ರಾಜ್ಕುಮಾರ್ ಅಂದ್ರ ಏನಂದ್ಕಂಡೆ?: ಎಂ. ಜವರಾಜ್ ಹೊಸ ಕಾದಂಬರಿಯ ಆಯ್ದ ಭಾಗ
ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ್ದ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್ ನೋಡ್ರಪ್ಪ, ಬಾಯಿಲ್ಲಿ” ಅಂತ ಕರೆದು, “ನೀನು ಐದ್ನೆ ಕ್ಲಾಸಾ? ನಾಕ್ನೆ ಕ್ಲಾಸಾ?” ಅಂದ. ನಾನು, ʼಹುʼ” ಎನ್ನುವವನಂತೆ ತಲೆದೂಗಿದೆ. “ಹೌದಾ? ಹೋಗು, ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ, ಬರೀ ಕನ್ನಡ. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ?” ಅಂತ ಕೇಳಿದ.
ಎಂ. ಜವರಾಜ್ ಹೊಸ ಕಾದಂಬರಿ “ಪೋಸ್ಟ್ಮ್ಯಾನ್ ಗಂಗಣ್ಣ” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

