತಿಳಿದು ಅವರ ಕ್ವಾಲಿಫಿಕೇಶನ್ ತಿಳಿದು ನಾನು ಅಚ್ಚರಿಗೊಂಡಿದ್ದೆ. ಏಕೆಂದರೆ ಅವರು ಅದಾಗಲೇ ಬಿ.ಎಸ್ಸಿ.ಬಿಎಡ್ ಓದಿ ಟಿಸಿಹೆಚ್ ಮಾಡಲೆಂದು ಬಂದಿದ್ದರು. ಅವರನ್ನು ನೋಡಿ ನಾನು ಡಿಗ್ರಿಯನ್ನು ಅರ್ಧಕ್ಕೆ ಬಿಟ್ಟು ಬಂದಿದ್ದು ಏನು ಮಹಾ! ಎಂದೆನಿಸಿತು. ಕಾಲೇಜಲ್ಲಿ ನಮಗೆ ಕನ್ನಡ ವಿಷಯವನ್ನು ಬೋಧಿಸಲು ಬಿದರಹಳ್ಳಿ ಕೃಷ್ಣಮೂರ್ತಿಯವರು ಬರುತ್ತಿದ್ದರು. ಇವರು ಪಾಠದ ಜೊತೆಯಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚು ತಿಳಿಸುತ್ತಿದ್ದರು. ಡುಂಡೀರಾಜ್ ರವರ ಚುಟುಕುಗಳನ್ನು ಹೇಳಿ ನಮ್ಮನ್ನೆಲ್ಲಾ ನಕ್ಕು ನಲಿಸುತ್ತಿದ್ದರು. ಉತ್ತಮ ಬರವಣಿಗೆಯ ಬಗ್ಗೆ ಒತ್ತಿ ಒತ್ತಿ ಹೇಳುತ್ತಿದ್ದರು. ಇನ್ನು ನಮ್ಮ ಕಾಲೇಜಿನಲ್ಲಿ ಪ್ರತೀ ವರ್ಷವೂ ಮೊದಲನೇ ವರ್ಷದ ಟಿಸಿಹೆಚ್ ನವರಿಗೆ ಮಹಾಭಾರತ ನಾಟಕ, ಎರಡನೇ ವರ್ಷದ ಟಿಸಿಹೆಚ್ ನವರಿಗೆ ರಾಮಾಯಣ ನಾಟಕವನ್ನು ಮಾಡಿಸುತ್ತಿದ್ದರು. ನಮಗೆ ಈ ನಾಟಕ ಮಾಡಿಸಲು ಕಾರಣವೇನೆಂದರೆ ನಮಗೆ ರಾಮಾಯಣ, ಮಹಾಭಾರತ ಪರೀಕ್ಷೆಯನ್ನು ಕಡ್ಡಾಯವಾಗಿ ಕಟ್ಟಿಸುತ್ತಿದ್ದರು. ಇದನ್ನು ಓದಿದ್ದರಿಂದ ಆಯಾ ವರ್ಷ ಇರುವ 60 ಪ್ರಶಿಕ್ಷಣಾರ್ಥಿಗಳೂ ಕಡ್ಡಾಯವಾಗಿ ನಾಟಕದಲ್ಲಿ ಭಾಗವಹಿಸಲೇ ಬೇಕಿತ್ತು. ಎಲ್ಲರೂ ಭಾಗವಹಿಸುತ್ತಿದ್ದರೂ ಕೂಡ.

ಪಾಠವನ್ನು ಬಹುತೇಕ ಕಾಲೇಜ್‌ಗಳಲ್ಲಿ ಮಾಡುತ್ತಾರೆ. ಆದರೆ ಜೀವನ ಪಾಠವನ್ನು ಮಾಡುವವರು ಕಮ್ಮಿ. ಆದರೆ ನಮ್ಮ ಅದೃಷ್ಟಕ್ಕೆ ಅಂತಹ ಜೀವನ ಪಾಠ ಕಲಿಸುವ ಮಲ್ಲಾಡಿಹಳ್ಳಿಯಂತಹ ಸಂಸ್ಥೆ ಸಿಕ್ಕಿದ್ದು ನಮ್ಮ ಪುಣ್ಯವೇ ಸರಿ. ಇಲ್ಲಿ ಓದಿದವರು ವಿವಿಧ ವೃತ್ತಿಗಳಲ್ಲಿ ಇದ್ದಾರೆ. ಆಯಾ ವೃತ್ತಿಯಲ್ಲಿ ಸೃಜನಶೀಲರಾಗಿದ್ದಾರೆ. ನನ್ನ ಟಿಸಿಹೆಚ್ ನ ಅನುಭವಗಳು ಒಂದಕ್ಕಿಂತ ಒಂದು ಭಿನ್ನ. ಇದನ್ನು ನಾನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.

ಬಹುತೇಕರು ಮಕ್ಕಳಿಗೆ ತಮ್ಮ ಮಗುವಿನ ಆಸಕ್ತಿಯ ಕ್ಷೇತ್ರ ಯಾವುದು? ಎಂಬುದನ್ನೇ ಗುರುತಿಸಿಯೇ ಇರುವುದಿಲ್ಲ. ತಾವು ಏನನ್ನು ಅಂದುಕೊಂಡಿರುತ್ತಾರೋ ಅದನ್ನು ಸಾಧಿಸಲು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಟಿವಿ ಮಾಧ್ಯಮಗಳಲ್ಲಿ ಬರುವ ಸ್ಪರ್ಧೆಗಳಲ್ಲಿ ತಮ್ಮ ಮಗುವೂ ಭಾಗವಹಿಸಬೇಕು, ಬೇಗ ಫೇಮಸ್ ಆಗಬೇಕು ಎಂದು ಕೆಲವರು ತಮ್ಮ ಮಗುವಿಗೆ ಇಷ್ಟವಿದೆಯೋ ಇಲ್ಲವೋ ಎಂದು ಕೇಳದೇ ಸಿಕ್ಕ ಸಿಕ್ಕ ಕ್ಲಾಸ್‌ಗಳಿಗೆಲ್ಲಾ ಸೇರಿಸುತ್ತಾರೆ. ಜೊತೆಗೆ ಮಣಭಾರದ ಪುಸ್ತಕ, ಟ್ಯೂಷನ್! ಆ ಕೋಚಿಂಗ್, ಈ ಕೋಚಿಂಗ್ ಅಂತಾ ಮಕ್ಕಳ ಬಾಲ್ಯ ಇದರಲ್ಲೇ ಕಳೆದುಹೋಗುತ್ತೆ!! ಒಂದೊಮ್ಮೆ ಈ ರೀತಿ ಕಳಿಸದೇ ಮನೆಯಲ್ಲಿ ಇಟ್ಟುಕೊಂಡರೂ ಮೊಬೈಲ್, ಟಿವಿಯಿಂದ ಮಕ್ಕಳನ್ನು ದೂರವಿರಿಸಿ ಪುಸ್ತಕ ಪ್ರೀತಿ ಬೆಳೆಸಿದರೆ ಮಕ್ಕಳ ವ್ಯಕ್ತಿತ್ವ ವಿಕಸಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಕ್ಕಳ ಮೇಲೆ ಚಿಕ್ಕವರಿದ್ದಾಗಲೇ ನಾವು ಬಯಸಿದಂತೆ ಆಗಬೇಕೆಂಬ ಒತ್ತಡ ಹಾಕುವುದು ಅಷ್ಟು ಸಮಂಜಸವಲ್ಲ. ಇದಕ್ಕೆ ಪೂರಕವಾಗಿ ಖಲೀಲ್ ಜಿಬ್ರಾನ್ ರವರ
“ನಿಮ್ಮ ಮಕ್ಕಳು ನಿಮ್ಮವರಲ್ಲ
ಅವರು ಸ್ವತಃ ಬದುಕಿನ ಮಕ್ಕಳು
ಅವರು ನಿಮ್ಮ ಮೂಲಕ ಜಗತ್ತಿಗೆ ಬರುತ್ತಾರೆ: ನಿಮ್ಮಿಂದಲ್ಲ….” ಎಂದು ಸಾಗುವ ಕವನವು ಮಕ್ಕಳ ಹಾಗೂ ಪೋಷಕರ ಬಗ್ಗೆ ಚೆನ್ನಾಗಿ ಚಿತ್ರಿಸುತ್ತದೆ. ಹಾಗಂತ ಸ್ವೇಚ್ಛೆಯಿಂದ ಮಕ್ಕಳನ್ನು ಬೆಳೆಸಬೇಕು ಅಂತಲ್ಲ. ಮಕ್ಕಳಿಂದ ನೀವು ಏನು ಬಯಸುತ್ತೀರೋ ಅದನ್ನು ಪೋಷಕರು ಮೊದಲು ಅನುಸರಿಸಬೇಕು. ಏಕೆಂದರೆ ಮಕ್ಕಳಲ್ಲಿ ಅನುಕರಣಾ ಪ್ರವೃತ್ತಿ ಜಾಸ್ತಿ. ನಾವು ನಮ್ಮ ಮಕ್ಕಳಿಂದ ಓದಲು ಬಯಸಿದರೆ ನಾವು ಮೊದಲು ಓದಲು ಕುಳಿತುಕೊಳ್ಳಬೇಕು. ನಂತರ ಅವರೂ ಸಹ ಓದಲು ಕುಳಿತುಕೊಳ್ಳುತ್ತಾರೆ. ಅದನ್ನು ಬಿಟ್ಟು ನಾವು ಟಿವಿ ನೋಡುತ್ತಾ ಕುಳಿತು, ಮಕ್ಕಳಿಗೆ ಓದಲು ತಿಳಿಸಿದರೆ ಅವರು ಮೇಲ್ನೋಟಕ್ಕಷ್ಟೇ ಓದಲು ಕುಳಿತಿರುತ್ತಾರೆಯೇ ಹೊರತು ಮಾನಸಿಕವಾಗಿ ಅಲ್ಲ!! ಅವರು ನಾವು ಮಾಡೋದನ್ನು ಮಾಡ್ತಾರೆ ವಿನಃ ನಾವು ಹೇಳೋದನ್ನು ಮಾಡೋದಿಲ್ಲ. ಮೌಲ್ಯಗಳಿರುವುದು ಪಾಲಿಸಲು ಹೊರತು ಬೋಧಿಸಲು ಅಲ್ಲ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

1 Comment

  1. ಶಿವಪ್ರಕಾಶ್ ಶಿವಪುರ

    ಉತ್ತಮವಾದ ಲೇಖನ ಮೂಡಿಬಂದಿದೆ ಇದನ್ನು ಮೊದಲು ತಾಯಂದಿರು ಅರಿತುಕೊಂಡರೆ ತುಂಬಾ ಒಳ್ಳೆಯದು ಎಂಬುದು ನನ್ನ ಅನಿಸಿಕೆ ಏನಂತೀರಾ

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ